Friday, 13th December 2024

ಕರೋನಾ ಕಾಲದಲ್ಲಿ ಬಾಲ್ಯವಿವಾಹ

ಸುರೇಶ ಗುದಗನವರ

ಕರೋನಾ ಸಾಂಕ್ರಾಮಿಕವು ಒಂದು ಹೊಸ ಸಾಮಾಜಿಕ ತೊಡಕನ್ನು ರೂಪಿಸಿದೆ. ಕೆಲವು ಪ್ರದೇಶಗಳ ಪಾಲಕರು ಬಹುಬೇಗನೆ ತಮ್ಮ ಮಕ್ಕಳ ವಿವಾಹ ಮಾಡುವ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಕರೋನಾ ಸಮಯದಲ್ಲಿ, ಬೇರೆ ಸಮಯಕ್ಕಿಂತ ಹೆಚ್ಚಿನ ಬಾಲ್ಯವಿವಾಹವಾಗಿರುವುದು ಕಳವಳಕಾರಿ ವಿಚಾರ.

ಹೆಣ್ಣು ಮಕ್ಕಳು ಪ್ರಾಪ್ತ ವಯಸ್ಸಿಗೆ ಬರುವ ಮುನ್ನವೇ ಅವರಿಗೆ ವಿವಾಹ ಮಾಡಬೇಕು ಎಂಬ ಧೋರಣೆ ಇಂದಿಗೂ ಹಳ್ಳಿಗಳಲ್ಲಿ ಜೀವಂತವಾಗಿದೆ. ಅನಕ್ಷರತೆ, ಬಡತನ ಮತ್ತು ಮಾಹಿತಿಯ ಕೊರತೆಯಿಂದಾಗಿ ಇಂದಿಗೂ ಅಸ್ತಿತ್ವದಲ್ಲಿರುವ ಬಾಲ್ಯವಿವಾಹ ಕಳೆದ ವರ್ಷದ ಕರೋನಾ ಹಿನ್ನೆಲೆಯಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಶೇಕಡಾ 15ರಷ್ಟು ಏರಿಕೆಯಾಗಿರುವುದು ಕಂಡು ಬರುತ್ತದೆ.

ಕೊರೋನಾ ಸೋಂಕು, ಆವರಿಸಿದ ಬಳಿಕ ಹೆಚ್ಚಾದ ಕಾರ್ಮಿಕರ ವಲಸೆ, ನಿರುದ್ಯೋಗ, ಶಾಲೆಗಳು ನಡೆಯದಿರುವುದು, ಭವಿಷ್ಯದ ಬಗ್ಗೆ ಉಂಟಾಗಿರುವ ಆತಂಕಗಳು ಬಾಲ್ಯ ವಿವಾಹ ಹೆಚ್ಚಳಕ್ಕೆ ಕಾರಣವಾಗಿದೆ. ಅಧಿಕಾರಿಗಳ ಮಾಹಿತಿಯಂತೆ ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲೇ ಅತೀ ಹೆಚ್ಚು ಬಾಲ್ಯವಿವಾಹಗಳು ನಡೆದಿವೆ. ಬಾಲ್ಯವಿವಾಹವನ್ನು ತಡೆಯಲು ಸರಕಾರದ ಇಲಾಖೆ ಗಳು ಕಾರ್ಯಪ್ರವೃತ್ತವಾಗಿವೆ. ಸರಕಾರಿ ಅಧಿಕಾರಿಗಳು ಸೂಕ್ತ ಸಮಯದಲ್ಲಿ ಕ್ರಮಕೈಗೊಂಡು ಕಳೆದ ವರ್ಷ 2074 ಬಾಲ್ಯ ವಿವಾಹಗಳನ್ನು ತಡೆದಿದ್ದಾರೆ.

ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚು ಪ್ರಕರಣಗಳು ವರದಿಯಾಗಿದ್ದು, ಇದಕ್ಕೆ ಆ ಪ್ರದೇಶದ ಹಿಂದಿಳುದಿರುವ ಸ್ವರೂಪ, ಅನಕ್ಷರತೆ, ಬಡತನಗಳು ಪ್ರಮುಖ ಕಾರಣವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹೆಣ್ಣು ಪ್ರಾಪ್ತ ವಯಸ್ಸಿಗೆ ಬರುವ ಮೊದಲೇ
ಅವಳಿಗೆ ವಿವಾಹ ಮಾಡುವ ಚಾಳಿ ಜಾಸ್ತಿ. ಎಳೆವಯಸ್ಸಿನಲ್ಲಿ ತಾಯ್ತನದ ಜವಾಬ್ದಾರಿಗಳು, ಪದೇ ಪದೇ ಹೆರಿಗೆ, ಆ ನಿಮಿತ್ತ ಅನಾರೋಗ್ಯ, ರಕ್ತಹೀನತೆ ಮತ್ತು ಶಾರೀರಿಕ ದೌರ್ಬಲ್ಯವನ್ನು ಎದುರಿಸಬೇಕಾದ ಆ ಹೆಣ್ಣು ಇನ್ನೊಂದೆಡೆ ವಯಸ್ಸಿನ ಅಂತರ ದಿಂದಾಗಿ ಆಲೋಚನೆ ಅಭಿಪ್ರಾಯಗಳಲ್ಲಿ ವ್ಯತ್ಯಾಸ, ಸಣ್ಣ ವಯಸ್ಸಿನಲ್ಲಿ ಹೆಚ್ಚಿನ ಜವಾಬ್ದಾರಿ ಹೊರುವ ಅನಿವಾರ್ಯತೆಗೆ ಒಳಗಾಗುತ್ತಾಳೆ. ಪದೇ ಪದೇ ಗರ್ಭಧಾರಣೆ, ಮಕ್ಕಳ ಪಾಲನೆ ಪೋಷಣೆಯ ಜವಾಬ್ದಾರಿ, ಮನೆಯಲ್ಲಿಯ ಅವಿರತ ದುಡಿಮೆ ಇದೊಂದು ವಿಷವರ್ತುಲ.

ಉತ್ತರ ಕರ್ನಾಟಕದಲ್ಲಿ ಬಾಲ್ಯ ವಿವಾಹವಾದವರ ಸರಾಸರಿ ವಯೋಮಾನ 13 ರಿಂದ 17 ವರ್ಷ. ಚೈಲ್ಡ್ ರೈಟ್ಸ್ ಸಂಸ್ಥೆ ನಡೆಸಿದ
ಸಮೀಕ್ಷೆಯಿಂದ 2018ಲ್ಲಿ ಬೆಳಗಾವಿ, ಬಾಗಲಕೋಟೆ, ಬೀದರ್, ಕೋಲಾರ, ಚಾಮರಾಜನಗರ ಜಿಲ್ಲೆಗಳಲ್ಲಿ ಒಂದೇ ವರ್ಷ ದಲ್ಲಿ 3117 ಬಾಲ್ಯ ವಿವಾಹ ನಡೆದಿರುವದು ಸಾಬೀತಾಗಿದೆ. ಆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ಪ್ರಕಾರ 2018ರಲ್ಲಿ ಕೇವಲ 119 ಬಾಲ್ಯ ವಿವಾಹಗಳಾಗಿವೆ.

ಬಾಲ್ಯ ವಿವಾಹ ತಡೆಗೆ ದೇಶದ ಸಂವಿಧಾನದಲ್ಲಿ ಕಠಿಣ ಕಾನೂನುಗಳು ಇವೆ. ಬಾಲ್ಯ ವಿವಾಹ ನಿಯಂತ್ರಿಸಲು ರಾಜ್ಯದಲ್ಲಿ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006ನ್ನು ಜಾರಿಗೊಳಿಸಲಾಗಿದೆ. ಬಾಲ್ಯವಿವಾಹ ತಡೆಗಟ್ಟಲು ರಾಜ್ಯ, ಜಿಲ್ಲೆ, ತಾಲೂಕು ಹಾಗೂ ಗ್ರಾಮ ಪಂಚಾಯತ ಮಟ್ಟದಲ್ಲಿ ಸಮಿತಿಗಳನ್ನು ರೂಪಿಸಲಾಗಿದೆ. ಆದರೆ, ಅವುಗಳ ಸಮರ್ಪಕ ಜಾರಿ ಹಾಗೂ ಪೋಷಕರಲ್ಲಿ ಮಕ್ಕಳ ಮೇಲಿನ ಕಾಳಜಿಯ ಕೊರತೆಯಿಂದಾಗಿ ಬಾಲ್ಯ ವಿವಾಹ ಪ್ರಕರಣಗಳು ಇನ್ನೂ ಜೀವಂತವಾಗಿವೆ.

ಮದುವೆ ವಯಸ್ಸಿಗೆ ಇನ್ನೂ ಕಾಲಿಡದ ಬಾಲಕ, ಬಾಲಕಿಯರಿಗೆ ಪೋಷಕರು ವಿವಾಹ ಮಾಡಿಸಿರುವದು ಖಾತ್ರಿಯಾದರೆ ಪೋಷಕರಿಗೆ 2 ವರ್ಷ ಜೈಲು ಶಿಕ್ಷೆ ಅಥವಾ 1 ಲಕ್ಷ ರೂಪಾಯಿಗಳ ವರೆಗೆ ದಂಡ ಹಾಗೂ ಈ ಎರಡು ಶಿಕ್ಷೆಗಳನ್ನು ವಿಧಿಸಲು ಅವಕಾಶವಿದೆ. ರಾಜ್ಯದಲ್ಲಿ ಕರೋನಾ ಎರಡನೆಯ ಅಲೆಯು ದಿನದಿಂದ ದಿನಕ್ಕೆ ಹೊಸ ಸ್ವರೂಪ ಪಡೆಯುತ್ತಿದೆ. ಕರೋನಾ ಭೀತಿಯಿಂದ ಮಕ್ಕಳು ಮನೆಯಲ್ಲಿರುವ ಹಿನ್ನೆಲೆಯಲ್ಲಿ ಪೋಷಕರು ಅಪ್ರಾಪ್ತ ಮಕ್ಕಳ ವಿವಾಹಕ್ಕೆ ಮುಂದಾಗುತ್ತಿದ್ದಾರೆ. ಅದೂ ಹಳ್ಳಿಗಳಲ್ಲೇ ಹೆಚ್ಚು ಬಾಲ್ಯವಿವಾಹದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಬೇಗನೆ ವಿವಾಹ ಮಾಡಿದರೆ ಉತ್ತಮ ಎಂಬ ಮನೋಭಾವ ಕೆಲ ಪೋಷಕರಲ್ಲಿ ಇರುತ್ತದೆ. ಹುಡುಗರಿಗಿಂತ ಅಪ್ರಾಪ್ತ ಹೆಣ್ಣು ಮಕ್ಕಳ ಬಾಲ್ಯವಿವಾಹಗಳೇ ಅಽಕವಾಗಿವೆ. ಕರೋನಾ ಅವಧಿಯಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಓದುವ ಹೆಣ್ಣು ಮಕ್ಕಳಿಗೆ ಮದುವೆ ಮಾಡುವ ಪ್ರವೃತ್ತಿ ತರೆಮರೆಯಲ್ಲಿ ನಡೆಯುತ್ತಲೇ ಇದೆ. ಪಾಲಕ, ಪೋಷಕರು ಹೆಣ್ಣುಮಕ್ಕಳನ್ನು ಸಾಕುವದು ಕಷ್ಟ ಅಥವಾ ಇನ್ಯಾವದೋ ಕಾರಣಕ್ಕೆ ಬಾಲ್ಯವಿವಾಹ ಮಾಡಿ ಕೈತೊಳೆದುಕೊಳ್ಳುತ್ತಾರೆ.

ಬಾಲ್ಯವಿವಾಹವಾದ ಹೆಚ್ಚಿನ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಹೆಣ್ಣು ಮಕ್ಕಳ ರಕ್ಷಣೆಯ ದೃಷ್ಟಿಯಿಂದ, ನಮ್ಮ ಸಮಾಜದ ಸ್ವಾಸ್ಥ್ಯ ಕಾಪಾಡುವ ದೃಷ್ಟಿಯಿಂದ ಬಾಲ್ಯವಿವಾಹವನ್ನು ತಡೆಗಟ್ಟುವ ಕಾರ್ಯ ತುರ್ತಾಗಿ ಆಗಲೇಬೇಕು. ಮಕ್ಕಳ ಹಕ್ಕುಗಳ ರಕ್ಷಣೆ ಇಡೀ ಸಮಾಜದ ಜವಾಬ್ದಾರಿಯಾಗಬೇಕು. ಬಾಲ್ಯವಿವಾಹ ಪಿಡುಗು ಸಮಾಜದಿಂದಲೇ ದೂರಾಗಬೇಕು.