Wednesday, 11th December 2024

ಕನಸು ನಮ್ಮಂಥವರಿಗಲ್ಲ..

ನಾಗೇಶ್ ಜೆ. ನಾಯಕ

ಕನಸು ಕಾಣಲೂ ಬೇಕು ಅದೇನೋ ಅರ್ಹತೆ. ಮಧುರ ಕನಸುಗಳ ಬೆನ್ನು ಹತ್ತಿದ ಬಡ ಜೀವವೊಂದು ಕೊನೆಗೆ ಸೇರಿದ್ದು ಜೀತದ ಮನೆಯನ್ನು.

ಮುದ್ದು ಗೊಂಬೆ…..
ಬದುಕಿನ ಧಡಕಿಯಲಿ, ನೂರೆಂಟು ಆಲೋಚನೆಗಳನ್ನು ತಲೆಗೆ ಮೆತ್ತಿಕೊಂಡು, ಚಾಚಿದರೆ ಕೈಗೆಟುಕುವಷ್ಟು ಕಷ್ಟಗಳನ್ನು ಮೈಗೆ ಮೆತ್ತಿಕೊಂಡು ನಿಶಾಚರಿಯಂತೆ ಹಗಲಿರುಳು ಬದುಕನ್ನು ಕಟ್ಟಿಕೊಳ್ಳಲು ಹೆಣಗಾಡುತ್ತಿರುವ ವೇಳೆ, ಮುದ್ದುಗೊಂಬೆಯಂತೆ ಮುಗುಳ್ನಗೆ ಚೆಲ್ಲಿ ಬದುಕಲ್ಲಿ ಬಲಗಾಲಿಟ್ಟು ಬಂದವಳು ನೀನು. ನೀನು ಬಂದ ಮೇಲೆ ಮುನಿದು ಕೂತ ಬದುಕು ಖಿಲ್ಲನೆ ನಕ್ಕಿತು. ಹೆಗಲಿಗೇರಿದ ಕಷ್ಟದ ಹೊರೆ ಒಂಚೂರು ಕಡಮೆಯಾಗಿ ಹಾಯೆನಿಸಿತು.

ಒಬ್ಬ ಒಳ್ಳೆಯ ಗೆಳತಿಯಾಗಿ ಕಾಲಿಟ್ಟವಳು ಆಮೇಲೆ ಜೊತೆಗಾತಿಯಾಗಿ ಹೆಜ್ಜೆಯಲ್ಲಿ ಹೆಜ್ಜೆ ಇಡಲು ಪ್ರಾರಂಭಿಸಿದೆ. ನಾನಿರುವ ಸ್ಥಿತಿಯಲ್ಲಿ ತಿರುಗಿ ಕೂಡ ನೋಡದ ಬಂಧುಗಳು, ಸ್ನೇಹಿತರು ಒಳಗೊಳಗೆ ಮುಸಿಮುಸಿ ನಗುತ್ತ ಮಜಾ ತೆಗೆದುಕೊಳ್ಳುತ್ತಿದ್ದಾಗ, ಹಿಂದೆ ಮುಂದೆ ನೋಡದೆ ಬರಿಗೈಯ ಫಕೀರನ ಕೈಹಿಡಿದು ಒಲವನಗೆ ಚೆಲ್ಲಿದೆ. ಬಟ್ಟೆ ಹರಿದುಕೊಂಡ ಮಗು ಅಂಗಡಿಯ ಶೋಕೇಸಿನಲ್ಲಿಟ್ಟ ಮುದ್ದುಗೊಂಬೆಗೆ ಕಣ್ಣರಳಿಸಿ ಆಸೆಪಟ್ಟಷ್ಟೇ ನಿನ್ನಿಷ್ಟಪಟ್ಟಿದ್ದೆ. ಬಡವ ಕಣೇ ನಾನು, ತೆಕ್ಕೆತುಂಬ ಪ್ರೀತಿ ಕೊಡಬಲ್ಲೆನೇ ಹೊರತು ಬಂಗಾರದೊಡವೆ ಮಾಡಿಸಲಾರೆ. ಕ್ಷಮೆ ಇರಲಿ.

ಗರೀಬನ ಮನೆಗೆ ಭಾಗ್ಯಲಕ್ಷ್ಮಿ ಬಂದಾಗ ಆಗುತ್ತದಲ್ಲ ಅಂತಹ ಖುಷಿ ನನ್ನ ಗುಡಿಸಲಲ್ಲಿ ತುಂಬಿತ್ತು. ಎದೆತುಂಬಿಕೊಂಡ ವೇದನೆಗಳ ಭಾರವನ್ನೆಲ್ಲ ನಿನ್ನೆದುರು ಹರವಿ ಹಗುರಾಗಿಬಿಡುತ್ತಿದ್ದೆ. ನೀನು ಕೊಡುವ ನೆಮ್ಮದಿ ಇತ್ತಲ್ಲ, ಅದು ಆನೆಬಲ ತೋಳಿನಲ್ಲಿ ತುಂಬಿಬಿಡುತ್ತಿತ್ತು. ಹರಿದ ಒಂದೇ ಅಂಗಿಯನ್ನು ಹೊಲಿದು ಪದೇ ಪದೇ ತೊಡುತ್ತಿದ್ದವನನ್ನು ಕಂಡು ಅಂಗಡಿಗೆ ಕರೆದೊಯ್ದು ಒಂದೆರಡು ಜೊತೆ ಬಟ್ಟೆ ಕೊಡಿಸಿದ್ದೆ.

ನೀನು ಬಂದ ಮೇಲೆ ಅದೆಷ್ಟು ಚೆಂದವೆನಿಸಿತ್ತು ಬದುಕು? ಬೆಳಗು ಮುಂಜಾನೆಯೆದ್ದು ಖಾಯಿಲೆ ಬಿದ್ದ ತಾಯಿಗೆ ಔಷಧಿ ಕುಡಿಸಿ, ದೇವತೆಯರು ಮಾತ್ರ ಕುಡಿಯುವಂಥ ಕಾಫಿ ಮಾಡಿಕೊಟ್ಟು, ತಮ್ಮನನ್ನು ಶಾಲೆಗೆ ತಯಾರು ಮಾಡಿ, ಟಿಫಿನ್ ಕಟ್ಟಿಕೊಟ್ಟು ಕೆಲಸಕ್ಕೆ ಹೋಗುತ್ತಿದ್ದೆ. ತಂದೆ ಎಂಬುವವನು ನಮ್ಮ ಬದುಕಿನಿಂದ ಯಾವತ್ತೋ ಜವಾಬ್ದಾರಿ ಕಳೆದುಕೊಂಡು ಬಿಟ್ಟಿದ್ದ. ಇದ್ದ ಒಂದು ಆಸರೆಯೆಂದರೆ ದೇವತೆಯಂಥ ತಾಯಿ.

ಅವಳಿಗೋ ಮೇಲೇಳಲಾರದಷ್ಟು ಖಾಯಿಲೆಗಳು. ಪಾಲಿಗಿದ್ದ ಅವಳೊಬ್ಬಳನ್ನು ಉಳಿಸಿಕೊಳ್ಳಲು ಎಳೆಯ ಹೆಗಲು ಹೊರಬಾರದ ಹೊರೆ ಹೊರುವದನ್ನು ರೂಢಿ
ಮಾಡಿಕೊಂಡವು. ಅರ್ಧ ಕಲಿತು ಶಾಲೆಗೆ ಸಲಾಮು ಹೊಡೆದು ಬಿಟ್ಟೆ. ತಮ್ಮನನ್ನಾದರೂ ಓದಿಸೋಣವೆಂಬ ತುಂಬು ಹಂಬಲ. ನೀನು ಬಂದೆ ನೋಡು ಅಮ್ಮನಿಗೆ ನಿಜವಾದ ಮಗಳು ಸಿಕ್ಕ ಸಂಭ್ರಮ. ಪುಟ್ಟ ತಮ್ಮ ತನ್ನ ಬೊಗಸೆ ಕಂಗಳಿಂದ ನಿನ್ನ ದಿಟ್ಟಿಸಿದ್ದೇ ದಿಟ್ಟಿಸಿದ್ದು. ಅವನ ಕೆನ್ನೆ ಗಿಲ್ಲಿ ಪಾಠ ಹೇಳಿಕೊಡಲು ಶುರು ಮಾಡಿದೆ. ಎರಡು ಹೊತ್ತು ಬಿಸಿಯಾದ ಊಟ ನಿಮ್ಮನೆಯಿಂದ ಪಾರ್ಸಲ್ ಬರತೊಡಗಿತು. ನಮ್ಮಂಥವರಿಗೂ ದೇವರು ಕರುಣೆ ತೋರುತ್ತಾನೆಂದು ತಿಳಿದಿದ್ದೇ ಆವಾಗ. ನನ್ನಲ್ಲಿ ಕೃತಜ್ಞತೆ ಎನ್ನೋದು ಕಡಲಂತೆ ಕೆನೆಗಟ್ಟಿತ್ತು. ನೀನು ಅದೇ ದೊಡ್ಡ ನಗೆ ನಕ್ಕು ನನ್ನ ಒರಟು ಕೆನ್ನೆಗೆ ಮುತ್ತಿಟ್ಟಿದ್ದೆ.

ನನ್ನಂಥ ಅದೃಷ್ಟವಂತ ಬೇರೊಬ್ಬನಿಲ್ಲ ಎಂದುಕೊಳ್ಳುವಷ್ಟರಲ್ಲಿಯೇ ಕಾಲನ ಕರಾಳ ಕಣ್ಣು ತನ್ನ ವಕ್ರದೃಷ್ಟಿಯನ್ನು ನನ್ನ ಬದುಕಿನ ಮೇಲೆ ಬೀರಿತ್ತು. ನಮ್ಮ ಮನೆಗೆ ಬರದಂತೆ ನಿನಗೆ ಲಕ್ಷ್ಮಣರೇಖೆ ಎಳೆಯಲಾಯಿತು. ಊರಿನ ತುಂಬಾ ಮಾತಿನ, ಮೌನದ, ಪದ್ಧತಿಗಳ, ಕಟ್ಟಲೆಗಳ ಬೇಲಿ. ಪುರಾತನ ಸಂಪ್ರದಾಯದ ಬಿಗ್ಗಬಿಗಿ ಹಿಡಿತಗಳು ಪರಸ್ಪರರ ಭಾವನೆಗಳ ಕತ್ತುಹಿಚುಕಿ ಗೇಲಿ ಮಾಡಿ ನಕ್ಕಿದ್ದು ದುರಾದೃಷ್ಟವಲ್ಲದೇ ಮತ್ತಿನ್ನೇನು? ನಿನ್ನ ಬರುವಿಕೆ ನಿಂತ ಮೇಲೆ ನಿಜವಾಗಿ ಘಾಸಿ ಗೊಂಡವಳೆಂದರೆ ನನ್ನ ತಾಯಿ. ತುಂಬಾ ಹಚ್ಚಿಕೊಂಡಿತ್ತು ಜೀವ. ಒಮ್ಮೆಲೆ ಊಟ ಮಾಡುವದನ್ನೇ ಬಿಟ್ಟಳು.

ನಿನ್ನ ಬರುವಿನ ನಿರೀಕ್ಷೆಯಲ್ಲಿಯೇ ಆಕೆಯ ಅಕ್ಷಿಗಳು ಅರೆತೆರೆದ ಸ್ಥಿತಿಯಲ್ಲಿಯೇ ನಿರ್ಜೀವವಾಗಿದ್ದವು. ಇದ್ದ ಒಂದು ಆಸರೆ ಕಳಚಿಹೋಗಿ ಸೋತ ಕಾಲುಗಳು ಬೇರೆ ಊರಿಗೆ ಗುಳೆ ಹೊರಟಿದ್ದವು. ನಮ್ಮಂಥವರು ಕನಸು ಕಾಣಬಾರದು ಕಣೇ. ಕನಸು ಕಾಣಲು ಅರ್ಹತೆ ಇಲ್ಲದವರು ನಾವು. ಈ ಪತ್ರ ನೀ ಓದುತ್ತಿರುವ ಹೊತ್ತಿಗೆ ನಾವು ಅದ್ಯಾವುದೋ ಹೆಸರು ಗೊತ್ತಿಲ್ಲದ ಊರಿನಲ್ಲಿ ಜೀತಕ್ಕಿರುತ್ತೇವೆ. ಪಾಪಿ ಹೊಟ್ಟೆ ತುಂಬಿಸಲೇಬೇಕಲ್ಲ?