ಶ್ರೀರಂಜನಿ ಅಡಿಗ
ಕುಟುಂಬದಲ್ಲಿ ಮಕ್ಕಳ ಲಾಲನೆ ಪಾಲನೆ, ಪೋಷಣೆಯ ಕೆಲಸಕ್ಕೆ ಕೊನೆಯೆಂಬುದಿಲ್ಲ. ಮಕ್ಕಳು ಬೆಳೆದು, ದೊಡ್ಡವ ರಾಗಿ, ಉದ್ಯೋಗಸ್ಥರಾಗಿ, ಮದುವೆಯ ನಂತರವೂ, ಅವರ ಕಾಳಜಿ ಹೆತ್ತವರಿಗೆ. ಆದ್ದರಿಂದಲೇ, ಹೆತ್ತವರಿಗೆ ತಮ್ಮ ಮಕ್ಕಳು ಸದಾ ಕಾಲ ಮಕ್ಕಳೇ ಸರಿ.
ಮನೆಯಲ್ಲಿ ಮಗುವೊಂದು ಹುಟ್ಟಿದಾಗ ಸಂಭ್ರಮ, ಖುಷಿ. ಜತೆಗೆ ಮುಂದಿನ ದಿನ ಗಳಲ್ಲಿ ಅದರ ಕಾಳಜಿ, ಲಾಲನೆ ಪೋಷಣೆಯ ಜವಾಬ್ದಾರಿಯೂ ಹುಟ್ಟುತ್ತದೆ. ಅದು ತಿನ್ನದಿದ್ದರೆ, ಬಿದ್ದರೆ, ಹುಷಾರು ತಪ್ಪಿದರೆ ಚಿಂತೆ. ಅತ್ತರೂ, ಅಳದಿದ್ದರೂ ಚಿಂತೆ, ಆತಂಕ. ನಿದ್ದೆಗೆಟ್ಟು ಅದರ ಪಾಲನೆ, ಅದರ ಒಳಿತಿಗಾಗಿ ಹರಕೆ, ಪ್ರಾಯಶ್ಚಿತ್ತಗಳು, ವೃತಗಳು.
ನಾಲ್ಕು ಹೆಜ್ಜೆಯಿಟ್ಟಿತೋ ಒಳ್ಳೆಯ ಶಾಲೆ ಹುಡುಕು, ಅಲ್ಲಿ ಸೀಟು ಸಿಗುತ್ತೋ ಇಲ್ವೋ? ಚೆನ್ನಾಗಿ ಕಲಿಯುತ್ತದೋ? ಟೀಚರು ತನ್ನ ಮಗುವನ್ನು ಗಮನಿಸುತ್ತಾರೋ ಇಲ್ವೋ? ಯಾವ ಕೋಚಿಂಗ್ ಕ್ಲಾಸಿಗೆ ಸೇರಿಸಿದರೆ ಒಳ್ಳೆ ಅಂಕಗಳು ಬರಬಹುದು? ಗೆಳೆಯ ರೊಡನೆ ಜಗಳ ಮಾಡಿಕೊಳ್ಳುತ್ತದೋ? ಹೀಗೆ ಯೋಚನೆ, ಕಾಳಜಿಗಳ ಸರಮಾಲೆಯೇ ಸುತ್ತುವರಿದುಬಿಡುತ್ತವೆ. ಪ್ರಾಯಕ್ಕೆ ಬಂದ ಮೇಲೆ ಈ ಸ್ವರೂಪ ಬದಲಾಗಿ ಸಿಟ್ಟು ಹಠ, ಮುನಿಸಿನ ಮಕ್ಕಳು ಹೇಳಿದ್ದು ಕೇಳುವುದಿಲ್ಲ ಎಂಬ ದೂರಿನೊಂದಿಗೆ ಎಂಥವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿದ್ದಾನೋ(ಳೋ)? ಕೆಟ್ಟಚಾಳಿಗೆ ಬಿದ್ದರೋ? ಕಾಲೇಜು ಬಿಟ್ಟು ನೇರ ಮನೆಗೇ ಬರುತ್ತಾರೋ ಎಂಬಂಥ ಆತಂಕಗಳು.
ಜತೆಗೆ ಅಂಕಗಳಿಕೆ, ಸಿಇಟಿ, ಮುಂದಿನ ದಿನಗಳಲ್ಲಿ ಅನುಕೂಲವಾಗುವಂತೆ ಫಲಿತಾಂಶಕ್ಕಾಗಿ ನಿರೀಕ್ಷಿಸುವ ಸಡಗರ, ಕಾಳಜಿ.
ಅಂತೂ ಒಂದು ಹಂತದ ಓದು ಮುಗಿದೊಡನೆ ಕೆಲಸದ ಬೇಟೆ. ಮನೆ ಬಿಟ್ಟು ಹೊಸ ಊರಿನಲ್ಲಿ ನೆಲೆಸಬೇಕಾದ ಪ್ರಸಂಗ ಬಂದರೆ ಒಬ್ಬರೇ ಹೇಗೆ ಇರುತ್ತಾರೋ? ಊಟ ಸರಿಯಿರುತ್ತದೋ ಇಲ್ಲವೋ? ಹೀಗೆ ಮಕ್ಕಳ ಕುರಿತಾದ ಸಮಸ್ಯೆಗಳಿಗೆ ಕೊನೆಯಿರುವುದಿಲ್ಲ.
ಕೆಲಸ ಸಿಕ್ಕ ಕೂಡಲೆ ಮದುವೆ!
ಹಾಂ, ಅಂತೂ ಕೆಲಸ ಸಿಕ್ಕಿತು. ಒಂದೆರಡು ವರ್ಷ ಬಿಟ್ಟು ಮದುವೆಗೆ ತಯಾರಿ ಮಾಡು ವಾಗ ತಮಗೆ ಹೊಂದುವ ಸಂಬಂಧ ಸಿಗಬೇಕು, ಕೊಡುಕೊಳ್ಳುವಿಕೆ, ಮರ್ಯಾದೆ ಚೆನ್ನಾಗಿ ನಡೆಯಬೇಕು, ಬಂದ ಸೊಸೆ ತಮ್ಮನ್ನು ನೋಡಿಕೊಳ್ಳಬೇಕು, ಮಗಳು ಗಂಡನ ಮನೆಯಲ್ಲಿ ಹೊಂದಿಕೊಂಡು ಹೋಗಬೇಕು. ಅಂತೂ ಈ ಎಲ್ಲಾ ನಿರೀಕ್ಷೆಗೆ ತಕ್ಕ ಸಂಬಂಧ ಸಿಕ್ಕಿ ಮದುವೆಯಾಯಿತೆನ್ನಿ. ‘ನಮ್ಮ ಜವಾಬ್ದಾರಿ ಮುಗಿಯಿತು, ಇನ್ನು ಆರಾಮ’ ಎಂದು ಅನ್ನೋಹಾಗೂ ಇಲ್ಲ. ಏಕೆಂದರೆ ಒಂದೇ ಸಮ ಇಡೀ ಮನೆಯ ಜವಾಬ್ದಾರಿ ಮಕ್ಕಳ ಮೇಲೆ ಹೊರಿಸುವುದು ಸರಿಯನ್ನಿಸದು. ‘ಒಂದೆರಡು ವರ್ಷ ಆರಾಮವಾಗಿರಲಿ’ ಅನ್ನೋವಷ್ಟರಲ್ಲಿ ಮಗುವಾಗಿಬಿಡುತ್ತದೆ.
ಮನೆಯಲ್ಲಿ ಜನಿಸುವ ಮಗುವೆಂದರೆ ಹೊಸ ಅಧ್ಯಾಯದ ಆರಂಭ. ಮಗು ಜನಿಸುವ ಪ್ರಕ್ರಿಯೆ, ಮನೆಯಲ್ಲಿ ಬಾಣಂತಿ ಸಾಕುವಿಕೆ, ಮಗುವಿನ ಲಾಲನೆ ಪಾಲನೆ ಇತ್ಯಾದಿಯಲ್ಲಿ ನಾಲ್ಕಾರು ತಿಂಗಳುಗಳೇ ಕಳೆದು ಹೋಗುತ್ತದೆ. ಗಂಡ ಮತ್ತು ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುತ್ತಿದ್ದರೆ ಮತ್ತೆ ಇತಿಹಾಸ ಮರುಕಳಿಸುತ್ತದೆ. ಮೊಮ್ಮಗುವಿನ ಕೆಲಸಕಾರ್ಯಗಳೂ ಇವರ ಮೇಲೆಯೇ.
ಅದಕ್ಕೆ ತಿನ್ನಿಸು, ಮಲಗಿಸು, ಶಾಲೆಗೆ ಕಳುಹಿಸು ಎಂದು ಮಕ್ಕಳ ಜೊತೆ ಮೊಮ್ಮಗುವಿನ ಕೆಲಸವೂ ಸೇರಿಕೊಳ್ಳುತ್ತದೆ. ಅದಕ್ಕೆ ಹೇಳುವುದು – ‘ಮಕ್ಕಳಿಲ್ಲದಿದ್ದರೆ ಒಂದೇ ಚಿಂತೆ, ಇದ್ದರೆ ನೂರಾರು ಚಿಂತೆ’ ಎಂದು! ವಿದೇಶದಲ್ಲಿ ಮಕ್ಕಳು ಇನ್ನು ಮಕ್ಕಳು ವಿದೇಶದ, ಪರವೂರಿನ ಇದ್ದರೆ, ಅವರು ಬಂದಾಗ ವಿಶೇಷದ ಅಡುಗೆ ಮಾಡಿದರೇನೇ ಸಮಾಧಾನ. ಹೊರಡುವಾಗ ಬರೀಕೈ
ಯಲ್ಲಿ ಕಳುಹಿಸೋದು ಹೇಗೆ ಎಂದು ಸಾರಿನಪುಡಿ, ಉಪ್ಪಿನಕಾಯಿ, ಹಪ್ಪಳ, ಸೆಂಡಿಗೆ, ಮೊಮ್ಮಕ್ಕಳಿಗೆಂದು ಚಕ್ಕುಲಿ, ಕೋಡುಬಳೆ ಮಾಡಿಕೊಡಲೇಬೇಕು.
ವಿಮಾನ ನಿಲ್ದಾಣಕ್ಕೆ ಹೋಗಿ ಟಾಟಾ ಮಾಡಿ, ಅವರು ತಲುಪಿದರೋ ಎಂದು ತಿಳಿಯುವ ಕಾತುರ. ನಂತರ ಆಗಾಗ ವಿಡಿಯೋ ಮೂಲಕ ಮಾತನಾಡುವ ಸಡಗರ! ಇನ್ನು ಹಳ್ಳಿಯಲ್ಲಿ ವಾಸವಿದ್ದು, ಗದ್ದೆ, ತೋಟದವರಾಗಿದ್ದರೆ ಸೊಪ್ಪುಸದೆ, ಹಣ್ಣು, ಕಾಯಿ ಎಂದು ತೋಟಕ್ಕೆ ಒಂದು ಸುತ್ತು ಹಾಕಿಬರಬೇಕು. ಇವೆಲ್ಲವುಗಳೂ ‘ಅಯ್ಯೋ, ಮಾಡಬೇಕಲ್ಲ’ ಎಂಬ ಹೇರಿಕೆಯಿಲ್ಲದೆ ತುಂಬು ಹೃದಯದಿಂದ ಮೂಡಿಬರುವ ಭಾವಸುರತೆ.
ಹೀಗೆ- ಮಕ್ಕಳ ಉನ್ನತಿಗಾಗಿ ಪ್ರತಿ ಕ್ಷಣ ಹೆತ್ತವರ ಉಸಿರು ಮಿಡಿಯುತ್ತಿರುತ್ತದೆ. ತಂದೆತಾಯಂದಿರ ಬೇಡುವಿಕೆ – ಮಕ್ಕಳಿಗಾಗಿ ಮುಗಿಯುದೇ ಇಲ್ಲ. ಏಕೆಂದರೆ ಪ್ರಪಂಚದ ದೃಷ್ಟಿಯಲ್ಲಿ ಮಾತ್ರ ಮಕ್ಕಳು ಬೆಳೆದಿರುತ್ತಾರೆ, ಆದರೆ ತಂದೆ ತಾಯಿಗೆ ಅವರಿನ್ನೂ
ಮಕ್ಕಳಾಗಿಯೆ ಇರುತ್ತಾರೆ. ಊರಿಗೆ ಅರಸನಾದರೂ ತಾಯಿಗೆ ಮಗ ತಾನೆ!