ಲಕ್ಷ್ಮೀಕಾಂತ್ ಎಲ್ ವಿ
ಸಂಜೆಯ ತಂಗಾಳಿಗೆ ಹೊಂಬಣ್ಣಕೆ ಮನ ಸೋಲಲಿಲ್ಲ, ನೀನಿಲ್ಲದ ಮುಸ್ಸಂಜೆಗೆ ಎಲ್ಲಿದೆ ಅರ್ಥ?
ಮರೆತು ಹೋದ ಮಾತೊಂದನ್ನು ಪದಗಳಲ್ಲಿ ಹಿಡಿಯುವ ಪ್ರಯತ್ನ ಗಾಳಿಯನ್ನು ಹಿಡಿದಂತಾಗಿದೆ. ನನ್ನ ಎದೆಯಲ್ಲಿ ಉಳಿದಿರುವ ಬರೆಯದ ಅದೆಷ್ಟೋ ಸಾಲು ಗಳನ್ನು ಬರೆಯಬೇಕೆಂದು ಹೋದರೆ ಸಾಕು ಕಂಬನಿ ಕಣ್ಣನ್ನು ಮುಚ್ಚಿಸುತ್ತದೆ. ಏನು ಮಾಡಲಿ ನಾನು? ಎಂದಿಗೂ ನಿನ್ನ ನೆನಪು ಮಾತ್ರ ಆ ಕಂಬನಿಯಿಂದ
ಮರೆಯಾಗದಿರಲಿ ಎಂಬುದು ನನ್ನ ಹೃದಯದ ಬೇಡಿಕೆ.
ನನ್ನ ಬದುಕಿನ ಖಾಲಿ ದಾರಿಯಲ್ಲಿ, ವಿರಹ ವೇದನೆಯ ಬಿಸಿಲ ಹವೆಯಲ್ಲಿ ನಡೆಯುವಾಗಲೆಲ್ಲಾ ನಿನ್ನದೇ ನೆನಪು ಬಿಡದಂತೆ ಆವರಿಸುತ್ತದೆ. ಕಾದು ಕೆಂಪಾದ ಭುವಿಗೆ ಸೋನೆ ಸುರಿದು ತಂಪಾದಂತೆ ವಿರಹ ಬೇಗೆಯಲ್ಲಿ ಬೆಂದವನ ಎದೆಗೆ ನಿನ್ನ ಒಲವ ನೆನಪು ಸೋನೆಯಾಗುತ್ತದೆ. ಒಂದಂತೂ ಸತ್ಯ ಹುಡುಗಿ, ನಿನ್ನೊಡನೆ ಬದುಕಿನ ಹೆಜ್ಜೆ ಇಡಲಾರದವನಿಗೆ ನೆನಪಿನ ಮಳೆಯೂ ಸುನಾಮಿಯಾಗುತ್ತದೆ. ಅದಕ್ಕೆಂದು ಸುರಿವ ಕಣ್ಣೀರನ್ನು ಮರೆಸಲು ಪ್ರಯತ್ನಿಸಿದರೂ ನೆನಪನ್ನು ಅಳಿಸಲಾಗುತ್ತಿಲ್ಲ. ನಮ್ಮಿಬ್ಬರ ನಡುವಿನ ಅಂತರ ತುಂಬಾ ದೂರ ಇರಬಹುದು; ಆದರೆ ಪ್ರೀತಿಯ ನೆಟ್ವರ್ಕ್ ಮಾತ್ರ ಸಿಕ್ಕೇ ಸಿಗುತ್ತದೆ. ಏಕೆಂದರೆ ಮನಸಿಗೆ ಬೇಲಿಯೇ ಇಲ್ವಲ್ಲಾ..!
ಒಂದೇ ಒಂದು ಮಿಸ್‌ಕಾಲ್ ಕೊಟ್ಟರೂ ಸಾಕು ನನ್ನ ಎದೆಯ ಕಾಲರ್‌ಟ್ಯೂನ್ ನಿನ್ನದೇ ಹೆಸರಿನಿಂದ ರಿಂಗಾಗುತ್ತದೆ. ಸದಾ ಮುಗುಳ್ನಗೆ ಬೀರುವ ನಿನ್ನ ಮುದ್ದು ಮುಖವನ್ನು ವರ್ಣಿಸಲು ಆಗದಿದ್ದರೂ ಮರೆಯುವುದಾದರೂ ಹೇಗೆ; ನನ್ನೊಂದಿಗೆ ನೀ ಆಡಿದ ಪ್ರೀತಿಯ ಮಾತುಗಳನ್ನು ನಾ ಹೇಗೆ ಮರೆಯಲಿ ಗೆಳತಿ.
ಅಪ್ಪುಗೆಯ ಸಮಾಧಾನ
ನೊಂದಿರುವಾಗ ನೀ ನೀಡಿದ ಅಪ್ಪುಗೆಯ ಸಮಾಧಾನ ಎಲ್ಲವನ್ನೂ ಮರೆಸಿತ್ತು. ಲೋಕದಲ್ಲಿ ಮತ್ತೇನು ಬೇಕಿಲ್ಲ ಎನ್ನುವ ಆ ಪ್ರೀತಿಗೆ ಏನೆಂದು ಹೆಸರಿಡಲಿ? ನೀನಿಲ್ಲಿದ ನನ್ನ ಜೀವನ ಮುತ್ತಿಲ್ಲದ ಚಿಪ್ಪಿನಂತೆ ಹುಡುಗಿ. ಬೀಸುವ ಗಾಳಿಯ ಹಿಡಿದು, ಗಾಳಿಯಲ್ಲಿ ತೇಲಿಬರುವ ಎಲೆಗಳನ್ನು ಎಣಿಸುವ ಕಲೆಯನ್ನು ನಿನ್ನಿಂದಲೇ ಕಲಿತದ್ದು. ಟೆರೇಸ್‌ನಲ್ಲಿ ಮಲಗಿ ವಿಶಾಲ ಆಕಾಶದಲ್ಲಿ ತಾರೆಯನ್ನು ಎಣಿಸಲು ಹೇಳಿಕೊಟ್ಟವಳು ನೀನೆ; ಇದುವರೆಗೂ ಲೆಕ್ಕ ಮಾತ್ರ ಸಿಕ್ಕಿಲ್ಲ ಕಣೆ. ಉತ್ತರ ಮಾತ್ರ ನಮ್ಮ ಪ್ರೀತಿಯ ವಿಶಾಲದಷ್ಟು ಎಂದು ಹೇಳಿದವಳು ಅದೇ ಆಗಸದ ನಕ್ಷತ್ರದಲ್ಲಿ ನನ್ನ ನೋಡುತ್ತಾ ಮಿನುಗುತ್ತಿರುವೆ.
ಅಂತಹ ಅಳೆಯಲಾಗದ ಪ್ರೀತಿಯನ್ನು ಹೇಗೆ ಪ್ರತಿಬಿಂಬಿಸಲಿ? ಉಸಿರ ನೀಡುವ ಪ್ರೀತಿಯ ಕೊಟ್ಟು ನಿನ್ನುಸಿರನ್ನು ನನಗೆ ಬಿಟ್ಟು ಹೋಗಿರುವೆ. ನೆನಪಿನ ಬಂಧನಲ್ಲಿ ನನ್ನಿರಿಸಿ ಹೋದೆ ನಿನ್ನನ್ನು ಸೇರಲು ಬಂದಾಗ. ಹೃದಯವೆಂಬ ಕೋಟೆಯನ್ನು ಒಡೆದು ಒಲವಿನ ಸಾಮ್ರಾಜ್ಯವನ್ನು ಅನಾಥವಾಗಿಸಿ ಆಗಸದಷ್ಟು ಪ್ರೀತಿಯನ್ನು ಹೊತ್ತಿದ್ದ ಈ ಬಡಪಾಯಿ ಪ್ರೇಮಿಯನ್ನು ಬಿಟ್ಟು ಹೋದೆ. ತಿಳಿ ಸಂಜೆ ಜಾರುವ ಹೊತ್ತಿನಲ್ಲಿ ಬಾನಂಚಲ್ಲಿ ಆ ರವಿ ದೂರ ಸರಿಯುವಾಗ ಅನಿಸಿದ್ದು ಅದೇಕೇ ನಮ್ಮ ಪ್ರೀತಿ ಮೇಲೆ ಆ ದೇವರಿಗೆ ಕೋಪ ಎಂದು!
ಇಲ್ಲವಾದರೆ ನನ್ನ ನಾಳೆಯನ್ನು ಕಿತ್ತುಕೊಳ್ಳಲು ಸಾಧ್ಯವಿರಲಿಲ್ಲ. ಈಗಲೂ ನೆನೆಸಿಕೊಂಡರೆ ನೀನಿರದ ನನ್ನ ನಾಳೆಗಳು ಬಂಜರು ಭೂಮಿಯಲಿ ಬೆಳೆಯದ ಪೈರಿನಂತಾಗಿದೆ. ನಿನ್ನೊಂದಿಗೆ ಜೊತೆಯಾಗಿ ಕೈ ಹಿಡಿದು ನಡೆದ ಆ ದಿನಗಳು ನಾಳಿನ ಚಿಂತೆಗೆ ನೆಪವೊಡ್ಡಿ ಉಳಿಯುವ ನೆನಪುಗಳಾಗಿಬಿಟ್ಟಿವೆ.
ಉಸಿರು ನಿಲ್ಲುವ ತನಕ
ಕಡಲೆದೆಯ ಮೇಲೆ ನಿನ್ನಂದದ ಒಲವನ್ನು ಚಿತ್ರಿಸಿ ದೃಷ್ಟಿ ಬೊಟ್ಟಿಡುವುದರೊಳಗೆ ಹೊಟ್ಟೆಕಿಚ್ಚಿನ ಕಡಲು ಮಾತ್ರ ಬಾಚಿ ಸೆಳೆದು ಅಳಿಸಿ ನೆನಪನ್ನು ದೂರವಾಗಿಸು ತ್ತದೆ. ಏನೋ ನೆಪವಷ್ಟೆ ಇಲ್ಲಿನ ಜೀವ. ಉಸಿರು ಮಾತ್ರ ಆಗಸದಲ್ಲಿ ಮಿನುಗುವ ನಕ್ಷತ್ರದ ಕಡೆಗಿದೆ. ಅದೆಷ್ಟೋ ಬಾರಿ ಮನದ ಹೊಸಿಲ ದಾಟದೆ, ಅಳಿದುಹೋದ ಪ್ರೇಮಕಥೆಗೆ ಮುನ್ನುಡಿಯನ್ನು ಒಡಲಾಳದಲ್ಲಿ ಮೂಡಿಸಿ ಕವಿತೆಯೊಂದನ್ನು ಬರೆಯುವೆ; ಆದರೆ ಅದರಲ್ಲಿ ಅಡಗಿದ್ದ ಮನದ ಅಳಲಿನ ವ್ಯಥೆ ಮಾತ್ರ ಮುನ್ನುಡಿಯಾಗಲಿಲ್ಲ. ಆಡದೆ ಉಳಿದ ಮಾತುಗಳು ನೂರಲ್ಲ, ಸಾವಿರಾರು ಇನ್ನೂ ಇವೆ. ಹಾಗಾಗಿ ಈ ಉಸಿರು ನಿಲ್ಲುವವರೆಗೂ ನಿನ್ನೊಂದಿಗೆ ನಿನ್ನ
ನೆನಪೊಂದಿಗೆ ನಾನಿರುವೆ. ನನ್ನ ಮನದಲ್ಲಿ ಕುಳಿತು ನೀ ಸದಾ ಪದಗಳಾಗಿ ಜೀವಂತವಾಗಿರುವೆ.