ಅದು ಶಿವ ಪಾರ್ವತಿಯರದಿರಬಹುದು, ವಿಷ್ಣು ಲಕ್ಷ್ಮಿ ಇರಬಹುದು, ರಾಧಾ ಕೃಷ್ಣನೇ ಇರಬಹುದು. ರಾಮಕೃಷ್ಣ ಶಾರದಾ ದೇವಿಯೇ ಇರಬಹುದು. ಅದು ಇವತ್ತಿನ ರೀತಿಯಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿ ಇನ್ನೆಲ್ಲೋ ಮುಗಿಯಬಹುದು. ಹಲವಾರು ಸಾಹಿತಿಗಳು, ಸಿನೆಮಾ ನಿರ್ದೇಶಕರು, ತತ್ವಜ್ಞಾನಿಗಳು ತಮ್ಮ ಪ್ರೀತಿಗೆ ತಮ್ಮದೇ ಅರ್ಥ ಕೊಟ್ಟರೂ ದಿನದಿಂದ ದಿನಕ್ಕೆ ದರ ಅರ್ಥವೂ ಬೇರೆಯಾಗುತ್ತಿದೆ.
ಪ್ರೀತಿಯೆಂದರೆ ಪಡೆಯುವುದಾ, ಮರೆಯುವುದಾ, ಕಾಯುವುದಾ. ಪ್ರೀತಿಗೋಸ್ಕರ ಪ್ರಾಣ ಕೊಡುವುದಾ ಅಥವಾ ಪ್ರೀತಿಗೊಸ್ಕರ ಪ್ರಾಣ ತೆಗೆದುಕೊಳ್ಳುವುದಾ? ಪ್ರೀತಿಎಂದರೆ ಮನೆಯವರ ಜತೆ ಖುಷಿಯಾಗಿರುವುದಾ, ಅಥವಾ ಮನೆಯವರನ್ನೇ ಬಿಟ್ಟು ಬರುವುದಾ? ಅವರಿಗೆ ಇಷ್ಟ ಇಲ್ಲ ಅಂತ ಗೊತ್ತಿದ್ದರೂ ಅವರಿಗೋಸ್ಕರ ಕಾಯುವುದಾ? ಸಣ್ಣ ಬೆಳಕಲ್ಲಿ ಕಂಡ ಅವಳ ಮುದ್ದು ಮುಖವೋ ಏನೋ. ಎಂಥವರಿಗೂ ಬೀಳದ ನಮ್ಮ ಹುಡುಗ ಪ್ರೀತಿಯಲ್ಲಿ ಬಿದ್ದ ಮೊದಲನೇ ಸಲ. ಹೌದು!
ಈ ಪ್ರೀತಿಯಲ್ಲಿ ಬೀಳುವುದೇ ಯಾಕೆ? ಪ್ರೀತಿ ಅಂದ್ರೆನೇ ಹಾಗೆ. ಎಲ್ಲರನ್ನೂ ಮೂಢರ ನ್ನಾಗಿ ಮಾಡುತ್ತೆ. ಎಲ್ಲರನ್ನೂ ತನ್ನ ಬಲೆ ಯಲ್ಲಿ ಬೀಳಿಸುತ್ತೆ. ಅದು ಹುಡುಗ, ಹುಡುಗಿ ನಡುವಿನದ್ದೂ ಇರಬಹುದು. ತನ್ನ ಪಾಲಕರು, ಬೈಕ್, ಕಾರ್, ತಾನು ದಿನ ನಿತ್ಯ ಇಷ್ಟ ಪಟ್ಟು ಮಾಡುವ ಕೆಲಸವೂ ಇರಬಹುದು. ಒಂದು ಸಾರಿ ಬಲೆಯಲ್ಲಿ ಬಿದ್ದವನು ಏಳುವುದು ತುಂಬಾ ಕಷ್ಟ.
ಅದರಲ್ಲೇ ಬಿದ್ದು ಒದ್ದಾಡುತ್ತಾ ದುಶ್ಚಟಗಳಿಗೆ ದಾಸನಾಗಿ, ಹುಚ್ಚನಾಗಿ, ತನ್ನ ಪ್ರೇಯಸಿ ಬೇರೆಯವರಿಗೆ ಸಿಗಬಾರದೆನ್ನುವಷ್ಟು
ಸ್ಯಾಡಿಸ್ಟ್ ಆದವರನ್ನೂ ನೋಡುತ್ತಿರುತ್ತೇವೆ. ಅಂಥವರಿಗೆಂದೇ ಇರಬಹುದು. ವಿರಹ ಗೀತೆ, ಮದ್ಯ, ಸಿಗರೆಟ್ ಇನ್ನೆಷ್ಟೋ… ಇಲ್ಲಿ ಹುಟ್ಟುವ ಪ್ರಶ್ನೆ ತನ್ನ ಖುಷಿಯನ್ನು ಯಾರೋ, ಯಾವುದೋ ವಸ್ತುವಿನ ಕೈಯಲ್ಲಿಟ್ಟು ದಿನ ಸಾಯುವುದೇಕೆ? ಖುಷಿಯನ್ನು
ಯಾವತ್ತೂ ಅರಸಿಕೊಂಡು ಹೋಗುವುದಲ್ಲ ಅದನ್ನು ಅನುಭವಿಸಬೇಕು. ನೀವು ಎಲ್ಲಯೇ ಇರಲಿ, ಏನನ್ನೇ ಮಾಡುತ್ತಿರಲಿ.
ಯಾವುದೇ ಉಪೇಕ್ಷೆಯಿಲ್ಲದಿದ್ದಾಗ ಬರುವುದು ಎರಡೇ ಪ್ರೀತಿ ಮತ್ತು ನಿದ್ದೆ. ಹೌದು! ಎಷ್ಟೋ ಕೆಲಸವಿದೆ ಅಂತ ಕುಳಿತಾಗಲೂ ಬರುವ ನಿದ್ರೆ. ನಾವು ಯಾವುದೋ ವ್ಯಕ್ತಿಗೆ ಪ್ರೀತಿಸಬಾರದೆಂದು ನಮ್ಮನ್ನು ನಾವು ತಡೆದುಕೊಂಡಾಗ ಗೊತ್ತಿಲ್ಲದೇ ಆಗುವ ಪ್ರೀತಿ, ನಿಯಂತ್ರಿಸಲಾದದ್ದು. ಹಾಗೆಯೇ ಸುಖ, ದುಃಖ, ಬದಲಾವಣೆ, ಅಹಂಕಾರ, ಅಸಡ್ಡೆ ಇವುಗಳೆಲ್ಲ ಸಿಗುವುದು ಪ್ರೀತಿಯಲ್ಲಿಯೇ!
-ಅಪ್ರಮೇಯ