Saturday, 2nd December 2023

ನೀನಿರಲು ಜತೆಯಲಿ !

ಬೀರೇಶ್ ಎಸ್.ಗುಂಡೂರ್‌

ಎಲ್ಲೋ ಅಂತಃರಾಳದಲ್ಲಿ ನಾವಿಬ್ಬರೂ ಯಾವ ಪರಿ ಗೆದ್ದುಬಿಟ್ಟೆವಲ್ಲ! ನೀನೇ ಗೆಲ್ಲಿಸಿಬಿಟ್ಟೆ ಹುಡುಗಿ. ಅದೇ ನಿಜ. ನಿನ್ನಿಂದಲೇ ಇದೆ ಸಾಧ್ಯವಾಯಿತು.

ನನ್ನಲ್ಲಿ ಅದೆಂತಾ ಭರವಸೆಯೋ ಏನೋ! ಜಗಳದ ಮಾತು ದೂರ ಹೋಯ್ತು, ಕನಿಷ್ಟ ಪಕ್ಷ ಒಂದಿಷ್ಟು ಎದುರುತ್ತರ ಕೊಡುವ ಗೋಜಿಗೆ ಕೂಡ ಹೋಗದಿರುವ ಆಸಾಮಿ ನಾನು. ಮಾತಿಗಿಂತ ನನಗೆ ಮೌನವೇ ಇಷ್ಟವಾಗುತ್ತದೆ. ಎಲ್ಲವನ್ನು ಕೇಳಿಸಿಕೊಳ್ಳುತ್ತೇನೆ.

ಯಾವುದನ್ನೂ ಮರೆಯುವುದಿಲ್ಲ. ಎಂದಿನಿಂದ ನನಗೆ ನಂಬಿಕೆ ಅಂದ್ರೆ, ನನ್ನ ಸ್ವಂತ ಪ್ರಯತ್ನದ ಮೇಲೇನೆ. ಪಟ್ಟು ಹಿಡಿದು ಕೂರುತ್ತೇನೆ. ಛೇ! ಸ್ವಾರ್ಥದಿಂದ ಯಾವುದನ್ನೂ ಬಯಸುವ ಮನಸ್ಸಾಗುವುದಿಲ್ಲ. ಯಾರಾದರೂ ಹಗುರವಾಗಿ ಮಾತನಾಡಿದರೆ, ಅವರ ವಿವೇಕ ಕಂಡು, ಅವರೆಡೆಗೆ ಒಂದು ತಣ್ಣನೆಯ ನಗು ಬಿಸಾಕುತ್ತೇನೆ ಅಷ್ಟೇ. ಈ ಸಮಾಜ ದಲ್ಲಿ ತೀರಾ ಒಳ್ಳೆಯತನ  ತೋರಿಸಿದರೂ ಕಷ್ಟವೇ? ಪಾಲಿಸಿದರಂರೂ ಬಿಡಿ, ಆಳಿಗೊಂದು ಮಾತಿನ ಚಾಟಿ.

ಯಾರೇ ಕೂಗಾಡಲಿ, ಮೊಣಕಾಲ ಕೆಳಗಿನ ಬುದ್ಧಿ ತೋರಿಸಲಿ, ಅದು ಅವರವರು ಗಳಿಸಿ ಕೊಂಡದ್ದು. ಮನದಂಗಳದಂದು ಸ್ವಚ್ಚ ಬದುಕಿನ ಸೆಲೆ ಇದ್ದರೆ ಸಾಕು ಈ ಹಿಡಿ ಬದುಕಿಗೆ ಅನ್ನುವಾಗ, ‘ತುಂಬಾ ಅಪರೂಪದ ಮ್ಯಾನುಫ್ಯಾಕ್ಚರ್ ಕಣೋ ನೀನು’ ಅಂತ ಹಲವು ಬಾರಿ ನೀನು ರೇಗಿಸುತಿದ್ದುದು ನನಗೆ ಇವತ್ತಿಗೂ ತಲೆಯಲ್ಲಿ ಗುಂಗು.

ನಂಗಿನ್ನೂ ನೆನಪಿದೆ, ನೀನು ಆವತ್ತು ‘ಅವನ ಜತೇನೆ ನಾನು ಬದುಕೋದು, ನನ್ನ ಉಸಿರು ಅವನು’ ಎಂದು ನಿನ್ನ ಮಂದಿಗೆ ಮುಲಾಜಿಲ್ಲದೆ ಹೇಳಿ ನನ್ನ ಬೈಕ್ ಹತ್ತಿ ಕುಳಿತಾಗ, ನಿನ್ನ ನಡುಗುವ ಕೈ ನನ್ನ ಹೆಗಲ ಮೇಲಿತ್ತು. ದಾರಿಯುದ್ದಕ್ಕೂ ನನ್ನನ್ನ ಗಟ್ಟಿ ತಬ್ಬಿ ಕೂತಿದ್ದೇ ನೀನು ಏನೊಂದು ಮಾತಾಡದೆ. ಆ ಮೌನ ಅದೇನೋ ನನ್ನನ್ನು ತಟ್ಟಿ, ‘ಇನ್ನು ಎಲ್ಲವೂ ನೀನೇ ಕಣೋ’ ಅಂತ
ಹೇಳಿದಂತಿತ್ತು. ನನ್ನ ಕಣ್ಣು ಮಂಜಾಗಿತ್ತು. ನಿನ್ನ ನಂಬಿ, ‘ಕರುಳು ಹರಿದುಕೊಂಡು ಬರುತ್ತೇನೆಂದು’ ಒಂದು ಬಾರಿಯೂ ನೀನು ಸುಳಿವು ಕೊಟ್ಟಿರಲಿಲ್ಲ.

ಅನ್ನ ಬೇಯಿಸಲೂ ಬರದ ಹುಡುಗಿ!
ಕನಿಷ್ಠ ಪಕ್ಷ, ಪಾವು ಅನ್ನ ಬೇಯಿಸಲು ಕೂಡ ಬಾರದ ಹುಡುಗಿ ನೀನು; ತರಕಾರಿ ಮಾರ್ಕೆಟ್ ಕೂಡ ನೋಡಿರದ ಹುಡುಗ
ನಾನು. ಅದ್ಹೇಗೆ ಸಾಧ್ಯವಾಯಿತು ನಮ್ಮಿಬ್ಬರಿಗೆ ಅಂತ ಈ ಹೊತ್ತಿಗೂ ಸೋಜಿಗವೆನಿಸುತ್ತದೆ. ನನ್ನಾಣೆ ಕಣೇ, ಬದುಕು ಇಷ್ಟೊಂದು
ಸುಂದರವಾಗಿದ್ದು ನೀನು ಕಾಡಲು ಶುರುವಿಟ್ಟುಕೊಂಡ ಮೇಲೆಯೇ ನೋಡು. ಬದುಕು ನಿನ್ನ ಜೊತೆ ದಿನ-ದಿನಕ್ಕೂ ಹೊಸತು ಎನಿಸುತ್ತದೆ. ಪ್ರೇಮಲೋಕದ ಪರಿಭಾಷೆ ಅರಿಯದ ಅಬ್ಬೇಪಾರಿ ಈ ಹುಡುಗನ ಮೇಲೆ ಒಂದು ಸಾಲು ಕಟ್ಟಿ ಅದಕ್ಕೆ ರಾಗ ಜೋಡಿಸಿ ಈ ಜನುಮಕ್ಕೆ ನೀನೇ ಕಣೋ ಅಂತ ನೀ ಹಾಡಿದ ಪರಿಗೆ ನಾ ಮತ್ತೆ ಮತ್ತೆ ಈ ಜನುಮಕ್ಕೆ ಸೋತು ಹೋದೆ; ನಿನ್ನಲ್ಲಿ ಬೆರೆತು ಹೋದೆ.

ಆರೋಗೆಂಟ್ ಹುಡುಗಿನಾ?
ಮೊಟ್ಟಮೊದಲು ನಮ್ಮಿಬ್ಬರ ಕಣ್ಣುಗಳು ಕಲೆತಾಗ ಅದೇನೋ ಪ್ರೇಮದ ಮೊದಲ ಸೆಳಕು ಅಂತಾರಲ್ಲ. ಊಹೂ..! ಅದಿರಲೇ ಇಲ್ಲ. ಹಾಗಂತ, ಹಿತ ನೀಡುವ ಬೆಳದಿಂಗಳನ್ನು ಆರಾಧಿಸದೇ ಸುಮ್ಮನೆ ಕಣ್ಣು ಸರಿಸಿ ಹೋಗುವ ಮೂರ್ಖನು ನಾನಾಗಿರಲಿಲ್ಲ. ಶುರುವಿನಲ್ಲಿ ‘ಆರೋಗೆಂಟ್’ ಹುಡುಗಿ ಅಂದುಕೊಂಡಿದ್ದೆ. ಎಡವಿ ಮಾಡಿಕೊಂಡ ಎಡವಟ್ಟು ಅದು. ಇಲ್ಲದಿದ್ದರೆ ಒಂದಷ್ಟು ಬೇಗನೆ ನಿನ್ನಲ್ಲಿ ಜೀಕಬಹುದಿತ್ತು. ಇರಲಿ ಬಿಡು, ಶುರುವಿನಲ್ಲಿ ಅಂತದ್ದೊಂದು ನಿರಾಕರಣೆಯ ಸಣ್ಣ ಸೆಳಕು ಒಳ್ಳೆಯದೇ ಅನಿಸುತ್ತದೆ. ಅಗಾಧ ಓದು, ವಿವೇಕ ತುಂಬಿಕೊಂಡ ಶಾಂತ ಸ್ವಭಾವದವಳು ಅಂತ ನನಗೆ ನೋಡಿದ ಅಂದಾಜಿನಲ್ಲಿ ಸಿಕ್ಕಲೇ ಇಲ್ಲ. ಈಗ ಹೇಳುತ್ತೇನೆ ಕೇಳು, ನನ್ನೆ ಸೋಲುಗಳನ್ನು ದಾಟಿ ಅಂತಃಕರುಳು ತುಂಬಿದ ಕನ್ನಡತಿಯನ್ನು ಒಲಿಸಿಕೊಂಡದ್ದು ನನ್ನ
ಈ ಯುಗದ ದಿಗ್ವಿಜಯ.

ಸುಂದರ ಕಾವ್ಯ ನಿನ್ನ ಪರಿಚಯವಾದ ಆ ಸ್ನೇಹದ ದಿನದಿಂದ ಹಿಡಿದು ನನ್ನ ಬದುಕಿನ ಪ್ರತಿ ದಿನಗಳು ಒಂದು ಸುಂದರ ಕಾವ್ಯ. ಈ ಕಾವ್ಯದಲ್ಲಿ ಒಂದೊಂದು ದಿನವೂ ಒಂದು ಹಾಳೆಯಂತೆ ತಿರುವಿ ಮನ ದುಂಬಿ ಓದಿಕೊಳ್ಳುತಿದ್ದೇನೆ. ಮನಸಿಗೆ ಹಿಡಿಸಿದ ಸ್ನೇಹಕ್ಕೆ ಯಾವ ಹಮ್ಮು ಬಿಮ್ಮುಗಳ ಹಂಗಿರುವುದಿಲ್ಲವಂತೆ. ಅಪರೂಪಕ್ಕೆ ನಮ್ಮೊಳಗೊಂದು ಮಗುವಿನ ಸ್ವಭಾವ ರೆಕ್ಕೆ ಬಿಚ್ಚಿ ತೆರೆದುಕೊಳ್ಳುವುದು ನಮಗೆ ತೀರಾ ಹತ್ತಿರದವರು ಎನಿಸಿ ಕೊಂಡವರು ಜತೆಯಲ್ಲಿರುವಾಗಲಂತೆ.

ಅಂತದ್ದೊಂದು ಮಂಗನಂತಹ ಚೇಷ್ಟೆ, ಹಟ, ಕಿತ್ತಾಟ ನಾವು ಸೇರಿದಾಗ ಹಾಜರಿರುತಿತ್ತು. ಏನೊಂದೂ ಮುಚ್ಚಿಡದೆ ನನ್ನದೆಲ್ಲವನ್ನೂ ನಿನಗೆ ಹೇಳುವಾಗ ಬಹಳ ಖುಷಿ ಇತ್ತು. ನಾ ಹೇಳಿದ್ದಕ್ಕಿಂತ ಜಾಸ್ತಿ ಎಲ್ಲವನ್ನು ನೀನೇ ಹೇಳಿದ್ದೇ ಅನ್ನಬಹುದೇನೋ. ನನ್ನದು ಹೂಂ…ಗುಟ್ಟುವ ಕೆಲಸವಾಗಿತ್ತು ಅಷ್ಟೇ. ನಿನ್ನ ಮಾತು ಕೇಳದೆ, ಹೂಂ…ಗುಟ್ಟದೇ ನನಗೆ ದಿನದಲ್ಲಿ ಸಮಾಧಾನವೇ ಆಗುತ್ತಿರಲಿಲ್ಲ. ಭಾವನೆಗಳೊಂದಿಗೆ ಬೆಸೆದುಕೊಂಡಿದ್ದ ನಿರ್ಮಲತೆಯೊಂದು ನಮ್ಮಿಬ್ಬರನ್ನು ಸಾಕಿತ್ತು.

ನಿನ್ನ ಸ್ನೇಹದ ಮಾತುಗಳು ಹಿತ ಕೊಡುತಿದ್ದವು. ಮೋಸ, ಸ್ವಾರ್ಥ, ದುರಹಂಕಾರದ ಯಾವುದೇ ಹಂಗಿಲ್ಲದೆ ಭಾವನೆಗಳ ಅಲೆಗಳಲ್ಲಿ ತೇಲಿ ಬಿಟ್ಟೆವು. ಅದೊಂದು ದಿನ ‘ನಮ್ಮನೆಯ ಜ್ಯೋತಿಯಾಗಿ ಸದಾ ಬೆಳಗಲು ಬರುವೆಯಾ..’ ಎಂದುಬಿಟ್ಟೆ ನಾ. ನಾಚಿಕೆಯಿಂದ ಓಡಿ ಹೋದವಳು ಮತ್ತೆ ಅನಾಮತ್ತು ಹತ್ತು ದಿವಸ ಸಿಕ್ಕಲೇ ಇಲ್ಲ. ತಥ್! ಕಾಲ ಮೇಲೆ ಕಲ್ಲು ಹಾಕಿಕೊಂಡೆ. ಸುಂದರ ಸ್ನೇಹಕ್ಕೆ ನಾನೇ ಬೆಂಕಿ ಇಟ್ಟುಬಿಟ್ಟೆ ಅಂತ ಬಹಳ ನೊಂದಿz. ಆದರೆ, ನೀನು ಮತ್ತೆ ಬಂದೆ ಸಿಂಗರಿಸಿಕೊಂಡು. ಆವತ್ತಿ ನಿಂದ ಆರಂಭವಾದ ಈ ಸುಂದರ ಸೊಬಗಿಗೆ ಈಗ ಐದು ವರುಷದ ಪ್ರಾಯ.

ಕೊನೆಗೂ ಗೆಲ್ಲಿಸಿದೆ!
ಹುಡುಗಿ, ನೀ ನನ್ನನ್ನು ಕೈ ಹಿಡಿದು ಬರದೇ ಹೋಗಿದ್ದಿದ್ದರೆ, ಈ ಬದುಕಿಗೆ ಇಷ್ಟೊಂದು ಕಳೆಯಿರುತ್ತಿರಲಿಲ್ಲ. ಬಹುಶಃ ಆ ಸಮಯಕ್ಕೆ ಎಲ್ಲರೂ ನಮ್ಮನ್ನು ಯಕಶ್ಚಿತ್ ಅಂದುಕೊಂಡರೆನೋ! ಆದರೆ, ನೀನು ಎಲ್ಲವನ್ನೂ ಸಹಿಸಿಕೊಂಡು ಸಂಸಾರ ದೊಂದಿಗೆ ಒಂದು ಪದವಿ ಜೊತೆಗೆ ನಾಲ್ಕು ಜನ ಶಭಾಶ್ ಎನ್ನುವ ಕೆಲಸ ಹಿಡಿದ ಮೇಲೆಯೇ ಅಲ್ವಾ, ಈ ನಮ್ಮವರು ಹುಡುಕಿ ಬಂದದ್ದು. ಆವತ್ತು ನಿನ್ನಮ್ಮ-ಅಪ್ಪ ಬಂದು ಮಗಳೇ ಮಾನಸ, ಎಂದಾಗ ನಿನ್ನ ಕಣ್ಣಾಲಿಗಳು ತುಂಬಿ ಬಂದಿದ್ದವು.

ತುಂಬಾ ಓದಿಕೊಂಡ ಮತ್ತು ತಿಳಿದವರಂತೆ ಕಾಣುವ ನಿನ್ನ ಅಪ್ಪನಿಗೆ ನಮ್ಮ ಪ್ರೀತಿ ಏಕೆ ಹಿಡಿಸಲಿಲ್ಲ ಎನ್ನುವುದು ನನಗೆ ಇವತ್ತಿಗೂ ಗೊಂದಲ. ನಿನ್ನಮ್ಮನನ್ನು ತಬ್ಬಿಕೊಂಡು ಅದೆಷ್ಟು ಅತ್ತುಬಿಟ್ಟೆ ನೀನು ಅಂದು. ನಿನ್ನ ಅಷ್ಟೊಂದು ಒಡಲಾಳದ ನೋವು ನನ್ನನ್ನೊಮ್ಮೆ ನಡುಗಿಸಿದವು. ನಿನ್ನಮ್ಮ ನನ್ನ ಸನಿಹ ಬಂದು, ನನ್ನ ಎರಡೂ ಕೈಗಳ ಗಟ್ಟಿ ಹಿಡಿದು, ಏನೊಂದೂ ಹೇಳಲಿಲ್ಲ. ನನ್ನ ಹಣೆಗೆ ಮುತ್ತಿಕ್ಕಿದರು. ನಾನು ನಿನ್ನನ್ನೇ ದೈನ್ಯದಿಂದ ನೋಡುತಿದೆ. ಎ ಅಂತಃರಾಳದಲ್ಲಿ ನಾವಿಬ್ಬರೂ ಯಾವ ಪರಿ ಗೆದ್ದುಬಿಟ್ಟೆವಲ್ಲ! ಎಂದು ಪಿಸುಗುಟ್ಟಿದಂತಾಯಿತು. ಇಲ್ಲ. ನೀನೇ ಗೆಲ್ಲಿಸಿಬಿಟ್ಟೆ ಹುಡುಗಿ. ಅದೇ ನಿಜ. ನಿನ್ನಿಂದಲೇ ಇದೆ ಸಾಧ್ಯವಾಯಿತು.

ಜಾತಿ-ಮತದ ಹಮ್ಮುಗಳನ್ನೆ ಬಿಟ್ಟು ಈ ಕುಟುಂಬಗಳು ನಮ್ಮ ಸಂಗಮವನ್ನು ಅಪ್ಪಿದಾಗ, ನಿನ್ನ ಹಣೆಗೆ ಸಾರ್ಥಕತೆಯ ಮುತ್ತಿಕ್ಕಿದೆ ನಾ. ನೀನು ಇನ್ನಷ್ಟು, ನನ್ನ ಕೈಯನ್ನು ಗಟ್ಟಿ ಹಿಡಿದು, ಮಗುವಿನಂತೆ ನನ್ನ ತಬ್ಬಿಕೊಂಡೆ. ಆ ಬಿರುಸಿನಲ್ಲಿ ನಾವಿಬ್ಬರೂ ಮತ್ತಷ್ಟು ಗಟ್ಟಿಯಾಗಿದ್ದೇವೆ ಎನಿಸಿತು. ನಿನ್ನ ಕಣ್ಣುಗಳಲ್ಲಿ ನನ್ನ ಮೊದಲ ಜಯ ಘೋಷಿಸಿಕೊಂಡೆ. ಹೌದು, ನಿನ್ನ ಕಣ್ಣುಗಳು ದಿನವೂ ನಾ ಓದಿಕೊಳ್ಳುವ ಮಹಾಕಾವ್ಯ. ನನ್ನೆ ಸೋಲುಗಳಿಗೆ ಅಲ್ಲಿ ಉತ್ತರವಿದೆ. ಸಾಂತ್ವನವಿದೆ. ಮತ್ತೆ ಚಿಗುರುವ, ಎದ್ದು ನಿಲ್ಲುವ ಭರವಸೆ ಇದೆ. ಅದಕ್ಕೆ ನಾ ಧನ್ಯ. ಹಾಂ..! ಈಗ ಇನ್ನಷ್ಟು ಜವಾಬ್ದಾರಿಗಳು ನಮ್ಮಿಬ್ಬರ ಹೆಗಲೇರಿವೆ. ಆಫೀಸ್ ಅಂತ ದುಡಿದು ಮನೆಗೆ ಬರುವಾಗ ಜತನದಿಂದ ತರುವ ಪ್ರೀತಿಯೇ ನಮ್ಮಿಬ್ಬರಿಗೆ ಶ್ರೀರಕ್ಷೆ. ಅದೊಂದು ಈ ಜನುಮಕ್ಕೆ ಸಾಕು.  ನ್ನ
ಕೈಹಿಡಿದು ನನ್ನ ತೆಕ್ಕೆಗೆ ಸಿಕ್ಕುವ ಎಲ್ಲವನ್ನೂ ಗೆದ್ದು ಬಿಡುತ್ತೇನೆ.

error: Content is protected !!