ಸುರೇಶ ಗುದಗನವರ
ತಮ್ಮಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತಂದು, ಯಕ್ಷಗಾನ, ನಾಟಕ, ಸಿನಿಮಾದಲ್ಲಿ ಅಭಿನಿಯಿಸುವುದರ ಜತೆಗೆ, ಸಮಾಜ ಸೇವೆಯನ್ನೂ ಮಾಡುತ್ತಿರುವ ಶಾಂತಾ ಆಚಾರ್ಯ, ಎಲ್ಲಾ ಮಹಿಳೆಯರಲ್ಲಿ ಸ್ಫೂರ್ತಿ ತುಂಬಬಲ್ಲರು.
ನಮ್ಮ ಸಮಾಜದಲ್ಲಿ ವ್ಯಕ್ತಿಯೊಬ್ಬ ಮುಂದುವರಿಯಲು ಹಲವು ವಿಶಿಷ್ಟ ತೊಡಕುಗಳು ಎದುರಾಗುವುದುಂಟು. ಮದುವೆಯಾದ
ನಂತರ ಹಲವು ಮಹಿಳೆಯರಿಗೆ ಸಾಧನೆ ಮಾಡುವ ಅವಕಾಶಗಳು ಕಡಿಮೆಯಾಗುವುದೂ ಉಂಟು. ಸಾಂಸಾರಿಕ ಜೀವನದ
ಜವಾಬ್ದಾರಿ ಹೊತ್ತು, ತಮ್ಮ ಕನಸುಗಳನ್ನು ಪೂರೈಸಿಕೊಳ್ಳುವದು ಕಷ್ಟ ಎಂದುಕೊಳ್ಳುವ ಮಹಿಳೆಯರಿಗೆ ಬೆಳಗಾವಿಯ ಶಾಂತಾ
ಆಚಾರ್ಯ ಪ್ರೇರಣೆಯಾಗಿದ್ದಾರೆ.
ಅವರು ರಂಗಭೂಮಿಯನ್ನು ಪ್ರೀತಿಸಿ, ಅದನ್ನೇ ಉಸಿರಾಗಿಸಿಕೊಂಡು ಕಲೆಯಲ್ಲಿಯೇ ವಿಶೇಷ ಸಾಧನೆ ಮಾಡಿ ಗಮನ ಸೆಳೆದವರು. ಶಾಂತಾ ಆಚಾರ್ಯ ಅವರು ಮೂಲತಃ ಉಡುಪಿಯವರಾಗಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ತಂದೆ ಪಿ.ಎನ್. ಉಪಾಧ್ಯ, ಹೊಟೇಲ್ ಉದ್ಯಮಿ. ತಾಯಿ ಪಿ.ಸುಶೀಲಾ. ಪಿ. ಎನ್.ಉಪಾಧ್ಯ. ಅವರ ಚಿಕ್ಕಪ್ಪ ಪೀಟಿಲು, ಚಂಡೆ ಮುಂತಾದ ವಾದ್ಯಗಳನ್ನು ನುಡಿಸುತ್ತಿದ್ದರು. ಇವುಗಳನ್ನು ಆಲಿ ಸುತ್ತ ಸಹಜವಾಗಿಯೇ ಸಂಗೀತ, ನೃತ್ಯ, ನಾಟಕಗಳ ಆಸಕ್ತಿಯತ್ತ ಶಾಂತಾ ಬಾಲ್ಯ ದಿಂದಲೇ ಬೆಳೆಸಿಕೊಂಡರು. ತಾಯಿ ಕಡೆಯವರು ಹೆಚ್ಚಾಗಿ ಯಕ್ಷಗಾನ ಕಲಾವಿದ ರಾಗಿದ್ದರು.
ಶಾಂತಾ ಅವರಿಗೆ ಕಲೆಗಳತ್ತ ಒಲವು ತಾನಾಗಿಯೇ ಮೂಡಿತು. ಶಾಂತಾ ನಾಲ್ಕನೆಯ ತರಗತಿಯಲ್ಲಿದ್ದಾಗಲೇ ಪಾಲಕರು ಸಂಗೀತ ಹಾಗೂ ನೃತ್ಯ ತರಗತಿಗಳಿಗೆ ಸೇರಿಸಿದರು. ಲಕ್ಷ್ಮಣ ಶಾಸ್ತ್ರಿಗಳ ಗರಡಿಯಲ್ಲಿ ಬೆಳೆದು ರಾಮನವಮಿ ಮತ್ತು ಗಣೇಶೋತ್ಸವ ಕಾರ್ಯ ಕ್ರಮಗಳಲ್ಲಿ ನೃತ್ಯ ಪ್ರದರ್ಶನ ನೀಡಿ ಗುರುಗಳಿಂದ ಭೇಷ ಎನಿಸಿಕೊಂಡರು. ಸಂಗೀತ, ನೃತ್ಯದ ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಶಾಂತಾ ಪ್ರಥಮ ಶ್ರೇಣಿ ಯಲ್ಲಿಯೇ ತೇರ್ಗಡೆಯಾಗುವದರ ಜೊತೆಗೆ ಬಿ.ಎ.ಪದವಿಯನ್ನು ಪಡೆದರು.
ಸಮಾಜ ಸೇವೆ
1987ರಲ್ಲಿ ಶಾಂತಾರವರು ಔಷಧ ವಿತರಕರಾದ ರವಿ ಆಚಾರ್ಯರವರನ್ನು ಮದುವೆಯಾಗಿ ಬೆಳಗಾವಿಗೆ ಬಂದು ನೆಲೆಸಿದರು. ಶಾಂತಾರವರು ಎಂ.ಬಿ.ಎ. ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಅಲ್ಲದೇ ಯೋಗ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ನಂತರ 2010ರಲ್ಲಿ ಗೆಳತಿಯರೊಂದಿಗೆ ಕೂಡಿಕೊಂಡು ‘ಪ್ರಯತ್ನ’ ಎಂಬ ಸಂಘಟನೆಯನ್ನು ಆರಂಭಿಸಿ ದರು. ಕಳೆದ ಹತ್ತು ವರ್ಷಗಳಿಂದ ವೃದ್ಧರಿಗೆ, ಅನಾಥರಿಗೆ ಹಾಗೂ ಬಡವರಿಗೆ ಸಹಾಯವನ್ನು ಮಾಡುತ್ತ ನಿರಂತರವಾಗಿ ಸಮಾನ ಮನಸ್ಕರೊಡನೆ ಜೊತೆಗೂಡಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಸ್ವರ ಎನ್ನುವ ಸಂಘಟನೆಯಿಂದ ಮಹಿಳೆಯರು ತಯಾರಿಸಿದ ವಸ್ತುಗಳನ್ನು ಮಾರಾಟ ಮಳಿಗೆಗಳ ಮುಖಾಂತರ ಮಾರಾಟ ಮಾಡಿ ಮಹಿಳೆಯರನ್ನು ಸ್ವಾವಲಂಬಿಯನ್ನಾಗಿಸಿ ದ್ದಾರೆ.
ಮಹಿಳಾ ಯಕ್ಷಗಾನ
ಸಮಾನಾಸಕ್ತರನ್ನು ಸೇರಿಸಿಕೊಂಡು, ತೆಂಕು-ಬಡಗಿನ ಮಹಿಳೆಯರನ್ನು ಸೇರಿಸಿ ಯಕ್ಷಗಾನ ರಸದೌತಣ ಸಂಯೋಜಿಸಿರುವ
ಮಹಿಳೆಯರಲ್ಲಿ ಉತ್ತರ ಕರ್ನಾಟಕದಲ್ಲಿ ಇವರೇ ಮೊದಲಿಗರು. ಪುರುಷ ಕಲಾವಿದರ ಸಾಮರ್ಥ್ಯಕ್ಕೆ ಸವಾಲೆಸೆಯುವ
ಚಕ್ರವ್ಯೂಹ, ಕಣಪರ್ವ ಮತ್ತು ಗದಾಪರ್ವ ಎಂಬ ಯಕ್ಷಗಾನ ಅಖ್ಯಾನಗಳನ್ನು ಮಹಿಳೆಯರು ಪ್ರದರ್ಶಿಸಲಿರುವದು ವಿಶೇಷ. ಅವರು ಇನ್ಫೋಸಿಸ್ ಸಂಸ್ಥೆಯಲ್ಲಿ, ಬೆಳಗಾವಿ, ಧಾರವಾಡ ಹುಬ್ಬಳ್ಳಿ ಮುಂತಾದ ನಗರಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ.
ಅಲ್ಲದೇ ಸರ್ವಂ ಮಧುರಂ ಸಂಗೀತ ಸಂಸ್ಥೆಯ ಅಡಿಯಲ್ಲಿ ರಾಜಕುಮಾರ, ವಿಷ್ಣುವರ್ಧನ, ಎಸ್.ಪಿ.ಬಾಲಸುಬ್ರಹ್ಮಣಂ, ಕಿಶೋರಕುಮಾರ ಅವರ ನೆನಪಿನಲ್ಲಿ ಚಿತ್ರಗೀತೆಗಳ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾರೆ. ಮಚ್ಛೆ, ಹಿರಣ್ಯಕಶಪು, ಭ್ರಷ್ಟಾಚಾರ, ಕೃಷ್ಣಾರ್ಜುನ ಹೀಗೆ ಸಾಕಷ್ಟು ನಾಟಕಗಳಲ್ಲಿ ಶಾಂತಾ ಉಪಾಧ್ಯರವರು ಅಭಿನಯಿಸಿ ಜನಮನ್ನಣೆ ಗಳಿಸಿದ್ದಾರೆ.
ಚಲನಚಿತ್ರದಲ್ಲೂ ಅಭಿರುಚಿ
ಶಾಂತಾರವರು ಚಲನಚಿತ್ರ ಪ್ರವೇಶ ಮಾಡಿದ್ದು ಗಾಂಧೀಜಿ ಕನಸು ಎನ್ನುವ ಚಿತ್ರದಿಂದ. ಗುಂಡ್ಯಾನ ಹೆಂಡತಿ, ಕಿರಿಯೂರಿನ ಗಯ್ಯಾಳಿಗಳು, ಮಾರ್ಚ್ 22 ಮುಂತಾದ ಹನ್ನೊಂದು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಎಲ್ಲ ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಿಗೆ ಪತಿ ರವೀಂದ್ರ ಆಚಾರ್ಯ, ಮಕ್ಕಳು, ಕುಟುಂಬದ ಎಲ್ಲ ಸದಸ್ಯರು ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ.
ಶಾಂತಾ ಆಚಾರ್ಯರವರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಗೆ ವಿವಿಧ ಸಂಘ-ಸಂಸ್ಥೆಗಳ ಪ್ರಶಸ್ತಿ, ಸನ್ಮಾನ ಗೌರವಗಳು
ಸಂದಿವೆ. ಸಮಾಜ ಸೇವೆ ಮತ್ತು ನಟನೆಯಲ್ಲೂ ತಮ್ಮ ಚಟುವಟಿಕೆಗಳನ್ನು ವಿಸ್ತರಿಸಿಕೊಂಡಿರುವ ಶಾಂತಾ ಆಚಾರ್ಯ
ಅವರು ನಾಟಕ, ಸಿನೇಮಾ, ದೂರದರ್ಶನಗಳಲ್ಲಿನ ಹಲವು ಪಾತ್ರಗಳಲ್ಲಿ ಅಭಿನಯಿಸುತ್ತಿರುವದು ಹೆಮ್ಮೆಯ ಸಂಗತಿ.