Saturday, 14th December 2024

ಪೊಲೀಸ್‌ ಶ್ವಾನಗಳ ಪ್ರೀತಿಯ ತಾಯಿ

ಮೌಲಾಲಿ ಕೆ ಆಲಗೂರ ಬೋರಗಿ

ನೂರಾರು ಶ್ವಾನಗಳಿಗೆ ಅಮ್ಮನ ಪ್ರೇಮ, ತಿನ್ನಲು ಸವಿಯಾದ ಭೋಜನ, ಅನುದಿನವೂ ನೀಡುವ ಜವಾಬ್ದಾರಿಯನ್ನು ಹೊತ್ತ ಮಹಿಳೆಯೋರ್ವಳಿದ್ದಾಳೆ ಎಂದರೆ ನಂಬಲು ಸಾಧ್ಯವೇ? ಬೆಂಗಳೂರಿನ ಸಿಎಆರ್ ದಕ್ಷಿಣ ವಿಭಾಗದ ರಾಜ್ಯ ಪೊಲೀಸ್ ಶ್ವಾನ ದಳದಲ್ಲಿ ಇರುವ 60 ಶ್ವಾನಗಳಿಗೆ ಹಾಗೂ ತರಬೇತಿಗೆಂದು ಬರುವ ಪೊಲೀಸ್ ಶ್ವಾನಗಳಿಗೂ ತನ್ನ ಕೈಯಾರೆ ಅಡುಗೆ ಮಾಡುತ್ತ, ಶ್ವಾನಗಳು ವಾಸಿಸುವ ಕೆನಾಲ್‌ಗಳಲ್ಲಿ ಸ್ವಚ್ಚತಾ ಕಾಪಾಡುತ್ತ, ಪ್ರೀತಿ, ವಾತ್ಸಲ್ಯ, ಮಾನವೀಯತೆ ತೋರಿ, ಆರೈಕೆ, ಲಾಲನೆ, ಪಾಲನೆ ಮಾಡಿಕೊಂಡು ಕಳೆದ 35 ವರ್ಷಗಳಿಂದಲೂಅ ನೂರಾರು ಶ್ವಾನಗಳ ಬದುಕಿಗೆ ಅಮ್ಮನಾಗಿ ಶ್ವಾನಗಳ ಹಾಗೂ ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳ ಪಾಲಿಗೆ ಅಚ್ಚುಮೆಚ್ಚು ಆಗಿದ್ದಾಳೆ ಈ ಮಹಾತಾಯಿ.

ಹೆಸರು ನರಸಮ್ಮ. ಗಂಡ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. 3 ಹೆಣ್ಣು 3 ಗಂಡು ಮಕ್ಕಳು ಅವಳದ್ದು ಸುಂದರ ನೆಮ್ಮದಿ ಕುಟುಂಬ. ಆದರೆ ದುರ್ದೈವ ವಶಾತ್ ಪತಿ ತೀರಿದ. 6 ಮಕ್ಕಳ ತಾಯಿ ನರಸಮ್ಮನಿಗೆ ದಿಕ್ಕೇ ತೊಚದಂತಾಯಿತು. ಸರ್ಕಾರ ಅನುಕಂಪದ ಆಧಾರದ ಮೇಲೆ ನರಸಮ್ಮನಿಗೆ ರಾಜ್ಯ ಪೊಲೀಸ್ ಶ್ವಾನದಳ ಸಿಎಆರ್ ದಕ್ಷಿಣ ವಿಭಾಗದಲ್ಲಿ ಅಡುಗೆ ಕೆಲಸ ದವಳಾಗಿ 1985 ರಲ್ಲಿ ನೇಮಿಸಿತು. ಅಂದಿನಿಂದ ಇಂದಿನವರೆಗೂ ನರಸಮ್ಮ ಪೊಲೀಸ್ ಶ್ವಾನಗಳಿಗೆ ಅನ್ನಪೂರ್ಣೇಶ್ವರಿ ಯಾಗಿದ್ದಾಳೆ.

ನಾಯಿಯೆಂದರೆ ಪ್ರೀತಿ
ನರಸಮ್ಮ ಮತ್ತು ಶ್ವಾನಗಳ ನಡುವಿನ ಅವಿನಾಭಾವ ಸಂಬಂಧ ಹೇಳಲಾಗದು. ಅವಳ ನಿಷ್ಕಲ್ಮಶ ಪ್ರೀತಿ, ಮಮತೆ, ಕರುಣೆ, ತ್ಯಾಗ, ವಾತ್ಸಲ್ಯದ ಧಾರೆ ನಿಜಕ್ಕೂ ಮಾದರಿ. ಕಳೆದ 35 ವರ್ಷಗಳಿಂದ ನೂರಾರು ಪೊಲೀಸ್ ಶ್ವಾನಗಳಿಗೆ ಎರಡು ಹೊತ್ತು ರುಚಿ ರುಚಿಯಾದ ಅಡುಗೆ, ಶ್ವಾನಗಳು ತಿಂದು ಬಿಟ್ಟ ತಟ್ಟೆಗಳನ್ನು ತೊಳೆದು ಅವುಗಳ ವಾಸಿಸುವ ಕೋಣೆಗಳನ್ನು ಸ್ವಚ್ಛ ಮತ್ತು ಸುಂದರವಾಗಿ ಇಡುತ್ತಾ ಬಂದಿರುವ ನರಸಮ್ಮ ಕಳೆದ ತಿಂಗಳು ಅಂದರೆ ಡಿಸೆಂಬರ್ 31 ರಂದು ವಯೋ ನಿವೃತ್ತಿ ಹೊಂದಿದಳು.

35 ವರ್ಷಗಳ ಸುದೀರ್ಘ ಮೂಕ ಪ್ರಾಣಿಗಳ ನಿಸ್ವಾರ್ಥ ಸೇವೆಯನ್ನು ಗಮನಿಸಿದ ಸಿಎಆರ್ ದಕ್ಷಿಣ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ 01.01.2021 ರಂದು ಬೆಳ್ಳಿಯ ದೀಪ, ಸೀರೆ ಹಾಗೂ ಇತರ ಗೌರವ ನೀಡಿ, ನರಸಮ್ಮನನ್ನು ಬೀಳ್ಕೊಟ್ಟರು. ನಿಜಕ್ಕೂ ನರಸಮ್ಮಳ ನಿಸ್ವಾರ್ಥ ಸೇವೆ ಒಂದು ಸಲಾಮ್ ಹೇಳಲೇ ಬೇಕು.