Sunday, 10th November 2024

ನಮ್ಮ ಮೊಮ್ಮಕ್ಕಳ ಆಸ್ತಿ ಕದ್ದಿದ್ದೇವೆ – ಜಾನಥನ್‌ ಸ್ಕಾಟ್‌ ಉವಾಚ

ಸೌರಭ ರಾವ್

ಆಫ್ರಿಕಾದಲ್ಲಿ ಬಂದಿಳಿದ ತಕ್ಷಣವೇ ನನ್ನ ಜೀವನ ಹಿಂದೆಂದಿಗಿಂತಲೂ ಸುಂದರವಾಗಿಬಿಟ್ಟಿತು ಎಂದು ಹೇಳುವಂತಿಲ್ಲ. ನಾನು ಮೊದಲು ಬಂದಿಳಿದದ್ದು ಸೌತ್ ಆಫ್ರಿಕಾದ ಜೋಹಾನ್ಸ್’ಬರ್ಗ್‌, ಕೆನ್ಯಾ ಅಲ್ಲ.

ಆಗ ಅಲ್ಲಿ ವರ್ಣದ್ವೇಷ ಭುಗಿಲೆದ್ದಿತ್ತು. ಕಾಲಿಡುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತರೆ ಸಾಕು ಅನ್ನುವಂತಾಗಿತ್ತು. ಆದರೆ, ಹೇಗೋ ಸೌತ್ ಆಫ್ರಿಕಾದ ಒಬ್ಬ ಕೃಷ್ಣವರ್ಣದ ಪಾದ್ರಿಯ ಜೊತೆ ಉಳಿಯುವ ಅವಕಾಶ ಸಿಕ್ಕಿತು. ಮೂರು ತಿಂಗಳ ಕಾಲ ಮುಂದೇನು ಮಾಡಬೇಕು ಎಂದು ಅವಕಾಶಗಳ ಹುಡುಕಾಟದಲ್ಲಿದ್ದಾಗಲೂ ನಾನು ಚಿತ್ರಕಲೆ ಅಭ್ಯಾಸ ಮಾಡುವುದನ್ನು ಮುಂದುವರೆಸಿಯೇ ಇದ್ದೆ. ನಂತರ ಬೋಟ್ಸ್ವಾನಾ ದೇಶಕ್ಕೆ ಹೋದಾಗ ವನ್ಯಜೀವಿಗಳ ಬಗ್ಗೆ ಕೆಲಸ ಮಾಡುವ ಚಿಕ್ಕಪುಟ್ಟ ಅವಕಾಶಗಳು ಸಿಕ್ಕವು.

ನಾವೆಲ್ಲರೂ ಆಫ್ರಿಕಾದಿಂದ ಬಂದವರೇ. ಹೀಗಾಗಿ ನಾವು ಆ ಖಂಡಕ್ಕೆ ಭೇಟಿ ನೀಡಿದರೆ, ಅದರಲ್ಲೂ ಅಲ್ಲಿಯ ವನ್ಯಜೀವಿ ವೈವಿಧ್ಯವನ್ನು ನೋಡಲು ಹೋದರೆ, ನಮ್ಮ ತವರಿಗೆ ಮರಳಿದಂತೆ. ಹಾಗೆ 1970ರ ದಶಕದಲ್ಲಿ ಅಲ್ಲಿಗೆ ‘ಮೊದಲ ಬಾರಿ ಮರಳಿ’ ಅಲ್ಲೇ ಉಳಿದ ವನ್ಯಜೀವಿ ಪ್ರೇಮಿ ಯೊಬ್ಬರ ಜೊತೆಗಿನ ಮುಕ್ತ ಸಂವಾದವೊಂದು ನಿಮ್ಮ ಮುಂದೆ. ಇಂದು ಪ್ರಪಂಚದ ವನ್ಯಜೀವಿ ಛಾಯಾಗ್ರಹಣ, ವನ್ಯಜೀವಿ ಸಂರಕ್ಷಣಾ ವಲಯಗಳಲ್ಲಿ ಜಾನಥನ್ ಸ್ಕಾಟ್ ಮತ್ತು ಆಂಜೆಲಾ ಸ್ಕಾಟ್ ಎಲ್ಲರೂ ಗೌರವಿಸುವ ಹೆಸರು. ಈ ಸ್ಕಾಟ್ ದಂಪತಿಯ ಜಾನಥನ್ ಕಳೆದ ವಾರ ಮಾತಿಗೆ ಸಿಕ್ಕಿದ್ದರು. ಚಿಕ್ಕ ವಯಸ್ಸಿನಿಂದಲೇ ವನ್ಯಜೀವಿಗಳ ಬಗ್ಗೆ ಅಪಾರ ಆಸಕ್ತಿ, ಪ್ರೀತಿ-ಗೌರವಗಳನ್ನು ಬೆಳೆಸಿಕೊಂಡಿದ್ದ ಜಾನಥನ್, ಅನೇಕ ವನ್ಯಜೀವಿ ಪ್ರೇಮಿಗಳು ಕಾಣುವ ಕನಸನ್ನು ಪ್ರತಿದಿನ ನನಸಾಗಿಸಿಕೊಳ್ಳುತ್ತಾ ಬಂದವರು, ಅಂತಹ ಜೀವನ ಕಟ್ಟಿಕೊಳ್ಳುವು ದಕ್ಕಾಗಿ ಕಷ್ಟ ಪಟ್ಟವರು.

ಜಾನಥನ್ ಮೂಲತಃ ಬ್ರಿಟಿಷ್, ಆದರೆ ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ವನ್ಯಜೀವಿಗಳನ್ನು ನೋಡುತ್ತಾ, ಅವುಗಳನ್ನು
ಅಧ್ಯಯಿಸುತ್ತಾ, ಕಡೆಗೆ ಕೆನ್ಯಾದಲ್ಲೇ ತಮ್ಮ ಹೊಸ ಜೀವನ ಕಟ್ಟಿಕೊಂಡುಬಿಟ್ಟರು! ನಾಲ್ಕು ದಶಕಗಳಿಗೂ ಮೀರಿದ ಆಫ್ರಿಕಾ ವನ್ಯಜೀವಿಗಳ ಜೊತೆಗಿನ ಅವರ ಒಡನಾಟ ಅನೇಕ ಇಂಗ್ಲಿಷ್ ಟೀವಿ ಕಾರ್ಯಕ್ರಮಗಳಿಗೆ, ಅನೇಕ ಪುಸ್ತಕಗಳಿಗೆ, ಮತ್ತು ಅನೇಕ ಸಂರಕ್ಷಣಾ ಕೆಲಸಗಳಿಗೆ ಸ್ಫೂರ್ತಿಯಾಗಿದೆ.

ಅದರಲ್ಲೂ ಬಿಬಿಸಿ ಟೀವಿಯ ‘ಬಿಗ್ ಕ್ಯಾಟ್ ಡಯರಿ’ ಸರಣಿಯ ಮೂಲಕ ಕೇವಲ ಬ್ರಿಟನ್ ಅಲ್ಲದೇ ಪ್ರಪಂಚದ ಎಲ್ಲ ವನ್ಯಜೀವಿ ಪ್ರೇಮಿಗಳಿಗೆ ಮಾಸಾಯ್ ಮಾರಾದ ದೊಡ್ಡ ಮಾರ್ಜಾಲಗಳ (ಆಫ್ರಿಕನ್ ಸಿಂಹ, ಆಫ್ರಿಕನ್ ಲೆಪರ್ಡ್, ಆಫ್ರಿಕನ್ ಚೀಟಾ) ಜೀವನದ ಬೆರಗಿನ ಹೊಸ ಜಗತ್ತನ್ನೇ ಇವರು ಮತ್ತು ಇವರ ಸಹ ನಿರೂಪಕರು ವೀಕ್ಷಕರಿಗೆ ತೆರೆದಿಟ್ಟರು. ಸದ್ದಿಲ್ಲದೇ ಅನೇಕ ಸಾಧನೆಗಳನ್ನು ಒಟ್ಟಿಗೇ ಮತ್ತು ವೈಯಕ್ತಿಕವಾಗಿ ಮಾಡಿರುವ ಸ್ಕಾಟ್ ದಂಪತಿ ಯ ಸರಳತೆ ಅನನ್ಯ.

ಯಾವ ತೋರಿಕೆಯಿಲ್ಲದೇ ತಮ್ಮ ಪಾಡಿಗೆ ತಾವು ಕಾರ್ಯ ಪ್ರವೃತ್ತರಾಗಿ ಸೃಷ್ಟಿ ಸೌಂದರ್ಯವನ್ನೂ, ಅದರ ಮೇಲೆ ಮನುಷ್ಯನ ಚಟುವಟಿಕೆಗಳು ಬೀರುತ್ತಿರುವ ಒಳ್ಳೆಯ ಮತ್ತು ಭೀಕರ ಪರಿಣಾಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಾ 71ರ ಹರೆಯದಲ್ಲೂ ಮಗುವಿನಂತೆ ಬೆರಗುಗೊಳ್ಳುವ ಶಕ್ತಿ ಉಳಿಸಿಕೊಂಡಿರುವ ಜಾನಥನ್ ಅವರ ಸೌಮ್ಯತೆ ವಿರಳ. ಸರ್ ಡೇವಿಡ್ ಆಟೆನ್ಬರೋ, ಜಾರ್ಜ್ ಶ್ಯಾಲರ್ ಅವರಂತಹ ದಿಗ್ಗಜರೂ ಸ್ಕಾಟ್ ದಂಪತಿಗಳ ಕೆಲಸದ ಬಗ್ಗೆ ಅಪಾರ ಮೆಚ್ಚುಗೆ, ಗೌರವ ಇಟ್ಟುಕೊಂಡಿದ್ದಾರೆ.

ಇವರ ಪಯಣದ ಮತ್ತಷ್ಟು ಕಥೆಗಳನ್ನು ಈ ‘ಬಿಗ್ ಕ್ಯಾಟ್ ಮ್ಯಾನ್’ ಅವರ ಮಾತುಗಳಲ್ಲೇ ಕೇಳಿ.

1 ನಿಮಗೆ ವನ್ಯಜೀವಿಗಳ ಮೇಲಿನ ಪ್ರೀತಿಯಿಂದ ಛಾಯಾಗ್ರಹಣದ ಗೀಳು ಹುಟ್ಟಿಕೊಂಡಿ ದ್ದೋ ಅಥವಾ ಛಾಯಾ ಗ್ರಹಣದ ಮೂಲಕ ವನ್ಯಜೀವಿಗಳ ಬದುಕನ್ನು ಅಧ್ಯಯಿಸುವ ಆಸಕ್ತಿ ಬೆಳೆಸಿಕೊಂಡಿದ್ದೋ? ಮತ್ತು ಮೂಲತಃ ಬ್ರಿಟಿಷ್ ಆದ ನೀವು ಆಫ್ರಿಕಾ (ಕೆನ್ಯಾ)  ದಲ್ಲೇ ವಾಸ ಮಾಡುವ ನಿರ್ಧಾರ ಮಾಡುವಷ್ಟು ಮಾಸಾಯ್ ಮಾರಾ ನಿಮ್ಮನ್ನು ಸೆಳೆ ದದ್ದು ಹೇಗೆ?
ನಾನು ಬೆಳೆದದ್ದು ಇಂಗ್ಲೆಂಡಿನ ಒಂದು ಫಾರ್ಮ್‌ನಲ್ಲಿ. ನನ್ನ ಬಾಲ್ಯವನ್ನು ಶಹರಗಳ ಗದ್ದಲ ಗಳಿಂದ ದೂರವಿದ್ದ ಶಾಂತವಾದ ಜಾಗದಲ್ಲಿ ಕಳೆದೆ. ನನ್ನ ತಂದೆ ಲಂಡನ್‌ನಲ್ಲಿ ಆರ್ಕಿಟೆಕ್ಟ್ ಆಗಿದ್ದರು, ನಾನು ಬಹಳ ಚಿಕ್ಕವನಾಗಿದ್ದಾಗ ತೀರಿಕೊಂಡರು. ಆಗ ನಮ್ಮ ತಾಯಿ, ನನ್ನ ಅಣ್ಣ, ನನ್ನ ಅಕ್ಕ ಮತ್ತು ನನ್ನನ್ನು, ನನ್ನ ತಂದೆ ಗ್ರಾಮೀಣ ಪ್ರದೇಶವೊಂದರಲ್ಲಿ ಹೊಂದಿದ್ದ ಸುಮಾರು 30ಎಕರೆಯ ಫಾರ್ಮಿಗೆ ಕರೆದೊಯ್ದರು, ಮತ್ತು ಅದನ್ನು ತಾವೇ ನೋಡಿಕೊಳ್ಳಲು ಶುರು ಮಾಡಿದರು. ನನಗೆ ಅಲ್ಲಿ ಬದುಕು ವುದು ಬಹಳ ಇಷ್ಟವಾಗಿ ಹೋಯಿತು!

ಸಣ್ಣ ವಯಸ್ಸಿನಲ್ಲಿಯೇ ನನಗೆ ಚಿತ್ರ ಬರೆಯುವ ಗೀಳು ಬೆಳೆದುಬಿಟ್ಟಿತ್ತು. ಹೀಗಾಗಿ, ನನ್ನ ಮೊದಲ ಆಸಕ್ತಿಗಳು ನಿಸರ್ಗ ಮತ್ತು ನಿಸರ್ಗದಲ್ಲಿನ ಅಚ್ಚರಿಗಳ ಚಿತ್ರ ಬರೆ ಯುವುದು. ವನ್ಯಜೀವಿಗಳ ಮೇಲಿನ ಟೀವಿ ಕಾರ್ಯಕ್ರಮಗಳನ್ನು ತಪ್ಪದೇ ನೋಡುತ್ತಿದ್ದೆ, ಬಿಬಿಸಿ ವೈಲ್ಡ್ ಲೈಫ್ ಅಂಥಾ ವನ್ಯಜೀವಿ ನಿಯತಕಾಲಿಕೆಗಳನ್ನು ತರಿಸಿಕೊಳ್ಳುತ್ತಿದ್ದೆ. ಮತ್ತು ಆಗ ಬರುತ್ತಿದ್ದ ಒಂದು ಟೀ ಬ್ರಾಂಡಿನ ಡಬ್ಬಗಳೊಳಗೆ ಬ್ರಿಟನ್ನಿನ ವನ್ಯಜೇವಿಗಳ ಚಿತ್ರವಿರುವ ಪುಟ್ಟ ಕಾರ್ಡುಗಳು ಬರುತ್ತಿದ್ದವು. ನನ್ನ ಪ್ರಾಣಿಗಳ ಹುಚ್ಚಿಗೆ ನಾವು ಕುಡಿಯುವುದಕ್ಕಿಂತಲೂ ಹೆಚ್ಚು ಟೀ ಡಬ್ಬಗಳನ್ನು ತರಿಸಿಕೊಳ್ಳಲು ನಮ್ಮ ಮನೆಯವರನ್ನು ಪೀಡಿಸುತ್ತಿದ್ದೆ!

ಮನೆಯಿಂದ ಹೊರಗೇ ಸಮಯ ಕಳೆಯುತ್ತಿದ್ದ ನನಗೆ ಪ್ರಕೃತಿಯಲ್ಲಿ ಚಲಿಸುವ ಎಲ್ಲವನ್ನೂ ಕುತೂಹಲದಿಂದ ನೋಡುವುದೇ ಅತ್ಯಂತ ಪ್ರಿಯವಾದ ವಿಷಯವಾಗಿತ್ತು. ಯೂನಿವರ್ಸಿಟಿ ಹಂತ ತಲುಪಿದಾಗ ನಾನು ಓದಿದ್ದೂ ಪ್ರಾಣಿಶಾಸ್ತ್ರ. ಆದರೆ ವನ್ಯ ಜೀವಿಗಳ ಹುಚ್ಚು ಬೆಳೆಸಿಕೊಂಡವರಿಗೆ ಬ್ರಿಟನ್ ಎಂದಿಗೂ ಸಾಲುವುದಿಲ್ಲ. ಆಗ ಆರ್ಮಂಡ್ ಮತ್ತು ಮಿಖೇಯ್ಲಾ ಡೆನಿಸ್ ಅವರು ನಡೆಸಿಕೊಡುತ್ತಿದ್ದ ವನ್ಯಜೀವಿ ಕಾರ್ಯಕ್ರಮ ನೋಡುತ್ತಿದ್ದೆ. ಅವರು ಆಫ್ರಿಕಾದೆಲ್ಲೆಡೆ ಸಫಾರಿ ಮಾಡುತ್ತಾ ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಆವಾಸ ಸ್ಥಾನಗಳಲ್ಲಿ ನೋಡುತ್ತಿದ್ದರು. 1960ರಲ್ಲೇ ಎಲ್ಸಾ’ ಎಂಬ ಸಿಂಹಿಣಿಯೊಂದನ್ನು ದತ್ತು ತೆಗೆದು ಕೊಂಡು ನೋಡಿಕೊಳ್ಳುತ್ತಿದ್ದ ಒಂದು ದಂಪತಿಯ ಕಥೆಯ ಆಧಾರದ ಮೇಲೆ ‘ಬಾರ್ನ್ ಫ್ರೀ’ ಎಂಬ ಸರಣಿ ಇತ್ತು (ಒಂದು ಸಿನೆಮಾ ಕೂಡಾ ಇದೆ). ಅದನ್ನು ನೋಡಿದ ನನಗೆ ಆಫ್ರಿಕಾ ಒಂದು ಅದಮ್ಯ ಸೆಳೆತವಾಗಿ ಕಾಡಲು ಶುರುಮಾಡಿ ಬಿಟ್ಟಿತು.

ಯೂನಿವರ್ಸಿಟಿ ಓದು ಮುಗಿದ ಮೇಲೆ ಅಮೆರಿಕಾಗೆ ಒಂದು ವರ್ಷ ಓದಲು ಹೋದೆ. ಆದರೆ ವನ್ಯಜೀವಿಗಳ ಬಗ್ಗೆ ಆ ಕಾಲದಲ್ಲಿ ಸಂಶೋಧನೆ ನಡೆಸಲು, ಅದಕ್ಕಾಗಿ ಕ್ಷೇತ್ರ ಕಾರ್ಯ (ಫೀಲ್ಡ್ ವರ್ಕ್) ಮಾಡಲು ಅಷ್ಟು ಅವಕಾಶವಿರಲಿಲ್ಲ. ಆಗಷ್ಟೇ ಜೇನ್ ಗುಡಾಲ್ ಮತ್ತು ಜಾರ್ಜ್ ಶ್ಯಾಲರ್ ಅವರಂಥ ವನ್ಯಜೀವಿ ಪ್ರೇಮಿಗಳು ಚಿಂಪಾಂಜಿ, ಗೊರಿಲ್ಲಾ ಮತ್ತು ಸಿಂಹಗಳನ್ನು ಅವುಗಳ ಆವಾಸ ಸ್ಥಾನಗಳಲ್ಲಿ ಅಧ್ಯಯಿಸಲು ಶುರು ಮಾಡಿದ್ದರು. ಅದನ್ನು ಬಿಟ್ಟರೆ ಸಂಶೋಧನೆ ಪ್ರಯೋಗಾಲಯಗಳಿಗೆ ಮಾತ್ರ ಮೀಸ ಲಾಗಿತ್ತು. ಹಾಗಾಗಿ ನನಗೆ ಪಿಎಚ್‌ಡಿ ಮಾಡುವ ಆಸಕ್ತಿ ಇರಲಿಲ್ಲ. ಆಗ ಒಂದು ತಮಾಷೆ ನಡೆಯಿತು. ನನ್ನ ಪ್ರಾಧ್ಯಾಪಕ ರೊಬ್ಬರು ಮುಂದೆ ಪಿಎಚ್‌ಡಿ ಮಾಡುತ್ತೀಯಾ ಅಲ್ಲವಾ ಎಂದು ಕೇಳಿದರು.

ನನಗೆ ಅದರ ಬಗ್ಗೆ ಆಸಕ್ತಿಯಿಲ್ಲ, ವನ್ಯಜೀವಿಗಳಿಂದ ತುಂಬಿರುವ, ಅದರಲ್ಲೂ ದೊಡ್ಡ ಮಾರ್ಜಾಲಗಳು (ಬಿಗ್ ಕ್ಯಾಟ್ಸ್) ಬಗ್ಗೆ ತಿಳಿದುಕೊಳ್ಳಲು ಆಫ್ರಿಕಾಗೆ ಹೋಗುತ್ತೇನೆ ಎಂದೆ. ಇಂಥ ಉತ್ತರ ಕೇಳಿದ ತಕ್ಷಣ ಅವರ ಮುಖದ ಮೇಲೆ ಒಬ್ಬ ತಂದೆಗೆ ತನ್ನ ಮಗನ ಖಯಾಲಿಗಳ ಬಗ್ಗೆ ಆಗುವ ಆಘಾತ ಕಾಣಿಸಿತು. ಒಹ್, ಹಾಗಾದರೆ ನಿನಗೆ ದುಡ್ಡಿನ ಯಾವ ಯೋಚನೆಯೂ ಇಲ್ಲ ಎನಿಸು ತ್ತದೆ, ನಿನ್ನ ತಂದೆ ಬಹಳ ಶ್ರೀಮಂತರಿರಬಹುದು ಎಂದು ಕೇಳಿದರು. ನಾನು ಇಲ್ಲ ಎಂದೆ. ಇಂಥಾ ಆಸೆಗಳೆಲ್ಲಾ ಎಲ್ಲರಿಗೂ ಇರುತ್ತದೆ, ಆದರೆ ಅದೊಂದು ಹವ್ಯಾಸವಷ್ಟೇ, ನೀನು ನಿನ್ನ ಕರಿಯರ್ ಬಗ್ಗೆೆ ಯೋಚನೆ ಮಾಡಬೇಕು ಎಂದರು.

ಆದರೂ ನಾನು ನನ್ನ ಇರಾದೆ ಸ್ಪಷ್ಟ ಪಡಿಸಿ ಅಮೇರಿಕಾದಿಂದ ಹಿಂದಿರುಗಿದೆ. 1970ರ ದಶಕದ ಮಧ್ಯದಲ್ಲಿ ನಾನು ಲಂಡನ್ನಿ ನಿಂದ ಜೋಹ್ಯಾನಸ್ಬರ್ಗ್ ಕಡೆಗೆ ಭೂಮಾರ್ಗವಾಗಿ ಆರ್ಮಿ ಟ್ರಕ್ಕುಗಳಲ್ಲಿ ಪ್ರಯಾಣ ಬೆಳೆಸಿದೆ. 6,000 ಮೈಲಿಗಳ ನಾಲ್ಕು ತಿಂಗಳ ಪ್ರಯಾಣ, ಮತ್ತು ನನ್ನ ಬಳಿ ಇದ್ದದ್ದು ಕೇವಲ 500 ಪೌಂಡ್ ಹಣ. ನಾನು ಚಿತ್ರಕಲೆಯಲ್ಲಿ ಮಗ್ನನಾಗಿದ್ದರಿಂದ ಛಾಯಾಗ್ರಹಣ ದ ಕಡೆಗೆ ಸಹಜವಾದ ಒಲವು ಬೆಳೆಯಿತೆಂದೇ ಹೇಳಬಹುದು. ಎರಡೂ ನಾವು ಹೇಗೆ ಜಗತ್ತನ್ನು ನೋಡುತ್ತೇವೆ ಎಂಬುದರ ಮೇಲೆಯೇ, ಅಂದರೆ ದೃಷ್ಟಿ ಮತ್ತು ದೃಷ್ಟಿಕೋನಗಳ ಮೇಲೆಯೇ ಅವಲಂಬಿತವಾಗಿವೆ.

ಹಾಗಂತ ಆಫ್ರಿಕಾದಲ್ಲಿ ಬಂದಿಳಿದ ತಕ್ಷಣವೇ ನನ್ನ ಜೀವನ ಹಿಂದೆಂದಿಗಿಂತಲೂ ಸುಂದರವಾಗಿಬಿಟ್ಟಿತು ಎಂದು ಹೇಳುವಂತಿಲ್ಲ. ನಾನು ಮೊದಲು ಬಂದಿಳಿದದ್ದು ಸೌತ್ ಆಫ್ರಿಕಾದ ಜೋಹ್ಯಾನಸ್ಬರ್ಗ್,ಕೆನ್ಯಾ ಅಲ್ಲ. ಆಗ ಅಲ್ಲಿ ವರ್ಣದ್ವೇಷ ಭುಗಿಲೆದ್ದಿತ್ತು. ಕಾಲಿಡುತ್ತಿದ್ದಂತೆಯೇ ಅಲ್ಲಿಂದ ಕಾಲ್ಕಿತ್ತರೆ ಸಾಕು ಅನ್ನುವಂತಾಗಿತ್ತು. ಆದರೆ, ಹೇಗೋ ಸೌತ್ ಆಫ್ರಿಕಾದ ಒಬ್ಬ ಕೃಷ್ಣವರ್ಣದ ಪಾದ್ರಿಯ ಜೊತೆ ಉಳಿಯುವ ಅವಕಾಶ ಸಿಕ್ಕಿತು. ಮೂರು ತಿಂಗಳ ಕಾಲ ಮುಂದೇನು ಮಾಡಬೇಕು ಎಂದು ಅವಕಾಶಗಳ ಹುಡುಕಾಟದಲ್ಲಿದ್ದಾಗಲೂ ನಾನು ಚಿತ್ರಕಲೆ ಅಭ್ಯಾಸ ಮಾಡುವುದನ್ನು ಮುಂದುವರೆಸಿಯೇ ಇದ್ದೆ. ನಂತರ ಬೋಟ್ಸ್ವಾನಾ ದೇಶಕ್ಕೆ ಹೋದಾಗ ವನ್ಯಜೀವಿಗಳ ಬಗ್ಗೆ ಕೆಲಸ ಮಾಡುವ ಚಿಕ್ಕಪುಟ್ಟ ಅವಕಾಶಗಳು ಸಿಕ್ಕವು. ಛಾಯಾಗ್ರಹಣ ಮಾಡುತ್ತಲೇ ನನ್ನ ಚಿತ್ರಕಲೆಯನ್ನೂ ಮುಂದುವರೆಸಿದ್ದೆ. ನನ್ನ ಚಿತ್ರಕಲೆಗಳನ್ನು ಪ್ರಿಂಟ್ ಮಾಡಿ ಮಾರುವ ಅವಕಾಶ ಸಿಕ್ಕಿತ್ತು. ನಂತರ ಈಸ್ಟ್ ಆಫ್ರಿಕಾಕ್ಕೆ ಹೋದಾಗ ಅಲ್ಲಿನ ಸೌಂದರ್ಯ, ಆ ಸವಾನಾದಲ್ಲಿ ಕಾಣಸಿಗುವ ಆಫ್ರಿಕಾದ ವನ್ಯಜೀವಿಗಳು ಹುಟ್ಟಿಸುವ ಬೆರಗಿಗೆ ಮಾರುಹೋದೆ!

ಮಾಸಾಯ್ ಮಾರಾದಲ್ಲಿ ಒಂದು ಕ್ಯಾಂಪ್ ಶುರು ಮಾಡಿದ್ದವರ ಪರಿಚಯ ನನ್ನ ಗೆಳೆಯರೊಬ್ಬರಿಗಿತ್ತು. ಅಲ್ಲಿ ಸಂಬಳ ಕೊಡು ವಷ್ಟು ಸೌಕರ್ಯ ಅವರಿಗಿರಲಿಲ್ಲ, ಆದರೆ ನನಗೆ ಸಫಾರಿಗಳಲ್ಲಿ ಜನರನ್ನು ಕರೆದುಕೊಂಡು ಹೋಗಿ ಗೈಡ್ ಆಗಿ ಕೆಲಸ ಮಾಡಲು ತರಬೇತಿ ಕೊಡಿ, ನನಗೆ ವನ್ಯಜೀವಿಗಳ ಬದುಕಿನ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಇದೆ ಎಂದಾಗ ಅವರು ಒಪ್ಪಿಕೊಂಡರು. ನನಗೆ ಆಗ ಅಷ್ಟು ಸಾಕಾಗಿತ್ತು!

ಇದಕ್ಕೆ ನನ್ನ ತಾಯಿಯ ಬೆಂಬಲ ಪೂರ್ತಿ ಇತ್ತು. ನನ್ನ ಆಸಕ್ತಿಗಳು ಬೇರೆಯವರಿಗೆ ಹುಚ್ಚು ಎನಿಸಬಹುದಾದರೂ ನನ್ನ ತಾಯಿ ಅರ್ಥ ಮಾಡಿಕೊಂಡಿದ್ದರು. ಆಕೆ ದಿಟ್ಟೆ, ಅವಳ ಜೀವನಪ್ರೀತಿ ನನ್ನ ವನ್ಯಜೀವಿಗಳ ಪ್ರೀತಿಯನ್ನು ಅರ್ಥ ಮಾಡಿಕೊಂಡಿತ್ತು.
ನನ್ನ ತಂದೆಯಂತೆಯೇ ನಾನೂ ಆರ್ಕಿಟೆಕ್ಟ್ ಆಗಬೇಕು ಅಥವಾ ಡಾಕ್ಟರ್ ಅಥವಾ ಲಾಯರ್ ಆಗಬೇಕು ಎನ್ನುವ ಒತ್ತಡವೂ ಇರಲಿಲ್ಲ. ನನಗೆ ವಯಸ್ಸಾಗುತ್ತಿದೆ, ಗಂಡನ ಕಾಲ ಮುಗಿದು ವರ್ಷಗಳೇ ಕಳೆದಿವೆ, ನನ್ನನ್ನು ಇಂಗ್ಲೆಂಡಿನಲ್ಲೇ ಇದ್ದು ನೋಡಿ ಕೊಳ್ಳುವ ಜವಾಬ್ದಾರಿ ನಿನ್ನದು ಎಂದೆಲ್ಲಾ ನನ್ನ ತಾಯಿ ಎಂದಿಗೂ ಹೇಳಿದವರೆಲ್ಲ. ನಮಗೇ ಇರುವುದು ಒಂದೇ ಜೀವನ, ಅದನ್ನು ಮುಕ್ತವಾಗಿ, ಚೆಂದವಾಗಿ ಬದುಕುವ ಜವಾಬ್ದಾರಿ ನಿನ್ನದು. ಹಾಗಾಗಿ ನಿನ್ನ ಆಸಕ್ತಿ ಎಲ್ಲೇ ಕರೆದುಕೊಂಡು ಹೋದರೂ ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದಿದ್ದ ಘನತೆ ನನ್ನ ತಾಯಿಯದು. ಆಕೆ ಒಬ್ಬ ಸ್ವತಂತ್ರ ಜೇವಿ.

ಹೀಗೆ ಆಫ್ರಿಕಾದ ವನ್ಯಜೀವಿಗಳ, ಅದರಲ್ಲೂ ದೊಡ್ಡ ಮಾರ್ಜಾಲಗಳ ಬೇರೆ ಬೇರೆ ಕುಟುಂಬಗಳನ್ನು, ವಂಶವೃಕ್ಷಗಳನ್ನು ನೋಡುವ ಭಾಗ್ಯ ನನ್ನದಾಗಿದೆ. 1977ರಲ್ಲಿ ಒಂದು ಸಿಂಹದ ಕುಟುಂಬವನ್ನು ‘ದ ಮಾರ್ಷ್ ಲಯ್ಸ್’ ಎಂದು ನಾಮಕರಣ ಮಾಡಿದೆ, ಆ ಗುಂಪಿನ ಒಂದೊಂದು ಸಿಂಹವನ್ನೂ, ಅವುಗಳ ಬೆಳವಣಿಗೆ, ಜೀವನಕ್ರಮಗಳನ್ನೂ, ಅವುಗಳ ಮುಂದಿನ ತಲೆಮಾರುಗಳು ಬೆಳೆದು ದೊಡ್ಡದಾಗುವುದನ್ನು ನೋಡುತ್ತಾ ಬಂದಿದ್ದೇವೆ. ಹಾಗೆಯೇ ಇತರ ದೊಡ್ಡ ಮಾರ್ಜಾಲಗಳು ಮತ್ತು ವನ್ಯಜೀವಿಗಳನ್ನು ನೋಡುತ್ತಾ, ಬೆರಗುಗೊಳ್ಳುತ್ತಲೇ ನನ್ನ ಹೆಂಡತಿಯ ಜೊತೆ ಬದುಕುತ್ತಿದ್ದೇನೆ.

2 ನೀವು ಎಪ್ಪತ್ತರ ದಶಕದಲ್ಲಿ ಕಂಡ ಮಾಸಾಯ್ ಮಾರಾಗೂ, ಇವತ್ತಿನ ಮಾರಾಗೂ ಇರುವ ವ್ಯತ್ಯಾಸಗಳೇನು? ಅಲ್ಲಿ ಆಗುತ್ತಿರುವ ಬದಲಾವಣೆಗಳಿಗೆ, ವನ್ಯಜೀವಿಗಳ ಮೇಲೆ ಹೆಚ್ಚುತ್ತಿರುವ ಒತ್ತಡಗಳ ಬಗ್ಗೆ ಬಹುಷಃ ನಿಮಗಿಂತಲೂ ದೊಡ್ಡ ಸಾಕ್ಷಿ ಸಿಗುವುದು ಕಷ್ಟ. ನಿಮ್ಮ ನಾಲ್ಕು ದಶಕಗಳ ಅನುಭವದ ಆಧಾರದ ಮೇಲೆ ಇದರ ಬಗ್ಗೆ ಏನು ಹೇಳುತ್ತೀರಿ?
ತಕ್ಷಣಕ್ಕೆ ಎದ್ದು ಕಾಣುವ ವ್ಯತ್ಯಾಸಗಳು ಎರಡು ಮಟ್ಟದಲ್ಲಿವೆ: ಮಾರಾಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಏರಿಕೆ. ಕೆಲವು ರೀತಿಯಲ್ಲಿ ಇದು ಒಳ್ಳೆಯದು. ಪ್ರವಾಸಿಗರಿಂದ ರಾಷ್ಟ್ರೀಯ ಉದ್ಯಾನವನಗಳಿಗೆ ಬರುವ ಹಣದ ದೊಡ್ಡ ಪಾಲು ಆಯಾ ಉದ್ಯಾನವನಗಳನ್ನು ನಿರ್ವಹಿಸಲು, ಸಂರಕ್ಷಿಸಲು ಬಳಕೆಯಾಗುತ್ತದೆ. ಸ್ವಲ್ಪ ಪಾಲು ಕೆಲವು ಅಭಿವೃದ್ಧಿ ಯೋಜನೆಗಳಿಗೆ
ಹೋಗುತ್ತದೆ, ಇದರಿಂದ ಸ್ಥಳೀಯ ಆರ್ಥಿಕ ಅಭಿವೃದ್ಧಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಆದರೆ ಇದು ಹೆಚ್ಚಾದ ಪ್ರಮಾಣ ದಲ್ಲೇ ಅದರ ಪರಿಣಾಮಕಾರಿ ನಿರ್ವಹಣೆ ನಡೆದಿಲ್ಲ. ಇದನ್ನು ಮಾರಾದಂತಹ ಅತ್ಯಂತ ಮುಖ್ಯ ವನ್ಯಜೀವಿ ಸ್ಥಳಗಳಿಗೆ ಮಾರಕ ವಾಗದಂತೆ ವನ್ಯಜೀವಿ ಪ್ರವಾಸೋದ್ಯಮವನ್ನು ಹೇಗೆ ನಡೆಸಬಹುದು ಎಂದು ಇನ್ನೂ ಯೋಚಿಸಬೇಕಿದೆ.

ಮತ್ತು ಇನ್ನೊಂದು ತೊಂದರೆಯೆಂದರೆ, ಉದ್ಯಾನವನದ ಒಳಗೇ ಹೆಚ್ಚು ಹೆಚ್ಚು ಕ್ಯಾಂಪ್ ಮತ್ತು ಲಾಡ್ಜ್‌ಗಳು, ಅತಿಯಾಗಿ ಹೆಚ್ಚುತ್ತಿರುವ ಪ್ರವಾಸಿಗರ ಸಂಖ್ಯೆ. ಭಾರತದಲ್ಲಿ ವನ್ಯಜೀವಿ ಪ್ರವಾಸದ ನಿರ್ವಹಣೆಯಲ್ಲಿ ನಾನು ಇಷ್ಟಪಡುವ ವಿಷಯವೆಂದರೆ, ಯಾವ ರಾಷ್ಟ್ರೀಯ ಉದ್ಯಾನವನದ ಒಳಗೂ ಕ್ಯಾಂಪ್ ಅಥವಾ ಲಾಡ್ಜ್ ಗಳು ಇರುವುದಿಲ್ಲ, ಹೊರಗೆ ಇರುತ್ತವೆ. ಹಾಗಾಗಿ ಪ್ರವಾಸಿಗರ ಸಂಖ್ಯೆಯ ನಿಯಂತ್ರಣ, ವನ್ಯಜೀವಿಗಳಿಗೆ ಆದಷ್ಟೂ ಗೊಂದಲ ಮಾಡದಂತೆ ನಡೆಯುತ್ತದೆ. ಆದರೆ ಮಾರಾದಲ್ಲಿ ಇದು ಇನ್ನೂ ನಡೆದಿಲ್ಲ.

ಕೆಲವು ಕ್ಯಾಂಪುಗಳು ಹೊರಗಿವೆ ಮತ್ತು ಜನ ಪ್ರವೇಶದ್ವಾರಗಳ ಮೂಲಕವೇ ಬರುತ್ತಾರೆ. ಆದರೆ ಮಾರಾದ ಒಳಗೇ ಇರುವ ಕ್ಯಾಂಪುಗಳಲ್ಲಿ, ಲಾಡ್ಜ್ ಗಳಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲೇ ಇರುತ್ತಾರೆ. ಒಂದು ಒಳ್ಳೆಯ ವಿಷಯವೇನೆಂದರೆ, ಸೆರೆಂಗೆಟಿಯ ಹಾಗೇ ಮಾಸಾಯ್ ಮಾರಾವನ್ನು ಕೂಡಾ ಯುನೆಸ್ಕೋ ವಲ್ಡರ್ ಹೆರಿಟೇಜ್ ಸೈಟ್ ಎಂದು ಘೋಷಿಸುವತ್ತ ಪ್ರಯತ್ನ ಸಾಗಬೇಕು ಎಂಬ ಮಾತುಕತೆ ನಡೆಯುತ್ತಿದೆ. ಆದರೆ ಇದಕ್ಕಾಗಿ ನಾವು ಬಹಳ ಶ್ರಮಿಸಬೇಕಿದೆ. ಆ ಸ್ಥಾನ ‘ಟಾಪ್ ಟೆನ್’ ವನ್ಯಜೀವಿ ಪ್ರವಾಸ ತಾಣಗಳ ಪಟ್ಟಿಯಲ್ಲಿ ಮಾರಾ ಇರುವಷ್ಟು ಸುಲಭವಲ್ಲ, ನಾವು ಆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಬೇರೆ ವಿಷಯ.
ಅತೀ ಮುಖ್ಯವಾಗಿ ಬೇಕಿರುವುದು ಪ್ರಕೃತಿಯಲ್ಲಿ ವನ್ಯಜೀವಿಗಳ ಸಹಜ ಜೀವನವನ್ನು ಗೊಂದಲಗೊಳಿಸದಂತೆ  ಪ್ರವಾಸೋ ದ್ಯಮದ ನಿರ್ವಹಣೆ. ಶಿಸ್ತು ಮತ್ತು ವನ್ಯಜೀವಿಗಳಿಗೆ ಗೌರವ ಅತೀ ಮುಖ್ಯ. ಈ ಬದಲಾವಣೆಗೆ ನಮ್ಮ ಸಂಪೂರ್ಣ ಬೆಂಬಲವಿದೆ.

ಆದರೆ, ಹವಾಮಾನ ವೈಪರೀತ್ಯದ ಪರಿಣಾಮ ಮಾರಾದ ಮೇಲೂ ಆಗುತ್ತಿದೆ. ಇಲ್ಲಿಯ ಹವಾಮಾನದಲ್ಲಿ ಅನಿರೀಕ್ಷಿತ  ಬದಲಾವಣೆಗಳಾಗುತ್ತಿವೆ. ಮಾರಾ ರಾಷ್ಟ್ರೀಯ ಉದ್ಯಾವನದ ಹೊರಗೆ ಒಂದು ದೊಡ್ಡ ಅರಣ್ಯಪ್ರದೇಶದಲ್ಲಿ ಮಾರಾ ನದಿಯ
ಉಗಮಸ್ಥಾನವಿದೆ. ಅದು ಕಾಯ್ದಿರಿಸಲಾದ ಅರಣ್ಯಪ್ರದೇಶವಾದರೂ ಕೆಲವು ಮನುಷ್ಯರ ವಸತಿಗಳು ಮೊಳಕೆಯೊಡೆದಿವೆ.
ಇದರಲ್ಲಿ ರಾಜಕೀಯ ಕೈವಾಡವೂ ಇರಬಹುದು. ಇದರಿಂದ ಅರಣ್ಯದಲ್ಲಿ ಅನಗತ್ಯ ಮನುಷ್ಯರ ಚಟುವಟಿಕೆಗಳು ಹೆಚ್ಚಾಗಿವೆ –
ಇದ್ದಲು ಸುಡುವಿಕೆ, ಮರಗಳನ್ನು ಕಡಿಯುವುದು, ವೈಜ್ಞಾನಿಕವಾಗಿ ನಡೆಯದ ಜಲವಿದ್ಯುತ್ ಯೋಜನೆಗಳು. ಇದರ ಜೊತೆಗೆ ಕೆನ್ಯಾ ಕಡೆಗೊಂದು ಮತ್ತು ಟಾಂಜ್ಹಾನಿಯಾದ ಕಡೆಗೊಂದು ಆಣೆಕಟ್ಟು ಕಟ್ಟಿ ನೀರಿನ ಹರಿವನ್ನು ನಿಯಂತ್ರಿಸುವ ಬಗ್ಗೆಯೂ ಮಾತುಕತೆ ನಡೆದಿದೆ!

ಬೇಸಿಗೆಯಲ್ಲಂತೂ, ಗಾಡಿ ಚಲಿಸಿಹೋಗಲು ಸಾಧ್ಯವಾಗುವಷ್ಟು ಒಣಗಿಹೋಗುತ್ತದೆ ನದಿ. ಇದರ ಜೊತೆಗೆ ಜಲಮಾಲಿನ್ಯದ ತೊಂದರೆ. ಸುತ್ತಮುತ್ತ ಕೆಲವು ಚಿನ್ನದ ಗಣಿಗಳು ಹುಟ್ಟಿಕೊಂಡಿವೆ. ನದಿಗೆ ಹೋಗುವ ವಿಷಪದಾರ್ಥಗಳಿಂದ ಮೀನುಗಳು
ಸಾವನ್ನಪ್ಪುತ್ತಿವೆ. ಮಳೆಗಾಲದಲ್ಲೂ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಜಗತ್ತಿನ ಅತ್ಯಂತ ರೋಮಾಂಚನಕಾರಿ, ಅಸಾಧಾರಣ ಪ್ರಾಕೃತಿಕ ಘಟನೆಗಳಲ್ಲಿ ಒಂದಾದ ‘ದ ಗ್ರೇಟ್ ಮೈಗ್ರೇಶನ್’, ಮಿಲಿಯನ್-ಗಟ್ಟಲೆ ಸಸ್ಯಾಹಾರಿ ಪ್ರಾಣಿಗಳು ಸೆರೆಂಗೆಟಿ ಕಡೆಯಿಂದ ಮಾರಾಗೆ ವಲಸೆ ಬರುವುದು ಜುಲೈ ಮತ್ತು ನವೆಂಬರ್ ನಡುವೆ. ಈ ಪರಿಸರ ವ್ಯವಸ್ಥೆಯಲ್ಲಿ ಮಾರಾ ನದಿ ಮಾತ್ರ ಸದಾ ನೀರಿರುವ ನದಿ ಎನ್ನುವುದು ಈ ವಲಸೆಗೆ ಇರುವ ಮುಖ್ಯ ಕಾರಣಗಳಲ್ಲೊಂದು. ಇದರ ನೀರು ಕಡಿಮೆಯಾಗುತ್ತಿದ್ದರೆ, ಇದನ್ನು ನಂಬಿ ಕೊಂಡು ಬರುವ ಮಿಲಿಯನ್-ಗಟ್ಟಲೆ ವಿಲ್ಡಬೆಸ್ಟ್, ಝೆಬ್ರಾ, ಗಝೆಲ್-ಗಳ ಸಂಖ್ಯೆಯೂ ಚಿಂತಾಜನಕ ಹಂತಕ್ಕೆ  ಕಡಿಮೆಯಾಗುವ
ಸಾಧ್ಯತೆಯಿದೆ. ಮತ್ತು ಈಗ, ಮಾಸಾಯ್ ಮಾರಾ ಮತ್ತು ಸೆರೆಂಗೆಟಿ ಸೇರಿದ ‘ಗ್ರೇಟರ್ ಮಾರಾ ಈಕೋಸಿಸ್ಟಮ್’ನ ಆರು ಸಾವಿರ ಚ.ಕಿ. ನಲ್ಲಿ ಮೂರು ಸಾವಿರ ಆನೆಗಳಿವೆ.

ಇದರಿಂದ ಅಲ್ಲಲ್ಲಿ ಕಾಣಸಿಗುವ ಮರಗಳು, ಅದರಲ್ಲೂ ಬೇರೆ ಪ್ರಾಣಿಗಳಿಗೆ ಬೇಕಿರುವ ಅಕೇಶಿಯಾ, ಮತ್ತು ಪೊದೆಗಳು ಕಡಿಮೆ ಯಾಗಿ ಸವನಾದ ಬಯಲು ಮತ್ತಷ್ಟು ವಿಸ್ತಾರಗೊಳ್ಳುತ್ತಿದ್ದು, ಒಂದು ಪ್ರಾಣಿಯ ಸಂಖ್ಯೆ ಇದ್ದಕ್ಕಿಂದಂತೆ ಜಾಸ್ತಿಯಾದರೆ ಖುಷಿ ಪಡುವ ವಿಷಯವಲ್ಲ ಎಂದು ತೋರಿಸಿಕೊಡುತ್ತಿದೆ. ಇದರಿಂದ ಸಿಂಹಗಳಂತಹ ಬೇಟೆಪ್ರಾಣಿಗಳಿಗೆ ಅಡಗಿಕೊಳ್ಳಲು, ತಮ್ಮ ಮರಿಗಳನ್ನು ಕಾಣದಂತೆ ರಕ್ಷಿಸಿಕೊಳ್ಳಲು ದಟ್ಟ ಪೊದೆಗಳ, ಕೆಲವು ಮರಗಳಿರುವ ಪ್ರದೇಶಗಳ ಕೊರತೆಯುಂಟಾಗುತ್ತಿದೆ.

ಆಫ್ರಿಕನ್ ಲೆಪರ್ಡ್‌ಗಳಿಗೂ ಮರಗಳ ಅಗತ್ಯವಿದ್ದು, ಅವುಗಳೂ ಕಷ್ಟಪಡುವಂತಾಗಿದೆ. ಬಯಲಿನಲ್ಲೇ ಹೆಚ್ಚು ಸಮಯ ಕಳೆದರೂ, ಚೀಟಾಗಳಿಗೂ ಅವುಗಳ ಮರಿಗಳು ತೀರಾ ಚಿಕ್ಕವಿದ್ದಾಗ ಪೊದೆಗಳ ಅಗತ್ಯವಿರುತ್ತದೆ. ಹೀಗೆ ಹವಾಮಾನ ವೈಪರೀತ್ಯ, ಮಾರಾ ನದಿಯಲ್ಲಿನ ನೀರಿನ ಮಟ್ಟ ಕುಗ್ಗುತ್ತಿರುವುದು, ಮತ್ತು ಆನೆಗಳ ಸಂಖ್ಯೆಯಲ್ಲಿ ಆರೋಗ್ಯಕರವಲ್ಲದ ಬೆಳವಣಿಗೆ ಸದ್ಯಕ್ಕೆ ನಾವು ಪರಿಹಾರ ಕಂಡುಕೊಳ್ಳಬೇಕಿರುವ ಸಮಸ್ಯೆಗಳು.

ಇದೆಲ್ಲದರ ನಡುವೆ ಒಂದು ಖುಷಿಯ ವಿಷಯವೆಂದರೆ, ವನ್ಯಜೀವಿ ಸಂರಕ್ಷಣಾ ಕೆಲಸಕ್ಕೆ ‘ವೈಲ್ಡ್ ಲೈಫ್ ಕಾನ್ಸರ್ವೆನ್ಸಿ’ಗಳ ಸಂಖ್ಯೆ ಹೆಚ್ಚಾಗುತ್ತಿರುವುದು. ಮಾರಾ ರಿಸರ್ವ್ ಸುತ್ತಲೂ ಮಾಸಾಯ್ ಜನರ ಖಾಸಗಿ ಒಡೆತನದಲ್ಲಿರುವ ಭೂಪ್ರದೇಶಗಳಿವೆ. ಅಲ್ಲಿ ವ್ಯವಸಾಯ ಮಾಡುವುದು ಕಷ್ಟ. ಮತ್ತು ಮಾಸಾಯ್ ಜನರು ಕೇವಲ ಅವರ ದನಕರುಗಳ ಮೂಲಕ ಸಂಪಾದನೆ ಮಾಡಿ ಕೊಂಡು ಆರ್ಥಿಕವಾಗಿ ಮುಂದುವರಿಯುವುದು ಕಷ್ಟ. ಹಾಗಾಗಿ ಸುಮಾರು ನೂರೈವತ್ತು ಎಕರೆಗಳನ್ನು ಹೊಂದಿರುವ ಗುಂಪು ಗಳು ಅವರ ಭೂಪ್ರದೇಶವನ್ನು ವನ್ಯಜೀವಿ ಪ್ರವಾಸೋದ್ಯಮ (ಟೂರ್) ಆಪರೇಟರುಗಳಿಗೆ ಭೋಗ್ಯದ ರೀತಿಯಲ್ಲಿ ಬಿಟ್ಟು ಕೊಡು ತ್ತಾರೆ, ಅದರಿಂದ ಆರ್ಥಿಕ ಮೂಲ ಸಿಕ್ಕಂತಾಗುತ್ತದೆ.

ಜನರಿಗಾಗಲೀ ಅಥವಾ ನೈಸರ್ಗಿಕವಾಗಿ ಆಗಲೀ, ತೊಂದರೆ ಉಂಟಾಗದಂತೆ ಪ್ರವಾಸೋದ್ಯಮ ನಡೆಸುವ ಒಪ್ಪಂದವಿದು. ಮತ್ತೊಂದು ಕಡೆ ವನ್ಯಜೀವಿಗಳಿಗೂ ಸ್ವಚ್ಚಂದವಾಗಿ ಓಡಾಡಲು ಬೇಲಿಗಳಿಲ್ಲದ ಮತ್ತೂ ವಿಸ್ತಾರವಾದ ಭೂಪ್ರದೇಶ ಸಿಕ್ಕಂತಾ ಗುತ್ತದೆ. ಆದರೆ ಸದ್ಯಕ್ಕೆ ಕೋವಿಡ್ ಪರಿಸ್ಥಿತಿ ಈ ವ್ಯವಸ್ಥೆಯನ್ನೂ ಕಂಗೆಡಿಸಿದೆ. ಜನರೇ ಬರದಿದ್ದರೆ ವನ್ಯಜೇವಿ ಸಂರಕ್ಷಣೆಗೆ ಹಣ ಹೇಗೆ ಬಂದೀತು? ಹೀಗಾಗಿ ಆರ್ಥಿಕ ದೃಢತೆಗೆ ನಾವು ಕೇವಲ ಪ್ರವಾಸೋದ್ಯಮದ ಮೇಲೆ ಅವಲಂಬಿಸುವುದು ವಿವೇಕವಲ್ಲ ಎನ್ನುವುದು ಇದರಿಂದ ಕಲಿಯಬೇಕಿರುವ ದೊಡ್ಡ ಪಾಠ. ಇದಕ್ಕಾಗಿ ನಾವು ಜರ್ಮನ್ ಏಡ್ ಅಥವಾ ಯುಎಸ್ ಏಡ್ ಅಥವಾ ಕಾನ್ಸರ್ವೇಶನ್ ಇಂಟರ್ನ್ಯಾಷನಲ್ ಅಥವಾ ಯುರೋಪಿಯನ್ ಯೂನಿಯನ್ ಫಂಡಿಂಗ್ -ನಂಥಾ ಬೇರೆ ಆರ್ಥಿಕ ಸಹಾಯದ ಮೂಲಗಳತ್ತ ಗಮನ ಹರಿಸಬೇಕಿದೆ.

ವಿದೇಶೀ ಸರ್ಕಾರಗಳಿಂದ ಮತ್ತು ಏನ್‌ಜಿಓಗಳ ಸಹಾಯ ಬೇಕಿದೆ. ಕೇವಲ ಪ್ರವಾಸಕ್ಕೆ ಬಂದು, ಫೋಟೋಗಳನ್ನು ತೆಗೆದು ಕೊಂಡರೆ ಮಾತ್ರ ಸಾಕೇ? ನಮ್ಮ ಮಕ್ಕಳು, ನಮ್ಮ ಮೊಮ್ಮಕ್ಕಳು ಎಂದು ಬೊಬ್ಬೆಯಿಡುತ್ತೇವೆ, ಆದರೆ ನಿಜವಾಗಿಯೂ ಅವರಿಗಾಗಿ
ಎಂತಹ ಪ್ರಪಂಚ ಬಿಟ್ಟುಹೋಗುತ್ತಿದ್ದೇವೆ? ಹಣ ಕೂಡಿಟ್ಟರೆ ಸಾಕೇ? ಜೇನ್ ಗುಡಾಲ್ ಹೇಳುವಂತೆ, ನಾವು ನಮ್ಮ ಮಕ್ಕಳ, ಮೊಮ್ಮೊಕ್ಕಳ ಆಸ್ತಿಯನ್ನು ಈಗಲೇ ಕದ್ದುಬಿಟ್ಟಿದ್ದೇವೆ! ಬೇರೆ ದೇಶದಲ್ಲಿದ್ದೇವೆ, ಅಥವಾ ನಗರಗಳಲ್ಲಿದ್ದೇವೆ, ಇದರ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳಬೇಕು ಎಂಬ ನಮ್ಮ ಅಹಂಕಾರ ಈಗ ನಡೆಯುವುದಿಲ್ಲ.

ಪ್ರಕೃತಿಯಿಲ್ಲದೇ ನಾವಿಲ್ಲ. ಇಂಥಾ ಸಮಯಗಳಲ್ಲೇ ನಾವು ನಮ್ಮ ನಡುವಿನ ಭೇದ, ವ್ಯತ್ಯಾಸಗಳು, ಗಡಿ ಎಂಬ ಭ್ರಮೆಗಳನ್ನು ಮರೆತು, ನಮ್ಮ ಭೂಮಿಯ ಮೇಲಿನ ಅಪಾರ ಜೀವರಾಶಿಯನ್ನು ಪೋಷಿಸುವ ಮಾರಾ ಎಂಬ ಒಂದು ಅದ್ಭುತ ನೆಲದ ಬಗ್ಗೆ ಜವಾಬ್ದಾರಿ ತೋರುವ ವಿವೇಕ ತೋರಿಸುತ್ತೇವಾ ಎಂಬ ಸತ್ವಪರೀಕ್ಷೆ ನಡೆಯುವುದು. ನಮ್ಮ ಮುಂದಿನ ಪೀಳಿಗೆಗಳಿಗೆ ನಾವು ಎಷ್ಟು ಬಿಟ್ಟುಹೋಗುತ್ತೇವೆ ಎನ್ನುವುದು ಇವತ್ತಿನ ನಮ್ಮ ಕೆಲಸಗಳು ನಿರ್ಧರಿಸುತ್ತವೆ.