Friday, 13th December 2024

ಕಲಿತವಳು ಕಲಿಸುತ್ತಾಳೆ…

ಮಲ್ಲಪ್ಪ. ಸಿ. ಖೊದ್ನಾಪೂರ

ವಿದ್ಯಾಭ್ಯಾಸ ಕಲಿತ, ಕೌಶಲ ರೂಢಿಸಿಕೊಂಡ ಮಹಿಳೆ ಇತರರಿಗೂ ಮಾರ್ಗದರ್ಶನ ನೀಡಿ, ಉತ್ತಮ ಸಮಾಜ ನಿರ್ಮಿಸಲು ಮಹತ್ವದ ಕೊಡುಗೆ ನೀಡುತ್ತಾಳೆ.

ಇಂದಿನ ಸ್ಪರ್ಧಾತ್ಮಕ ಪೈಪೋಟಿ ಯುಗದಲ್ಲಿ ಮಹಿಳೆಯು ಪುರುಷನಿಗೆ ಸರಿಸಾಟಿಯಾಗಬಲ್ಲ ಹಾಗೂ ಮಿಗಿಲಾದ ಸಾಧನೆ ತೋರುತ್ತಾ ದೊರೆಯುವ ಎಲ್ಲ
ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಮಹಿಳೆಯು ತನ್ನಲ್ಲಿರುವ ಶಕ್ತಿ-ಸಾಮರ್ಥ್ಯ, ಕಲೆ, ಪ್ರತಿಭೆ, ಜ್ಞಾನ ಸಂಪತ್ತು, ಜಾಣ್ಮೆ, ಬುದ್ಧಿವಂತಿಕೆ ಮತ್ತು ನೈಪುಣ್ಯತೆ ಹಾಗೂ ಕ್ರೀಯಾಶೀಲತೆಗಳಿಂದ ಉದ್ಯೋಗವಂತಳಾಗಿ ಅಥವಾ ಗೃಹ, ಕುಶಲಗಾರಿಕೆ ಮತ್ತು ಗುಡಿ ಸಣ್ಣ ಪ್ರಮಾಣದ ಸ್ವಯಂ ಉದ್ಯೋಗ ಕೈಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬಲ್ಲಳು. ಇದರಿಂದ ರಾಷ್ಟ್ರದ ಆರ್ಥಿಕತೆಗೆ ತನ್ನ ಅಳಿಲು ಕೊಡುಗೆಯನ್ನು ನೀಡಬಲ್ಲಳು.

ಹೀಗೆ ಸ್ತ್ರೀ-ಮಹಿಳೆಯು ಜೀವನದ ಎಲ್ಲ ಸ್ತರಗಳಲ್ಲಿಯೂ ಸಂತೋಷ-ನೆಮ್ಮದಿ ಕಾಣುತ್ತಾ ಜೀವನದಲ್ಲಿ ಸಾರ್ಥಕ ತೆ ಹೊಂದಲು ಹಾಗೂ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಲು ಹಾಗೂ ಸಾಧನೆಯ ಪಥದತ್ತ ಸಾಗಲು ಮಹಿಳೆಗೆ ಶಿಕ್ಷಣ ಬೇಕೇ ಬೇಕು.

ಸರ್ವ ಶಿಕ್ಷಣ ಅಭಿಯಾನದ ‘ಎಲ್ಲರಿಗಾಗಿ ಶಿಕ್ಷಣ; ಶಿಕ್ಷಣಕ್ಕಾಗಿ ಎಲ್ಲರೂ’ ಎಂಬ ತತ್ವದಡಿಯಲ್ಲಿ ಮಹಿಳೆಗೆ ಶಿಕ್ಷಣ ಪಡೆಯುವ ಹಕ್ಕು ಒಂದು ಮೂಲಭೂತ ಹಕ್ಕಿನ ಮಾನ್ಯತೆ ನೀಡಿದೆ. ಇದರಲ್ಲಿ ಗಂಡು-ಹೆಣ್ಣು ಎಂಬ ಭೇದ ಭಾವವಿಲ್ಲ. ಹೀಗಾಗಿ ಇಂದು ಸ್ತ್ರೀ-ಮಹಿಳೆಯು ಎಲ್ಲ ಹಂತದ ಶಿಕ್ಷಣವನ್ನು ಪಡೆಯುವದರ ಮೂಲಕ ತನ್ನಲ್ಲಿರುವ ಕಲಿಕ ಶಕ್ತಿ, ಪಡೆದ ಜ್ಞಾನ, ವೈಚಾರಿಕತೆ, ಕ್ರೀಯಾಶೀಲತೆ, ಚಿಂತನಾಶೀಲತೆ, ಕೌಶಲ್ಯಗಳು ಅವಳಿಗೆ ಉತ್ತಮ ಶೈಕ್ಷಣಿಕ ವಾತಾವರಣವು ದೊರೆತು ಅವಳಿಗೆ ವಿಭಿನ್ನ ಅವಕಾಶಗಳು ದೊರೆಯುತ್ತಿರುವದಕ್ಕೆ ಅವಳ ಸಾಧನೆಯೇ ಸಾಕ್ಷಿಯಾಗಿದೆ.

ಹೀಗೆ ಉದಾತ್ತವಾದ ಶಿಕ್ಷಣ ಪಡೆದು ಕಾನೂನಿನ ಚೌಕಟ್ಟಿನಲ್ಲಿ ‘ಎಲ್ಲರೂ ಸಮಾನರು, ಯಾವ ಕೆಲಸಗಳು ಕೀಳಲ್ಲ’ ಎಂಬ ವಿಷಯ ಮನಗಂಡು ತನ್ನಲ್ಲಿರುವ ಮಾನವೀಯ ಮತ್ತು ವೈಚಾರಿಕತೆಯ ಚಿಂತನೆಯನ್ನು ಬೆಳೆಸಿಕೊಂಡು ಅಡುಗೆ ಮನೆ ಕೆಲಸ-ಕಾರ್ಯಗಳಿಗೆ ಮಾತ್ರ ಸೀಮೀತವಾಗಿದ್ದ ಆಕೆ ಇಂದು ತಾನು ಇತರ ರಂತೆ ಎಲ್ಲದರಲ್ಲಿಯೂ ಸಮರ್ಥಳು ಮತ್ತು ಸಾಧಕಳು ಎಂಬುದನ್ನು ಸಾಬೀತುಪಡಿಸಿದ್ದಾಳೆ.

ಅದರಂತೆ ಆಕೆ ಕೃಷಿ, ಕೈಗಾರಿಕೆ, ವ್ಯವಹಾರ, ವ್ಯಾಪಾರ, ಹಣಕಾಸು, ವಿಮೆ, ಬ್ಯಾಂಕಿಂಗ್, ಇತರ ಸಾರ್ವಜನಿಕ ವಲಯದಲ್ಲಿನ ಸಂಸ್ಥೆಗಳಲ್ಲಿ ಸರ್ವಶ್ರೇಷ್ಠ ಸ್ಥಾನಮಾನವನ್ನು ಪಡೆದು ಮತ್ತು ಇತರ ಸೇವಾ ಕ್ಷೇತ್ರಗಳಲ್ಲಿಯೂ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಉತ್ತಮ ಸಾಧನೆ ಗೈದು ಪುರುಷರಂತೆ ತಮ್ಮದೇ ಆದ ಛಾಪು ಮೂಡಿಸಿರುವದು ಆಕೆಯು ಪಡೆದ ಶಿಕ್ಷಣದಿಂದಲೇ ಮಾತ್ರ ಎಂಬುದು ಸತ್ಯವಾದ ಮಾತು.

ಸ್ವಸಹಾಯ ಸಂಘ 

ಮಹಾರಾಷ್ಟ್ರದ ಸಾತಾರಾ ಜಿಲ್ಲೆಯ ಗಾಲಾ ಸಿನ್ಹ ಎಂಬ ಸಾಮಾನ್ಯ ಮಹಿಳೆಯು ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಸ್ವ-ಸಹಾಯ ಗುಂಪುಗಳ ಮೂಲಕ ಮೈಕ್ರೋ ಫೈನಾನ್ಸ್ ನಂತಹ ಹಣಕಾಸು ವ್ಯವಹಾರಗಳ ಬಗ್ಗೆ ಜ್ಞಾನ ನೀಡುತ್ತಾ, ಅವರದೇ ಆದ ಗ್ರಾಮೀಣ ಕರಕುಶಲ ಕೈಗಾರಿಕೆಗಳಾದ ಕಮ್ಮಾರಿಕೆ, ಕಂಬಾ ರಿಕೆ, ಬಡಿಗತನ ಗಳಂತಹ ಸ್ವಯಂ ಉದ್ಯೋಗಗಳಿಗೆ ಪ್ರೋತ್ಸಾಹ-ಉತ್ತೇಜನ ನೀಡುತ್ತಿದ್ದಾರೆ.

ಇಂದು ಮನ್ ದೇಸಿ ಹೆಸರಿನಲ್ಲಿ ಮಹಿಳೆಯರಿಂದ ಹಾಗೂ ಮಹಿಳೆಯರಿಗಾಗಿಯೇ ಸಂಸ್ಥೆಯನ್ನು ತೆರೆದು ಅದರಡಿಯಲ್ಲಿ ಸಹಕಾರಿ ಬ್ಯಾಂಕ್, ಬಿಸಿನೆಸ್ ಸ್ಕೂಲ್, ಮತ್ತು ಸಮುದಾಯ ರೇಡಿಯೋ, ಛೇಂಬರ್ ಆಫ್ ಕಾಮರ್ಸ ಎಂಬ ಅಂಗಸಂಸ್ಥೆಗಳಿಂದ ತನ್ನ ಕಾರ್ಯನಿರ್ವಹಿಸುತ್ತಿರುವ ದೇಶದ ಪ್ರಥಮ ಮಹಿಳಾ ಸಂಸ್ಥೆ ಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವದು ಮಹಿಳೆಯ ಸಾಧನೆಗೆ ಕೈ ಕನ್ನಡಿಯಾಗಿದೆ.

ಹೀಗೆ ಸ್ತ್ರೀ ತಾನು ಕಂಡ ಕನಸಗಳನ್ನು ನನಸಾಗಿಸಲು ತನ್ನಲ್ಲಿರುವ ಪ್ರತಿಭೆಯನ್ನು ಒರೆಗಲ್ಲಿಗೆ ಹಚ್ಚಿ, ಸತತ ಪ್ರಯತ್ನ, ಕಠಿಣ ಪರಿಶ್ರಮ, ಕಾರ್ಯದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಧನಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸಗಳೆಂಬ ಯಶೋಮಾರ್ಗಗಳನ್ನು ಅನುಸರಿಸುತ್ತಾ ಮುನ್ನಡೆಯುತ್ತಿದ್ದಾಳೆ. ಇವುಗಳಿಂದ ತನ್ನ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಂಡು ಶೈಕ್ಷಣಿಕ ಸಾಮಾಜಿಕ, ಆರ್ಥಿಕ, ರಾಜಕೀಯ ಜೀವನ-ಬದುಕಿನಲ್ಲಿ ಎದುರಾಗುವ ಸೋಲು-ಕಂಡ ಕಹಿ ಅನುಭವ, ಸಮಸ್ಯೆ,
ಸಂದಿಗ್ಧ ಪರಿಸ್ಥಿತಿ, ಸನ್ನಿವೇಶಗಳಲ್ಲಿ ವೃತ್ತಿ ಪರವಾದ ಅವಕಾಶಗಳ ಅರಿವು ಮತ್ತು ಸಮರ್ಥವಾದ ಪರಿಹಾರ ಕಂಡುಕೊಂಡು ಸೃಜನಾತ್ಮಕ ಚಿಂತನೆ, ವೃತ್ತಿ ಕೌಶಲ, ಕುಟುಂಬದೊಂದಿಗಿನ ಸಂಬಂಧ, ಸಹಬಾಳ್ವೆ, ಕೌಟುಂಬಿಕ ಮತ್ತು ಸಾಮಾಜಿಕ ಜವಾಬ್ದಾರಿಗಳಲ್ಲಿ ಲಿಂಗ-ಸಮಾನತೆ, ಸಮಾನ ಅವಕಾಶ, ಬದುಕಿನ ಗುರಿಯನ್ನು ಮುಟ್ಟಲು ಆಕೆಗೆ ನೆರವಾಗಿದ್ದು ಶಿಕ್ಷಣ.

ಮಹಿಳೆಯರು ಕೌಶಲ, ವಿದ್ಯಾಭ್ಯಾಸ ಪಡೆಯುವದರ ಜತೆಗೆ, ಹೊಸ ಹೊಸ ಸಾಹಸಗಳನ್ನು ಕೈಗೊಳ್ಳಲು ನಮ್ಮ ಸಮಾಜ ಸೂರ್ತಿಯಾಗಬೇಕು. ಆಗಲೇ ಉತ್ತಮ ಸಮಾಜವನ್ನು ಕಟ್ಟಲು ನಮ್ಮಿಂದ ಸಾಧ್ಯ.