Friday, 13th December 2024

ಹೆಣ್ಣು ಮಕ್ಕಳೇ ಸ್ಟ್ರಾಂಗ್‌ ಕಣ್ರೀ !

ವೇದಾವತಿ ಹೆಚ್.ಎಸ್.

ಹೆಣ್ಣು ಅಬಲೆ ಎಂಬ ಪರಿಕಲ್ಪನೆಯನ್ನು ಹಿಂದಿನಿಂದಲೂ ನಮ್ಮ ಸಮಾಜವು ಹುಟ್ಟುಹಾಕಿ, ಪೋಷಿಸಿಕೊಂಡು ಬಂದಿತ್ತು. ಆದರೆ ಈಗ ಕಾಲ ಬದಲಾಗುತ್ತಿದೆ. ಹೆಂಡತಿಯು ತನ್ನ ಗಂಡನಿಗೆ ಸರಿಸಮಾನಳಾಗಿ ಕರ್ತವ್ಯ ನಿಭಾಯಿಸ ಬಲ್ಲಳು. ಇಂದಿನ ಲಾಕ್‌ಡೌನ್ ದಿನಗಳಲ್ಲಿ ಗಂಡನಿಗೆ ಕಸ ಗುಡಿಸುವ ಕೆಲಸ ಹಚ್ಚಿ, ಆಫೀಸ್ ಕೆಲಸದಲ್ಲಿ ಹೆಚ್ಚಿನ ಯಶಸ್ಸು ಕಾಣುತ್ತಿರುವ ಹೆಂಡತಿಯರೂ ಅಲ್ಲಲ್ಲಿ ಎದ್ದು ಕಾಣುತ್ತಿದ್ದಾರೆ!

ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆಗಳಲ್ಲಿ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹುಡುಗರಿಗಿಂತ ಹುಡುಗಿಯರೇ ಮೇಲುಗೈ ಸಾಧಿಸಿರುತ್ತಾರೆ. ಆನಂತರವೂ ಕೆಲವೇ ಕೆಲವು ಹೆಣ್ಣು ಮಕ್ಕಳು ಸಾಧನೆಯ ಮೆಟ್ಟಿಲು ಹತ್ತಿ ಉನ್ನತ ಸ್ಥಾನಕ್ಕೆ ತಲುಪಿರುತ್ತಾರೆ.

ಹಾಗಾದರೆ ಉಳಿದ ಹೆಣ್ಣು ಮಕ್ಕಳು ಎಲ್ಲಿ ಮರೆಯಾದರೆಂದು ಯೋಚಿಸುವಾಗ ಅವರಿಗೆ ಮದುವೆಯಾದ ನಂತರ (ಮತ್ತು
ಮುಂಚೆ ಸಹ) ತಮ್ಮ ಕುಟುಂಬದಲ್ಲೇ ಸರಿಯಾದ ರೀತಿಯಲ್ಲಿ ಪ್ರೋತ್ಸಾಹ, ಮಾರ್ಗದರ್ಶನ ಸಿಗದೇ ಅವರೆಲ್ಲರೂ ಎಲೆಮರೆಯ ಕಾಯಿಯಾಗಿ ಅವರಲ್ಲಿರುವ ಅಪಾರ ಜ್ಞಾನ ಸಂಪತ್ತು ಹೊರ ಪ್ರಪಂಚಕ್ಕೆ ಬರದೇ ಮರೆಯಾಗಿ ಹೋಗಿರುತ್ತಾರೆ.

ಅದೊಂದು ಕಾಲವಿತ್ತು. ಹುಡುಗಿಯರು ಮನೆ ಕೆಲಸವನ್ನು ಮಾಡುತ್ತಾ ಅಮ್ಮನಿಗೆ ಅಡುಗೆ ಕೆಲಸದಲ್ಲಿ ನೆರವಾಗುವುದರ
ಜತೆ, ಕುಟುಂಬದಲ್ಲಿರುವ ಹಿರಿಯರ ಯೋಗಕ್ಷೇಮದ ಬಗ್ಗೆಯೂ ಗಮನಹರಿಸಬೇಕಾಗಿತ್ತು. ಹೆಣ್ಣು ಮಗಳು ಅಡುಗೆ
ಕೆಲಸ ವನ್ನು ಕಲಿತರೆ ಸಾಕೆಂದು ಬಹಳಷ್ಟು ತಂದೆತಾಯಿಯು ಹೇಳುತ್ತಿದ್ದ ಕಾಲ ಅಂದಾಗಿತ್ತು. ಹೆಣ್ಣು ಮಕ್ಕಳಿಗೆ ಕಾಲೇಜು ಶಿಕ್ಷಣ ಮುಗಿಯುವ ಮೊದಲೇ ವಿವಾಹ ಬಂಧನಕ್ಕೆ ದೂಡಲಾಗುತ್ತಿತ್ತು.

ವಿವಾಹದ ನಂತರ ಗಂಡ, ಮನೆ, ಮಕ್ಕಳ ಜವಾಬ್ದಾರಿ ಅವಳ ಹೆಗಲಿಗೆ ಬೀಳುತ್ತಿತ್ತು. ತನ್ನ ಸಂಸಾರದ ಹೊರೆಯನ್ನು ಹೆಗಲಿಗೆ ಹೊತ್ತುಕೊಂಡ ಹೆಣ್ಣೊಬ್ಬಳು ತನ್ನ ಆಸೆ ಆಕಾಂಕ್ಷೆಗಳನ್ನು ತನ್ನಲ್ಲೇ ಅದುಮಿಡುತ್ತಾ ಗಂಡ,ಮಕ್ಕಳ ಏಳಿಗೆಯ ಕಡೆಗೆ ಜೀವನವನ್ನು ಬದಲಾಯಿಸಿಕೊಂಡು ಅವರುಗಳ ಏಳಿಯೇ ತನ್ನ ಸುಖವೆಂದು ಅಂದುಕೊಳ್ಳುತ್ತಾ ಇರುವುದರಲ್ಲೇ ಸಂತೋಷದ ಜೀವನ ಕಾಣುತ್ತಿದ್ದಳು.

ಆದರೆ ಕಾಲ ಬದಲಾಗಿದೆ. ಹುಡುಗಿಯರ ಬಗ್ಗೆ ಕೇವಲ ಹೆತ್ತವರಷ್ಟೇ ಅಲ್ಲ, ಸಮಾಜದ ಯೋಚನಾ ಶೈಲಿಯೂ ಬದಲಾಗಿದೆ. ಇಂದಿನ ಯುಗದಲ್ಲಿ ಹುಡುಗಿಯರು ಹುಡುಗರಿಗಿಂತ ಪ್ರತಿಯೊಂದು ಕ್ಷೇತ್ರದಲ್ಲೂ ಮುಂದೆ ಸಾಗುತ್ತಿದ್ದಾರೆ. ಹೆಣ್ಣು ಮನೆ
ಕೆಲಸಕ್ಕೆ ಮಾತ್ರ ಸೀಮಿತವೆಂಬ ವಾದವನ್ನು ತಳ್ಳಿ ಹಾಕುತ್ತಾ ತನಿಗಿಷ್ಟವಿರುವ ಕ್ಷೇತ್ರಗಳಲ್ಲಿ ಜವಾಬ್ದಾರಿಯುತವಾಗಿ ಕೆಲಸಕಾರ್ಯಗಳನ್ನು ನಿರ್ವಹಿಸುತ್ತಾ ತಾನು ಅಬಲೆಯಲ್ಲ, ಸಬಲೆಯೆಂದು ತೊರಿಸಿಕೊಟ್ಟಿದ್ದಾಳೆ.

ಆದರೆ ಗಂಡು ಮಕ್ಕಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸುವಲ್ಲಿ ವಿಫಲವಾಗಿದ್ದಾರೆಂದು ಹೇಳುತ್ತಿಲ್ಲ. ಹೆಣ್ಣು
ಮಕ್ಕಳು ಮನೆಯ ಜವಾಬ್ದಾರಿ ನಿಭಾಯಿಸುವುದರ ಜೊತೆಗೆ ಬಾಹ್ಯ ಪ್ರಪಂಚದಲ್ಲೂ ತಮ್ಮ ಹೆಜ್ಜೆ ಗುರುತನ್ನು ಮೂಡಿಸುತ್ತಿರು ವುದು ಎಲ್ಲರೂ ಹುಬ್ಬೇರಿಸುವಂತೆ ಮಾಡುತ್ತಿದೆ. ಒಂದು ಮನೆಯಲ್ಲಿ ಇಬ್ಬರು ಮಕ್ಕಳಿದ್ದು, ಅವರಲ್ಲಿ ಒಂದು ಗಂಡು, ಇನ್ನೊಂದು ಹೆಣ್ಣು ಇದ್ದರೆ, ಅವರಿಬ್ಬರಲ್ಲಿ ಅಜಗಜಾಂತರ ವ್ಯತ್ಯಾಸವಿರುತ್ತದೆ. ಅದಕ್ಕೆ ಕಾರಣ ಹೆತ್ತವರೇ ಎನ್ನಬಹುದು.

ಗಂಡು ಮಗುವೆಂದು ಅವನಿಗೆ ಮನೆ ಕೆಲಸ ಕಲಿಸದೇ ಹೊರ ಜಗತ್ತಿನಲ್ಲಿ ದುಡಿಯಲು ಮಾತ್ರ ಸೀಮಿತವೆಂದು ಭಾವಿಸುವುದು ಕೂಡ ಗಂಡು ಮಕ್ಕಳಿಗೆ ಮನೆ ಮತ್ತು ತನ್ನ ದುಡಿಯುವ ಕಛೇರಿ ಎರಡೂ ಕಡೆಗಳಲ್ಲಿ ನಿಭಾಯಿಸಲು ಕಷ್ಟವಾಗುತ್ತಿರುವುದು. ಕೆಲವು ಮನೆಗಳಲ್ಲಿ ಗಂಡು ಮಗನನ್ನು ಉತ್ತಮ ಶಾಲೆಗೆ, ಕಾಲೇಜಿಗೆ, ಕೋರ್ಸ್‌ಗೆ ಸೇರಿಸಿ, ಆ ಹುಡುಗನ ತಂಗಿಯನ್ನು ಸಾಧಾರಣ ಶಾಲೆಗಳಲ್ಲಿ ಓದಿಸುವುದನ್ನು ಸಹ ನೋಡುತ್ತಿದ್ದೇವೆ!

ಬಾಲ್ಯದಿಂದಲೇ ನಿಯಮಗಳು
ಹೆತ್ತವರು ಮಕ್ಕಳಿಗೆ ಬಾಲ್ಯದಿಂದಲೇ ಕೆಲವು ನೀತಿ ನಿಯಾಮಾವಳಿಗಳನ್ನು ಹಾಕಿರುತ್ತಾರೆ. ಅವುಗಳು ಹೇಗಿವೆಯೆಂದರೆ, ಗಂಡು
ಮಕ್ಕಳನ್ನು ಇನ್ನಷ್ಟು ಹಠಮಾರಿ ಮತ್ತು ಸೋಮಾರಿಗಳನ್ನಾಗಿ ಮಾಡುವಂತಾಗಿರುತ್ತವೆ. ಗಂಡು ಮಗ ಅತ್ತುಬಿಟ್ಟರೆ ಅವನಿಗೆ
ನೀನು ಅಳಬಾರದು, ನೀನು ಗಂಡು, ಅಳುವುದೇನಿದ್ದರೂ ಹೆಣ್ಣು ಮಕ್ಕಳ ಕೆಲಸವೆಂದು ಹೇಳುತ್ತಾ ಸಾಕಿ ಸಲಹುವುದನ್ನು
ನೋಡಿದ್ದೇವೆ. ಇಂತಹ ಭೋಧನೆಯಿಂದ ಗಂಡು ಮಕ್ಕಳು ಮನೆಯ ಕೆಲಸ ಕಾರ್ಯಗಳಿಂದ ದೂರವಿರುವಂತೆ ಮಾಡುತ್ತದೆ.

ಇಂತಹ ಭೋಧನೆಯೇ ಕೆಲವೊಮ್ಮೆ ಹೆಣ್ಣು ಎಂದರೆ ಕೀಳು, ಗಂಡು ಮೇಲು ಎಂಬ ಭೇದಭಾವ ಮೂಡಲು ಮನೆಯಿಂದಲೇ ಪ್ರಾರಂಭವಾಗುತ್ತದೆ. ಇಂತಹ ಭೇದಭಾವವು ಹುಡುಗಿಯ ಮದುವೆಯ ಸಂದರ್ಭದಲ್ಲೂ ಕಾಣುತ್ತೇವೆ. ಹೆಣ್ಣೊಬ್ಬಳು ಮನೆಯ ಕೆಲಸಕಾರ್ಯಗಳ ಜೊತೆಗೆ ಹೊರಗಿನ ಕೆಲಸವನ್ನೂ ಚೆನ್ನಾಗಿ ನಿಭಾಯಿಸುತ್ತಾಳೆಂದರೆ ಅದೇ ಗಂಡಿಗೆ ಏಕೆ ಸಾಧ್ಯವಾಗುತ್ತಿಲ್ಲ! ಹುಡುಗರಿಗೆ ಮನೆ ಕೆಲಸದಲ್ಲಿ ಹೆಣ್ಣು ಮಕ್ಕಳಿಗಿರುವಷ್ಟು ಕಾಳಜಿ, ಆಸಕ್ತಿ ಇಲ್ಲದೆ ಇರುವುದೇ ಕಾರಣವೆನ್ನಬಹುದು.

ಇಂದು ವಿವಾಹಿತ ಮಹಿಳೆಯರು ವಾರದ ಎಲ್ಲಾ ದಿನಗಳಲ್ಲೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸುತ್ತಿರುತ್ತಾರೆ. ಮಕ್ಕಳ ಜವಾಬ್ದಾರಿಯನ್ನು ಸಹ ನೋಡಿಕೊಳ್ಳುತ್ತಾರೆ. ಅದೇ ಕುಟುಂಬದ ಗಂಡನ ಕುರಿತು ಹೀಗೆ ಹೇಳಲು ಎಲ್ಲಾ ಸಂದರ್ಭದಲ್ಲಿ ಅಸಾಧ್ಯ. ವಾಸ್ತವದಲ್ಲಿ ನಮ್ಮ ಸಮಾಜದಲ್ಲಿ ಗಂಡ ಇಂಥದ್ದೇ ಕೆಲಸ ಮಾಡಬೇಕು, ಹೆಂಡತಿ ಇಂಥದ್ದೇ ಕೆಲಸ ಮಾಡ ಬೇಕೆಂಬ ಇಬ್ಬಗೆಯ ನೀತಿಯೇ ಇದಕ್ಕೆ ಕಾರಣ ಇರಬಹುದು? ಈ ಕಾರಣದಿಂದಲೇ ಗಂಡನ, ಗಂಡಸರ, ಹುಡುಗರ ವಿಚಾರಧಾರೆ ಬೇರೆಯಾಗಿರುತ್ತದೆ.

ಅಂತಹ ಕೆಲಸ ಬರೀ ಹುಡುಗಿಯರದ್ದು, ಮಹಿಳೆಯರದ್ದು, ತನ್ನ ಹೆಂಡತಿಯದ್ದು, ಅದನ್ನು ನಾನೇಕೆ ಮಾಡಬೇಕು
ಎಂಬುದಾಗಿ ಮನಸ್ಸು ಅವನಲ್ಲಿ ಹೇಳುತ್ತಿರುತ್ತದೆ.

ಪಾತ್ರೆ ತೊಳೆಯುವ ಗಂಡ
ಆದರೆ ಈಗ ಕಾಲ ಬಹಳಷ್ಟು ಬದಲಾಗಿದೆ. ಕೆಲವೊಂದು ಕುಟುಂಬದಲ್ಲಿ ಬಾಲ್ಯದಲ್ಲೇ ಹೆಣ್ಣು ಗಂಡು ಎನ್ನದೆ ಸಮಾನವಾಗಿ ಹೊಣೆಗಾರಿಕೆಯನ್ನು ವಹಿಸಿರುತ್ತಾರೆ. ಇಂದು ಹಲವು ಮನೆಗಳಲ್ಲಿ ಗಂಡಂದಿರು ಸಹ ಸೌಟನ್ನು ಹಿಡಿದು ಅಡುಗೆ ಮಾಡುತ್ತಾರೆ. ಕೊನೆಯ ಪಕ್ಷ ತಮ್ಮ ಹೆಂಡತಿ ಯರಿಗೆ ಸಹಾಯ ಮಾಡಲು ಮುಂದಾಗುತ್ತಾರೆ.

ಕೆಲವು ಮನೆಗಳಲ್ಲು ಗಂಡಂದಿರು ಕಸ ಗುಡಿಸುವುದನ್ನು ಸಹ ನೋಡಬಹುದು. ಅದರಲ್ಲೂ ಮುಖ್ಯವಾಗಿ, ಈಗಿನ ಲಾಕ್
ಡೌನ್ ದಿನಗಳಲ್ಲಿ ಮನೆಗೆಲಸದವರು ಬಾರದೇ ಇರುವಂತಹ ಅನಿವಾರ್ಯತೆ ಸೃಷ್ಟಿಯಾಗಿರುವುದರಿಂದ, ಮನೆಯ ಯಜಮಾನನು ಕಸ ಗುಡಿಸಿ, ನೆಲ ವರೆಸಿ, ಪಾತ್ರೆ ತೊಳೆದು ತನ್ನ ಹೆಂಡತಿಗೆ ಸಹಾಯ ಮಾಡುವುದನ್ನು ಹಲವು ಮನೆಗಳಲ್ಲಿ
ಕಾಣಬಹುದು. ಹೆಣ್ಣು ಮಕ್ಕಳಂತೆ ನೀಟಾಗಿ ಎಲ್ಲವನ್ನೂ ನಿಭಾಯಿಸಲು ಸಾಧ್ಯವಿಲ್ಲದಿದ್ದರೂ ಅಲ್ಪಸ್ವಲ್ಪವಾದರೂ ಮನೆ ಕೆಲಸದಲ್ಲಿ ಮನದೊಡತಿಗೆ, ಮನೆಯೊಡತಿಗೆ ಗಂಡಂದಿರು ನೆರವಾಗುತ್ತಿದ್ದಾರೆ.

ಇವೆಲ್ಲಾ ಏನೇ ಇದ್ದರೂ, ಸ್ವಲ್ಪ ಸಮಯದ ಅವಕಾಶ ಮತ್ತು ಮನೆಯವರ, ಕುಟುಂಬದ ಪ್ರೋತ್ಸಾಹ ಸಿಕ್ಕರೇ ಹೆಣ್ಣು ಮಕ್ಕಳೇ
ಎಲ್ಲಾ ಕ್ಷೇತ್ರಗಳಲ್ಲೂ ಸ್ಟ್ರಾಂಗ್ ಎನ್ನಬಹುದು!