Wednesday, 9th October 2024

ಸ್ಮೃತಿಗಳಲ್ಲಿ ಸ್ತ್ರೀ ಸ್ವಾತಂತ್ರ‍್ಯ

ಡಾ.ಜಯಂತಿ ಮನೋಹರ್

ಇಂದಿನ ಅಫ್ಘಾನಿಸ್ತಾನದ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನಮ್ಮ ಸನಾತನ ಧರ್ಮ, ಸಂಸ್ಕೃತಿಗಳಲ್ಲಿ ಸೀಯರಿಗೆ ನೀಡಿದ ಸ್ವಾತಂತ್ರ್ಯ – ಸನ್ಮಾನಗಳ ಪರಿಚಯ.

ನಮ್ಮ ಧರ್ಮಶಾಸ್ತ್ರಗಳು ಹಾಗೂ ಪುರಾಣೇತಿಹಾಸಗಳು ‘ವೇದೋ-ಖಿಲೋ ಧರ್ಮಮೂಲಮ್ – ವೇದವೇ ಎಲ್ಲಾ ಧರ್ಮದ ಮೂಲ’ ಎನ್ನುವ ಮಾತನ್ನು ಹೇಳುತ್ತವೆ. ಮಹಿಳೆಯರೂ ಸೇರಿದಂತೆ, ಯಾರೂ ಜ್ಯೇಷ್ಠರಲ್ಲ. ಯಾರೂ ಕನಿಷ್ಠರಲ್ಲ ಎನ್ನುತ್ತದೆ ವೇದ (ಅಥರ್ವ: ೧೦.೮.೨೭). ವೇದಕಾಲದಲ್ಲಿ ಮಹಿ
ಳೆಯರಿಗೆ ಬಾಲ್ಯವಿವಾಹದ ಪದ್ಧತಿ ಇರಲಿಲ್ಲ (ಋಗ್ವೇದ: ೧೦.೨೭.೧೨). ವಿಧವೆಯರ ಮರು ವಿವಾಹವಾಗುವುದು ಅಂದು ಸಾಮಾನ್ಯ ಸಂಗತಿಯಾಗಿತ್ತು (ಋ.೧೦.೧೮.೮). ಪುರುಷರಂತೆಯೇ ಗುರುಕುಲಗಳಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಜ್ಞಾನ ಪಡೆದ, ತಪೋನಿರತರಾದ ಮಹಾ ದರ್ಶನಗಳನ್ನು ಕಂಡಿರುವ ಮಹಿಳಾ ಋಷಿಗಳು ವೇದ ಮಂತ್ರಗಳಲ್ಲಿ ಕಾಣುತ್ತಾರೆ.

ಮಗಳನ್ನು ಪಡೆಯಲು ಯಾಗ ಮಾಡಿದ ಉದಾಹರಣೆಗಳಿವೆ. ಉಪನಿಷತ್ತುಗಳಲ್ಲಿ ತಂದೆ ತನ್ನ ಮಗಳನ್ನು ಗುರುಗಳ ಬಳಿ ಕರೆದೊಯ್ಯುವ ಉಲ್ಲೇಖವಿದೆ (ಬೃ.ಉ.೬.೪.೧೯). ಪಾಣಿನಿ ಹಾಗೂ ಪತಂಜಲಿಗಳ ವ್ಯಾಕರಣ ಗ್ರಂಥಗಳಲ್ಲಿ ಗುರುಕುಲಗಳಲ್ಲಿ ಬೋಧಕರಾಗಿದ್ದ ಮಹಿಳೆಯರಿಗೆ, ಆಚಾರ್ಯಾ ಮತ್ತು ಉಪಾಧ್ಯಾಯಾ ಎನ್ನುವ ಸಂಬೋಧನೆ ಕಾಣುತ್ತದೆ. ಹಾಗೆಯೇ, ಅಪಿಶಲಾ (ಅಪಿಶಲೀ ವ್ಯಾಕರಣವನ್ನು ಅಧ್ಯಯನ ಮಾಡುವವಳು) ಎಂದೂ, ಕಾಶಕೃತ್ಸ್ನಾ (ಕಾಶಕೃತ್ಸ್ನನ ಮೀಮಾಂಸಾಗ್ರಂಥವನ್ನು ಅಧ್ಯಯನ ಮಾಡುವವಳು) ಎನ್ನುವ ಉಲ್ಲೇಖ ಅಲ್ಲಿದೆ.

ವೇದಕಾಲದ ನಂತರ, ನೂರಾರು ವರ್ಷಗಳ ತರುವಾಯ ಹೊರದೇಶಗಳ ಸಂಸ್ಕೃತಿಯ ಪ್ರಭಾವದಿಂದಾಗಿ ಮಹಿಳೆಯರ ಮೇಲೆ ಹಲವಾರು ನಿರ್ಬಂಧಗಳನ್ನು ಹೇರುವ ಪದ್ಧತಿಗಳು ನಮ್ಮ ದೇಶದಲ್ಲಿ ಪ್ರಾರಂಭವಾಯಿತು. ಕನ್ಯಾಗುರುಕುಲಗಳು ಮುಚ್ಚಿದಾಗ, ಎಂಟು ವರ್ಷದ ಬಾಲೆಯರನ್ನು ವಿದ್ಯಾಭ್ಯಾಸಕ್ಕೆ ಕಳಿಸುವ ಬದಲು, ಅಷ್ಟವರ್ಷಾ ಭವೇತ್ ಕನ್ಯಾ – ವಧು ಎಂಟು ವರ್ಷ ದವಳಾಗಿರಬೇಕು ಎನ್ನುವ ನಿಯಮವನ್ನು ಪಾಲಿಸಲು ಬಾಲ್ಯವಿವಾಹ ಪದ್ಧತಿಯ ಪ್ರಾರಂಭವಾಯಿತು.

ಸಹಗಮನ ಇರಲಿಲ್ಲ 
ವೇದಕಾಲದಲ್ಲಿ ಸತಿ ಸಹಗಮನದ ಆಚರಣೆ ಇರಲಿಲ್ಲ. ಇದು ಪ್ರಮುಖ ಧರ್ಮ ಶಾಸ್ತ್ರಗಳಾದ ಮನು – ಯಾಜ್ಞವಲ್ಕ್ಯ – ಪರಾಶರ ಸ್ಮೃತಿಗಳಲ್ಲಿಯೂ ಇದು
ಕಾಣುವುದಿಲ್ಲ. ಹಾಗಾದರೆ, ಇಂತಹ ಘೋರ ಆಚರಣೆ ಭಾರತದಲ್ಲಿ ಜಾರಿಗೆ ಬಂದದ್ದು ಎಂದು ? ಸಹಗಮನದ ಮೊದಲ ದಾಖಲೆ ಪ್ರ.ಶ.೫೧೦ ರಲ್ಲಿ, ಮಾಳ್ವದ ಏರನ್ ಶಿಲಾಸ್ತಂಭದಲ್ಲಿ ಕಾಣುವ ಫಲಕದಲ್ಲಿ ಕಾಣುತ್ತದೆ. ಸಹಗಮನದ ವಿಚಾರವು ಹೆಚ್ಚು ಕಾಣುವುದು ಒಂಬತ್ತನೇ ಶತಮಾನದ ನಂತರ. ಅದಕ್ಕೆ ಮೊದಲೇ, ಈಜಿಪ್ಟ್, ಸ್ಕ್ಯಾಂಡಿನೇವಿಯಾ, ಚೀನಾ ದೇಶಗಳಲ್ಲಿ ಈ ಪದ್ಧತಿ ಇತ್ತು. ಶೃತಿ-ಸ್ಮೃತಿ-ಪುರಾಣ ಗ್ರಂಥಗಳ ನಡುವೆ ವಿರೋಧ ತೋರಿದಾಗ ವೇದ ವಾಕ್ಯವೇ ಪ್ರಮಾಣ ಎಂದು ವ್ಯಾಸ ಸ್ಮೃತಿ ಹೇಳುತ್ತದೆ.

ಶೃತಿಸ್ಮೃತಿಪುರಾಣಾನಾಂ ವಿರೋಧೋ ಯತ್ರ ದೃಶ್ಯತೇ /
ತತ್ರ ಶ್ರೌತಂ ಪ್ರಮಾಣಂತು ತರ್ಯೋರ್ವೈಧೇ
ಸ್ಮೃತಿರ್ತ್ವರಾ // ವ್ಯಾಸ ಸ್ಮೃತಿ :೧-೫-೪

ಆದರೆ, ವೇದಕಾಲಾನಂತರ ಬಂದ ಕೆಲವು ಧರ್ಮ ಶಾಸ್ತ್ರಗಳಲ್ಲಿ ಕಾಲಕ್ರಮೇಣ ಸೇರ್ಪಡೆಯಾಗಿರುವ ಹಲವಾರು ವಿಚಾರಗಳು ವೇದಧರ್ಮದಿಂದ ಬಹುದೂರ
ಹೋಗಿರುವುದು ಖೇದದ ಸಂಗತಿ. ಈ ಧರ್ಮಗ್ರಂಥಗಳು ಸಾರ್ವಕಾಲಿಕ ಸತ್ಯವನ್ನು ಹೇಳುತ್ತಿಲ್ಲ ಎನ್ನುವುದನ್ನು ಗಮನಿಸಬೇಕು. ಇವು ಆಯಾಯ ಕಾಲದಲ್ಲಿ ಪ್ರಚಲಿತವಿದ್ದ ಹಾಗೂ ಪ್ರಸ್ತುತವಾಗಿದ್ದ ನೀತಿ – ನಿಯಮಗಳ ಸಂಗ್ರಹಕೋಶ ಎನ್ನುವುದನ್ನು ಗಮನಿಸಬೇಕು. ಹಾಗಾಗಿ, ಭಾರತೀಯತೆಯ ಮೂಲವನ್ನು ಕಾಣಲು ವೇದಮಂತ್ರಗಳ ಅದ್ಯಯನಕ್ಕೇ ಹೋಗಬೇಕಾಗುತ್ತದೆ. ವೇದಕಾಲಾನಂತರದ ಗ್ರಂಥಗಳಲ್ಲಿ ಅನೇಕ ಕಡೆ ಕಾಣುವ ವೇದವಿರೋಧಿ ಹೇಳಿಕೆ ಹಾಗೂ ಆಚರಣೆಗಳನ್ನು ಗುರುತಿಸಿ, ಸತ್ಯವನ್ನು ಮನಗಾಣಬೇಕಿದೆ.