Friday, 13th December 2024

ಚಿಂತೆ ಸಮಸ್ಯೆಯೋ, ಪ್ರೇರಣೆಯೋ

ಲಕ್ಷ್ಮೀಕಾಂತ್ ಎಲ್. ವಿ.

ಎಲ್ಲರಿಗೂ ಚಿಂತೆ ಇದ್ದದ್ದೇ. ಅಕಸ್ಮಾತ್ ಇಲ್ಲದೇ ಇದ್ದರೂ ಅದು ಬಂದು ಅಂಟಿಕೊಳ್ಳುತ್ತದೆ. ಚಿಂತೆಯಿಂದ ದೂರಾಗಲು ಅಂತಹ ಸಮಸ್ಯೆಯ ಮೂಲವನ್ನು ಹುಡುಕಬೇಕು, ಅದಕ್ಕೊಂದು ಸರಳ ಪರಿಹಾರ ಕಂಡುಕೊಳ್ಳಬೇಕು, ಆ ಪರಿಹಾರವನ್ನು ಕಾರ್ಯರೂಪಕ್ಕೆ ತರಲು ಸನ್ನದ್ಧನಾಗಬೇಕು. ಆಗ ಚಿಂತೆಯಿಂದ ಹಾನಿಯಿಲ್ಲ.

ಮನುಷ್ಯನಾಗಿ ಹುಟ್ಟಿದ ಮೇಲೆ ಚಿಂತೆ ಎಲ್ಲರಿಗೂ ಇದ್ದೇ ಇರುತ್ತದೆ. ಆದರೆ ಚಿಂತೆ ಅತಿಯಾದರೆ ಚಿತೆಗೆ ದಾರಿ ಮಾಡಿಕೊಡುತ್ತದೆ ಎಂಬುದು ಲೋಕಾರೂಢಿ ಮಾತು. ಬಹುಶಃ ಎಲ್ಲರಿಗೂ ತಿಳಿದಂತೆ ಚಿಂತೆಗಳು ಅತಿಯಾಗಿ ನಮ್ಮನ್ನು ಬಾಧಿಸುತ್ತಿದ್ದರೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಅದಕ್ಕೆ ಹಿರಿಯರು ಚಿಂತೆಯಿಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂದು ಹೇಳುವುದು.
ಚಿಂತೆಗೆ ಪ್ರಮುಖ ಕಾರಣ ನಮ್ಮ ನಿರಾಶದಾಯಕ ಆಲೋಚನೆಗಳು. ಋಣಾತ್ಮಕ ಆಲೋಚನೆಗಳೇ ಹೆಚ್ಚಾಗಿ ಮನುಷ್ಯನನ್ನು ಚಿಂತೆಗೀಡು ಮಾಡುವುದು. ಸಮಸ್ಯೆಗಳ ಸರಪಳಿಗೆ ಸಿಲುಕಿದ ಮನಸ್ಸು ಬಹಳ ಬೇಗನೆ ಚಿಂತೆಗೆ ಗೂಡು ಕಟ್ಟಿಕೊಡುತ್ತದೆ. ಒಮ್ಮೊಮ್ಮೆ ಇದೇ ಚಿಂತೆ ಸಮಸ್ಯೆಗಳಿಗೆ ದಾರಿಯೂ ಕೊಡುತ್ತದೆ. ಅದೇ ಚಿಂತೆ ಮುಂದೆ ಬರುವ ಕಷ್ಟದ ಸನ್ನಿವೇಶಗಳನ್ನು ಎದುರಿಸುವುದು ಹೇಗೆ ಎಂದು ಭಯಭೀತಿಗೊಳಿಸಿದರೆ ಒಂದು ಸಮಸ್ಯೆಯೇ ಆಗುತ್ತದೆ. ಸಂಶಯ ಮತ್ತು ಆತಂಕಗೊಳಿಸುವ ಚಿಂತೆಗಳು ನಮ್ಮನ್ನ ನಿಷ್ಕ್ರಿಯಗೊಳಿಸಬಹುದು. ಆತಂಕ ಹೆಚ್ಚಾಗುತ್ತಿದ್ದಂತೆ ಭಾವನಾತ್ಮಕ ಶಕ್ತಿ ಕುಗ್ಗಿ ಚಿಂತೆ ನಮ್ಮ ದಿನನಿತ್ಯದ ಬದುಕಿನ ಶಾಂತಿಯನ್ನು ಭಗ್ನಗೊಳಿಸುತ್ತದೆ.

ಬಹಳಷ್ಟು ಮಂದಿ ಬರುವಂತಹ ಚಿಂತೆಗಳ ಬಗ್ಗೆ ಚಿಂತಿಸೋದು ಹೆಚ್ಚು. ಚಿಂತೆ ಒಮ್ಮೆ ನಮ್ಮೊಳಗಿನ ಮನಸ್ಸಿಗೆ ಹೆಜ್ಜೆ ಇಟ್ಟರೆ ಮುಗಿಯಿತು. ಅದನ್ನು ಹುಷಾರಾಗಿ ಹೊರಗೆ ಹಾಕದಿದ್ದರೆ ಅದು ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡು ಮುಂದೆ ದೊಡ್ಡ ಮೊತ್ತವನ್ನೇ ತೆರವುಂತೆ ಮಾಡುತ್ತದೆ. ಈ ಚಿಂತೆ ರಾತ್ರಿಯ ನಿದ್ದೆಯನ್ನ ಕದ್ದರೆ, ಬೆಳಿಗ್ಗೆ ಅದು ನಿಮ್ಮನ್ನು ಉದ್ವಿಗ್ನಗೊಳಿಸ ಬಹುದು. ಒಮ್ಮೊಮ್ಮೆ ಚಿಂತೆ ನಮಗೇ ಅರಿವಿಲ್ಲದಂತೆ ನಮ್ಮ ಮೇಲೆಯೇ ಸವಾರಿ ಮಾಡುತ್ತಾ ನಮ್ಮ ಮೇಲೆಯೇ ದ್ವೇಷ ಉಂಟಾಗುವಂತೆ ಮಾಡಬಹುದು.

ಇಂತಹ ಸಂದರ್ಭದಲ್ಲಿ ಚಿಂತೆಗಳ ಬಗ್ಗೆ ಚಿಂತಿಸುವುದನ್ನು ನಿಲ್ಲಿಸುವುದು ಕಷ್ಟವಾಗುತ್ತದೆ. ಹಾಗಾದರೆ ನಾವು ಯಾಕೆ ಚಿಂತಿಸ ಬೇಕು? ನಮಗೆ ಚಿಂತಿಸದೆ ಇರುವುದಕ್ಕೆ ಸಾಧ್ಯವಾಗದಿರುವುದಾದರೂ ಏಕೆ? ಲೋಕದಲ್ಲಿ ಪ್ರತಿಯೊಂದು ಜೀವಿಗೂ ತನ್ನದೇ ಆದಂತಹ ಒಂದು ಮೂಲ ಕರ್ತವ್ಯ ಇರುತ್ತದೆ. ಒಂದು ಮೂಲ ಜೀವನ ಶೈಲಿಯೂ ಇರುತ್ತದೆ. ಆ ಜೀವನ ಶೈಲಿ ಇರದ ಹೊರತು ಜೀವನ ಎಂದು ಪರಿಪೂರ್ಣವಾಗುವುದಿಲ್ಲ. ಅದಕ್ಕಾಗಿ ಶರಣರು ತಮ್ಮ ವಚನಗಳಲ್ಲಿ ಈ ಬಗ್ಗೆ ಸಾಕಷ್ಟು ಹೇಳಿದ್ದಾರೆ.

‘ಚಕೋರಕ್ಕೆ ಚಂದಿರನ ಬೆಳದಿಂಗಳ ಚಿಂತೆ’ ಏಕೆಂದರೆ ಚಂದ್ರನ ಬೆಳದಿಂಗಳೇ ಚಕೋರಕ್ಕೆ ಸೂರ್ಯೋದಯ. ಚಕೋರ ಹಕ್ಕಿಗಳು ಕಾಂತದಲ್ಲಿ ವಿಹರಿಸುವುದು ಬೆಳದಿಂಗಳಲ್ಲಿಯೇ ಹಾಗಾಗಿ ಯಾವಾಗ ಬೆಳದಿಂಗಳು ಬರುವುದೋ ಎನ್ನುವುದೇ ಅವುಗಳ ಚಿಂತೆ ಮತ್ತು ಕಾಯುವಿಕೆ.

ತಾವರೆಗೆ ಸೂರ್ಯನ ಚಿಂತೆ!
ಅದೇ ರೀತಿ ತಾವರೆಗೂ ಕೂಡ ಸೂರ್ಯೋದಯದ ಚಿಂತೆ. ಸೂರ್ಯೋದಯವಾದಾಗಲೇ ಅದು ಅರಳಬೇಕು, ತನ್ನ ಜೀವನದ
ಗರಿಷ್ಠತೆಯನ್ನ ಮುಟ್ಟಬೇಕು ಎನ್ನುವ ಹಂಬಲ. ಹಾಗೆಯೇ ಭ್ರಮರಕ್ಕೆ ಮಕರಂದ ಹೀರುವ ಚಿಂತೆ, ಅದೇ ಅವುಗಳ ಜೀವನದ ಉದ್ದೇಶ. ಹೀಗಿರುವಾಗ ಜೀವನದ ಮಧುರ ಕಾಲ, ಉದ್ದೇಶ, ಜೀವನದ ಆನಂದ ಎಲ್ಲವೂ ನಮ್ಮ ಬಳಿಯೇ ಇರುವುದರಿಂದ
ಚಿಂತೆಗೆ ಕಾರಣ ಇದ್ದಾಗ ಪರಿಹಾರವೂ ಇರುತ್ತದೆ. ಅದು ನಮ್ಮ ಜೀವನದ ಪ್ರಮುಖ ಘಟ್ಟವನ್ನು ತಲುಪುವ ಹಾದಿಯಾಗಬೇಷ್ಟೆೆ.

ಮನುಷ್ಯನ ಚಿಂತೆಯ ಮಜಲು ಇನ್ನೊಂದೇ ಬಗೆಯದು. ಹಲವು ಚಿಂತೆಗಳೂ ಸ್ವಯಂಕೃತ. ಅದರ ಪಾಡಿಗೆ ನಡೆದುಕೊಂಡು
ಹೋಗುತ್ತಿದ್ದ ಜೀವನದಲ್ಲಿ ಮೂಗು ತೂರಿಸಲು ಹೋಗುವ ಮನುಷ್ಯನು ಒಮ್ಮೊಮ್ಮೆ ತನ್ನನ್ನೇ ಚಿಂತೆಯ ಕಂದಕಕ್ಕೆ ದೂಡಿಕೊಳ್ಳುವನು!

ಸಮಸ್ಯೆ ಬಂದಾಗ, ನಿಶ್ಚಿಂತನಾಗಿ ಅದಕ್ಕೆ ಪರಿಹಾರ ಹುಡುಕುವ ಬದಲು, ಚಿಂತೆಯ ಸರಪಣಿಯನ್ನು ಹೆಣೆಯುತ್ತಾ ಏನನ್ನೂ
ಮಾಡದೇ ವಿಷಣ್ಣನಾಗುವನು. ಚಿಂತೆ ಬಂದಾಗ, ಅದರ ಸ್ವರೂಪ, ಗಾತ್ರ, ಮೂಲ, ಪ್ರಮಾಣವನ್ನು ವಿಶ್ಲೇಷಿಸಿ, ಅದಕ್ಕೊಂದು ಸರಳ ಪರಿಹಾರ ಹುಡುಕುವ ಬದಲು, ಆ ಚಿಂತೆಯು ತನ್ನ ಮೇಲೆ ಸವಾರಿ ಮಾಡುವ ಸ್ಥಿತಿಯನ್ನು ತಂದುಕೊಳ್ಳುವನು.

ಚಿಂತೆ ಮತ್ತು ಚಿತೆಯ ಮಧ್ಯೆ ನಾವು ಬದುಕುವುದಾದರೂ ಹೇಗೆ? ಚಿಂತೆಯ ಚಿತೆಯನ್ನು ಸುಡುವುದಾದರೂ ಹೇಗೆ? ಮೊದಲೇ
ಹೇಳಿದಂತೆ ಚಿಂತೆ ನಮಗೆ ನಮ್ಮ ಒಂದು ಸಮಸ್ಯೆಯನ್ನು ಪರಿಹರಿಸಲು ಪ್ರೇರಣೆ ನೀಡಬೇಕು. ಚಿಂತೆ ನಮ್ಮನ್ನು ಬಹುಕಾಲ ಬಾಧಿ
ಸುವ ಮಾನಸಿಕ ಸ್ವಭಾವ. ಹೀಗಾಗಿ ನಾವು ನೀವೆಲ್ಲಾ ಹೆಚ್ಚೆಚ್ಚು ಸಕಾರಾತ್ಮಕ ದೃಷ್ಟಿಕೋನದಿಂದ ಬದುಕಲು ಕಲಿಯಬೇಕು.

ಮನಸ್ಥಿತಿಯನ್ನು ಶಾಂವಾಗಿರುವ ರೀತಿಯಲ್ಲಿ ಮನಸ್ಸು, ಮೆದುಳನ್ನು ತರಬೇತಿಗೊಳಿಬೇಕು. ಸದಾ ಕಾಲ ಸಕಾರಾತ್ಮಕ ಆಲೋಚನೆಗಳ ಬಗ್ಗೆ ಗಮನಹರಿಸಬೇಕು. ಚಿಂತೆಗೆ ದಾರಿ ಮಾಡಿಕೊಡುವ ಸಮಸ್ಯೆಗಳನ್ನು ಪರಿಹಾರ ಕಂಡುಕೊಂಡು ಬಗೆಹರಿಸಿಕೊಳ್ಳಬೇಕು.

ಮನಸ್ಸಿನ ಧೀಶಕ್ತಿಯನ್ನು ಗಟ್ಟಿಗೊಳಿಸಿಕೊಳ್ಳಬೇಕು. ಬರುವಂತಹ ಚಿಂತೆ ನಮ್ಮ ಸಮಸ್ಯೆಗಳಿಗೆ ದಾರಿ ಹುಡುಕಿಕೊಡುವ ಪ್ರೇರಕ ಶಕ್ತಿಯಂತೆ ಕೆಲಸ ಮಾಡಬೇಕು. ಆ ರೀತಿಯಾಗಿ ನಮ್ಮ ಮನೋಸ್ಥೈರ್ಯ ವೃದ್ಧಿಸಿಕೊಳ್ಳಬೇಕು. ಹಾಗಾದಲ್ಲಿ ಮಾತ್ರ ಚಿಂತೆ ಯನ್ನು ಸುಟ್ಟು ನೆಮ್ಮದಿ ಪಡೆಯಬಹುದು. ಸಕಾರಾತ್ಮಕ ಯೋಚನೆಯಿಂದ ಸರಳ ಪರಿಹಾರದ ದಾರಿಯನ್ನು ಹುಡುಕಿ, ಆ ದಾರಿಯನ್ನು ಅನುಸರಿಸುವ ಧೈರ್ಯ ಮತ್ತು ಮನಸ್ಸು ಮಾಡಿದರೆ, ಚಿಂತೆಯನ್ನು ಎದುರಿಸಬಹುದು, ಚಿಂತೆಯನ್ನು ಬಗೆಹರಿಸಿ ಕೊಳ್ಳಬಹುದು.