Friday, 13th December 2024

ಯಕ್ಷಗಾನ ಸಾಹಿತ್ಯದ ತಳಸ್ಪರ್ಶಿ ಅಧ್ಯಯನ

ಕೃಷ್ಣಪ್ರಕಾಶ ಉಳಿತ್ತಾಯ

ಯಕ್ಷಗಾನವನ್ನು ಕನ್ನಡ ಸಾಹಿತ್ಯದ ಅಂಗವೆಂದು ಪರಿಗಣಿಸಬೇಕು, ಸಾಹಿತ್ಯ ಸಮ್ಮೇಳನಗಳಲ್ಲಿ ತಕ್ಕುದಾದ ಸ್ಥಾನ ಕೊಡಬೇಕು ಎಂಬೆಲ್ಲಾ ಬೇಡಿಕೆಗಳು ಬರುತ್ತಿರುವುದು ಗೊತ್ತಿರುವುದಷ್ಟೆ? ಇಂಥ ಸಂದರ್ಭದಲ್ಲಿ ‘ಯಕ್ಷಗಾನ ಸಾಹಿತ್ಯ ಚರಿತ್ರೆ’ ಎಂಬ ಗ್ರಂಥ
ಬಂದಿರುವುದು ಯಕ್ಷಗಾನ ಸಾಹಿತ್ಯಕ್ಕೆ ಅತ್ಯಗತ್ಯವಾಗಿ ಬೇಕಾದ ಸಾಹಿತ್ಯ ಕೈಂಕರ್ಯದಲ್ಲೋಂದು ಎಂದು ಹೇಳಬಹುದು.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಯಕ್ಷಗಾನ ಸಾಹಿತ್ಯಕ್ಕೆ ಸ್ಥಾನ ಸಿಕ್ಕಿದ್ದೇ ಕಳೆದೆರಡು ದಶಕದಲ್ಲಿ ಎಂಬುದು ತಥ್ಯ. ಯಕ್ಷಗಾನ ಸಾಹಿತ್ಯದ ಬೆಳವಣಿಗೆ, ಅದರ ರೂಪುರೇಷೆ, ಸ್ಥೂಲ ನಿರೂಪಣ ವಿಧಾನ, ಪಡೆದ ಪ್ರಭಾವ ಮತ್ತು ಮುಖ್ಯವಾಗಿ ಅವು ಬೆಳೆದ ಕಾಲ ಇವನ್ನೆಲ್ಲ ವಿವೇಚಿಸಿ ರಚಿಸಿದ ಗ್ರಂಥ ಘನೀಕೃತವಾಗಿ ಇರಲಿಲ್ಲ. ಇಂಥ ಸಂದರ್ಭದಲ್ಲಿ ಯಕ್ಷಗಾನ ಸಾಹಿತ್ಯ ಪ್ರಪಂಚಕ್ಕೆ ಈ ತರಹದ ಕೃತಿಯ ಅಗತ್ಯತೆ ಇದ್ದು ಅದರ ಕೊರತೆಯನ್ನು ಪೂರೈಸಿದವರು ಛಂದೋವಿದರೂ, ವಿದ್ವಾಂಸರೂ, ಪ್ರಸಂಗಕರ್ತರೂ ಆದ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಅವರು.

ಯಕ್ಷಗಾನ ಸಾಹಿತ್ಯದ ಕುರಿತು ಹೆಚ್ಚು ಹೆಚ್ಚಾಗಿ ಸುಹೃದ್ ಸಂವಾದಗಳು ನಡೆದರೆ, ಕವಿ-ಕೃತಿಗಳ ಬಗ್ಗೆ ಸಂವಾದಗಳು ನಡೆದರೆ ಆ ಶಕ್ತಿಯೇ ಯಕ್ಷಗಾನ ಸಾಹಿತ್ಯವನ್ನು ಮೇಲೆತ್ತುವುದು ಸಾಧ್ಯ. ಐವತ್ತು ಯಕ್ಷಗಾನ ಪ್ರಸಂಗಗಳನ್ನು ರಚಿಸಿರುವ ಕಬ್ಬಿನಾಲೆ ವಸಂತ
ಭಾರದ್ವಾಜ ಅವರು ಯಕ್ಷಗಾನದ ಕುರಿತು ರಚಿಸಿರುವ ಗ್ರಂಥಗಳೆಂದರೆ ಯಕ್ಷಗಾನ ಸಾಹಿತ್ಯ ಚರಿತ್ರೆ, ಯಕ್ಷಗಾನ ಕವಿಚರಿತ್ರೆ, ಯಕ್ಷಗಾನ ಛಂದಸ್ಸು ಒಂದು ಅಧ್ಯಯನ, ಪ್ರಸಂಗಾಭರಣ ಛಂದೋವಸಂತ (ಛಂದಶ್ಶಾಸ್ತ್ರದ ಕೆಲವು ವಿವೇಚನೆಗಳು) ಮತ್ತು ಭಾನುಮತಿಯ ನೆತ್ತ ಯಕ್ಷಗಾನ ಪ್ರಸಂಗ.

ಈಗ ಹೊರಬಂದಿರುವ ‘ಯಕ್ಷಗಾನ ಸಾಹಿತ್ಯ ಚರಿತ್ರೆ’ 504 ಪುಟಗಳ ಬೃಹತ್ ಪುಸ್ತಕ ಮತ್ತು ಸಂಶೋಧಕರಿಗೆ, ವಿದ್ಯಾರ್ಥಿಗಳಿಗೆ, ವಿದ್ವಾಂಸರಿಗೆ ಅಗತ್ಯ ಆಕರ ಗ್ರಂಥವಾಗಿ ನೆಲೆನಿಲ್ಲುವ ಮಹತ್ತ್ವದ ಕೃತಿ. ಇದರ ಓದು ಇಡೀ ಯಕ್ಷಗಾನ ಸಾಹಿತ್ಯದ ವಿಹಂಗಮ ನೋಟವನ್ನು ಕೊಡುತ್ತದೆ. ಯಕ್ಷಗಾನ ಸಾಹಿತ್ಯದ ಬೆಳವಣಿಗೆಯಲ್ಲಿ ಹಳಗನ್ನಡದ ರೂಪ-ನಿರೂಪಣಗಳ ಪಾತ್ರ, ಭಕ್ತಿಪಂಥದ
ಕೊಡುಗೆ, ಪ್ರಸಂಗ ರಚನೆಯಲ್ಲಾದ ವಿಕಾಸ ಹೀಗೆ ನಿರೂಪಿಸುತ್ತಾ ಸರಿಸುಮಾರು ಒಂಭೈನೂರು ವರುಷಗಳ ಹಿಂದಿನ ಪರಂಪರೆಯನ್ನು, ಐತಿಹಾಸಿಕ ಬೆಳವಣಿಗೆಯನ್ನು ಪುಸ್ತಕ ನಮ್ಮ ಮುಂದೆ ತೆರೆದಿಡುತ್ತದೆ.

ಈ ಪುಸ್ತಕದಲ್ಲಿ ಎಂಟು ಭಾಗಗಳಿವೆ. ಯಕ್ಷಗಾನ ಸಾಹಿತ್ಯದ ಉಗಮ ಮತ್ತು ವಿಕಾಸ, ಮೂಡಲಪಾಯ-ಪ್ರಸಂಗ ಸಾಹಿತ್ಯ, ಯಕ್ಷಗಾನದಲ್ಲಿ ಪ್ರಯೋಗಶೀಲತೆ, ಮೌಖಿಕ ಸಾಹಿತ್ಯ, ಸಂಶೋಧನೆ ಮತ್ತು ವಿಮರ್ಶೆ, ಪ್ರಮುಖ ಕವಿಗಳು, ಉಪಸಂಹಾರ ಇವುಗಳು ಪುಸ್ತಕದಲ್ಲಿ ವಿವೇಚನೆಗೊಂಡ ಭಾಗಗಳು. ಈ ಅಧ್ಯಯನದ ಬಹುಭಾಗ ಭಾರತ ಸರಕಾರದ ಸಂಸ್ಕೃತಿ ಸಚಿವಾಲಯ ದವರು ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಯೋಜನೆಯಡಿ ಡಾ.ವಸಂತ ಭಾರದ್ವಾಜರಿಗೆ ಕೊಟ್ಟ ಸೀನಿಯರ್
ಫೆಲೋಷಿಪ್ ಅಡಿಯಲ್ಲಿ ರಚಿತವಾದ್ದು.

ಕವಿರಾಜ ಮಾರ್ಗ ಮತ್ತು ನಾಗವರ್ಮನ ಕಾವ್ಯಾವಲೋಕನ ಚತ್ತಾಣ ಮತ್ತು ಬೆದಂಡೆ ಮತ್ತು ಮೇಲ್ವಾಡು ಇವುಗಳ
ರೀತಿಯನ್ನು ಹೇಳಿದ್ದನ್ನು ಪುಸ್ತಕದಲ್ಲಿ ಉಲ್ಲೇಖಿಸುತ್ತಾ ಸಾಹಿತ್ಯ ಚರಿತ್ರೆಯನ್ನು ಲೇಖಕರು ಆರಂಭಿಸುತ್ತಾರೆ. ಇದರ
ಲಕ್ಷಣವನ್ನು ಹೇಳುತ್ತಾ ಇದರ ಕುರಿತಾಗಿ ವಿದ್ವಾಂಸರ ಅಭಿಪ್ರಾಯವನ್ನು ಚರ್ಚಿಸುತ್ತಾ ಯಕ್ಷಗಾನ ಕಾವ್ಯಗಳು ಪ್ರಬಂಧಗಳು ಇದರ ಜಾಡಿನಲ್ಲೇ ಬೆಳೆದ್ದು ಎಂಬ ಬಲವಾದ ಊಹೆಯನ್ನೂ ಮುಂದಿರಿಸುತ್ತಾರೆ.

ಮುಂದೆ ಭಕ್ತಿಚಳುವಳಿಯ ಪ್ರಭಾವದಿಂದ ಯಕ್ಷಗಾನ ಸಾಹಿತ್ಯದ ಬೆಳವಣಿಗೆಯನ್ನೂ ಚರ್ಚಿಸಿದ್ದಾರೆ. ಹರಿದಾಸ ಪರಂಪರೆಯ ಹಾಡುಗಳು ಮತ್ತು ಯಕ್ಷಗಾನ ಪದಗಳು ಪರಸ್ಪರ ಆಶ್ಚರ್ಯ ಭರಿತವಾಗಿಯೂ ಪರಸ್ಪರ ಹೋಲಿಕೆಯುಳ್ಳದ್ದು (ಇದರ ಬಗೆಗೆ ಲೇಖಕರ ಛಂದೋವಸಂತ ಗ್ರಂಥವನ್ನು ಅವಲೋಕಿಸಬಹುದು) ಎಂಬುದನ್ನು ಚರ್ಚಿಸುತ್ತಾ ಯಕ್ಷಗಾನದ ಪದ್ಯಗಳ ಅಂದಿನ ಸ್ವರೂಪದ ಬಗೆಗೂ ಬೆಳಕು ಚೆಲ್ಲುತ್ತಾರೆ.

ಪೂರ್ವದಲ್ಲಿ ಇದ್ದಂಥ ರಚನೆಗಳ ರೂಪು ಸೀಮಿತತೆ ಹಾಗು ಸಾಂಗತ್ಯ ರಚನೆಯ ಇಲ್ಲದಿರುವಿಕೆ ಇವುಗಳೆಲ್ಲದರ ಚರ್ಚೆ ಆಸಕ್ತಿದಾಯಕವಾಗಿ ಇಲ್ಲಿ ನಡೆದಿದೆ. ಯಕ್ಷಗಾನದ ಮೊದಲ ಪದ್ಯಗಳಾದ ಆದಿಪರ್ವ (ಕ್ರಿ.ಶ. 1300-1350), ಕರಿರಾಯಚರಿತ್ರೆ (ಕ್ರಿ.ಶ. 1502), ವಿರಾಟಪರ್ವ (1550-1600) ಈ ಪ್ರಸಂಗಗಳ ರಾಚನಿಕ ವಿನ್ಯಾಸದ ಬಗೆಗೆ ಚರ್ಚಿಸುತ್ತಾ ಅವುಗಳ ಕಾಲವನ್ನು
ವಿವೇಚಿಸಿ ಪ್ರಸಂಗ ರಚನೆಯಲ್ಲಾದ ವಿಕಾಸದ ಬಗೆಗೆ ಅಡಿಯಿಡುತ್ತದೆ ಪುಸ್ತಕ.

ಮುಂದಿನ ಭಾಗಗಳಲ್ಲಿ ಪಡುವಲಪಾಯ ಯಕ್ಷಗಾನ ಪ್ರಸಂಗಗಳನ್ನು ಹದಿಮೂರನೆಯ ಶತಮಾನದಿಂದ ಇಂದಿನ ಕಾಲದವರೆಗೆ ವಿವೇಚನೆ ನಡೆಸಿದ್ದಾರೆ. ಮೂಡಲಪಾಯ, ದೊಡ್ಡಾಟ, ಸಣ್ಣಾಟ, ಘಟ್ಟದಕೋರೆ, ಶ್ರೀಕೃಷ್ಣಪಾರಿಜಾತ ಇವುಗಳಲ್ಲಿರುವ ಪ್ರಸಂಗ ಸಾಹಿತ್ಯವನ್ನು ಮೂರನೆಯ ಭಾಗದಲ್ಲಿ ವಿವರಿಸಿದ್ದಾರೆ.

ಯಕ್ಷಗಾನದಲ್ಲಿ ಪ್ರಯೋಗಶೀಲತೆ, ಮೌಖಿಕ ಸಾಹಿತ್ಯವಾದ ತಾಳಮದ್ದಳೆಯ ಐಹಿತ್ಯ ಬೆಳವಣಿಗೆ ಇವನ್ನು ಕುರಿತೂ ಚರ್ಚೆ ನಡೆದಿದೆ. ಸಂಶೋಧನೆ ಮತ್ತು ವಿಮರ್ಶೆ ಎಂಬ ಭಾಗದಲ್ಲಿ ಪ್ರಮುಖ ವಿಮರ್ಶಾ ಗ್ರಂಥಗಳು ಮತ್ತು ಸಂಶೋಧನಾ ಕೃತಿಗಳ ಚಿಕ್ಕ ಪರಿಚಯ ಕೊಡುತ್ತಾ ಪ್ರಮುಖ ಯಕ್ಷಗಾನ ವಿಮರ್ಶಕರ ಮತ್ತು ಪತ್ರಿಕೆಗಳ ಮತ್ತು ಕವಿಗಳ ಪಟ್ಟಿಯನ್ನೂ ಕೊಡುತ್ತಾರೆ.

ವಿದ್ವಾಂಸರಾದ ಡಾ.ಪಾದೆಕಲ್ಲು ವಿಷ್ಣರು ಭಟ್ಟರ ಮುನ್ನುಡಿಯೂ, ಜ್ಞಾನಪೀಠ ಪ್ರಶಸ್ತಿ ಪಡೆದ ಡಾ.ಚಂದ್ರಶೇಖರ ಕಂಬಾರರ ಬೆನ್ನುಡಿಯೂ ಪುಸ್ತಕದ ಗೌರವಕ್ಕೆ ಪೂರಕವಾಗಿಯೇ ಇದೆ. ಡಾ.ಶಿವರಾಮ ಕಾರಂತರ ‘ಯಕ್ಷಗಾನ ಬಯಲಾಟ’ ಪುಸ್ತಕ
ಬಂದ ಬಳಿಕ ಇಷ್ಟು ವಿಸ್ತಾರವಾದ ಯಕ್ಷಗಾನ ಸಾಹಿತ್ಯದ ಐತಿಹಾಸಿಕ ನೆಲೆಯ ಅಧ್ಯಯನ ಪ್ರಾಯಶಃ ನಡೆದಿಲ್ಲ. ಯಕ್ಷಗಾನದ ಇತಿಹಾಸದಲ್ಲಿ ಈ ಪುಸ್ತಕ ಮಹತ್ತ್ವದ ಮೈಲುಗಲ್ಲಾಗಿದೆ.