Friday, 7th October 2022

ನೂತನ ತಾಲೂಕು ಅನುಕೂಲಕ್ಕೋ? ರಾಜಕೀಯ ಹಿತಾಸಕ್ತಿಗೋ?

ಅಭಿಮತ
ಮೋಹನದಾಸ ಕಿಣಿ

ಆಡಳಿತಾತ್ಮಕ ಅನುಕೂಲತೆಗಳು ಜನರಿಗೆ ಉಪಯುಕ್ತವಾದರೆ, ಅದಕ್ಕೆ ಅರ್ಥವಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸರಕಾರದ ಕೆಲವೊಂದು ನಿರ್ಧಾರಗಳು ತೋರಿಕೆಗೆ ಜನರಿಗೆ ಉಪಯುಕ್ತವೆಂದು ಕಂಡರೂ ವಾಸ್ತವದಲ್ಲಿ ಅದರಲ್ಲಿ ರಾಜಕೀಯ ಹಿತಾಸಕ್ತಿಗೇ ಆದ್ಯತೆ.

ಹೇಗನ್ನುತ್ತೀರಾ, ನೋಡಿ. ಹಿಂದೆಲ್ಲಾ ಹೊಸ ಜಿಲ್ಲೆ, ಹೊಸ ತಾಲೂಕಿನ ರಚನೆಗೆ ಸುದೀರ್ಘ ಹೋರಾಟ ನಡೆಸುವ ಅಗತ್ಯವಿರು ತ್ತಿತ್ತು. ಈ ಉದ್ದೇಶಕ್ಕಾಗಿ ಮೂರು ಆಯೋಗಗಳನ್ನು ರಚಿಸಿ ಅವುಗಳು ವರದಿ ಸಲ್ಲಿಸಿ ದಶಕಗಳೇ ಸಂದರೂ, ಸರಕಾರಗಳು ಬದಲಾಗುತ್ತಾ ನಡೆದರೂ ಹೊಸ ತಾಲೂಕುಗಳ ರಚನೆ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿತ್ತು.

ಯಾವ ಪವಾಡವೋ ಏನೋ ಒಮ್ಮಿಂದೊಮ್ಮೆಗೆ 2018ರಲ್ಲಿ 49 ಹೊಸ ತಾಲೂಕುಗಳ ಘೋಷಣೆಯಾಯಿತು. ಅದರಲ್ಲಿ ಬಹುತೇಕ ತಾಲೂಕುಗಳು ಯಾವುದೇ ಪೂರ್ವ ತಯಾರಿಯಿಲ್ಲದೇ ಘೋಷಿತವಾದವುಗಳು! ಈ ಬದಲಾವಣೆಗೆ ಕಾರಣ ಏನಿರ ಬಹುದೆಂದು ಸೂಕ್ಷ್ಮವಾಗಿ ನೋಡಿದರೆ ಅನಿಸುವುದು ಇಷ್ಟು: ಆಯಾ ತಾಲೂಕು ವ್ಯಾಪ್ತಿಯ ಶಾಸಕರು ಪ್ರಭಾವಶಾಲಿ ಯಾದರೆ ಸಾಕು. ಇತರ ಯಾವುದೇ ಮಾನದಂಡದ ಅಗತ್ಯವಿಲ್ಲದೆ, ಸರಕಾರದ ಮೇಲೆ ಅವರು ಹೇರುವ ಒತ್ತಡದ ತೂಕಕ್ಕೆ ಅನುಗುಣವಾಗಿ,
ಜಿಲ್ಲೆಗಳು ತಾಲೂಕುಗಳು ಮಂಜೂರು. ಇದು ಸಾರ್ವತ್ರಿಕವಾಗಿ ಎಲ್ಲಾ ತಾಲೂಕುಗಳಿಗೆ ಅನ್ವಯಿಸದಿರಬಹುದು. ಆದರೆ ಕೆಲವೊಂದು ಪ್ರಕರಣಗಳಲ್ಲಿ ಗಮನಿಸಿದರೆ ಇದು ಸತ್ಯ. ಏಕೆಂದರೆ 1973ರಲ್ಲಿ ರಚಿತವಾದ ವಾಸುದೇವ ರಾವ್ ಆಯೋಗ,
1984ರಲ್ಲಿ ರಚಿಸಿದ ಹುಂಡೇಕರ್ ಸಮಿತಿ, 2007ರ ಎಂ.ಬಿ.ಪ್ರಕಾಶ್ ಸಮಿತಿಗಳಲ್ಲಿ ಯಾರೊಬ್ಬರೂ ಶಿಫಾರಸ್ಸು ಮಾಡದಿದ್ದರೂ 2018ರಲ್ಲಿ ತಾತ್ವಿಕವಾಗಿ ಅಸ್ತಿತ್ವಕ್ಕೆ ಬಂದಿರುವ ಹಾಗೂ ಸದರಿ ಆದೇಶದಿಂದ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ 2019ರ
ಫೆಬ್ರವರಿಯಲ್ಲಿ ತಾತ್ವಿಕವಾಗಿ ಅಸ್ತಿತ್ವಕ್ಕೆ ಬಂದಿರುವ ಇನ್ನೂ 12 ತಾಲೂಕುಗಳಲ್ಲಿ ಅಂತಹ ಕೆಲವು ತಾಲೂಕುಗಳಿವೆ.

ಆದರೆ ಜನರಿಗೆ ಇಷ್ಟೆಲ್ಲಾ ಹೊಸ ತಾಲೂಕುಗಳಿಂದ ನಿಜವಾಗಿಯೂ ಉಪಯೋಗವಾಗಿದೆಯೇ? ಆಡಳಿತಾತ್ಮಕ ಅನುಕೂಲತೆಗೆ ಸಣ್ಣ ಜಿಲ್ಲೆಗಳು, ಸಣ್ಣ ತಾಲೂಕುಗಳ ರಚನೆ ಅಗತ್ಯವಿದೆಯಾದರೂ ಯಾವುದೇ ನೂತನ ವ್ಯವಸ್ಥೆಯನ್ನು ಅಳವಡಿಸುವ
ಪೂರ್ವದಲ್ಲಿ ಕಂದಾಯ ಇಲಾಖೆಯಿಂದ ಆರಂಭಿಸಿ, ತಾಲೂಕು ಮಟ್ಟದ ಆಸ್ಪತ್ರೆ, ಆರೋಗ್ಯ ಇಲಾಖೆ, ನೋಂದಣಿ, ಭೂಮಾಪನ ಮುಂತಾದ 15ರಿಂದ 20 ಹೊಸದಾಗಿ ಆರಂಭವಾಗಬೇಕಾದ ಇಲಾಖೆಗಳ ಬಗ್ಗೆ ವರದಿ ತಯಾರಿ ಮಾಡುವ, ಅಂತಹ ವರದಿಯಲ್ಲಿ ಪ್ರತಿಯೊಂದು ಇಲಾಖೆಗೆ ಅಗತ್ಯವಿರುವ ಸೌಲಭ್ಯಗಳು, ಸ್ಥಳಾವಕಾಶ ಸೇರಿದಂತೆ ಮೂಲಸೌಕರ್ಯ ಮತ್ತು ಅದಕ್ಕೆ ತಗಲಬಹುದಾದ ವೆಚ್ಚ ಇವುಗಳ ಅಂದಾಜು ತಯಾರಿಸಿ, ಸಮಗ್ರ ಮಂಜೂರಾತಿ ನಂತರವಷ್ಟೇ ಹೊಸ ತಾಲೂಕುಗಳ ಘೋಷಣೆ
ಯಾದರೆ ಮಾತ್ರ ಅದು ಪರಿಪೂರ್ಣ ಫಲಿತಾಂಶ ನೀಡಬಲ್ಲದು. ಆದರೆ ಇಲ್ಲಿ ಕೆಲವೊಂದು ಇಲಾಖೆಗಳಿಗೆ ಅನ್ವಯಿಸಿ ಈಗಾಗಲೇ ಇರುವ ಮೂಲ ಕಚೇರಿಯಿಂದ ಒಂದಷ್ಟು ಸಿಬ್ಬಂದಿ ಹುದ್ದೆಗಳನ್ನು ವಿಂಗಡಿಸಿ ನೇಮಿಸಿದರೂ ಹೆಚ್ಚಿನ ಸಿಬ್ಬಂದಿಗಳನ್ನು ಹೊಸದಾಗಿ ಮಂಜೂರು ಮಾಡುವ ಅಗತ್ಯವಿದ್ದೇ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಮಿನಿ ವಿಧಾನಸೌಧದ ಪರಿಕಲ್ಪನೆಯಿದ್ದು ಅದರಲ್ಲಿ ಬಹುತೇಕ ತಾಲೂಕು ಮಟ್ಟದ ಕಚೇರಿಗಳಿಗೆ ಸ್ಥಳಾವಕಾಶ ಒದಗಿಸುವ ಪದ್ಧತಿ ಇದೆ. ಆದರೆ ಕೆಲವು ಇಲಾಖೆಗಳಿಗೆ ಸಂಪೂರ್ಣವಾಗಿ ಎಲ್ಲವನ್ನೂ ಹೊಸದಾಗಿ ಒದಗಿಸಬೇಕಾಗುತ್ತದೆ ಹಾಗೂ ಪ್ರತ್ಯೇಕ ಕಟ್ಟಡವೂ ಬೇಕಾಗುತ್ತದೆ. ಉದಾಹರಣೆಗೆ ತಾಲೂಕು ಆಸ್ಪತ್ರೆ.

ಈ ಇಲಾಖೆಗೆ ಅನ್ವಯಿಸಿ ಹಿಂದಿನ ಕಚೇರಿಗಳ ಸಿಬ್ಬಂದಿ ವಿಂಗಡಣೆ ಸಾಧ್ಯವಿಲ್ಲ. ಹೊಸದಾಗಿ ಕನಿಷ್ಠ 100 ಹಾಸಿಗೆಗಳ ಆಸ್ಪತ್ರೆ, ಅಗತ್ಯ ಸಿಬ್ಬಂದಿ, ಮೂಲ ಸೌಕರ್ಯ, ಇತ್ಯಾದಿ. ಈ ಇಲಾಖೆಗೆ ಕನಿಷ್ಠ ಐದು ಎಕರೆ ಸ್ಥಳವನ್ನು ಗುರುತಿಸಿ, ರಸ್ತೆ ಸಂಪರ್ಕ ಇರುವ
ಪ್ರದೇಶದಲ್ಲಿ ನಿರ್ಮಿಸಿದರೆ ಮಾತ್ರ ಹೊಸ ತಾಲೂಕು ಆಸ್ಪತ್ರೆ ನಿರ್ಮಾಣ ಸಾಧ್ಯ. ಆಗ ಮಾತ್ರ ಹೊಸ ತಾಲೂಕು ಮಂಜೂರಾತಿಗೂ ಅರ್ಥ. ಇದೇ ವೇಳೆ ತಾಲೂಕು ಪಂಚಾಯತ್ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಕಚೇರಿಗಳನ್ನು ಕೂಡಾ ಹೊಸದಾಗಿ ಸೃಷ್ಟಿಸಬೇಕಾಗುತ್ತದೆ.

ಹೊಸ ತಾಲೂಕಿನ ವಿಷಯ ಹಾಗಿರಲಿ, ಶೋಚನೀಯವೆಂದರೆ, 1997ರಲ್ಲಿ ಅಂದರೆ 22 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ನೂತನ ಜಿಲ್ಲೆ ಉಡುಪಿಗೆ ಇದುವರೆವಿಗೂ ಜಿಲ್ಲಾ ಮಟ್ಟದ ಆಸ್ಪತ್ರೆಗೆ ಅಗತ್ಯವಿರುವ ಕಟ್ಟಡ, ಸಿಬ್ಬಂದಿ, ಹೆಚ್ಚುವರಿ ಹಾಸಿಗೆ,
ಅಥವಾ ಇನ್ನಿತರ ಯಾವುದೇ ಮೂಲಭೂತ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ. ಹೀಗಿರುವಾಗ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು ಕನಸಿನ ಮಾತೇ ಸರಿ. ವೈದ್ಯಕೀಯ ಕಾಲೇಜು ಭಾರತೀಯ ವೈದ್ಯಕೀಯ ಮಂಡಳಿಯ ಮಾರ್ಗದರ್ಶಿ ಸೂತ್ರಗಳನ್ವಯ ಕಾರ್ಯ ನಿರ್ವಹಿಸಬೇಕಾದರೆ ಸುಸಜ್ಜಿತ ಆಸ್ಪತ್ರೆ ಹಾಗೂ ಅಗತ್ಯ ಸಂಖ್ಯೆಯ ಒಳರೋಗಿಗಳು, ಅವರಿಗೆ ಚಿಕಿತ್ಸೆ ಮತ್ತು ಬೋಧನೆ ನೀಡಲು ತಜ್ಞ ವೈದ್ಯಕೀಯ ಸಿಬ್ಬಂದಿ ಮತ್ತು ಪೂರಕ ಸೌಲಭ್ಯಗಳ ಅಗತ್ಯವಿದೆ.

ವಿಪರ್ಯಾಸವೆಂದರೆ ನೆರೆಯ ಉತ್ತರ ಕನ್ನಡ ಜಿಲ್ಲೆ ಮತ್ತು ಹೈದರಾಬಾದ್ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜುಗಳಿವೆ. ಆದರೆ ಸುಸಜ್ಜಿತ ಆಸ್ಪತ್ರೆ ಇಲ್ಲ, ಮೇಲಾಗಿ ರೋಗಿಗಳ ಸಂಖ್ಯೆಯೂ ಅಷ್ಟೊಂದು ಇಲ್ಲ. ಅದೇ ಉಡುಪಿ
ಜಿಲ್ಲಾ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಕಾರವಾರ ಆಸ್ಪತ್ರೆಗಿಂತ ಹತ್ತುಪಟ್ಟು ಹೆಚ್ಚು ಇದೆ. ಆದರೆ ವೈದ್ಯಕೀಯ ಕಾಲೇಜು ಇಲ್ಲ. ಇದೇ ನೋಡಿ – ಹಲ್ಲಿದ್ದವರಿಗೆ ಕಡಲೆಯಿಲ್ಲ, ಕಡಲೆಯಿದ್ದರೆ ಹಲ್ಲಿಲ್ಲ ಎಂಬ ಸ್ಥಿತಿ. ಇದು ಒಂದು ಇಲಾಖೆಯ ಕಥೆಯಾದರೆ
ಇಂಥ ಅದೆಷ್ಟು ಇಲಾಖೆಗಳಿವೆಯೋ? ಉಡುಪಿ ಜಿಲ್ಲೆಯ ಬ್ರಹ್ಮಾವರ, ಬೈಂದೂರು ತಾಲೂಕುಗಳಲ್ಲಿ ವಿಶೇಷ ತಹಸೀಲ್ದಾರರ ಕಚೇರಿ ಇತ್ತು. ಜತೆಗೆ ಹೆಬ್ರಿ ತಾಲೂಕಿಗೂ ಹಿಂದಿನಿಂದಲೂ ಪ್ರಸ್ತಾವನೆಯಿತ್ತು. ಬ್ರಹ್ಮಾವರ, ಬೈಂದೂರು, ಹೆಬ್ರಿಗಳಲ್ಲಿ ಉಪ ಖಜಾನೆ, ಬ್ರಹ್ಮಾವರ, ಬೈಂದೂರಿನಲ್ಲಿ ಉಪ ನೋಂದಣಿ ಅಧಿಕಾರಿಗಳ ಕಚೇರಿ ಇತ್ತು.

ಆಶ್ಚರ್ಯವೆಂದರೆ ಯಾವುದೇ ಪೂರ್ವ ಸೂಚನೆಯಿಲ್ಲದೆ ಕಾಪು ತಾಲೂಕು ಮಂಜೂರಾಗಿದೆ. ಒಂದು ವರ್ಷ ಕಳೆಯುವಷ್ಟರಲ್ಲಿ ಇಲ್ಲಿ ಕಾರ್ಯನಿರ್ವಹಿಸಿದ ತಹಸೀಲ್ದಾರರ ಸಂಖ್ಯೆೆ ಅರ್ಧ ಡಜನ್ ಮೀರಿದೆ. ಇದು ಒಂದು ತಾಲೂಕಿನ ಕಥೆಯಾದರೆ, 60+ ನೂತನ ತಾಲೂಕುಗಳ ಕಥೆ ವಿಭಿನ್ನವಿರಲಾರದು. ಇನ್ನೂ ವಿಚಿತ್ರವೆಂದರೆ1997ರ ಆಗಸ್ಟ್‌ ತಿಂಗಳಲ್ಲಿ ಉಡುಪಿ ಜಿಲ್ಲೆಯ ರಚನೆಯಾಗಿ ಕೆಲವೇ ತಿಂಗಳಲ್ಲಿ ಹಿಂದಿನ ದ.ಕ. ಜಿಲ್ಲೆಯಿಂದ ಉಡುಪಿ ಕಂದಾಯ ಜಿಲ್ಲೆಯ ವ್ಯಾಪ್ತಿಗೆ ಬರುವ ಕ್ಷೇತ್ರಗಳನ್ನು ವಿಭಜಿಸಿ ಉಡುಪಿ ಜಿಲ್ಲಾ ಪಂಚಾಯತ್ ರಚಿಸಿದ್ದೂ ಆಯಿತು, ಹೊಸ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ, ಗೂಟದ ಕಾರು, ಹೀಗೆ ಎಲ್ಲವೂ ಬಂತು – ಕೆಲವೇ ತಿಂಗಳ ಅವಧಿಗೆ! ಆದರೆ ಇನ್ನೇನು ಕೆಲವೇ ತಿಂಗಳಲ್ಲಿ ರಜತ ಮಹೋತ್ಸವ ಆಚರಣೆ ಮಾಡುವಷ್ಟು ವಯಸ್ಸಾದರೂ, ಜಿಲ್ಲಾ ಆಸ್ಪತ್ರೆಯಂಥ  ಜನರಿಗೆ ಅತ್ಯಗತ್ಯವಿರುವ ಇಲಾಖೆಗೆ ಸೌಲಭ್ಯಗಳನ್ನು ಇನ್ನೂ ಒದಗಿಸಿಲ್ಲ. ಇದೇ ರೀತಿ ಉಡುಪಿ, ಕುಂದಾಪುರ, ಕಾರ್ಕಳ ತಾಲೂಕು ಪಂಚಾಯತ್‌ಗಳ ಅವಧಿಯು ಕೆಲವೇ ತಿಂಗಳಷ್ಟು ಬಾಕಿ ಉಳಿದಿದ್ದರೂ,
ವಿಭಜನೆಯಾದ ಕಾಪು, ಬ್ರಹ್ಮಾವರ, ಹೆಬ್ರಿ ಮತ್ತು ಬೈಂದೂರು ತಾಲೂಕು ಪಂಚಾಯತ್‌ಗಳು ಅಸ್ತಿತ್ವಕ್ಕೆ ಬಂದಾಗಿದೆ.

ರಾಜ್ಯದಲ್ಲಿರುವ ಬಹುತೇಕ ನಗರಸಭೆಗಳ ಚುನಾವಣೆ ಮುಗಿದು ಎರಡು ವರ್ಷ ಕಳೆದರೂ ಇನ್ನೂ ಅವುಗಳ ಅಧ್ಯಕ್ಷ – ಉಪಾಧ್ಯಕ್ಷ ಹುದ್ದೆಗಳ ಮೀಸಲಾತಿ ತಕರಾರು ನ್ಯಾಯಾಲಯದಲ್ಲಿ ಇರುವುದರಿಂದ ಅವುಗಳು ಶೀತಲಾಗಾರದಲ್ಲಿವೆ!

ಹೀಗಿರುವಾಗ ಪೂರ್ವ ತಯಾರಿ ಇಲ್ಲದೆ ಅಗತ್ಯ ಸೌಲಭ್ಯಗಳನ್ನು ಒದಗಿಸದೆ ಹೊಸ ತಾಲೂಕುಗಳ ರಚನೆ ಮಾಡುತ್ತಲೇ ಇದ್ದರೆ ಜನರಿಗೆ ಯಾವ ರೀತಿ ಅನುಕೂಲತೆ ದೊರೆತಂತಾಯಿತು? ಇತ್ತೀಚೆಗೆ ಮಂಜೂರಾದ ತಾಲೂಕಿನ ಮಂಜೂರಾತಿ ಆದೇಶ
ದಲ್ಲಿ ತಾತ್ವಿಕವಾಗಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸದರಿ ಆದೇಶದಲ್ಲಿ ಕಂದಾಯ ಇಲಾಖೆಯ ವತಿಯಿಂದ ಹೊಸ ತಾಲೂಕು ಕಚೇರಿಯನ್ನು ತೆರೆಯಲು ಮತ್ತು ಇತರ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ಆರ್ಥಿಕ ಇಲಾಖೆಯ ಸಹಮತಿಯೊಂದಿಗೆ ಹಂತಹಂತವಾಗಿ ತೆರೆಯಲು ಸಹ ಅನುಮತಿ ನೀಡಲಾಗಿದೆ ಎಂದು ನಮೂದಿಸಲಾಗಿದೆ. ಇದು ಸರಕಾರಿ ಆದೇಶದ ಶಿಷ್ಟಾಚಾರವಿರಬಹುದು. ಜನರಿಗೆ ಆಸ್ಪತ್ರೆ, ಅಗ್ನಿಶಾಮಕ ದಳ ಮುಂತಾದ ಇಲಾಖೆಗಳು ಎಷ್ಟು ಸನಿಹದಲ್ಲಿ ಇರುತ್ತವೋ ಅಷ್ಟು ಅನುಕೂಲ.

ತಾಲೂಕು ಕಚೇರಿ ಮತ್ತು ಸಹವರ್ತಿ ಇಲಾಖೆಗಳು ಪೂರ್ಣಾವಧಿ ನೆಲೆಯಲ್ಲಿ ಸಿಗುವ ಬದಲು ಉಪ ಕಚೇರಿಯಲ್ಲಿ ದೈನಂದಿನ ಅಗತ್ಯತೆಯ ಕೆಲಸಗಳಿಗೆ ವ್ಯವಸ್ಥೆೆಯಾದರೆ ಹೊಸ ತಾಲೂಕು ರಚನೆಗಿಂತಲೂ ಹೆಚ್ಚು ಉಪಯುಕ್ತವಲ್ಲವೇ? ಈಗಿನ ವ್ಯವಸ್ಥೆ ಹೇಗಿದೆಯೆಂದರೆ, ಆಡಳಿತದ ಮುಖ್ಯಸ್ಥರು ಅಂದರೆ ತಹಸೀಲ್ದಾಾರರು ಪದೇ ಪದೆ ಬದಲಾಗುವುದು, ಮೂಲ ಕಚೇರಿಯ ತಹಸೀಲ್ದಾಾರರೇ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುವುದು.

ಸಿಬ್ಬಂದಿ ಇದ್ದುದರಲ್ಲೇ ಹೊಂದಾಣಿಕೆ. ಈಗಿನ ಹೊಸ ವ್ಯವಸ್ಥೆಯಲ್ಲಿ ಬಹುತೇಕ ಕಡತಗಳು ಅಂತರ್ಜಾಲ ನಿಯಂತ್ರಣಕ್ಕೆ ಒಳಪಟ್ಟಿರುವುದರಿಂದ ಹಳೆಯ ತಾಲೂಕು/ಅಧಿಕಾರಿಯ ವ್ಯಾಪ್ತಿಯಿಂದ ಹೊರಗಿ ಡುವ ಪ್ರಕ್ರಿಯೆ ಚಾಲನೆಗೆ ಬರುತ್ತದೆ. ಆದರೆ
ಹೊಸತು ಇನ್ನೂ ಜಾರಿಯಾಗಿರುವುದಿಲ್ಲ. ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬ ಸ್ಥಿತಿ. ಹೀಗಾಗಿ ಹೊಸ ತಾಲೂಕು ವರವಾಗುವ ಬದಲು ಶಾಪವಾಗಿ ಪರಿಣಮಿಸುತ್ತದೆ. ಒಟ್ಟಿನಲ್ಲಿ ರಾಜಕೀಯ ಕಾರಣಕ್ಕೆೆ ಮಂಜೂರಾತಿಯಾಗುವ ಹೊಸ ತಾಲೂಕುಗಳು ಊಟಕ್ಕಿಲ್ಲದ ಉಪ್ಪಿನಕಾಯಿ ಯಂತಾಗದಿದ್ದರೆ ಅಷ್ಟೇ ಸಾಕು.