Tuesday, 7th December 2021

ಶಾಸಕ ಎಂ.ಕೃಷ್ಣಪ್ಪರಿಂದ ಅಧಿಕಾರ ದುರುಪಯೋಗ: ಆರ್.ಕೆ.ರಮೇಶ್ ಆರೋಪ

ಬೆಂಗಳೂರು : ಸಮಾಜಮುಖಿ ಸೇವೆ ಮಾಡಲು ಮುಂದೆ ಬರುವ ಯುವ ಕಾಂಗ್ರೆಸ್ ಕಾರ್ಯಕರ್ತರು, ಸಮಾಜ ಸೇವಕರ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ, ಪೋಲಿಸ್ ಮೂಲಕ ಕೇಸು ದಾಖಲು ಮಾಡುವ ಮೂಲಕ ಪರೋಕ್ಷವಾಗಿ ಶಾಸಕ ಎಂ.ಕೃಷ್ಣಪ್ಪ ಅವರು ಅಧಿಕಾರ ದುರುಪಯೋಗಪಡಿಸಿ covidಕೊಳ್ಳುತ್ತಿದ್ದು, ನಾಗರೀಕರು ಸೂಕ್ಷ್ಮವಾಗಿ ಎಲ್ಲವನ್ನೂ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಆರ್.ಕೆ.ರಮೇಶ್ ಆರೋಪಿಸಿದರು.

ಉತ್ತರಹಳ್ಳಿ ವಾರ್ಡ್ ವ್ಯಾಪ್ತಿಗೆ ಸೇರಿದ ಗುಬ್ಬಲಾಳ ಬಳಿಯ ಮಾರುತಿ ನಗರದಲ್ಲಿ ಮಾರುತಿ ನಗರ ಕ್ಷೇಮಾಭಿ ವೃದ್ದಿ ಟ್ರಸ್ಟ್, ಕಾಂಗ್ರೆಸ್ ಪಕ್ಷ ಹಾಗೂ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ 750 ಕುಟುಂಬಗಳಿಗೆ ದಿನಸಿಕಿಟ್,200 ಕಟ್ಟಡ ಕಾರ್ಮಿಕ ಕುಟುಂಬಗಳಿಗೆ ರೋಗ ನಿರೋಧಕ ಶಕ್ತಿಯಕಿಟ್ ಹಾಗೂ 15 ಕುಟುಂಬಗಳಿಗೆ ಆರೋಗ್ಯ ಸುರಕ್ಷಾ ಕಿಟ್ ವಿತರಣೆ ಮಾಡಿ ಮಾತನಾಡಿ ಅವರು ಬಡವರು, ನೊಂದವರ ಸೇವೆ ಮಾಡುವಾಗ ರಾಜಕೀಯ ದ್ವೇಷ ಮಾಡಬಾರದು, ಭಗವಂತ ಎಲ್ಲವನ್ನು ನೋಡುತ್ತಿದ್ದಾನೆ,ಸೇವಾ ಮನೋಭಾವನೆಯುಳ್ಳ ಕಾರ್ಯ ಗಳಿಗೆ ಅಡ್ಡಿಪಡಿಸುವುದು ದುರ್ಜನರ ಕೆಲಸ ಎಂದರು.

ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಶ್ಯಾಮಣ್ಣರೆಡ್ಡಿ ಮಾತನಾಡಿ ಕೋವಿಡ್ ಮಹಾಮಾರಿ ಯಿಂದ ಕಟ್ಟಡ ಕಾರ್ಮಿಕರು,ಕೂಲಿ ಕಾರ್ಮಿಕರು,ಜನಸಾಮಾನ್ಯರು ಸೇರಿದಂತೆ ಎಲ್ಲಾ ವರ್ಗದ ಜನರ ಜೀವನವೂ ಸಂಕಷ್ಟಕ್ಕೆ ಸಿಲುಕಿದ್ದಾರೆ,ಕಟ್ಟಡ ಕಾರ್ಮಿಕರ ವತಿಯಿಂದ ಬಡವರ ಮಕ್ಕಳಿಗೆ ಮೂರು ಸಾವಿರ ದಿಂದ ಇಪ್ಪತ್ತೈದು ಸಾವಿರದವೆರಗೆ ಸುಮಾರು ಇಪ್ಪತ್ತೈದು ವಿದ್ಯಾರ್ಥಿಗಳಿಗೆ ಚೆಕ್ ವಿತರಣೆ ಮಾಡಲಾಗಿದೆ ಎಂದರು.

ಉತ್ತರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಕುಮಾರ್ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಜನಪ್ರತಿನಿಧಿಗಳು ಮಾಡಬೇಕಾದ ಕೆಲಸಗಳನ್ನು ವೈಯಕ್ತಿಕವಾಗಿ ಆರ್.ಕೆ.ರಮೇಶ್ ಅವರು ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ, ಔಷಧಿ ವಿತರಣೆ,ಉಚಿತ ಶಸ್ತ್ರಚಿಕಿತ್ಸೆ,ಕಣ್ಣಿನ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆ, ದಿನಸಿಕಿಟ್ ವಿತರಣೆ,ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಧನಸಹಾಯ ಮಾಡಿಕೊಂಡು ಬರು ತ್ತಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಐಎನ್ ಟಿಸಿ (ಇಂಟೆಕ್) ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್,ಜಿಲ್ಲಾ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಗುಂಡುಮಣಿ ಶ್ರೀನಿವಾಸ್, ಹಿಂದು ಳಿದ ವಿಭಾಗದ ಅಧ್ಯಕ್ಷ ರಂಜಿತ್ ರಾಜು, ಮಾರುತಿ ನಗರ ಕ್ಷೇಮಾಭಿವೃದ್ದಿ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಉಮೇಶ್, ಗೌರವಾಧ್ಯಕ್ಷ ಚಂದ್ರಪ್ಪ,ಪ್ರಧಾನ ಕಾರ್ಯ ದರ್ಶಿ ಗುರುಮೂರ್ತಿ, ವಾರ್ಡ್ ಅಧ್ಯಕ್ಷರಾದ ಉತ್ತರಹಳ್ಳಿ ರಮೇಶ್,ವಿಜಯ್ ಕುಮಾರ್ ಗೌಡ, ಮಹಿಳಾ ಕಾಂಗ್ರೆಸ್ ಮುಖಂಡೆ ತೇಜುಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ರವಿಶಂಕರ್ ಗೌಡ, ಮುಖಂಡರಾದ ಸತೀಶ್, ಸುಜಯ್ ಇದ್ದರು.