Tuesday, 21st March 2023

ಪುಟ್ಟಣ್ಣಯ್ಯ ಬಣ ರೈತಸಂಘದ ರಾಮಾಂಜಿನಪ್ಪ, ಲಕ್ಷ್ಮೀ ನಾರಾಯಣರೆಡ್ಡಿಯಿಂದ ಅಮಾಯಕರಿಗೆ ವಂಚನೆ ಆರೋಪ

ಚಿಕ್ಕಬಳ್ಳಾಪುರ: ಪುಟ್ಟಣ್ಣಯ್ಯ ಬಣದ ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀನಾರಾಯಣರೆಡ್ಡಿ ಮತ್ತು ಕಾರ್ಯ ದರ್ಶಿ ಎಂಎಲ್ ರಾಮಾಂಜಿನಪ್ಪ ಇಬ್ಬರೂ ಸೇರಿ ನಮ್ಮನ್ನು ವಂಚಿಸಿ ಜಮೀನು ಪರಭಾರೆ ಮಾಡಿದ್ದಾರೆ ಎಂದು ಬಾಗೇಪಲ್ಲಿ ಕಸಬಾ ಕೊತ್ತಕೋಟೆ ನಿವಾಸಿ ಆಂಜಿನಪ್ಪ, ಮುಸ್ಟೂರು ಗ್ರಾಮದ ನಾಗರಾಜಪ್ಪ ಆರೋಪಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ತಮಗಾದ ಮೋಸದ ದಾಖಲೆ ಬಿಡುಗಡೆ ಮಾಡಿ ಮಾತನಾಡಿದರು.

ಮುಸ್ಟೂರಿನ ನಾಗರಾಜಪ್ಪ ಮಾತನಾಡಿ ಬಾಗೇಪಲ್ಲಿ ತಾಲೂಕು ಕಸಬಾ ಕೊತ್ತಕೋಟೆ ಗ್ರಾಮದ ನಿವಾಸಿಯಾದ ರಾಮಾಂಜಿನಪ್ಪ ಮುಸ್ಟೂರು ಗ್ರಾಮದ ಸರ್ವೆನ. ೪೪/೬ ಪ್ರಕರಣದಲ್ಲಿ  ನನ್ನ ಮಗನ ಸಾವಿನಿಂದ ನಾನು ನೊಂದಿರುವ ಸಮಯದಲ್ಲಿ ನನ್ನ ತಮ್ಮಂದಿರನ್ನು ಕರೆಸಿ ವಿಭಾಗ ಮಾಡಿಸಿಕೊಡುತ್ತೇನೆ ಎಂದು ಹೇಳಿ ನಮ್ಮಿಂದ ಒಪ್ಪಿಗೆ ಪತ್ರ ಬರೆಸಿಕೊಂಡು ಅಕ್ರಮವಾಗಿ ನಮ್ಮ ತಾಯಿ ಹೆಸರಿನಲ್ಲಿದ್ದ ೧ ಎಕರೆ ಜಮೀನನ್ನು ತನ್ನ ಮಡದಿ ಹೆಸರಿಗೆ ದಾನಪತ್ರ ಮಾಡಿಸಿಕೊಂಡಿದ್ದಾನೆ.

ಮತ್ತೊ೦ದು ಸರ್ವೆನಂಬರ್೧೦೫/೧ರಲ್ಲಿ ೧೩ಗುಂಟೆ ನನ್ನ ಮಡದಿ ಸರಸ್ವತಮ್ಮ ಅವರ ಹೆಸರಿನಲ್ಲಿದ್ದ ಭೂಮಿಯನ್ನು ೧೯ ಲಕ್ಷಕ್ಕೆ ಮಾರಿದಂತೆ ಅಗ್ರಿಮೆಂಟ್ ಮಾಡಿಸಿಕೊಂಡು ಮೋಸ ಮಾಡಿದ್ದಾನೆ. ಈ ಬಗ್ಗೆ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾ ಗಿದ್ದು ಅಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು ಹಣ ವಾಪಸ್ಸು ನೀಡಿ ಅವರ ಜಮೀನು ಅವರಿಗೆ ಮಾಡಿಕೊಡುತ್ತೇನೆ ಎಂದು ಹೇಳಿದ್ದಾನೆ. ಈವರೆಗೆ ಈ ವಿಚಾರದಲ್ಲಿ ಏನೂ ಮಾಡಿಲ್ಲ. ಈ ವಿಚಾರದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮೀ ನಾರಾಯಣರೆಡ್ಡಿ ಮತ್ತು ರಾಮಾಂಜಿ ರೈತ ಸಂಘದ ಹೆಸರು ಹೇಳಿಕೊಂಡು ನಮ್ಮಂತಹ ಅಮಾಯಕರಿಗೆ ಮೋಸ ಮಾಡಿದ್ದಾರೆ ಎಂದು ದೂರಿ ದ್ದಲ್ಲದೆ ನಮಗೆ ನ್ಯಾಯ ಕೊಡಿಸಿ ಎಂದರು.

ಆAಜಿನಪ್ಪ ಅವರ ಮಗ ಗೋಪಾಲಕೃಷ್ಣ ಮಾತನಾಡಿ ರಾಮಾಂಜಿನಪ್ಪ ಅವರಿಂದ ನಮಗೆ ಹೆಜ್ಜೆ ಹೆಜ್ಜೆಗೂ ಜಾತಿನಿಂದನೆ ಆಗುವ ಜತೆಗೆ ಜೀವಬೆದರಿಕೆ ಕೂಡ ಇದೆ.ನಮ್ಮ ತಂದೆಯ ಅಮಾಯಕತನ ದುರುಪಯೋಗ ಮಾಡಿಕೊಂಡು ನಿಮ್ಮ ಅಪ್ಪನ ಹೆಸರಿನಲ್ಲಿ ಅಲ್ಲಿ ಜಮೀನಿದೆ ಇಲ್ಲಿ ಜಮೀನಿದೆ ಅದನ್ನು ನಿಮ್ಮ ಹೆಸರಿಗೆ ಮಾಡಿಸಿಕೊಡುತ್ತೇನೆ ಎಂದು ಹಣ ಪಡೆದುಕೊಂಡು ಬೇಕಾದ ಕಡೆ ಸಹಿ ಮಾಡಿಸಿಕೊಂಡು ಮೋಸಮಾಡಿದ್ದಲ್ಲದೆ ನಾವು ಜೀವಭಯದಿಂದ ಊರು ತೊರೆಯತುವಂತೆ ಮಾಡಿದ್ದಾರೆ.

ಮೇಲಾಗಿ ತಮ್ಮ ತಂದೆ ಹೆಸರಿನ ಪಹಣಿಯಿದ್ದ ೩ ಎಕರೆ ಭೂಮಿಯನ್ನು ಕಿತ್ತುಕೊಳ್ಳಲು ಅಕ್ರಮ ಕೂಟ ಕಟ್ಟಿಕೊಂಡು ನಮಗೆ ಬದುಕಲು ಬಿಡದೆ ಸಂಚು ಮಾಡಿದ್ದಾರೆ.ನಮ್ಮ ತಂದೆ ಹೆಸರಿನ ಪಹಣಿಯನ್ನು ಅಳಿಸಿ ಹಾಕಿ ನಮ್ಮ ತಾತನ ಹೆಸರಿನಲ್ಲಿ ಇರುವಂತೆ ಮಾಡಿದ್ದಾರೆ.

ನಮ್ಮ ಜಮೀನಿನಲ್ಲಿ ಬಲಾಡ್ಯರು ಬೇಕಾದಂತೆ ಮನೆಗಳನ್ನು ಕಟ್ಟಿಟ್ಟಿಕೊಂಡು ತೊಂದರೆ ಆಗುವಂತೆ ಮಾಡಿದ್ದು ಇವರಿಂದ ನಮಗೆ ರಕ್ಷಣೆ ಇಲ್ಲವಾಗಿದ್ದು ರಕ್ಷಣೆ ಜತೆಗೆ,ನ್ಯಾಯ ಕೊಡಿ ಎಂದು ಬಾಗೇಪಲ್ಲಿ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ದೂರು ತೆಗೆದುಕೊಳ್ಳಲು ಸತಾಯಿಸಿದ್ದಲ್ಲದೆ,ಇದಕ್ಕೂ ನಮಗೂ ಸಂಬ೦ಧವಿಲ್ಲ, ಇದು ಸಿವಿಲ್ ಪ್ರಕರಣ ಆಗಿದ್ದು ಕೋರ್ಟಿಗೆ ಹೋಗಿ ಎಂದು ಹಿಂಬರಹ ನೀಡುತ್ತಾರೆ. ಇಂತಹ ದುಷ್ಟಕೂಟದಿಂದ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಟಾಧಿಕಾರಿಗಳು ನಮಗೆ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.
*
ಕಾನೂನು ಬದ್ದವಾಗಿ ಸರ್ವೆ ನಂಬರ್ ೧೩೦ ರ ಭೂಮಿ ಪರಭಾರೆ ಆಗಿಲ್ಲವೆಂದು ಖಾತೆದಾರರ ಆಂಜಿನಪ್ಪ ಬಾಗೇಪಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದು ಪ್ರತಿಯಾಗಿ ನಾವೂ ಕೂಡ ಕೇಸ್ ನಂಬರ್ ೧೫/೨೦೨೨ ೪೫ ಮಂದಿ ಕೋರ್ಟಿಗೆ ಹೋಗಿದ್ದು ಅದರಲ್ಲಿ ನಾನೂ ಒಬ್ಬ.ಇವರ ಆರೋಪದಲ್ಲಿ ಸತ್ಯವಿಲ್ಲ,ದ್ವೇಷದಿಂದ ಹೀಗೆ ಮಾಡಿದ್ದಾರೆ. ನಾನು ಅವರಿಗೆ ಜೀವ ಬೆದರಿಕೆ ಹಾಕಿಲ್ಲ.

ಇನ್ನು ಮುಸ್ಟೂರು ೪೪/೬ ೧ ಎಕರೆ ಜಮೀನಿನ ಪ್ರಕರಣದಲ್ಲಿ ಖಾತೆದಾರಳಾದ ಬಯ್ಯಮ್ಮ ಮೊದಲು ತನ್ನ ಮಗನಾದ ನಾಗರಾಜಪ್ಪನಿಗೆ ದಾನ ಪತ್ರ ಮಾಡಿದ್ದಾರೆ.ಇದನ್ನು ರದ್ದುಪಡಿಸಬೇಕೆಂದು ಬೈಯಮ್ಮ ಕುಟುಂಬದ ಇತರೆ ಸದಸ್ಯರು ತಹಶೀಲ್ದಾರ್ ಕೋರ್ಟಿಗೆ ದಾವೆ ಹೂಡಿ ದಾನಪತ್ರ ವಜಾ ಮಾಡಿಸಿ ನಂತರ ಮೊಮ್ಮಗಳಾದ ಅನುಷಾ ಅವರಿಗೆ ದಾನಪತ್ರ ಮಾಡಿಕೊಟ್ಟಿದ್ದಾರೆ.ಕೆಲಕಾಳದ ನಂತರ ಅನುಷಾ ತನ್ನ ಅಕ್ಕನಾದ ದ್ರಾಕ್ಷಾಯಿಣಿಗೆ ಸದರಿ ಜಮೀನು ದಾನ ಪತ್ರ ಮಾಡಿದ್ದಾರೆ. ದ್ರಾಕ್ಷಾಯಿಣಿ ನನ್ನ ಮಡದಿಯಾಗಿದ್ದು ಮತ್ತೆ ನನಗೆ ದಾನಪತ್ರದ ಮೂಲಕ ಜಮೀನು ಬಂದಿದೆ.

ಮುಷ್ಟೂರು ಗ್ರಾಮದ ಸರ್ವೆ ನಂಬರ್ ೧೦೫/೧ರಲ್ಲಿ ೧೩ಗುಂಟೆ ಸರಸ್ವತಮ್ಮ ಅವರ ಹೆಸರಿನಲ್ಲಿದ್ದು ೧೯ ವರೆ ಲಕ್ಷಕ್ಕೆ ನನ್ನ ಬಳಿ ಒಪ್ಪಂದ ಮಾಡಿಕೊಂಡು ಈ ಪೈಕಿ ೧೮ ವರೆ ಲಕ್ಷ ಹಣ ಪಡೆದುಕೊಂಡು ಅಗ್ರಿಮೆಂಟ್ ಮಾಡಿದ್ದಾರೆ.ಬಾಕಿ ೧ಲಕ್ಷ ಹಣ ಮಾತ್ರ ನಾನು ನೀಡಬೇಕಿದ್ದು ಅವರು ರಿಜಿಸ್ಟರ್ ಖಾತೆ ಮಾಡಿಸಿಕೊಟ್ಟ ತಕ್ಷಣ ನೀಡುತ್ತೇನೆ.ಈ ವಿಚಾರದಲ್ಲಿ ನನ್ನ ಗಮನಕ್ಕೆ ಬಾರದೆ ನಾಗರಾಜಪ್ಪ ತನ್ನ ಮಗಳಿಗೆ ದಾನಪತ್ರ ಮಾಡಿಕೊಟ್ಟಿದ್ದು ಈ ಬಗ್ಗೆ ನಾನು ತಹಶೀಲ್ದಾರ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದೇನೆ ಕೇಸ್ ನಂಬರ್ (೩೫,೮೧,೭೨,೩/೨೦೨೨-೨೩).ನಾನು ಯಾರಿಗೂ ಮೋಸ ಮಾಡಿಲ್ಲ ಕಾನೂನಿನಂತೆ ನಡೆದು ಕೊಂಡಿದ್ದೇನೆ.

ನಾಗರಾಜಪ್ಪ ಮತ್ತು ಆಂಜಿನಪ್ಪ ಕುಟುಂಬದ ಆರೋಪ ಸತ್ಯಕ್ಕೆ ದೂರವಾದ ವಿಚಾರವಾಗಿದೆ ಎನ್ನುವುದು ಕಸಬಾ ಕೊತ್ತಕೋಟೆ ನಿವಾಸಿ, ಪುಟ್ಟಣ್ಣಯ್ಯ ಬಣದ ರೈತ ಸಂಘದ ತಾಲೂಕು ಕಾರ್ಯದರ್ಶಿ. ಎಂ.ಎಲ್.ರಾಮಾ೦ಜಿನಪ್ಪ ಮಾತಾಗಿದೆ.
ಸುದ್ದಿಗೋಷ್ಟಿಯಲ್ಲಿ ಬಯಮ್ಮ,ಸರಸ್ವತಮ್ಮ,ಆಂಜಿನಪ್ಪ ಮತ್ತಿತರು ಇದ್ದರು.

error: Content is protected !!