Monday, 30th January 2023

ರಪಾಮೈಸಿನ್‌: ಇಳಿವಯಸ್ಸು ತಡೆಯುವ ಮದ್ದು ?

ವೈದ್ಯ ವೈವಿಧ್ಯ

drhsmohan@gmail.com

ಆರೋಗ್ಯ, ವೈದ್ಯಕೀಯ ಮತ್ತು ಔಷಧ ಸಂಬಂಧಿತ ಇತ್ತೀಚಿನ ಕೆಲವು ಬೆಳವಣಿಗೆಗಳು ಜನರ ಜೀವನವನ್ನು ಉತ್ತಮ ಗೊಳಿಸಲು, ಕಾಯಿಲೆಗಳಿಂದ ಮುಕ್ತಿ ದೊರಕಿಸಲು, ಜೀವಿತಾವಧಿ ಹೆಚ್ಚಿಸಲು ಕಾರಣವಾಗಿವೆ. ಸಾಕಷ್ಟು ಸಂಶೋಧ ಕರು ಶ್ರಮವಹಿಸಿ ಕೈಗೊಂಡ ಸುದೀರ್ಘ ಅಧ್ಯಯನ ಮತ್ತು ಸಂಶೋಧನೆ ಈ ನಿಟ್ಟಿನಲ್ಲಿ ಮಹತ್ತರ ಕೊಡುಗೆ ನೀಡಿವೆ.

ಇತ್ತೀಚಿನ ದಿನಗಳಲ್ಲಿ ಮನುಷ್ಯನ ಆಯಸ್ಸು ಬಹಳಷ್ಟು ಜಾಸ್ತಿಯಾಗಿದೆ. ಅದರೊಂದಿಗೆ, ಇಳಿವಯಸ್ಸಿನಲ್ಲಿ ಬರುವ ವಿವಿಧ ಕಾಯಿಲೆಗಳೂ ಜಾಸ್ತಿಯಾಗಿವೆ. ಇದರರ್ಥ ನಮ್ಮ ಜೀವಿತಾವಧಿ ಜಾಸ್ತಿಯಾಗಿದೆಯೇ ಹೊರತು, ಆರೋಗ್ಯವಂತ ಜೀವನದ ಅವಧಿಯಲ್ಲ. ನಮ್ಮ ವಾತಾವರಣದಿಂದಾಗಿ, ಜೆನೆಟಿಕ್ಸ್, ವೈದ್ಯಕೀಯ, ಜೀವಶಾಸ್ತ್ರ ಕ್ಷೇತ್ರಗಳಲ್ಲಿನ ಪ್ರಗತಿಯಿಂದಾಗಿ ನಾವು ದೀರ್ಘಕಾಲ ಬದುಕಲು ಸಾಧ್ಯವಾಗುತ್ತಿದ್ದರೂ ಇಳಿವಯಸ್ಸಿ ನಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು/ಕಾಯಿಲೆಗಳಿಂದ ಮುಕ್ತವಾದ ದೀರ್ಘಾ ಯಸ್ಸು ನಮಗೆ ದೊರಕಿಲ್ಲ.

ಇದಕ್ಕೆ ಮುಖ್ಯ ಕಾರಣ, ಇಳಿವಯಸ್ಸಿನ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ನಮಗೆ ಸ್ಪಷ್ಟಮಾಹಿತಿ ಇಲ್ಲ. ಹಾಗಾಗಿ ಈ ಸಮಸ್ಯೆಗಳು ನಮ್ಮ ನಿಯಂತ್ರಣದಲ್ಲೂ ಇಲ್ಲ. ಹೌದು, ತಮಗೆಲ್ಲ ಗೊತ್ತಿರುವಂತೆ ವಯಸ್ಸಾದಂತೆ ನಮಗೆ ಹೃದಯ, ರಕ್ತನಾಳ ಸಂಬಂಧಿ ಕಾಯಿಲೆಗಳು, ಡಯಾಬಿಟಿಸ್ (ಟೈಪ್ 2), ಕಣ್ಣಿನ ಪೊರೆಯಂಥ ಸಮಸ್ಯೆಗಳು, ಕಿವಿಯ ಕಾರ್ಯಕ್ಷಮತೆ ಕಡಿಮೆ ಯಾಗಿ ಶ್ರವಣಶಕ್ತಿ ಕುಂದುವಿಕೆ, ಚಿತ್ತವಿಕಲತೆ, ದೇಹದ ಪ್ರತಿ ರೋಧ ಶಕ್ತಿ ಕುಂದುವಿಕೆ ಕಾಣಬರುತ್ತವೆ, ದೇಹದ ಮಾಂಸಖಂಡಗಳ ಸಮೂಹ ಕ್ಷೀಣಿಸ ತೊಡಗುತ್ತದೆ.

ವಯಸ್ಸಾಗುವ ಬಗ್ಗೆ ಭಿನ್ನ ಕಾರಣಗಳನ್ನು ಹೇಳುವ ಹಲವು ಸಿದ್ಧಾಂತಗಳಿವೆ. ವಯಸ್ಸಾಗುವುದನ್ನು ತಡೆಯಲು ಹಾಗೂ ಇಳಿ ವಯಸ್ಸಿನಲ್ಲಿ ಆರೋಗ್ಯ ಸುಧಾರಿಸಲು ಸಂಶೋಧಕರು ವಿವಿಧ ರೀತಿಯಲ್ಲಿ ಯತ್ನಿಸುತ್ತಿದ್ದಾರೆ. ಎಲ್ಲರ ಉದ್ದೇಶ ಮಾನವನ ಆಯಸ್ಸನ್ನು ಹೆಚ್ಚಿಸುವುದು. ವಯಸ್ಸಾದವರು ಜೀವನಕ್ರಮ ಬದಲಿಸಿಕೊಳ್ಳಲು ಹಲವು ಸಲಹೆ-ಸೂಚನೆಗಳು ಇವೆಯಾದರೂ, ವಯಸ್ಸಾದಂತೆ ಉಂಟಾಗುವ ದೇಹದ ಕ್ಷೀಣಿಸುವಿಕೆ, ಕುಂದುವಿಕೆಯನ್ನು ಅವು ತಡೆಯಲಾರವು.

ಜತೆಗೆ ಇಂಥ ಸಲಹೆ-ಸೂಚನೆ, ನಿಯಮಗಳನ್ನು ಇಳಿ ವಯಸ್ಸಿನವರು ಪಾಲಿಸುವುದೂ ಕಷ್ಟ. ಜತೆಗೆ, ಹಲವು ದಿನ, ವರ್ಷಗಳ ಕಾಲ ಒಂದೇ ಸಮನೆ ಪಾಲಿಸುವುದು ಇನ್ನೂ ಕಷ್ಟ. ಹಾಗಾಗಿ ಈ ನಿಟ್ಟಿನಲ್ಲಿ ಸಂಶೋಧಕರು ದೀರ್ಘಕಾಲದಿಂದ ಔಷಧಿಯ
ಹುಡುಕಾಟದಲ್ಲಿ ತೊಡಗಿಕೊಂಡಿದ್ದಾರೆ.

ರಪಾಮೈಸಿನ್: ವಯಸ್ಸಾಗುವಿಕೆಯನ್ನು ತಡೆಯುವ ಔಷಧ ಇತ್ತೀಚೆಗೆ ಸಂಶೋಧಕ ರಿಗೆ ಸಿಕ್ಕಿರುವ ಔಷಧ ರಪಾಮೈಸಿನ್. ಇದರ ಇನ್ನೊಂದು ಹೆಸರು ಸಿರೋಲಿಮಸ್. ಇದು ಮೂಲಭೂತವಾಗಿ 1999ರಲ್ಲಿ, ಅಂಗಾಂಗಕಸಿ ಶಸ್ತ್ರಚಿಕಿತ್ಸೆಗೆ ಉಪಯೋಗವಾಗ ಲೆಂದು ಅಮೆರಿಕದ ಎಫ್ ಡಿಎ ಒಪ್ಪಿದ ಪ್ರತಿರೋಧ ಹತ್ತಿಕ್ಕುವ ಔಷಧ. ರಪಾಮೈಸಿನ್‌ನಲ್ಲಿ ಕ್ಯಾನ್ಸರ್‌ಗೆ ಔಷಧವಾಗಬಲ್ಲ ಗುಣವೂ ಇದೆಯೆಂದು ಸಂಶೋಧಕರಿಗೆ ನಂತರ ಗೊತ್ತಾಯಿತು.

ಇತ್ತೀಚೆಗೆ ಗೊತ್ತಾದ ಮತ್ತೊಂದು ಗುಣವೆಂದರೆ- ಮನುಷ್ಯನ ಜೀವಿತಾವಧಿ ಹೆಚ್ಚಿಸುವುದು ಹಾಗೂ ಮುಖ್ಯವಾಗಿ ವಯಸ್ಸಾದ ನಂತರ ಬರುವ ಕಾಯಿಲೆಗಳ ಸಂಖ್ಯೆಯನ್ನು ಕಡಿಮೆ ಮಾಡು ವುದು. ಇಳಿವಯಸ್ಸಿನ ಮೇಲೆ ಸಂಶೋಧನೆ ಕೈಗೊಂಡಿದ್ದ, ನ್ಯೂಯಾರ್ಕ್‌ನ ರೋಸ್‌ವೆಲ್ ಪಾರ್ಕ್ ಕಾಂಪ್ರಹೆನ್ಸಿವ್ ಕ್ಯಾನ್ಸರ್ ಸೆಂಟರ್‌ನ ಸಂಶೋಧಕ ಡಾ.ಮಿಖಾಯಿಲ್ ಬ್ಲಾಗೋಸ್ಕೋನಿ, ರಪಾಮೈಸಿನ್ ಔಷಧಕ್ಕೆ ದೇಹಕ್ಕೆ ವಯಸ್ಸಾಗುವುದನ್ನು ತಡೆಯುವ ಸಾಮರ್ಥ್ಯವಿದೆ ಎಂದು 2006ರಲ್ಲಿ ‘ಸೆಲ್ ಸೈಕಲ್’ ಎಂಬ ಜರ್ನಲ್ ನಲ್ಲಿ ಮೊದಲ ಬಾರಿ ಪ್ರಸ್ತಾಪಿಸಿದರು.

ಅವರ ಆಲೋಚನೆ ಅಥವಾ ಹೈಪಾಥಿಸಿಸ್ ನಂತರ ಇದು ಮತ್ತೊಬ್ಬ ಸಂಶೋಧಕರಿಂದ ಅನುಮೋದಿತವಾಯಿತು. ಅಮೆರಿಕದ ಸ್ಟಾನ್ ಫೋರ್ಡ್ ವಿಶ್ವವಿದ್ಯಾಲಯದ ಮತ್ತು ನೋವರ್ಟಿಸ್‌ನ ಸಂಶೋಧಕರು ನಡೆಸಿದ ಸಂಶೋಧನೆ 2014ರಲ್ಲಿ ‘ಸೈನ್ಸ್ ಟ್ರಾನ್ಸ್ಲೇಷನ್ ಮೆಡಿಸಿನ್’ನಲ್ಲಿ ಪ್ರಕಟವಾಗಿದೆ. ಈಗ ರಪಾಮೈಸಿನ್ ಔಷಧವನ್ನು ವ್ಯಕ್ತಿ ವಯಸ್ಕನಾಗುವ ಮೊದಲಿನ ನಿರ್ದಿಷ್ಟ ಹಂತದಲ್ಲಿ ಕೊಟ್ಟರೆ ಪರಿಣಾಮ ಚೆನ್ನಾಗಿರುವುದೇ ಹಾಗೂ ಅದರ ಪರಿಣಾಮ ಹೆಚ್ಚು ದಿವಸ ನಿಲ್ಲುವುದೇ ಎಂಬುದನ್ನು ಪರೀಕ್ಷಿಸಬೇಕು ಎಂಬುದು ಸಂಶೋಧಕರ ಅಭಿಪ್ರಾಯ.

ಈ ಬಗ್ಗೆ ಜರ್ಮನಿಯ ಕೊಲೊಗ್ನೆಯ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ಫಾರ್ ಬಯಾಲಜಿ ಆಫ್ ಏಜಿಂಗ್, ಈ ವಿಷಯವನ್ನು ಒಂದು ರೀತಿಯ ನೊಣ (fruit fly) ಮತ್ತು ಇಲಿಗಳಲ್ಲಿ ಇತ್ತೀಚೆಗೆ ಪ್ರಯೋಗಗೈದಿದೆ. ಈ ಸಂಶೋಧನಾ ಪ್ರಬಂಧ ಇತ್ತೀಚಿನ ‘ನೇಚರ್ ಏಜಿಂಗ್’ ಎಂಬ ಜರ್ನಲ್‌ನಲ್ಲಿ ಪ್ರಕಟಗೊಂಡಿದೆ. ಬೇರೆ ಕಾಯಿಲೆಗಳಿಗೆ ಪ್ರಸ್ತುತ ಉಪಯೋಗಿಸುತ್ತಿರುವ ಡೋಸ್
ನಲ್ಲಿ ರಪಾಮೈಸಿನ್ ಔಷಧ ಹಲವಾರು ಪಾರ್ಶ್ವ ಪರಿಣಾಮಗಳನ್ನು ಹೊಂದಿದೆ. ಆದರೆ ವಯಸ್ಸಾದ ಮೇಲೆ ಬರುವ ಕಾಯಿಲೆ ಗಳನ್ನು ಬರದಿರುವಂತೆ ಮಾಡಲು ಉಪಯೋಗಿಸುವ ಈ ಔಷಧದ ಡೋಸ್ ನಲ್ಲಿ ಆ ರೀತಿಯ ಪರಿಣಾಮಗಳು ಬರಲಾರವು ಎಂಬುದು ಸಂಶೋಧಕರ ಅಭಿಮತ. ಅಲ್ಲದೆ ಈ ಔಷಧವನ್ನು ಜೀವನ ಪರ್ಯಂತ ಕೊಡಬೇಕಾದ ಅವಶ್ಯಕತೆ ಇರುವುದರಿಂದ ಇದರ ಡೋಸ್ ಬಗ್ಗೆ ನಿರ್ಧರಿಸಲು ಮತ್ತಷ್ಟು ಪ್ರಯೋಗಗಳನ್ನು ಕೈಗೊಳ್ಳಬೇಕಾಗುತ್ತದೆ ಎಂಬುದು ಈ ಸಂಶೋಧನೆಯಲ್ಲಿ ಪಾಲ್ಗೊಂಡಿರುವ ಡಾ. ಪೌಲಾ ಜೂರಿಸಿಕ್ ಅವರ ಅಭಿಪ್ರಾಯ.

ಇವರು ಈ ಪ್ರಯೋಗವನ್ನು ಡ್ರೋಸೋಫೀಲಿಯಾ ಎಂಬ ಒಂದು ರೀತಿಯ ನೊಣದ ಮೇಲೆ ಮಾಡಿದರು. ಅದನ್ನವರು ಜೆನೆಟಿಕ್ ಮಾಡೆಲ್ ಜೀವಿ ಎಂದು ಉಪಯೋಗಿಸಿ ಎರಡು ವಾರಗಳ ಕಾಲ ರಪಾಮೈಸಿನ್ ಅನ್ನು ಕೊಟ್ಟರು. ಆಗ ಅದು ಕರುಳಿನಲ್ಲಿ ವಯಸ್ಸಿನ ಪ್ರಕಾರ ಉಂಟಾಗುವ ಬದಲಾವಣೆಗಳು ಬರದಿರುವಂತೆ ಮಾಡಿ ಆ ಜೀವಿಯ ಜೀವಿತಾವಧಿಯನ್ನು ಹೆಚ್ಚು ಮಾಡಿತು.

ಈ ಪ್ರಾಣಿಯ ಕೆಲವು ಜೀವಕೋಶಗಳು, ರೀಸೈಕ್ಲಿಂಗ್ ಸರಿಯಾಗಿ ಆಗದೆ ತೊಂದರೆ ಕಾಣಿಸಿಕೊಂಡು, ಆಟೋಫೇಜಿ ಎಂಬ ಸ್ಥಿತಿ ತಲುಪುತ್ತವೆ. ರಪಾಮೈಸಿನ್ ಔಷಧವು ಈ ಜೀವಕೋಶಗಳಲ್ಲಿ ಕಾಣಿಸಿಕೊಂಡ ತೊಂದರೆಗಳನ್ನು ಸೂಕ್ತ ತಾಂತ್ರಿಕತೆಯಿಂದ ನಿವಾರಿಸಿ ಜೀವಕೋಶದ ರೀಸೈಕ್ಲಿಂಗ್ ಕ್ರಿಯೆಯನ್ನು ಪುನರ್‌ಸ್ಥಾಪನೆ ಮಾಡುತ್ತದೆ. ಈ ರೀತಿಯ ತೊಂದರೆ ನಿವಾರಿಸುವ ಪ್ರಕ್ರಿಯೆ ಯನ್ನು ಈ ಔಷಧವು ನಿರಂತರವಾಗಿ ನಡೆಸುತ್ತದೆ. ಕಾರಣ ಎಂದರೆ ಕರುಳಿನ ಭಾಗದ ಜೀವಕೋಶಗಳು ಈ ಔಷಧದ ನೆನಪನ್ನು ನಿರಂತರವಾಗಿ ಇಟ್ಟುಕೊಳ್ಳುತ್ತವೆ.

ಇಲಿಗಳಿಗೆ ರಪಾಮೈಸಿನ್ ಔಷಧ ಕೊಟ್ಟು ಪ್ರಯೋಗ ಕೈಗೊಳ್ಳಲಾಗಿದೆ. ಇಲಿಯ ಮರಿ 3 ತಿಂಗಳಿರುವಾಗ ಔಷಧ ಆರಂಭಿಸಿ ಮೂರು ತಿಂಗಳ ಕಾಲ ಸತತವಾಗಿ ಕೊಡಲಾಯಿತು. ಆ ಪ್ರಾಣಿ ಮಧ್ಯವಯಸ್ಸಿಗೆ ಬಂದಾಗ ಕರುಳಿನ ಭಾಗದಲ್ಲಿ ಹಲವು ಉತ್ತಮ ಬದಲಾವಣೆಗಳು ಕಂಡುಬಂದವು. ಹಾಗೆಯೇ ಔಷಧ ಕೊಡುವುದನ್ನು ನಿಲ್ಲಿಸಿದ 6 ತಿಂಗಳ ನಂತರವೂ ಔಷಧದ ಪರಿಣಾಮಗಳು ಕರುಳಿನ ಭಾಗದಲ್ಲಿ ಕಂಡುಬಂದವು.

ಇಲಿಗಳಲ್ಲಿ ರಪಾಮೈಸಿನ್ ಸಂಶೋಧನೆ ಕೈಗೊಂಡ ಐವೋವಾ ಹೆಲ್ತಕೇರ್ ವಿಶ್ವವಿದ್ಯಾಲಯದ ಪೆಥಾಲಜಿ ಪ್ರೊಫೆಸರ್ ಡಾ. ಡಾವೊ ಫುಡಾಯಿ ಅವರು ಈ ಸಂಶೋಧನಾ ಪೇಪರ್ ತುಂಬಾ ಉತ್ತೇಜನಕಾರಿಯಾಗಿದೆ. ಆದರೆ ಮುಂದಿ ನ ಪ್ರಯೋಗ ಎಂದರೆ ಡಾರ್ಸೋಫೀಲಿಯ ಮತ್ತು  ಲಿಗಳ ಮೇಲೆ ಕೈಗೊಂಡ ಈ ಪ್ರಯೋಗಗಳು ದೊಡ್ಡ ಸಸ್ತನಿ ಪ್ರಾಣಿಗಳಲ್ಲಿ ಇದೇ ತರಹ ಪ್ರಯೋಗ ಪುನಃ ಮಾಡಲು ಸಾಧ್ಯವಿದೆಯೇ? ಎಂಬುದು ಮುಂದಿನ ಸವಾಲಿನ ಪ್ರಶ್ನೆ ಎನ್ನುತ್ತಾರೆ.

ಸಸ್ತನಿ ಪ್ರಾಣಿಗಳಲ್ಲಿ ಈ ತರಹ ಪ್ರಯೋಗಗಳನ್ನು ಮಾಡಿ ದಾಗ ಅವುಗಳಲ್ಲಿ ಇಡೀ ಪ್ರಯೋಗವು ಹೆಚ್ಚಿನ ಸಮಯ ತೆಗೆದು ಕೊಳ್ಳುತ್ತದೆ. ಪ್ರಯೋಗಗಳನ್ನು ಕರುಳಿನ ಭಾಗಗಳಲ್ಲಿಯೇ ಮಾಡಲಾಗುತ್ತದೆ. ಜತೆಗೆ ಕರುಳಿನಲ್ಲಿರುವ ಅಡೆತಡೆ ವ್ಯವಸ್ಥೆಯನ್ನು (Gut Barrier) ಪರಿಶೀಲಿಸಬೇಕಾಗುತ್ತದೆ. ವಾಷಿಂಗ್ಟನ್ ವಿಶ್ವವಿದ್ಯಾಲಯದ ಡಾ.ಅಲೆಸ್ಯಾಂಡ್ರೋ ಬಿಟ್ಟೋ ಅವರು ಇಲಿಗಳ ಮೇಲೆ ರಪಾಮೈಸಿನ್ ಪ್ರಯೋಗ ಮಾಡಿ ಪರಿಣಾಮಗಳನ್ನು ಅಧ್ಯಯನ ಮಾಡಿದ್ದಾರೆ. ಸಸ್ತನಿಗಳಲ್ಲಿ ಇದನ್ನು ದೀರ್ಘಕಾಲ ಕೊಡಬೇಕಾಗಿರುವುದರಿಂದ ಇದನ್ನು ಯಾವಾಗ ಆರಂಭಿಸಬೇಕು ಎಂಬುದನ್ನು ನಿಶ್ಚಯಿಸಬೇಕಿದೆ. ರಪಾಮೈಸಿನ್ ಅನ್ನು ಜೀವನಪರ್ಯಂತ ಕೊಟ್ಟರೆ ನಿಜವಾಗಿಯೂ ಒಳ್ಳೆಯ ಪರಿಣಾಮಗಳಿವೆ.

ಯಾವುದೋ ಒಂದು ನಿರ್ದಿಷ್ಟ ಅವಧಿಯಲ್ಲಿ ಇದರ ಚಿಕಿತ್ಸೆ ಕೊಟ್ಟರೆ ಜೀವನಪರ್ಯಂತ ಪರಿಣಾಮಗಳು ಕಾಣಿಸಿಕೊಳ್ಳು ವುದೇ? ಇದು ಸದ್ಯದ ಪ್ರಶ್ನೆ. ಹೀಗೆ ಈ ಅವಧಿ ನಮಗೆ ದೊರಕಿದರೆ ಈ ಔಷಧ ಕೊಡುವ ಪ್ರಮಾಣ ಕಡಿಮೆ ಮಾಡಬಹುದು. ಹಾಗೆಯೇ ಔಷಧದ ರಿಸ್ಕ್ ಮತ್ತು ಪಾರ್ಶ್ವ ಪರಿಣಾಮಗಳನ್ನು ಕಡಿಮೆ ಮಾಡಬಹುದು ಎಂಬುದು ಅವರ ಅಭಿಮತ. ಭವಿಷ್ಯದ ದಿನಗಳಲ್ಲಿ ಈ ಔಷಧದ ಸಂಶೋಧನೆ ಮುಂದುವರಿದು ಅದರ ಪರಿಣಾಮಗಳಿಗೆ ನಾವು ಕಾಯಬೇಕು.

ಜಗತ್ತನ್ನು ಬದಲಿಸಿದ ವೈದ್ಯಕೀಯ ಬೆಳವಣಿಗೆಗಳು ಆರೋಗ್ಯ, ವೈದ್ಯಕೀಯ ಮತ್ತು ಔಷಧ ಸಂಬಂಧಿತ ಇತ್ತೀಚಿನ ಕೆಲವು ಬೆಳವಣಿಗೆಗಳು ಪ್ರಪಂಚದ ನಾಗರಿಕರ ಜೀವನವನ್ನು ಉತ್ತಮಗೊಳಿಸಲು, ಕಾಯಿಲೆಗಳಿಂದ ಮುಕ್ತಿ ದೊರಕಿಸಲು, ಜೀವಿತಾವಧಿ ಹೆಚ್ಚಿಸಲು ಕಾರಣವಾಗಿವೆ. ಆ ಪೈಕಿಯ ಕೆಲವು ಬೆಳವಣಿಗೆಗಳ ಬಗ್ಗೆ ಒಂದು ಇಣುಕುನೋಟ.

ಅರಿವಳಿಕೆ ಮತ್ತು ಸೋಂಕು ತಡೆಯುವ ಔಷಧಗಳು: ಮೊದಲಿನ ಕಾಲದ ಶಸ್ತ್ರಕ್ರಿಯೆಗಳು ಜನರಲ್ಲಿ ಭಯ ಹುಟ್ಟಿಸಿದ್ದವು, ಭೀಕರವಾಗಿದ್ದವು. 19ನೇ ಶತಮಾನದ ಮಧ್ಯಭಾಗದವರೆಗೆ ಇದೇ ಪರಿಸ್ಥಿತಿ ಇತ್ತು. 1846ರಲ್ಲಿ ವಿಲಿಯಂ ಟಿ.ಜಿ. ಮೋರ್ಟನ್ ಅವರು ಈಥರ್ ಎಂಬ ದ್ರಾವಣದ ಪವಾಡಸದೃಶ ಮುಖವನ್ನು ಅನಾವರಣಗೊಳಿಸಿದರು.

ಶಸ್ತ್ರಕ್ರಿಯೆಯ ಜತೆ ಮಿಳಿತವಾದ ನೋವು ಮತ್ತು ನರಳುವಿಕೆಯನ್ನು ತಪ್ಪಿಸಲು ಇದು ನಾಂದಿ ಹಾಡಿತು. ಅಂದರೆ ಅ ವಳಿಕೆ ಶಾಸ್ತ್ರ ಇದರ ನಂತರ ಹಂತ ಹಂತದಲ್ಲಿ ಬೆಳೆದು ಈಗಿನ ಉಚ್ಛ್ರಾಯ ಸ್ಥಿತಿಗೆ ತಲುಪಿದೆ. ಅದೇ ಸಮಯದಲ್ಲಿ ಶಸ್ತ್ರಕ್ರಿಯೆಗೆ ವರವಾದ ಇನ್ನೊಂದು ಕೊಡುಗೆ ಎಂದರೆ ಆಂಟಿಸೆಪ್ಸಿಸ್. ಆಪರೇಷನ್ ಥಿಯೇಟರ್ ಗಳಲ್ಲಿ ಸೋಂಕುರಹಿತ ವಾತಾವರಣ ಹುಟ್ಟಲು ಆಗ ಇದು ನಾಂದಿ ಹಾಡಿದ್ದರಿಂದ ಸೋಂಕಿನಿಂದ ಮರಣ ಹೊಂದಬಹುದಾದ ಕೋಟ್ಯಂತರ ಮಂದಿ ಉಳಿದಿದ್ದಾರೆ, ಆರೋಗ್ಯವಂತ ಜೀವನ ನಡೆಸುತ್ತಿದ್ದಾರೆ.

ಗರ್ಭ ನಿರೋಧಕ ಮಾತ್ರೆಗಳು: ಅಗಾಧ ಸಾಮಾಜಿಕ ಪರಿಣಾಮ ಬೀರಿದ ಇತ್ತೀಚಿನ ಒಂದು ಶೋಧವಿದು. 1960ರ ದಶಕ ದಲ್ಲಿಯೇ ಅಮೆರಿಕದ ಎಫ್ ಡಿಎ ಇದನ್ನು ಸುರಕ್ಷಿತ ಎಂದು ಒಪ್ಪಿದ್ದರೂ 1965-70ರ ಹೊತ್ತಿಗೆ ಅಲ್ಲಿ ಬಳಕೆಗೆ ಬಂದಿತು, ನಂತರ ಬೇರೆಡೆ ಜನಪ್ರಿಯವಾಯಿತು. ಈ ಪಿಲ್‌ಗಳ ದೆಸೆಯಿಂದ ಲಕ್ಷಾಂತರ ಮಹಿಳೆಯರಿಗೆ ತಮ್ಮ ಗರ್ಭದ ಮೇಲೆ ಹಿಡಿತ ಸಿಕ್ಕಿತು. ಇದೊಂದು ಸಾಮಾಜಿಕ ಕ್ರಾಂತಿ ಎಂದು ಭಾವಿಸಲಾಗಿದೆ. ಇದು ಕಾಯಿಲೆಯ ಚಿಕಿತ್ಸೆಗೆ ಉಪಯೋಗಿಸುವ ಔಷಧವಲ್ಲ. ಬದಲಿಗೆ, ಮಹಿಳೆಯರ ಜೀವನ ಉತ್ತಮಗೊಳಿಸಿ ಹೆಚ್ಚಿನ ಮಹಿಳೆಯರು ಹೊರಗಡೆ ಕೆಲಸ ಕೈಗೊಳ್ಳುವಂತೆ ಮಾಡಿದ ಜೀವನ ವಿಧಾನ ರೂಪಿಸಿದ ಔಷಧ.

ರಾಂಡಮೈಸಡ್ ಔಷದಗಳ ಪ್ರಯೋಗ: ಸಾಮಾನ್ಯಜನರಿಗೆ ಹೆಚ್ಚು ಗಮನಕ್ಕೆ ಬರದ ಬೆಳವಣಿಗೆಯಿದು. ಯಾವ ಚಿಕಿತ್ಸೆ ಮತ್ತು ಔಷಧ ಮನುಷ್ಯರಲ್ಲಿ ಕೆಲಸ ಮಾಡುತ್ತದೆ? ಔಷಧಗಳ ಪಾರ್ಶ್ವ ಪರಿಣಾಮಗಳೇನು? ಹೊಸ ಔಷಧಗಳ ಚಿಕಿತ್ಸಾ ಮಟ್ಟ ಎಷ್ಟು ಈ ಎಲ್ಲ ವಿವರಗಳು ಈ ಪರೀಕ್ಷಾ ಪ್ರಯೋಗಗಳಿಂದ ನಿಖರವಾಗಿ ತಿಳಿಯುತ್ತವೆ.

error: Content is protected !!