Friday, 7th October 2022

ಸ್ವಂತ ಮಗಳ ಮೇಲೆ ಅತ್ಯಾಚಾರ ಪ್ರಕರಣ: ತಂದೆಗೆ ಜೀವಿತಾವಧಿ ಜೈಲು ಶಿಕ್ಷೆ

rape

ಉಡುಪಿ: ಸ್ವಂತ ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಬಂಧಿತನಾಗಿದ್ದ ತಂದೆಯ ಮೇಲಿನ ದೋಷಾರೋಪಣೆ ಸಾಬೀತಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೊಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಎರ್ಮಾಳ್ ಕಲ್ಪನಾ ತೀರ್ಪು ಪ್ರಕಟಿಸಿದ್ದಾರೆ.

ಉಡುಪಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2020ರ ಮೇ ತಿಂಗಳಿನಲ್ಲಿ ಈ ಘಟನೆ ನಡೆದಿತ್ತು. ಮನೆಯಲ್ಲಿ ತಾಯಿ ಹಾಗೂ ಕಿರಿಯ ಸೋದರ ಇಲ್ಲದ ಸಂದರ್ಭ 41 ವರ್ಷದ ತಂದೆ 14 ವರ್ಷ ಪ್ರಾಯದ ತನ್ನ ಮಗಳ ಮೇಲೆ ಅತ್ಯಾಚಾರ ನಡೆಸಿದ್ದ. ಎರಡನೇ ಬಾರಿಯೂ ಅತ್ಯಾಚಾರ ನಡೆಸಿದ್ದು ಯಾರಿಗಾದರೂ ಹೇಳಿದಲ್ಲಿ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿದ್ದ.

ಆದರೆ ಬಾಲಕಿ ತನ್ನ ತಾಯಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಬಳಿಕ ತಾಯಿ ಈ ಬಗ್ಗೆ ಉಡುಪಿ ಮಹಿಳಾ ಠಾಣೆಗೆ ದೂರು ನೀಡಿದ್ದು, ಪೊಕ್ಸೊ ಕಾಯ್ದೆಯಡಿ ಆರೋಪಿ ತಂದೆಯನ್ನು ಬಂದಿಸಲಾಗಿತ್ತು.

ಒಟ್ಟು 23 ಸಾಕ್ಷಿಗಳ ಪೈಕಿ ನ್ಯಾಯಾಲಯದಲ್ಲಿ 11 ಮಂದಿಯ ವಿಚಾರಣೆ ನಡೆಸಲಾಗಿತ್ತು. ಸಂತ್ರಸ್ತ ಬಾಲಕಿ, ಬಾಲಕಿಯ ತಾಯಿ ಹಾಗೂ ನೆರೆಮನೆಯಾಕೆ ನೀಡಿದ ಸಾಕ್ಷಿಗಳು ಅಭಿಯೋಜನೆಗೆ ಪೂರಕವಾಗಿತ್ತು.

ಇವೆಲ್ಲವುಗಳ ಆಧಾರದಲ್ಲಿ ಬಾಲಕಿಯ ತಂದೆ ಅಪರಾಧಿ ಎಂದು ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ. ಅಪರಾಧಿಗೆ ಜೀವಿತಾವಧಿ ಜೈಲು ಶಿಕ್ಷೆ, 20 ಸಾವಿರ ರೂ.ದಂಡ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ 5 ಸಾವಿರ ರೂ.ದಂಡ ವಿಧಿಸಿದ್ದು, ಸಂತ್ರಸ್ತ ಬಾಲಕಿಗೆ ಸರಕಾರ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಆದೇಶಿಸಲಾಗಿದೆ.