Monday, 8th March 2021

ಪ್ರಾದೇಶಿಕ ಭಾಷೆಗಳನ್ನು ಸಮನಾಗಿ ಕಾಣುವಂತಾಗಲಿ

ಅಭಿಮತ

ಉಷಾ ಜೆ.ಎಂ., ಬೆಂಗಳೂರು

ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಬಹುಭಾಗಗಳಲ್ಲಿ ಕಾಣಬಹುದು. ಇಂತಹ ಶೌರ್ಯಭರಿತ ಇತಿಹಾಸ ವುಳ್ಳ ಕನ್ನಡ ನಾಡನ್ನು ಪ್ರತಿನಿಧಿಸುತ್ತಿರುವ ಇಂದಿನ ಜನಪ್ರತಿನಿಧಿಗಳು ನಾಡಿನ ನೆಲ, ಜಲ, ಭಾಷೆ ರಕ್ಷಣೆಯ ವಿಷಯದಲ್ಲಿ ಸ್ವಾಭಿಮಾನವನ್ನು ಮರೆತು ಗುಲಾಮರಂತೆ ವರ್ತಿಸುತ್ತಿದ್ದಾರೆ.

ಜನವರಿ 26, 1950ರಲ್ಲಿ ಭಾರತದ ಸಂವಿಧಾನ ಜಾರಿಗೆ ಬಂದಾಗ ಭಾಷಾನುಗುಣವಾಗಿ ರಾಜ್ಯಗಳ ಪುನರ್ ವಿಂಗಡಣೆ ಯಾಗಿರ ಲಿಲ್ಲ. 1949ರಲ್ಲಿ ಜವಾಹರ ಲಾಲ್ ನೆಹರು, ವಲ್ಲಭಭಾಯಿ ಪಟೇಲ್, ಪಟ್ಟಾಭಿ ಸೀತಾರಾಮಯ್ಯನವರನ್ನು ಒಳಗೊಂಡ ಜೆವಿಪಿ ಸಮಿತಿ, ಭಾಷೆಗಳ ಆಧಾರದ ಮೇಲೆ ರಾಜ್ಯಗಳನ್ನು ರಚಿಸಿದರೆ ದೇಶದ ಐಕ್ಯತೆಗೆ ಹಾಗೂ ಆರ್ಥಿಕ ಪ್ರಗತಿಗೆ ಧಕ್ಕೆ ಬರಬಹುದೆಂದು ಭಾಷಾವಾರು ಪ್ರಾಂತ್ಯಗಳ ರಚನೆಗೆ ಒಪ್ಪಿರಲಿಲ್ಲ.

ಇದರಿಂದ ನಿರಾಶರಾದ ಪೊಟ್ಟಿ ಶ್ರೀರಾಮುಲು ಪ್ರತ್ಯೇಕ ತೆಲುಗು ರಾಜ್ಯಕ್ಕಾಗಿ ಅಮರಣಾಂತರ ಉಪವಾಸ ಪ್ರಾರಂಭಿಸಿದರು. ಇವರ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸದ ಕಾರಣ 1952 ಡಿಸೆಂಬರ್ 15ರಂದು ತೀರಿ ಹೋದರು. ಇದರ ಪರಿಣಾಮ ತೆಲುಗು ಭಾಷಿಕರ ಪ್ರದೇಶಗಳಲ್ಲಿ ಹಿಂಸಾಚಾರ ಭುಗಿಲೆದ್ದಿತು. ಪರಿಸ್ಥಿತಿ ಕೈ ಮೀರುತ್ತಿರುವದನ್ನು ಅರಿತ ನೆಹರ ಅವರು 1952
ಡಿಸೆಂಬರ್ 19ರಂದು ಪ್ರತ್ಯೇಕ ಆಂಧ್ರ ಪ್ರದೇಶದ  ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದರು. ಈ ಘಟನೆ ಕರ್ನಾಟಕದ ಏಕೀಕರಣದ ಹೋರಾಟದ ಮೇಲೂ ಪ್ರಭಾವ ಬೀರಿತು.

ಶಂಕರಗೌಡ ಪಾಟೀಲರು ಮಾರ್ಚ್ 28, 1953ರಂದು ಹುಬ್ಬಳ್ಳಿ ಸಮೀಪದ ಅದರಗುಂಚಿಯಲ್ಲಿ ಉಪವಾಸ ಸತ್ಯಾಗ್ರಹ
ಪ್ರಾರಂಭಿಸುವುದರ ಮೂಲಕ ಕರ್ನಾಟಕ ಏಕೀಕರಣ ಹೋರಾಟಕ್ಕೆ ಚಾಲನೆ ಕೊಟ್ಟರು. ಕರ್ನಾಟಕದ ಬಹುತೇಕ ಎಲ್ಲಾ ಭಾಗಗಳಿಂದ ಅನೇಕರು ಅದರಗುಂಚಿಗೆ ಬಂದು ತಮ್ಮ ಬೆಂಬಲ ಸೂಚಿಸಿದರು. ಹುಬ್ಬಳ್ಳಿಯಲ್ಲಿ ನಡೆದ ವಿಶೇಷ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ಸಾವಿರಾರು ಜನ ಕಾಂಗ್ರೆಸ್ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದರು.

ಹಿಂಸಾರೂಪಕ್ಕೆ ತಿರುಗಿದ ಪರಿಸ್ಥಿತಿಯನ್ನು ನಿಯಂತ್ರಿಸಲು ಲಾಠಿ ಚಾರ್ಜ್, ಗೋಲಿಬಾರ್ ಮಾಡಿದ್ದರ ಪರಿಣಾಮ ಅನೇಕರು ಮೃತಪಟ್ಟರು. ಹುಬ್ಬಳ್ಳಿಯ ಗಲಭೆ ನಂತರ ಕರ್ನಾಟಕದ ಕಾಂಗ್ರೆಸ್ ನಾಯಕರು ಪ್ರಧಾನಿ ನೆಹರು ಅವರನ್ನು ಪ್ರತ್ಯೇಕ ರಾಜ್ಯ ಕ್ಕಾಗಿ ಒತ್ತಾಯಿಸತೊಡಗಿದರು. ಇದೆಲ್ಲದರ ಪರಿಣಾಮ 1956ರ ನವೆಂಬರ್ 1 ರಂದು ಹರಿದು ಹಂಚಿಹೋಗಿದ್ದ ಕರ್ನಾಟಕದ ಏಕೀಕರಣವಾಯಿತು.

ಬಹುಭಾಷೆಗಳಿಂದ ಕೂಡಿದ ನಮ್ಮ ಸಂವಿಧಾನದಲ್ಲಿ 343 ರಿಂದ 351ವರೆಗಿನ ವಿಧಿಗಳು ಭಾಷೆಗೆ ಸಂಬಂಧಿಸಿದವು. ಯಾವುದೇ ಒಂದು ರಾಜ್ಯ ಆ ರಾಜ್ಯದಲ್ಲಿ ಬಳಕೆಯಲ್ಲಿರುವ ಒಂದು ಅಥವಾ ಎರಡು ಭಾಷೆಗಳನ್ನು ಆಡಳಿತ ಭಾಷೆಯಾಗಿ ಉಪಯೋಗಿಸ ಬಹುದೆಂದು ಹೇಳಲಾಗಿದೆ. ಸಂವಿಧಾನದ ಪ್ರಕಾರ ಹಿಂದಿ ಮತ್ತು ಇಂಗ್ಲಿಷ್ ಕೇಂದ್ರ ಸರಕಾರದ ಆಡಳಿತ ಭಾಷೆಗಳು. ಹಿಂದಿ ಕೇವಲ ಕೇಂದ್ರ ಸರಕಾರದ ಆಡಳಿತ ಭಾಷೆಯಾಗಿಯೇ ಉಳಿದಿದ್ದರೆ ಸಮಸ್ಯೆಗಳು ಇರುತ್ತಿರಲಿಲ್ಲ.

ಹಿಂದಿಗೆ ಎಲ್ಲೂ ರಾಷ್ಟ್ರಭಾಷೆ ಎಂದು ಹೇಳದಿದ್ದರೂ, ಈ ಭಾಷೆಯನ್ನು ರಾಷ್ಟ್ರವ್ಯಾಪಿಯಾಗಿ ವಿಸ್ತರಿಸಲು ವಿಶೇಷ ಸವಲತ್ತು ಗಳನ್ನು ಸಂವಿಧಾನದಲ್ಲಿ ನೀಡಲಾಗಿದೆ. ಸಂವಿಧಾನವನ್ನು ಎಲ್ಲರೂ ಅನುಸರಿಸಲೇ ಬೇಕಾಗಿರುವುದರಿಂದ ಇದೇ ಅಂಶವನ್ನು
ಮುಂದಿಟ್ಟುಕೊಂಡು ಕೇಂದ್ರ ಸರಕಾರಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಿಂದಿಯೇತರ ರಾಜ್ಯಗಳ ಭಾಷೆಗಳನ್ನು ಕಡೆ ಗಣಿಸುತ್ತಲೇ ಬಂದಿದ್ದಾರೆ.

ಇದಕ್ಕೆ ಯಾವ ಪಕ್ಷಗಳ ಸರಕಾರಗಳೂ ಹೊರತಾಗಿಲ್ಲ. ಈ ಕಾರಣದಿಂದ ಉದ್ಯೋಗ, ಶಿಕ್ಷಣ, ಆಡಳಿತ, ರಾಜಕಾರಣ ಮುಂತಾದ ಹಲವಾರು ಕ್ಷೇತ್ರಗಳಲ್ಲಿ ಹಿಂದಿಯೇತರರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮಾತ್ರ ಇದು ಅತಿರೇಕಕ್ಕೆ ಹೋಗುತ್ತಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್, ಅಂಚೆ ಕಚೇರಿ, ಪಿಂಚಣಿ ವಿಭಾಗ, ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳಲ್ಲಿ ಹಂತ ಹಂತವಾಗಿ ಕನ್ನಡವನ್ನು ಕೈ ಬಿಟ್ಟು, ಹಿಂದಿಯಲ್ಲೇ
ಆಡಳಿತ ನಡೆಸುತ್ತಿದ್ದಾರೆ.

ಇದರಿಂದ ಕನ್ನಡ ಭಾಷೆಯೊಂದೇ ಗೊತ್ತಿರುವವರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಡಳಿತ ನಡೆಸಲು ಬೇಕಾದ ಕನಿಷ್ಠ ಕನ್ನಡ ಜ್ಞಾನವೂ ಅಲ್ಲಿನ ಸಿಬ್ಬಂದಿಗೆ ಇರುವುದಿಲ್ಲ. ಬ್ಯಾಂಕ್‌ನಲ್ಲಿ ಚಲನ್, ಅರ್ಜಿಗಳಲ್ಲಿ ಹಿಂದಿ ಮಾತ್ರವೇ ಇರುವು ದರಿಂದ ರೈತರು, ಮಹಿಳೆಯರು, ಹಿರಿಯರು ಮತ್ತು ಗ್ರಾಮೀಣ ಪ್ರದೇಶದ ಜನ ಕಷ್ಟ ಪಡುತ್ತಿದ್ದಾರೆ. ಶಿಕ್ಷಣದಲ್ಲಿ ತ್ರಿಭಾಷಾ ಸೂತ್ರವನ್ನು ಸರಕಾರಗಳು ಅಳವಡಿಸಿವೆ. ಹಾಗಂತ ಹಿಂದಿ ಭಾಷೆ ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ ಜನರಿಗೆ ತೊಂದರೆ ಯಾದರೂ ರಾಷ್ಟ್ರೀಕೃತ ಸಂಸ್ಥೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಅಳವಡಿಸದೇ ಇರುವುದನ್ನು ನೋಡಿದರೆ ಇದು ಹಿಂದಿಯ ಬಲವಂತದ ಹೇರಿಕೆಯಲ್ಲದೇ ಮತ್ತೇನು ಅಲ್ಲ.

ಸುಗಮವಾದ ಆಡಳಿತದ ದೃಷ್ಟಿಯಿಂದ ಮತ್ತು ಜನರ ಹಿತದೃಷ್ಟಿಯಿಂದ ಆಯಾ ರಾಜ್ಯಗಳ ಭಾಷೆಗಳನ್ನು ಬಳಕೆ ಮಾಡುವುದು ಸಾಮಾನ್ಯ ಜ್ಞಾನವಲ್ಲವೇ? ಈ ನಡೆಗೆ ಕಾರಣ ಸಂವಿಧಾನದಲ್ಲಿ ಹಿಂದಿಗೆ ವಿಶೇಷ ಸ್ಥಾನ ಕೊಟ್ಟಿರುವ ವಿಧಿ ಎಂದಾದರೆ
ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲಾ 22 ಪ್ರಾದೇಶಿಕ ಭಾಷೆಗಳಿಗೂ ಆಡಳಿತ ಭಾಷೆಯ ಸ್ಥಾನಮಾನ ಕೊಡಲು ಮತ್ತು ಭಾರತದ ಎಲ್ಲಾ ಭಾಷೆಗಳೂ ಸಮಾನವೆಂದು ಕಾಣುವ ಭಾಷಾನೀತಿ ತರಲು ಸಂವಿಧಾನಕ್ಕೆ ತಿದ್ದುಪಡಿ ತರುವ ಪ್ರಯತ್ನ
ಮಾಡಬಾರದೇಕೆ.?

ಶ್ರೀ ವಿಜಯನು ತನ್ನ ಕವಿರಾಜಮಾರ್ಗದಲ್ಲಿ ‘ಕಾವೇರಿಯಿಂದಮಾಗೋದಾವರಿವರಮಿರ್ದ’ ಎಂದು ವರ್ಣಿಸಿದ್ದಾನೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈಗಿನ ಮಹಾರಾಷ್ಟ್ರದ ದಕ್ಷಿಣ ಭಾಗಗಳು ಮತ್ತು ಆಂಧ್ರದ ಪಶ್ಚಿಮ ಭಾಗಗಳು ಕರ್ನಾಟಕದ ಭಾಗವಾಗಿ ದ್ದವು. ಬಂಗಾಳದ ಸೇನಾ ರಾಜವಂಶಸ್ಥರು, ಬಿಹಾರದ ಮಿಥಿಲಯಾ ಕರ್ನಾಟಕರು, ಮಧ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು, ರಾಷ್ಟ್ರಕೂಟರು, ವೆಂಗಿ ಚಾಲುಕ್ಯರು, ಇವರೆಲ್ಲರೂ ಕನ್ನಡ ಮೂಲದವರು.

ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಬಹುಭಾಗಗಳಲ್ಲಿ ಕಾಣಬಹುದು. ಇಂತಹ ಶೌರ್ಯಭರಿತ ಇತಿಹಾಸ ವುಳ್ಳ ಕನ್ನಡ ನಾಡನ್ನು ಪ್ರತಿನಿಽಸುತ್ತಿರುವ ಇಂದಿನ ಜನಪ್ರತಿನಿಧಿಗಳು ನಾಡಿನ ನೆಲ, ಜಲ, ಭಾಷೆ ರಕ್ಷಣೆಯ ವಿಷಯದಲ್ಲಿ ಸ್ವಾಭಿಮಾನವನ್ನು ಮರೆತು ಗುಲಾಮರಂತೆ ವರ್ತಿಸುತ್ತಿದ್ದಾರೆ. ಯಾವೊಬ್ಬ ಸಂಸದರು ರಾಷ್ಟ್ರೀಕೃತ ಸಂಸ್ಥೆಗಳಲ್ಲಿ ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸರಕಾರದ ಗಮನ ಸೆಳೆಯುತ್ತಿಲ್ಲ.

ಇನ್ನು ಕನ್ನಡದಲ್ಲೇ ಸೇವೆ ಸಿಗಬೇಕು ಎಂದು ಆಗ್ರಹಿಸುವವರನ್ನು ದೇಶದ್ರೋಹಿಗಳಂತೆ, ಅಸಹಿಷ್ಣುಗಳಂತೆ ನೋಡಿ, ರಾಜಕೀಯ ಬಣ್ಣ ಬಳಿಯುತ್ತಿದ್ದಾರೆ. ಆದರೆ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸುವಲ್ಲಿ ಎಲ್ಲಾ ಪಕ್ಷಗಳ ಕೊಡುಗೆ ಇದೆ ಎಂಬುದನ್ನು ಮಾತ್ರ ಯಾರು ಮರೆಯಬಾರದು. ಅನೇಕ ಬ್ರಿಟಿಷ್ ಅಧಿಕಾರಿಗಳು ಆಯಾ ಪ್ರಾಂತೀಯ ಭಾಷೆಗಳಲ್ಲಿ ಆಡಳಿತ ಮಾಡಿದರು.
ರೆ.ಎಫ್.ಕಿಟ್ಟಲ್‌ರವರು ಕನ್ನಡದಲ್ಲಿ ಅದ್ಭುತವಾದ ನಿಘಂಟನ್ನು ರಚಿಸಿದ್ದಾರೆ.

ಕನ್ನಡ ಶಾಸನಗಳನ್ನು ಬಿ.ಎಲ್.ರೈಸ್ ಸಂಗ್ರಹಿಸಿದ್ದಾರೆ. ಕೇವಲ ಕೃತಿ ರಚನೆಯಲ್ಲದೆ ಜನಸಾಮಾನ್ಯರ ಭಾಷೆಯಲ್ಲಿ ಆಡಳಿತ
ಮಾಡುವುದು ಹೆಚ್ಚು ಪರಿಣಾಮಕಾರಿ ಎಂದು ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಮಾಡಲು ಶ್ರಮವಹಿಸಿದ್ದಾರೆ. ಮದ್ರಾಸಿನ ಗವರ್ನರ್ ಆಗಿದ್ದ ಥಾಮಸ್ ಮನ್ರೊರವರು ನ್ಯಾಯಾಲಯದ ತೀರ್ಪುಗಳು ಜನಸಾಮಾನ್ಯರ ಭಾಷೆಯಲ್ಲಿದ್ದರೆ ನಿರಪರಾಧಿ
ಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂಬ ಅಭಿಪ್ರಾಯ ಹೊಂದಿದ್ದರು. ಮೈಸೂರು ಕಮಿಷನರ್ ರಾಗಿದ್ದ ಮಾರ್ಕ್ ಕಬ್ಬನ್ ಪ್ರತಿಯೊಂದು ತಾಲೂಕಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕೆಂಬ ಸುಧಾರಣೆ ತಂದರು.

ವಾಲ್ಟರ್ ಇಲಿಯಟ್ ಧಾರವಾಡದಲ್ಲಿ ಮರಾಠಿ ಶಾಲೆಯನ್ನು ತೆರೆದದ್ದನ್ನು ಪ್ರತಿಭಟಿಸಿ, ಕನ್ನಡದ ನೆಲದಲ್ಲಿ ಕನ್ನಡದಲ್ಲೇ ಶಿಕ್ಷಣ ನೀಡಬೇಕು ಎಂದು ವಾದಿಸಿ, ತನ್ನ ಸ್ವಂತ ಖರ್ಚಿನಲ್ಲಿ ಶಾಲೆ ತೆರೆದರು. ಬಳ್ಳಾರಿ ಭಾಗದ ಕಲೆಕ್ಟರ್ ಆಗಿದ್ದ ಎ.ಎಫ್.ಜೆ. ಮೆಕಾರ್ಡಿ ಕನ್ನಡಿಗರ ಜತೆ ತೆಲುಗಿನಲ್ಲಿ ಸಂವಹನ ಮಾಡುತ್ತಿದ್ದ ಅಧಿಕಾರಿಯನ್ನು ಗಮನಿಸಿ, ಕನ್ನಡದ ನೆಲದಲ್ಲಿ ಕನ್ನಡದ ಅಧಿಕಾರಿಗಳೇ ಇರಬೇಕೆಂದು ಘೋಷಿಸಿದ.

ಇದರರ್ಥ ಬ್ರಿಟಿಷ್ ಆಳ್ವಿಕೆಯಲ್ಲಿ ಎಲ್ಲವೂ ಸರಿ ಇತ್ತು ಎಂದು ಸಮರ್ಥಿಸಿಕೊಳ್ಳುವುದಲ್ಲ. ಇಂಗ್ಲಿಷ್ ಅಧಿಕಾರಿಗಳಿಗಿದ್ದ ಕನ್ನಡದ ಮೇಲಿದ್ದ ಪ್ರೀತಿ, ಅಭಿಮಾನ ನಮ್ಮ ನೆಲದ ರಾಜಕಾರಣಿಗಳಿಗೆ ಇಲ್ಲವಲ್ಲವೆಂಬುದು. ಇನ್ನೂ ‘ಯಥಾ ರಾಜಾ, ತಥಾ ಪ್ರಜಾ’ ಎನ್ನುವಂತೆ ಕನ್ನಡ ಜನರ ಭಾಷೆಯ ಮೇಲಿನ ನಿರ್ಲಿಪ್ತತೆ ಕೂಡ ಇದಕ್ಕೆ ಕಾರಣ. ಭಾಷೆಗಳ ಆಧಾರದ ಮೇಲೆ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ನಿರ್ಮಿಸಲು ಆದ ಹೋರಾಟಗಳನ್ನು ಮರೆಯದೆ ಭಾರತದ ನುಡಿ ವೈವಿಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ 22 ಪ್ರಾದೇಶಿಕ ಭಾಷೆಗಳನ್ನು ಸಮಾನವಾಗಿ ಕಾಣುವ ಸಂವಿಧಾನದ ತಿದ್ದುಪಡಿ ಬರುವಂತಾಗಲಿ.

Leave a Reply

Your email address will not be published. Required fields are marked *