Wednesday, 5th October 2022

ಕಾಡುಗೊಲ್ಲ ಪ್ರತಿನಿಧಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ: ಪಿ.ಆರ್.ದಾಸ್

ತುಮಕೂರು: ಮದ್ಯ ಕರ್ನಾಟಕದಲ್ಲಿ ವಾಸವಾಗಿರುವ ಹಳೆಯ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ಕಾಡುಗೊಲ್ಲ ಸಮುದಾಯದ ರಾಜಕೀಯ ಆಸ್ಮಿತೆಯ ಕುರುವಾಗಿ ಅಕ್ಟೋಬರ್ 28 ರಂದು ನಡೆಯವ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವುದಾಗಿ ಹಿರಿಯ ವಕೀಲ ಪಿ.ಆರ್.ದಾಸ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಕರ್ನಾಟಕಕ್ಕೆ ಸೇರಿದಂತೆ ತುಮಕೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ ಭಾಗಗಳಲ್ಲಿ ಕಾಡುಗೊಲ್ಲರು ಹೆಚ್ಚಾಗಿ ಕಂಡು ಬರುತ್ತಿದ್ದು,ಸಿದ್ದರಾಮಪ್ಪ, ತಿಪ್ಪೇಸ್ವಾಮಿ ಯವರ ನಂತರ ಶಾಸಕರಾದ ಉದಾಹರಣೆಯಿಲ್ಲ. ಕಳೆದ ಸಾಲಿನಲ್ಲಿ ಜಯಮ್ಮ ಬಾಲರಾಜು ಅವರು ವಿಧಾನಪರಿಷತ್ ಸದಸ್ಯ ರಾಗಿದ್ದರು. ಇದನ್ನು ಹೊರತು ಪಡಿಸಿದಂತೆ ನಮ್ಮ ದ್ವನಿಯಾಗಿ ಕೆಲಸ ಮಾಡಲು ಯಾವುದೇ ಜನಪ್ರತಿನಿಧಿ ವಿಧಾನಸಭೆ ಮತ್ತು ಪರಿಷತ್ತಿನಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಈ ಸಾಲಿನ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದರು.

ಐದು ಜಿಲ್ಲೆಗಳನ್ನು ಒಳಗೊಂಡ ಆಗ್ನೇಯ ಪದವಿಧರರ ಕ್ಷೇತ್ರದಲ್ಲಿ ಕಾಡುಗೊಲ್ಲ ಸಮುದಾಯಕ್ಕೆ ಸೇರಿದ ಸುಮಾರು 8000 ಮತದಾರರಿದ್ದಾರೆ. ಅಲ್ಲದೆ ಶಿಕ್ಷಕರು ಸಹ ಇದ್ದಾರೆ. ಇವರ ಜೊತೆಗೆ, ದಲಿತ, ಹಿಂದುಳಿದ ಸಮುದಾಯಗಳ ಮತದಾರರು ನಮಗೆ ಮತ ನೀಡಬೇಕೆಂಬುದು ನಮ್ಮ ಮನವಿ.ಮೂಲತಃ ಚಿತ್ರದುರ್ಗ ಜಿಲ್ಲೆ ಹಿರಿಯೂರಿನವನಾದ ನಾನು ಬೆಂಗಳೂರಿನಲ್ಲಿ ವಕೀಲ ನಾಗಿ ಕೆಲಸ ಮಾಡುತ್ತಿದ್ದೇನೆ.

ವಿದ್ಯಾರ್ಥಿ ದಿಸೆಯಿಂದಲ್ಲಿ ತಳ ಸಮುದಾಯಗಳ ಸಂಘಟನೆಯಲ್ಲಿ ತೊಡಗಿದ್ದು, ನಮ್ಮೆಲ್ಲರ ಹೋರಾಟದ ಫಲವೇ ಕಾಡುಗೊ ಲ್ಲರ ಅಭಿವೃದ್ದಿ ನಿಗಮ.ರಾಜಕೀಯವಾಗಿ ಈ ಸಮುದಾಯವನ್ನು ಕೆಲವರು ಗುತ್ತಿಗೆ ಪಡೆದಂತೆ ನಡೆದುಕೊಳ್ಳುತ್ತಿದ್ದು, ಇವರ ಕಪಿಮುಷ್ಠಿಯಿಂದ ಬಿಡಿಸುವ ಸಲುವಾಗಿ ಕಾಡುಗೊಲ್ಲ ಸಮುದಾಯದಲ್ಲಿ ಜಾಗೃತಿಯ ಜೊತೆಗೆ, ರಾಜಕೀಯ ಪ್ರಜ್ಞೆ ಬೆಳೆಸಲು ಚುನಾವಣೆಯಲ್ಲಿ ಸ್ಪರ್ಧಿಸಿರುವುದಾಗಿ ಪಿ.ಆರ್.ದಾಸ್ ನುಡಿದರು.

ರಾಜ್ಯ ಕಾಡುಗೊಲ್ಲರ ಒಕ್ಕೂಟಗಳ ಪ್ರಧಾನ ಸಂಚಾಲಕ ಡಾ.ದೊಡ್ಡಮಲ್ಲಯ್ಯ ಮಾತನಾಡಿ,ಮದ್ಯ ಕರ್ನಾಟಕ ಭಾಗದಲ್ಲಿ ಇರುವ ಗೊಲ್ಲ ಸಮುದಾಯದಲ್ಲಿ ಶೇ99ರಷ್ಟು ಜನಸಂಖ್ಯೆ ಕಾಡುಗೊಲ್ಲರಿದ್ದೇವೆ.ಆದರೆ ಪ್ರಮುಖ ರಾಜಕೀಯ ಅಧಿಕಾರವನ್ನು ಗೊಲ್ಲಸಮುದಾಯ ಪಡೆದು, ಕಾಡುಗೊಲ್ಲರಿಗೆ ಮೋಸ ಮಾಡುತ್ತಿದೆ.ಇದರ ವಿರುದ್ದ ನಿರ್ಣಾಯಕ ಹೋರಾಟಕ್ಕೆ ಆಗ್ನೇಯ ಪದವಿಧರರ ಚುನಾವಣೆ ವೇದಿಕೆಯಾಗಲಿದೆ ಎಂದರು.

ರಾಜ್ಯ ಕಾಡುಗೊಲ್ಲರ ಅಸ್ಮಿತೆ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಿ.ಕೆ.ನಾಗಣ್ಣ ಮಾತನಾಡಿ, ಗೊಲ್ಲ ಎನ್ನುವುದು ಒಂದು ಜಾತಿ, ಕಾಡುಗೊಲ್ಲ ಎಂಬುದು ಒಂದು ಬುಡಕಟ್ಟು. ಹಾಗಾಗಿ ಗೊಲ್ಲ ಮತ್ತು ಕಾಡುಗೊಲ್ಲರ ನಡುವೆ ಸಾಕಷ್ಟು ಅಂತರ ವಿದೆ. ಆದರೆ ಇದನ್ನು ಜನರಿಗೆ ತಿಳಿಸುವ ಮೂಲಕ ಪ್ರತ್ಯೇಕ ರಾಜಕೀಯ ಅಸ್ಥಿತ್ವವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ  ಪಿ.ಆರ್.ದಾಸ್ ಅವರು ಅಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಗೆ ಇಳಿದಿದ್ದಾರೆ.

ಮತದಾರರು ಇವರಿಗೆ ಮತ ನೀಡುವ ಮೂಲಕ ತಳ ಸಮುದಾಯಗಳ ರಾಜಕೀಯ ಅಸ್ಥಿತ್ವದ ಹೋರಾಟಕ್ಕೆ ಬೆಂಬಲ ಸೂಚಿಸ ಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕರಿಕೆರೆ ರಾಮಣ್ಣ, ಸಂಪತ್‌ಕುಮಾರ್ ಸೇರಿದಂತೆ ಹಲವರು ಉಪಸ್ಥಿತ ರಿದ್ದರು.