Thursday, 3rd December 2020

ಕಾಶೀಗೌಡ ರಾಜೀನಾಮೆ ಶಿಷ್ಟಾಚಾರ ಪಾಲನೆಯಾಗಿಲ್ಲ: ಎಸ್ಪಿ ಅಡಾವತ್ ಹೇಳಿಕೆ

ಬಳ್ಳಾರಿ: ಹಂಪಿ ಡಿವೈಎಸ್ಪಿ ಕಾಶೀಗೌಡ ಅವರು ಸಲ್ಲಿಸಿದ ರಾಜೀನಾಮೆ ವಿಚಾರದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಅವರು ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿ ಡಿವೈಎಸ್ಪಿ ಎಸ್​.ಎಸ್​​.ಕಾಶಿ ಗೌಡ ಅವರು ರಾಜೀನಾಮೆ ನೀಡಿ ರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಲ್ಲಿವರೆಗೆ ನನ್ನ ಕಚೇರಿಗೆ ಯಾವುದೇ ಮಾಹಿತಿ ಬಂದಿಲ್ಲ. ಒಂದು ವೇಳೆ ಆ ಪತ್ರ ಬಂದಿದ್ದರೂ ಸಹ ಶಿಷ್ಟಾಚಾರ ಪಾಲನೆಯಾಗಿಲ್ಲ. ಈ ಹಿನ್ನೆಲೆ ಆ ಪತ್ರವನ್ನು  ವಾಪಸ್ ಕಳಿಸಿರಬಹುದು ಎಂದು ತಿಳಿಸಿದರು. ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಬಳ್ಳಾರಿ ವಲಯದ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಯನ್ನ ಕಳೆದ ಅ. 22ರಂದು ನಡೆಸಲಾಗಿತ್ತು.
ಈ  ಸಭೆಯಲ್ಲಿ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಎಸ್​​ಪಿಗಳು, ಡಿವೈಎಸ್​​ಪಿ, ಸಿಪಿಐಗಳು ಅಧಿಕಾರಿಗಳು ಭಾಗ ವಹಿಸಿದ್ದರು. ಅಕ್ರಮ ಚಟುವಟಿಕೆ ಸಲುವಾಗಿಯೇ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿಯವರು ಸಭೆಯಲ್ಲಿ ಎಲ್ಲ ಹಂತದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು ನಿಜ. ನನ್ನನ್ನೂ ಒಳಗೊಂಡಂತೆ ಎಲ್ಲ ಹಂತದ ಅಧಿಕಾರಿಗಳಿಗೂ ಕೂಡ ಸಭೆಯಲ್ಲಿ‌ ಬಿಸಿ‌ ಮುಟ್ಟಿಸಿದ್ದಾರೆ. ಆದರೆ, ಪ್ರತ್ಯೇಕವಾಗಿ ಹಂಪಿಯ ಡಿವೈಎಸ್ಪಿ ಕಾಶಿಗೌಡ ಅವರನ್ನೇ ಗುರಿಯನ್ನಾಗಿಸಿಕೊಂಡು ಹೇಳಿಲ್ಲ ಎಂದರು.
ಕೆಳ ಹಂತದ ಸಿಬ್ಬಂದಿಗಳು ಮೇಲಾಧಿಕಾರಿಯೊಂದಿಗೆ ಒಂದೊಮ್ಮೆ ಸಂಪರ್ಕ ಹೊಂದಿದ್ದರೆ ಅದು ಠಾಣಾ ವ್ಯಾಪ್ತಿಯ ಮೇಲಾಧಿ ಕಾರಿಗಳಿಗೆ ತೊಂದರೆಯೇನಿಲ್ಲ. ಠಾಣಾ ಹಂತದ ಅಧಿಕಾರಿಗಳನ್ನು ಬ್ರೇಕ್ ಮಾಡಿ ಮೇಲಧಿಕಾರಿಯೊಂದಿಗೆ ನೇರವಾಗಿ ಸಂಪರ್ಕ ಹೊಂದಿ, ಇಲಾಖಾ ಕಡತಗಳನ್ನ ಹೊತ್ತು ತಂದರೆ ಖಡಾ ಖಂಡಿತವಾಗಿ ತಿರಸ್ಕರಿಸಲಾಗುವುದು ಎಂದು  ಸ್ಪಷ್ಟಪಡಿಸಿದರು.

Leave a Reply

Your email address will not be published. Required fields are marked *