Sunday, 3rd July 2022

ಮೌಲ್ಯಮಾಪನಕ್ಕೆ ಒತ್ತಡ ಬೇಡ

ದ್ವಿತೀಯ ಪಿಯುಸಿ ಫಲಿತಾಂಶ ಜೂನ್ ೩ನೇ ವಾರದಲ್ಲಿ ಪ್ರಕಟವಾಗಲಿದ್ದು, ಇದೇ ೨೪ರಿಂದ ಮೌಲ್ಯ ಮಾಪನ ಆರಂಭವಾಗಲಿದೆ. ಜೂನ್ ೧೬ರ ಒಳಗೆ ಮೌಲ್ಯಮಾಪನ ಮುಗಿಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದ್ದಾರೆ.

ಶಿಕ್ಷಣ ಇಲಾಖೆಯು ನಿಗದಿಪಡಿಸಿದ ಅವಧಿಯೊಳಗೆ ಮೌಲ್ಯಮಾಪನ ಮುಗಿಯಬೇಕಾದರೆ ಮೌಲ್ಯಮಾಪಕರು ದಿನಕ್ಕೆ ೨೪ ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಬೇಕು ಎಂದು ಇಲಾಖೆ ಸೂಚಿಸಿದೆ. ನಿಜಕ್ಕೂ ಇಷ್ಟು ಕಡಿಮೆ ಅವಧಿಯಲ್ಲಿ ಹೆಚ್ಚೆಚ್ಚು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದರೆ ದೋಷಮುಕ್ತ ವಾಗಿರಲು ಸಾಧ್ಯವಿಲ್ಲ. ಇಷ್ಟೊಂದು ಗಡಿಬಿಡಿಯಲ್ಲಿ ಮೌಲ್ಯಮಾಪನ ಮಾಡುವುದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಅಂಕಗಳು ಬಾರದಿರಬಹುದು, ಸಾಧಾರಣ ಮಟ್ಟದ ವಿದ್ಯಾರ್ಥಿಗಳಿಗೆ ಅವರ ನಿರೀಕ್ಷೆಗೆ ಮೀರಿ ಅಂಕಗಳು ಬರುವ ಸಾಧ್ಯತೆ ಬಹಳಷ್ಟು ಇರುತ್ತದೆ. ಈ ಹಿಂದೆಯೂ ಈ ತರ ಸಾಕಷ್ಟು ಬಾರಿ ಆಗಿದೆ. ಒಂದು ಪತ್ರಿಕೆ ಬರೆಯಲು ಮೂರು ಗಂಟೆ ಅವಕಾಶ ಕೊಡುವ ಇಲಾಖೆಯು ಒಂದೇ ದಿನಕ್ಕೆ ೨೪ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡುವುದು ಹೇಗೆ ಎಂಬುದನ್ನು ಯೋಚಿಸಬೇಕಿದೆ.

ಒಂದು ವೇಳೆ ಗಡಿಬಿಡಿಯಲ್ಲಿ ಅಂಕಗಳನ್ನು ಕೊಟ್ಟರೂ ಒಟ್ಟು ಅಂಕ ಕೂಡಿಸುವುದರಲ್ಲಾದರೂ ತಪ್ಪಾಗುತ್ತದೆ. ಈ ಹಿಂದೆ ಅನೇಕ ವಿದ್ಯಾರ್ಥಿಗಳು ಪ್ರತಿ ವರ್ಷ ರೀ ವ್ಯಾಲ್ಯೂವೇಷನ್‌ಗೆ ಹಾಕಿದಾಗ ಇದು ಸಾಬೀತಾಗಿದೆ. ಈ ತಪ್ಪುಗಳಿಗೆ ಮೂಲ ಕಾರಣ ಮೌಲ್ಯಮಾಪಕರ ಮೇಲೆ ಅನಗತ್ಯವಾಗಿ ಹೇರುವ ಒತ್ತಡ. ಮೌಲ್ಯ ಮಾಪಕರು ಒತ್ತಡರಹಿತರಾಗಿದ್ದಲ್ಲಿ ಉತ್ತರಪತ್ರಿಕೆಯ ಮೌಲ್ಯ ನಿರ್ಧಾರ ಸಮರ್ಪಕವಾಗಿರುತ್ತದೆ ಮತ್ತು ಅಂಕಗಳ ಕೂಡಿಸುವಿಕೆಯಲ್ಲೂ ತಪ್ಪುಗಳನ್ನು ನಿವಾರಿಸ ಬಹುದು.

ಆಗ ಮಾತ್ರ ಮೌಲ್ಯಮಾಪಕರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೂಕ್ತ ನ್ಯಾಯ ಕೊಡಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಮೌಲ್ಯಮಾಪಕರಿಗೆ ಯಾವುದೇ ಒತ್ತಡ ಇಲ್ಲದ ವಾತಾವರಣವನ್ನು ಇಲಾಖೆ ಕಲ್ಪಿಸಬೇಕಿದೆ. ಅಲ್ಲದೆ, ಮೌಲ್ಯಮಾಪಕರಿಗೆ ಕೊಡುವ ಸಂಭಾವನೆಗಳ ಬಗ್ಗೆಯೂ ಅನೇಕ ತಕರಾರುಗಳಿದ್ದು, ಸರಕಾರ ಕೂಡಲೇ ಮೌಲ್ಯಮಾಪಕರ ಸಂಭಾವನೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕಿದೆ.