Tuesday, 27th July 2021

ಜೀವದ ಹಂಗು ತೊರೆದು, ಮತ್ತಷ್ಟು ಜೀವನ್ಮುಖಿಯಾದ ಸಾಹಸಿ ಬ್ರಾನ್ಸನ್‌ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್‌

vbhat@me.com

ಯಾರು ಜೀವದ ಹಂಗು ತೊರೆದು ಪರಮ ಸಾಹಸಿಗಳಾಗುತ್ತಾರೋ, ಯಾರು ತಮ್ಮ ಕನಸುಗಳಿಗೆ ಸದಾ ಕಾವು ಕೊಟ್ಟು ಮರಿ ಮಾಡಿ, ಬಾನಂಗಳದಲ್ಲಿ ಹಾರಿ ಬಿಡುತ್ತಾರೋ, ಬೇರೆಯವರಿಂದ ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದ ನಂತರ ಅದನ್ನು ಯಾರು ಸಾಧ್ಯ ಮಾಡಿ ತೋರಿಸುತ್ತಾರೋ, ಜೀವನದಲ್ಲಿ ಎಲ್ಲಾ ಮುಗಿದು ಹೋಯಿತು ಎಂದು ಭಾವಿಸಿದ ನಂತರ, ಫೀನಿಕ್ಸ ಹಕ್ಕಿಯಂತೆ ಬೂದಿಯಿಂದ ಮೇಲೆದ್ದು ಬರುತ್ತಾರೋ, ಅವರು ಮಾತ್ರ ಬ್ರಾನ್ಸನ್ ಆಗಲು ಸಾಧ್ಯ.

ರಿಚರ್ಡ್ ಬ್ರಾನ್ಸನ್ ಬಗ್ಗೆ ನನ್ನದು ಅತಿಯಾದ obsession. ನಾನು ಅವನನ್ನು ಕಳೆದ ಇಪ್ಪತ್ನಾಲ್ಕು ವರ್ಷಗಳಿಂದ ಕೊರಳ ಸ್ನೇಹಿತನಂತೆ  ಹಿಂಬಾಲಿಸುತ್ತಿದ್ದೇನೆ. ಹಾಗಂತ ಅವನೇನು ನನ್ನ ರಕ್ತ ಸಂಬಂಧಿಯೂ ಅಲ್ಲ. ಸ್ನೇಹಿತನೂ ಅಲ್ಲ. ಅವನ ಕಂಪನಿಗಳಲ್ಲಿ ಪಾಲುದಾರನೂ ಅಲ್ಲ. ಆದರೆ ರಿಚರ್ಡ್ ಬ್ರಾನ್ಸನ್ ನನ್ನ ಪಾಲಿಗೆ ಒಬ್ಬ ಅಪರೂಪದ ವ್ಯಕ್ತಿ. ನಾನು ಅವನ ಒಳ್ಳೆಯ, ಸ್ಪೂರ್ತಿದಾಯಕ ವಿಚಾರಗಳನ್ನು ಓದಿದಾಗಲೆಲ್ಲ, ಅವನ್ನು ಜತನದಿಂದ ಹೆಕ್ಕಿ, ನನ್ನ ಓದುಗರ ಮುಂದೆ ಹರಡಿದ್ದೇನೆ.

ನಾನು ’ವಿಜಯ ಕರ್ನಾಟಕ’ ದಿನಗಳಿಂದಲೂ ಅವನ ಬಗ್ಗೆ ಬರೆಯುತ್ತಿದ್ದೇನೆ. ಕೆಲವು ಸಲ ಇವನ ಬಗ್ಗೆ ಬರೆದಿದ್ದು ಅತಿಯಾಯ್ತು ಎಂದೆನಿಸಿದರೂ ಸುಮ್ಮನಾಗಿಲ್ಲ. ಒಳ್ಳೆಯ ವಿಷಯಗಳನ್ನು ಎಷ್ಟೇ ಹೇಳಿದರೂ ಅದು ಅಪಥ್ಯ ವಾಗುವುದಿಲ್ಲ ಮತ್ತು ಒಳ್ಳೆಯ ವಿಷಯಗಳನ್ನು ಹೆಚ್ಚು ಹೆಚ್ಚು ಹೇಳಬೇಕು ಎಂದು ಅವನ ಬಗ್ಗೆ ಸತತ ವಾಗಿ ಬರೆದೆ. ಎಲ್ಲಿ ಬ್ರಿಟನ್‌ನಲ್ಲಿ ಹುಟ್ಟಿದ ಬ್ರಾನ್ಸನ್.. ಎಲ್ಲಿಯ ಕನ್ನಡ ಓದುಗರು..? ನನಗೆ ಹತ್ತಿದ ಗೀಳನ್ನು ಓದುಗರಿಗೆ ವರ್ಗಾಯಿಸಿದೆ. ಅವರೂ ಬ್ರಾನ್ಸನ್ ವೈರಸ್ಸಿನಿಂದ ಸೋಂಕಿತರಾದರು. ಅವನ ಜೀವನ, ವಿಚಾರಗಳನ್ನು ಓದಿ ತಮ್ಮಷ್ಟಕ್ಕೇ ಪ್ರೀತಿಯಲಾರಂಭಿಸಿದರು.

ಕೆಲವರು ತಮ್ಮ ಕಾರಿನ ಹಿಂಬದಿಗೆ ರಿಚರ್ಡ್ ಬ್ರಾನ್ಸನ್ ಎಂದು ಬರೆಯಿಸಿಕೊಂಡರು. ’ಐ ಲವ್ ಬ್ರಾನ್ಸನ್’ ಎಂದು ಸ್ಟಿಕ್ಕರ್ ಅಂಟಿಸಿಕೊಂಡರು. I belong to Richard Branson Club ಎಂದು ಕಾರಿನ ಹಿಂಬದಿಗೆ, ಸ್ಕೂಟರಿನ ಮುಂಬದಿಗೆ ಬರೆಯಿಸಿಕೊಂಡರು. ನನ್ನ ಓದುಗ ಮಿತ್ರ ಭೂಷಣ್ ತನ್ನ ಹೆಸರನ್ನು ’ಭೂಷಣ್ ಬ್ರಾನ್ಸನ್’ ಎಂದು ಬದಲಿಸಿಕೊಂಡ! ದಾವಣಗೆರೆಯಲ್ಲಿ, ಅರಸೀಕೆರೆಯಲ್ಲಿ, ಹೊಸಪೇಟೆಯಲ್ಲಿ, ಮೈಸೂರಿನಲ್ಲಿ, ಹಾಸನದಲ್ಲಿ ಬ್ರಾನ್ಸನ್ ಹೆಸರಿನಲ್ಲಿ ಸಂಘಗಳು ತಲೆಯೆತ್ತಿದವು. ನಾನು ಈ ಎಲ್ಲಾ ಊರುಗಳಿಗೆ ಹೋಗಿ, ಬ್ರಾನ್ಸನ್ ಸಂಘ ಗಳನ್ನು ಉದ್ಘಾಟಿಸಿ ಬಂದೆ. ದಾವಣಗೆರೆಯ ವಿರೂಪಾಕ್ಷ ಅಂಗಡಿಯವರು ತಮ್ಮ ಮಗನಿಗೆ ಬ್ರಾನ್ಸನಪ್ಪ ಎಂದೇ ಹೆಸರಿಟ್ಟರು. ನಾನು ಆ ನಾಮಕರಣ ಕಾರ್ಯಕ್ರಮಕ್ಕೂ ಹೋಗಿದ್ದೆ.

ಚೋಳಹಿರೇವಾಡಿಯ ಶಂಕರ ಗೌಡರು ಹೊಸತಾಗಿ ಕಟ್ಟಿಸಿದ ತಮ್ಮ ಮನೆಗೆ ’ಬ್ರಾನ್ಸನ್ ನಿವಾಸ’ ಎಂದು ಹೆಸರಿಟ್ಟರು. ನನ್ನ ವೈದ್ಯ ಸ್ನೇಹಿತರಾದ ಡಾ.ಕಿರಣ್ ವಾಡಿ ತಮ್ಮ ಪ್ರೀತಿಯ ನಾಯಿಗೆ ’ಬ್ರಾನ್ಸನ್’ ಎಂದು ಹೆಸರಿಟ್ಟರು. ಕೆಲವು ಸ್ನೇಹಿತರು ಬ್ರಾನ್ಸನ್ ಹೆಸರಿನಲ್ಲಿ ವಾಟ್ಸಾಪ್ ಗ್ರೂಪ್‌ಗಳನ್ನು ಮಾಡಿದರು. ಆತ
ಏನೇ ಮಾಡಲಿ, ಮಾತಾಡಲಿ ಅವನ್ನೆಲ್ಲ ಆ ಗ್ರೂಪ್ ನಲ್ಲಿ ಶೇರ್ ಮಾಡಲಾರಂಭಿಸಿದರು. ಎರಡು ವರ್ಷಗಳ ಹಿಂದೆ, ನಾನು ವಿಮಾನದಲ್ಲಿ ಹೋಗುವಾಗ, ನನ್ನ
ಪಕ್ಕದಲ್ಲಿ ಕುಳಿತವರೊಬ್ಬರು ನಾನು ಬ್ರಾನ್ಸನ್ ಬಗ್ಗೆ ಬರೆದ ’ರಿಚರ್ಡ್ ಬ್ರಾನ್ಸನ್ ವರ್ಜಿನಲ್ ವಿಚಾರಗಳು’ ಎಂಬ ಪುಸ್ತಕವನ್ನು ಓದುತ್ತಿದ್ದರು.

ನಾನು ಮೆಲ್ಲಗೆ, ಬೇಕೆಂದೇ ’ಸಾರ್, ಯಾವ ಪುಸ್ತಕ ಓದುತ್ತಿದ್ದೀರಿ?’ ಎಂದು ಕೇಳಿದೆ. ಅವರು ನನ್ನನ್ನು ದುರುಗುಟ್ಟಿ ನೋಡಿ, ಪುಸ್ತಕದ ಮುಖ ಪುಟವನ್ನು ನನ್ನ ಮುಖಕ್ಕೆ ಹಿಡಿದರು. ಅವರ ಮುಖದಲ್ಲಿ ಅಸಹನೆಯಿತ್ತು. ’ಓಹೋ.. ಅದಾ?’ ಎಂದು ಸುಮ್ಮನಾದೆ. ಇಳಿದು ಹೋಗುವಾಗ, ’ಸಾರ್, ಆ ಪುಸ್ತಕ ಬರೆದವ ನಾನೇ’
ಎಂದು ಮೆಲ್ಲಗೆ ಹೇಳಿದೆ. ಅವರಿಗೆ ನಂಬಲು ಆಗಲಿಲ್ಲ. ಬ್ರಾನ್ಸನ್ ಬಗ್ಗೆ ನಾನು ಬರೆದ ’ವರ್ಜಿನಲ್ ವಿಚಾರಗಳು’ ಕೃತಿಯ ಹತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿರಲು ಸಾಕು. ವರ್ಷದಲ್ಲಿ ಕನಿಷ್ಠ ಎರಡು ಆವೃತ್ತಿಗಳು ಹೊರಬರುತ್ತಿವೆ.

ಮಂಡ್ಯದ ಕೆ.ಜೆ.ರಮೇಶ ಗೌಡರು ಪ್ರತಿ ವರ್ಷ ತಮ್ಮ ಜನ್ಮದಿನದಂದು ಈ ಪುಸ್ತಕದ ಮುನ್ನೂರು ಪ್ರತಿಗಳನ್ನು ಶಾಲಾ ಮಕ್ಕಳಿಗೆ, ಕಳೆದ ಐದು ವರ್ಷಗಳಿಂದ
ಕೊಡುತ್ತಿzರೆ. ತಾವು ಕೊಡುವ ಪುಸ್ತಕಗಳನ್ನು ಓದಿ, ಒಬ್ಬನಾದರೂ ಅವನಂತಾದರೆ ತಮ್ಮ ಶ್ರಮ ಸಾರ್ಥಕ ಎಂದು ಅವರು ಭಾವಿಸಿದ್ದಾರೆ. ಇವು ನನ್ನ ಗಮನಕ್ಕೆ ಬಂದಿರುವ ಕೆಲವು ಸಂಗತಿಗಳು. ಇನ್ನೂ ಅನೇಕ ಸಣ್ಣ ಪುಟ್ಟ ಪ್ರಸಂಗಗಳನ್ನು ಹೇಳಿಲ್ಲ. ಇನ್ನು ಗಮನಕ್ಕೆ ಬಾರದವು ಎಷ್ಟೋ? . ಬ್ರಾನ್ಸನ್ ಬಗ್ಗೆ ನನಗೆ ಯಾಕೆ ಆ ಪರಿ ಸೆಳೆತ, ಗೀಳು, obsession ಎಂದು ನೀವು ಕೇಳಬಹುದು. ಇದರಲ್ಲಿ ನನ್ನ ಹೆಚ್ಚುಗಾರಿಕೆಯೇನಿಲ್ಲ. ಯಾರೋ ತಮ್ಮ ಹೆಸರನ್ನು ಬದಲಿಸಿಕೊಂಡರೆ, ತಮ್ಮ ಮನೆಗೆ ಆತನ ಹೆಸರಿಟ್ಟರೆ, ಮಗನಿಗೆ ಅವನ ಹೆಸರಿಟ್ಟರೆ, ಅವನ ಹೆಸರಿನಲ್ಲಿ ಸಂಘ ಸ್ಥಾಪಿಸಿದರೆ ಅಥವಾ ಇನ್ನೂ ಏನೇನೋ.. ಅವಕ್ಕೆ ಕಾರಣ ಬ್ರಾನ್ಸನ್ ನೇ. ಆತನ ವ್ಯಕ್ತಿತ್ವವೇ ಅಂಥದ್ದು.

ಜಗತ್ತಿನಲ್ಲಿ ಅವೆಷ್ಟೋ ಶ್ರೀಮಂತರಿದ್ದಾರೆ. ಲಕ್ಷಾಂತರ ಕೋಟಿ ಸಂಪಾದಿಸಿದವರು ಅನೇಕರಿದ್ದಾರೆ. ಆದರೆ ಎಲ್ಲಾ ಶ್ರೀಮಂತರು ಬ್ರಾನ್ಸನ್ ಆಗಲು ಸಾಧ್ಯವಿಲ್ಲ. ಬ್ರಾನ್ಸನ್ ಒಬ್ಬನೇ ! ಕಾರಣ ಬ್ರಾನ್ಸನ್ ಆಗಲು ಹಣಬೇಕಾಗಿಲ್ಲ. ಯಾರು ಜೀವದ ಹಂಗು ತೊರೆದು ಪರಮ ಸಾಹಸಿಗಳಾಗುತ್ತಾರೋ, ಯಾರು ತಮ್ಮ ಕನಸು ಗಳಿಗೆ ಸದಾ ಕಾವು ಕೊಟ್ಟು ಮರಿ ಮಾಡಿ, ಬಾನಂಗಳದಲ್ಲಿ ಹಾರಿ ಬಿಡುತ್ತಾರೋ, ಬೇರೆಯವರಿಂದ ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿದ ನಂತರ ಅದನ್ನು
ಯಾರು ಸಾಧ್ಯ ಮಾಡಿ ತೋರಿಸುತ್ತಾರೋ, ಜೀವನದಲ್ಲಿ ಎಲ್ಲಾ ಮುಗಿದು ಹೋಯಿತು ಎಂದು ಭಾವಿಸಿದ ನಂತರ, ಫೀನಿಕ್ಸ್ ಹಕ್ಕಿಯಂತೆ ಬೂದಿಯಿಂದ ಮೇಲೆದ್ದು ಬರುತ್ತಾರೋ, ಅವರು ಮಾತ್ರ ಬ್ರಾನ್ಸನ್ ಆಗಲು ಸಾಧ್ಯ.

ಈ ವಿಶ್ವದ ನೂರು ಮಂದಿ ಶ್ರೀಮಂತರಲ್ಲಿ ಬ್ರಾನ್ಸನ್ ಕೂಡ ಒಬ್ಬ. ಆತ ಮಾಡದ ಬಿಜಿನೆಸ್‌ಗಳಿಲ್ಲ. ವರ್ಜಿನ್ ಹೆಸರಿನಲ್ಲಿ ಆತ ಮುನ್ನೂರಕ್ಕೂ ಹೆಚ್ಚು ಕಂಪನಿ ಗಳನ್ನು ಸ್ಥಾಪಿಸಿ ಅಷ್ಟೇ ಸಂಖ್ಯೆಯ ವ್ಯವಹಾರಗಳನ್ನು ಮಾಡುತ್ತಿದ್ದಾನೆ. ಆತನ ವಿಮಾನ ಕಂಪನಿಯಿದೆ. ಹಡಗು, ರೈಲು ಸಂಸ್ಥೆಗಳಿವೆ. ವರ್ಜಿನ್ ಬುಕ್ಸ್ ಹೆಸರಿ ನಲ್ಲಿ ಆತ ಪುಸ್ತಕ ವ್ಯಾಪಾರವನ್ನೂ ಮಾಡುತ್ತಾನೆ. ಆ ಪುಸ್ತಕದಂಗಡಿಗಳಲ್ಲಿ, ಬೇರೆಲ್ಲೂ ಸಿಗದ ಪುಸ್ತಕಗಳು ಸಿಗುತ್ತವೆ. ಆತ ಈ ಎಲ್ಲಾ ವ್ಯವಹಾರಗಳಲ್ಲಿ ಲಾಭ ಮಾಡುತ್ತಿದ್ದಾನೆ. ಅವನ ಮುಂದೆ ಲಾಭ ತರುವ ಯಾವುದೇ ಬಿಜಿನೆಸ್ ಐಡಿಯಾಗಳನ್ನು ಕೊಟ್ಟರೂ ತಕ್ಷಣ ಅದಕ್ಕೊಂದು ಕಂಪನಿ ಸ್ಥಾಪಿಸಿ ಅದನ್ನು ಕಾರ್ಯ ರೂಪಕ್ಕೆ ತರುತ್ತಾನೆ.

ಥಾರ್ ಮರುಭೂಮಿಯಲ್ಲಿ ಈ ಪದ್ಧತಿ ಬಳಸಿ, ಬಾಳೆತೋಟವನ್ನು ಬೆಳೆದು, ಇಷ್ಟು ಲಾಭ ಗಳಿಸಬಹುದು ಎಂಬ ಯೋಜನೆಯನ್ನು ಕೊಟ್ಟರೆ, ಆತ ’ವರ್ಜಿನ್ ಬನಾನಾಸ್’ ಎಂಬ ಕಂಪನಿ ಸ್ಥಾಪಿಸಿ, ಅಲ್ಲಿ ಬೆಳೆದ ಬಾಳೆಹಣ್ಣುಗಳನ್ನು ವಿದೇಶಗಳಿಗೆ ರಫ್ತು ಮಾಡಿ, ಚಮತ್ಕಾರ ಮಾಡಿ ತೋರಿಸುತ್ತಾನೆ. ಯಾವುದೇ
ವ್ಯವಹಾರವನ್ನಾದರೂ ಯಶಸ್ವಿಗೊಳಿಸಿ, ಲಾಭ ಮಾಡುವುದು ಹೇಗೆ ಎಂಬುದನ್ನು ಅವನಿಂದ ಕಲಿಯಬೇಕು. ಹಾಗೆಂದು ಅವನು ನಷ್ಟ ಮಾಡಿಕೊಂಡಿಲ್ಲ
ಎಂದಲ್ಲ. ನಷ್ಟದ ವ್ಯವಹಾರವನ್ನೂ ಮೇಲೆತ್ತುವುದು ಹೇಗೆ ಎಂಬುದು ಅವನಿಗೆ ಗೊತ್ತು.

ಒಟ್ಟಾರೆ ಬ್ರಾನ್ಸನ್ ಛಲದಂಕ ಮಲ್ಲ. ಆತನಿಗೆ ನಿಲುಕದ ವ್ಯವಹಾರವಿಲ್ಲ. ಯಾವುದೇ ಬಿಜಿನೆಸ್ ಇರಲಿ ಅದಕ್ಕೊಂದು ಆಪ್ಯಾಯಮಾನ ಇಕೋ ಸಿಸ್ಟಮ’ ರೂಪಿಸಿ, ಅಲ್ಲಿ ಲಾಭ ಮಾಡಿ ತೋರಿಸುವುದನ್ನು ಆತ ತನ್ನ ವ್ಯವಹಾರ ಧರ್ಮವನ್ನಾಗಿ ಮಾಡಿಕೊಂಡಿದ್ದಾನೆ. ಮನುಷ್ಯನಿಗೆ ಹಣವಾಗುತ್ತ ಹೋದಂತೆ ಆತನ ಆದ್ಯತೆಗಳು ಬದಲಾಗುತ್ತವೆ. ಆತ ಹೆಚ್ಚು ಹೆಚ್ಚು ತನ್ನ ಬಗ್ಗೆ ಮೋಹ ಬೆಳೆಸಿಕೊಳ್ಳುತ್ತಾನೆ. ತಾನು ಗಳಿಸಿದ್ದೆಲ್ಲವನ್ನೂ ಬಚ್ಚಿಟ್ಟುಕೊಳ್ಳುವುದು ಹೇಗೆ ಎಂದು ಯೋಚಿಸಲಾರಂಭಿ
ಸುತ್ತಾನೆ. ಆತನಿಗೆ ಅವನ್ನೆ ಭೋಗಿಸುವುದು ಹೇಗೆ ಎಂಬ ಪ್ರಶ್ನೆ ಕಾಡಲಾರಂಭಿಸುತ್ತದೆ.

ಹೆಚ್ಚು ಹಣವಾಗುತ್ತಿದ್ದಂತೆ, ಸಾವಿನ ಪ್ರಶ್ನೆ ಭೂತಾಕಾರವಾಗಿ ಕಾಡಲಾರಂಭಿಸುತ್ತದೆ. ತನ್ನ ಆಸ್ತಿಪಾಸ್ತಿಗಳ ಬಗ್ಗೆ ಎಲ್ಲಿಲ್ಲದ ಕಾಳಜಿ ಮೂಡಲಾರಂಭಿಸುತ್ತದೆ. ಹೆಚ್ಚು ವರ್ಷ ಐಷಾರಾಮಿಯಾಗಿ ಬಾಳುವುದು ಹೇಗೆ ಎಂಬ ಯೋಚನೆಯ ಸುಳಿಯಲ್ಲಿ ಆತ ಮಗ್ನನಾಗುತ್ತಾನೆ. ತನ್ನ ಸುತ್ತ ಭದ್ರಕೋಟೆ ನಿರ್ಮಿಸಿಕೊಳ್ಳುತ್ತಾನೆ. ಸಾಮಾನ್ಯ ಜನರಿಂದ ದೂರವಾಗುತ್ತಾ ಹೋಗುತ್ತಾನೆ. ಜೀವಭಯದಿಂದ ತನ್ನ ಸುತ್ತ ಅಂಗರಕ್ಷಕರನ್ನು ಇಟ್ಟುಕೊಳ್ಳುತ್ತಾನೆ. ಏನೇ ಆದರೂ ಸಾವು ಭೇದಿಸಿ ಕೊಂಡು ಬರಬಾರದು ಎಂಬ ಭಯ ಅವನನ್ನು ಕಾಡುತ್ತಲೇ ಇರುತ್ತದೆ. ಹಣ ಬರುತ್ತಲೇ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡುತ್ತಾನೆ.

ತನ್ನ ಸುತ್ತ ಭದ್ರತೆಯ ಬಂಕರ್ ನಿರ್ಮಿಸಿಕೊಳ್ಳುತ್ತಾನೆ. ಕಾರಿನಲ್ಲಿ ಹೋಗುವಾಗ ಅಪಘಾತವಾದರೆ, ತನಗೇನೂ ಆಗಬಾರದು ಎಂದು ಏರ್ ಬ್ಯಾಗ್ ಗಳಿರುವ ದುಬಾರಿ ಕಾರಿನಲ್ಲಿ ಪಯಣಿಸುತ್ತಾನೆ. ಶ್ರೀಮಂತಿಕೆ ಅವನಲ್ಲಿ ಭಯ, ದುಗುಡವನ್ನು ಮೂಡಿಸುತ್ತದೆ. ಆದರೆ ಬ್ರಾನ್ಸನ್ ಈ ಎಲ್ಲಾ ಮಾತುಗಳಿಗೆ ಸರಿ ಉಲ್ಟಾ.
ಹೆಚ್ಚು ಹೆಚ್ಚು ಶ್ರೀಮಂತನಾದಷ್ಟೂ ಹೆಚ್ಚು ಹೆಚ್ಚು ಸಾಹಸಿಯಾದ. ಹುಚ್ಚು ಸಾಹಸಕ್ಕೆ ಬಿದ್ದ. ಬಿಸಿಗಾಳಿ ಬಲೂನಿನಲ್ಲಿ, ವಿಶ್ವ ಪರ್ಯಟನೆಗೆ ಹೊರಟ. ಅದರಲ್ಲಿ ಹೋಗುವಾಗ, ಅದು ಸಮುದ್ರದಲ್ಲಿ ಬಿತ್ತು. ಆತ ಸತ್ತೇ ಹೋಗಬೇಕಿತ್ತು.

ಜೀವ ಸಹಿತ ಬಚಾವ್ ಆದ. ಅಷ್ಟಾದರೂ ತನ್ನ ಪಯಣವನ್ನು ನಿಲ್ಲಿಸಲಿಲ್ಲ. ಹೆಲಿಕಾಪ್ಟರ್ ಮೇಲಿಂದ ಜಿಗಿಯುವ ಮನಸ್ಸಾಯಿತು. ಅಲ್ಲಿಂದ ಜಿಗಿದು ಪ್ಯಾರಚ್ಯೂಟ್‌ ನಲ್ಲಿ ಸುರಕ್ಷಿತವಾಗಿ ಭೂಮಿಗಿಳಿದ. ಹಾರುವ ವಿಮಾನದಿಂದ ಕೆಳಕ್ಕೆ ಜಿಗಿದ. ಸಮುದ್ರದಲ್ಲಿ ಶಾರ್ಕ್ ಗಳ ಜತೆಗೆ ಈಜಲು ಹೊರಟ. ತನ್ನ ಅರವತ್ತೈದನೇ ವಯಸಿ ನಲ್ಲಿ ಗುಡ್ಡ, ಬೆಟ್ಟ, ತೊರೆಯಲ್ಲಿ ಸೈಕಲ್ ಸವಾರಿ ಸ್ಪರ್ಧೆಯಲ್ಲಿ ಭಾಗವಹಿಸಿದ. ಸೈಕಲ್ ಮೇಲಿಂದ ಬಿದ್ದು ಮೈಕೈ ತರಚಿಕೊಂಡು ಗಾಯ ಮಾಡಿಕೊಂಡ. ಬೇರೆ ಯವರಾಗಿದ್ದರೆ ಮತ್ತೆ ಸೈಕಲ್ ಮೇಲೆ ಕುಳಿತುಕೊಳ್ಳುತ್ತಿರಲಿಲ್ಲ. ಮುಂದಿನ ವರ್ಷ ಮತ್ತೆ ಆ ಸ್ಪರ್ಧೆಯಲ್ಲಿ ಭಾಗವಹಿಸಲು ಸೈಕಲ್ ತುಳಿಯಲಾರಂಭಿಸಿದ.

ಬ್ರಾನ್ಸನ್ ಇಷ್ಟವಾಗುವುದೇ ಈ ಕಾರಣಕ್ಕೆ. ಇದರಿಂದ ಆತ ಉಳಿದೆಲ್ಲರಿಗಿಂತ ಭಿನ್ನವಾಗಿ ಕಾಣುತ್ತಾನೆ. ನೀವು ಮುಖೇಶ್ ಅಂಬಾನಿಯವರ ಹತ್ತಿರ ಹೋಗಿ, ’ಶಾರ್ಕ್‌ಗಳ ಜತೆ ಈಜೋಣವಾ?’ ಅಂತ ಕೇಳಿ. ಉಹುಂ…ಸಾಧ್ಯವೇ ಇಲ್ಲ. ಮೊಸಳೆಯಿರುವ ಬಾವಿಯನ್ನು ಇಣುಕಿ ನೋಡಲೂ ಅವರು ಧೈರ್ಯ ಮಾಡುವು ದಿಲ್ಲ. ಹಾಗೆ ಇಣುಕಿ ನೋಡುವಾಗ ಕಾಲು ಜಾರಿ ಬಿದ್ದರೆ, ಏನು ಗತಿ? ಷೇರು ಪೇಟೆಯಲ್ಲಿ ರಿಲಯನ್ಸ್ ಷೇರಿನ ಬೆಲೆ ಬಿದ್ದು ಹೋದರೆ ಎಂದು ಅವರು  ಯೋಚಿಸು ತ್ತಾರೆ. ತಾನು ಗಳಿಸಿದೆಲ್ಲವನ್ನೂ ಅನುಭವಿಸಲು ಆಗದಿದ್ದರೆ ಎಂದು ಹಿಂದೇಟು ಹಾಕುತ್ತಾರೆ.

ವಿಮಾನ ಹತ್ತುವಾಗಲೂ ನೂರೆಂಟು ಸಲ ದೇವರನಾಮ ಜಪಿಸುತ್ತಾರೆ. ತೆಂಗಿನಕಾಯಿ ಹಿಡಿದು ಯಾರ ಹತ್ತಿರವೂ ಮಾತಾಡದೇ, ದೇವರಸ್ಮರಣೆಯಲ್ಲಿರುತ್ತಾರೆ. ವಿಮಾನ ಬಿದ್ದರೆ ಏನು ಗತಿ ಎಂದು ಅವರ ಒಳಮನಸ್ಸು ಹೇಳುತ್ತಲೇ ಇರುತ್ತದೆ. ಹೀಗೆ ಬ್ರಾನ್ಸನ್ ಯೋಚಿಸಿದ್ದರೆ, ಈ ಎಪ್ಪತ್ತೊಂದನೇ ವಯಸ್ಸಿನಲ್ಲಿ, ಆತ ಬಾಹ್ಯಾಕಾಶ ಪ್ರವಾಸಕ್ಕೆ ಹೋಗುವುದು ಸಾಧ್ಯವಾಗುತ್ತಿತ್ತಾ? ಮೊನ್ನೆ ಆತ ಬಾಹ್ಯಾಕಾಶ ಯಾತ್ರೆಯನ್ನೂ ಯಶಸ್ವಿಯಾಗಿ ಮಾಡಿಬಂದ. ಇಡೀ ಜಗತ್ತೇ ವಿಸ್ಮಯ
ದಿಂದ ಮೂಗಿನ ಮೇಲೆ ಬೆರಳಿಟ್ಟಿತು. ಬ್ರಾನ್ಸನ್ ನಿರಾಯಾಸವಾಗಿ ಬಾಹ್ಯಾಕಾಶ ಯಾನ ಮುಗಿಸಿ ಧರೆಗಿಳಿದ !

ನನಗೆ ಬ್ರಾನ್ಸನ್ ಇಷ್ಟವಾಗುವುದು ಈ ಕಾರಣಕ್ಕೆ. ಹಣವನ್ನು ಪ್ರೀತಿಸುವವನು, ಜೀವವನ್ನು ಮತ್ತಷ್ಟು ಪ್ರೀತಿಸುತ್ತಾನೆ. ಆದರೆ ಬ್ರಾನ್ಸನ್ ಹಾಗಲ್ಲ. ಹಣದ ಮೋಹ ಅವನಿಗೆ ಜೀವದ ಹಂಗನ್ನು ಬಿಡಿಸಿತು. ಈ ರೀತಿ ಹಂಗು ಬಿಡಿಸಿಕೊಂಡವರು ಅತ್ಯಲ್ಪ. ಆದರೆ ಬ್ರಾನ್ಸನ್ ಜೀವದ ಹಂಗು ತೊರೆದು ಮತ್ತಷ್ಟು ಜೀವನ್ಮುಖಿಯಾದ, ಬದುಕಿನ ಕಟುವಾಸ್ತವಗಳಿಗೆ ಮತ್ತಷ್ಟು ಹತ್ತಿರವಾದ.

Leave a Reply

Your email address will not be published. Required fields are marked *