Tuesday, 27th July 2021

ಮುಂಬೈಗೆ ಹಾರಿದ ರಾಬರ್ಟ್‌ ಸುಂದರಿ ಆಶಾ ಭಟ್‌

ಪ್ರಶಾಂತ್‌ ಟಿ.ಆರ್‌.

ಕಣ್ಣ ಹೊಡಿಯಾಕ… ಎಂದು ಹಾಡಿ ಕುಣಿದು, ಕನ್ನಡ ಸಿನಿಪ್ರಿಯರ ಮನಸೂರೆಗೊಂಡ ರಾಬರ್ಟ್ ಸುಂದರಿ ಆಶಾಭಟ್ ಸದ್ಯ ಮುಂಬೈನಲ್ಲಿದ್ದಾರೆ. ಬಾಲಿವುಡ್‌ನ ಜಂಗ್ಲಿ ಚಿತ್ರದ ಮೂಲಕವೇ ನಟನೆಗೆ ಎಂಟ್ರಿಕೊಟ್ಟ ಆಶಾ ಭಟ್ ಬಯಸಿ ಕನ್ನಡ ಚಿತ್ರರಂಗಕ್ಕೆ ಬಂದವರು. ರಾಬರ್ಟ್‌ಗೆ ಜತೆಯಾಗಿ ಎಲ್ಲರೂ ಮೆಚ್ಚುವಂತೆ ಅಭಿನಯಿಸಿದರು. ಕನ್ನಡದಲ್ಲಿ ನಟಿಸಿದ ಮೊದಲ ಚಿತ್ರವೇ ಆಶಾಭಟ್‌ಗೆ ಬಿಗ್ ಬ್ರೇಕ್ ನೀಡಿತು. ಹಾಗಾಗಿ ಮುಂದೆ ಮತ್ತಷ್ಟು ಚಿತ್ರಗಳಲ್ಲೂ ರಾಬರ್ಟ್ ಚೆಲುವೆ ಯನ್ನು ಕಣ್ತುಂಬಿ ಕೊಳ್ಳಬಹುದು ಎಂದು ಸಿನಿಪ್ರಿಯರು ಕಾದುಕುಳಿತ್ತಿದ್ದರು. ಆದರೆ ಅಷ್ಟರಲ್ಲಾಗಲೇ ಲಾಕ್‌ಡೌನ್ ಆಯಿತು. ಯಾವ ಚಿತ್ರದಲ್ಲೂ ಆಶಾ ಕಾಣಿಸಿ ಕೊಳ್ಳಲೇ ಇಲ್ಲ. ಹಾಗಾಗಿ ಆಶಾಭಟ್ ಎಲ್ಲಿ ಹೋದರು ಎಂಬ ಪ್ರಶ್ನೆ ಸಿನಿಪ್ರಿಯರನ್ನು ಕಾಡುತ್ತಿದೆ. ಮುಂಬೈನಲ್ಲಿ ನೆಲೆಸಿರುವ ಆಶಾ, ಸದ್ಯದಲ್ಲಿಯೇ ಬೆಂಗಳೂರಿಗೆ ಬರಲಿದ್ದಾರೆ. ಮತ್ತಷ್ಟು ಕನ್ನಡ ಚಿತ್ರಗಳಲ್ಲಿ ನಟಿಸಲಿದ್ದಾರೆ. ತಮ್ಮ ಮುಂದಿನ ಚಿತ್ರಗಳ ಬಗ್ಗೆ ವಿ.ಸಿನಿಮಾಸ್‌ನೊಂದಿಗೆ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ವಿ.ಸಿ : ನಿಮ್ಮ ಮುಂದಿನ ಸಿನಿಮಾಗಳು?
ಆಶಾಭಟ್ : ಈಗಷ್ಟೇ ಲಾಕ್‌ಡೌನ್ ಮುಗಿದು ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಿದೆ. ಸಾಕಷ್ಟು ಅವಕಾಶಗಳು ಬರುತ್ತಿವೆ. ಒಂದಷ್ಟು ಕಥೆಗಳನ್ನು ಕೇಳುತ್ತಿದ್ದೇನೆ. ಚಿತ್ರದಲ್ಲಿ ಕಥೆ ಹಾಗೂ ಪಾತ್ರ ಎರಡೂ ಮುಖ್ಯ. ಅಂತಹ ಕಥೆಗಳು ಸಿಕ್ಕಿವೆ. ಸ್ವಲ್ಪ ದಿನದಲ್ಲಿ ಹೊಸ ಸಿನಿಮಾ ಘೋಷಣೆಯಾಗಲಿದೆ. ಇಡೀ ತಂಡ ಸೇರಿದರೆ ಮಾತ್ರ ಒಂದು ಒಳ್ಳೆಯ ಸಿನಿಮಾ ಮೂಡಿಬರಲು ಸಾಧ್ಯ. ಹಾಗಾಗಿ ಆ ತಂಡದಲ್ಲಿ ನನ್ನದು ಕೊಡುಗೆ ಇರಬೇಕು ಎಂಬುದು ನನ್ನ ಆಸೆ.

ವಿ.ಸಿ: ಮತ್ತೆ ಬಾಲಿವುಡ್‌ಗೆ ಹಾರುವ ಸಾಧ್ಯತೆ ಇದೆಯೇ ?
ಆಶಾಭಟ್ : ಅವಕಾಶ ಸಿಕ್ಕಿದರೆ ಖಂಡಿತಾ ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತೇನೆ. ಕಲಾವಿದರಿಗೆ ನಾಡು, ನುಡಿಯ ಗಡಿ ಇರಬಾರದು. ನಾನು ಕನ್ನಡತಿ ಎಂಬ ಹೆಮ್ಮೆ ಇದೆ. ಅಂತೆಯೇ ಎಲ್ಲಾ ಭಾಷೆಗಳನ್ನೂ ಗೌರವಿಸುತ್ತೇನೆ. ನಟನೆಯಷ್ಟೇ ನಮ್ಮ ಗುರಿ, ಹಾಗಾಗಿ ಕಲಾವಿದರು ನಿರ್ದಿಷ್ಟ ಭಾಷೆಗೆ ಸೀಮಿತವಾಗ ಬಾರದು ಎಂಬ ಅಭಿಮತ ನನ್ನದು. ತಮಿಳು, ತೆಲುಗು ಭಾಷೆಯಲ್ಲಿಯೂ ಅವಕಾಶಗಳು ಬರುತ್ತಿವೆ. ಮೊದಲು ಕನ್ನಡ ಸಿನಿಮಾಗಳಲ್ಲಿ ನಟಿಸಬೇಕು ಎಂಬ ಆಸೆ ನನ್ನಲ್ಲಿದೆ.

ವಿ.ಸಿ : ನೀವು ಒಳ್ಳೆಯ ಗಾಯಕಿಯೂ ಹೌದು? ಮುಂದೆ ಸಿನಿಮಾದಲ್ಲಿ ನಿಮ್ಮ ಗಾಯನವನ್ನು ಕೇಳಬಹುದೆ?
ಆಶಾಭಟ್ : ನನಗೆ ನಟನೆಯಂತೆ ಗಾಯನವೂ ಅಚ್ಚುಮೆಚ್ಚು, ನಾನು ತುಂಬಾ ಇಷ್ಟಪಟ್ಟು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತಿದ್ದೇನೆ. ನಾನು ನಟಿಯಾಗುವ
ಮೊದಲು ಗಾಯನದತ್ತಲೇ ಹೆಚ್ಚು ಒಲವಿತ್ತು. ಮುಂದೆ ಹಾಡಲು ಅವಕಾಶ ಸಿಕ್ಕಿದರೆ ಖಂಡಿತಾ ಹಾಡುತ್ತೇನೆ. ಅದಕ್ಕಾಗಿ ಕಾಯುತ್ತಿದ್ದೇನೆ.

ವಿಸಿ : ನಿಮ್ಮ ಕನಸಿನ ಪಾತ್ರ ?
ಆಶಾಭಟ್ : ನನಗೆ ಇಂತಹದ್ದೇ ಪಾತ್ರಬೇಕು ಎಂಬ ಬೇಡಿಕೆ ಇಲ್ಲ. ಆದರೆ ಒಳ್ಳೆಯ ಕಥೆ, ಅದರ ಜತೆಗೆ ಒಳ್ಳೆಯ ಪಾತ್ರದಲ್ಲಿ ನಟಿಸಬೇಕು ಎಂಬುದು ನನ್ನ
ಆಸೆ. ನನಗೆ ನೃತ್ಯ ಎಂದರೆ ಬಲು ಇಷ್ಟ. ನೃತ್ಯಕ್ಕೆ ಆದ್ಯತೆ ಇರುವ ಪಾತ್ರ ಸಿಕ್ಕಿದರೆ ಇನ್ನೂ ಸಂತೋಷ.

ವಿ.ಸಿ : ಬಯೋಪಿಕ್ ಚಿತ್ರಗಳಲ್ಲಿ ನಟಿಸಲು ಅವಕಾಶ ಬಂದರೆ ಯಾವ ಪಾತ್ರ ಬಯಸುತ್ತೀರ?
ಆಶಾಭಟ್ : ಇತ್ತೀಚೆಗೆ ಬಯೋಪಿಕ್ ಸಿನಿಮಾಗಳೇ ಹೆಚ್ಚಾಗಿ ಸೆಟ್ಟೇರಿವೆ. ಸಾಕಷ್ಟು ಸಿನಿಮಾಗಳು ಈಗಾಗಲೇ ತೆರೆಗೂ ಬಂದು ಯಶಸ್ವಿಯಾಗಿವೆ. ಬಯೋಪಿಕ್
ಸಿನಿಮಾಗಳಲ್ಲಿ ನಟಿಸಬೇಕು ಎಂಬ ಮಹದಾಸೆ ನನಗಿದೆ. ಒಂದು ವೇಳೆ ಅಂತಹ ಅವಕಾಶ ಸಿಕ್ಕಿದರೆ, ಪಿ.ಟಿ ಉಷಾ ಅವರ ಬಯೋಪಿಕ್‌ನಲ್ಲಿ ಅಭಿನಯಿಸಬೇಕು ಎಂದುಕೊಂಡಿದ್ದೇನೆ.

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ನಟನೆ ಮತ್ತು ನೃತ್ಯ ನನಗೆ ಬಲು ಇಷ್ಟ, ಅವರ ಪ್ರತಿ ಚಿತ್ರದಲ್ಲಿಯೂ ಅವರ ಹೊಸ ಹೊಸ ಸ್ಟೆಪ್ಸ್ ಮನಮೋಹಕವಾಗಿರುತ್ತದೆ. ಅವರೊಂದಿಗೆ ನಟಿಸಿ, ಹಾಡಿಗೆ ಹೆಜ್ಜೆ ಹಾಕಬೇಕೆಂಬುದು ನನ್ನ ಮನದಾಸೆ.

Leave a Reply

Your email address will not be published. Required fields are marked *