Friday, 7th October 2022

ಕೊರೊನಾ ವೈರಸ್ ಪೀಡಿತ ರೋಗಿಗಳ ಸೇವೆಗೆ ಬಂತು ರೊಬೋಟ್!

ಹುಬ್ಬಳ್ಳಿ: ಕೋವಿಡ್ ಸೋಂಕಿತರ ಚಿಕಿತ್ಸೆಗೆ ವೈದ್ಯರು ಮತ್ತು ಆಸ್ಪತ್ರೆಗಳ ಅರೆವೈದ್ಯಕೀಯ ಹಾಗೂ ಸಹಾಯಕ ಸಿಬ್ಬಂದಿ ತಮ್ಮ ಜೀವದ ಹಂಗು ತೊರೆದು ಶ್ರಮಿಸುತ್ತಿದ್ದಾರೆ.

ಕೋವಿಡ್ 19 ರ ಈ ಕಾರ್ಯಭಾರಕ್ಕೆ ತಮ್ಮ ಕೊಡುಗೆ ನೀಡಬೇಕು ಎಂದು ಸಂಕಲ್ಪ ಮಾಡಿದ ಹುಬ್ಬಳ್ಳಿಯ ಕೆ.ಎಲ್.ಇ ಟೆಕ್ನಾಲ ಜಿಕಲ್ ಯುನಿವರ್ಸಿಟಿ ಹಾಗೂ ಕೆ.ಎಲ್.ಇ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿಗಳು ಹುಬ್ಬಳ್ಳಿಯ ಸ್ವರ್ಣಾ ಗ್ರೂಪಿನ ಡಾ.ವಿ.ಎಸ್.ವಿ.ಪ್ರಸಾದ ಅವರು ಪ್ರಾಯೋಜಕತ್ವದಲ್ಲಿ ಅಭಿವೃದ್ಧಿ ಪಡಿಸಿರುವ ಸ್ವಯಂ ಚಾಲಿತ ರೊಬೋಟಿಕ್ ವಾಹನ ” ಪ್ರಧಾಯ” ವನ್ನು ಬುಧವಾರ ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಕಿಮ್ಸ್ ಸಂಸ್ಥೆಗೆ ಹಸ್ತಾಂತರಿಸಿದರು.

*ಸ್ವಯಂಚಾಲಿತ ಮಾರ್ಗದರ್ಶಿ ಯಂತ್ರ ರೂಪುಗೊಂಡ ಹಿನ್ನೆಲೆ
ಕಿಮ್ಸ್ ತಜ್ಞವೈದ್ಯ ಡಾ.ಎಸ್.ವೈ.ಮುಲ್ಕಿಪಾಟೀಲ ಅವರ ವಿನೂತನ ಆಲೋಚನೆಗಳು ಮತ್ತು ಪ್ರೇರಣೆಯಿಂದ ಈ ಯೋಜನೆ ಯನ್ನು ಕೈಗೆತ್ತಿಕೊಂಡ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಅವರು ಸ್ವಯಂಚಾಲಿತ ಮಾರ್ಗದರ್ಶಿ ವಾಹನ ( Automatic Guided Vehicle) ಅಭಿವೃದ್ಧಿ ಪಡಿಸಿದರೆ ಕೋವಿಡ್ ವಾರ್ಡುಗಳಲ್ಲಿ ರೋಗಿಗಳಿಗೆ ಆಹಾರ, ಔಷಧ ವಿತರಣೆಗೆ ಸಹಕಾರಿಯಾಗುತ್ತದೆ ಎಂಬ ಸಲಹೆ ನೀಡಿದರು.

ಆಗ ಅಂದಿನ ಜಿಲ್ಲಾಧಿಕಾರಿಯಾಗಿದ್ದ ದೀಪಾ ಚೋಳನ್ ಅವರು ಈ ಹೊಸ ವಿಚಾರದಿಂದ ಸ್ಫೂರ್ತಿಗೊಂಡು ತಮ್ಮ ಪ್ರೋತ್ಸಾಹ ನೀಡಿ, ಆಗ ಕೈಗಾರಿಕೆ ಜಂಟಿ ನಿರ್ದೇಶಕರಾಗಿದ್ದ ಮೋಹನ ಭರಮಕ್ಕನವರ ಅವರಿಗೆ ಈ ನಿಟ್ಟಿನಲ್ಲಿ ಎಲ್ಲಾ ಪ್ರೋತ್ಸಾಹ ನೀಡಲು ಸೂಚಿಸಿದರು.

ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳ ಆಸಕ್ತಿ ಕಂಡು ಹುಬ್ಬಳ್ಳಿಯ ಸ್ವರ್ಣಾ ಗ್ರೂಪಿನ ಡಾ.ವಿ.ಎಸ್.ವಿ.ಪ್ರಸಾದ ಪ್ರಾಯೋಜಕತ್ವ ನೀಡಲು ಮುಂದೆ ಬಂದರು, ಕೆ ಎಲ್ ಇ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ಪ್ರಯತ್ನದಿಂದ ಈ ಯಂತ್ರ ರೂಪು ತಳೆಯಲು ಸಾಧ್ಯವಾಯಿತು.

ಕೆ.ಎಲ್.ಇ ಇಂಜಿನಿಯರಿಂಗ್ ವಿವಿ ವಿದ್ಯಾರ್ಥಿಗಳಾದ ಕಿರಣ್ ಕೆ,ಸಂತೋಷ ಕೆ,ಮದನ್ ವೈ,ಅಭಿಲಾಷ್ ಜಿ,ಕಾರ್ತಿಕ ಆರ್, ಅಭಿಷೇಕ, ವಿನಾಯಕ ಮತ್ತಿತರರ ತಂಡಕ್ಕೆ ಪ್ರಾಧ್ಯಾಪಕರಾದ ಡಾ.ರವಿ ಗುತ್ತಲ, ಡಾ.ಎಸ್.ಸಿ.ಸಜ್ಜನ ಮಾರ್ಗದರ್ಶನ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ವೈದ್ಯಕೀಯ ಅಧೀಕ್ಷಕ ಡಾ.ಅರುಣಕುಮಾರ್ ಉಪಸ್ಥಿತರಿದ್ದರು.