Sunday, 27th November 2022

ಇದರ ಹಣ್ಣು ಹಣ್ಣಲ್ಲ, ಬೀಜ ಬೀಜವಲ್ಲ !

ಶಶಾಂಕಣ

shashidhara.halady@gmail.com

ಎಳೆಯ ಬೀಜಗಳನ್ನು ನಾಜೂಕಾಗಿ ಕೊಯ್ದು, ಒಳಗಿನ ತಿರುಳನ್ನು ಆರಿಸಿ, ಹದವಾಗಿ ಬೇಯಿಸಿ ಒಗ್ಗರಣೆ ನೀಡಿದರೆ ರುಚಿಕರ ಪಲ್ಯ ಸಿದ್ಧ! ಜಾಸ್ತಿ ಪಲ್ಯ ಬೇಕೆನಿಸಿದರೆ, ಎಳೆ ತೊಂಡೆಕಾಯಿಯನ್ನು ಈ ಬೀಜದ ಜತೆ ಸೇರಿಸಬಹುದು. ಆದರೆ, ಬೀಜ ಸುಲಿಯುವಾಗ ರಸ ಚರ್ಮಕ್ಕೆ ತಾಗಿದರೆ ಬೊಬ್ಬೆಗಳೇಳುವ ಅಪಾಯವಿದೆ.

ಗೋಯ್ ಬೀಜ ಎಂದರೆ, ಕರ್ನಾಟಕದ ಬಹಳಷ್ಟು ಜನರಿಗೆ ಬೇಗನೆ ಅರ್ಥ ವಾಗದೇ ಇರಬಹುದು. ಗೋವೆ ಬೀಜ, ಗೋವೆ ಹಣ್ಣು ಸಹ ಇಂತಹವೇ ಪದಗಳು. ಕರಾವಳಿಯ ಕೆಲವು ಭಾಗದವರ ಸಹಜ ನುಡಿಯಲ್ಲಿ ಬೆರೆತು ಹೋಗಿರುವ ‘ಗೋಯ್ ಬೀಜ’ ಎಂದರೆ, ಅಂತಹ ರಹಸ್ಯವೇನಲ್ಲ – ನಾವೆಲ್ಲಾ ಬಳಸುವ ಗೋಡಂಬಿಯೇ ಈ ಬೀಜ.

ಗೋವಾ ಪ್ರದೇಶದಿಂದ ಬಂದದ್ದರಿಂದ, ಕರಾವಳಿಯವರು ಗೋಡಂಬಿಯನ್ನು ಗೋವೆ ಹಣ್ಣು ಅಥವಾ ಗೋಯ್ ಹಣ್ಣು ಎನ್ನುತ್ತಾರೆ. ಗೇರುಬೀಜ ಎಂಬುದು ಇದಕ್ಕೆ ಇರುವ ಇನ್ನೊಂದು, ತುಸು ಶಿಷ್ಟ, ಹೆಸರು. ಹಾಗೆ ನೋಡಿದರೆ, ಗೋಡಂಬಿ ಬೀಜದ ಸ್ವೂಪವೇ ವಿಭಿನ್ನ, ವಿಶಿಷ್ಟ. ಗೋಯ್ ಹಣ್ಣು ನಿಜವಾದ ಹಣ್ಣಲ್ಲ, ಗೋಯ್ ಬೀಜವೂ ನಿಜವಾದ ಬೀಜವಲ್ಲ! ಬೆಂಗಳೂರಿನ ಅವೆನ್ಯೂ ರೋಡ್‌ನಲ್ಲೂ ಒಮ್ಮೊಮ್ಮೆ ಬೀದಿ ಬದಿಯಲ್ಲಿ ಮಾರಾಟಕ್ಕೆ ಸಿಗುವ ಗೋಯ್ ಹಣ್ಣು, ವಾಸ್ತವವಾಗಿ ಆ ಬೀಜದ ತೊಟ್ಟು. ಬೇರೆ ಬೇರೆ ಬಣ್ಣಗಳನ್ನು ತಳೆಯುವ ಆ ತೊಟ್ಟು, ಸಸ್ಯಲೋಕದ ಪುಟ್ಟ ವಿಸ್ಮಯ.

ಈ ‘ಹಣ್ಣಿಗೆ’ ಅಂಟಿಕೊಂಡಿರುವ ಗಟ್ಟಿಯಾದ ಕವಚ ಹೊಂದಿರುವ ‘ಬೀಜ’ವೇ ನಿಜವಾದ ಹಣ್ಣು. ತೊಟ್ಟು ಹಣ್ಣಾಗಿರುವ ಗೋಡಂಬಿಯ ನಿಜವಾದ ಹಣ್ಣು, ದಪ್ಪ ತೊಗಟೆಯನ್ನು ಪಡೆದು, ಬೀಜದ ಸ್ವರೂಪವನ್ನು ಪಡೆದಿದೆ. ಗಟ್ಟಿ ಕವಚದ ಆ
ಹಣ್ಣಿನೊಳಗೆ ನಿಜವಾದ ಬೀಜವಿದೆ, ಇದನ್ನೇ ಗೋಡಂಬಿ ಎಂದು ನಾವು ನೀವು ತಿನ್ನುವುದು. ಗೋಡಂಬಿಯ ತವರು ದಕ್ಷಿಣ ಅಮೆರಿಕ ಎನ್ನುತ್ತಾರೆ.

ನಮ್ಮ ಕರಾವಳಿಗೆ ಅದು ಬಂದದ್ದು ಗೋವಾವನ್ನು ವಸಾಹತನ್ನಾಗಿ ಮಾಡಿಕೊಂಡಿದ್ದ ಪೋರ್ಚುಗೀಸರ ಮೂಲಕ. ಅದಕ್ಕೆಂದೇ, ಅದನ್ನು ಕರಾವಳಿಯವರು ‘ಗೋಯ್ ಬೀಜ’ ಎಂದು ಕರೆದರು! ಗೋವಾದಿಂದ ನೂರಾರು ವರ್ಷಗಳ
ಮುಂಚೆಯೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಪಸರಿಸಿದ ಗೋಡಂಬಿಯು, ಆ ಭಾಗದ ವಾಣಿಜ್ಯ ಬೆಳೆಯಾಗಿ ರೂಪುಗೊಂಡದ್ದುವ ವಿಶೇಷ. ಗೋಡಂಬಿಯ ಗಿಡಗಳು ಬರಡು ಭೂಮಿಯಲ್ಲಿ, ಗುಡ್ಡದ ಬದಿಯಲ್ಲಿ, ನೀರಿನಾಶ್ರಯ ಇಲ್ಲದ ಜಾಗಗಳಲ್ಲಿ ಬೆಳೆಯುವುದರಿಂದಾಗಿ, ವಾಣಿಜ್ಯ ಬೆಳೆಯಾಗಿ ಬಹಳ ಮಹತ್ವದ ಗಿಡ ಅದು.

ನಮ್ಮ ಹಳ್ಳಿ ಮನೆಯ ದಕ್ಷಿಣ ದಿಕ್ಕಿನಲ್ಲಿ, ಗದ್ದೆ ಬೈಲಿನಿಂದ ಮೇಲ್ಭಾಗದಲ್ಲಿದ್ದ ಹಕ್ಕಲಿನಲ್ಲಿ ನಾಲ್ಕೆಂಟು ಗೋಡಂಬಿ ಮರಗಳಿದ್ದವು. ಅದರಲ್ಲಿ ಒಂದು  ಮರವು ಸಾಕಷ್ಟು ದೊಡ್ಡದಾಗಿ ಬೆಳೆದಿತ್ತು; ಅದರ ವಿಶೇಷವೆಂದರೆ, ಟಿಸಿಲು ಟಿಸಿಲಾಗಿ ಒಡೆದಿದ್ದ ಅದರ
ಕ್ಯಾನೋಪಿಯು ವಿಶಾಲವಾಗಿದ್ದು, ಪ್ರತಿ ವರ್ಷ ಸಾಕಷ್ಟು ಹಣ್ಣುಗಳನ್ನು ಬಿಡುತ್ತಿತ್ತು. ಪ್ರತಿ ಎರಡು ದಿನಗಳಿಗೊಮ್ಮೆ, ಕೊಕ್ಕೆ ಹಿಡಿದು ಆ ಮರದ ಬಳಿ ಸಾಗಿದರೆ, ಸುಲಭವಾಗಿ ಅರ್ಧ ಬುಟ್ಟಿ ಹಣ್ಣುಗಳನ್ನು ಕೀಳಬಹುದಿತ್ತು. ಬೇಸಗೆಯ ಸಮಯದಲ್ಲಿ
ಎರಡರಿಂದ ನಾಲ್ಕು ವಾರಗಳ ಅವಧಿಯಲ್ಲಿ, ಪ್ರತಿ ಎರಡು ದಿನಗಳಿಗೊಮ್ಮೆ ಆ ಮರದಿಂದ ಹಣ್ಣು ಮತ್ತು ಬೀಜ ಸಂಗ್ರಹಿಸುವ ಕೆಲಸ ಎಂದರೆ ಮಕ್ಕಳಿಗೆ ಸಂಭ್ರಮ.

ಆ ಮರ ನೀಡುತ್ತಿದ್ದ ಕೆಂಪನೆಯ ಪುಟ್ಟ ಹಣ್ಣುಗಳು ಸಿಹಿ ಮಿಶ್ರಿತ ಒರಗು ರುಚಿ; ಮಕ್ಕಳಿಗೆ ಅದೇ ಖುಷಿ. ಆದರೆ ಒಂದೆರಡು ಹಣ್ಣುಗಳನ್ನು ತಿಂದ ನಂತರ, ಸಾಕೆನಿಸುತ್ತಿತ್ತು; ಜತೆಗೆ ಜಾಸ್ತಿ ಸಂಖ್ಯೆಯಲ್ಲಿ ಆ ಹಣ್ಣುಗಳನ್ನು ತಿನ್ನಬಾರದು ಎಂಬ ನಂಬಿಕೆ. ಏಕೆಂದರೆ ಗೋಡಂಬಿ ಹಣ್ಣನ್ನು ಜಾಸ್ತಿ ತಿಂದರೆ, ಗಂಟಲು ಕೆಡುವ ಸಾಧ್ಯತೆ, ಸಣ್ಣಗೆ ಕೆಮ್ಮು ಬರುವ ಸಾಧ್ಯತೆ ಇದೆ.

ನಮ್ಮ ಹಕ್ಕಲಿನಲ್ಲಿದ್ದ ಆ ದೊಡ್ಡ ಗೋವೆ ಮರದ ಹತ್ತಿರವೇ ಒಂದು ಚಿಕ್ಕ ಮರವಿತ್ತು. ಅದರ ಹಣ್ಣುಗಳ ರುಚಿ ಜಾಸ್ತಿ; ಈ ಗಿಡ ನೀಡುತ್ತಿದ್ದ ಹಣ್ಣಿನ ಬಣ್ಣ ದಟ್ಟ ಹಳದಿ; ಗಾತ್ರವೂ ದುಪ್ಪಟ್ಟು. ಸುಮಾರು ಅಂಗೈ ಉದ್ದ ಆ ಹಳದಿ ಹಣ್ಣನ್ನು ತಿನ್ನುವುದೆಂದರೆ,
ಮಕ್ಕಳಿಗೆ ಬಹಳ ಖುಷಿ. ಅದರ ಬೀಜವೂ ದೊಡ್ಡ ಗಾತ್ರದ್ದು. ಆದರೆ, ಈ ಗಿಡ ನೀಡುತ್ತಿದ್ದ ಹಣ್ಣು ಮತ್ತು ಬೀಜಗಳ ಸಂಖ್ಯೆ ತೀರಾ ಕಡಿಮೆ. ಕೆಂಪು ಹಣ್ಣು ಬಿಡುತ್ತಿದ್ದ ಅಲ್ಲೇ ಪಕ್ಕದಲ್ಲಿದ್ದ ದೊಡ್ಡ ಮರವು ಪ್ರತಿ ಎರಡನೆಯ ದಿನ ಸುಮಾರು ೫೦ಕ್ಕೂ ಹೆಚ್ಚು
ಹಣ್ಣುಗಳನ್ನು ನೀಡಿದರೆ, ಹಳದಿ ಬಣ್ಣದ ದೊಡ್ಡ ಹಣ್ಣು ನೀಡುವ ಈ ಗಿಡದಲ್ಲಿ ಕೇವಲ ಆರೆಂಟು ಹಣ್ಣುಗಳು!

ಒಂದೊಂದು ಮರವೂ ಒಂದೊಂದು ಸ್ವರೂಪದ, ರುಚಿಯ ಹಣ್ಣುಗಳನ್ನು ನೀಡುವುದು ಗೋವೆ ಮರದ ವಿಶೇಷ. ಕೆಲವು ಮರಗಳ ಬೀಜ ಚಿಕ್ಕದಾಗಿ ದ್ದರೆ, ಇನ್ನು ಕೆಲವು ಮರಗಳು ನೀಡುವ ಬೀಜ ತುಸು ದೊಡ್ಡವು. ಇವುಗಳ ನಡುವೆ, ‘ಆನೆ ಬೀಜ’ ಎಂದು ಮಕ್ಕಳಿಂದ ಹೊಗಳಿಸಿಕೊಳ್ಳುವ ದೊಡ್ಡ ಬೀಜಗಳೂ ಅಲ್ಲಲ್ಲಿ ಕಾಣಿಸುತ್ತವೆ. ಗಂಟಿ ಮೇಯಿಸುವ ಮಕ್ಕಳು ಗೋವೆ ಬೀಜದೊಂದಿಗೆ ಆಟವಾಡುವಾಗ, ಈ ಆನೆ ಬೀಜಕ್ಕೆ ಹೆಚ್ಚು ಬೇಡಿಕೆ!

ಗೋವೆ ಹಣ್ಣುಗಳನ್ನು ಬುಟ್ಟಿಯಲ್ಲಿ ತುಂಬಿ ಮನೆಗೆ ತಂದು, ಅಂಗಳದಲ್ಲಿ ಹರಡಿ, ಬೀಜವನ್ನು ಪ್ರತ್ಯೇಕಿಸಿ ಚೆನ್ನಾಗಿ ಆರೆಂಟು
ದಿನ ಒಣಗಿಸಬೇಕು. ರಸ ಭರಿತ ಹಣ್ಣುಗಳನ್ನು ತಿನ್ನಲು ಹಸು ಕರುಗಳು ಹಾತೊರೆಯುತ್ತವೆ. ಗೋವಾದಲ್ಲಿ ಈ ಹಣ್ಣಿನಿಂದ ಫೆನ್ನಿ ಎಂಬ ಮಾದಕ ಪಾನೀಯವನ್ನು ತಯಾರಿಸುವ ಪರಿಪಾಠವಿದೆ; ಆದರೆ ನಮ್ಮ ರಾಜ್ಯದಲ್ಲಿ ಅಂತಹದೊಂದು ಉದ್ಯಮ ಬೆಳೆಯಲಿಲ್ಲ. ಬಹು ಹಿಂದೆ, ಹಳ್ಳಿಯಲ್ಲೇ ಮದ್ಯ ತಯಾರಿಸುವಾಗ, ಗೋವೆ ಹಣ್ಣನ್ನು ಅದಕ್ಕೆ ಉಪಯೋಗಿಸುತ್ತಿದ್ದರು. ನಮ್ಮ ಹಳ್ಳಿಯ ಅತಿ ರುಚಿಕರ ಸ್ಥಳೀಯ ವಸ್ತುಗಳಲ್ಲಿ ಸುಟ್ಟ ಗೋವೆ ಬೀಜಕ್ಕೆ ಮೊದಲ ಸ್ಥಾನ.

ಅದೆಷ್ಟು ರುಚಿ ಎಂದರೆ, ಬಹು ಹಿಂದೆ ಒಬ್ಬ ವ್ಯಕ್ತಿಯು ಸುಟ್ಟ ಗೋವೆ ಬೀಜದ ತಿರುಳನ್ನು ತಿನ್ನುವ ಆಸೆಗೆ ಬಲಿಯಾಗಿ, ತನ್ನ ಹೆಂಡತಿಯನ್ನೇ ಮಾರಿದ ಎಂಬ ಗಾದೆ ನಮ್ಮೂರಲ್ಲಿ ಇದೆ! ಆದರೆ, ಗಟ್ಟಿಯಾದ ಕವಚದೊಳಗೆ ಇರುವ ಗೋಡಂಬಿ
ತಿರುಳನ್ನು ತೆಗೆಯವುದೆಂದರೆ, ಸಾಕಷ್ಟು ಕಷ್ಟದ ಕೆಲಸ. ಆ ಕವಚಕ್ಕೆ ಸಣ್ಣ ಗಾಯವಾದರೂ ಸಾಕು, ಅದರಿಂದ ಸೊನೆ ಒಸರುತ್ತದೆ ಮತ್ತು ಅದು ತಾಗಿದರೆ, ಚರ್ಮ ಸುಟ್ಟು ಹೋಗುತ್ತದೆ.

ಸರಿಯಾಗಿ ಮಾಹಿತಿ ಇಲ್ಲದೇ ಆ ಗಟ್ಟಿ ಬೀಜವನ್ನು ಒಡೆಯುವುದು ಅಪಾಯಕಾರಿ! ಅದು ತಾಗಿದ ಜಾಗವೆಲ್ಲಾ ಚರ್ಮ ಸುಟ್ಟು ಹುಣ್ಣುಗಳೂ ಆಗಬಹುದು. ಬೀಜವನ್ನು ಚೆನ್ನಾಗಿ ಒಣಗಿಸಿ, ಅದನ್ನು ಸುಟ್ಟು, ಒಳಗಿನ ತಿರುಳನ್ನು ತೆಗೆಯುವುದು ನಮ್ಮ ಹಳ್ಳಿಯಲ್ಲಿದ್ದ ಒಂದು ವಿಧಾನ. ಗೋವೆ ಬೀಜವನ್ನು ಸುಡಲು ಒಂದು ಹಳೆಯ ಮಡಕೆಯನ್ನು ಅಥವಾ ಡಬ್ಬದ ತಗಡನ್ನು ಬಳಸುವ ಅಭ್ಯಾಸವಿದೆ.

ನಾಲ್ಕು ಮುಷ್ಟಿ ಬೀಜವನ್ನು ಮಡಕೆಯಲ್ಲಿ ಹಾಕಿ, ಚೆನ್ನಾಗಿ ಬಿಸಿ ಮಾಡಿದಾಗ, ಅದರ ಕಪ್ಪನೆಯ ಸೊನೆ ಬಿಡುತ್ತದೆ, ಜತೆಗೆ ಆ
ಸೊನೆಗೆ ಬೆಂಕಿ ಹೊತ್ತಿಕೊಳ್ಳುತ್ತದೆ. ಐದರಿಂದ ಹತ್ತು ನಿಮಿಷ ಆ ರೀತಿ ಉರಿಯಲು ಬಿಟ್ಟು, ನಂತರ ಕೆಳಗೆ ಸುರುವಿ ಬೆಂಕಿ ಆರಿಸಿ, ಬಿಸಿ ಬಿಸಿ ಇದ್ದಾಗಲೇ ಕಲ್ಲಿನಿಂದ ಜಜ್ಜಿ ಒಳಗಿನ ತಿರುಳನ್ನು ತೆಗೆಯುತ್ತಿದ್ದೆವು. ಅಷ್ಟು ಸುಟ್ಟರೂ, ಆ ಹೊರಕವಚದಿಂದ ಸೂಸುವ ರಸ ಅದೆಷ್ಟು ತೀಕ್ಷಣವೆಂದರೆ, ಅದನ್ನು ಕಲ್ಲಿನಿಂದ ಜಜ್ಜಿದಾಗ ಕೈಗೆ ತಾಗಿದ ಭಾಗದ ಚರ್ಮವು ನಾಲ್ಕಾರು ದಿನಗಳ ನಂತರ ಸಣ್ಣಗೆ ಸುಲಿದು ಹೋಗುತ್ತದೆ!

ಸುಟ್ಟು ಬೇರ್ಪಡಿಸಿದ ಒಳಗಿನ ತಿರುಳಿನ ರುಚಿಯಂತೂ ಅಪೂರ್ವ. ಅದನ್ನು ಹಾಗೆಯೇ ಸಂಗ್ರಹಿಸಿ ಇಡಬಹುದು. ಬಿಸಿ ಬಿಸಿ ಇರುವಾಗಲೇ ತಿಂದರೆ ವಿಶಿಷ್ಟ ಸವಿ; ಇದರ ಜತೆ ಹಲಸಿನ ಹಪ್ಪಳವನ್ನು ಸುಟ್ಟು ಸೇವಿಸುವ ಪದ್ಧತಿ ಇತ್ತು. ವಿವಿಧ ತಿನಿಸು ಮಾಡುವಾಗ, ಪಾಯಸ ಮಾಡುವಾಗ ಈ ತಿರುಳನ್ನು ಉಪಯೋಗಿಸುವ ಪರಿಪಾಠ. ಪೋರ್ಚುಗೀಸರಿಂದ ನಮ್ಮ ಪ್ರದೇಶಕ್ಕೆ ಬಂದ ಗೋಡಂಬಿಯು ಕರಾವಳಿಯ ಬದುಕಿನಲ್ಲಿ ಹಾಸುಹೊಕ್ಕಾದ ಪರಿ ವಿಶಿಷ್ಟ ಮತ್ತು ಅಧ್ಯಯನ ಯೋಗ್ಯ. ನಮ್ಮ ಜನರು ಗೋಯ್ ಬೀಜವನ್ನು ಅದೆಷ್ಟು ಪ್ರೀತಿಯಿಂದ ತಮ್ಮದಾಗಿಸಿಕೊಂಡಿದ್ದಾರೆಂದರೆ, ರಾಮನವಮಿ ಮೊದಲಾದ ಸಂದರ್ಭಗಳಲ್ಲಿ ಗೋಡಂಬಿಯ ಪಲ್ಯವನ್ನು ಮಾಡಿ, ಪ್ರಸಾದ ರೂಪದಲ್ಲಿ ಸೇವಿಸುವ ಪದ್ಧತಿಯೂ ಇದೆ.

ಗೋಡಂಬಿ ಪಲ್ಯ ತಯಾರಿಸುವ ವಿಧಾನವೇ ಅಪೂರ್ವ. ಇನ್ನೂ ಹಣ್ಣಿನ ಸ್ವರೂಪ ತಾಳದ, ಅರ್ಧ ಬೆಳೆದ ಕಾಯಿಗಳನ್ನು ಕಿತ್ತು, ಬಹು ಜಾಗ್ರತೆಯಿಂದ ಅದನ್ನು ಸುಲಿದು, ಒಳಗಿನ ಎಳೆಯ ತಿರುಳನ್ನು ಬೇರ್ಪಡಿಸುತ್ತಾರೆ. ಬಿಳಿ ಬಣ್ಣದ ಆ ತಿರುಳನ್ನು ತುಸು ಬೇಯಿಸಿ, ಹೆಚ್ಚು ಖಾರ ಹಾಕದೇ ಒಗ್ಗರಣೆಯ ಪ್ರಕ್ರಿಯೆಗೆ ಒಳಪಡಿಸಿದಾಗ ಗೋಡಂಬಿ ಪಲ್ಯ ಸಿದ್ಧ. ಇದನ್ನು ಬೇರೆ ಸಂದರ್ಭ ಗಳಲ್ಲೂ ತಯಾರಿಸುವುದುಂಟು; ದೊಡ್ಡ ಪ್ರಮಾಣದಲ್ಲಿ ಮಾಡಬೇಕಾದರೆ, ಸಾಕಷ್ಟು ಎಳೆ ತಿರುಳು ಅಗತ್ಯ.

ಇದರ ಜತೆ ಎಳೆ ತೊಂಡೆಕಾಯಿಯನ್ನು ಬೆರೆಸಿ ಮಾಡಿದ ಪಲ್ಯ ಸಾಕಷ್ಟು ರುಚಿಕರ. ಕರಾವಳಿಯ ಜನರು ಈ ಎಳೆ ತಿರುಳಿನಿಂದ ಪಲ್ಯ ಮತ್ತು ಸಿಹಿ ಕೋಸುಂಬರಿಯನ್ನೂ ತಯಾರಿಸುವುದುಂಟು! ಗೋಡಂಬಿ ಗಿಡವನ್ನು ಒಮ್ಮೆ ನೆಟ್ಟು, ಒಂದೆರಡು ವರ್ಷಗಳ ಕಾಲ ಬೆಳೆಸಿಬಿಟ್ಟರೆ, ನಂತರ ಅದರ ಪೋಷಣೆಗೆ ಯಾವುದೇ ಖರ್ಚಿಲ್ಲ. ಚೆನ್ನಾಗಿ ಬೆಳೆದ ಗೋಡಂಬಿ ಮರವು, ಪ್ರತಿ ವರ್ಷ ಹತ್ತಿಪ್ಪತ್ತು ಕಿಲೋ ಬೀಜಗಳನ್ನು ಸುಲಭವಾಗಿ ನೀಡಬಲ್ಲದು. ಈ ನಿಟ್ಟಿನಲ್ಲಿ ನೀಡಿದರೆ, ಶೂನ್ಯ ಬಂಡವಾಳದ ಕೃಷಿ ಇದು.

ಇದನ್ನು ಗಮನಿಸಿದ ಸರಕಾರವು ಹಲವು ಪ್ರದೇಶಗಳಲ್ಲಿ ವ್ಯಾಪಕವಾಗಿ ಗೋಡಂಬಿ ಬೆಳೆಯಲು ಆರಂಭಿಸಿತು. ಆದರೆ, ಈಚಿನ
ದಶಕಗಳಲ್ಲಿ ಗೋಡಂಬಿ ಪ್ಲಾಂಟೇಷನ್‌ನಲ್ಲಿ ಎಂಡೋಸಲಾನ್ ಸಿಂಪಡಿಸಿದ್ದರಿಂದಾಗಿ, ದಕ್ಷಿಣ ಕನ್ನಡದ ಕೆಲವು ಭಾಗಗಳಲ್ಲಿ ಮಾನವನ ಮೇಲೆ ದುಷ್ಪರಿಣಾಗಳಾಗಿರುವುದು ನಿಜಕ್ಕೂ ನೋವಿನ ವಿಚಾರ.

ಗೋಡಂಬಿ ಬೀಜಗಳಿಗೆ ಉತ್ತಮ ಬೆಲೆ ಇದೆ. ವರ್ಷದಿಂದ ವರ್ಷಕ್ಕೆ ಇದರ ಬೆಲೆಯಲ್ಲಿ ವ್ಯತ್ಯಯ ಉಂಟಾಗುವುದು ನಿಜವಾದರೂ, ಹೆಚ್ಚಿನ ಖರ್ಚು ಇಲ್ಲದೇ ಬೆಳೆಯುವ ಈ ಗಿಡವನ್ನು ಪೋಷಿಸುವುದರಿಂದ ರೈತನಿಗೆ ಸಾಕಷ್ಟು ಲಾಭವಿದೆ.
ಕರಾವಳಿಯ ಕೆಲವು ಕಡೆ ಇದನ್ನು ಕೆಲವು ರೈತರು ವಾಣಿಜ್ಯ ಬೆಳೆಯಾಗಿ ಬೆಳೆಯುವುದು ಇದೆಯಾದರೂ, ಅದೇಕೋ ಕರ್ನಾಟಕದ ಇತರ ಭಾಗಗಳಲ್ಲಿ ಗೋಡಂಬಿ ಬೆಳೆ ಅಷ್ಟು ಜನಪ್ರಿಯವಾಗಿಲ್ಲ.

ಬೆಂಗಳೂರು ಸುತ್ತ ಮುತ್ತ ಕೆಲವು ಪ್ರದೇಶಗಳಲ್ಲಿ ಗೋಡಂಬಿ ತೋಟಗಳಿವೆ; ಆದರೆ ಅದನ್ನೇ ಪ್ರಧಾನವಾಗಿ ಬೆಳೆಯುವ
ಪರಿಪಾಠ ಇಲ್ಲಿಲ್ಲ. ತುಸು ದುಬಾರಿ ಬೆಲೆಯ, ಸಂಸ್ಕರಿಸಿದ ಗೋಡಂಬಿಗೆ ಸಾಕಷ್ಟು ಬೇಡಿಕೆ ಇದ್ದರೂ, ನಮ್ಮ ದೇಶದಲ್ಲಿ ಆ ಬೇಡಿಕೆಯನ್ನು ಪೂರೈಸುವುದು ಸಾಧ್ಯವಾಗಿಲ್ಲವಾದ್ದರಿಂದ, ಆಫ್ರಿಕಾ ಮೊದಲಾದ ದೇಶಗಳಿಂದ ಹಸಿ ಬೀಜಗಳನ್ನು ಆಮದು
ಮಾಡಿಕೊಳ್ಳಲಾಗುತ್ತಿದೆ.

ಕರಾವಳಿಯಲ್ಲಿ ಗೋಡಂಬಿ ಸಂಸ್ಕರಿಸುವ ಹಲವು ಕಾರ್ಖಾನೆಗಳಿವೆ; ಅದು ಗೃಹೋದ್ಯಮದ ಸ್ವರೂಪವನ್ನೂ ಅಲ್ಲಿ ಪಡೆದಿದೆ. ದೊಡ್ಡ ಕಾರ್ಖಾನೆಗಳಿಗೆ ಪೂರಕವಾಗಿ, ಮನೆಗಳಲ್ಲಿರುವ ಮಹಿಳೆಯರು ಬೀಜ ಸುಲಿಯುವ ಕೆಲಸವನ್ನು ಮಾಡಿಕೊಟ್ಟು,
ಸಣ್ಣ ಮಟ್ಟದ ಮಜೂರಿ ಪಡೆಯುತ್ತಾರೆ. ಸಾಕಷ್ಟು ಸಂಖ್ಯೆಯ ಸ್ಥಳೀಯರು ಗೋಡಂಬಿ ಕಾನೆಗಳಲ್ಲಿ ಕೆಲಸ ಮಾಡುತ್ತಾರೆ; ಜತೆಗೆ, ಕೆಲಸದವರ ಕೊರೆಯಿಂದಾಗಿ, ದೂರದ ಅಸ್ಸಾಂ, ಜಾರ್ಖಂಡ್‌ನಿಂದ ಬಂದ ಸಾಕಷ್ಟು ಸಂಖ್ಯೆಯ ಜನರು ಅಲ್ಲಿ ಕೆಲಸ ಮಾಡುತ್ತಾರೆ.

ನೂರಾರು ಜನ ಕೆಲಸ ಮಾಡುವ ಕಾರ್ಖಾನೆಗಳಲ್ಲಿ, ಬೀಜಗಳನ್ನು ಸಂಸ್ಕರಿಸಿ, ವಿವಿಧ ಗ್ರೇಡ್‌ಗೆ ವಿಂಗಡಿಸಿ, ಡಬ್ಬಿಗಳಲ್ಲಿ
ತುಂಬಿ ಮಾರಾಟಕ್ಕೆ ಸಾಗಿಸುತ್ತಾರೆ. ನಮ್ಮ ರಾಜ್ಯದಲ್ಲಿ ಸಂಸ್ಕರಣೆಗೊಂಡ ಗೋಡಂಬಿ ತಿರುಳಿಗೆ ವಿದೇಶಗಳಲ್ಲೂ ಬೇಡಿಕೆ ಇರುವುದು ವಿಶೇಷ ಮತ್ತು ಹೆಮ್ಮೆಯ ವಿಚಾರವೇ ಸರಿ. ಈ ಉದ್ಯಮವು ವಾಣಿಜ್ಯಕವಾಗಿ ಇನ್ನಷ್ಟು ಪೊಟೆನ್ಶಿಯಲ್ ಇರುವ
ಚಟುವಟಿಕೆ. ಗೋಡಂಬಿಗೆ ವಿಶ್ವದಾದ್ಯಂತ ಬೇಡಿಕೆ ಇದೆ; ಆದರೆ ಹೆಚ್ಚು ಪ್ರಮಾಣದ ಗೋಡಂಬಿ ಬೆಳೆ ಬೆಳೆಯುವುದು ಆಫ್ರಿಕಾ, ಬ್ರೆಜಿಲ್ ಮತ್ತು ನಮ್ಮ ದೇಶದಲ್ಲಿ ಮಾತ್ರ.

ಗೋಡಂಬಿಯ ಸಂಸ್ಕರಣೆ ಮತ್ತು ಮಾರಾಟವನ್ನು ಆದ್ಯತೆಯ ಕ್ಷೇತ್ರವಾಗಿ ಗುರುತಿಸಿ, ರಫ್ತು ಮಾಡುವ ಪ್ರಕ್ರಿಯೆಗೆ ಹೆಚ್ಚಿನ
ಪ್ರೋತ್ಸಾಹ ನೀಡಿದರೆ, ನಮ್ಮ ದೇಶದ ಉದ್ಯಮಿಗಳಿಗೆ ಮತ್ತು ಕೃಷಿಕರಿಗೆ ಇನ್ನಷ್ಟು ಬೆಂಬಲ ನೀಡಿದಂತಾಗುತ್ತದೆ.