Tuesday, 27th September 2022

ಸದಾಶಿವ ಆಯೋಗದ ವರದಿ ಜಾರಿ ಬೇಡ

– ಭೋವಿ, ಕೊರಚ, ಕೊರಮ, ಬಂಜಾರ ಸಮುದಾಯಗಳ ಒತ್ತಾಯ
– ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ
– ನ್ಯಾ. ನಾಗಮೋಹನ್‌ದಾಸ್ ವರದಿ ಅಂಗೀಕರಿಸಲು ಕೋರಿಕೆ

ಕೊಪ್ಪಳ: ನ್ಯಾ.ಎ.ಜೆ. ಸದಾಶಿವ ಆಯೋಗ ವರದಿಯನ್ನು ಏಕಪಕ್ಷೀಯವಾಗಿ ಕೇಂದ್ರಕ್ಕೆ ಯಾವುದೇ ಕಾರಣಕ್ಕೂ ಶಿಫಾರಸ್ಸು ಮಾಡಬಾರದು. ಮಾಡಿದರೆ ಉಳಿದ ಇತರೆ ದಲಿತ ಸಮುದಾಯಗಳಿಗೆ ಅನ್ಯಾಯ ಮಾಡಿದಂದಾಗುತ್ತದೆ. ಮೀಸಲಾತಿ ಹೆಚ್ಚಳದ ಕುರಿತು ನ್ಯಾ. ನಾಗಮೋಹನದಾಸ್ ನೀಡಿರುವ ವರದಿ ಅಂಗಿಕರಿಸು ವಂತೆ ಒತ್ತಾಯಿಸಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾ ಘಟಕದ ಪದಾಧಿಕಾರಿಗಳು ನಗರಾದ್ಯಂತ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಭೋವಿ ಅವರು, ಬಂಜಾರ, ಕೊರಮ, ಭೋವಿ, ಕೊರಚ ಸೇರಿ ಇತರೆ ಅಲೆಮಾರಿ ಜಾತಿಗಳು ತಲತಲಾಂತರದಿಂದ ಅಸ್ಪಶ್ಯತೆ, ತಾರತಮ್ಯಕ್ಕೆ ಒಳಗಾಗಿವೆ. ಮೈಸೂರು ರಾಜರ ಆಡಳಿತದಲ್ಲಿ ಈ ಜಾತಿಗಳನ್ನು ದಮನಿತರೆಂದು ಗುರುತಿಸಲಾಗಿದೆ. ಆ ನಂತರವೂ ಬಂದ ಸರ್ಕಾರಗಳು ನಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಿವೆ. ಬಾಬಾಸಾಹೇಬ ಅಂಬೇಡ್ಕರ್ ದಮನಿತರಿಗೆ ಮೀಸಲಾತಿ ಕಲ್ಪಸಿದ್ದಾರೆ. ಆದರೆ, ಸದಾಶಿವ ಆಯೋಗದ ವರದಿ ರಾಜಕೀಯ ಪ್ರೇರಿತವಾಗಿದೆ. ಅಲ್ಲದೇ ಏಕಪಕ್ಷೀಯವಾಗಿದೆ. ಸಮೀಕ್ಷೆ ಹೇಗೆ ಮಾಡಲಾಯಿತು? ಸಮೀಕ್ಷೆಯ ಮಾನದಂಡಗಳೇನು ಎಂಬೆಲ್ಲ ಗೊಂದಲಗಳಿವೆ ಎಂದು ಆರೋಪಿಸಿದರು.

ನ್ಯಾ. ಸದಾಶಿವ ಆಯೋಗದ ವರದಿ ಬಗ್ಗೆ ಪರಾಮರ್ಶೆ ನಡೆಸದೆ ಏಕ ಪಕ್ಷೀಯವಾಗಿ ಕೇಂದ್ರಕ್ಕೆ ಈ ವರದಿ ಶಿಫಾರಸ್ಸು ಮಾಡಬಾರದು. ಭೋವಿ ಸಮುದಾಯ ಶಾಸಕರಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು. ಪರಿಶಿಷ್ಟ ಜಾತಿ ಸಮುದಾಯ ಜನರ ನಡುವೆ ಒಡಕು ಬಿತ್ತಲು ಪ್ರಚೋದನೆ ನೀಡು ತ್ತಿರುವ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರ ರಾಜೀನಾಮೆ ಪಡೆಯಬೇಕು. ಹೋರಾಟದ ಹೆಸರಿನಲ್ಲಿ ಸಮುದಾಯ ಧರ್ಮಗುರುಗಳು, ಹಿರಿಯರು ಹಾಗೂ ಗಣ್ಯರ ವಿರುದ್ಧ ಅವಹೇಳಕಾರಿ ಯಾಗಿ ಮಾತನಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕಾಗಿ ನ್ಯಾ. ನಾಗಮೋಹನ ದಾಸ್ ಸರ್ಕಾರಕ್ಕೆ ಸಲ್ಲಿಸಿರುವ ವರದಿ ಅಂಗೀಕರಿಸಬೇಕು ಎಂದು ಇದೇ ವೇಳೆ ಪ್ರತಿಭಟನಾಕಾರರು ಒತ್ತಾಯಿಸಿದರು.

ನಗರದ ಸಾರ್ವಜನಿಕ ಮೈದಾನದಿಂದ ಜಿಲ್ಲಾಡಳಿತ ಭವನದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಆಯಾ ಸಮುದಾಯದ ಜನರು ತಮ್ಮ ವೇಷ ಭೂಷಣ ಧರಿಸುವ ಮೂಲಕ ವಿಭಿನ್ನವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾ ರ್‍ಯಾಲಿ ಬಳಿಕ ಜಿಲ್ಲಾಧಿ ಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಾ ಮೆರವಣಿಗೆಯಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಭೋವಿ, ಕಾರ್ಯಾಧ್ಯಕ್ಷ ಲಕ್ಷ್ಮಣ ನಾಯ್ಕ, ಉಪಾಧ್ಯಕ್ಷ ಪಂಪಣ್ಣ ಪೂಜಾರ, ಪ್ರಧಾನ ಕಾರ್ಯದರ್ಶಿ ಭರತ್ ನಾಯ್ಕ, ಮುಖಂಡರಾದ ಗಾಳೆಪ್ಪ ಭೋವಿ, ಯಮನೂರಪ್ಪ, ಲೋಕೇಶ ಭಜಂತ್ರಿ, ಹುಲುಗಪ್ಪ ವಜ್ರಬಂಡಿ, ಮಹೇಶ ಬಳಗಾನೂರು ಸೇರಿದಂತೆ ೫೦೦ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.