Friday, 3rd February 2023

ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಶಬ್ದ ಗಾರುಡಿಗ

ತನ್ನಿಮಿತ್ತ

ಸುರೇಶ ಗುದಗನವರ

ಕನ್ನಡ ಕಾವ್ಯಲೋಕಕ್ಕೆ ವಿಶಿಷ್ಟ ಶೈಲಿ ಮತ್ತು ಲಯಗಳ ಮೂಲಕ ನಾದದ ಗುಂಗು ಹಿಡಿಸಿದ ಶಬ್ದ ಗಾರುಡಿಗ, ವರಕವಿ, ರಸಋಷಿ ಎಂದೇ ಪ್ರಖ್ಯಾತರಾಗಿರುವ ಶ್ರೇಷ್ಠ ಕವಿ ಡಾ.ದ.ರಾ. ಬೇಂದ್ರೆ ತಮ್ಮ ಕಾವ್ಯ ಶಕ್ತಿಯಿಂದ ಉತ್ಸಾಹದ ಚಿಲುಮೆಯನ್ನುಕ್ಕಿಸಿ ನೊಂದ ಜೀವಕ್ಕೆ ಸಾಂತ್ವನ ನೀಡಿ, ಪ್ರೀತಿ ಪ್ರೇಮಗಳನ್ನು ಮೂಡಿಸಿ, ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದವರು.

ದ.ರಾ.ಬೇಂದ್ರೆಯವರು ಜೀವನದಲ್ಲಿ ನೊಂದು ಬೆಂದು ಬಳಲಿದವರಾದರೂ ಕಾವ್ಯದ ಮೂಲಕವಾಗಿ ಮಿಂಚಿದ ರತ್ನವೆನಿಸಿ ದ್ದಾರೆ. ಜೀವನದಲ್ಲಿ ಮಕ್ಕಳ ಸಾವು,ಪತ್ನಿಯ ಸಾವು ಬೇಂದ್ರೆಯವರಿಗೆ ಅತೀವ ದುಃಖವನ್ನುಂಟು ಮಾಡಿದವು. ಆದರೂ ಇದ್ಯಾವು
ದಕ್ಕೂ ದೃತಿಗೆಡದೆ ಕೊರತೆಯ ಬದುಕಿನಲ್ಲಿಯೇ ಅಪಾರವಾದ ಶ್ರೇಷ್ಠ ಸಾಹಿತ್ಯ ಸಂಪತ್ತನ್ನು ನಿರ್ಮಾಣ ಮಾಡಿದ ಹೆಗ್ಗಳಿಕೆ ಬೇಂದ್ರೆಯವರಿಗೆ ಸಲ್ಲುತ್ತದೆ.

ದ.ರಾ.ಬೇಂದ್ರೆಯವರು ೩೧ ಜನವರಿ ೧೮೮೬ ರಂದು ಧಾರವಾಡದಲ್ಲಿ ಜನಿಸಿದರು. ಇವರ ತಂದೆ ರಾಮಚಂದ್ರ, ತಾಯಿ ಅಂಬವ್ವ. ಬೇಂದ್ರೆ ಯವರು = ವೈದಿಕ ಮನೆತನದಲ್ಲಿ ಹುಟ್ಟಿ ಉತ್ತಮ ಸಂಸ್ಕಾರವನ್ನು ಪಡೆದರು. ಧಾರವಾಡದಲ್ಲಿಯೇ ೧೯೦೨ರಲ್ಲಿ ಕನ್ನಡ ಶಾಲೆಗೆ ಸೇರಿದರು. ದತ್ತಾತ್ರೇಯ ಹನ್ನೊಂದು ವರ್ಷದವರಿದ್ದಾಗ ಅವರ ತಂದೆ ರಾಮಚಂದ್ರ ತೀರಿ ಕೊಂಡರು. ತಂದೆಯವರು ತೀರಿಕೊಂಡ ಮೇಲೆ ಅವರು ತನ್ನ ಚಿಕ್ಕಪ್ಪ ಬಂಡೋಪಂತರ ಆಶ್ರಯದಲ್ಲಿ ಬೆಳೆದರು.

ಬೇಂದ್ರೆಯವರು ೧೯೧೩ರಲ್ಲಿ ಮೆಟ್ರಿಕ್ ಪೂರೈಸಿದ ನಂತರ ೧೯೧೮ರಲ್ಲಿ ಪುಣೆಯ ಫರ್ಗೂಸನ್ ಕಾಲೇಜಿನಿಂದ ಬಿ.ಎ ಪದವಿ ಪಡೆದರು. ೧೯೧೯ರಲ್ಲಿ ಬೇಂದ್ರೆಯವರು ನರಗುಂದದ ಜೋಗಳೆಕರ ವಾಸುದೇವರಾಯರ ಮಗಳಾದ ರಂಗೂತಾಯಿಯವರನ್ನು ಹುಬ್ಬಳ್ಳಿಯಲ್ಲಿ ಮದುವೆಯಾದರು. ರಂಗೂತಾಯಿಯವರು ಬೇಂದ್ರೆ ಮನೆತನಕ್ಕೆ ಬಂದ ಮೇಲೆ ಲಕ್ಷ್ಮೀಬಾಯಿ ಯಾಗಿ
ಬದಲಾವಣೆಗೊಂಡರು. ಮದುವೆಯಾದಾಗ ಬೇಂದ್ರೆಯವರಿಗೆ ಇಪ್ಪತ್ಮೂರು ವರ್ಷವಾದರೇ ಲಕ್ಷ್ಮೀಬಾಯಿಯವರಿಗೆ ಕೇವಲ ಹದಿಮೂರು ವರ್ಷ.

ಲಕ್ಷ್ಮೀಬಾಯಿ ಹಾಗೂ ಬೇಂದ್ರೆಯವರು ಸಂಸಾರ ಕಂಡದ್ದು ಹೆಚ್ಚಾಗಿ ಕಷ್ಟದ ದಿನಗಳು. ಅದರಲ್ಲಿಯೂ ಹುಟ್ಟಿದ ಒಂಭತ್ತು ಮಕ್ಕಳಲ್ಲಿ ಆರು ಮಕ್ಕಳು ಕಣ್ಣ ಮುಂದೆಯೇ ಇಲ್ಲವಾಗಿ ಉಳಿದವರು ಇಬ್ಬರು ಗಂಡುಮಕ್ಕಳು ಮತ್ತು ಒಬ್ಬಳು ಮಗಳು
ಮಾತ್ರ. ವಾಮನ ಬೇಂದ್ರೆ, ಪಾಂಡುರಂಗ ಬೇಂದ್ರೆ ಮತ್ತು ಮಂಗಳ. ಬಡತನದ ಕುಲುಮೆಯಲ್ಲಿ ಬೇಯುತ್ತಿದ್ದಂತೆಯೇ ಕರುಳ ಕುಡಿಗಳು ಕಣ್ಣಮುಂದೆ ಬಾಡಿ ಹೋದಾಗ ಆ ದುಃಖದ ಅನುಭವವನ್ನು ಎದೆಯಲ್ಲಿ ತುಂಬಿಕೊಂಡವರು ಅವರು.

ವಿದ್ಯಾಭ್ಯಾಸದ ಸಂದರ್ಭದಲ್ಲಿಯೇ ಕನ್ನಡ ಸಾಹಿತ್ಯದಲ್ಲಿ ಅಪಾರ ಒಲವನ್ನು ಹೊಂದಿದ್ದ ಬೇಂದ್ರೆ ಯವರು ಕಾವ್ಯವನ್ನು ಲೀಲಾಜಾಲವಾಗಿ ರಚಿಸಿದರು. ಕನ್ನಡ, ಇಂಗ್ಲೀಷ್, ಮರಾಠಿ ಮತ್ತು ಸಂಸ್ಕೃತ ಭಾಷೆಗಳಲ್ಲಿ ಒಟ್ಟು ಅರವತ್ತೇಳು ಕೃತಿಗಳನ್ನು
ರಚಿಸಿದ್ದಾರೆ. ಬೇಂದ್ರೆಯವರ ಕೃತಿಗಳು ಒಂದೊಂದು ವಿವಿಧ ವಿಶೇಷಗಳಾಗಿ ಮೂಡಿ ಬಂದು ಜನಮನ್ನಣೆ ಗಳಿಸಿವೆ. ಇವರ ಕೃತಿಗಳ ಬಗ್ಗೆ ಸ್ಥೂಲವಾಗಿ ವಿವರಿಸುವುದಾದಲ್ಲಿ ಗಂಗಾವತರಣ, ನಾದಲೀಲೆ, ಸಖೀಗೀತ, ನಾಕುತಂತಿ, ಗರಿ, ಅರಳು ಮಲ್ಲಿಗೆ, ಮತ್ತೇ ಶ್ರಾವಣ ಬಂತು ಅವರ ಶ್ರೇಷ್ಠ ಕೊಡುಗೆಗಳು.

ಅವರು ಅರವಿಂದರ ಇಂಗ್ಲೀಷ್ ಕೃತಿಯೊಂದನ್ನು ‘ಭಾರತೀಯ ನರಜನ್ಮ’ವೆಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಕನ್ನಡದ ಶ್ರೇಷ್ಠ ಕಾದಂಬರಿಕಾರ ಕೆ.ವಿ. ಅಯ್ಯರ ಅವರ ‘ಶಾಂತಲಾ’ ಕಾದಂಬರಿಯನ್ನು ಮರಾಠಿ ಭಾಷೆಗೆ ಅನುವಾದಿಸಿದ್ದಾರೆ. ಎ ಥಿಯರಿ ಆಫ್ ಇಮ್ಮೋರ್ಟಾಲಿಟಿ ಮತ್ತು ಲ್ಯಾಗ್ವೇಜ್ – ಮ್ಯಾಥಮ್ಯಾಟಿಕ್ಸ್ – ಆಂಡ್ ಟ್ರೂತ್ ಎಂಬ ಕೃತಿಗಳನ್ನು ಇಂಗ್ಲೀಷ್‌ನಲ್ಲಿ ರಚಿಸಿದ್ದಾರೆ.

ಕಾಳಿದಾಸನ ‘ಮೇಘದೂತ’ವನ್ನು ಕನ್ನಡಕ್ಕೆ ಅನುವಾದಿಸಿದ್ದ ಅದು ಬೇಂದ್ರೆಯವರ ಸ್ವತಂತ್ರ ಕೃತಿಯೇನೋ ಎನ್ನುವಷ್ಟರ ಮಟ್ಟಿಗೆ ಅದಕ್ಕೆ ಬೇಂದ್ರೆತನವನ್ನು ತುಂಬಿದ್ದಾರೆ. ಅವರು ಹೊಸ ಸಂಸಾರ, ಸಾಯೋ ಆಟ, ಹುಚ್ಚಾಟಗಳು, ದೆವ್ವದ ಮನೆ, ಜಾತ್ರೆ, ಮುಂತಾದ ಹದಿನಾಲ್ಕು ನಾಟಕಗಳನ್ನು ರಚಿಸಿದ್ದಾರೆ. ಇವಲ್ಲದೇ ಆರು ಸಂಪಾದನಾ ಗ್ರಂಥಗಳನ್ನು ತಂದಿದ್ದಾರೆ.

ದ.ರಾ.ಬೇಂದ್ರೆಯವರ ಹಲವು ಕವನಗಳನ್ನು ಕುಲವಧು, ಅರಿಶಿಣ ಕುಂಕುಮ, ಬೆಳ್ಳಿಮೋಡ, ಶರಪಂಜರ, ಚಕ್ರತೀರ್ಥ ಮುಂತಾದ ಚಲನಚಿತ್ರಗಳಲ್ಲಿ ಸಂದರ್ಭಕ್ಕನುಸಾರವಾಗಿ ಸಮರ್ಥವಾಗಿ ಬಳಸಿಕೊಳ್ಳಲಾಗಿದೆ. ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗುತ್ತ ಹೋಗುವ ಪವಾಡ ಸದೃಶ ಶಕ್ತಿಯಾಗಿದೆ. ಕನ್ನಡದಲ್ಲಿ ಬೇಂದ್ರೆಯ ವರಷ್ಟು ವಿಫಲವಾಗಿ ಹಾಗೂ ಕಾವ್ಯಮಯವಾಗಿ ಕೌಟುಂಬಿಕ ಗೀತೆಗಳನ್ನು ರಚಿಸಿದ ಕವಿಯನ್ನು ಕಾಣುವುದು ಕಷ್ಟ.

ಗಂಡು ಹೆಣ್ಣಿನ ಪ್ರೀತಿ ಮತ್ತು ರಸ, ಕೋಪಗಳನ್ನು ತುಂಬ ಕಾವ್ಯಮಯವಾಗಿಸಿದ ಪ್ರತಿಭೆ ಇವರದ್ದು. ಬೆಳಗು, ರಾಗರತಿ, ಶ್ರಾವಣ, ಯುಗಾದಿ, ಹಕ್ಕಿ ಹಾರುತಿದೆ ನೋಡಿದಿರಾ, ಪಾತರಗಿತ್ತಿ ಪಕ್ಕ, ಶ್ರಾವಣ ವೈಭವ ಚಿತ್ತಿಯ ಮಳೆಯ ಸಂಜೆ ಇಂತಹ ನಿಸರ್ಗವನ್ನು ಕುರಿತ ಕತೆಗಳಾಗಲಿ, ಮಾಯಾ ಕಿನ್ನರಿ, ಹುಬ್ಬಳಿಯಾಂವಾ, ನರಬಲಿ, ತುತ್ತಿನ ಚೀಲ, ಮೂವತ್ತು ಮೂರು ಕೋಟಿ ಇಂತಹ ಸಾಮಾಜಿಕ ಕತೆಗಳಾಗಲಿ, ಗೆಳೆಯ ಶಂಕರದೇವ, ಗುರುದೇವರಂಥ ವ್ಯಕ್ತಿತ್ವಗಳನ್ನು ಬರೆದ ಕತೆಗಳಾಗಲಿ, ಅನಂತ ಪ್ರಣಯ, ಪ್ರೀತಿ ಪ್ರೇಮದ ವಿವಿಧ ಮುಖಗಳನ್ನು ಕುರಿತ ಕತೆಗಳಾಗಲಿ ಬೇಂದ್ರೆಯವರ ಕತೆ ತನ್ನ ಸಾಚಾತನದಿಂದ ಮೆರೆಯುತ್ತದೆ.

ನೀ ಹಿಂಗ ನೋಡಬ್ಯಾಡ ನನ್ನ, ನಾದಲೀಲೆ, ಪಾಡು, ನಾನೊಂದು ನೆನೆದರೆ, ಇಂತಹ ಕತೆಗಳು ಅವರ ಬದುಕಿಗೆ ತೀವ್ರವಾದ ಆಘಾತವನ್ನುಂಟು ಮಾಡಿದ ಮಗನ ಸಾವು, ಬದುಕಿನ ಕಥೆ – ವ್ಯಥೆಗಳು ಘಟನೆಗಳಿಂದ ಮೂಡಿದವುಗಳಾಗಿವೆ. ಭಾಷಣ ಹಾಗೂ ಕಾವ್ಯವಾಚನದಲ್ಲಂತೂ ಬೇಂದ್ರೆ ಯವರದು ಅಸದೃಶವಾದ ಸೃಜನಶೀಲ ಪ್ರತಿಭೆ. ವಾಸ್ತವವಾಗಿ ಬೇಂದ್ರೆಯವರ ವ್ಯಕ್ತಿತ್ವ ಕನ್ನಡಿಗರ ಮೇಲೆ ಪ್ರಭಾವ ಬೀರಿದ್ದ ಅವರ ಕಾವ್ಯದ ವಾಚನದ ಮೂಲಕ ಎನ್ನಬಹುದು.

೧೯೨೯ರ ಬೆಳಗಾವಿ ಸಾಹಿತ್ಯ ಸಮ್ಮೇಳನದಲ್ಲಿ ಹಕ್ಕಿ ಹಾರುತಿದೆ ನೋಡಿದಿರಾ ಕವನವನ್ನು ಓದಿದಾಗ ರುಮಾಲು ಸುತ್ತಿದ್ದ ಬೇಂದ್ರೆ
ಯವರ ಗಾರುಡಿಗ ವ್ಯಕ್ತಿತ್ವ ಮಾಸ್ತಿಯಂಥವರನ್ನೂ ಬೆರಗುಗೊಳಿಸಿತು. ಇಡೀ ಸಭೆಯ ಎದುರಿಗೆ ಕಾಲ ಪಕ್ಷಿ ಹಾರಿಹೋದ ಅದ್ಭುತ ಅನುಭವವನ್ನು ಸೃಷ್ಟಿಸಿದ ಕಾವ್ಯ ವಾಚನದ ಮಾಂತ್ರಿಕ ಕ್ರಿಯೆ ಅಂದು ನಡೆದು ಹೋಯಿತು.

ಅಲ್ಲದೇ ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡುತ್ತಾ ಬೇಂದ್ರೆ ವಾಚಿಸಿದ್ದ ಗಂಗಾವತರಣ ಕತೆಯ ಅನುಭವ ರೋಮಾಂಚನಕರವಾದುದನ್ನು ಅಲ್ಲಿದ್ದ ಅನೇಕ ಹಿರಿಯರು ಬಹುಹಿಗ್ಗಿನಿಂದ ನೆನಪಿಸಿಕೊಂಡರು.

೧೯೨೬ರಲ್ಲಿ ಬೇಂದ್ರೆಯವರು ‘ಗೆಳೆಯರ ಬಳಗ’ ವನ್ನು ಕಟ್ಟಿದರು. ವಿ.ಕೃ. ಗೋಕಾಕ, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ರಂ.ಶ್ರೀ ಮುಗಳಿ ಯಂಥ ಕವಿಗಳ ಬಳಗವನ್ನೇ ಕಟ್ಟಿದರು. ಅವರು ಗೆಳೆಯರ ಗುಂಪಿನ ವತಿಯಿಂದ ನಾಡಹಬ್ಬದ ಆಚರಣೆ ಯನ್ನು ಪ್ರಾರಂಭಿಸಿದರು. ಆ ಗುಂಪು ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಇತಿಹಾಸದ ಒಂದು ಜೀವಂತ ಭಾಗವಾಗಿ
ಉಳಿದಿದ್ದಷ್ಟೇ ಅಲ್ಲ ಕವಿಗೆ ಕವಿ ಮುನಿವ ಎಂಬ ಗಾದೆಯನ್ನು ಸುಳ್ಳಾಗಿಸಿತು. ಬೇಂದ್ರೆಯವರು ೧೯೨೬ರಲ್ಲಿ ‘ಸ್ವ ಧರ್ಮ’ ಪತ್ರಿಕೆಯ ಹಾಗೂ ೧೯೨೯ರಲ್ಲಿ ‘ಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾಗಿದ್ದರು.

ಇವರು ಬರೆದ ‘ನರಬಲಿ’ ಕವನಕ್ಕಾಗಿ ಬ್ರಿಟಿಷ್ ಸರಕಾರವು ಇವರನ್ನು ೧೯೩೨ರಲ್ಲಿ ಹಿಂಡಲಗಾ ಜೈಲಿಗೆ ಕಳುಹಿಸಿತು. ಆರು ವರ್ಷಗಳವರೆಗೆ ಇವರಿಗೆ ಯಾರೂ ಯಾವುದೇ ನೌಕರಿಯನ್ನು ಕೊಡಬಾರದೆಂದು ಸರಕಾರವು ಆಜ್ಞೆ ಹೊರಡಿಸಿತು. ಆರು ವರ್ಷಗಳವರೆಗೆ ಬೇಂದ್ರೆಯವರು ನಿರುದ್ಯೋಗಿಯಾಗಿ ಉಳಿಯಬೇಕಾಯಿತು. ನಂತರ ೧೯೩೮ರಲ್ಲಿ ಮಾಸ್ತಿಯವರು ಬೇಂದ್ರೆಯವರನ್ನು ‘ಜೀವನ’ ಪತ್ರಿಕೆಯ ಸಂಪಾದಕರನ್ನಾಗಿ ಮಾಡಿದರು.

ಬೇಂದ್ರೆಯವರು ಬರೆದ ಪಾತರಗಿತ್ತಿ ಪಕ್ಕ ನೋಡಿದೇನ ಅಕ್ಕ ಇಂದಿಗೂ ಅತ್ಯಂತ ಪ್ರೀತಿ ಪಾತ್ರ ಕವನವಾಗಿದೆ. ಅವರ ಅನೇಕ ಕವನಗಳಲ್ಲಿ ಸಹ ದುಃಖದ ಅನುಭವ ಉಂಟಾಗುವುದು. ಆರಂಭಿಕ ಕವನಗಳಲ್ಲಿ ಮುಗ್ಧ ಭಾವ ಕಂಡರೂ ಅಂತ್ಯದಲ್ಲಿ
ಸಾಕ್ಷಾತ್ಕಾರ ಕಂಡುಬರುವುದು ಅವರ್ಣನೀಯ ವಾಗಿದೆ. ಬೇಂದ್ರೆಯವರು ರಚಿಸಿದ ‘ನಾಕುತಂತಿ’ ಕವನ ಸಂಕಲನವು ಕನ್ನಡ ಭಾಷೆಗೆ ಎರಡನೇ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು.

ಈ ಕವನ ಸಂಕಲನದಲ್ಲಿ ಆತ್ಮ, ಅಧ್ಯಾತ್ಮ, ಲೌಖಿಕ, ಪಾರಮಾರ್ಥಿಕ, ಕೃಷಿ, ರಾಜಕೀಯ ಇತ್ಯಾದಿ ದ್ವಂದ್ವ ಗಳನ್ನು ಕಲಾತ್ಮಕ ವಾಗಿ ಬಿಂಬಿಸಿದ್ದಾರೆ. ಎಲ್ಲೆಲ್ಲೂ ಲೆಕ್ಕಾಚಾರವಿಸದೆ ಅನ್ನುತ್ತಾ ಕೊನೆ ಕೊನೆಗೆ ಬೇಂದ್ರೆ ಯವರು ಗಣಿತದ ಲೆಕ್ಕಾಚಾರ ದಲ್ಲಿ ಮುಳುಗಿದ್ದರು. ಗಣಿತದ ಲೆಕ್ಕಾಚಾರ ಮಾಡುತ್ತ ಬಾಳೆಹಣ್ಣಿನ ಗೊನೆಯಲ್ಲಿ, ಹಲಸಿನ ಹಣ್ಣಿನ ಮುಳ್ಳುಗಳಲ್ಲಿ, ಜೇನುಗೂಡಿ ನಲ್ಲಿ, ಕಿರುಬೆರಳಿನ ಅಂಚಿಗಿಂತ ಚಿಕ್ಕದಾಗಿರುವ ಹೂವುಗಳಲ್ಲಿ ಎಲ್ಲೆಲ್ಲೂ ಲೆಕ್ಕಾಚಾರ ವಿದೆ ಎನ್ನುತ್ತಿದ್ದರು.

‘ನಮನ’ ಬೇಂದ್ರೆಯವರಿಗೆ ಸಂಖ್ಯೆಗಳು ಹೊಸ ಲೋಕವೊಂದನ್ನು ತೆರೆದಿದ್ದವು. ಬೇಂದ್ರೆ ಮನಸಿಗೆ ೪೪೧ ಹಾಗೂ ಹೃದಯಕ್ಕೆ
೮೮೧ ಎಂದು ಸಂಖ್ಯೆ ನೀಡಿದ್ದರು. ನಾಡಿನ ತುಂಬೆಲ್ಲಾ ನಡೆದಾಡಿದ ಅವರಲ್ಲಿರುವಂಥ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೇ ಶ್ರೀಮಂತಗೊಳಿಸಿವೆ ಎಂದರೆ ತಪ್ಪಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ ‘ಧಾರವಾಡದ ಅಜ್ಜ’ ಅವರ ಕೆಲವೊಂದು ಮಕ್ಕಳ ಕತೆ, ಕತೆಗಳು ಮಕ್ಕಳ ಮನಸ್ಸನ್ನು ಪರಿವರ್ತಿಸುತ್ತವೆ.

ಕನ್ನಡ ನಾಡಿನ ಜನರ, ಸಾಹಿತಿಗಳ ನಾಲಿಗೆಯಲ್ಲಿ ಸದಾ ನೆನೆಯಲ್ಪಪಡುವಂಥ ಕವಿಯಾದ ಬೇಂದ್ರೆಯವರಿಗೆ ೧೯೫೯ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೬೫ರಲ್ಲಿ ಕೇಳ್ಕರ ಪ್ರಶಸ್ತಿ, ೧೯೬೬ರಲ್ಲಿ ಸಾಹಿತ್ಯ ಆಚಾರ್ಯ ಪ್ರಶಸ್ತಿ, ೧೯೬೮ರಲ್ಲಿ
ಪದ್ಮಶ್ರೀ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ಇನ್ನೂ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಕನ್ನಡ ಸಾಹಿತ್ಯ ಪರಿಷತ್ತು ಬೇಂದ್ರೆಯವರನ್ನು ೧೯೪೩ರಲ್ಲಿ ಶಿವಮೊಗ್ಗದಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ
ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಅವರನ್ನು ಗೌರವಿಸಿತು.

ಕನ್ನಡನಾಡಿನ ಸಾಂಸ್ಕೃತಿಕ ಆಸ್ತಿ ಯಾಗಿರುವ ಕವಿ ‘ಅಂಬಿಕಾತನಯದತ್ತ’ರ ಹೆಸರಿನಲ್ಲಿ ಕರ್ನಾಟಕ ಸರಕಾರ ದ.ರಾ.ಬೇಂದ್ರೆ ರಾಷ್ಟ್ರೀಯ ಟ್ರಸ್ಟನ್ನು ೧೯೯೩ರಲ್ಲಿ ಅಸ್ತಿತ್ವಕ್ಕೆ ತಂದಿತು. ಡಾ.ಎಂ.ಎಂ. ಕಲಬುರ್ಗಿಯವರು ಹಾಗೂ ನಂತರದ ಅಧ್ಯಕ್ಷರುಗಳು ಇದನ್ನು ರಾಜ್ಯ – ರಾಷ್ಟ್ರ ವ್ಯಾಪಿಯಾಗಿ ಬೆಳೆಸಿದರು. ಪ್ರತಿ ವರ್ಷ ಬೇಂದ್ರೆ ಅವರ ಜನ್ಮ ದಿನದಂದು ‘ಅಂಬಿಕಾತನಯದತ್ತ
ಪ್ರಶಸ್ತಿ’ಯನ್ನು ಅರ್ಹ ಸಾಹಿತಿಗಳಿಗೆ ಕೊಡಲಾಗುತ್ತಿದೆ. ಈ ಸಲದ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿಗೆ ಕವಿ ಡಾ.ಎಚ್.ಎಸ್. ಶಿವಪ್ರಕಾಶ ಅವರು ಭಾಜನರಾಗಿದ್ದಾರೆ.

ಧಾರವಾಡದಲ್ಲಿ ಪ್ರತಿಷ್ಠಾನವು ಕವಿಯ ಬಗ್ಗೆ ಅಧ್ಯಯನ, ಸಾಹಿತ್ಯ ಪ್ರಚಾರ, ಪುಸ್ತಕ ಬಿಡುಗಡೆ, ಪ್ರಶಸ್ತಿ ವಿತರಣೆ ಕಾರ್ಯಕ್ರಮ ಗಳನ್ನು ಅಚ್ಚುಕಟ್ಟಾಗಿ ಆಯೋಜಿಸುತ್ತಿದೆ. ಸರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂದು ಸಾರಿದ, ಶಬ್ದ ಗಾರುಡಿಗರೆಂದೇ ಕನ್ನಡ ನೆಲದಲ್ಲಿ ಪ್ರಸಿದ್ಧ ಪಡೆದ ಧೀಮಂತ ಸಾಹಿತಿ ದ.ರಾ.ಬೇಂದ್ರೆಯವರು ಅಕ್ಟೋಬರ್ ೨೬, ೧೯೮೧ರ ದೀಪಾವಳಿಯಂದು ಮಂಬೈನ ಹರಕಿಶನ್ ದಾಸ್ ಆಸ್ಪತ್ರೆಯಲ್ಲಿ ವಿಧಿವಶರಾದರು.

ಈ ಮಹಾನ್ ಕಾವ್ಯ ಗಾರುಡಿಗ ಚೇತನಕ್ಕೆ ಸಾಷ್ಟಾಂಗ ನಮನಗಳು. ಬೇಂದ್ರೆಯವರು ನಮ್ಮಿಂದ ಭೌತಿಕವಾಗಿ ದೂರವಾಗಿದ್ದರೂ, ಕಾವ್ಯದ ಮೂಲಕ ಇನ್ನೂ ಜೀವಂತ ವಾಗಿದ್ದಾರೆ. ಅವರು ಸಾಗಿ ಹೋದ ಪಥ ನಮ್ಮ ಮುಂದೆ ಇದೆ. ಅವರ ನೆನಪು ನಮ್ಮಲ್ಲಿ ನಾಡು ನುಡಿಯ ಅಭಿಮಾನವನ್ನು ಉಕ್ಕಿಸಲಿ, ಕನ್ನಡನಾಡು ನುಡಿ ಅಭಿವೃದ್ಧಿ ಹೊಂದಲಿ, ಸತ್ವಪೂರ್ಣ ಸಾರ್ಥಕ ಬದುಕು ನಮ್ಮೆಲ್ಲರದಾಗಲಿ.

error: Content is protected !!