Sunday, 27th November 2022

ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರ ನೀಡಿ

ಮಳೆಯಿಂದ ಜಿಲ್ಲೆಯಲ್ಲಿ ೧,೩೧೧ ಮನೆಗಳಿಗೆ ಹಾನಿ
೪೮೧೩.೯೦ ಹೆಕ್ಟೇರ್ ಬೆಳೆ ಹಾನಿ
ಸಕಾಲದಲ್ಲಿ ಪರಿಹಾರ ಕೊಡುವಂತೆ ಸಚಿವ ಭೈರತಿ ಬಸವರಾಜ್ ಸೂಚನೆ

ದಾವಣಗೆರೆ: ಜಿಲ್ಲೆಯಲ್ಲಿ ವಾಡಿಕೆ ಮಳೆಗಿಂತ ಶೇ.೧೦೬ ರಷ್ಟು ಅಧಿಕ ಮಳೆಯಾಗಿದ್ದು ಅತೀವೃಷ್ಟಿಯಿಂದ ಜಿಲ್ಲೆಯಲ್ಲಿ ೧,೩೧೧ ಮನೆಗಳು ದುರಸ್ತಿಗೊಳಗಾಗಿವೆ. ಈ ಎಲ್ಲಾ ಮನೆಗಳಿಗೂ ಇನ್ನೆರಡು ದಿನಗಳಲ್ಲಿ ಪರಿಹಾರ ವಿತರಣೆ ಮಾಡಬೇಕೆಂದು ಎಲ್ಲಾ ತಹಶೀಲ್ದಾರ್‌ಗಳಿಗೆ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಳೆ ಹಾನಿ ಕುರಿತಂತೆ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪೂರ್ವ ಮುಂಗಾರು ಹಾಗೂ ಜುಲೈ, ಆಗಸ್ಟ್ ತಿಂಗಳಲ್ಲಿ ಚನ್ನಗಿರಿ ತಾಲ್ಲೂಕಿನಲ್ಲಿ ೩೮೧, ದಾವಣಗೆರೆ ೧೭೫, ಹರಿಹರ ೧೭೩, ಹೊನ್ನಾಳಿ ೨೧೬, ಜಗಳೂರು ೧೬೧ ಹಾಗೂ ನ್ಯಾಮತಿಯಲ್ಲಿ ೨೦೫ ಮನೆಗಳು ದುರಸ್ತಿಗೆ ಒಳಗಾಗಿದ್ದು ಒಟ್ಟು ದುರಸ್ತಿಯಾದ ಮನೆಗಳಲ್ಲಿ ೫೨ ಎ, ೧೦೮ ಬಿ, ೧೫೩ ಸಿ ವರ್ಗದ ಮನೆಗಳು ಸೇರಿವೆ ಎಂದರು.

ಸಂಪೂರ್ಣ, ಭಾಗಶಃ ಹಾನಿ, ಹಾಗೂ ಹಾನಿ ಉಂಟಾಗಿರುವ ಮನೆಗಳಿವೆ. ಜನರು ಮನೆ ಕಳೆದುಕೊಂಡು ಸಂಕಷ್ಟದಲ್ಲಿರುತ್ತಾರೆ, ಆದರೆ ಪರಿಹಾರವನ್ನು ಮಾತ್ರ ಸಕಾಲದಲ್ಲಿ ವಿತರಣೆ ಮಾಡಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಮಡ ಭೈರತಿ, ಪರಿಹಾರ ಸಕಾಲದಲ್ಲಿ ಸಿಗಲಿಲ್ಲ ಎಂದರೆ ಜನರಿಗೆ ಸರಕಾರ ಬಗ್ಗೆ ತಪ್ಪು ಭಾವನೆ ಮೂಡುತ್ತದೆ. ಸರಕಾರ ಸಾಕಷ್ಟು ಅನುದಾನ ನೀಡಿದ್ದರೂ, ಸಕಾಲದಲ್ಲಿ ಪರಿಹಾರ ನೀಡದಿರುವುದನ್ನು ಸಹಿಸಲು ಸಾಧ್ಯವಿಲ್ಲ. ಆಗಸ್ಟ್ ೧೫ ರೊಳಗಾಗಿ ಎಲ್ಲರಿಗೂ ಪರಿಹಾರ ತಲುಪಿಸಬೇಕೆಂದು ಸೂಚನೆ ನೀಡಿದರು.

ಮನೆ ಹಾನಿಜೊತೆಗೆ ಬೆಳೆ ಹಾನಿಯಾಗಿದ್ದು, ಪೂರ್ವ ಮುಂಗಾರಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಸೇರಿ ೪೮೧೩.೯೦ ಹೆಕ್ಟೇರ್ ಹಾನಿ ಅಂದಾಜಿಸಲಾಗಿ ಇದಕ್ಕೆ ಸರ್ಕಾರದಿಂದ ಮಂಜೂರಾದ ೬.೧೧ ಕೋಟಿ ಪರಿಹಾರವನ್ನು ೧೧೦೩೨ ರೈತರಿಗೆ ನೀಡಲಾಗಿದೆ. ಮತ್ತು ಜುಲೈ, ಆಗಸ್ಟ್‌ನಲ್ಲಿ ೧೨೧೦೮.೭೪ ಹೆಕ್ಟೇರ್ ಹಾನಿಯಾಗಿದೆ ಎಂದು ಸಮೀಕ್ಷೆ ಮಾಡಲಾಗಿದೆ. ಜಂಟಿ ಸಮೀಕ್ಷೆ ನಡೆಸಿ ಸಕರಾರಕ್ಕೆ ವರದಿ ಕಳುಹಿಸಲಾಗುತ್ತದೆ ಎಂದರು.
ಕೊಠಡಿಗಳ ಹಾನಿ; ಜಿಲ್ಲೆಯಲ್ಲಿ ಅಧಿಕ ಸುರಿದ ಮಳೆಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ೧೨೬ ಕೊಠಡಿಗಳಿಗೆ ಹಾನಿಯಾ ಗಿದ್ದು ದುರಸ್ಥಿಗೆ ಕ್ರಮ ಕೈಗೊಳ್ಳಲು ಉಪನಿರ್ದೇಶಕರಿಗೆ ತಿಳಿಸಿ ಈ ವರ್ಷ ಹೊಸದಾಗಿ ೧೪೦ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ದಿಂದ ಮಂಜೂರಾತಿ ನೀಡಲಾಗಿದೆ. ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಶಿಥಿಲಾವಸ್ಥೆಯಲ್ಲಿರುವ ಶಾಲೆಗಳ ಪರಿಶೀಲನೆ ನಡೆಸ ಬೇಕೆಂದು ಸೂಚನೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಲೋಕೇಶ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಆರ್.ಬಿ. ಬಸರಗಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಹರ್ ಘರ್ ತಿರಂಗಾ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ ೧೩ ರಿಂದ ೧೫ರ ವರೆಗೆ ಪ್ರತಿ ಮನೆಯಲ್ಲಿಯು ರಾಷ್ಟ್ರಧ್ವಜ ವನ್ನು ಹಾರಿಸಲಾಗುತ್ತದೆ. ಈ ವೇಳೆ ಧ್ವಜ ಸಂಹಿತೆಯಂತೆ ಹಾರಿಸಲು ಮತ್ತು ಧ್ವಜ ಇಳಿಸಿದ ನಂತರ ಸುರಕ್ಷಿತವಾಗಿ ಇಡಲು ಸಹ ಕ್ರಮ ಕೈಗೊಳ್ಳಬೇಕು. ಕೆಲವು ಕಿಡಿಗೇಡಿಗಳು ಇಂತಹ ಅವಕಾಶವನ್ನು ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಎಲ್ಲಾ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು.
-ಭೈರತಿ ಬಸವರಾಜ್
ಜಿಲ್ಲಾ ಉಸ್ತುವಾರಿ ಸಚಿವ