ಮೂರ್ತಿಪೂಜೆ
ಆರ್.ಟಿ.ವಿಠ್ಠಲಮೂರ್ತಿ
ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಿಧಾನಸಭೆಯ ಮುಂದೆ ಕನ್ನಡಿಯೊಳಗಿನ ಗಂಟು ಇಳಿಸಿದ್ದಾರೆ.
ಹೀಗೆ ಅವರು ಇಳಿಸಿರುವ ಬಜೆಟ್ ಎಂಬ ಕನ್ನಡಿಯೊಳಗಿನ ಗಂಟು ನೋಡಲು ಸುಂದರವಾಗಿದೆ. ಆದರೆ ಆ ಗಂಟನ್ನು
ಬಿಡಿಸುತ್ತಾ ಹೋದಂತೆ ಗಾಳಿಯ ಸದ್ದೇ ಹೆಚ್ಚಾಗಿ ಕೇಳುತ್ತದೆ. 2021-22ನೇ ಸಾಲಿನ ಬಜೆಟ್ ಒಟ್ಟು ಎರಡು ಲಕ್ಷದ ನಲವತ್ತಾರು ಸಾವಿರ ಕೋಟಿ ರುಪಾಯಿ ಗಾತ್ರದ್ದು ಎಂದವರು ಸಮರ್ಥಿಸಿಕೊಂಡರೂ, ಅಂತಿಮವಾಗಿ ಆ ಪ್ರಮಾಣದ ಹಣ ಅವರ ಬಜೆಟ್‌ಗೆ ಲಭ್ಯವಾಗುತ್ತದೆ ಎಂಬುದು ಬರೀ ಆಶಾಭಾವನೆಯೇ ಹೊರತು ವಾಸ್ತವವಲ್ಲ.
ಕೋವಿಡ್ ಕಂಟಕ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಳ್ಳುವ ಮುಂಚೆ ಯಡಿಯೂರಪ್ಪನವರು ಇದೇ ವಿಧಾನಸಭೆಯಲ್ಲಿ
ಕಳೆದ ಸಾಲಿನ ಬಜೆಟ್ ಮಂಡಿಸಿದ್ದರು. ಮತ್ತು ಈ ಬಜೆಟ್‌ಗೆ 2.31 ಲಕ್ಷ ಕೋಟಿ ರುಪಾಯಿ ಹರಿದು ಬರಲಿದೆ ಎಂದು ಹೇಳಿದ್ದರು. ಆದರೆ ಈ ಬಜೆಟ್ ಗಾತ್ರವನ್ನು ಅವರು ಪದೇ ಪದೆ ಪರಿಷ್ಕರಿಸಿ 2.09 ಲಕ್ಷ ಕೋಟಿಯ ಗಾತ್ರಕ್ಕೆ ಇಳಿಸಿದ್ದರು. ಕೇಂದ್ರ ಸರಕಾರದಿಂದ ಎಷ್ಟು ಹಣ ಬರುತ್ತದೆ ಎಂದು ಅವರು ನಿರೀಕ್ಷಿಸಿದ್ದರೋ? ಆ ಪ್ರಮಾಣದ ಹಣ ಬರಲಿಲ್ಲ.
ಉದಾಹರಣೆಗೆ ಜಿ.ಎಸ್.ಟಿ. ತೆರಿಗೆಯ ಪರಿಹಾರ ಬಾಬ್ತನ್ನೇ ತೆಗೆದುಕೊಳ್ಳಿ. ಒಟ್ಟು ಇಪ್ಪತ್ತೆಂಟು ಸಾವಿರ ಕೋಟಿ ರುಪಾಯಿಗಳು ರಾಜ್ಯಕ್ಕೆ ದೊರಕುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ವರ್ಷಾಂತ್ಯದ ವೇಳೆಗೆ ಕೇಂದ್ರದಿಂದ ಸಿಕ್ಕಿದ್ದು ಇಪ್ಪತ್ತು ಸಾವಿರ ಕೋಟಿ ರುಪಾಯಿ ಮಾತ್ರ. ಅಂದರೆ, ಜಿ.ಎಸ್.ಟಿ. ತೆರಿಗೆಯ ಪರಿಹಾರ ಬಾಬ್ತಿನಲ್ಲಿ ಎಂಟು ಸಾವಿರ ಕೋಟಿ ರುಪಾಯಿಗಳಷ್ಟು ಹಣ ಕಡಿಮೆಯಾಯಿತು. ಇದೇ ರೀತಿ ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರ ಸರಕಾರದಿಂದ ಸಿಗುವ ಅನುದಾನದಲ್ಲೂ ಗಣನೀಯ ಪ್ರಮಾಣದ ಹಣ ಕಡಿತವಾಯಿತು.
ಇನ್ನು ಹಣಕಾಸು ಆಯೋಗ ನಿಗದಿ ಪಡಿಸಿದ ಹಣ ಕೂಡಾ ಕಡಿಮೆಯಾಯಿತು. ಪರಿಣಾಮ? ರಾಜ್ಯ ಸರಕಾರ ತನ್ನ ಬಜೆಟ್‌ನಲ್ಲಿ ಏನು ಭರವಸೆ ನೀಡಿತ್ತೋ? ಅದನ್ನು ಈಡೇರಿಸಲು ಸಾಧ್ಯವಾಗಲಿಲ್ಲ. ಇದರ ಪರಿಣಾಮ ವೇನಾಯಿತು ಎಂದರೆ ಬಜೆಟ್ ಗಾತ್ರವನ್ನು ಸರಿಹೊಂದಿಸಲು ಐವತ್ತೆರಡು ಸಾವಿರ ಕೋಟಿ ರುಪಾಯಿ ಸಾಲ ಮಾಡುವುದಾಗಿ ಹೇಳಿದ್ದ ಸರಕಾರ ಇದನ್ನು ಮೀರಿ ಮೂವತ್ತಾರು ಸಾವಿರ ಕೋಟಿ ರುಪಾಯಿ ಸಾಲ ಮಾಡಬೇಕಾಯಿತು.
ಈ ಸಾಲ ಪಡೆಯಲು ಇದ್ದ ಹಲವು ಮುಜುಗರದ ಷರತ್ತುಗಳನ್ನು ಒಪ್ಪಬೇಕಾಯಿತು. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ
ಆಸ್ತಿ ತೆರಿಗೆ ಹೆಚ್ಚಳ ಮಾಡುವುದೂ ಸೇರಿದಂತೆ ಹಲವು ಹೊರೆಗಳನ್ನು ಜನರ ಮೇಲೆ ಹೊರಿಸಲು ಅಗತ್ಯವಾದ ಕಾಯಿದೆಗೆ ವಿಧಾನಮಂಡಲದಲ್ಲಿ ಅದು ಅಂಗೀಕಾರ ಪಡೆಯಬೇಕಾಯಿತು.
ಪರಿಣಾಮ? ಕಳೆದ ವರ್ಷ ಎರಡು ಲಕ್ಷ, ಒಂಬತ್ತು ಸಾವಿರ ಕೋಟಿ ರುಪಾಯಿ ವೆಚ್ಚ ಮಾಡುವುದಾಗಿ ಸರಕಾರ ಏನು ಹೇಳಿತ್ತು?ಅದರಲ್ಲೂ ಗಣನೀಯ ಪ್ರಮಾಣದ ಹಣ ಕಡಿಮೆಯಾಯಿತು. ಅಂದ ಹಾಗೆ ಬಜೆಟ್ ಎರಡು ಮುಖಗಳನ್ನು ಹೊಂದಿರುತ್ತದೆ. ಒಂದು, ಯೋಜನೆ ಎಂಬ ಮುಖ, ಮತ್ತೊಂದು ಯೋಜನೇತರ ಮುಖ. ಯೋಜನೆ ಎಂದರೆ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ್ದು, ಮತ್ತು ಹಾಕಿದ ಬಂಡವಾಳಕ್ಕೆ ಪ್ರತಿಫಲ ನೀಡುವಂಥದ್ದು.
ಉದಾಹರಣೆಗೆ ರಸ್ತೆಗಳು, ಆಣೆಕಟ್ಟುಗಳು, ಕಟ್ಟಡಗಳು. ಇವುಗಳ ಮೇಲೆ ಹಾಕುವ ಬಂಡವಾಳ ಪ್ರತಿಫಲ ನೀಡುತ್ತವೆ. ಅಂದರೆ ಗಳಿಕೆಯ ಮೂಲಗಳಾಗಿ ಪರಿಣಮಿಸುತ್ತದೆ. ಈ ಯೋಜನಾ ವೆಚ್ಚಕ್ಕೂ ಪ್ರತ್ಯಕ್ಷ ಮತ್ತು ಪರೋಕ್ಷ ಎಂಬ ಎರಡು ಮುಖಗಳಿವೆ. ಪ್ರತ್ಯಕ್ಷವೆಂದರೆ ತಕ್ಷಣ ಪ್ರತಿಫಲ ನೀಡುವುದು. ಪರೋಕ್ಷವೆಂದರೆ ದೂರಗಾಮಿ ನೆಲೆಯಲ್ಲಿ ಲಾಭ ನೀಡುವುದು. ಉದಾಹರಣೆಗೆ ಆರೋಗ್ಯ ಸೇವೆಗಳು. ಇದಕ್ಕೆ ಮಾಡುವ ವೆಚ್ಚಕ್ಕೆ ತಕ್ಷಣ ಲಾಭ ದೊರಕದೇ ಇರಬಹುದು.
ಆದರೆ ಜನರ ಆರೋಗ್ಯ ಮಟ್ಟ ಚೆನ್ನಾಗಿದ್ದರೆ ಅವರ ಉತ್ಪಾದಕ ಶಕ್ತಿ ಹೆಚ್ಚುತ್ತದೆ ಎಂಬುದು ಪರೋಕ್ಷ ಮುಖ. ಇನ್ನು ಯೋಜನೇ ತರ ವೆಚ್ಚದಿಂದ ದೊಡ್ಡ ಮಟ್ಟದ ಪ್ರತಿಫಲವೇನೂ ಸಿಗುವುದಿಲ್ಲ. ಆದರೆ ವ್ಯವಸ್ಥೆಯನ್ನು ಮುನ್ನಡೆಸಲು ಇದರ ಅಗತ್ಯವಿದೆ. ಉದಾಹರಣೆಗೆ ಸರಕಾರಿ ನೌಕರರಿಗೆ ನೀಡುವ ಹಣ ಮತ್ತು ರಾಜ್ಯ ಮಾಡಿರುವ ಸಾಲಕ್ಕೆ ಪ್ರತಿಯಾಗಿ ಪಾವತಿಸಬೇಕಾದ ಅಸಲು, ಬಡ್ಡಿ ಮತ್ತು ಚಕ್ರಬಡ್ಡಿ.
ಇದೇ ರೀತಿ ಆಡಳಿತಾತ್ಮಕ ವೆಚ್ಚ ಮತ್ತು ಪ್ರಕೃತಿ ವಿಕೋಪದಂಥ ಸನ್ನಿವೇಶಗಳಲ್ಲಿ ಮಾಡುವ ವೆಚ್ಚ. ಹೀಗೆ ಒಂದು ಸರಕಾರ ತನ್ನ ಆದಾಯದ ಬಹುದೊಡ್ಡ ಪಾಲನ್ನು ಯೋಜನೇತರ ವೆಚ್ಚಕ್ಕೆ ಒದಗಿಸಬೇಕಾಗುತ್ತದೆ. ಆರ್ಥಿಕ ತಜ್ಞರ ಪ್ರಕಾರ, ಸರಕಾರ ಮಾಡುವ ಯೋಜನೆ ಮತ್ತು ಯೋಜನೇತರ ವೆಚ್ಚಗಳ ಪೈಕಿ ಯೋಜನೇತರ ವೆಚ್ಚದ ಪಾಲು ಶೇಕಡಾ ಐವತ್ತನ್ನು ಮೀರುವುದು ಒಳ್ಳೆಯದಲ್ಲ. ವಿಪರ್ಯಾಸವೆಂದರೆ ಇತ್ತೀಚಿನ ವರ್ಷಗಳಲ್ಲಿ ಯೋಜನೆಗಳಿಗೆ ಒದಗಿಸುವ ಹಣಕ್ಕಿಂತ ಯೋಜನೇತರ ಬಾಬ್ತಿಗೆ ಖರ್ಚು ಮಾಡುವ ಹಣದ ಪ್ರಮಾಣ ಹೆಚ್ಚಾಗುತ್ತಲೇ ಸಾಗಿದೆ.
ಅಂದರೆ ರಾಜ್ಯ ಸರಕಾರದ ನೂರು ರುಪಾಯಿ ಆದಾಯದ ಪೈಕಿ ಅರವತ್ತು ರುಪಾಯಿಗಳಿಂತ ಹೆಚ್ಚು ಹಣ ಯೋಜನೇತರ ಬಾಬ್ತಿಗೆ ವೆಚ್ಚವಾಗುತ್ತದೆ. ಇದು ಯಾವುದೇ ಅರ್ಥವ್ಯವಸ್ಥೆಗೆ ಹೊರೆ ಎಂಬುದು ನಿಸ್ಸಂಶಯ. ಗಮನಿಸಬೇಕಾದ ಸಂಗತಿ ಎಂದರೆ ಕರೋನಾ ಹಾವಳಿಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತನಗೆ ಲಭ್ಯವಾದ ಹಣದ ಪೈಕಿ ಶೇಕಡಾ ಎಪ್ಪತ್ತರಷ್ಟು ಹಣವನ್ನು ಯೋಜನೇತರ ವೆಚ್ಚಕ್ಕೆ ಬಳಸಬೇಕಾಯಿತು.
ಸಹಜವಾಗಿ ಸರಕಾರ ನೀಡುವ ಆರೋಗ್ಯ ಸೇವೆಗೂ, ಕರೋನಾದಂಥ ಸಮಸ್ಯೆಗಳು ಬಿಗಡಾಯಿಸಿದ ಕಾಲದಲ್ಲಿ ನೀಡುವ ಆರೋಗ್ಯ ಸೇವೆಗೂ ವ್ಯತ್ಯಾಸವಿದೆ. ಮೊದಲನೆಯದನ್ನು ಯೋಜನಾ ವೆಚ್ಚಕ್ಕೆ ಸೇರಿಸಿದರೆ, ಎರಡನೆಯದನ್ನು ಯೋಜನೇತರ ಬಾಬ್ತಿಗೆ ಸೇರಿಸಬೇಕಾಗುತ್ತದೆ. ಯಾಕೆಂದರೆ ಕರೋನಾದಂಥ ಸಮಸ್ಯೆಗಳು ಅಕಾಲಿಕ ವಾದವು. ಇದು ಅಸಾಮಾನ್ಯ ಸ್ಥಿತಿ. ಇಂತಹ ಸ್ಥಿತಿಯಲ್ಲಿ ಮಾಡುವ ವೆಚ್ಚವನ್ನು ಯೋಜನಾ ವೆಚ್ಚ ಎಂದು ಪರಿಗಣಿಸಲು ಸಾಧ್ಯವಿಲ್ಲ.
ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಈ ವರ್ಷದ ಬಜೆಟ್ ಅನ್ನು ಗಮನಿಸಬೇಕು. ಅಂದ ಹಾಗೆ 2021-22ನೇ ಸಾಲಿನ ಬಜೆಟ್ ಎರಡು ಲಕ್ಷದ ನಲವತ್ತಾರು ಸಾವಿರ ಕೋಟಿ ರುಪಾಯಿಗಳ ಗಾತ್ರ ಹೊಂದಿದೆ. ಇದಕ್ಕೆ ಜಿ.ಎಸ್.ಟಿ ಪರಿಹಾರದ ಬಾಬ್ತೂ ಸೇರಿದಂತೆ ರಾಜ್ಯದ ಸ್ವಂತ ತೆರಿಗೆಗಳ ಮೂಲಕ ಒಂದು ಲಕ್ಷದ ಇಪ್ಪತ್ತೈದು ಸಾವಿರ ಕೋಟಿ ರುಪಾಯಿಗಳಿಗಿಂತ ಹೆಚ್ಚು ಹಣ ಬಂದು ಸೇರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳುತ್ತಾರೆ.
ಆದರೆ ಅಭಿವೃದ್ಧಿಯ ವಾರ್ಷಿಕ ದರ ಯಾವ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂಬುದಕ್ಕೆ ಆರ್ಥಿಕ ತಜ್ಞರು ಕೊಡುವ ಲೆಕ್ಕವೇ ಬೇರೆ. ಅವರ ಪ್ರಕಾರ ಮೋಟಾರು ವಾಹನ ತೆರಿಗೆಗಳಿಂದ ಹಿಡಿದು ವಾಣಿಜ್ಯ ತೆರಿಗೆಗಳವರೆಗೆ ಹಲ ಬಾಬ್ತಿನಲ್ಲಿ ತುಂಬ ದೊಡ್ಡ ಪ್ರಗತಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಇದು ಒಂದು ಕಡೆಗಾದರೆ ಕೇಂದ್ರದಿಂದ ಬರುವ ಜಿ.ಎಸ್.ಟಿ. ಪರಿಹಾರದ ಬಾಬ್ತಿನ ಕತೆ ಮತ್ತೊಂದು ಕಡೆ. ಕಳೆದ ವರ್ಷ ರಾಜ್ಯಕ್ಕೆ ನೀಡಬೇಕಾದ ಹಣದಲ್ಲಿ ಎಂಟು ಸಾವಿರ ಕೋಟಿ ರುಪಾಯಿಗಳಷ್ಟು ಕೊರತೆಯಾಗಿದೆ. ಸದ್ಯದ ಪರಿಸ್ಥಿತಿ ಗಮನಿಸಿದರೆ ಮುಂದಿನ ವರ್ಷ ಈ ಕೊರತೆಯಲ್ಲಿ ಸ್ವಲ್ಪ ಇಳಿಮುಖವಾದರೂ, ಲಭ್ಯವಾಗುವ ಹಣದಲ್ಲಿ ಕೊರತೆಯಾಗುವುದಂತೂ ನಿಶ್ಚಿತ. ರಾಜ್ಯದಲ್ಲಿ ಜಿ.ಎಸ್.ಟಿ. ತೆರಿಗೆ ಮೂಲಕ ಸಂಗ್ರಹಿಸುವ ಹಣದ ಒಂದು ಪಾಲನ್ನು ಕೇಂದ್ರ ನಮಗೆ ನೀಡುತ್ತದೆ.
ಅದರ ಕೊರತೆಯಾಗುತ್ತದೆ ಎಂದರೆ ಸಹಜವಾಗಿ ವಿವಿಧ ಯೋಜನೆಗಳಿಗೆ ಕೇಂದ್ರದಿಂದ ಲಭ್ಯವಾಗುವ ಸಹಾಯಧನದ ಪ್ರಮಾಣವೂ ಕಡಿಮೆಯಾಗುತ್ತದೆ. ಇದೇ ರೀತಿ ಹಣಕಾಸು ಆಯೋಗ ನಿಗದಿ ಪಡಿಸಿದ ಹಣದಲ್ಲೂ ಕೊರತೆಯಾಗಲಿದೆ. ಅರ್ಥಾತ್, ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್‌ನಲ್ಲಿ ಏನಿಲ್ಲವೆಂದರೂ ಶೇಕಡಾ ಇಪ್ಪತ್ತರಷ್ಟು ಕೊರತೆಯಾಗಲಿದೆ. ಅಂದರೆ ಸುಮಾರು ನಲವತ್ತೆಂಟು ಸಾವಿರ ಕೋಟಿ ರುಪಾಯಿ. ಇದು ಸ್ಪಷ್ಟ ಚಿತ್ರಣವಲ್ಲದಿದ್ದರೂ ಸ್ಥೂಲವಾಗಿ ಕಣ್ಣಿಗೆ ಕಾಣುತ್ತಿರುವ ಚಿತ್ರ. ಈ ಮಧ್ಯೆ ಬಜೆಟ್ ಗಾತ್ರವನ್ನು ಸರಿಹೊಂದಿಸಲು ಯಡಿಯೂರಪ್ಪ ಅವರ ಸರಕಾರ ದೊಡ್ಡ ಮಟ್ಟದ ಸಾಲ ಪಡೆಯಲು ಮುಂದಾಗಿದೆ.
ಇವತ್ತಿನ ಮಟ್ಟಗೆ ಅದು ಎಪ್ಪತ್ತೊಂದು ಸಾವಿರ ಕೋಟಿ ರುಪಾಯಿ. ನಾಳೆ ಕೇಂದ್ರ ಸರಕಾರದಿಂದ ಬರುವ ಹಣದಿಂದ ಹಿಡಿದು ರಾಜ್ಯವೇ ಸಂಗ್ರಹಿಸುವ ತೆರಿಗೆಗಳಲ್ಲಿ ಹಣದ ಕೊರತೆಯಾದರೆ ಅನಿವಾರ್ಯವಾಗಿ ಮತ್ತಷ್ಟು ಸಾಲಕ್ಕೆ ಕೈ ಒಡ್ಡಬೇಕಾಗುತ್ತದೆ.
ವಿತ್ತೀಯ ನಿರ್ವಹಣೆ ಕಾಯಿದೆಯ ಪ್ರಕಾರ ಕಳೆದ ವರ್ಷದ ತನಕ ರಾಜ್ಯ ಸರಕಾರಗಳು ಶೇಕಡಾ ಮೂರರಷ್ಟು ಸಾಲ ಪಡೆಯ ಬಹುದಿತ್ತು. ಕರೋನಾ ಬಂದ ನಂತರ ಕೇಂದ್ರ ಸರಕಾರವೇ ವಿತ್ತೀಯ ನಿರ್ವಹಣಾ ಕಾಯಿದೆಯ ಸ್ವರೂಪದಲ್ಲಿ ತಿದ್ದುಪಡಿ ತಂದು ರಾಜ್ಯ ಸರಕಾರಗಳು ಶೇಕಡಾ ಐದರಷ್ಟು ಸಾಲ ಪಡೆಯಬಹುದು ಎಂದು ಹೇಳಿದೆ.
ಆದರೆ ಈ ಪ್ರಮಾಣದ ಸಾಲ ಪಡೆಯಲು ತಾನು ಸಿದ್ದವಿಲ್ಲ. ಬದಲಿಗೆ ಶೇಕಡಾ ನಾಲ್ಕರಷ್ಟು ಪ್ರಮಾಣದ ಸಾಲವನ್ನು ಮಾತ್ರ ಪಡೆಯುವುದಾಗಿ ಯಡಿಯೂರಪ್ಪ ಹೇಳಿಕೊಂಡಿzರೆ. ಆದರೆ ಈಗಿನ ಪರಿಸ್ಥಿತಿ ನೋಡಿದರೆ ಶೇಕಡಾ ನಾಲ್ಕರಷ್ಟು ಪ್ರಮಾಣದ ಸಾಲ ಕೂಡಾ ರಾಜ್ಯಕ್ಕೆ ಹೊರೆಯಾಗಲಿದೆ. ಅಂದ ಹಾಗೆ ಈಗಾಗಲೇ ರಾಜ್ಯ ಸರಕಾರ ತಾನು ಮಾಡಿರುವ ಸಾಲದ ಮೇಲಿನ ಅಸಲು, ಬಡ್ಡಿ, ಚಕ್ರ ಬಡ್ಡಿಯ ಪಾವತಿಗಾಗಿ ಈ ವರ್ಷ ಹದಿನೈದು ಸಾವಿರ ಕೋಟಿ ರುಪಾಯಿಗಳಷ್ಟು ಹಣವನ್ನು ಒದಗಿಸಬೇಕಿದೆ. ಇದು ಕೂಡಾ ಬಜೆಟ್ ಭಾರವೇ.
ಹೀಗಿರುವಾಗ ಈ ವರ್ಷ ಎಪ್ಪತ್ತೊಂದು ಸಾವಿರ ಕೋಟಿ ರುಪಾಯಿಗಳ ಸಾಲ ಪಡೆಯಲಾಯಿತು ಎನ್ನಿ.ಆಗ ಸರಕಾರದ ಮೇಲಿರುವ ಒಟ್ಟಾರೆ ಸಾಲದ ಮೊತ್ತ ಐದು ಲಕ್ಷ ಕೋಟಿ ರುಪಾಯಿಗಳನ್ನು ದಾಟುತ್ತದೆ. ಈ ಐದು ಲಕ್ಷ ಕೋಟಿ ರುಪಾಯಿಗಳ ಪೈಕಿ ಅಲ್ಪಾವಧಿ, ಮಧ್ಯಮಾವಧಿ, ದೀರ್ಘಾವಧಿ ಸಾಲಗಳಿವೆ. ವಸ್ತುಸ್ಥಿತಿ ಎಂದರೆ ಹಿಂದೆ ಮಾಡಿದ ಬಹುತೇಕ ದೀರ್ಘಾವಧಿ ಸಾಲಗಳು ಈಗ ತೀರಿಸಬೇಕಾದ ಕಾಲಘಟ್ಟಕ್ಕೆ ಬಂದು ತಲುಪಿವೆ.
ಹೀಗಾಗಿ ವರ್ಷದಿಂದ ವರ್ಷಕ್ಕೆ ನಾವು ಮಾಡಿರುವ ಸಾಲದ ಮೇಲೆ ಅಸಲು, ಬಡ್ಡಿ ಲೆಕ್ಕದಲ್ಲಿ ದೊಡ್ಡ ಮಟ್ಟದ ಹಣವನ್ನು ಪಾವತಿಸುವ ಅನಿವಾರ್ಯ ಸ್ಥಿತಿ ಇದೆ. ಹಾಗಂತ ಈ ವರ್ಷ ಮಾಡುವ ಸಾಲದ ಪ್ರಮಾಣ ಎಪ್ಪತ್ತೊಂದು ಸಾವಿರ ಕೋಟಿ ರುಪಾಯಿಗಳಿಗೆ ಸೀಮಿತವಾಗುತ್ತದೆ ಎಂದಲ್ಲ. ಯಾಕೆಂದರೆ ಬೇರೆ ಬೇರೆ ಮೂಲಗಳಿಂದ ಲಭ್ಯವಾಗುತ್ತದೆ ಎಂದು ನಿರೀಕ್ಷಿಸಲಾಗಿ ರುವ ಒಂದು ಲಕ್ಷ, ಎಪ್ಪತ್ತು ಸಾವಿರ ಕೋಟಿ ರುಪಾಯಿಗಳಷ್ಟು ಹಣದಲ್ಲಿ ಕೊರತೆಯಾಯಿತು ಎಂದುಕೊಳ್ಳಿ.
ಆಗ ಈ ಕೊರತೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ ಕೊರತೆಯ ಅರ್ಧದಷ್ಟು ಪ್ರಮಾಣದ ಹಣವನ್ನಾದರೂ ಹೆಚ್ಚುವರಿ ಸಾಲದ ರೂಪದಲ್ಲಿ ಪಡೆಯಬೇಕಾಗುತ್ತದೆ. ಕಳೆದ ವರ್ಷದ ಉದಾಹರಣೆಯನ್ನು ಕಣ್ಣ ಮುಂದಿಟ್ಟುಕೊಳ್ಳಿ. ಕಳೆದ ವರ್ಷ ಮಾಡುತ್ತೇವೆ ಎಂದ ಸಾಲದ ಪ್ರಮಾಣ ಐವತ್ತೆರಡು ಸಾವಿರ ಕೋಟಿ ರುಪಾಯಿ. ಆದರೆ ಹಣಕಾಸಿನ ಕೊರತೆಯಿಂದಾಗಿ ಹೆಚ್ಚುವರಿಯಾಗಿ ಮೂವತ್ತಾರು ಸಾವಿರ ಕೋಟಿ ರುಪಾಯಿ ಸಾಲ ಮಾಡಬೇಕಾಯಿತು.
ಅದನ್ನು ಗಮನದಲ್ಲಿರಿಸಿಕೊಂಡರೆ ಈ ವರ್ಷದ ಚಿತ್ರಣ ಸ್ಥೂಲವಾಗಿಯಾದರೂ ಕಣ್ಣ ಮುಂದೆ ಬರುತ್ತದೆ. ಅಂದರೆ ಮಾಡಲು ದ್ದೇಶಿಸಿರುವ ಎಪ್ಪತ್ತೊಂದು ಸಾವಿರ ಕೋಟಿ ರುಪಾಯಿಗಳ ಜತೆಗೆ ಕನಿಷ್ಠವೆಂದರೂ ಇಪ್ಪತ್ತೈದು ಸಾವಿರ ಕೋಟಿ ರುಪಾಯಿ ಗಳಷ್ಟು ಸಾಲ ಪಡೆಯಬೇಕಾಗುತ್ತದೆ. ಹಾಗಂತ ಸಮಸ್ಯೆ ಬಗೆ ಹರಿಯುತ್ತದೆ ಎಂದೇನಲ್ಲ. ಯಾಕೆಂದರೆ ಸಾಲ ಮಾಡಿದರೂ ಬಜೆಟ್ ಗಾತ್ರಕ್ಕೆ ಅಗತ್ಯವಾದ ಹಣ ಹೊಂದಿಕೆಯಾಗದೆ ಹೋದಾಗ ಸರಕಾರ ತನ್ನ ಬಜೆಟ್‌ನಲ್ಲಿರುವ ಎರಡು ಮುಖಗಳ ಪೈಕಿ ಒಂದು ಮುಖವನ್ನು ಪರಚುವ ಅನಿವಾರ್ಯತೆಗೆ ಸಿಲುಕುತ್ತದೆ.
ಈ ಮುಖ ಯೋಜನಾ ವೆಚ್ಚದ್ದು. ಅಂದರೆ ಅಭಿವೃದ್ಧಿ ಕಾರ್ಯಗಳಿಗೆ ಏನು ಹಣ ಒದಗಿಸಲಾಗಿದೆಯೋ ಅದನ್ನು ಕಡಿತ ಮಾಡಲಾಗುತ್ತದೆ. ಯಾಕೆ ಯೋಜನಾ ವೆಚ್ಚ ಎಂಬ ಮುಖವನ್ನೇ ಪರಿಚಯಿಸಲಾಗುತ್ತದೆ ಎಂದರೆ ಯೋಜನೇತರ ವೆಚ್ಚ ಎಂಬ ಮುಖವನ್ನು ಮುಟ್ಟಲಾಗದ ಅಸಹಾಯಕತೆಗಾಗಿ. ಯೋಜನೇತರ ವೆಚ್ಚ ಎಂದರೆ ಒದಗಿಸಲೇಬೇಕಾದ ಹಣ. ಅರ್ಥಾತ್, ಸರಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ ಮತ್ತು ರಾಜ್ಯ ಮಾಡಿರುವ ಸಾಲದ ಮೇಲಿನ ಅಸಲು, ಬಡ್ಡಿ ತೀರಿಸುವುದು ಇತ್ಯಾದಿ. ಸರಕಾರಿ ನೌಕರರ ವೇತನ, ಭತ್ಯೆ, ಪಿಂಚಣಿ, ಸಾಲ ಮರುಪಾವತಿಗಾಗಿ ರಾಜ್ಯ ಸರಕಾರ ಈ ಬಾರಿ ಮೀಸಲಿಟ್ಟಿರುವ ಹಣದ ಪ್ರಮಾಣ
ಎಷ್ಟು ಗೊತ್ತೇ?ತನ್ನ ಬಜೆಟ್ ಗಾತ್ರದ ಶೇಕಡಾ ಮೂವತ್ನಾಲ್ಕರಷ್ಟು.
ಹೀಗಿರುವಾಗ ತನ್ನ ಬಜೆಟ್‌ಗಾಗುವ ಯಾವುದೇ ಕೊರತೆಯನ್ನು ನೀಗಿಸಿಕೊಳ್ಳಲು ಒಂದೋ ಅದು ಸಾಲದ ಮೊರೆ ಹೋಗುತ್ತದೆ. ಅದೂ ಸಾಲದು ಎನ್ನಿಸಿದಾಗ ಯೋಜನಾ ವೆಚ್ಚಕ್ಕೆ ಕತ್ತರಿ ಆಡಿಸುತ್ತದೆಯೇ ಹೊರತು ತಪ್ಪಿ ಕೂಡಾ ಯೋಜನೇತರ ವೆಚ್ಚಕ್ಕೆ ಕೈ ಹಾಕುವುದಿಲ್ಲ. ಪರಿಣಾಮ? ಬಜೆಟ್ ಎಂಬುದು ರಾಜ್ಯದ ಶಕ್ತಿಯನ್ನು ಹೆಚ್ಚಿಸುವುದಕ್ಕಿಂತ ಅದನ್ನು ಮತ್ತಷ್ಟು ದುರ್ಬಲಗೊಳಿ ಸುವ ಸಾಧ್ಯತೆಗಳೇ ಜಾಸ್ತಿ. ಹೀಗಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್ ಅನ್ನು ಕನ್ನಡಿಯೊಳಗಿನ ಗಂಟು ಎನ್ನದೇ ಬೇರೆ ದಾರಿಯಿಲ್ಲ.