ರಾಜ್ಯದಲ್ಲಿ ‘ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ’ಗಳನ್ನು ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಖಾಸಗಿ ಸಾರಿಗೆ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ. ೧೧ ತಂಡಗಳನ್ನು ರಚಿಸಿ ಜುಲೈ ಐದು ಮತ್ತು ಆರರಂದು ಎಲೆಕ್ಟ್ರಿಕ್ ಬೈಕ್ ಮತ್ತು ಟ್ಯಾಕ್ಸಿ ಮತ್ತು ಅನಧಿಕೃತ ಬೈಕ್ ಟ್ಯಾಕ್ಸಿಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಲಾಗುವುದೆಂದು ಪ್ರಕಟಣೆಯಲ್ಲಿ
ತಿಳಿಸಲಾಗಿದೆ.
ಇಲ್ಲಿ ಗಮನಿಸಬೇಕಾದ ವಿಚಾರವೆಂದರೆ ದೇಶದಲ್ಲಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳನ್ನು ಉತ್ತೇಜಿಸಲು ವಿಶೇಷ ನೀತಿಯನ್ನು ರೂಪಿಸಿದ ಮೊದಲ ರಾಜ್ಯ ಕರ್ನಾಟಕ. ಪರಿಸರ ಮಾಲಿನ್ಯ ತಗ್ಗಿಸುವ ಮತ್ತು ಸಾರ್ವಜನಿಕ ಸಾರಿಗೆಯನ್ನು ಸುಲಲಿತಗೊಳಿಸುವ ಉದ್ದೇಶದಿಂದ ರಾಜ್ಯ ಸರಕಾರ ೨೦೨೧ರ ಜುಲೈ ೧೪ರಂದು ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳಿಗೆ ಅನುಮತಿ ನೀಡಿತ್ತು. ಇದರ ಬೆನ್ನಿಗೇ ಓಲಾ, ಊಬರ್, ರ‍್ಯಾಪಿಡೋ, ಬೌನ್ಸ್ ಸೇರಿದಂತೆ ಹಲವು ಕಂಪನಿಗಳು ಬೈಕ್ ಮತ್ತು ಎಲೆಕ್ಟ್ರಿಕ್ ಟ್ಯಾಕ್ಸಿಗಳ ಸೇವೆ ಆರಂಭಿಸಿದ್ದವು. ಆದರೆ ಬೈಕ್ ಟ್ಯಾಕ್ಸಿಗಳ ಅಗ್ಗದ ಸೇವೆಯಿಂದ ಹಾಲಿ ಇರುವ ಆಟೋರಿಕ್ಷಾ, ಮ್ಯಾಕ್ಸಿ ಕ್ಯಾಬ್
ಮತ್ತು ಟ್ಯಾಕ್ಸಿ ಚಾಲಕರ ಸಂಪಾದನೆಗೆ ಹೊಡೆತ ಬಿತ್ತು.
ಈ ಹಿನ್ನೆಲೆಯಲ್ಲಿ ಎಲೆಕ್ಟ್ರಿಕ್ ಬೈಕ್ ಮತ್ತು ಟ್ಯಾಕ್ಸಿ ಸೇವೆಯನ್ನು ಸ್ಥಗಿತಗೊಳಿಸುವಂತೆ ಈ ವಾಹನಗಳ ಚಾಲಕರು ಮತ್ತು ಸಂಘಟನೆಗಳು ಪ್ರತಿಭಟನೆ ನಡೆಸಿದವು. ನಿರಂತರ ಪ್ರತಿಭಟನೆಗೆ ಮಣಿದ ರಾಜ್ಯ ಸರಕಾರ ಕಳೆದ ಫೆಬ್ರವರಿ ತಿಂಗಳಲ್ಲಿ ಸುರಕ್ಷತೆ ಮತ್ತು ನಿಯಮಗಳ ಉಲ್ಲಂಘನೆ ಕಾರಣಗಳನ್ನು ಮುಂದಿಟ್ಟುಕೊಂಡು ಎಲೆಕ್ಟ್ರಿಕ್ ಬೈಕ್-ಟ್ಯಾಕ್ಸಿ ಸೇವೆಗಳ ಮೇಲೆ ನಿಷೇಧ ಹೇರಿತು. ಇದೇ ವೇಳೆ ಎಲೆಕ್ಟ್ರಿಕ್ ಬೈಕ್ ಸವಾರರನ್ನು ತಡೆದು ಹಲ್ಲೆ ನಡೆಸಿದ ಘಟನೆಗಳೂ ನಡೆದವು.
ಇದನ್ನು ಪ್ರಶ್ನಿಸಿ ಬೈಕ್-ಟ್ಯಾಕ್ಸಿ ಸೇವೆ ನೀಡುತ್ತಿದ್ದ ಕೆಲವು ಅಗ್ರಿಗೇಟರ್ ಕಂಪನಿಗಳು ಹೈಕೋರ್ಟ್ ಮೆಟ್ಟಿಲೇರಿದವು. ಬೈಕ್ ಟ್ಯಾಕ್ಸಿ ಚಾಲಕರಿಗೆ ಅಡ್ಡಿಪಡಿಸಿ ದರೆ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ಕಳೆದ ಏಪ್ರಿಲ್ ೨೪ರಂದು ಗೃಹ ಇಲಾಖೆಗೆ ಆದೇಶಿಸಿದೆ. ಈ ಆದೇಶದ ನಡುವೆಯೇ ಸಾರಿಗೆ ಇಲಾಖೆ ತನ್ನ ಹಿಂದಿನ ನಿಷೇಧ ಆದೇಶವನ್ನು ಜಾರಿಗೊಳಿಸಲು ಹೊರಟಿದೆ. ಇದು ಉಚ್ಚನ್ಯಾಯಾಲಯದ ಆದೇಶದ ಉಲ್ಲಂಘನೆ ಎನ್ನುವುದು ಬೈಕ್ -ಟ್ಯಾಕ್ಸಿ ಸೇವಾ ದಾರರ ಆರೋಪ. ಕರ್ನಾಟಕದ ನಂತರ ಎಲೆಕ್ಟ್ರಿಕ್ ಬೈಕ್ -ಟ್ಯಾಕ್ಸಿ ಸೇವೆಗೆ ಅನುಮತಿ ನೀಡಿದ ದಿಲ್ಲಿ, ಆಂಧ್ರಪ್ರದೇಶ, ಬಿಹಾರ ಮತ್ತು ಗೋವಾ ದಂತಹ ರಾಜ್ಯಗಳಲ್ಲಿ ಈ ವಾಹನಗಳ ಸುರಕ್ಷತೆ ಮತ್ತು ಸಂಚಾರ ಸಂಬಂಧ ಸ್ಪಷ್ಟ ನೀತಿ ರೂಪಿಸಲಾಗಿದೆ.
ಆದರೆ ಯಾವ ನೀತಿಯನ್ನೂ ರೂಪಿಸದ ರಾಜ್ಯ ಸಾರಿಗೆ ಇಲಾಖೆ, ಕೆಲವು ಸಂಘಟನೆಗಳ ಒತ್ತಾಯಕ್ಕೆ ಮಣಿದು ನಿಷೇಧ ಹೇರುವ ತೀರ್ಮಾನಕ್ಕೆ ಬಂದಿದೆ. ಇಲ್ಲಿ ಪ್ರಯಾಣಿಕರ ಹಿತದೃಷ್ಟಿ, ಅನುಕೂಲತೆ ಮತ್ತು ಸುರಕ್ಷತೆ ಆದ್ಯತೆಯಾಗಬೇಕಿದೆ. ಅಗ್ಗ ದರದಲ್ಲಿ ಸುರಕ್ಷಿತ ಸಾರ್ವಜನಿಕ ಸಾರಿಗೆ ಲಭ್ಯವಾಗುವಂತೆ
ನೋಡಿಕೊಳ್ಳುವುದು ಸರಕಾರದ ಕರ್ತವ್ಯ ಕೂಡ.