Friday, 13th December 2024

ರಾಜಕೀಯವೆಂಬುದು ಚದುರಂಗದಾಟ !

ಅಭಿವ್ಯಕ್ತಿ

ಡಾ.ಕೆ.ಪಿ.ಪುತ್ತೂರಾಯ

ಚದುರಂಗದಾಟದಲ್ಲಿ ಗೆಲ್ಲಬೇಕಾದರೆ ಕಾಯಿಗಳು ಒಂದೇ ದಿಕ್ಕಿನತ್ತ ಚಲಿಸಿದರೆ ಸಾಲದು. ಕೆಲವೊಮ್ಮೆ ಹಿಂದಕ್ಕೆ ಮುಂದಕ್ಕೆ ಆ ಕಡೆ ಈ ಕಡೆ, ಎಲ್ಲಾ ಕಡೆಗೆ ಚಲಾಯಿಸಬೇಕಾಗುತ್ತದೆ. ಎದುರಾಳಿಯ ಮುಂದಿನ ನಡೆ ಏನಿರಬಹುದೆಂಬುದನ್ನು ಊಹಿಸಿ ಕೊಂಡು ನಮ್ಮ ಅಡ್ಡ ಬರಬಹುದಾದ ಕಾಯಿಗಳನ್ನು ಹೊಡೆದುರುಳಿಸಿ ಗೆಲ್ಲುವ ದಾರಿಯನ್ನು ಸುಗಮಗೊಳಿಸಬೇಕಾಗುತ್ತದೆ.

ಇದೇ ರೀತಿ ರಾಜಕೀಯ ಕ್ಷೇತ್ರದಲ್ಲಿ ಗೆಲ್ಲಬೇಕಾದರೆ, ಗುಂಪುಗಾರಿಕೆಗಳನ್ನು ಮಾಡಬೇಕಾಗುತ್ತದೆ; ತರತರದ ತಂತ್ರಗಾರಿಕೆಗಳನ್ನು
ಬಳಸಬೇಕಾಗುತ್ತದೆ; ಶಕ್ತಿ ಯುಕ್ತಿಗಳನ್ನು ಪ್ರದರ್ಶಿಸಬೇಕಾಗುತ್ತದೆ; ಕೆಲವೊಮ್ಮೆ ಮಾಟಮಂತ್ರಗಳಿಗೂ ಮೊರೆಹೋಗ ಬೇಕಾಗು ತ್ತದೆ. ಸರ್ವೇ ಸಾಮಾನ್ಯವಾಗಿ ರಾಜಕೀಯ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕಿಳಿಯಲು ಗೆಲ್ಲುವ ಕುದುರೆಯೇ ಬೇಕು ಕುದುರೆಯ ಚರಿತ್ರೆ – ಚಾರಿತ್ರ್ಯ ಮುಖ್ಯವಲ್ಲ.

ಎಷ್ಟೇ ಪ್ರತಿಭಾವಂತ ಪ್ರಾಮಾಣಿಕ ಅರ್ಹತೆ – ಯೋಗ್ಯತೆಯುಳ್ಳ ವ್ಯಕ್ತಿಯಾದರೂ ಚುನಾವಣೆಯನ್ನು ಗೆಲ್ಲುವ ಜಾತಿ ಬಲವನ್ನೂ, ಧನ ಬಲವನ್ನೂ ಚಾಕಚಕ್ಯತೆಯನ್ನು ಹೊಂದಿಲ್ಲದವನೆಂದಾದರೆ, ಅವನು ನಾಲಾಯಕು. ಚುನಾವಣೆಗಳಲ್ಲಿ ಗೆಲ್ಲುವ ಗುರಿ ಯೊಂದೇ ಮುಖ್ಯವೇ ಹೊರತು, ಗೆಲ್ಲುವ ಮಾರ್ಗ ಪ್ರಧಾನವಲ್ಲ, ನಮ್ಮ ಗುರಿಯ ಜತೆ ಗುರಿಯನ್ನು ತಲುಪುವ ಮಾರ್ಗವೂ
ಸನ್ಮಾರ್ಗವಾಗಿರಬೇಕೆಂಬುದು ಕೇವಲ ಉಪದೇಶದ ಮಾತು! ರಾಜಕೀಯ ಕ್ಷೇತ್ರಕ್ಕೆ ಅನ್ವಹಿಸದು.

ರಾಜಕೀಯ ಕ್ಷೇತ್ರದ ತತ್ತ್ವ, ಸಿದ್ಧಾಂತ, ಮೂಲ ಮಂತ್ರಗಳು.

1. ಏನಾದರೂ ಮಾಡಿ, ಹೇಗಾದರೂ ಮಾಡಿ, ಒಮ್ಮೆ ಅಧಿಕಾರವನ್ನು ಗಳಿಸಿಕೊಳ್ಳುವುದು. ಇದಕ್ಕೆ ನೀತಿ ನ್ಯಾಯಗಳ, ಧರ್ಮದ ಹಂಗಿಲ್ಲ. ಗೆಲ್ಲದೇ ಹೋದರೆ, ಹಾಕಿದ ಬಂಡವಾಳ, ಶ್ರಮ ಎಲ್ಲವೂ ವ್ಯರ್ಥ. ರಾಜಕೀಯವಾಗಿ ಹಿನ್ನಡೆ ಹಾಗೂ ಸತತವಾಗಿ ಸೋತರೆ, ರಾಜಕೀಯವಾಗಿ ಸಾವು ಕೂಡಾ ಖಚಿತ.

2.ಒಮ್ಮೆ ಗಳಿಸಿಕೊಂಡ ಅಧಿಕಾರವನ್ನು ಉಳಿಸಿಕೊಳ್ಳೋದು, ಸಿಕ್ಕಿದ ಕುರ್ಚಿಯನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳದಿದ್ದರೆ, ಕ್ಷಣಾರ್ಧದಲ್ಲಿ ಅದು ಇನ್ನೊಬ್ಬರ ಪಾಲಾಗಬಹುದು.

3.ಸಹಜ ಸ್ವಾಭಾವಿಕವಾಗಿಯೇ, ಉಳಿಸಿಕೊಂಡ ಅಧಿಕಾರವನ್ನು ಕ್ರಮೇಣ ಬೆಳಸಿಕೊಳ್ಳೊದು. ಆದುದರಿಂದಲೇ ಕಾರ್ಪೋ ರೇಟರ್ ಆದವರಿಗೆ ಎಂಎಲ್‌ಎ ಆಗುವ ಆಸೆ, ಎಂಎಲ್‌ಎ ಆದ ಮೇಲೆ ಮಂತ್ರಿ ಆಗುವ ಬಯಕೆ, ಮಂತ್ರಿಯೂ ಆದ ಮೇಲೆ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕಣ್ಣು, ಹೀಗೆ ಆಸೆಗಳ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಹೀಗಾಗಲೂ ಕಾರಣ ಒಮ್ಮೆ ಅಧಿಕಾರದ ರುಚಿಯನ್ನು ಸವಿದವರಿಗೆ ಅಧಿಕಾರವಿಲ್ಲದೇ ಬದುಕುವುದು ಕಷ್ಟಕರವಾಗುತ್ತದೆ. ಅವರು ಹಲ್ಲಿಲ್ಲದ ಹುಲಿಗಳಾಂತಾಗುತ್ತಾರೆ.
ನೀರಿಲ್ಲದ ಮೀನಿನಂತೆ ಚಡಪಡಿಸುತ್ತಾರೆ. ಈ ಸತ್ಯವನ್ನೇ ಅಧಿಕಾರಂಚ, ಗರ್ಭಂಚ, ಆಗಮನೇ ಆನಂದಂ, ನಿರ್ಗಮನೇ ಪ್ರಾಣ ಸಂಕಟಂ ಎಂಬ ಉಕ್ತಿಯಲ್ಲಿ ಹೇಳಲಾಗಿದೆ. ಈ ಕಾರಣ ರಾಜಕೀಯವಾಗಿ ಜೀವಂತವಾಗಿರುವ ಅನಿವಾರ್ಯತೆ ಉಂಟಾಗುತ್ತದೆ. ಆದುದರಿಂದಲೇ ರಾಜಕಾರಣಿಗಳಿಗೆ ನಿವೃತ್ತಿಯೂ ಇಲ್ಲ, ವಯಸ್ಸಿನ ಇತಿಮಿತಿಯೂ ಇಲ್ಲ.

ಕೂತಲ್ಲಿಂದ ಏಳಲಾಗದ ಹಣ್ಣು ಹಣ್ಣು ಮುದುಕನಿಗೆ, ಜನರ ದೇಶ ಸೇವೆ ಮಾಡುವ ತವಕ; ರಾಜಕೀಯದಲ್ಲಿ ತೃಪ್ತಿಯೂ ಇಲ್ಲ, ಒಂದೇ ಕ್ಷೇತ್ರದಿಂದ ಹತ್ತಾರು ಬಾರಿ ತಾವೊಬ್ಬರೇ ಸ್ಪರ್ಧಿಸಿ ಪದೇ ಪದೆ ಗೆದ್ದರೂ, ಯುವಕರಿಗೆ, ಇತರ ಆಕಾಂಕ್ಷಿಗಳಿಗೂ ಸ್ಪರ್ಧಿ ಸುವ ಅವಕಾಶ ಮಾಡಿಕೊಡಬೇಕೆಂಬ ಉದಾರ ಯೋಚನೆಯೇ ಇವರಿಗೆ ಬರೋದಿಲ್ಲ.

ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಲು, ಇತರ ಎಲ್ಲಾ ಕ್ಷೇತ್ರಗಳಲ್ಲಿರುವಂತೆ, ಕನಿಷ್ಠ ವಿದ್ಯಾರ್ಹತೆಯ ಅವಶ್ಯಕತೆಯೂ ಇಲ್ಲ. SSLC ಫೇಲಾದವರು ಉನ್ನತ ಶಿಕ್ಷಣ ಸಚಿವರಾಗಿದ್ದೂ ಉಂಟು. ಬರೇ ನಾಲ್ಕನೇ ಕ್ಲಾಸು ಓದಿದವರು ರಾಜ್ಯದ ಮುಖ್ಯಮಂತ್ರಿ ಗಳಾಗಿದ್ದೂ ಉಂಟು, ಕೆಲವರಿಗೆ ರಾಜಕಾರಣ ಎಂದರೆ, ಒಂದು ವೃತ್ತಿಯಾದರೆ, ಇನ್ನು ಕೆಲವರಿಗೆ, ಸುಲಭದಲ್ಲಿ ಬಿಡಲಾಗದ ಒಂದು ವ್ಯಸನ.

ರಾಜಕೀಯದಲ್ಲಿ ವಂಶಪಾರಂಪರ್ಯ ರಾಜಕಾರಣ ಅಪರಾಧವೇ ಅಲ್ಲ. ರಾಜಕೀಯ ಕ್ಷೇತ್ರದಲ್ಲಿ ಶಾಶ್ವತವಾದ ಮಿತ್ರರೆಂದಿಲ್ಲ; ಶತ್ರುಗಳೂ ಇಲ್ಲ, ಇಂದು ಪರಮ ಮಿತ್ರರಾಗಿದ್ದವರು, ನಾಳೆ ಕಡುವೈರಿಗಳಾಗಬಹುದು, ಇಂದು ಬದ್ಧವೈರಿಗಳಾದವರು, ನಾಳೆ ಆತ್ಮೀಯ ಸ್ನೇಹಿತರೂ ಆಗಬಹುದು, ಹೀಗಾಗಲು, ಪಕ್ಷಾಂತರ ಒಂದು ಕಾರಣವಾದರೆ, ಬಂದಂತೆ ಬದುಕುವ ಇವರ ಪರಿ
ಇನ್ನೊಂದು.

ಹಾಗೆಂದು ರಾಜಕೀಯ ಕ್ಷೇತ್ರಗಳಲ್ಲಿ ಯಾರೂ ಉದ್ಭವ ಮೂರ್ತಿಗಳಲ್ಲ. ಹೆಚ್ಚಿನವರು ಏನಾದರೊಂದು ಬಲದಿಂದ (ಹಣ ಬಲ, ಜಾತಿಬಲ, ವಂಶಬಲ) ಇಲ್ಲವೇ ಯಾರಾದಾರೊಬ್ಬರ ಕೃಪಾಕಟಾಕ್ಷದಿಂದ ಮೇಲೆ ಬಂದವರೇ To be born, you need a father, but to come up in life you need a god father’  ಎಂಬ ಮಾತು ರಾಜಕೀಯ ಕ್ಷೇತ್ರಕ್ಕೆ ತುಂಬಾ ಅನ್ವಯ. ಆದರೆ, ಒಮ್ಮೆ ಮೇಲಕ್ಕೆ ಏರಿದ ಮೇಲೆ, ಏರಲು ನೆರವಾದ ಏಣಿಯ ಅವಶ್ಯಕತೆಯೇ ಇರೋದಿಲ್ಲ.

ಆದುದರಿಂದಲೇ ತಮಗೆ ಏರಲು ನೆರವಾದವರನ್ನು ಮರೆತು ಬಿಡೋದು ರಾಜಕಾರಣದಲ್ಲಿ ಸರ್ವೇ ಸಾಮಾನ್ಯ. ಅಂತೆಯೇ ಗೋಡೆಗಳಿಗೂ ಕಿಗಳಿವೆ ಎಂಬ ಮಾತನ್ನು ರಾಜಕಾರಿಣಿಗಳು ಬಲವಾಗಿ ನಂಬುತ್ತಾರೆ. ಯಾರೂ ಯಾರನ್ನು ಅಷ್ಟಾಗಿ ನಂಬುವು ದಿಲ್ಲ. ಎಲ್ಲರನ್ನೂ ಸಂಶಯ ದೃಷ್ಟಿಯಿಂದಲೇ ನೋಡುತ್ತಿರುತ್ತಾರೆ. ಒಬ್ಬರನ್ನೊಬ್ಬರು ನಗುನಗುತ್ತಾ ಮಾತಾನಾಡಿಸಿಕೊಂಡರೂ,
ಅಪ್ಪಿಕೊಂಡರೂ, ತಬ್ಬಿಕೊಂಡರೂ ಹಿಂದಿನಿಂದ ನಡೆಸುವ ಲೆಕ್ಕಾಚಾರವೇ ಬೇರೆ, ಜೀವನದಲ್ಲಿದ್ದಾಗ ದ್ವೇಷಿಸಿ, ದೂಷಿಸಿಕೊಂಡು ಬಂದವರು, ಅವರಲ್ಲೊಬ್ಬರು ಸತ್ತಾಗ ಇವರ ಸಾವು ದೇಶಕ್ಕೇ ತುಂಬಲಾರದ ನಷ್ಟ (ಹೌದು ಕೆಲವರು ಸಾಯುವ ಮುನ್ನ ದೇಶಕ್ಕೆ ಮಾಡಿದ ನಷ್ಟವನ್ನು ತುಂಬಲು ಸಾಧ್ಯವೇ ಇಲ್ಲ)ವೆಂದು ಕಂಬನಿ ಮಿಡಿಯುತ್ತಾರೆ.

ರಾಷ್ಟ್ರಗೀತೆಯನ್ನು ಹಾಡಬಾರದ ದೇಶ ಭಕ್ತರಿವರು! ಸದಾ ಸುದ್ದಿಯಲ್ಲಿರಬೇಕಾದುದು, ರಾಜಕೀಯ ಕ್ಷೇತ್ರದ ಇನ್ನೊಂದು ಅವಶ್ಯಕತೆ. ಕಾರಣ ಚಲಾವಣೆಯಲ್ಲಿರುವ ನಾಣ್ಯಕ್ಕೆ ಮಾತ್ರ ಬೆಲೆ. ಆದುದರಿಂದಲೇ ಹೊಸ ಹೊಸ ವಾದಗಳನ್ನು ಸೃಷ್ಟಿಸಿ, ಸೋಟಕ ಸುದ್ದಿಗೆ ಕಾರಣರಾಗಿ ಮನೆಮಾತಾಗುತ್ತಾರೆ. ಇವರುಗಳು ಇಂದು ಹೀಗೆ ಹೇಳಿದರೆ, ಅದು ಸರಿ, ನಾಳೆ ಹಾಗೆ ಹೇಳಿದರೆ ಅದೂ ಸರಿ, ನಾಡಿದ್ದು ಹಾಗೆಲ್ಲ ಹೇಳಿಲ್ಲವೆಂದರೆ ಅದೂ ಸರೀನೇ.

ಕಾರಣ ಪ್ರಾಮಾಣಿಕತೆ – ಪಾರದರ್ಶಕತೆ – ಪರಿಶುದ್ಧತೆ – ಬದ್ಧತೆ ಎಂಬೆಲ್ಲಾ ವಿಚಾರಗಳು ಇವರಲ್ಲಿ ಅಪರೂಪ. ಹಾಗೆಂದು,
ತಮ್ಮ ಉಳಿವಿನ – ಅಳಿವಿನ ಪ್ರಶ್ನೆ ಬಂದಾಗ, ಪಕ್ಷಾತೀತವಾಗಿ ಎಲ್ಲರೂ ಒಟ್ಟಾಗುತ್ತಾರೆ; ಒಬ್ಬರನ್ನೊಬ್ಬರನ್ನು ರಕ್ಷಿಸಿಕೊಳ್ಳು
ತ್ತಾರೆ. ಏಕೆಂದರೆ, ಎಲ್ಲರ ಜಾತಕ, ಜನತೆಯ ಹೊರತಾಗಿ, ಇವರೆಲ್ಲರ ಕೈಯಲ್ಲಿದೆ. ಇದೇ ಕಾರಣದಿಂದ, ಎಂತೆಂಥ ಹಗರಣಗಳು ಮುಚ್ಚಿಹೋಗಿವೆ. ಹೆಚ್ಚಿನವರಿಗೆ ಶಿಕ್ಷೆಯಾಗಿಲ್ಲ.

ಕೈಗೆ ಸಿಗದ ಇವರುಗಳು, ನಿರ್ಭಯವಾಗಿ, ನಿರಾತಂಕವಾಗಿ ಓಡಾಡುತ್ತಿರುತ್ತಾರೆ. ಆದರೆ, ತಮ್ಮ ತಿಂಗಳ ವೇತನ ಭತ್ಯೆಯ ಹೆಚ್ಚಳದ ವಿಚಾರ ಬಂದಾಗ, ಇವರೊಳಗೆ ಬೇಧಭಾವವೇ ಇಲ್ಲ; ಒಕ್ಕೊರಲಿನಿಂದ ಮಸೂದೆಯನ್ನು ಅಂಗೀಕರಿಸುತ್ತಾರೆ. ಅಂತೆಯೇ ಆಡಳಿತ ಪಕ್ಷದವರು, ಎಷ್ಟೇ ಏನೇ ಒಳ್ಳೆಯ ಕೆಲಸ ಮಾಡಲಿ, ಅವೆಲ್ಲಾ ವಿರೋಧ ಪಕ್ಷದವರ ಕಣ್ಣಿಗೆ ಕಾಣದು, ಕಂಡರೂ ಒಂದು ಹೊಗಳಿಕೆಯ ಶಬ್ದಬಾರದು ಏಕೆಂದರೆ, ಆಡಳಿತ ಮಾಡುವವರನ್ನು ಖಂಡಿಸ ಬೇಕಾದುದು, ಅವರನ್ನು ಅಧಿಕಾರದಿಂದ
ಕೆಳಗಿಳಿಸುವುದು ಯಾವ ಪಕ್ಷವೇ ಆಗಲಿ, ವಿರೋಧ ಪಕ್ಷದವರ ಏಕಮೇವ ’Agenda’ ದೇಶದ ಐಕ್ಯತೆ, ರಕ್ಷಣೆಯ ವಿಚಾರ ಬಂದಾಗಲೂ ಸಹಕರಿಸದೆ. ಗದ್ದುಗೆ ಏರೋದೇ ಇವರ ಕನಸು.

“If you can not convince people, confuse them” ಎಂಬ ನಿಯಮದಡಿ, ದೇಶದಲ್ಲಿ ಇದುವರೆಗೆ ಏನಾಗಲಿಲ್ಲ, ಏನಾಗಬೇಕಿತ್ತು ಈಗ ಏನಾಗುತ್ತಿದೆ, ಹೀಗೆಯೇ ಬಿಟ್ಟರೆ, ಮುಂದೇನಾಗಬಹುದು? ಎಂಬುದನ್ನೆಲ್ಲಾ ರಂಗುರಂಗಾಗಿ ಚಿತ್ರಿಸಿ, ಜನತೆಯ ಮುಂದಿಟ್ಟು ನಮಗೊಂದು ಅವಕಾಶ ಕೊಟ್ಟು ನೋಡಿ ಎಂದು ಹೇಳುತ್ತಾ ಜನರನ್ನು ಮೆತ್ತಗೆ ಮೋಡಿ ಮಾಡುತ್ತಾರೆ. “A successful politician is the one who successfully transfers the ideas from his head to your head” ಎಂಬಂತೆ, ಜನರನ್ನು ಮಂಗಮಾಡುತ್ತಾ
ಅವರಿಂದಲೇ, ಹಾರ ತುರಾಯಿ ಹಾಕಿಸಿಕೊಳ್ಳೋದೇ ಜಾಣ ರಾಜಕಾರಣ.

ಸಮಾಜದಲ್ಲಿ ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಗಳಿಲ್ಲದೆ, ಜಾತಿವಾದ, ಕೋಮುವಾದಗಳಿಲ್ಲದೆ, ಎಲ್ಲರೂ ಸಾಮರಸ್ಯ ದಿಂದ, ನೆಮ್ಮದಿಯಿಂದ ಬಾಳುವಂತಾದರೆ, ನಮಗೇನು ಕೆಲಸವೆಂಬುದು ಕೆಲವರ ಕೆಟ್ಟ ಲೆಕ್ಕಾಚಾರ, ಹಲವಾರು ಗಲಭೆ- ಹಿಂಸೆ – ದಳ್ಳುರಿಗಳು ರಾಜಕೀಯ ಪ್ರೇರಿತ ವೆಂಬುದೇ ಇದಕ್ಕೆ ಸಾಕ್ಷಿ. ಆದುದರಿಂದಲೇ, ಮೀಸಲಾತಿ, Vote Bankಗಳನ್ನೇ ಜೀವಂತವಿಡ
ಲಾಗುತ್ತದೆ. ಜಾತಿ, ಮತೀಯ ಸಂಘರ್ಷಗಳಿಗೆ ಕಾರಣಕರ್ತರಾಗಿ, ತಮ್ಮ ಬೇಳೆ ಬೇಯಿಸಿಕೊಳ್ಳುವ ನಿದರ್ಶನಗಳೂ ಅಪರೂಪ ವಲ್ಲ.

ಇಂತಹ ಎಷ್ಟೇ, ಏನೇ ಗುರುತರವಾದ ಆರೋಪ, ಆಪಾದನೆ ಬಂದಾಗಲೂ ಇವೆಲ್ಲ ನನ್ನ ಜನಪ್ರಿಯತೆಯನ್ನು ಸಹಿಸಲಾಗದೆ, ನನ್ನನ್ನು ರಾಜಕೀಯವಾಗಿ ಮುಗಿಸಲು ನಡೆಸಿದ ಸಂಚು, ಹುನ್ನಾರವೆಂಬುದು ಹೆಚ್ಚಿನವರ ಉತ್ತರ. ಹಾಗೆಂದು, ರಾಜಕೀಯ ಕ್ಷೇತ್ರವೇ ಸಂಪೂರ್ಣವಾಗಿಕಲುಷಿತಗೊಂಡಿದೆಯೆಂದಲ್ಲ. ನಿಸ್ವಾರ್ಥ ದೃಷ್ಟಿಯಿಂದ, ಮೌಲ್ಯಾಧಾರಿತ ರಾಜಕಾರಣವನ್ನು
ಮಾಡುವ ರಾಜಕಾರಣಿ ಗಳು ಇದ್ದಾರೆ. ಆದರೆ ಇಂತವರು ಬೆರಳೆಣಿಕೆಯಷ್ಟು.

ಇಂದಿನ ದಿನಗಳಲ್ಲಿ ಇವರುಗಳು, ಇವರು ಅಲ್ಪಸಂಖ್ಯಾತರು, ಇಂತಹವರು ಬಹುಸಂಖ್ಯಾತರಾಗಬೇಕೆಂಬುದೇ ಜನತೆಯ ಆಶಯ. ತಮ್ಮ ಸ್ವಾರ್ಥಕ್ಕಿಂತ ಪಕ್ಷಮುಖ್ಯ – ಪಕ್ಷಕ್ಕಿಂತ ದೇಶ ಮುಖ್ಯ ಎನ್ನುವ ರಾಜಕಾರಣಿಗಳು ನಮಗೆ ಬೇಕು. ಅವರಂತೆ ನಡೆಯಿರಿ, ಇವರಂತೆ ನಡೆಯಿರಿ ಎನ್ನುವವರ ಬದಲು ನನ್ನಂತೆ ನಡೆಯಿರಿ ಎನ್ನುವ ರಾಜಕಾರಣಿಗಳು ನಮಗೆ ಬೇಕು. ಬೇಡ ನಿಮ್ಮ ಹಾರಿಕೆಯ ಮಾತು, ತೋರಿಕೆಯ ಪ್ರೀತಿ, ಜಾರಿಕೆಯ ನೀತಿ, ಮರೆಯದಿರಿ – ಕೊಟ್ಟಮಾತಿಗೆ ತಪ್ಪಿನಡೆದರೆ, ಮೆಚ್ಚನಾ ಮತದಾರನು ಎಂಬುದು ಜನತಾ ಜನಾರ್ಧನರ ಎಚ್ಚರಿಕೆಯ ಕೂಗು.

ಇಲ್ಲವಾದರೆ ‘ನ ರಾಜ ರಾಜ್ಯಂ ಕುರಾಜ ರಾಜ್ಯಂ’ ಅರ್ಥಾತ್ ಕೆಟ್ಟ ರಾಜ ಇರುವುದಕ್ಕಿಂತ, ರಾಜನಿಲ್ಲದಿರೋದೇ ಲೇಸು ಎಂಬ
ತೀರ್ಮಾನಕ್ಕೆ ಜನರು ಬಂದಾರು, ಒಟ್ಟಿನಲ್ಲಿ ರಾಜಕೀಯ ಕ್ಷೇತ್ರ ಸದಾ ಕುರುಕ್ಷೇತ್ರ ವೇ ಆಗಿರದೆ ಧರ್ಮಕ್ಷೇತ್ರವೂ ಆಗಿರಲಿ
ಎಂಬುದೇ ನಮ್ಮ ಆಶಯ. ಜನತೆಗೆ ಬೇಕಾದುದು ಆಶ್ವಾಸನೆಗಳಲ್ಲ – ಅನುಷ್ಠಾನ, ಕನಿಕರವಲ್ಲ – ಕಾರ್ಯಾಚರಣೆ, ಸಹಾನು ಭೂತಿಯಲ್ಲ – ಸಹಾಯ ಹಸ್ತ, ಬೋಧನೆಯಲ್ಲ – ಪಾಲನೆ, ಯೋಜನೆಯಲ್ಲ – ಚಾಲನೆ, ಶಂಕುಸ್ಥಾಪನೆಗಳಲ್ಲ – ಉದ್ಘಾಟನಾ ಸಮಾರಂಭಗಳು.