Tuesday, 27th July 2021

ಪೂರ್ವಸೂರಿಗಳ ಹೆಗಲೇರಿ…

ಹಿಂತಿರುಗಿ ನೋಡಿದಾಗ

ಡಾ.ನಾ.ಸೋಮೇಶ್ವರ

naasomeshwara@gmail.com

ಸಂಚಾರಿ ವಿಜಯ್ ಜೂನ್ 12, 2021ರಂದು ರಾತ್ರಿ 8.20 ಕ್ಕೆ ವಾಹನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡರು. ಕೂಡಲೇ ಆಸ್ಪತ್ರೆಯಲ್ಲಿ ದಾಖಲಿಸಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಆರಂಭಿಸಿದರು. ಚಿಕಿತ್ಸೆ ಫಲ ಕೊಡಲಿಲ್ಲ. ಮರುದಿನ ಮಧ್ಯಾಹ್ನ 12.25ಕ್ಕೆ ವಿಜಯ್ ಮೆದುಳಿನ ಕೆಲಸ ಕಾರ್ಯಗಳನ್ನು ಪರೀಕ್ಷಿಸಿದಾಗ, ಅದು ಸ್ಥಗಿತವಾಗಿತ್ತು. ನರರೋಗ ವೈದ್ಯರು, ಅದೇ ದಿನ ಸಂಜೆ 7.50ಕ್ಕೆ ವಿಜಯ್ ಮೆದುಳಿನ ಕೆಲಸ ಕಾರ್ಯಗಳ ಉಪಸ್ಥಿತಿಯನ್ನು ತಿಳಿಯಲು ಅಗತ್ಯವಾದ ಎಲ್ಲ ಪರೀಕ್ಷೆಗಳನ್ನು ಪುನರಾವರ್ತಿಸಿದರು. ಮೆದುಳು ಶಾಶ್ವತವಾಗಿ ತನ್ನ ಕೆಲಸಗಳನ್ನು ನಿಲ್ಲಿಸಿರುವುದು ಖಚಿತವಾಯಿತು.

ವಿಜಯ್ ಮನೆಯವರು, ವಿಜಯ್ ಅವರ ಅಂಗಾಂಗಗಳನ್ನು ದಾನ ಮಾಡಲು ತಮ್ಮ ಒಪ್ಪಿಗೆಯನ್ನು ಸೂಚಿಸಿದರು. ವೈದ್ಯರು ವಿಜಯ್ ದೇಹದಿಂದ ಎರಡು ಮೂತ್ರಪಿಂಡಗಳನ್ನು, ಯಕೃತ್ತನ್ನು, ಹೃದಯದ ಕವಾಟಗಳನ್ನು ಹಾಗೂ ಎರಡು ಕಣ್ಣುಗಳ ಪಾರಪಟಲ (ಕಾರ್ನಿಯ) ವನ್ನು ಪ್ರತ್ಯೇಕಿಸಿದರು. ಅವನ್ನು ಅವಶ್ಯಕತೆ ಯಿದ್ದವರಿಗೆ ಬದಲಿ ಜೋಡಿಸಿದರು. ಮಣ್ಣಲ್ಲಿ ಮಣ್ಣಾಗಿ ಹೋಗಬಹುದಾಗಿದ್ದ ಇಲ್ಲವೇ ಬೆಂಕಿಯಲ್ಲಿ ಸುಟ್ಟು ಗಾಳಿಯಲ್ಲಿ ಬೆರೆತು ಹೋಗ ಬೇಕಿದ್ದ ಅಂಗಾಂಗಗಳ ಹಲವು ಜನರ ಬದುಕಿಗೆ ಹೊಸ ಚೇತನವನ್ನು ನೀಡಿದವು. ಅವರ ಮನೆಗಳನ್ನು ಬೆಳಗಿದವು. ಇದು ಆಧುನಿಕ ವೈದ್ಯಕೀಯ ವಿಜ್ಞಾನದ ಒಂದು ಪವಾಡ ಎಂದರೆ, ಅದು ಅತಿಶಯೋಕ್ತಿ ಯಾಗಲಾರದು.

ಉಗಮ: ವೈದ್ಯಕೀಯ ವಿಜ್ಞಾನದ ಉಗಮ ಇಂದಿಗೆ ಸುಮಾರು 60000 ವರ್ಷಗಳ ಹಿಂದೆ ಬದುಕಿದ್ದ ನಮ್ಮ ಪೂರ್ವಜರ ತೀಕ್ಷ್ಣ ವೀಕ್ಷಣಾ ಫಲವಾಗಿ ಜನ್ಮ ತಳೆಯಿತು. ಚಿಂಪಾಂಜಿಯೇ ಮುಂತಾದ ವಾನರಗಳು ಹಾಗೂ ಇತರ ಪ್ರಾಣಿಗಳು, ತಮಗೆ ಅನಾರೋಗ್ಯವಾದಾಗ, ಯಾವ ಯಾವ ಸಸ್ಯಗಳನ್ನು ತಿಂದು ಗುಣಮುಖವಾಗುತ್ತವೆ ಎನ್ನುವುದನ್ನು ಗಮನಿಸಿದರು. ತಾವೂ ಅನಾರೋಗ್ಯ ಪೀಡಿತರಾದಾಗ ಅದೇ ಗಿಡಗಳನ್ನು ತಿಂದರು. ಗುಣಮುಖ ರಾದರು. ಈ ಅರಿವನ್ನು ತಮ್ಮ ಮಕ್ಕಳಿಗೆ, ಆ ಮಕ್ಕಳು ತಮ್ಮ ಮಕ್ಕಳಿಗೆ ವರ್ಗಾಯಿಸಿದರು.

ಹೀಗೆ ವೈದ್ಯಕೀಯ ವಿಜ್ಞಾನವು ಉಗಮವಾಯಿತು. ಅಂದಿನಿಂದ ಇಂದಿನವರೆಗೆ, ವೈದ್ಯಕೀಯ ವಿಜ್ಞಾನವು ಬೆಳೆದುಬಂದ ಹಾದಿ ರೋಚಕವಾದದ್ದು! ಒಂದು
ಜ್ವರ ಬಂದರೆ, ಅದನ್ನು ನಿಯಂತ್ರಿಸಲಾಗದೇ ಹೆಣಗುತ್ತಿದ್ದ ನಮ್ಮ ಪೂರ್ವಜರ ಮಿದುಳು ಅದೆಷ್ಟು ಅದ್ಭುತವಾಗಿ ವಿಕಾಸವಾಗಿ ಇಂದು ಅಂಗಾಂಗಗಳ ಬದಲಿ ಜೋಡಣೆಯ ಕನಸನ್ನು ನನಸು ಮಾಡಿದೆ ಎನ್ನುವುದಾದರೆ, ಇದರ ಹಿಂದೆ ಸಹಸ್ರಾರು ವರ್ಷಗಳ ಅವಧಿಯಲ್ಲಿ, ಲಕ್ಷಾಂತರ ವೈದ್ಯರ ಹಾಗೂ ಸಹಾಯಕ ವೈದ್ಯಕೀಯ ಸಿಬ್ಬಂದಿಗಳ ಜೀವಮಾನದ ಅಧ್ಯಯನ, ಅನುಭವ ಹಾಗೂ ತ್ಯಾಗಗಳಿವೆ.

ನಾವು ಈ ಎಲ್ಲ ಪ್ರತಿಭೆಗಳ ಹೆಗಲನ್ನೇರಿ ನಿಂತಿದ್ದೇವೆ. ಜಾತ್ರೆಯಲ್ಲಿ ನಾವೆಲ್ಲರೂ ನಮ್ಮ ಅಪ್ಪಂದಿರ ಹೆಗಲನ್ನೇರಿ ತೇರಿನಲ್ಲಿರುವ ದೇವರನ್ನು ನೋಡಿ ಆನಂದಿಸಿದ ಹಾಗೆ, ಈ ಹಿಂದೆ ವೈದ್ಯರು ಗಳಿಸಿದ ಜ್ಞಾನರಾಶಿಯ ಹೆಗಲನ್ನೇರಿ ನಾವು ಅಸಾಧ್ಯವಾದದನ್ನು ಸಾಧ್ಯವಾಗಿಸುತ್ತಿದ್ದೇವೆ. ಪ್ರಾಚೀನ ಶಿಲಾಯುಗದಲ್ಲಿ (ಪೇಲಿಯೋ ಲಿಥಿಕ್) ನಮ್ಮ ಪೂರ್ವಜರ ಜೀವಮಾನವು ಸುಮಾರು 33 ವರ್ಷಗಳಾಗಿದ್ದವು. ಆದರೆ ಇಂದಿನ ನಮ್ಮ ಜೀವಮಾನದ ಸರಾಸರಿ ಅವಧಿಯು 72.2 ವರ್ಷ ಗಳಾಗಿವೆ. ಈ ಹೆಚ್ಚಳಕ್ಕೆ ಹಲವು ಕಾರಣಗಳಿದ್ದರೂ ಸಹ, ಅವುಗಳಲ್ಲಿ ವೈದ್ಯಕೀಯ ವಿಜ್ಞಾನದ ಕೊಡುಗೆ ಪ್ರಮುಖವಾದದ್ದು ಎನ್ನುವುದರಲ್ಲಿ ಎರಡನೆಯ ಮಾತಿಲ್ಲ.

ಹೆಗಲೇರಿ: ಇಂದು ನಾವು ನಮ್ಮ ಪೂರ್ವಸೂರಿಗಳ ಹೆಗಲೇರಿ ಒಮ್ಮೆ ಪಕ್ಷಿನೋಟವನ್ನು ಹರಿಸಿದರೆ, ಅವರು ನಡೆದು ಬಂದ ದಾರಿಯು ನಿಚ್ಚಳವಾಗಿ ಕಾಣುತ್ತದೆ. ಅವುಗಳಲ್ಲಿ ಹಲವು ಮೈಲಿಗಲ್ಲುಗಳನ್ನು ನಾವು ನೋಡಬಹುದು. ಮನುಷ್ಯನು ಚಂದ್ರಗ್ರಹದ ಮೇಲೆ ಪದಾರ್ಪಣೆ ಮಾಡಿದ್ದು ತಂತ್ರಜ್ಞಾನ ಕ್ಷೇತ್ರದ ಸಾಟಿಯಿಲ್ಲದ ಅದ್ಭುತ ದಾಖಲೆ!

ವೈದ್ಯಕೀಯ ವಿಜ್ಞಾನದಲ್ಲಿ ಅದಕ್ಕೆ ಸರಿಸಮನಾದ ದಾಖಲೆಯೆಂದರೆ ಮಾನವ ತಳಿವಿನ್ಯಾಸ ಯೋಜನೆ! ಆದರೆ ಶ್ರೀಸಾಮಾನ್ಯ ದೈನಂದಿನ ದೃಷ್ಟಿಯಲ್ಲಿ ಆಧುನಿಕ ವೈದ್ಯಕೀಯ ವಿಜ್ಞಾನದ ಬಹು ದೊಡ್ಡ ಸಾಧನೆಯೆಂದರೆ ಅರಿವಳಿಕೆ! ನೋವನ್ನು ನಿವಾರಿಸುವ ಸಾಮರ್ಥ್ಯ! ಅರಿವಳಿಕೆಯನ್ನು ನೀಡಿ ಒಬ್ಬರ ಹೃದಯವನ್ನು ಛೇದಿಸಿ ಮತ್ತೊಬ್ಬರಿಗೆ ಬದಲಿ ಜೋಡಿಸಲು ಸಾಧ್ಯವಾಗಿದೆ ಎಂದರೆ ನಂಬಲು ಕಷ್ಟ.

ಆದರೆ ಅಂತಹ ಬದಲಿಜೋಡಣೆಗಳು ಪ್ರತಿದಿನ ಜಗತ್ತಿನ ಎಲ್ಲೆಡೆ ನಡೆಯುತ್ತಿವೆ. ಎರಡನೆಯದು ಅದೃಶ್ಯ ಲೋಕದ ಅಗೋಚರ ಜೀವಿಗಳ ಆವಿಷ್ಕಾರ! ನಮ್ಮ ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಗಳು ಸಾವು ನೋವನ್ನು ಉಂಟುಮಾಡುತ್ತವೆ ಎನ್ನುವ ಸುದ್ದಿಯೇ ರೋಚಕವಾದದ್ದು. ಈ ಅದ್ಭುತ ಲೋಕದ ಅನಾವರಣ ವಾಗುತ್ತಿರುವಂತೆಯೇ, ಅವುಗಳ ಜೀವನಚರಿತ್ರೆಯು ಸ್ಪಷ್ಟವಾಗುತ್ತಿರುವಂತೆಯೇ ಅವುಗಳನ್ನು ನಿಯಂತ್ರಿಸಲು ಹಾಗೂ ನಿಗ್ರಹಿಸಲು ಹೊಸ ಹೊಸ ತಂತ್ರಗಳನ್ನು ರೂಪಿಸಿದರು.

ಅಂತಹ ತಂತ್ರಗಳಲ್ಲಿ ಅತ್ಯಂತ ಪ್ರಧಾನವಾದದ್ದು, ಕೈಗಳನ್ನು ತೊಳೆದರೆ ಸೂಕ್ಷ್ಮಜೀವಿಗಳು ನಾಶವಾಗುತ್ತವೆ ಎನ್ನುವ ತಿಳಿವು. ಇದನ್ನು ಪುರಾವೆ ಸಮೇತ
ತಿಳಿಸಿಕೊಟ್ಟ ಇಗ್ನಜ್ ಸೆಮ್ಮೆಲ್‌ವೀಸ್‌ನಿಗೆ ಇಡೀ ಮನುಕುಲವೇ ಋಣಿಯಾಗಿದೆ. ಜೋಸೆಫ್ ಲಿಸ್ಟರ್ ಪೂತಿನಾಶಕ ದ್ರಾವಣಗಳನ್ನು ಬಳಸಿ ರೋಗಜನಕ
ಗಳನ್ನು ಸುಲುಭವಾಗಿ ನಿಗ್ರಹಿಸುವ ತಂತ್ರವನ್ನು ತಿಳಿಸಿಕೊಟ್ಟ ಕಾರಣ, ಇಂದು ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗುತ್ತಿವೆ.

ಮನುಷ್ಯರಲ್ಲಿ ಬರುವ ಸೋಂಕು ರೋಗಗಳು ಪಿಡುಗಿನ ಸ್ವರೂಪವನ್ನು ತಳೆದು ಊರಿಗೆ ಊರನ್ನೇ ನಾಶ ಮಾಡುತ್ತಿದ್ದ ಕಾಲದಲ್ಲಿ ಪ್ರತಿ ಜೈವಿಕಗಳೆಂಬ ಅದ್ಭುತ ಬ್ರಹ್ಮಾಸವನ್ನು ವೈದ್ಯರಿಗೆ ನೀಡಿದ ಅಲೆಗ್ಸಾಂಡರ್ ಫ್ಲೆಮಿಂಗ್! ಅವು ಇಂದಿಗೂ ನಮ್ಮನ್ನು ಕಾಪಾಡುತ್ತಿವೆ. ನಾನಾ ಸೋಂಕು ರೋಗಗಳನ್ನು ಉಂಟು ಮಾಡುವ ಈ ರೋಗಜನಕಗಳನ್ನು ನಿಗ್ರಹಿಸುವ ಸಾಮರ್ಥ್ಯವನ್ನು ನಮ್ಮ ಶರೀರಕ್ಕೆ ಲಸಿಕೆಗಳ ಮೂಲಕ ನೀಡುವ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರಯೋಗಿಸಿದ
ವನು ಎಡ್ವರ್ಡ್ ಜೆನರ್!

ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂದರೆ, ಸಿಡುಬನ್ನು ಉಂಟು ಮಾಡುವ ವೇರಿಯೋಲ ವೈರಸ್ಸನ್ನು ಈ ಭೂಮಿಯಿಂದಲೇ ನಿರ್ನಾಮ ಮಾಡಲು ಸಾಧ್ಯ ವಾಗಿದೆ! ಅದರ ಜತೆಯಲ್ಲಿ ಜಾನುವಾರುಗಳಲ್ಲಿ ರಿಂಡರ್‌ಪೆಸ್ಟ್ ಸೋಂಕನ್ನು ಉಂಟುಮಾಡುವ ವೈರಸ್ಸನ್ನು, ಪೋಲಿಯೋಮಯಲೈಟಿಸ್ ಉಂಟು ಮಾಡುವ ಪೋಲಿಯೋ ವೈರಸ್ಸನ್ನು, ಯಾಸ್ ಕಾಯಿಲೆಗೆ ಕಾರಣವಾಗುವ ಟ್ರಿಪೊನೀಮ ಪ್ಯಾಲಿಡಮ್ ಪೆರ್ಟೆನ್ಯೂ ಬ್ಯಾಕ್ಟೀರಿಯವನ್ನು, ನಾರುಹುಣ್ಣಿಗೆ ಕಾರಣವಾಗುವ ಡ್ರಕಂಕ್ಯುಲೋಸಿಸ್ ಮೆಡಿನೆನ್ಸಿಸ್ ಹುಳುವನ್ನು ನಾಶಮಾಡಿದ್ದೇವೆ.

ಮಾನವನ ದೇಹ ರಚನೆಯಲ್ಲಿ ಪಾಲುಗೊಳ್ಳುವ ವಿವಿಧ ಅಂಗಗಳು, ಅಂಗವ್ಯವಸ್ಥೆಗಳು, ಅವುಗಳ ಕಾರ್ಯವಿಧಾನದ ಅರಿವು ನಮ್ಮ ಪೂರ್ವಜರ ಮತ್ತೊಂದು ಪ್ರಮುಖ ಸಾಧನೆ. ಅಂಗಗಳು ಆರೋಗ್ಯಕರವಾಗಿ ಕೆಲಸವನ್ನು ನಿರ್ವಹಿಸುವಾಗ, ಅವುಗಳ ಲಕ್ಷಣಗಳು ಹೇಗಿರುತ್ತವೆ ಎನ್ನುವುದನ್ನು ತಿಳಿದರು. ಹಾಗೆಯೇ ನಾನಾ ರೀತಿಯ ಅನಾರೋಗ್ಯಕ್ಕೆ ತುತ್ತಾದಾಗ ಸಹಜ ಲಕ್ಷಣಗಳಲ್ಲಿ ಭಿನ್ನತೆಯು ಕಂಡು ಬರುವುದನ್ನು ಅಧ್ಯಯನ ಮಾಡಿದರು. ಆ ವಿಭಿನ್ನ ಲಕ್ಷಣಗಳನ್ನು ನಿಖರವಾಗಿ ಅಳೆಯಲು ಹಲವು ವೈದ್ಯಕೀಯ ಸಲಕರಣೆಗಳನ್ನು ರೂಪಿಸಿದರು.

ಅಂತಹ ಸಲಕರಣೆಗಳಲ್ಲಿ ಜ್ವರವನ್ನು ಅಳೆಯುವ ಉಷ್ಣತಾಮಾಪಕ, ರಕ್ತದೊತ್ತಡವನ್ನು ಅಳೆಯುವ ರಕ್ತದೊತ್ತಡ ಮಾಪಕ, ಹೃದಯ, ಶ್ವಾಸಕೋಶ ಹಾಗೂ ಉದರದ ನಾನಾ ಲಕ್ಷಣಗಳನ್ನು ನಿಖರವಾಗಿ ತಿಳಿಯಲು ನೆರವಾಗುವ ಸ್ಟೆಥೋಸ್ಕೋಪ್-ಇತ್ಯಾದಿಗಳು ಮುಖ್ಯವಾದವು. ವೈದ್ಯರಿಗೆ ಮೂರನೆಯ ಕಣ್ಣನ್ನು ನೀಡಿದ ಎಕ್ಸ್-ರೇಯನ್ನು ಕಂಡುಹಿಡಿದ ವಿಲ್‌ಹೆಲ್ಮ್ ಕಾನ್ರಾಡ್ ರಾಂಟ್ಜನ್. ಇಂದು ಸಿಟಿ ಸ್ಕ್ಯಾನ್, ಎಂಆರ್‌ಐ, ಪೆಟ್ ಸ್ಕ್ಯಾನ್ ಮುಂತಾದ ಅಧುನಿಕ ತಪಾಸಣಾ
ಮಾಧ್ಯಮಗಳು ದೊರೆತಿರುವುದು ನಮ್ಮ ಹಿರಿಯರು ಮಾಡಿದ ನಿರಂತರ ಸಂಶೋಧನೆಗಳ ಫಲ. ತೆಂಗಿನ ಮರವನ್ನು ಅವರು ನೆಟ್ಟರು. ಇವತ್ತು ನಾವು ಎಳ ನೀರನ್ನು ಕುಡಿಯುತ್ತಿದ್ದೇವೆ.

ಶಸ್ತ್ರಚಿಕಿತ್ಸಾ ಕ್ಷೇತ್ರದಲ್ಲಿ ನಡೆದ ಅದ್ಭುತ ಸಂಶೋಧನೆಗಳು ಇಂದು ಅಂಗಾಂಗಗಳ ಬದಲಿ ಜೋಡಣೆಯ ಕನಸನ್ನು ನನಸಾಗಿಸಿವೆ. ಶಸ್ತ್ರಚಿಕಿತ್ಸೆಯನ್ನು ನಡೆಸುವುದಕ್ಕೆ ವಿವಿಧ ಉಪಕರಣಗಳನ್ನು ರೂಪಿಸಿದರು. ರಕ್ತಸ್ರಾವವನ್ನು ನಿಯಂತ್ರಿಸಲು ಕಲಿತರು. ಹರಿದ ಚರ್ಮಕ್ಕೆ ಹೊಲಿಗೆಯನ್ನು ಹಾಕಿದರು. ನಷ್ಟವಾದ ರಕ್ತವನ್ನು ಸರಿದೂಗಿಸಲು ರಕ್ತಪೂರಣವನ್ನು (ಬ್ಲಡ್ ಟ್ರಾನ್ಸ್ ಫ್ಯಾಶನ್) ಮಾಡಿ ದರು. ಮೈಕ್ರೋಸರ್ಜರಿಯನ್ನು ರೂಪಿಸಿದಾಗ ಅಂಗಾಂಗಗಳ ಬದಲಿಜೋಡನೆಯ ಕನಸು ನನಸಾಯಿತು.

ಮನಸ್ಸು: ಮನುಷ್ಯನಿಗೆ ಮನುಷ್ಯ ಎಂಬ ಹೆಸರು ಬರಲು ಕಾರಣ ಅವನಲ್ಲಿರುವ ಮನಸ್ಸು. ಮನಸ್ಸು ಮನುಷ್ಯನನ್ನು ಸುಖಿಯನ್ನಾಗಿ ಮಾಡಬಲ್ಲುದು, ದುಃಖಿ ಯನ್ನಾಗಿ ಮಾಡಬಲ್ಲದು, ತೀವ್ರ ಅನಾರೋಗ್ಯಕ್ಕೆ ಈಡು ಮಾಡಬಲ್ಲದು. ಸ್ವಹತ್ಯೆಗೂ ಪ್ರಚೋದಿಸಬಲ್ಲದು. ಮನಸ್ಸಿನ ನಿರಂತರ ಅಧ್ಯಯನದ ಫಲವಾಗಿ, ಮನೋರೋಗಕ್ಕೆ ಮದ್ದಿಲ್ಲ ಎನ್ನುವ ಗಾದೆಯೇ ಸುಳ್ಳಾಗಿದೆ. ವಿವಿಧ ಔಷಧಗಳ ಸೇವನೆಯ ಮೂಲಕ, ಬಹುಪಾಲು ಮನೋರೋಗಗಳನ್ನು ಗುಣಪಡಿಸಲು ಅಥವಾ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗಿದೆ. ಇನ್ನು ಔಷಧಗಳ ಅದ್ಭುತ ಲೋಕ! ರಕ್ತದ ಏರೊತ್ತಡದಿಂದ, ಮಧುಮೇಹದಿಂದ, ಹೃದ್ರೋಗಗಳಿಂದ ನರಳುತ್ತಿರುವವರು ಎಲ್ಲರ ಹಾಗೆ ತಮ್ಮ ಸಹಜ ಆಯಸ್ಸನ್ನು ಅನುಭವಿಸುತ್ತಿರುವರು ಎಂದರೆ, ಅದಕ್ಕೆ ಔಷಧಗಳ ಕಾಣಿಕೆಯು ಬಹಳ ದೊಡ್ಡದು. ಒಂದೊಂದು
ಔಷಧವನ್ನು ಕಂಡು ಹಿಡಿದ ಕಥೆಯು ನವಿರೇಳಿಸುವಂತಹದ್ದು.

ಮಾನವ ತಳಿ ಸಂಯೋಜನೆಯ ಅಧ್ಯಯನದ ಫಲವಾಗಿ ಮುಂದಿನ ದಿನಗಳಲ್ಲಿ ವ್ಯಕ್ತಿಗತ ಚಿಕಿತ್ಸೆಯು ದೊರೆಯಲಿದೆ. ಮುಂದಿನ ದಿನಗಳಲ್ಲಿ ಜನ್ಮಕುಂಡಲಿಯನ್ನು ಬರೆಸುವ ಬದಲು ವಂಶವಾಹಿ ಕುಂಡಲಿಯನ್ನು ಬರೆಸಲಿದ್ದೇವೆ. ಹುಟ್ಟಿದ ಮಗುವು ತನ್ನ ಜೀವಮಾನದಲ್ಲಿ ಯಾವ ಯಾವ ಅನಾರೋಗ್ಯಗಳಿಗೆ ತುತ್ತಾಗುವ ಸಾಧ್ಯತೆಗಳಿವೆ ಎನ್ನುವುದನ್ನು ಮುಂಚಿತವಾಗಿ ತಿಳಿದು, ಅವುಗಳನ್ನು ನಿಗ್ರಹಿಸಲು ಸೂಕ್ತ ಔಷಧಗಳನ್ನು ಆ ಮಗುವಿಗಾಗಿಯೇ ಸಿದ್ಧಪಡಿಸಲು ಸಾಧ್ಯವಾಗಲಿದೆ.
ವೃದ್ಧಾಪ್ಯವನ್ನು ನಿರಂತರವಾಗಿ ಮುಂದೂಡುವ ಇಲ್ಲವೇ ಸಾವನ್ನು ಗೆಲ್ಲುವ ಕನಸು ನನಸಾಗಬಲ್ಲದೇ ಎನ್ನುವುದನ್ನು ಕಾಲ ಮಾತ್ರ ಹೇಳಬಲ್ಲದು. ಈ ಎಲ್ಲ
ಸಾಧನೆಗಳಲ್ಲಿ ಹಿನ್ನೆಲೆಯಲ್ಲಿ ಕೋವಿಡ್-19ನಂತಹ ವಿಶ್ವಾಮಿತ್ರ ಸೃಷ್ಟಿಗಳ ಭೀತಿ ನಮ್ಮನ್ನು ಕಾಡುತ್ತಿದೆ.

ಮುಂದಿನ ದಿನಗಳಲ್ಲಿಯೂ ಕಾಡಲಿದೆ! ವೈದ್ಯಕೀಯ ವಿಜ್ಞಾನವು ಬೆಳೆದು ಬಂದ ದಾರಿಯಲ್ಲಿ ಸ್ಥೂಲವಾಗಿ ವೀಕ್ಷಿಸುತ್ತಾ, ಪ್ರಮುಖ ಮೈಲಿಗಲ್ಲುಗಳನ್ನು ಸಂಕ್ಷಿಪ್ತವಾಗಿ ತಿಳಿಯುವ ಹೆಬ್ಬಯಕೆಯ ಫಲವಾಗಿ ಈ ಪೂರ್ವಸೂರಿಗಳ ಹೆಗಲೇರಿ… ಎನ್ನುವ ಲೇಖನಮಾಲೆಯನ್ನು ಆರಂಭಿಸುತ್ತಿದ್ದೇವೆ.

Leave a Reply

Your email address will not be published. Required fields are marked *