Tuesday, 27th September 2022

ಪೋಷಣೆಯ ದಾರಿದೀಪ ’ಸಮಗ್ರ ಪೋಷಣಾ ವಿಜ್ಞಾನ’

ಆಹಾರ – ವಿಹಾರ

ಡಾ.ಶ್ರೀದೇವಿ ಹೆಗಡೆ

ಪೌಷ್ಟಿಕತೆಯ ವಿಷಯದಲ್ಲಿ ಭಾರತ 2 ರೀತಿಯ ತೊಂದರೆ ಅನುಭವಿಸುತ್ತಿದೆ. ಪೌಷ್ಟಿಕಾಂಶಗಳ ಕೊರತೆ ಒಂದೆಡೆಯಾದರೆ, ಅತಿಯಾದ ಪೌಷ್ಟಿಕತೆ, ಅಥವಾ ಕುಪೌಷ್ಟಿಕತೆ ಇನ್ನೊಂದು ದೊಡ್ಡಸಮಸ್ಯೆ. ಸ್ವಾತಂತ್ರ್ಯಾನಂತರದ ಭಾರತದಲ್ಲಿ ಪೋಷಕಾಂಶ ಕೊರತೆಯ ನಿವಾರಣೆಗೆ ಹಲವು ಯೋಜನೆ-ಅಭಿಯಾನಗಳನ್ನು ಹಮ್ಮಿಕೊಂಡರೂ, ಶೇ.೫೦ಕ್ಕೂ ಹೆಚ್ಚು ಜನ ಪೋಷಕಾಂಶಗಳ ಕೊರತೆ ಹಾಗೂ ಕುಪೌಷ್ಟಿಕತೆಯ ಬಿಗಿಮುಷ್ಟಿಯಲ್ಲಿ ಬಳಲುತ್ತಿದ್ದಾರೆ.

ನಾವು ಸೇವಿಸುವ ಆಹಾರವೇ ಈ ಎಲ್ಲ ತೊಂದರೆಗಳ ಮೂಲ. ಇಂದಿನ ಪೋಷಣಾ ವಿಜ್ಞಾನದ ಸಿದ್ಧಾಂತಗಳನ್ನು ಗಮನಿಸಿದರೆ, ಆಹಾರದ ರಸಾಯನಶಾಸ್ತ್ರವು ದೇಹದ ಜೀವರಸಾಯನ ಶಾಸ್ತ್ರಕ್ಕೆ ಹೊಂದಾಣಿಕೆ ಆಗಬೇಕು ಎಂಬುದು ಈ ಸಿದ್ಧಾಂತಗಳ
ತಳಹದಿಯಾಗಿರುವುದು ಅರಿವಾಗುತ್ತದೆ. ಬಹುತೇಕವಾಗಿ ಇಲ್ಲಿ, ಏನು ಆಹಾರ ಸೇವಿಸಬೇಕು ಮತ್ತು ಎಷ್ಟು ಸೇವಿಸಬೇಕು ಎಂಬುದಕ್ಕೆ ಮಹತ್ವ ನೀಡಲಾಗಿದೆ. ಶಿಫಾರಸು ಮಾಡಲಾದ ದೈನಂದಿನ ಆಹಾರದ ಅನುಪಾತ ಹಾಗೂ ಅಂದಾಜು ಸರಾಸರಿ ಅವಶ್ಯಕತೆ
ಮುಂತಾದವು ನಮ್ಮ ಆಹಾರದಲ್ಲಿ ಇರಬೇಕಾದ ಪೋಷಕಾಂಶಗಳ ಪ್ರಮಾಣವನ್ನು ತಿಳಿಸುತ್ತವೆ.

ಈ ಎಲ್ಲ ಮಾನದಂಡಗಳನ್ನು ಅನುಸರಿಸಿ ಸ್ಥೂಲ ಮತ್ತು ಸೂಕ್ಷ್ಮ ಪೋಷಕಾಂಶಗಳ ಪ್ರಮಾಣಗಳ ಶಿಫಾರಸು, ಪ್ರಮಾಣದ ಪೂರೈಕೆಗೆ ಅವಶ್ಯಕವಾದಂಥ ಆಹಾರ ಪದಾರ್ಥ ಗಳ ಆಯ್ಕೆ ಹಾಗೂ ಪೂರಕ ಪೋಷಕಾಂಶಗಳ ಶಿಫಾರಸು ಮಾಡಬಹುದಾಗಿದೆ. ಆದರೂ ಪೌಷ್ಟಿಕತೆಯ ಸಮಸ್ಯೆಗಳನ್ನು ಸಂಪೂರ್ಣ ನಿವಾರಿಸುವಲ್ಲಿ ಇವು ವಿಫಲವಾಗಿವೆ.

ವಿಶ್ವದ ಅನೇಕ ತಜ್ಞರು ಈ ವಿಚಾರದಲ್ಲಿ ಅವಲೋಕಿಸುತ್ತಿದ್ದಾರೆ ಮತ್ತು ಹೊಸ ಸಿದ್ಧಾಂತಗಳಿಗಾಗಿ ಸಂಶೋಧಿಸುತ್ತಿದ್ದಾರೆ. ‘ಕೇವಲ
ಜೀವರಸಾಯನಶಾಸ್ತ್ರ ಆಧರಿತ ಸಿದ್ಧಾಂತವು ಪೋಷಣೆಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಅಸಮರ್ಥ ವಾಗಿದೆ’ ಎಂಬುದು ಪೋಷಣಾ ವಿಜ್ಞಾನದ ತಜ್ಞರ ಅಭಿಪ್ರಾಯ. ಏಕೆಂದರೆ ಈ ಸಿದ್ಧಾಂತವು ಸಾಮೂಹಿಕ ಅಧ್ಯಯನದ ಸರಾಸರಿ ಗಳನ್ನು ಆಧರಿಸಿದೆ.

ಆದರೆ ಪೋಷಕಾಂಶಗಳ ಅವಶ್ಯಕತೆಯು ವ್ಯಕ್ತಿಯಿಂದ ವ್ಯಕ್ತಿಗೆ ಅವರ ಶರೀರಕ್ಕನುಗುಣವಾಗಿ ಭಿನ್ನವಾಗಿರುತ್ತದೆ. ಈ ನಿಟ್ಟಿನಲ್ಲಿ ‘ವ್ಯಕ್ತಿಗತ ಪೋಷಣೆ’ ಎಂಬ ಸಿದ್ಧಾಂತದೆಡೆಗೆ ವಿಷಯತಜ್ಞರು ಹೆಚ್ಚು ಒಲವು ತೋರಿಸುತ್ತಿದ್ದಾರೆ. ಇದನ್ನಾಧರಿಸಿ ಹೊಸ ಮಾನ ದಂಡಗಳ ರಚನೆ ಮತ್ತು ಸಂಯೋಜನೆಯ ಕುರಿತು ಅಧ್ಯಯನ ನಡೆಸಲಾಗುತ್ತಿದೆ.

ಆಹಾರವನ್ನು ದೇವರೆಂದು ಪೂಜಿಸುವ, ಆಹಾರವು ಪ್ರಥಮ ಚಿಕಿತ್ಸೆ ಎಂದು ನಂಬಿರುವ ಆಯುರ್ವೇದವು, ವ್ಯಕ್ತಿಗತ ಪೋಷಣೆ
ಸಂಬಂಧಿತ ವಿಷಯಗಳನ್ನು ವರ್ಣಿಸಿದೆ. ಏನು ಆಹಾರ ಸೇವಿಸಬೇಕು, ಎಷ್ಟು ಸೇವಿಸಬೇಕು, ಯಾವಾಗ ಮತ್ತು ಹೇಗೆ ಸೇವಿಸ
ಬೇಕು ಎಂಬುದಕ್ಕೆ ಆಯುರ್ವೇದದಲ್ಲಿ ಆದ್ಯತೆ ನೀಡಲಾಗಿದೆ. ಅದಕ್ಕಾಗಿ ವ್ಯಕ್ತಿಯ ಶಾರೀರಿಕ ರಚನೆ ಮತ್ತು ಆಹಾರದ ಗುಣ
ಧರ್ಮದ ತಿಳಿವಳಿಕೆ ಅತ್ಯಗತ್ಯ. ಆದ್ದರಿಂದ ಭಾರ, ಹಗುರ, ಸ್ಥೂಲ, ಸೂಕ್ಷ್ಮ ಮುಂತಾದ 20 ಗುಣಗಳನ್ನು ಆಧರಿಸಿ ದೇಹವನ್ನು ವಾತ, ಪಿತ್ತ ಹಾಗೂ ಕಫ ಪ್ರಕೃತಿ ಎಂದು ವಿಂಗಡಿಸಲಾಗಿದೆ. ಈ 20 ಗುಣಗಳು ಆಹಾರ ವಸ್ತುಗಳಲ್ಲೂ ಇರುತ್ತವೆ. ಬೇರೆ ಬೇರೆ ಆಹಾರ ಪದಾರ್ಥ ಗಳು ಬೇರೆ ಬೇರೆ ಗುಣಗಳನ್ನು ಹೊಂದಿವೆ ಎನ್ನುತ್ತದೆ ಆಯುರ್ವೇದ. ಆಹಾರದ ಸಂಪೂರ್ಣ ಲಾಭ ಪಡೆಯಲು, ಆಹಾರ ಸೇವನೆಯ ವೇಳೆ ಈ ಮಹತ್ವದ ಸೂಚನೆಗಳನ್ನು ಪಾಲಿಸಬೇಕು.

೧) ಆಹಾರ ಪ್ರಕೃತಿ: ಪ್ರತಿ ಆಹಾರವಸ್ತುವು ಪ್ರಾಕೃತಿಕವಾಗಿ ಭಾರ, ಹಗುರ, ಉಷ್ಣ, ಶೀತ ಮುಂತಾದ 20 ಬೇರೆ ಬೇರೆ ಗುಣಧರ್ಮ ಗಳನ್ನು ಹೊಂದಿರುತ್ತದೆ. ಉದಾಹರಣೆಗೆ, ಉದ್ದಿನಬೇಳೆಗೆ ಭಾರಗುಣವಿದ್ದು, ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಆದರೆ ಹೆಸರುಬೇಳೆ ಹಗುರವಾಗಿದ್ದು ಬೇಗ ಜೀರ್ಣವಾಗುತ್ತದೆ. ಆದ್ದರಿಂದ, ತೀವ್ರ ಜೀರ್ಣಶಕ್ತಿಯುಳ್ಳವರು ಉದ್ದಿನ ಬೇಳೆಯನ್ನೂ, ಕಡಿಮೆ ಜೀರ್ಣಶಕ್ತಿಯುಳ್ಳವರು ಹೆಸರು ಬೇಳೆಯನ್ನೂ ತಿನ್ನಬೇಕು. ಹೀಗೆ, ಆಹಾರದ ಗುಣಗಳ ತಿಳಿವಳಿಕೆಯು ಜೀರ್ಣಶಕ್ತಿಗೆ ಅನುಗುಣವಾದ ಆಹಾರವಸ್ತುಗಳ ಆಯ್ಕೆಗೆ ನೆರವಾಗುವುದರೊಂದಿಗೆ ಚಯಾಪಚಯ ಸಂಬಂಧಿತ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ.

೨) ಕರಣ/ಸಂಸ್ಕರಣ: ಅನೇಕ ಆಹಾರ ಪದಾರ್ಥಗಳು ತಮ್ಮ ಮೂಲಸ್ಥಿತಿಯಲ್ಲಿ ಸೇವನೆಗೆ ಸೂಕ್ತವಾಗಿರುವುದಿಲ್ಲ. ಇಂಥವನ್ನು
ವಿಭಿನ್ನ, ವ್ಯವಸ್ಥಿತ ಸಂಸ್ಕರಣೆಗೆ ಒಳಪಡಿಸಿ ಸೇವನೆಗೆ ಯೋಗ್ಯವಾಗಿಸಬೇಕಾಗುತ್ತದೆ. ಆಹಾರದ ಅವಸ್ಥೆ ಮತ್ತು ಗುಣಲಕ್ಷಣ ಗಳನ್ನು ಸಂಸ್ಕರಣಗಳು ಬದಲಿಸುತ್ತವೆ. ಉದಾಹರಣೆಗೆ, ಅಕ್ಕಿಯನ್ನು ಹಸಿಯಾಗಿ ತಿನ್ನಲಾಗದು, ನೀರಿನಲ್ಲಿ ಬೇಯಿಸಿಯೇ ತಿನ್ನ ಬೇಕು. ಅಲ್ಲದೆ ಬೇರೆ ಬೇರೆ ಸಂಸ್ಕಾರಗಳು ಆಹಾರದ ಗುಣಗಳನ್ನು ಬೇರೆ ಬೇರೆ ರೀತಿಯಲ್ಲಿ ಬದಲಿಸುತ್ತವೆ. ಬೇಯಿಸಿದ ಅಕ್ಕಿಯ ಅನ್ನವು, ಹುರಿದ ಅಕ್ಕಿಯ ಹರಳುಗಳ ತುಲನೆಯಲ್ಲಿ ಭಾರವಾಗಿರುತ್ತದೆ.

೩) ಸಂಯೋಗ: ಎರಡು ಅಥವಾ ಹೆಚ್ಚಿನ ವಸ್ತುಗಳನ್ನು ಮಿಶ್ರಣ ಮಾಡಿದಾಗ, ಸಂಯೋಜಿತ ಆಹಾರದ ಗುಣಗಳು ಮಿಶ್ರಣಕ್ಕೆ
ಒಳಗಾದ ಪದಾರ್ಥಗಳ ಗುಣಗಳಿಗಿಂತ ವಿಭಿನ್ನವಾಗಿರುತ್ತವೆ. ಹಲವುಬಾರಿ ಅವು ಮಿಶ್ರಣ ಮಾಡಿದ ಆಹಾರ ಪದಾರ್ಥಗಳ
ಒಟ್ಟುಮೊತ್ತವಾದರೆ, ಇನ್ನು ಕೆಲವು ಬಾರಿ ಅವು ಸಂಪೂರ್ಣ ಹೊಸದಾಗಿ ಉತ್ಪತ್ತಿಯಾದ ಗುಣಗಳಾಗಿರುತ್ತವೆ. ಈ ಗುಣಗಳು ಶರೀರಕ್ಕೆ ಲಾಭದಾಯಕವಾಗಿಯೂ ಇಲ್ಲವೇ ಅಪಾಯಕಾರಿಯಾಗಿಯೂ ಇರಬಹುದು. ಉದಾಹರಣೆಗೆ, ಬೆಲ್ಲ ಮತ್ತು ಅಕ್ಕಿ ಯನ್ನು ಬೇಯಿಸಿದಾಗ ಶರೀರಕ್ಕೆ ಲಾಭದಾಯಕವಾದ ಪಾಯಸವಾದರೆ, ಸಮ ಪ್ರಮಾಣದಲ್ಲಿ ಬೆರೆಸಿದ ಜೇನುತುಪ್ಪ ಮತ್ತು ತುಪ್ಪವು ದೇಹಕ್ಕೆ ವಿಷವಾಗುತ್ತದೆ. ಆದ್ದರಿಂದ ಆಹಾರ ವಸ್ತುಗಳ ಸಂಯೋಗದ ಉತ್ತಮ ತಿಳಿವಳಿಕೆ ಅತ್ಯಗತ್ಯ.

೪) ರಾಶಿ: ರಾಶಿಯೆಂದರೆ ಆಹಾರ ಪ್ರಮಾಣ. ಪ್ರಮಾಣಬದ್ಧ ಆಹಾರವು ಸಮಗ್ರ ಶರೀರದ ಸೌಖ್ಯಕ್ಕೆ ಸಂಬಂಧಿಸಿ ಪ್ರಮುಖಪಾತ್ರ
ವಹಿಸುತ್ತದೆ. ಆಹಾರ ಪ್ರಮಾಣವು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುವುದರ ಜತೆಗೆ, ನಿಶ್ಚಿತ ವ್ಯಕ್ತಿಗೆ ನಿರ್ದಿಷ್ಟವಾಗಿರುತ್ತದೆ. ಸೂಚಿತ
ಪ್ರಮಾಣಕ್ಕಿಂತ ಅತಿಯಾದ ಅಥವಾ ಕಡಿಮೆಯಾದ ಸೇವನೆಯಿಂದ ಪೋಷಣೆಯ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ.

ಕ್ರೋಢೀಕೃತ ಆಹಾರದ ಪ್ರಮಾಣ ಹಾಗೂ ಪ್ರತಿ ಆಹಾರವಸ್ತುವಿನ ಪ್ರಮಾಣದ ಅರಿವು, ನಿರ್ದಿಷ್ಟ ಅವಧಿಯಲ್ಲಿ ವ್ಯಕ್ತಿ ಯಾವ
ಬಗೆಯ ಆಹಾರ ಪದಾರ್ಥಗಳನ್ನು ಮತ್ತು ಎಷ್ಟು ಭಾಗವನ್ನು ಸೇವಿಸಬೇಕು ಎಂಬುದರ ಜ್ಞಾನವನ್ನು ನೀಡುತ್ತದೆ. ಈ ಅರಿವು
ಒಳ್ಳೆಯ ಪೋಷಣೆಯುಕ್ತ ಆಹಾರ ಸೇವನೆಯ ಗುಟ್ಟಾಗಿದೆ.

೫) ದೇಶ: ಆಹಾರ ಪದಾರ್ಥಗಳನ್ನು ಬೆಳೆಯುವ ಸ್ಥಳ, ವಿಧಾನ (ನೈಸರ್ಗಿಕ ಅಥವಾ ಕೃಷಿಪದ್ಧತಿ) ಎಂಬುದು ಅವುಗಳಲ್ಲಿರುವ
ಪೋಷಕಾಂಶಗಳ ಮಟ್ಟ ಹಾಗೂ ಗುಣವನ್ನು ತಿಳಿಯಲು ಸಹಕಾರಿ. ಉದಾಹರಣೆಗೆ, ಶುಷ್ಕಪ್ರದೇಶದಲ್ಲಿ ಬೆಳೆದ ಆಹಾರ ಪದಾ
ರ್ಥಗಳು ಹಗುರ ಗುಣವುಳ್ಳದ್ದಾಗಿದ್ದು ಸುಲಭವಾಗಿ ಜೀರ್ಣವಾದರೆ, ಜವಗು ಪ್ರದೇಶದವು ಭಾರವಾಗಿದ್ದು ತಡವಾಗಿ ಜೀರ್ಣ ವಾಗುತ್ತವೆ.

ಭೂಮಿ ಪ್ರದೇಶವನ್ನು 3 ಭಾಗಗಳಾಗಿ ವಿಂಗಡಿಸಲಾಗಿದೆ. ಶುಷ್ಕ ಪ್ರದೇಶವು ವಾತಕಾರಿ, ಜವಗು ಪ್ರದೇಶವು ಕ-ಕಾರಿ ಮತ್ತು ಸಾಧಾರಣ ಬಯಲು ಪ್ರದೇಶವು 3 ದೋಷವನ್ನು ಸಮಪ್ರಮಾಣದಲ್ಲಿ ಹೊಂದಿರುತ್ತದೆ. ಇಲ್ಲಿ ಬೆಳೆಯುವ ಆಹಾರ ಪದಾರ್ಥ ಗಳು ಕೂಡ ಇದೇ ಗುಣಗಳನ್ನು ಹೊಂದಿರುತ್ತವೆ. ಆದ್ದರಿಂದ, ವಾತ ಹೆಚ್ಚಿಸುವ ಶುಷ್ಕ ಪ್ರದೇಶದ ಪದಾರ್ಥಗಳನ್ನು ವಾತ ಪ್ರಕೃತಿಯ ವ್ಯಕ್ತಿಯೂ, ಕ- ಹೆಚ್ಚಿಸುವ ಜವಗು ಪ್ರದೇಶದ ಪದಾರ್ಥಗಳನ್ನು ಕ-ಪ್ರಕೃತಿಯ ವ್ಯಕ್ತಿಯೂ ಸೇವಿಸಬಾರದು.

೬) ಕಾಲ: ‘ಊಟವನ್ನು ಯಾವಾಗ ಮಾಡಬೇಕು?’ ಎಂಬ ಪ್ರಶ್ನೆಗೆ ಆಯುರ್ವೇದದಲ್ಲಿ ಮಾತ್ರ ಉತ್ತರ ಸಿಗುತ್ತದೆ. ಹಸಿವಾದಾಗ
ಮಾತ್ರವೇ ಊಟಮಾಡಬೇಕು ಎನ್ನುತ್ತದೆ ಆಯುರ್ವೇದ. ವ್ಯಕ್ತಿಯ ಜೀರ್ಣಶಕ್ತಿಗೆ ಅನುಗುಣವಾಗಿ ಆಹಾರ ಸೇವಿಸಬೇಕು
ಎಂಬುದು ಇದರ ತರ್ಕ. ಜೀರ್ಣಶಕ್ತಿಯನ್ನು ಆಯುರ್ವೇದದಲ್ಲಿ ‘ಅಗ್ನಿ’ ಎನ್ನಲಾಗಿದ್ದು, ಇದು ಜಠರಗತ ಜೀರ್ಣಶಕ್ತಿಯನ್ನೊಳ ಗೊಂಡಂತೆ ಜೀವಕೋಶಗಳಲ್ಲಾಗುವ ಚಯಾಪಚಯವನ್ನು ಬಿಂಬಿಸುತ್ತದೆ.

ಅಗ್ನಿಯ ಅವಸ್ಥೆಯನ್ನು ‘ತೀವ್ರಾಗ್ನಿ’ (ಆಧಿಕ ಜೀರ್ಣಶಕ್ತಿ), ‘ಮಂದಾಗ್ನಿ’ (ಕಡಿಮೆ ಜೀರ್ಣಶಕ್ತಿ) ಮತ್ತು ‘ಸಮಾಗ್ನಿ’ (ಸಮ
ಪ್ರಮಾಣದ ಜೀರ್ಣಶಕ್ತಿ) ಎಂದು ವಿಂಗಡಿಸಲಾಗಿದೆ. ಜೀರ್ಣಶಕ್ತಿಗೆ ತಕ್ಕಂತೆ ಆಹಾರ ಸೇವಿಸದಿದ್ದರೆ ಅದು ಅಜೀರ್ಣವಾಗಿ ನಂತರ
ಆಮವಾಗಿ (ಚಯಾಪಚಯ ತ್ಯಾಜ್ಯ) ವಾಂತಿ, ಆಲಸ್ಯ, ಜ್ವರ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತದೆ, ಬೊಜ್ಜು,
ಥೈರಾಯ್ಡ್ ಸಮಸ್ಯೆ, ರಕ್ತದೊತ್ತಡ, ಮಧುಮೇಹದಂಥ ದೀರ್ಘಕಾಲಿಕ ಚಯಾಪಚಯ ರೋಗಗಳಿಗೆ ಕಾರಣವಾಗುತ್ತದೆ.

ಆದ್ದರಿಂದ, ಯಾರು ಗಡಿಯಾರಕ್ಕೆ ಅನುಗುಣವಾಗಿ ತಿನ್ನದೆ, ಹಿಂದಿನ ಊಟ ಸಂಪೂರ್ಣ ಜೀರ್ಣವಾಗಿ ಹಸಿವಾದಾಗ ಮಾತ್ರ ಸೇವಿಸತ್ತಾರೋ ಅಂಥವರ ಪಚನ, ಚಯಾಪಚಯ, ವಿಸರ್ಜನ ಕ್ರಿಯೆಗಳು ಸಮತೋಲನದಲ್ಲಿದ್ದು ಉತ್ತಮ ಆರೋಗ್ಯ ಹೊಂದುತ್ತಾರೆ.

ಕಾಲವನ್ನು 3 ರೀತಿಯಲ್ಲಿ ವಿಂಗಡಿಸಿ ವಿಶ್ಲೇಷಿಸಲಾಗಿದೆ ದೈನಂದಿನ ಕಾಲ: ದಿನದ ಬೆಳಗಿನ ಜಾವವನ್ನು ಕ-ಕಾಲವೆಂದು,
ಮಧ್ಯಾಹ್ನವನ್ನು ಪಿತ್ತಕಾಲವೆಂದು ಮತ್ತು ಸಂಜೆಯನ್ನು ವಾತಕಾಲವೆಂದು ವಿಭಜಿಸಲಾಗಿದ್ದು, ಪ್ರತಿ ಕಾಲದಲ್ಲಿಯೂ ಆಯಾ ಕಾಲದ ದೋಷವಿರುದ್ಧವಾದ ಆಹಾರ ಸೇವಿಸಿದಾಗ ಮಾತ್ರ ದೋಷಗಳು ಸಮತೋಲನದಲ್ಲಿದ್ದು ಆರೋಗ್ಯಪಾಲನೆಯಾಗುತ್ತದೆ.

ಅದರಂತೆ ದಿನದಲ್ಲಿ 2 ಬಾರಿ ಮಾತ್ರ ಆಹಾರ ಸೇವನೆ ಉತ್ತಮ. ಮಧ್ಯರಾತ್ರಿ ಮತ್ತು ನಸುಕಿನಲ್ಲಿ ಸೇವಿಸಬಾರದು.

ಋತುಕಾಲ: ವರ್ಷದಲ್ಲಿ 6 ಋತುಗಳಿದ್ದು, ಪ್ರತಿ ಋತುಕಾಲದಲ್ಲಿಯೂ ವಾತಾವರಣದಲ್ಲಾಗುವ ಬದಲಾವಣೆ ಮನುಷ್ಯನ
ದೈಹಿಕ ದೋಷಗಳ ಅವಸ್ಥೆಯನ್ನು ಏರುಪೇರಾಗಿಸುತ್ತದೆ. ಇದಕ್ಕನುಗುಣವಾಗಿ ಜೀರ್ಣಶಕ್ತಿ ಮತ್ತು ಚಯಾಪಚಯ ಕ್ರಿಯೆಗಳಲ್ಲಿ ಬದಲಾವಣೆಗಳು ಕಂಡುಬರುವುದರಿಂದ ಋತುವಿಗೆ ಅನುಗುಣವಾಗಿ ಆಹಾರ ಸೇವಿಸಬೇಕು.

ಋತುಸಂಧಿ ಕಾಲದಲ್ಲಿ ದೈಹಿಕ ದೋಷಗಳು ಅತಿಯಾಗಿ ಅಸಮತೋಲನಗೊಂಡಿರುತ್ತವೆ. ಈ ಸಮಯದಲ್ಲಿ ದೋಷ ಹೆಚ್ಚಿಸ ದಂಥ ಆಹಾರ ಪದಾರ್ಥಗಳನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ಉದಾಹರಣೆಗೆ, ಮಳೆಗಾಲ ಮತ್ತು ಚಳಿಗಾಲದ ಋತುಸಂಧಿ ಸಮಯದಲ್ಲಿ ವಾತ ಮತ್ತು ಪಿತ್ತ ದೋಷಗಳು ಅತಿಯಾಗಿ ದೂಷಿತಗೊಂಡು ಚರ್ಮದ ಸಮಸ್ಯೆ, ಅಲರ್ಜಿ, ಗ್ಯಾಸ್ಟ್ರೈಟಿಸ್ ಮುಂತಾದ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಆದ್ದರಿಂದ ಈ ಸಮಯದಲ್ಲಿ ಮಸಾಲೆ-ಖಾರ-ಹುಳಿ ವರ್ಜಿತವಾದ ಹಗುರವಾದ ಆಹಾರ ಸೇವಿಸಬೇಕು.

ಅವಸ್ಥಿಕ ಕಾಲ: ಜೀವನದ ವಿಭಿನ್ನ ಘಟ್ಟಗಳಿಗೆ ತಕ್ಕಂತೆ, ಅಂದರೆ ಬಾಲ್ಯಾವಸ್ಥೆ, ಮಧ್ಯಮಾವಸ್ಥೆ ಮತ್ತು ವೃದ್ಧಾವಸ್ಥೆ ಯಲ್ಲಿಯೂ ಜೀರ್ಣಶಕ್ತಿ ಮತ್ತು ಚಯಾಪಚಯ ಕ್ರಿಯೆಗಳು ಸಂಪೂರ್ಣ ಭಿನ್ನವಾಗಿರುವುದರಿಂದ ಅದಕ್ಕೆ ತಕ್ಕ ಆಹಾರದ ಗುಣ ಮತ್ತು ಪ್ರಮಾಣವನ್ನು ನಿರ್ಧರಿಸಬೇಕು.

೭) ಉಪಯೋಗ ಸಂಸ್ಥಾ: ಅಂದರೆ ಆಹಾರ ಉಪಯೋಗದ ನಿಯಮ, ವಿಧಿವಿಧಾನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
ಹಿಂದಿನ ಊಟ ಸಂಪೂರ್ಣ ಜೀರ್ಣಗೊಂಡ ನಂತರ ಇನ್ನೊಂದು ಊಟ ಸೇವಿಸಬೇಕು. ದೇಹದಲ್ಲಿ ಹುಮ್ಮಸ್ಸು, ತೇಗಿನಲ್ಲಿ ಹಿಂದಿನ ಊಟದ ವಾಸನೆಯಿಲ್ಲದಿರುವುದು, ದೇಹ ಹಗುರವಾಗಿರುವುದು ಇವು ಆಹಾರ ಜೀರ್ಣಗೊಂಡಿದ್ದರ ಲಕ್ಷಣಗಳಾಗಿವೆ. ಇವು ಕಾಣಿಸಿದ ನಂತರ ಆಹಾರ ಸೇವಿಸಬೇಕು. ಗಡಿಬಿಡಿಯಿಂದ ಅಥವಾ ತುಂಬ ನಿಧಾನವಾಗಿ ಆಹಾರ ಸೇವಿಸಬಾರದು ಮತ್ತು
ಸಮಚಿತ್ತ, ಸುಮನಸ್ಸಿನೊಂದಿಗೆ ಊಟ ಮಾಡಬೇಕು.

೮) ಉಪಭೋಕ್ತ: ಕೊನೆಯದಾಗಿ ಮತ್ತು ಬಹುಮುಖ್ಯವಾಗಿ ಆಹಾರ ಸೇವಿಸುವ ವ್ಯಕ್ತಿಯ ಬಗ್ಗೆ ವಿವರಿಸಲಾಗಿದ್ದು, ಮೇಲ್ಕಂಡ
ಎಲ್ಲ ನಿಯಮಗಳನ್ನು ವ್ಯಕ್ತಿಯು ತನ್ನ ಜೀರ್ಣಶಕ್ತಿ, ವಯಸ್ಸು, ದೇಹಪ್ರಕೃತಿ, ವಾಸಿಸುವ ಸ್ಥಳ ಮತ್ತು ಮನಸ್ಸಿನ ಇಷ್ಟದ ಪ್ರಕಾರ
ಅನುಸರಿಸಬೇಕು. ಈ ೮ ನಿಯಮಗಳು ವ್ಯಕ್ತಿಗತ ಪೋಷಣೆಗೆ ಬುನಾದಿಯಾಗಿವೆ.

ಅಲ್ಲದೆ ಇವು ಜೀವರಾಸಾಯನಿಕಗಳ ಅಳತೆ ಆಧರಿತ ಆಹಾರ ಪ್ರಮಾಣವನ್ನೂ ಮೀರಿದ ಅತಿ ಗಣನೀಯ ಅಂಶಗಳನ್ನು
ವ್ಯಾಖ್ಯಾನಿಸುತ್ತವೆ.