Tuesday, 27th July 2021

ಪಾಂಡಿಚೇರಿಯಲ್ಲಿ ಸಮುದ್ರಸ್ನಾನ

ಶೋಭಾ ಪುರೋಹಿತ್‌

ಹಿಂದೆ ಫ್ರೆಂಚರ ವಸಾಹತು ಆಗಿದ್ದ ಪಾಂಡಿಚೇರಿ ಪ್ರವಾಸ ವಿಶಿಷ್ಟ. ಇಲ್ಲಿನ ಸಮುದ್ರ ಸೌಮ್ಯ, ಸ್ನಾನಕ್ಕೆ ಆಹ್ವಾನಿಸುವ ಜಲರಾಶಿ.

ಈಚಿನ ತಿಂಗಳುಗಳಲ್ಲಿ ಲಾಕ್ ಡೌನ್ ಮತ್ತು  ಕೋವಿಡ್ ಸೋಂಕಿನ ಭಯದಿಂದಾಗಿ, ಪ್ರವಾಸಕ್ಕೆ ಕಡಿವಾಣ ಬಿದ್ದಿದೆ. ಡಿಸೆಂಬರ್ ೨೦೧೫ ರಲ್ಲಿ ನಮ್ಮ ಪಯಣ ಫ್ರೆಂಚರ ವಸಾಹತು ಆಗಿದ್ದ ಸಮುದ್ರ ತೀರದ ಪ್ರಾಕೃತಿಕ ಸುಂದರ ನಗರ ಪಾಂಡಿಚೇರಿಗೆ ಸಾಗಿತ್ತು. ಬೆಂಗಳೂರಿ ನಿಂದ ಸುಮಾರು ೩೬೦ ಕಿ.ಮೀ. ದೂರದ ಪಾಂಡಿಚೆರಿಗೆ ನಮ್ಮ ವಾಹನದಲ್ಲಿ ಹೊರಟೆವು! ದಾರಿಯಲ್ಲಿ ತಿರುವಣ್ಣಾಮಲೈ ನೋಡಿ, ತಿರುಕೊಯ್ಲೂರಿನಲ್ಲಿ ರಾತ್ರಿ ತಂಗಿದರೆ, ಅಲ್ಲಿಂದ ಎರಡೂ ಕಾಲು ಗಂಟೆಯ ಪಯಣ.

ರಾಕ್ ಬೀಚ್
ಮರುದಿನ ಪಾಂಡಿಚೆರಿ ತಲುಪಿದೆವು. ಸಮುದ್ರದ ಎದುರಿಗೇ ಇರುವ ಹೊಟೇಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ್ದರಿಂದಾಗಿ, ಬಾಲ್ಕನಿಯಲ್ಲಿ ನಿಂತು ನೋಡಿದಾಗ, ರಸ್ತೆಯ ಆಚೆ ಕಾಣುವ, ನೀಲಸಾಗರದ ಅಪಾರ ಜಲರಾಶಿ ನೋಡಿ, ಮನ ಹುಚ್ಚೆದ್ದು ಕುಣಿಯಿತು. ದೂರ ದಿಗಂತದಲ್ಲಿ ನೀರು, ಆಕಾಶ ಒಂದಾಗಿ ತೋರಿ ವಿಚಿತ್ರ ಅನುಭೂತಿ. ಪ್ರೊಮನೇಡ್ ಬೀಚ್ ಅಂತ ಕರೆಯುವ ಈ ಬೀಚಿನ ದಂಡೆಗುಂಟ ಕಲ್ಲು ಬಂಡೆ ಗಳನ್ನು ತಡೆಗೋಡೆಯಂತೆ ಒತ್ತೊತ್ತಾಗಿ ಜೋಡಿಸಿದ್ದರಿಂದ,ಇಲ್ಲಿ ಇಳಿದು ನೀರಲ್ಲಿ ಆಟ ಆಡಲು ಆಗುವುದಿಲ್ಲ. ಇದನ್ನು ರಾಕ್ ಬೀಚ್ ಅಂತಲೂ ಕರೆಯುತ್ತಾರೆ!

ಸಮುದ್ರ ಸ್ನಾನಕ್ಕಾಗಿ ನಾವು, ಪ್ಯಾರಡೈಸ್ ಬೀಚಿಗೆ ಹೋದೆವು. ಅಲ್ಲಿಗೆ ತಲುಪಲು ಚುನ್ನಾಂಬರ್ ಬೋಟ್ ಹೌಸ್‌ನಿಂದ, ಮೋಟಾರ್ ಬೋಟ್ ಮುಖಾಂತರ ಕಾಲು ಗಂಟೆಯ ಪಯಣ. ಇದು ಪರಿಶುದ್ಧವಾದ ಬೀಚ್ ಆಗಿದ್ದು, ಶವರ್ ಮಾಡಲು, ಬಟ್ಟೆ ಬದಲಾಯಿಸಲು ಗಂಡಸರಿಗೆ ಮತ್ತು ಹೆಂಗಸರಿಗೆ ಪ್ರತ್ಯೇಕ ಸ್ನಾನದ ಕೋಣೆಗಳಿವೆ! ಅದೂ ಅಲ್ಲದೇ ನೀರೂ ಕೂಡ ಆಳವಿಲ್ಲದೇ ಸ್ನಾನಕ್ಕೆ ಪ್ರಶಸ್ತ
ಸ್ಥಳವಾಗಿದೆ. ಮಕ್ಕಳೂ ಕೂಡ ನಿಶ್ಚಿಂತೆಯಿಂದ ನೀರಾಟ ಆಡಬಹುದು! ನಾವು ಸ್ನಾನ ಮುಗಿಸಿ, ಕೆಲ ಸಮಯ ಮರಳಿನಲ್ಲಿ ಕುಳಿತು, ಸಮುದ್ರದ ಸೌಂದರ್ಯ ಸವಿದೆವು!

ಪಾಂಡಿಚೇರಿಯ ಪ್ರವಾಸವೆಂದರೆ, ಅರವಿಂದ ಆಶ್ರಮ ಅದರಲ್ಲಿ ಅವಿಭಾಜ್ಯ ಅಂಗ. ಅರವಿಂದರು ಸ್ವಾತಂತ್ರ್ಯ ಸಂಗ್ರಾಮದ ಸಮಯ ಖೈದಿಯಾಗಿ ಜೈಲು ವಾಸದಲ್ಲಿದ್ದಾಗ, ಅವರಿಗೆ ಆಧ್ಯಾತ್ಮಿಕ ಜ್ಞಾನ ದೊರೆಯಿತಂತೆ. ಬಿಡುಗಡೆಯ ನಂತರ ರಾಜಕೀಯ ಜೀವನಕ್ಕೆ ವಿದಾಯ ಹೇಳಿ, ಪಾಂಡಿಚೇರಿಗೆ ಬಂದು ಅಧ್ಯಾತ್ಮ ಸಾಧನೆಯಲ್ಲಿ ತೊಡಗಿ ದರು. ಇವರಿಂದ ಪ್ರೇರಿತರಾದ, ಮಿರಾ ಅಲಸ್ಸಾ ಎಂಬ ಫ್ರೆಂಚ್ ಮಹಿಳೆ ಇವರ ಜೊತೆ ಸೇರಿ, ಈ ಆಶ್ರಮ ನಿರ್ಮಿಸಿದರು. ಇವರನ್ನು ಆಶ್ರಮ ವಾಸಿಗಳು ಮದರ್ ಎಂದು ಸಂಬೋಧಿಸುತ್ತಿದ್ದರು. ಇಲ್ಲಿನ ಸುಂದರ ಉದ್ಯಾನದ ಮಧ್ಯದಲ್ಲಿ ಅರವಿಂದರ ಮತ್ತು ಮದರ್ ಅವರ ಸಮಾಧಿಗಳಿವೆ.

ಸಂಜೆ,ಇಲ್ಲಿಯ ಪ್ರಸಿದ್ಧ ಗಣಪತಿ ದೇಗುಲಕ್ಕೆ ಹೋದೆವು. ೧೫ ನೇ ಶತಮಾನದ ಈ ದೇವಾಲಯವನ್ನು ಫ್ರೆಂಚರು ಹಾಳುಗೆಡವಲು ನೋಡಿ ದಾಗ, ಸ್ಥಳೀಯರ ಪ್ರತಿಭಟನೆಯಿಂದ ಬಚಾವಾಯಿತು. ಗರ್ಭಗುಡಿಯಲ್ಲಿ ಬಣ್ಣದ ಸುಂದರ ಮೂರ್ತಿಯಲ್ಲದೇ, ಸುತ್ತಲು ಗೋಡೆಗಳ ತುಂಬಾ ಬಣ್ಣ ಬಣ್ಣದ ವಿವಿಧ ಭಂಗಿಯ ಗಣಪತಿಯ ಸುಂದರ ಕೆತ್ತನೆಗಳಿವೆ.

ಹಿಂದಿರುಗಿ ಬಂದಾಗ, ಹೋಟೆಲ್ ಮುಂದೆ ಜನಜಂಗುಳಿ! ಪ್ರೊಮೋನೇಡ್ ರಾಕ್ ಬೀಚು, ಸ್ಥಳೀಯರ ಮತ್ತು ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಸಂಜೆ ರಿಂದ ಬೆಳಿಗ್ಗೆ ವರೆಗೆ ಇಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧವಿದೆ. ಸ್ಥಳ ಪೂರ್ತಿ ಪ್ರವಾಸಿಗರಿಗೆ. ಸಮುದ್ರ ದಂಡೆಗುಂಟ ವಾಕಿಂಗ್ ಮಾಡಿ ರಸ್ತೆ ಪಕ್ಕದ ಕೆಫೆಗಳಲ್ಲಿ ಚಾಟ್ಸ ತಿಂದು, ಬಿಸಿ ಕಾಫಿ ಹೀರಿ ಎರಡು ಕಿ.ಮೀ. ದೂರದ ರಸ್ತೆಯಲ್ಲಿ, ತಂಗಾಳಿಯಲ್ಲಿ
ನಡೆದು ಹೋಗುವುದೇ ಒಂದು ಚೇತೋಹಾರಿ ಅನುಭವ!

ಇದರ ಒಂದು ಕೊನೆಯಲ್ಲಿ ಚಿಕ್ಕ ಉದ್ಯಾನವನ, ಡೂಪ್ಲೆಕ್ಸ್‌ನ ಮೂರ್ತಿ ಮತ್ತು ಇನ್ನೊಂದು ಕೊನೆಗೆ ಯುದ್ಧ ಸ್ಮಾರಕ, ಅಲ್ಲಿ ಮಂಟಪದಲ್ಲಿ ಗಾಂಧೀಜಿಯ ಮೂರ್ತಿ ಇದೆ.

ಅರೋವಿಲ್ಲೆ
ಮರುದಿನ ಹಿಂದಿರುಗುವಾಗ ತಮಿಳುನಾಡಿನ ಅರೋವಿಗೆ ಭೇಟಿಯಿತ್ತೆವು. ಇದು ಮದರ್ ಅವರಿಂದ ಸ್ಥಾಪಿತ ಆಶ್ರಮ. ಕಾಡಿನ ಮಧ್ಯೆ, ಸಮುದ್ರ ತೀರದಲ್ಲಿರುವ ಈ ಸ್ಥಳ ಕಲಿಕೆ ಮತ್ತು ಅಧ್ಯಾತ್ಮದ ಕೇಂದ್ರವಾಗಿದೆ. ಜಾತಿ ಮತ ಲಿಂಗ ಭೇದವಿಲ್ಲದೇ ಹಲವು ದೇಶಗಳ ಸಾವಿ ರಾರು ಅಭ್ಯರ್ಥಿಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಯೋಗ, ಧ್ಯಾನ, ಪ್ರವಚನ, ಕ್ರೀಡೆ ಹೀಗೆ ಹಲವು ಕಾರ್ಯಕ್ರಮಗಳು ನಡೆಯು ತ್ತಿರುತ್ತದೆ. ೨೦ ಚದರಕಿ.ಮೀ. ಹೊಂದಿರುವ ಈ ಆಶ್ರಮದಲ್ಲಿ ಹಲವಾರು ಕುಟೀರಗಳು, ಸುತ್ತಾಡಲು ಬಾಡಿಗೆ ಸೈಕಲ್ ಎಲ್ಲಾ ಸೌಲಭ್ಯ ಗಳಿವೆ!

Leave a Reply

Your email address will not be published. Required fields are marked *