Monday, 16th May 2022

ದ.ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಸೆಕ್ಷನ್ 144 ಜಾರಿ

ಮಂಗಳೂರು: ಉಪ್ಪಿನಂಗಡಿ ಪೊಲೀಸ್ ಠಾಣೆಯ ಮುಂಭಾಗ ನಡೆದ ಲಾಠಿಚಾರ್ಜ್ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 5 ತಾಲೂಕುಗಳಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಯಾವುದೇ ಅಹಿತಕ ಘಟನೆ ನಡೆಯದಂತೆ ಪುತ್ತೂರು ಉಪವಿಭಾಗಾಧಿಕಾರಿ ಡಾ. ಯತೀಶ್ ಉಳ್ಳಾಲ್ ಆದೇಶ ಮಾಡಿದ್ದು, ಮುಂದಿನ ಆದೇಶದವರೆಗೆ ಇದು ಜಾರಿಯಲ್ಲಿರುತ್ತದೆ. ಡಿ.14ರ ರಾತ್ರಿ ಉಪ್ಪಿನಂಗಡಿ ಠಾಣೆಯ ಮುಂಭಾಗ ಪಿಎಫ್‌ಐ ಕಾರ್ಯಕರ್ತರು ನಡೆಸಿದ ಪ್ರತಿಭಟನೆ ಅತಿರೇಖಕ್ಕೆ ಹೋಗಿ, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿಚಾರ್ಚ್ ಮಾಡಿದ್ದಾರೆ.

ಲಾಠಿಚಾರ್ಜ್ ವೇಳೆ ನಾಲ್ವರು ಪೊಲೀಸ್ ಅಧಿಕಾರಿ, ಸಿಬ್ಬಂದಿಗೂ ಗಾಯವಾಗಿದೆ. ಬಂಟ್ವಾಳ ಗ್ರಾಮಾಂತರ ಠಾಣಾ ಎಸ್‌ಐ ಪ್ರಸನ್ನ ಅವರಿಗೆ ಪ್ರತಿಭಟನಾಕಾರರು ಚೂರಿ ಇರಿದ ಆರೋಪ ಕೇಳಿಬಂದಿದ್ದು, ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶ್, ಮಹಿಳಾ ಎಸ್‌ಐ ಓಮನ ಹಾಗೂ ಓರ್ವ ಮುಖ್ಯಪೇದೆಗೂ ಗಾಯವಾಗಿದ್ದು, ಗಾಯಾಳುಗಳು ಸದ್ಯ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಹಿತಕರ ಘಟನೆ ಹಿನ್ನಲೆಯಲ್ಲಿ ಉಪ್ಪಿನಂಗಡಿ ಪೋಲೀಸ್ ಠಾಣೆಗೆ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಭೇಟಿ ನೀಡಿದ್ದಾರೆ. ಹಿರಿಯ ಪೋಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ ದ್ದಾರೆ.

ಲಾಠಿಚಾರ್ಚ್ ವೇಳೆ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ. ಠಾಣೆ ಮುಂದೆ ಪ್ರತಿಭಟನಾಕಾರರ ಚಪ್ಪಲಿಗಳ ರಾಶಿ ಕಂಡುಬಂದಿದೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.