ಚಿಕ್ಕಮಗಳೂರಿನ ಶಾಲಾ- ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ ಫೆಬ್ರವರಿ 23ರ ಸಂಜೆ 6 ಗಂಟೆಯವರೆಗೆ ಸೆಕ್ಷನ್ 144 ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು ನಗರದ ಮಲೆನಾಡು ವಿದ್ಯಾಸಂಸ್ಥೆ, ಮೌಂಟೆನ್‍ವ್ಯೂ ಕಾಲೇಜಿನ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡಬೇಕೆಂದು ಕಾಲೇಜು ಆವರಣದ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕೇಸರಿ ಶಾಲು- ಹಿಜಾಬ್ ಪ್ರಕರಣದ ಹಿನ್ನೆಲೆಯಲ್ಲಿ ಸರ್ಕಾರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಿತ್ತು. ಪ್ರೌಢಶಾಲೆಗಳನ್ನು ಸೋಮ ವಾರದಿಂದ ಆರಂಭಿಸಲಾಗಿತ್ತು. ಪದವಿ ಕಾಲೇಜುಗಳನ್ನು ಬುಧವಾರದಿಂದ ಪ್ರಾರಂಭಿಸಲಾಗಿದ್ದು, ಐಡಿಎಸ್‍ಜಿ ಕಾಲೇಜು ವಿದ್ಯಾರ್ಥಿಗಳು ತರಗತಿಗೆ ಹಾಜರಾದರೆ, ಮಲೆನಾಡು ವಿದ್ಯಾಸಂಸ್ಥೆ, ಮೌಂಟೆನ್‍ವ್ಯೂ ಕಾಲೇಜು ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡುವಂತೆ ಪಟ್ಟು ಹಿಡಿದರು.
ಮೌಂಟೆನ್ ವ್ಯೂ ಕಾಲೇಜಿನಲ್ಲಿ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡದಿದ್ದರಿಂದ ಕಾಲೇಜು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆಯಿತು. ಮುಸ್ಲಿಂ ಧರ್ಮಗುರು ಅಗ್ಸರ್ ಅಲಿ ಮಧ್ಯಪ್ರವೇಶಿಸಿ, ವಿದ್ಯಾರ್ಥಿನಿಯರ ಮನವೊಲಿಸಿದ ಬಳಿಕ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದೆ ವಾಪಸ್ಸಾದರು.