Sunday, 17th October 2021

ಸದನದ ನಿಯಮ ಅರಿಯುವುದು ಅಗತ್ಯ

ವಿಧಾನಸಭಾ ಕಲಾಪದಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುವಾರ, ಶಾಸಕರು ಸದನದ ನಿಯಮಾವಳಿಗಳನ್ನು ಓದಬೇಕು. ಇಲ್ಲದಿದ್ದರೆ ಸದನ ನಡೆಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಘಟನೆ ನಡೆದಿದೆ. ಕಾಗೇರಿ ಅವರು ಹೇಳಿದಂತೆ, ಸದನಕ್ಕೆ ತನ್ನದೇಯಾದ ಶಿಸ್ತು, ಗೌರವ, ಶಿಷ್ಟಾಚಾರ ಹಾಗೂ ಸಭಾ ಮರ್ಯಾದೆ ಇರುತ್ತದೆ.

ಅದನ್ನು ಮೀರಿ ಯಾವ ಜನಪ್ರತಿನಿಧಿಗಳು ನಡೆದುಕೊಳ್ಳಬಾರದು. ಆದರೆ ಇತ್ತೀಚಿನ ದಿನದಲ್ಲಿ ಬಹುತೇಕ ಶಾಸಕರು, ಸಭೆಯ ನಡಾವಳಿಗಳನ್ನು ಅರಿಯದೇ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದಂತೆ ಮಾತನಾಡುತ್ತಿದ್ದಾರೆ. ಇದರಿಂದ ಕೇವಲ ಶಾಸಕ ಘನತೆ ಮಾತ್ರವಲ್ಲದೇ, ಸಭೆಯ ಘನತೆಯೂ ಕುಸಿಯು ತ್ತದೆ. ಇನ್ನು ಕಲಾಪ ಸುಗಮವಾಗಿ ನಡೆಯಲು ಇರುವ ಪ್ರಶ್ನೋತ್ತರ, ಶೂನ್ಯ ವೇಳೆ, ವಿವಿಧ ನಿಯಮಗಳಲ್ಲಿ ಮಾತನಾಡಲು ಅವಕಾಶವಿದೆ. ಆದರೆ ಈಗಿರುವ ಜನಪ್ರತಿನಿಧಿಗಳಲ್ಲಿ ಬಹುತೇಕರಿಗೆ ಈ ಬಗ್ಗೆ ಮಾಹಿತಿಯ ಕೊರತೆಯಿದೆ.

ವಿಧಾನಸಭೆ ಹಾಗೂ ಪರಿಷತ್‌ಗೆ ರೂಲ್‌ಬುಕ್ ಇದ್ದು, ಅದರ ಅನ್ವಯವೇ ಸದನದ ಪ್ರತಿಯೊಂದು ನಡವಳಿಯೂ ನಡೆಯುತ್ತದೆ. ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವ ಪ್ರತಿಯೊಬ್ಬ ಶಾಸಕರಿಗೂ ಈ ರೂಲ್‌ಬುಕ್ ನೀಡಲಾಗುತ್ತದೆ. ಆದರೆ ಬಹುತೇಕ ಶಾಸಕರು ಈ ರೂಲ್‌ಬುಕ್ ಅನ್ನು ಓದುವುದಿಲ್ಲ. ಇತ್ತೀಚಿನ ದಿನದಲ್ಲಿ ಕಲಾಪಗಳು ಸರಿಯಾಗಿ ನಡೆಯುತ್ತಿಲ್ಲ ಎನ್ನುವ ದೂರು ಕೇಳಿಬರುತ್ತಿದ್ದು, ಇದರಿಂದ ಸದನದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ ಎನ್ನುವುದು ಒಂದೆಡೆ ಯಾದರೆ, ಈ ರೀತಿ ಸದನದಲ್ಲಿ ನಡಾವಳಿಗಳನ್ನು ಮೀರಿ, ನಡೆದುಕೊಳ್ಳುವುದು ಅಥವಾ ಸಭಾಧ್ಯಕ್ಷ ಪೀಠದಲ್ಲಿರುವವರ ಬಗ್ಗೆ ಲಘುವಾಗಿ ಮಾತನಾಡು ವುದು ಸಹ, ಕೆಟ್ಟ ಸಂಪ್ರದಾಯ.

ಆದ್ದರಿಂದ ಸ್ಪೀಕರ್ ಕಾಗೇರಿ ಅವರು ಗುರುವಾರ ಪ್ರಸ್ತಾಪಿಸಿದಂತೆ, ಸದನದಲ್ಲಿರುವ ಹಿರಿಯ ಶಾಸಕರು ಅಥವಾ ನಾಯಕರು ತಮ್ಮ ಪಕ್ಷದ ಶಾಸಕರಿಗೆ ಸದನ ನಡವಳಿಕೆಗಳನ್ನು ತಿಳಿಸಿ, ಅದರಂತೆ ನಡೆದುಕೊಳ್ಳುವುದಕ್ಕೆ ತಿಳಿ ಹೇಳಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗಕ್ಕೆ ಇರುವ ಘನತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಶಾಸಕರು ತಮ್ಮ ಪಾತ್ರವನ್ನು ನಿರ್ವಹಿಸಿದಾಗ ಮಾತ್ರ, ಶಾಸಕಾಂಗದ ಘನತೆ ಹೆಚ್ಚಳವಾಗಲು ಸಾಧ್ಯ.

Leave a Reply

Your email address will not be published. Required fields are marked *