Monday, 30th January 2023

ಶಾಸ್ತ್ರೀಜೀ ಸ್ಮರಣೆ ಮತ್ತು ಈರುಳ್ಳಿಬಜ್ಜಿ @ ಯಾಹೂ ಡಾಟ್‌ ಕಾಮ್‌

ತಿಳಿರು ತೋರಣ

srivathsajoshi@yahoo.com

ಅತಿಸಾಮಾನ್ಯರೂ ಶಾಸ್ತ್ರೀಜಿಯವರ ಕರೆಗೆ ಓಗೊಟ್ಟು ತಮ್ಮಿಂದಾದಷ್ಟು ಅಳಿಲುಸೇವೆ ಮಾಡಿದ್ದರಷ್ಟೆ? ಅಂತಹವರಲ್ಲೊಬ್ಬರು ನನ್ನೊಬ್ಬ ಹಿರಿಯ ಓದುಗಮಿತ್ರರು ಇದ್ದಾರೆಂದು ನನಗೆ ಹೆಮ್ಮೆ. ಅವರನ್ನು ವ್ಯಕ್ತಿಗತವಾಗಿ ವೈಭವೀಕರಿಸದೆ ಅವರ ದೇಶಾಭಿ ಮಾನದ ಪರಿಯನ್ನಷ್ಟೇ ವಿವರಿಸುತ್ತೇನೆ. ಅದೂ ಈ ದಿನ ಲಾಲ್ ಬಹಾದುರ್ ಶಾಸ್ತ್ರೀಜಿಯವರ ಜನ್ಮದಿನ ಎಂದು ಸಂದರ್ಭೋ ಚಿತವಾಗಿ, ಇಡೀ ಘಟನಾವಳಿ ಭಲೇ ಸ್ವಾರಸ್ಯಕರವಾಗಿ ಇದೆ ಎಂಬ ಕಾರಣಕ್ಕೆ ಮಾತ್ರ.

ಅಕ್ಟೋಬರ್ ೨ರಂದು ಗಾಂಽಜಿಯವರದಷ್ಟೇ ಅಲ್ಲ, ಲಾಲ್ ಬಹಾದುರ್ ಶಾಸ್ತ್ರೀಜಿ ಯವರ ಜನ್ಮದಿನ ಕೂಡ. ಸರಳತೆಯ ಸಾಕಾರಮೂರ್ತಿಯಾಗಿದ್ದ ಶಾಸ್ತ್ರೀಜಿಯವರಂಥ ನೇತಾರರನ್ನು, ರಾಜಕಾರಣಿಗಳನ್ನು ಈಗಿನ ಕಾಲದಲ್ಲಿ ಊಹಿಸುವುದೂ ಸಾಧ್ಯವಿಲ್ಲ. ಆಡಳಿತ ನಡೆಸಿದ್ದು ಬರೀ ಒಂದೂವರೆ ವರ್ಷ ಅವಽಯಾದರೂ ಜನಮಾನಸದಲ್ಲಿ ಅವರು ಅಚ್ಚೊತ್ತಿರುವ ಛಾಪು ಗಾಢವಾದದ್ದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತು ಬಹುಶಃ ಅವರಿಗಿಂತ ಹೆಚ್ಚು ಬೇರಾರಿಗೂ ಸೂಕ್ತ ವಾಗದು. ಒಂದೆಡೆ ಪಾಕಿಸ್ತಾನದೊಡನೆ ಯುದ್ಧ, ಆಮೇಲೆ ದೇಶದ ಕೆಲವೆಡೆ ಅತಿವೃಷ್ಟಿ ಕೆಲವೆಡೆ ಅನಾವೃಷ್ಟಿ, ಆಹಾರದ ಕೊರತೆ ಹೀಗೆ ಅತಿ ಕಷ್ಟಕರ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದವರು ಶಾಸ್ತ್ರೀಜಿ.

ದೇಶದ ಗಡಿ ಕಾಯುವ ಯೋಧ ಮತ್ತು ದೇಶದ ಜನರ ಹೊಟ್ಟೆ ತುಂಬಿಸುವ ರೈತ ಇವರಿಬ್ಬರೂ ನಮ್ಮ ಬದುಕಿನ ಅವಿಭಾಜ್ಯ  ಅಂಗ ಎಂಬ ಗೌರವಾಭಿಮಾನದಿಂದಲೇ ಅವರು ‘ಜೈಜವಾನ್, ಜೈಕಿಸಾನ್’ ಘೋಷಣೆ ಮೊಳಗಿಸಿದರು. ಆ ಕಾಲಘಟ್ಟದಲ್ಲಿ ಅದು ಬರಿ ಘೋಷಣೆ ಆಗಿರಲಿಲ್ಲ; ಯುದ್ಧದಿಂದ ಬಸವಳಿದಿದ್ದ, ಹತಾಶೆಯಿಂದ ಕಂಗೆಟ್ಟಿದ್ದ, ಹಸಿವೆಯಿಂದ ಬಡಕಲಾಗಿದ್ದ ದೇಶದ ಜನತೆಗೆ ಹುಮ್ಮಸ್ಸಿನ ಸಂಜೀವಿನಿ ಆಗಿತ್ತು.

ಗೋಧಿಯ ಆಮದಿಗಾಗಿ ಅಮೆರಿಕದೆದುರು ತಲೆತಗ್ಗಿಸುವುದಾಗಲೀ, ಕೈಚಾಚುವುದಾಗಲೀ ನಮಗೆ ಅವಶ್ಯವಿಲ್ಲ ಎನ್ನುತ್ತಲೇ ಭಾರತೀಯರಲ್ಲಿ ಆತ್ಮಗೌರವವನ್ನು ಪ್ರಜ್ವಲಿಸಿದ ಕಿಡಿ ಆಗಿತ್ತು. ನಮ್ಮ ಕಾಲಮೇಲೆ ನಾವು ನಿಲ್ಲುವಂತಾಗುವವರೆಗೆ ವಾರ ದಲ್ಲೊಂದು ದಿನ ಉಪವಾಸ ಇದ್ದಾದರೂ ಸರಿ ಧಾನ್ಯ ಉಳಿಸೋಣ ಧಾನ್ಯ ಬೆಳೆಸೋಣ ಎಂದು ದೇಶಾದ್ಯಂತ ಹಸುರು ಕ್ರಾಂತಿಗೆ ನಾಂದಿ ಅದಾಗಿತ್ತು. ಶಾಸ್ತ್ರೀಜಿಯವರು ಹೇಳಿದ್ದು ಭಾರತೀಯರೆಲ್ಲರ ಮೇಲೆ ಗಾಢ ಪ್ರಭಾವ ಬೀರಿತು. ಯಾವುದೇ ಹಿಂಜರಿಕೆ ಯಿಲ್ಲದೆ ಅನುಮಾನ- ಸಿನಿಕತನಗಳಿಲ್ಲದೆ ಪ್ರಧಾನಿಯ ಮಾತನ್ನು ಪ್ರಜೆಗಳೆಲ್ಲ ನಂಬಿದರು, ಪರಿಪಾಲಿಸಿದರು.

ವಾರದಲ್ಲೊಂದು ದಿನ ಒಪ್ಪೊತ್ತಿನ ಊಟ ಬಿಟ್ಟರು. ಹಳ್ಳಿ ಪಟ್ಟಣಗಳೆನ್ನದೆ, ಆಬಾಲವೃದ್ಧರಾಗಿ ಎಲ್ಲರೂ ಅದನ್ನೊಂದು ವ್ರತದಂತೆ ಆಚರಿಸಿದರು. ಅದಕ್ಕೆ ಕಾರಣ ಮತ್ತು ಪ್ರೇರಣೆಗಳೂ ಪ್ರಬಲವಾಗಿಯೇ ಇದ್ದವು. ಶಾಸ್ತ್ರೀಜಿಯವರು ಸ್ವತಃ ತನ್ನ ನಿವಾಸದಲ್ಲೇ ಪ್ರತಿ ಸೋಮವಾರ ರಾತ್ರಿಯೂಟ ಇಲ್ಲವೆಂಬ ವ್ರತ ಆರಂಭಿಸಿ ಮೇಲ್ಪಂಕ್ತಿಯಾಗಿದ್ದರು. ಸಂಸದೀಯ ವ್ಯವಹಾರ ಗಳಲ್ಲಿ ಶಿಷ್ಟಾಚಾರವೆಂದು ನಡೆಯುವ ಔತಣಕೂಟಗಳನ್ನೆಲ್ಲ ರದ್ದುಪಡಿಸಿದ್ದರು. ನುಡಿದಂತೆ ನಡೆವ ಪಾರದರ್ಶಕತೆ ಪ್ರಾಮಾ ಣಿಕತೆ ಅವರಿಗೆ ಇತ್ತಾದ್ದರಿಂದಲೇ ಜನಸಾಮಾನ್ಯರೂ ವಿಧೇಯತೆಯಿಂದ ಅನುಸರಿಸಿದರು.

ಎಲ್ಲಿಯವರೆಗೆಂದರೆ ಸಾಕಷ್ಟು ಶ್ರೀಮಂತರಾಗಿದ್ದವರೂ ಆಗ ವಾರದಲ್ಲಿ ಒಪ್ಪೊತ್ತಿನ ಊಟ ಬಿಟ್ಟಿದ್ದರಂತೆ. ಗುಜರಾತ್ ಆಂಧ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ತಂಬಾಕು ಬೆಳೆಯುತ್ತಿದ್ದ ರೈತರು ತಂಬಾಕಿನ ಬದಲಿಗೆ ಗೋಧಿ ಬೆಳೆಸತೊಡಗಿದ್ದರಂತೆ. ‘ಮೇರೆ ದೇಶ್ ಕೀ ಧರತೀ ಸೋನಾ ಉಗಲೇ ಉಗಲೇ ಹೀರೇ ಮೋತೀ… ಮೇರೆ ದೇಶ್ ಕೀ ಧರತೀ’ ಹಾಡಿನ ಉಪಕಾರ್ ಸಿನೆಮಾವನ್ನು ಶಾಸ್ತ್ರೀಜಿಯ ಕೋರಿಕೆಯಂತೆ ಮನೋಜ್‌ಕುಮಾರ್ ನಿರ್ದೇಶಿಸಿದ್ದು ಆಗಲೇ.

ಯಾವಾಗಲೂ ಖಳನಾಯಕನ ಪಾತ್ರ ನಿರ್ವಹಿಸುತ್ತಿದ್ದ ಪ್ರಾಣ್, ಬದಲಾವಣೆಗಾಗಿ ಒಮ್ಮೆ ಸದ್ಗುಣವಂತ ಪಾತ್ರ ನಿರ್ವಹಿಸಿದ್ದು ಅದರಲ್ಲೇ. ಅದು ಬಿಡುಗಡೆಯಾಗುವ ಮೊದಲೇ ದುರದೃಷ್ಟವಶಾತ್ (ಯಾರದೋ ಸಂಚಿನಿಂದ ಎಂದು ಈಗಲೂ ಅನುಮಾನ ಗಳಿರುವಂತೆ) ಶಾಸ್ತ್ರೀಜಿ ಯವರ ದೇಹಾಂತ್ಯವಾಯಿತು. ಉಪಕಾರ್ ಅಷ್ಟೇಅಲ್ಲ ಆಮೇಲೂ ಪೂರಬ್ ಔರ್ ಪಶ್ಚಿಮ್ ಮುಂತಾದ ದೇಶಭಕ್ತಿಪ್ರಧಾನ ಸಿನೆಮಾಗಳ ಮೂಲಕ ಶಾಸ್ತ್ರೀಜಿಯವರ ಆಶಯವನ್ನು ಮನೋಜ್ ಕುಮಾರ್ ಹಳ್ಳಿಹಳ್ಳಿಗೂ ತಲುಪಿಸಿದ್ದು ಇಡೀ ದೇಶಕ್ಕೇ ಮಾಡಿದ ದೊಡ್ಡ ಉಪಕಾರ.

ಸಾಮಾನ್ಯರಲ್ಲಿ ಅತಿಸಾಮಾನ್ಯರೂ ಶಾಸ್ತ್ರೀಜಿಯವರ ಕರೆಗೆ ಓಗೊಟ್ಟು ತಮ್ಮಿಂದಾದಷ್ಟು ಅಳಿಲುಸೇವೆ ಮಾಡಿದ್ದರಷ್ಟೆ? ಅಂತಹವರಲ್ಲೊಬ್ಬರು ನನ್ನೊಬ್ಬ ಹಿರಿಯ ಓದುಗಮಿತ್ರರು ಇದ್ದಾರೆಂದು ನನಗೆ ಹೆಮ್ಮೆ. ಅವರಾದರೋ ತಾವು ಮಾಡಿದ್ದು ಅಳಿಲುಸೇವೆ ಎಂದು ಹೇಳುವುದಕ್ಕೂ ಯೋಗ್ಯವಾದುದಲ್ಲ, ದೇಶಾದ್ಯಂತ ಮಿಕ್ಕವರೆಲ್ಲ ಮಾಡಿದ ತ್ಯಾಗದೆದುರಿಗೆ ತನ್ನದೇನೂ ಅಲ್ಲ ಎಂದು ಸಂಕೋಚದಿಂದ ಮುದುಡಿಹೋಗುತ್ತಾರೆ. ಆದರೆ ನನ್ನ ಪ್ರಕಾರ ಅದು ಎಷ್ಟೇ ಚಿಕ್ಕ ಸೇವೆಯಾದರೂ ಇರಲಿ, ಅಲ್ಲಿ ಮನಸ್ಸು ದೊಡ್ಡದು. ದೈವಭಕ್ತಿ ದೇಶಾಭಿಮಾನಗಳದೆಲ್ಲ ತೂಕ-ತುಲನೆ ಬೇಕಾಗಿಲ್ಲ.

ಭಾವನೆಯೊಂದೇ ಮುಖ್ಯ. ಆದ್ದರಿಂದಲೇ ನಾನಿವತ್ತು ಅವರನ್ನು ವ್ಯಕ್ತಿಗತವಾಗಿ ವೈಭವೀಕರಿಸದೆ ಅವರ ದೇಶಾಭಿಮಾನದ ಪರಿಯನ್ನಷ್ಟೇ ವಿವರಿಸುತ್ತೇನೆ. ಅದೂ ಈ ದಿನ ಲಾಲ್ ಬಹಾದುರ್ ಶಾಸ್ತ್ರೀಜಿಯವರ ಜನ್ಮದಿನ ಎಂದು ಸಂದರ್ಭೋಚಿತವಾಗಿ, ಮತ್ತು ಇಡೀ ಘಟನಾವಳಿಯು ಭಲೇ ಸ್ವಾರಸ್ಯಕರವಾಗಿ ಇದೆ, ಅಂಕಣಕ್ಕೆ ಹೇಳಿಮಾಡಿಸಿದಂತಿದೆ ಎಂಬ ಕಾರಣಕ್ಕೆ ಮಾತ್ರ.

ಅಶೋಕ ರಾವ್ ಎಂದು ಅವರ ಹೆಸರು. ಈಗ ನಿವೃತ್ತ ಜೀವನಕ್ಕೆ ಮೈಸೂರುನಿವಾಸಿ, ಆದರೆ ಮೂಲತಃ ಉತ್ತರ ಕರ್ನಾಟಕ ದವರು. ಮನೆಮಾತು ಮರಾಠಿ ಭಾಷೆ. ನನಗವರ ಪರಿಚಯವಾದದ್ದು ಒಂದು ಸ್ವಾರಸ್ಯಕರ ಸನ್ನಿವೇಶದಲ್ಲಿ. ಸುಮಾರು ಹದಿನಾಲ್ಕು ವರ್ಷಗಳ ಹಿಂದೆ, ಆಗ ನಾನು ವಿಜಯಕರ್ನಾಟಕ ಪತ್ರಿಕೆಯಲ್ಲಿ ಪರಾಗಸ್ಪರ್ಶ ಅಂಕಣ ಬರೆಯುತ್ತಿದ್ದೆ. ಆಗಾಗ ಅಂಕಣಬರಹದ ಕೊನೆಯಲ್ಲಿ ಒಂದು ರಸಪ್ರಶ್ನೆ ಸೇರಿಸುತ್ತಿದ್ದೆ. ಜ್ಞಾನಪರೀಕ್ಷೆಗೇನೂ ಅಲ್ಲ, ಓದುಗರೊಡನೆ ದ್ವಿಮುಖ ವಿಚಾರ ವಿನಿಮಯಕ್ಕೊಂದು ದಾರಿಯಾಗಲಿ ಎಂಬ ಉದ್ದೇಶದಿಂದ. ಅಲ್ಲದೇ ಆಗಿನ್ನೂ ಈಗಿನಂತೆ ಸೋಶಿಯಲ್ ಮೀಡಿಯಾ ಉಚ್ಛ್ರಾಯಸ್ಥಿತಿ ತಲುಪಿರಲಿಲ್ಲ, ಲಿಖಿತ ಪತ್ರಗಳು ಮತ್ತು ಇಮೇಲ್ ಮೂಲಕವಷ್ಟೇ ಸಂವಹನ.

ಹಾಗೆ ಯಾವುದೋ ಒಂದು ರಸಪ್ರಶ್ನೆಗೆ ಸರಿ ಉತ್ತರದ ಇಮೇಲ್ ಬರೆದು ಕಳುಹಿಸಿದ್ದವರಲ್ಲಿ ಅಶೋಕ ರಾವ್ ಸಹ ಒಬ್ಬರಾ ಗಿದ್ದರು. ಅಷ್ಟೇ ಆಗಿದ್ದರೆ ಅದೇನೂ ಸ್ವಾರಸ್ಯಕರ ಸಂಗತಿ ಎನಿಸುತ್ತಿರಲಿಲ್ಲ. ಅವರ ಇಮೇಲ್ ವಿಳಾಸವು ಸ್ವಲ್ಪ ವಿಚಿತ್ರವಾಗಿ
ಇತ್ತು, ‘ಈರುಳ್ಳಿಬಜ್ಜಿ ಎಟ್ ಯಾಹೂ ಡಾಟ್ ಕಾಮ್’ ಅಂತ! ಆ ರೀತಿಯ ಇಮೇಲ್ ವಿಳಾಸಗಳನ್ನು ಮೊದಲೂ ನೋಡಿದ್ದೆ- ಇಲ್ಲಿ
ನಮ್ಮ ವಾಷಿಂಗ್ಟನ್ ಡಿಸಿಯಲ್ಲಿರುವ ಕನ್ನಡಿತಿ ಸವಿತಾ ರಾವ್ ಅವರು ‘ಕುರ್ಚಿ ಎಟ್ ಯಾಹೂ ಡಾಟ್ ಕಾಮ್’ ಎಂದು,
ಇನ್ನೊಬ್ಬರು ಅನಿತಾ ರಾವ್ ಎಂಬವರು ‘ಅನ್ನಸಾರು ಎಟ್ ಹಾಟ್ ಮೈಲ್ ಡಾಟ್ ಕಾಮ್’ ಎಂದು ಇಟ್ಟುಕೊಂಡಿದ್ದನ್ನು ಅದಾಗಲೇ ಗಮನಿಸಿದ್ದೆ ಮತ್ತು ಆಬಗ್ಗೆ ಅವರಿಬ್ಬರಿಂದ ಮುಖತಃ ಬಣ್ಣನೆಯನ್ನೂ ಕೇಳಿ ಆನಂದಿಸಿದ್ದೆ.

ಪರಂತು ಈ ಈರುಳ್ಳಿಬಜ್ಜಿ ನನಗೆ ಮತ್ತಷ್ಟು ಆಕರ್ಷಕವಾಗಿ ಕಂಡಿತು. ಏನಿರಬಹುದು ಇದರ ಮರ್ಮ ಎಂದು ಯೋಚನೆಗೆ ಹಚ್ಚಿತು. ಅಶೋಕ ರಾವ್‌ರನ್ನೇ ಕೇಳಿದೆ ಅದೇ ವಿಳಾಸಕ್ಕೆ ಇಮೇಲ್ ಬರೆದು. ಬಹುಶಃ ಖುಷಿಯಾಗಿರಬೇಕು, ಸವಿವರವಾಗಿ ಉತ್ತರಿಸಿದರು. ಅದನ್ನು ಅವರದೇ ಮಾತಿನಲ್ಲೆಂಬಂತೆ ಓದಿ: ‘ನಾನಾಗ ಹುಬ್ಬಳ್ಳಿಯಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದೆ.

ಬಹುಶಃ ಐದನೆಯ ತರಗತಿಯೆಂದು ನೆನಪು. 1965ರಲ್ಲಿ ಭಾರತ-ಪಾಕಿಸ್ತಾನ ಯುದ್ಧ, ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿ ಯವರು ಜೈಜವಾನ್ ಜೈಕಿಸಾನ್ ಘೋಷಣೆ ಮಾಡಿದ್ದು, ವಾರದಲ್ಲಿ ಒಂದುದಿನ ಒಪ್ಪೊತ್ತು ಉಪವಾಸ ಮಾಡುವಂತೆ
ದೇಶವಾಸಿಗಳನ್ನು ಬಿನ್ನವಿಸಿದ್ದು ಆಗಲೇ. ನನ್ನ ಅಮ್ಮ ಧಾರ್ಮಿಕ ಕಾರಣಗಳಿಗಾಗಿ ಅದಾಗಲೇ ಪ್ರತಿ ಶುಕ್ರವಾರ ಉಪವಾಸ
ಮಾಡುತ್ತಿದ್ದರು. ಪ್ರಧಾನಿಯವರ ಕರೆಯನ್ನು ಪಾಲಿಸಲೆಂಬಂತೆ ಉಪವಾಸದ ದಿನವನ್ನು ಶುಕ್ರವಾರದಿಂದ ಸೋಮವಾರಕ್ಕೆ
ಬದಲಾಯಿಸುವಂತೆ ನಾನು ಅಮ್ಮನಿಗೆ ಹೇಳಿದೆ. ಆಮೇಲೆ ನಮ್ಮನೆಯಲ್ಲಿ ಎಲ್ಲರೂ ಸೋಮವಾರ ಉಪವಾಸ ಮಾಡತೊಡಗಿ
ದೆವು.

ಒಪ್ಪೊತ್ತು ಉಪವಾಸವಷ್ಟೇ ಸಾಲದು, ಪ್ರಧಾನಮಂತ್ರಿಯವರ ಪರಿಹಾರನಿಧಿಗೆ ಒಂದಿಷ್ಟಾದರೂ ದುಡ್ಡು ಸಂಗ್ರಹಿಸಿ
ಅರ್ಪಿಸಬೇಕೆಂದು ಕೂಡ ನನಗೆ ಉತ್ಕಟ ಆಕಾಂಕ್ಷೆ ಇತ್ತು. ಅದು ನನ್ನ ಸ್ವಂತದ ದುಡ್ಡಿನಿಂದಲೇ ಹೋಗಬೇಕು ಅಂತಲೂ ಇತ್ತು.
ಆದರೇನು ಮಾಡುವುದು ಆಗ ನಮಗೆ ಪಾಕೆಟ್ ಮನಿ ಅಂತೆಲ್ಲ ಕೇಳಿಯೂ ಗೊತ್ತಿರಲಿಲ್ಲವಲ್ಲ. ಪ್ರೈಮರಿ ಸ್ಕೂಲ್ ಹುಡುಗ
ದುಡಿದು ಗಳಿಸುವ ಸಾಧ್ಯತೆಯೂ ಕಾಣುತ್ತಿರಲಿಲ್ಲ. ಆಗ ಹೊಳೆದ ಆಲೋಚನೆಯೇ ಹುಬ್ಬಳ್ಳಿಯಲ್ಲಿ ಸಿದ್ಧಾರೂಢ ಜಾತ್ರೆಯ
ಸಂದರ್ಭದಲ್ಲಿ ಒಂದು ‘ಕಾಂದಾಭಜಿ’ ಅಂಗಡಿ ಇಡೋದು, ಅಲ್ಲಿ ವ್ಯಾಪಾರದಿಂದ ಬಂದ ದುಡ್ಡನ್ನು ಪ್ರಧಾನಿಯವರಿಗೆ ಕಳಿಸೋದು!

ಕಾಂದಾಭಜಿ ಅಂದ್ರೇನೂಂತ ನಿಮಗೆ ತತ್‌ಕ್ಷಣಕ್ಕೆ ಗೊತ್ತಾಗಿರಲಿಕ್ಕಿಲ್ಲ. ನಮ್ಮ ಮನೆಮಾತು ಮರಾಠಿ ಇತ್ತು. ಮರಾಠಿಯಲ್ಲಿ ಕಾಂದಾ ಅಂದರೆ ಈರುಳ್ಳಿ. ಆಫ್‌ಕೋರ್ಸ್, ಹುಬ್ಬಳ್ಳಿಯ ಜನತೆ ಈರುಳ್ಳಿ ಅನ್ನೋದಿಲ್ಲ ಉಳ್ಳಾಗಡ್ಡಿ ಅಂತಾರೆ. ಕೆಲವು ಮಹಾ ಮಡಿವಂತರು ವಿಷ್ಣುಚಕ್ರ ಅಂತನೂ ಹೇಳ್ತಾರೆ. ಆದರೆ ನಮ್ಮನೇಲಿ ಅದು ಕಾಂದಾ. ಕಾಂದಾಭಜಿ ಅಂದರೆ ಈರುಳ್ಳಿಬಜ್ಜಿ. ಪಕೋಡ ಅಂತೀವಲ್ವಾ ಅದೇ. ಮಹಾರಾಷ್ಟ್ರದಲ್ಲಿ, ಮುಖ್ಯವಾಗಿ ಸಾಂಗ್ಲಿ ಆಸುಪಾಸಿನಲ್ಲಿ ಈರುಳ್ಳಿ ಬೆಳೆಯುವುದು ಜಾಸ್ತಿ, ಉಪಯೋಗಿಸುವುದೂ ಜಾಸ್ತಿ.

ಪ್ರತಿವರ್ಷ ಆಷಾಢ ಮಾಸದ ಪ್ರಥಮೈಕಾದಶಿಗೆ ಎರಡುದಿನ ಮೊದಲು ‘ಕಾಂದಾ ನವಮಿ’ ಎಂದೇ ಆಚರಣೆ ಇರುತ್ತದೆ. ಮುಂದೆ ಚಾತುರ್ಮಾಸ್ಯದಲ್ಲಿ ನಾಲ್ಕು ತಿಂಗಳು ಈರುಳ್ಳಿ ಮುಟ್ಟುವುದೂ ವರ್ಜ್ಯ ಆದ್ದರಿಂದ ಆ ನವಮಿಯಂದು ಭರ್ಜರಿ ಈರುಳ್ಳಿ ಭಕ್ಷ್ಯಣ. ಪಾಯಸ ಒಂದನ್ನು ಬಿಟ್ಟು ಎಲ್ಲ ಭಕ್ಷ್ಯಭೋಜ್ಯಗಳೂ ಈರುಳ್ಳಿಯವೇ. ನಮ್ಮನೆಯಲ್ಲೂ ಈರುಳ್ಳಿ ಸಂಸ್ಕೃತಿ ಬಹು ಮಟ್ಟಿಗೆ ಅದೇಥರ ಇರುತ್ತಿತ್ತು.

ಇನ್ನೊಂದು ವಿಚಾರವೆಂದರೆ ನಮ್ಮ ಅಮ್ಮನಿಗೆ ಹೆಣ್ಣುಮಕ್ಕಳಿಲ್ಲ, ಹಾಗಾಗಿ, ನಾನೂ ನನ್ನ ತಮ್ಮನೂ ಅಮ್ಮನಿಗೆ ಅಡುಗೆ ಕೆಲಸದಲ್ಲಿ ಸಹಾಯ ಮಾಡುತ್ತಿದ್ದೆವು. ಈರುಳ್ಳಿಯ ಥಿನ್ನೆಸ್ಟ್ ಸ್ಲೈಸಸ್ ಮಾಡುವ ಚಾಕ(ಕು)ಚಕ್ಯತೆಯನ್ನು ನಾನು ಚಿಕ್ಕಂದಿ ನಿಂದಲೇ ಗಳಿಸಿದ್ದೆ. ನನ್ನ ಆ ಎಕ್ಸ್‌ಪರ್ಕೈಸು ಕಾಂದಾಭಜಿ ಸ್ಟಾಲ್ ಇಡುವಾಗ ಉಪಯೋಗಕ್ಕೆ ಬರುತ್ತದೆಂದು ನನಗೆ ಗೊತ್ತಿತ್ತು. ಶಾಲೆಯಲ್ಲಿ ನಮಗೆ ಚೌಗಲೆ ಮಾಸ್ತರರು, ಹೊಸರಿತ್ತಿ ಮಾಸ್ತರರು, ಮತ್ತು ಇನ್ನೂಒಬ್ಬರು (ಹೆಸರು ನೆನಪಾಗ್ತಿಲ್ಲ) ಮಾಸ್ತರರು ಇದ್ದರು. ಅವರಿಗೆ ನನ್ನ ಐಡಿಯಾ ತಿಳಿಸಿದೆ. ಅವರು ಕಾಂದಾಭಜಿ ಸ್ಟಾಲ್ ಇಡಲಿಕ್ಕೆ ಅನುಮತಿ ನೀಡಿದರು.

ಅಷ್ಟೇಅಲ್ಲ, ಸಹಾಯಕ್ಕೆಂದು ಇನ್ನೂ ಒಂದಿಬ್ಬರು ಹುಡುಗರನ್ನು ಗೊತ್ತುಮಾಡಿಕೊಟ್ಟರು. ಈರುಳ್ಳಿಯ ಅತಿಸಪೂರ ಸ್ಲೈಸಸ್ ಮಾಡಲಿಕ್ಕೆ ನಾನು, ಎಣ್ಣೆಯಲ್ಲಿ ಕರಿಯಲಿಕ್ಕೆ ಒಬ್ಬ ದೊಡ್ಡ ಹುಡುಗ, ಕ್ಲೀನಿಂಗಿಗೆ ಇನ್ನೊಬ್ಬ ಚಿಕ್ಕ ಹುಡುಗ. ಗಲ್ಲಾಪೆಟ್ಟಿಗೆ ನಿರ್ವಹಿಸಲಿಕ್ಕೆ ಖುದ್ದಾಗಿ ಮಾಸ್ತರರೇ ಮುಂದೆ ಬಂದರು. ಜೈಸಿದ್ಧಾರೂಢ! ಎಂದುಹೇಳಿ ಜಾತ್ರೆಯಲ್ಲಿ ನಮ್ಮ ಕಾಂದಾಭಜಿ ಸ್ಟಾಲ್ ತೆರೆದೆವು. ನಾವು ಎಣಿಸಿದ್ದಕ್ಕಿಂತ ಬಿರುಸಾಗಿಯೇ ವ್ಯಾಪಾರ ನಡೆಯಿತು. ಗಳಿಸಿದ ದುಡ್ಡನ್ನೆಲ್ಲ ಪ್ರಧಾನಮಂತ್ರಿ ಪರಿಹಾರನಿಧಿಗೆ ಕಳುಹಿಸಿದೆವು.

ಮೊತ್ತ ಎಷ್ಟಿತ್ತೆಂದು ಸರಿಯಾಗಿ ನೆನಪಿಲ್ಲ, ಅಥವಾ ಅದು ಮುಖ್ಯವೂ ಅಲ್ಲ. ಏನೋ ಒಂದಿಷ್ಟನ್ನು ಸಂಪಾದಿಸಿ ಕಳುಹಿಸಿದೆವಲ್ಲ ಅದೇ ದೊಡ್ಡ ತೃಪ್ತಿ, ಅಭಿಮಾನದ ಸಂಗತಿ. ಶಾಲೆ, ಕಾಲೇಜು ವಿದ್ಯಾಭ್ಯಾಸ ಮುಗಿದ ಮೇಲೆ ವೃತ್ತಿ ಜೀವನದಲ್ಲಿ ಬೇರೆಬೇರೆ ಊರುಗಳಲ್ಲಿ ಬದುಕು ಸವೆಸಿದೆ. ಮದುವೆಯಾಗಿ ಸಂಸಾರ ಹೂಡಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲೂ ದುಡಿದು ನಿವೃತ್ತನಾದೆ. ನನಗೆ ಇಬ್ಬರು ಹೆಣ್ಮಕ್ಕಳು. ದೊಡ್ಡವಳು ವೈದ್ಯೆಯಾಗಿ ಆಸ್ಟ್ರೇಲಿಯಾದಲ್ಲಿದ್ದಾಳೆ. ಚಿಕ್ಕವಳು ಎಂಜಿನಿಯರಿಂಗ್ ಓದಿ ಈಗ ಅಮೆರಿಕ ದಲ್ಲಿದ್ದಾಳೆ. ಆಸ್ಟ್ರೇಲಿಯಾಕ್ಕೆ ನಾನೊಮ್ಮೆ ಮಗಳ ಮನೆಗೆ ಹೋಗಿದ್ದಾಗಲೇ ಕಾಲಕ್ಷೇಪಕ್ಕಾಗಿ ಇಂಟರ್‌ನೆಟ್ ನಲ್ಲಿ ವಿಜಯ ಕರ್ನಾಟಕ ಇ-ಪೇಪರ್, ಅದರಲ್ಲಿ ನಿಮ್ಮ ಅಂಕಣವನ್ನೂ ಓದುತ್ತಿದ್ದೆ. ರಸಪ್ರಶ್ನೆಗಳು ನನ್ನನ್ನು ಕೆಣಕುತ್ತಿದ್ದವು.

ನಿಮಗೆ ಉತ್ತರ ಬರೆದು ಕಳುಹಿಸುವುದಕ್ಕೆ ನನ್ನದು ಅಂತ ಇಮೇಲ್ ಐಡಿ ಮಾಡ್ಕೊಂಡಿದ್ದೂ ಆಗಲೇ. ಲಾಲ್ ಬಹಾದುರ್
ಶಾಸ್ತ್ರೀಜಿಯವರೆಂದರೆ ನನಗೆ ಎಂದೆಂದಿಗೂ ಅಭಿಮಾನ. ಅವರ ಕರೆಗೆ ಓಗೊಟ್ಟು ನಾವು ಒಪ್ಪೊತ್ತು ಉಪವಾಸ ಮಾಡು ತ್ತಿದ್ದದ್ದು, ಹುಬ್ಬಳ್ಳಿಯ ಸಿದ್ಧಾರೂಢ ಜಾತ್ರೆಯಲ್ಲಿ ಕಾಂದಾಭಜಿ ಮಾರಿ ದುಡ್ಡು ಸಂಗ್ರಹಿಸಿ ಪರಿಹಾರನಿಽಗೆ ಕಳುಹಿಸಿದ್ದು… ಎಲ್ಲ ಸವಿ ನೆನಪು.

ಅದು ಇನ್ನೂ ಹಸುರಾಗೇ ಇರಲಿ ಎಂಬ ಉದ್ದೇಶದಿಂದ ಇಮೇಲ್ ಐಡಿ ಮಾಡುವಾಗ ಯೂಸರ್ ನೇಮ್‌ನಲ್ಲಿ ನನ್ನ ಹೆಸರಿನ ಬದಲಿಗೆ ಈರುಳ್ಳಿಬಜ್ಜಿ ಎಂದು ಎಂಟರ್ ಮಾಡಿದೆ. ಯಾಹೂ ವೆಬ್‌ಸೈಟ್ ತಥಾಸ್ತು ಎಂದಿತು. ಈರುಳ್ಳಿಬಜ್ಜಿ ಡಾಟ್ ಕಾಮ್ ನನ್ನ ಇಮೇಲ್ ಐಡಿ ಆಯ್ತು. ನೀವು ಸೂಕ್ಷ್ಮವಾಗಿ ಗಮನಿಸಿ ಕೇಳಿದಿರಲ್ಲ ಅದೇ ನನಗೆ ಸಂತೋಷ!’ ಅಶೋಕ ರಾವ್ ಇಷ್ಟೆಲ್ಲ ಸವಿಸ್ತಾರ ಬರೆದು ತಿಳಿಸಿದ್ದರಿಂದ ನನಗೆ ಏಕ್‌ದಂ ಆತ್ಮೀಯರಾಗಿಬಿಟ್ಟರು. ಆಮೇಲೆ ಮರುವರ್ಷವೋ ಏನೋ ನಾನೊಮ್ಮೆ ಊರಿಗೆ ಹೋಗಿದ್ದಾಗ ಮೈಸೂರಿಗೆ ಹೋಗಿದ್ದವನು ಅವರ ಮನೆಗೂ ಭೇಟಿ ನೀಡಿದ್ದೆ.

ಮೈಸೂರಿನಲ್ಲಿ ನನ್ನ ಅಕ್ಕನ ಮನೆಗೆ ಬಂದು ಅವರೇ ಕರೆದುಕೊಂಡು ಹೋಗಿದ್ದರು. ಸಾಕಷ್ಟು ಆದರಾತಿಥ್ಯ ಮಾಡಿ ಬೀಳ್ಕೊಟ್ಟಿ ದ್ದರು. ಆದರೂ ಅವರಿಗೆ ಸಮಾಧಾನವಾಗಿರಲಿಲ್ಲ ಎಂದು ಕಾಣುತ್ತದೆ. ನನಗೇನಾದರೂ ಉಡುಗೊರೆ ನೀಡಬೇಕು ಎಂದು ಬಹುಶಃ ಅವರ ಆಶಯವಿದ್ದದ್ದು. ಅದನ್ನವರು ಪೂರೈಸಿದ ರೀತಿಯೂ ಭಲೇ ಮಜಾ ಇದೆ. ಅದನ್ನೀಗ ವಿವರಿಸುತ್ತೇನೆ. ಆ ಟ್ರಿಪ್‌ನಲ್ಲಿ ನಾನು ಮೈಸೂರಿಗೆ ಹೋದದ್ದು ಮುಖ್ಯವಾಗಿ ಜಿ.ಟಿ.ನಾರಾಯಣರಾಯರ ಮೊಮ್ಮಗಳು ಅಕ್ಷರಿಯ ಮದುವೆ ಸಮಾರಂಭದಲ್ಲಿ ಭಾಗವಹಿಸಲಿಕ್ಕೆ.

ಅಶೋಕ ರಾವ್ ಅವರ ಮನೆಗೆ ಭೇಟಿ ನೀಡಿದ ಮಾರನೆ ದಿನವೇ ಆ ಮದುವೆ ಇದ್ದದ್ದು. ಆವತ್ತು ನಾನು ಕಲ್ಯಾಣಮಂಟಪದಲ್ಲಿದ್ದ ಹೊತ್ತಿಗೇ ಅಶೋಕ ರಾವ್ ಅಲ್ಲಿಗೆ ಒಬ್ಬ ಕೈಲರ್‌ನನ್ನೂ ಕರೆದುಕೊಂಡು ಬಂದರು. ನನ್ನನ್ನು ಕಲ್ಯಾಣ ಮಂಟಪದ ಹೊರಕ್ಕೆ ಕರೆದರು. ಅಲ್ಲಿ ಎದುರಿನ ಬಯಲಿನಲ್ಲಿ ದಿಬ್ಬಣದ ಎರಡು ಬಸ್ಸುಗಳನ್ನು ಪಾರ್ಕ್ ಮಾಡಿದ್ದಿತ್ತು. ಅವುಗಳ ನಡುವಿನ ಸಂದಿಗೆ ನಾವು ಮೂವರೂ ಹೋದೆವು. ಕೈಲರ್ ಅಲ್ಲಿ ನನ್ನ ಶರ್ಟ್‌ನ ಅಳತೆ ಗುರುತು ಮಾಡಿಕೊಂಡನು. ಆಮೇಲೆ ಅವರಿಬ್ಬರೂ ಅಲ್ಲಿಂದ ಹೊರಟುಹೋದರು. ನಾನು ಮದುವೆ ಸಮಾರಂಭ ಮತ್ತು ಊಟ ಮುಗಿಸಿ ಬೆಂಗಳೂರಿಗೆ ಹಿಂದಿರುಗಿದೆ.

ನಾಲ್ಕೈದು ದಿನಗಳಾದ ಮೇಲೆ ಅಶೋಕ ರಾವ್ ಬೆಂಗಳೂರಿಗೆ ಬಂದರು. ನೀಟಾಗಿ ಹೊಲಿದಿದ್ದ ಆ ಶರ್ಟ್‌ಅನ್ನು ನನಗೆ ಉಡುಗೊರೆ ನೀಡಿದರು. ಏನೋಒಂದು ಧನ್ಯತೆ ಅವರ ಮುಖದಲ್ಲಿ. ನನಗೆ ಮಾತೇ ಹೊರಡಲಿಲ್ಲ. ಏನೆನ್ನಲಿ ಅವರ ನಿಷ್ಕಲ್ಮಷ ಪ್ರೀತ್ಯಭಿಮಾನಕ್ಕೆ! ನನಗೆ ಗೊತ್ತು ಇದನ್ನಿಲ್ಲಿ ಬರೆದದ್ದು ಅವರಿಗೆ ಸ್ವಲ್ಪವೂ ಇಷ್ಟವಾಗುವುದಿಲ್ಲ. ಆದರೇನು ಮಾಡಲಿ ಬರೆಯದೆ ಇರಲಿಕ್ಕೆ, ಕೆಲವು ಸೂಕ್ಷ್ಮ ಭಾವನೆಗಳನ್ನು ಗುರುತಿಸಿ ಗೌರವಿಸದೆ ಇರಲಿಕ್ಕೆ ನನ್ನಿಂದ ಆಗುವುದಿಲ್ಲ.

ಇಂತಿರುವ ಅಶೋಕ ರಾವ್ ಜೊತೆ ನಡುವೆ ಕೆಲವು ವರ್ಷ ಸಂಪರ್ಕ ಕಡಿದುಹೋಗಿತ್ತು. ಕಳೆದ ವರ್ಷ ಅಮೆರಿಕಕ್ಕೆ ಕಿರಿಮಗಳ
ಮನೆಗೆ ಬಂದವರು ನನ್ನನ್ನು ಮತ್ತೆ ಸಂಪರ್ಕಿಸಿದರು. ಈ ಬಾರಿ ಇಮೇಲ್‌ನಲ್ಲಿ ಅಲ್ಲ, ವಾಟ್ಸ್ಯಾಪ್‌ನಲ್ಲಿ. ಅದೇ ಸಜ್ಜನಿಕೆ,
ಹೃದಯವಂತಿಕೆ, ಬದುಕನ್ನು ಸಂತೃಪ್ತಿಯಿಂದ ಕಳೆದ ಪಕ್ವತೆ. ನೆನಪುಗಳ ಮೂಟೆ ಬಿಚ್ಚಿ ಭಲೇ ಸ್ವಾರಸ್ಯಕರ ಸಂಗತಿಗಳನ್ನು
ಹಂಚಿಕೊಳ್ಳುತ್ತಾರೆ. ಬ್ಯಾಂಕ್ ನೌಕರಿಗಾಗಿ ಪಂಜಾಬ್‌ನಲ್ಲಿದ್ದಾಗ ರಾಜೀವ್‌ಗಾಂಧಿ ಹತ್ಯೆಯ ಬಳಿಕ ಅಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿ, ಕನ್ನಡ ಓದಿನ ಹಸಿವನ್ನು ತಣಿಸುವುದಕ್ಕಾಗಿ ಅಲ್ಲಿಗೆ ದಿಲ್ಲಿಯಿಂದ ಸುಧಾ ಮತ್ತು ಲಂಕೇಶ್ ಪತ್ರಿಕೆ ತರಿಸುತ್ತಿದ್ದದ್ದು, ಒಮ್ಮೆ ಲಂಕೇಶ್ ಪತ್ರಿಕೆಯ ಮುಖಪುಟದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡುತ್ತಿರುವ ಚಿತ್ರವಿದ್ದದ್ದು, ಆ ಪತ್ರಿಕೆ ಓದುವ ಇವರೊಬ್ಬ ಭಯೋತ್ಪಾದಕನೇ ಇರಬಹುದೆಂಬ ಶಂಕೆಯಿಂದ ಬ್ಯಾಂಕ್ ಶಾಖೆಗೆ ಪೊಲೀಸರು ಬಂದದ್ದು, ಅಂಥದ್ದೇನಿಲ್ಲ ಅದೊಂದು ಕನ್ನಡ ಭಾಷೆಯ ನಿಯತಕಾಲಿಕ ಅಷ್ಟೇ ಎಂದು ಪಂಜಾಬ್ ಯುನಿವರ್ಸಿಟಿಯ ಲಿಂಗ್ವಿಸ್ಟಿಕ್ ಡಿಪಾರ್ಟ್‌ನೆಂಟ್‌ ನವರು ಕ್ಲಿಯರೆನ್ಸ್ ಕೊಟ್ಟದ್ದು… ಹಾಗೆಯೇ ದಕ್ಷಿಣಕನ್ನಡದ ಕಿನ್ನಿಗೋಳಿಯಲ್ಲಿದ್ದಾಗ ಒಬ್ಬರ ಮನೆಯಲ್ಲಿ ಶ್ರಾದ್ಧದೂಟದಲ್ಲಿ ಸೀಕರಣೆ ಸವಿದದ್ದು… ಮುಂತಾದ ಜೀವನಾನುಭವಗಳನ್ನು ನೆನಪಿಸಿಕೊಂಡು ರೋಚಕವಾಗಿ ಬಣ್ಣಿಸುತ್ತಾರೆ.

ಅಂದಹಾಗೆ ಈರುಳ್ಳಿಬಜ್ಜಿ ಎಟ್ ಯಾಹೂ ಡಾಟ್ ಕಾಮ್ ಈಗ ನಿಷ್ಕ್ರಿಯವಾಗಿದೆಯಂತೆ. ಅದರ ಪಾಸ್‌ವರ್ಡ್ ಮರೆತುಹೋದ
ದ್ದನ್ನು ಸರಿಪಡಿಸಬೇಕಾದರೆ, ಖಾತೆ ತೆರೆಯುವಾಗ ಕೊಟ್ಟಿದ್ದ ಫೋನ್ ನಂಬರ್ ಆಸ್ಟ್ರೇಲಿಯಾದಲ್ಲಿ ಮಗಳು ಈ ಹಿಂದೆ ಕೆಲಸ
ಮಾಡುತ್ತಿದ್ದ ಆಸ್ಪತ್ರೆಯದು ಈಗ ಚಾಲ್ತಿಯಲ್ಲಿಲ್ಲವಂತೆ. ಇಮೇಲ್ ಐಡಿ ಇಲ್ಲದಿದ್ದರೇನಂತೆ, ವಾಟ್ಸ್ಯಾಪ್‌ನಲ್ಲಿ ನಾನವರ ಕಾಂಟಾಕ್ಟ್ ನಂಬರ್‌ಅನ್ನು ‘ಅಶೋಕರಾವ್ ಈರುಳ್ಳಿಬಜ್ಜಿ’ ಎಂದೇ ಸೇವ್ ಮಾಡಿಟ್ಟುಕೊಂಡಿದ್ದೇನೆ.

ಯಾಹೂ ಬಿಟ್ಟುಬಿಡಿ ಈರುಳ್ಳಿಬಜ್ಜಿ ಎಟ್ ಜಿಮೇಲ್ ಡಾಟ್ ಕಾಮ್ ಎಂದು ಹೊಸ ಐಡಿ ಮಾಡಿಕೊಳ್ಳಿ ಎಂದು ಅವರಿಗೊಂದು ಐಡಿಯಾ ಕೊಟ್ಟಿದ್ದೇನೆ. ಏಕೆಂದರೆ ಲಾಲ್ ಬಹಾದುರ್ ಶಾಸ್ತ್ರೀಜಿಯವರ ಸ್ಮರಣೆ ಮುಂದುವರಿಯಬೇಕು. ಅವರ ಆದರ್ಶ ನಮಗೆ ದಾರಿದೀಪವಾಗಬೇಕು.

error: Content is protected !!