Wednesday, 1st December 2021

ಯಡಿಯೂರಪ್ಪ ರಾಜೀನಾಮೆ ಬೆನ್ನಲ್ಲೇ ಶಿಕಾರಿಪುರದಲ್ಲಿ ನೀರವ ಮೌನ, ಅಂಗಡಿಗಳ ಮುಚ್ಚುಗಡೆ

ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮುಂದಿನ ಮುಖ್ಯಮಂತ್ರಿ ಆಯ್ಕೆಯಾಗುವ ತನಕ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.

ಸೋಮವಾರ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆಯೇ ತವರು ಕ್ಷೇತ್ರ ಶಿಕಾರಿಪುರದಲ್ಲಿ ಸ್ವಯಂ ಪ್ರೇರಿತ ವಾಗಿ ಬಂದ್ ಮಾಡಲಾಗಿದೆ. ಅಂಗಡಿಗಳನ್ನು ವ್ಯಾಪಾರಿಗಳು ಮುಚ್ಚಿದ್ದು, ಶಿಕಾರಿಪುರದಲ್ಲಿ ನೀರವ ಮೌನ ಆವರಿಸಿದೆ.

ಯಡಿಯೂರಪ್ಪ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಬೂಕನಕೆರೆಯಲ್ಲಿ. ಆದರೆ ರಾಜಕೀಯವಾಗಿ ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದಲ್ಲಿ. ಶಿಕಾರಿಪುರ ಪುರಸಭೆ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು.

ಪ್ರಸ್ತುತ ಯಡಿಯೂರಪ್ಪ ಶಿಕಾರಿಪುರ ಕ್ಷೇತ್ರದ ಶಾಸಕರು. ತಮ್ಮ ನೆಚ್ಚಿನ ನಾಯಕನ ರಾಜೀನಾಮೆ ಹಿನ್ನಲೆಯಲ್ಲಿ ಅವರ ಅಭಿಮಾನಿಗಳು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಮುಚ್ಚಿ ಬಂದ್ ಮಾಡಿದ್ದಾರೆ.

ಶಿಕಾರಿಪುರದ ಶಾಸಕರಾಗಿ, ಶಿವಮೊಗ್ಗದ ಸಂಸದರಾಗಿ ಯಡಿಯೂರಪ್ಪ ಕಾರ್ಯ ನಿರ್ವಹಣೆ ಮಾಡಿದ್ದಾರೆ.