Wednesday, 1st December 2021

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಪರೀಕ್ಷಾ ಕೇಂದ್ರಗಳು ಸಿದ್ಧ

ಶಿವಮೊಗ್ಗ: ಸೋಮವಾರದಿಂದ ನಡೆಯುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಾಗಿ ಭಾನುವಾರ ಜಿಲ್ಲೆಯಾದ್ಯಂತ ಪರೀಕ್ಷಾ ಕೇಂದ್ರಗಳನ್ನು ಸಿದ್ಧಗೊಂಡಿವೆ.

ಜಿಲ್ಲೆಯಲ್ಲಿ ಒಟ್ಟು 150 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಹೊರ ಜಿಲ್ಲೆಯಿಂದ ಬಂದ 253 ವಿದ್ಯಾರ್ಥಿ ಗಳು ಸೇರಿ ಒಟ್ಟು 25,024 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇದರಲ್ಲಿ 13,013 ವಿದ್ಯಾರ್ಥಿಗಳು, 12,011 ವಿದ್ಯಾರ್ಥಿನಿಯರು ಪರೀಕ್ಷೆ ಬರೆಯಲಿದ್ದಾರೆ. 6 ಅಡಿ ಅಂತರದಲ್ಲಿ ಪ್ರತಿ ಕೋಣೆಯಲ್ಲಿ 12 ವಿದ್ಯಾರ್ಥಿ ಗಳು ಕೂರಲು ವ್ಯವಸ್ಥೆ ಮಾಡಲಾಗಿದೆ ಎಂದು ಡಿಡಿಪಿಐ ಎನ್‌.ಎಂ.ರಮೇಶ್‌ ತಿಳಿಸಿದರು.

ವಿದ್ಯಾರ್ಥಿಗಳ, ಶಿಕ್ಷಕರ ಆರೋಗ್ಯದ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಿಸಲಾಗಿದೆ. ಕೇಂದ್ರದ ಮೇಲುಸ್ತುವಾರಿಗೆ ಶಿಕ್ಷಕರೊಂದಿಗೆ ಸ್ಕೌಟ್ಸ್‌ ಮತ್ತು ಗೈಡ್ಸ್ ಸ್ವಯಂ ಸೇವಕರು ಇರಲಿದ್ದಾರೆ. ಸ್ಕೌಟ್ಸ್‌ ಮತ್ತು ಗೈಡ್ಸ್‌ನಿಂದ ಒಟ್ಟು 25,500 ಮಾಸ್ಕ್‌ಗಳನ್ನು ನೀಡಿದ್ದು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ 4,000 ಮಾಸ್ಕ್‌ಗಳನ್ನು ನೀಡಲಾಗಿದೆ. ಹೀಗಾಗಿ ಮಾಸ್ಕ್‌ ವಿತರಣೆಗೆ ಯಾವುದೇ ತೊಂದರೆ ಇಲ್ಲ ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದ್ದು, ಸೋಮವಾರ ನಡೆಯಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಮಳೆ ಭೀತಿ ಎದುರಾಗಿದೆ. ಮಳೆ ಕಾರಣಕ್ಕೆ ಮಕ್ಕಳು ಪರೀಕ್ಷೆಗೆ ತಡವಾಗಿ ಬಾರದಂತೆ ನೋಡಿಕೊಳ್ಳುವ ಉದ್ದೇಶದಿಂದ ಬೆಳಿಗ್ಗೆ 8ರ ನಂತರ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಲಾಗಿದೆ. ಮಕ್ಕಳು ಬೇಗನೆ ಕೇಂದ್ರಗಳಿಗೆ ಬರಬಹುದು. ಬೇಗ ಬಂದ ಮಕ್ಕಳಿಗೆ ಕೇಂದ್ರಗಳಲ್ಲಿ ಇರಲು ವ್ಯವಸ್ಥೆ ಮಾಡಲಾಗುವುದು ಎಂದು ಡಿಡಿಪಿಐ ತಿಳಿಸಿದರು.