ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಪಾಲ್ಗೊಂಡಿದ್ದ ಮೆರವಣಿಗೆ
ಶಿವಮೊಗ್ಗ: ಕಳೆದ ಭಾನುವಾರ ಹತ್ಯೆಗೀಡಾದ ಬಜರಂಗದಳ ಕಾರ್ಯಕರ್ತ ಹರ್ಷನ ಅಂತಿಮ ಯಾತ್ರೆ ವೇಳೆ ಸಿದ್ದಯ್ಯ ರಸ್ತೆಯಲ್ಲಿ ಕಲ್ಲು ತೂರಾಟ ನಡೆಸಲಾಗಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.
ಹರ್ಷನ ನಿವಾಸಕ್ಕೆ ಮೃತದೇಹ ತಂದ ನಂತರ ಸಚಿವ ಈಶ್ವರಪ್ಪ, ಸಂಸದ ರಾಘವೇಂದ್ರ ಅವರುಗಳು ಅಂತಿಮ ದರ್ಶನ ಪಡೆದರು. ಆನಂತರ ಅಲ್ಲಿಂದ ರೋಟರಿ ಚಿತಾಗಾರಕ್ಕೆ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆ ಸಿದ್ಧಯ್ಯ ರಸ್ತೆ ತಲುಪುತ್ತಿದ್ದಂತೆಯೇ ಏಕಾಏಕಿ ಮತ್ತೆ ಕಲ್ಲು ತೂರಾಟ ಆರಂಭವಾಗಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ.
ಕಲ್ಲು ತೂರಾಟದಿಂದ ಹಲವು ಮಂದಿಗೆ ಗಾಯವಾಗಿದ್ದು, ಓರ್ವನಿಗೆ ಗಂಭೀರವಾದ ಗಾಯವಾಗಿದೆ ಎಂದು ವರದಿಯಾಗಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಲಾಠಿ ಪ್ರಹಾರ ನಡೆಸ ಲಾಗಿದ್ದು, ಕೆಲವು ಕಡೆಗಳಲ್ಲಿ ಟಿಯರ್ ಗ್ಯಾಸ್ ಪ್ರಯೋಗ ಮಾಡಲಾಗಿದೆ.
ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿಗಳು ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ.