Friday, 27th May 2022

ಶಿಶುನಾಳರನ್ನು ಮತ್ತೆ ಬದುಕಿಸಿದ ಸಂಗೀತಾ

ಡಾ.ಜಯಶ್ರೀ ಅರವಿಂದ್

ಸಂಗೀತಾ ಕ್ಯಾಸೆಟ್ ಸಂಸ್ಥೆಯ ಸಂಸ್ಥಾಪಕರೂ, ಸಂಗೀತ ಪ್ರೇಮಿಯೂ ಆದ ಎಚ್.ಎಂ.ಮಹೇಶ್ ಅವರ ಬದುಕು ಹೋರಾಟ ದಿಂದ ತುಂಬಿತ್ತು. ಅವರ ಹೋರಾಟವೆಲ್ಲವೂ ಸುಮಧುರ ಸಂಗೀತವನ್ನು ನಾಡಿನಾದ್ಯಂತ ಪ್ರಚುರ ಪಡಿಸಲು ಮೀಸಲಾಗಿತ್ತು. ಬಿ.ಕೆ.ಸುಮಿತ್ರಾ ದನಿಯಲ್ಲಿ ‘ನಿಂಬಿಯಾ ಬನದ ಮ್ಯಾಗಳ’ ದಂತಹ ಜನಪದ ಗೀತೆಗಳನ್ನು, ಸಿ.ಅಶ್ವತ್ಥ್ ಅವರ ದನಿಯಲ್ಲಿ ಷರೀಫರ ಗೀತೆಗಳನ್ನು ಕ್ಯಾಸೆಟ್‌ಗೆ ಅಳವಡಿಸಿ, ಆ ಹಾಡುಗಳು ಕನ್ನಡ ನಾಡಿನ ಮೂಲೆ  ಮೂಲೆಗೆ ತಲುಪಿಸುವಲ್ಲಿ ಸಂಗೀತಾ ಸಂಸ್ಥೆಯ ಮತ್ತು ಮಹೇಶ್ ಅವರ ಕೊಡುಗೆ ಬಹು ದೊಡ್ಡದು. ಎಚ್.ಎಂ. ಮಹೇಶ್ ಅವರು ನಮ್ಮನ್ನು ಅಗಲಿದ ಈ ಸಂದರ್ಭ ದಲ್ಲಿ, ಅವರ ಜೀವನಚರಿತ್ರೆಯ ಆಯ್ದ ಭಾಗಗಳನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.

ಮಹೇಶ್ ಅವರು ಸರಸ್ವತೀ ಸ್ಟೋರ್ಸ್‌ನಲ್ಲಿದ್ದಾಗ ಒಮ್ಮೆ ಬಿ.ವಿ. ಕಾರಂತರು ‘ಸತ್ತವರ ನೆರಳು’ ನಾಟಕದ ಧ್ವನಿಮುದ್ರಣಕ್ಕಾಗಿ ಮದರಾಸಿಗೆ ಬಂದಿದ್ದಾಗ ಅವರ ಜೊತೆ ಕರ್ನಾಟಕದ ಗಾಯಕರಾದ ಸಿ. ಅಶ್ವತ್ಥರನ್ನು ಕರೆತಂದಿದ್ದರು. ಯುವಕ ಅಶ್ವತ್ ತಮ್ಮ ತೇಜಸ್ಸು ತುಂಬಿದ ಠೀವಿ, ಗತ್ತುಗಳಿಂದ, ಸಂಗೀತದ ಮೇಲಿನ ಕಳಕಳಿಯಿಂದ ಮಹೇಶ್ ಅವರ ಗಮನ ಸೆಳೆದಿದ್ದರು.

ಮಹೇಶ್‌ರವರು ಸಂಗೀತಾ ಸಂಸ್ಥೆಯನ್ನು ಪ್ರಾರಂಭಿಸಿ ಜನಪ್ರಿಯವಾಗುತ್ತಿರುವಾಗ ಒಮ್ಮೆ ತಾವು ನಾಲ್ಕು ಗೀತೆಗಳನ್ನು ಸಂಗೀತಕ್ಕೆ ಅಳವಡಿಸಿರುವುದಾಗಿಯೂ, ಅದನ್ನು ಮಹೇಶ್ ರವರು ಧ್ವನಿಮುದ್ರಿಕೆಗೆ ಸ್ವೀಕರಿಸಬೇಕೆಂದೂ ಅಶ್ವತ್ ಅವರು ಕೇಳಿಕೊಂಡರು. ಹಾಡು ಕೇಳಿದ ಮಹೇಶ್ ಅವರು ‘ಬರೀ ನಾಲ್ಕು ಹಾಡು ಇಟ್ಟುಕೊಂಡು ಏನು ಮಾಡೋದ್ರಿ?’ ಎಂದರು. ಅಶ್ವತ್ ಅವರು ಕಂಗಾಲಾಗಿ, ಹಾಗಾದ್ರೆ ಏನು ಮಾಡುವುದು ಮಹೇಶರೇ.. ಎಂದಾಗ ಒಂದು ಹತ್ತು ಹಾಡಾದ್ರೂ ಮಾಡಿಕೊಡ್ತೀ.. ಎಂದು ನಕ್ಕಾಗ, ಅಶ್ವತ್ಥರವರ ಮುಖ ತಾವರೆಯ ಹೂವಿನ ಹಾಗೆ ಅರಳಿ ಹೋಯಿತು.

ಉತ್ಸಾಹಿಯೂ, ಅದಮ್ಯ ಚೈತನ್ಯಶೀಲನೂ ಆದ ಅಶ್ವತ್, ದಿನ ಮಾತ್ರದಲ್ಲಿ ಹತ್ತು ಹಾಡುಗಳನ್ನು ಸಿದ್ಧ ಮಾಡಿದರು. ‘ಸಂತ ಶಿಶುನಾಳಧೀಶರ ತತ್ವಪದ’ ಬಿಡುಗಡೆಯಾಗಿ ಅತ್ಯಂತ ಪ್ರಸಿದ್ಧವಾಯಿತು. ವಿತರಕರು ಎರಡು ದಿನಗಳಿಗೊಮ್ಮೆ ಇನ್ನೂರು,  ಮುನ್ನೂರು, ಐನೂರು ಸಂಖ್ಯೆಯಲ್ಲಿ ಮತ್ತೆ ಮತ್ತೆ ರಿಪೀಟ್ ಆರ್ಡರ್ ನೀಡಿ ಖರೀದಿಸತೊಡಗಿದರು.

ತತ್ವಪದದ ಮೂಲಕ ಸಾಮಾಜಿಕ ಕ್ರಾಂತಿಯನ್ನು ಮಾಡಿದ ‘ಸಂತ ಶಿಶುನಾಳಧೀಶ’ರ ಆ ಗೀತೆಗಳು, ತಮ್ಮ ವಿನೂತನ ಶೈಲಿಯ ಸಾಹಿತ್ಯ ರಚನೆಯಿಂದ, ಹೊಂದುವ ಜಾನಪದೀಯ ಗೇಯತೆಯಿಂದ ಒಂದು ಹೊಸ ಆವರಣ ವನ್ನೇ ಸೃಷ್ಟಿ ಮಾಡಿದುವು.
ಆವರೆಗೂ ಅeತವಾಗಿದ್ದು ಒಮ್ಮೆಲೆ ಬೆಳಕಿಗೆ ಬಂದ ಆ ತತ್ವಪದಗಳು ಪುಸ್ತಕ ರೂಪದಲ್ಲಿ ಕವಿ ಡಾ. ಲಕ್ಷ್ಮೀನಾರಾಯಣ ಭಟ್ಟ ಅವರ ಶ್ರಮದಿಂದ ಹೊರಬಂದವು. ಭಟ್ಟರಿಂದ ಪರಿಷ್ಕಾರಗೊಂಡು ಹೊರಬಂದು, ಗೀತೆಗಳ ರೂಪದಲ್ಲಿ ಹೊತ್ತಿಗೆಯಲ್ಲಿ ಮುಖ ಹುದುಗಿ ಕುಳಿತ ಆ ಕಾವ್ಯಕನ್ನಿಕೆಯರಿಗೆ ಸಿ.ಅಶ್ವತ್‌ರವರು ಹಾಡಿನ ಆಕಾರವನ್ನು ನೀಡಿದರು. ಒಂದು ರೀತಿಯಲ್ಲಿ ಆ ಹಾಡುಗಳಿಗೆ ಮರುಜೀವ ನೀಡಿದರೆಂದೇ ಹೇಳಬೇಕು.

ಒಗಟಾಗಿ ಒಳಾರ್ಥದಿಂದ ಕೂಡಿ ಪಾರಮಾರ್ಥಿಕ ತತ್ರಗಳನ್ನು ಒಳಗೊಂಡಿದ್ದ ಆ ಕಾವ್ಯ ಒಂದೇ ಬಾರಿಗೆ ಸರಳ ಗೀತೆಗಳಾಗಿ ಜನಸಾಮಾನ್ಯರ ನಾಲಿಗೆಯಲ್ಲಿ ನಲಿದಾಡತೊಡಗಿದವು. ಅದಾಗಲೇ ಭಾವಗೀತೆಗಳ ಬೇರೆ ಬೇರೆ ಗಾಯನ ಶೈಲಿಗಳು ಜನಪ್ರಿಯ ವಾಗಿದ್ದರೂ, ಷರೀಫರ ಪದಗಳು ಸಿ. ಅಶ್ವತ್ ಎನ್ನುವ ಮಹಾನ್ ಕಲಾವಿದ, ಮಹಾನ್ ಗಾಯಕ, ಸಂಯೋಜಕನ ಕೈಯಲ್ಲಿ ಹೊಸ ಅವತಾರವನ್ನು ಪಡೆದುವು.

ಸಿ. ಅಶ್ವತ್ಥ, ಸಂಗೀತಾ ಸಂಸ್ಥೆಯ ಅತ್ಯಂತ ಜನಪ್ರಿಯ ಗಾಯಕ, ಸಂಗೀತ ಸಂಯೋಜಕರಾಗಿ ಕನ್ನಡಿಗರು ಇರುವಲ್ಲ ಪ್ರಸಿದ್ಧ ರಾದರು. ಸಂತ ಶಿಶುನಾಳರ ನೂರಾರು ಗೀತೆಗಳಿಗೆ ಭಾವದ ಸ್ಪರ್ಶಮಾಡಿ ಜನಮಾನಸದಲ್ಲಿ ಅವರನ್ನು ಅಮರರಾಗಿಸಿ ದರು. ಅವರ ‘ಮೈಸೂರು ಮಲ್ಲಿಗೆ’, ‘ದೀಪಿಕಾ’, ‘ಮಾವುಬೇವು’, ‘ಷರೀ-ರ ಹಾಡುಗಳು’ ಮುಂತಾದ ಮುಂದಿನ ಅವರ ಧ್ವನಿಸುರುಳಿಗಳ ಧ್ವನಿಸಂಪುಟಗಳು ಹಾಗೂ ಡಾ. ರಾಜ್ ಹಾಡಿದ ‘ಅನುರಾಗ’ ಭಾವಗೀತೆಗಳ ಧ್ವನಿಸುರುಳಿಗಳು ಕನ್ನಡ ಲಘು ಸಂಗೀತ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನೇ ನೆಟ್ಟವು.

ಜಾನಪದ ಗೀತೆಗಳ ಬಿ.ಕೆ. ಸುಮಿತ್ರಾ

ಸಂಗೀತಾ ಸಂಸ್ಥೆಯಿಂದ ಬೆಳಕಿಗೆ ಬಂದ ಮತ್ತೊಬ್ಬ ಗಾಯಕಿ ಬಿ.ಕೆ. ಸುಮಿತ್ರಾರವರು. ಅವರು ಹಾಡಿದ ಜನಪದಗೀತೆಗಳು ಸಂಗೀತಾ ಸಂಸ್ಥೆಯ ಹತ್ತಾರು ಧ್ವನಿ ಸಂಪುಟಗಳಾಗಿ ಜನಪ್ರಿಯವಾದವು. ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಜನಪದ ಗೀತೆಗಳ ಹೊಸ ಅಲೆಯೊಂದು ಸೃಷ್ಟಿಯಾಯಿತು. ಜನಪದ ಗೀತೆಗಳಂತೂ ಬಿಸಿ ಬಿಸಿ ದೋಸೆಗಳಂತೆ ಖರ್ಚಾದವು. ಅಲ್ಲಿಯವರೆಗೆ ಅಂತಹ ಹಾಡುಗಳು ರಸಿಕರಿಗೆ ದೊರೆತಿರಲಿಲ್ಲ.

ಹೊಸ ಬಗೆಯ ಅಲೆಯನ್ನು ಸೃಷ್ಟಿ ಮಾಡುತ್ತಾ, ಹೊಸ ಬಗೆಯ ಚಿಂತನೆಯೊಡನೆ, ಕನ್ನಡ ನಾಡಿನ ಸಾವಿರಾರು ವರ್ಷಗಳ ಪರಂಪರೆಯನ್ನು ಅತ್ಯಂತ ಸರಳವಾಗಿ ಬಿಚ್ಚಿಡುತ್ತಾ ಹೊಸ ಬಗೆಯ ಪರ್ಯಾವರಣವನ್ನು ಹುಟ್ಟುಹಾಕಿದವು. ಈ ಜನಪದ
ಗೀತೆಗಳು ಮದರಾಸಿನ ಪಿಟೀಲು ವಾದಕರಾಗಿ ಪರಿಚಿತರಾದ ವೈ.ಎನ್.ಶರ್ಮರ ಸಂಗೀತ ಮೇಲ್ವಿಚಾರಣೆಯಲ್ಲಿ ಧ್ವನಿಮುದ್ರಣ ಗೊಂಡವು.

ಮೂಲಗಾಯಕರ ಮೂಲದನಿಯ ಸಂಯೋಜನೆಯನ್ನು ಹಾಗೆಯೇ ಉಳಿಸಿಕೊಂಡು ಆಕರ್ಷಕ ಗಾಯನ ಶೈಲಿಯ ಹಿರಿಮೆ ಯನ್ನು ಎತ್ತಿಹಿಡಿದವು. ಅದಾಗಲೇ ಬಿ.ಕೆ. ಸುಮಿತ್ರಾರವರು ‘ಉಪಾಸನೆ’ ‘ರಾಣಿ ಹೊನ್ನಮ್ಮ’ ಮುಂತಾದ ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ಧರೂ ಜನಪ್ರಿಯರೂ ಆಗಿದ್ದರು. ಆದರೆ ಅವರೇ ಹಾಡಿದ ಅನೇಕ ಭಕ್ತಿಗೀತೆಗಳನ್ನೂ, ಚಲನಚಿತ್ರ ಗೀತೆ ಗಳನ್ನೂ, ಭಾವಗೀತೆಗಳನ್ನೂ ಈ ಜನಪದಗೀತೆಗಳು ಹಿಮ್ಮೆಟ್ಟಿಸಿ ದವು.

ಸುಮಿತ್ರಾರವರು ಕರ್ನಾಟಕ ಶಾಸ್ತ್ರೀಯ ಸಂಗೀತಗಾರರಾಗಿ ಪೂರ್ಣಪಾಂಡಿತ್ಯ ವನ್ನು ಪಡೆದಿದ್ದರೂ, ಜನಪದ ಗೀತೆಗಳನ್ನು ಹಾಡುವಾಗ ಜನಪದ ದೇಸೀತನದ ಅಪ್ಪಟ ಹಾಡುಗಾರಿಕೆ ಅವರ ಗಾಯನದ ಮುಖ್ಯ ಆಕರ್ಷಣೆ ಆಯಿತು. ಜನಪದ ಗಾಯನ ಅವರ ಕಂಠಶೈಲಿಗೆ ತಿಳಿಯಾದ ಭಾವುಕತೆಯ ನವಿರನ್ನು ನೀಡಿ ಸರಳವೂ ಮಧು ರವೂ ಆಗಿ, ಎದೆಯಾಳದ ಅಭಿವ್ಯಕ್ತಿ ಗಳೆನಿಸಿದವು.

ಸಂಗೀತಾದ ಸುವರ್ಣ ಯುಗ
ನಾದದ ವರ್ಷಧಾರೆ ಹರಿಸಿದ ಸಂಗೀತಾ ಕ್ಯಾಸೆಟ್ಟುಗಳು ಬಿಡುಗಡೆಯಾದ ಪ್ರಾರಂಭದಲ್ಲಿ ಅಪೇಕ್ಷಿಸಿದಂತೆ ಭರದಲ್ಲಿ ಮಾರಾಟ ಗದಿದ್ದರೂ ಕ್ರಮೇಣ ಡಾ|| ರಾಜ್ ಅವರು ಹಾಡಿದ ಭಕ್ತಿಗೀತೆಗಳು ಹಾಗೂ ಚಿತ್ರಗೀತೆಗಳು ಕ್ಯಾಸೆಟ್ಟುಗಳಲ್ಲಿ ಬಿಡುಗಡೆಯಾದಾಗ ಸಾಕಷ್ಟು ಬೇಡಿಕೆಗಳು ಬಂದವು. ಸಂಗೀತಾ ಸಂಸ್ಥೆ ಬರಿಯ ಚಲನಚಿತ್ರ ಗೀತೆಗಳಿಗೆ ಮಾತ್ರ ಮೀಸಲಾಗದೆ, ಸಂಸ್ಕೃತ ಸ್ತೋತ್ರಗಳು, ದಾಸರ ಪದಗಳು, ವಚನಗಳು, ಭಕ್ತಿಗೀತೆಗಳು, ಮಂತ್ರಗಳು, ಭಾವಗೀತೆ, ಜನಪದ ಗೀತೆಗಳು, ವಾದ್ಯ ಸಂಗೀತದಲ್ಲಿ ಕೊಳಲು, ಪಿಟೀಲು, ಕ್ಲಾರಿಯೋನೆಟ, ಸ್ಯಾಕ್ರೋಫೋನ್, ವೀಣೆ, ಸಿತಾರ್, ಜಲತರಂಗ ವಾದನಗಳು, ಶಾಸ್ತ್ರೀಯ ಸಂಗೀತದ ಎರಡು ಪ್ರಮುಖ ಕವಲುಗಳಾದ ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ಥಾನಿ ಸಂಗೀತಗಾಯನ, ಯಕ್ಷಗಾನ, ಹರಿಕಥೆ, ಭಜನೆಗಳು…ಒಂದೇ ಎರಡೇ! ಸಂಗೀತ ಶಾಸ ಪ್ರಕಾರದ ಎಲ್ಲಾ ಕಕ್ಷೆಗಳಲ್ಲೂ ಅದ್ಭುತವಾದ ಲೋಕವನ್ನೇ ಸೃಷ್ಟಿಸಿತು.

೮೦ರ ದಶಕದಲ್ಲಿ ಸಂಗೀತಾದ ಸುವರ್ಣಯುಗವೇ ಪ್ರಾರಂಭವಾಯಿತು ಎನ್ನಬೇಕು. ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ, ವಿಜಯನಾರಸಿಂಹ ಮುಂತಾದ ಗೀತರಚನಕಾರರು ಸಂಗೀತಾ ಸಂಸ್ಥೆಗೆ ನೂರಾರು ಗೀತೆಗಳನ್ನು ರಚಿಸಿ ಸಂಸ್ಥೆಯನ್ನು ಬಹಳ ಎತ್ತರಕ್ಕೆ ಕೊಂಡೊಯ್ದರು. ತಾವೂ ಎತ್ತರಕ್ಕೇರಿದರು. ಅವರ ಗೀತೆಗಳು ಜನಸಾಮಾನ್ಯರ ನಾಲಿಗೆಯಲ್ಲಿ ದಿನದಿನವೂ ನಲಿದಾಡತೊಡಗಿದವು.

ಹಾಗೆಯೇ ಎಂ. ರಂಗರಾವ್, ಉಪೇಂದ್ರಕುಮಾರ್, ಟಿ.ಜಿ. ಲಿಂಗಪ್ಪ, ವಿಜಯಭಾಸ್ಕರ್, ಮೈಸೂರು ಅನಂತಸ್ವಾಮಿ, ಸಿ. ಅಶ್ವತ್
ಮುಂತಾದ ಅನೇಕ ಸಂಗೀತ ನಿರ್ದೇಶಕರು ಸಂಗೀತಾ ಸಂಸ್ಥೆಯ ಯಶಸ್ಸಿಗೆ ಮೆಟ್ಟಿಲ ಮೇಲೆ ಮೆಟ್ಟಿಲು ಇಟ್ಟು ತಾವೂ ಪ್ರಖ್ಯಾತ ರಾದರು.

ಜನಮನ ಸೂರೆಮಾಡಿದ ಸಂಗೀತಾ
ಮಹೇಶ್ ಅವರು ಮದರಾಸಿಗೆ ಬಂದ ನಂತರ ಸರಸ್ವತೀ ಸ್ಟೋರ್ಸ್‌ನಲ್ಲಿ ಕೆಲಸ ಮಾಡಿ ಗಳಿಸಿದ್ದುದು ಸ್ನೇಹಿತರ ಅಪಾರ ಜನ ಸ್ತೋಮವನ್ನಲ್ಲದೆ ಹಣದ ಸಿರಿವಂತಿಕೆಯನ್ನಲ್ಲ, ಸರಸ್ವತೀ ಸ್ಟೋರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಚಿತ್ರ ವಾರ್ತೆಗಳ ವರದಿಗಾರ ರಾಗಿ ನೂರಾರು ಕಲಾವಿದರನ್ನು, ಗಾಯಕರನ್ನು, ಕವಿಗಳನ್ನು, ವಾದ್ಯವಾದಕರನ್ನು, ಸಂಗೀತಗಾರರನ್ನು, ಸಂಗೀತ ಸಂಯೋಜಕ ರನ್ನು ಭೇಟಿ ಮಾಡುತ್ತಿದ್ದರು. ವಿತರಕರ ಬಗೆಗೆ, ಚಿತ್ರಗಳ ಬಗೆಗೆ ಮಾಹಿತಿ ಸಂಗ್ರಹಿಸಿ ‘ನವಭಾರತ’ ಮತ್ತು ‘ಉದಯವಾಣಿ’ ದೈನಂದಿನ ಪತ್ರಿಕೆಗಳಿಗೆ ವರದಿ ನೀಡುತ್ತಿದ್ದರು.

ಸುಮಾರು ೯ ವರ್ಷಗಳ ಕಾಲ ಇದು ಸುಸೂತ್ರವಾಗಿ ನಡೆಯಿತು. ಸಂಗೀತಾ ಧ್ವನಿಸುರುಳಿಯ ವಿತರಕರು ಸುಮಾರು ೫೦೦ಕ್ಕೂ ಮಿಕ್ಕಿದ್ದರು. ಮಹೇಶ್ ತಯಾರಿಸಿದ ಧ್ವನಿಸುರುಳಿಗಳನ್ನು ಮಾರಾಟ ಮಾಡಲು, ಅದರ ಮಾರಾಟದ ಹಕ್ಕನ್ನು ಪಡೆಯಲು ವಿತರಕರು ಹಾತೊರೆಯುತ್ತಿದ್ದರು. ಆ ಕಾಲಘಟ್ಟದ ಕಲಾವಿದರಂತೂ ತಮ್ಮ ದನಿ, ತಮ್ಮ ಗಾಯನ, ವಾದನ ಸಂಗೀತಾ
ಕ್ಯಾಸೆಟ್‌ ಗಳಲ್ಲಿ ಬರುವುದೇ ತಮ್ಮ ಸಂಗೀತ ಬದುಕಿಗೊಂದು ಗರಿಮೆ ಎಂದು ತಿಳಿದಿದ್ದರು.

ಕರ್ನಾಟಕದ ಹೆಮ್ಮೆಯ ತವನಿಽಗಳಾದ, ಕುವೆಂಪು, ಬೇಂದ್ರೆ ಪು.ತಿ.ನ., ಕೆ.ಎಸ್. ನರಸಿಂಹಸ್ವಾಮಿ, ಲಕ್ಷ್ಮೀನಾರಾಯಣ ಭಟ್ಟ, ಗೋಪಾಲಕೃಷ್ಣ ಅಡಿಗ, ಎಸ್.ವಿ. ಪರಮೇಶ್ವರ ಭಟ್ಟ, ಸಿದ್ದಯ್ಯ ಪುರಾಣಿಕ, ಹುಯಿಲಗೋಳ ನಾರಾಯಣ ರಾಯರು, ಕೆ.ಎಸ್. ನಿಸಾರ್ ಅಹಮ್ಮದ್, ಜಿ.ಎಸ್.ಶಿವರುದ್ರಪ್ಪ, ಚನ್ನವೀರ ಕಣವಿ, ಡಿ.ಎಸ್. ಕರ್ಕಿ, ಕಡೆಂಗೋಡ್ಲು ಶಂಕರ ಭಟ್ಟ, ಎಮ.ವಿ. ಸೀತಾ ರಾಮಯ್ಯ, ಕಯ್ಯಾರ ಕಿಂಞಣ್ಣ ರೈ ಮೊದಲಾದ ಅನೇಕ ಕವಿಗಳ ಹಾಡುಗಳು ಸಂಗೀತಾ ಮೂಲಕ ಜನಮನವನ್ನು ಮುಟ್ಟಿ ದುವು. ವೇದ, ಉಪನಿಷತ್, ಹರಿಕಥೆ- ಅದರಲ್ಲೂ ಭದ್ರಗಿರಿ ಕೇಶವದಾಸ್ ಮತ್ತು ಅಚ್ಯುತದಾಸರಂತಹ ಮೇಧಾವಿಗಳ ಕಥಾಕಾಲಕ್ಷೇಪ ಮುಂತಾ ದುವುಗಳ ಕ್ಯಾಸೆಟ್ಗಳೂ ಜನರ ಮನಸೂರೆಗೊಂಡವು.

ಅಸಲಿ ಎದುರು ನಕಲಿ ಹುಟ್ಟಿದಾಗ
ಇದೇ ಸಮಯದಲ್ಲಿ ಅನೇಕ ಕ್ಯಾಸೆಟ್ ಕಂಪನಿಗಳು ಕರ್ನಾಟಕ ಮತ್ತು ನೆರೆರಾಜ್ಯ ಗಳಲ್ಲಿ ಹುಟ್ಟಿಕೊಂಡವು. ಇವು ಸಂಗೀತಾ ಸಂಸ್ಥೆಯು ನೀಡಿದ ಬೆಳಕಿನ ದಾರಿಯನ್ನು ಅವಲಂಬಿಸಿ ಮುಂದೆ ಸಾಗುತ್ತಾ, ಜನಪ್ರಿಯವಾಗತೊಡಗಿದವು. ಅದೇ ಸಮಯದಲ್ಲಿ ಅಸಲಿ ಸಂಸ್ಥೆಯ ಎದುರೇ ‘ನಕಲಿ ಸಂಸ್ಥೆ’ಗಳು ಹುಟ್ಟಿಕೊಂಡವು.

ಸಾವಿರಾರು ರೂಪಾಯಿ ಖರ್ಚು ಮಾಡಿ ತಯಾರಿಸಿದ ಸಂಗೀತಾ ಸಂಸ್ಥೆಯ ಕ್ಯಾಸೆಟ್‌ಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಅದರ ನಕಲಿ ರೂಪಗಳು ಮಾರುಕಟ್ಟೆಯಲ್ಲಿ ಬರಲಾರಂಭಿಸಿದವು. ಕಲಾವಿದರಿಗೆ ಗೌರವಧನವನ್ನಾಗಲೀ ಸರ್ಕಾರಕ್ಕೆ ತೆರಿಗೆ ಯನ್ನಾಗಲೀ, ಕಾರ್ಯಕ್ರಮದ ವಾದ್ಯಗಾರ, ಸಂಗೀತಗಾರರಿಗಾಗಲೀ, ಒಂದು ಪೈಸೆಯನ್ನೂ ಕೊಡದೆ ನಕಲಿ ಕ್ಯಾಸೆಟ್ ತಯಾರಿ ಸಿದ ಕಳ್ಳರು ಏನೂ ವೆಚ್ಚವಿಲ್ಲದೆ ಹಣ ಮಾಡತೊಡಗಿದರು. ಸಂಗೀತಾ ಸಂಸ್ಥೆಯದು ಯಾವುದು, ನಕಲಿ ಯಾವುದು ಎಂಬ ವ್ಯತ್ಯಾಸವೇ ತಿಳಿಯುವುದು ಕಷ್ಟವಾಗತೊಡಗಿತು.

ಸಂಗೀತಾ ಕ್ಯಾಸೆಟ್ ಹೊದಿಕೆಯನ್ನೇ ಯಥಾವಿಧಿಯಾಗಿ ನಕಲು ಮಾಡಲಾಯಿತು. ಸಂಗೀತಾ ಸಂಸ್ಥೆಯ ಹೆಸರು ನಕಲಿ ಕ್ಯಾಸೆಟ್‌ಗಳ ಹಾವಳಿಯಲ್ಲಿ ಧ್ವನಿಮುದ್ರಣದಲ್ಲಿ ಮತ್ತು ಕಳಪೆ ಟೇಪಿನಿಂದ ಕಳೆಗುಂದುವ ಭಯ ಮಹೇಶರಿಗಾಯಿತು. ಮಹೇಶ್ ಕಂಗಾಲಾದರು. ಇತ್ತ ತಯಾರಿಕಾ ವೆಚ್ಚ ಖರ್ಚುಗಳನ್ನು ಹೊಂದಿಸುವ ಹೊಣೆ, ಅತ್ತ ವ್ಯಾಪಾರ ಚೆನ್ನಾಗಿದ್ದರೂ ಕೈಗೆ ಹತ್ತದ ಹಣ, ನಕಲಿ ಕ್ಯಾಸೆಟ್ನ ಹಾವಳಿ-ಇದರಿಂದ ಮಹೇಶ್ ‘ಮುಂದೇನು, ಈ ನಕಲೀ ಕ್ಯಾಸೆಟ್ಗಳ ಹಾವಳಿಯನ್ನು ತಡೆಗಟ್ಟುವು ದಾದರೂ ಹೇಗೆ’ ಎಂದು ತಲೆಯ ಮೇಲೆ ಕೈ ಹೊತ್ತು ಕುಳಿತುಕೊಂಡರು.

ಷರೀಫರ ಆರು ಸಂಪುಟಗಳು, ಜನಪದ ಗೀತೆಗಳ ೬ ಧ್ವನಿಸಂಪುಟಗಳು ಮಾರುಕಟ್ಟೆಗೆ ಬಿಡುಗಡೆಯಾದವು. ಡಾ. ರಾಜ್‌ರ ಹೊಸ ಹೊಸ ಚಿತ್ರಗಳು ಬಿಡುಗಡೆಯಾದವು. ಎಲ್ಲವೂ ನಕಲಿಯಾಗಿ ಮಾರುಕಟ್ಟೆಯ ಕೆಲವು ವಿತರಕರ ಅಂಗಡಿಯಲ್ಲಿ ರಾರಾಜಿಸಿದವು. ಕದ್ದುಮುಚ್ಚಿ ವ್ಯಾಪಾರ ನಡೆಯಲು ಪ್ರಾರಂಭವಾಗಿ ಅದು ತೀವ್ರತರವಾಗಿತ್ತು.

ಕಣ್ಣು ತೆರೆಸಿದ ಕವಿರತ್ನ ಕಾಳಿದಾಸ ಮಹೇಶ್ ಅವರು ಮತ್ತೆ ‘ಆಪದ್ಬಾಂಧವ’ ಎಚ್. ರಾಮಕೃಷ್ಣರವರ ಬಳಿ ಈ ವಿಷಯವನ್ನು ಚರ್ಚಿಸಿದಾಗ, ಆಗ ಪೋಲೀಸ್ ಕಮೀಷನರ್ ಆಗಿದ್ದ ನಿಜಾಮುದ್ದೀನ್ ಅವರನ್ನು ಭೇಟಿ ಮಾಡಲು ಅವರ ಮನೆಗೆ ಮಹೇಶರನ್ನು
ಕರೆದುಕೊಂಡು ಹೋದರು. ರಾಮಕೃಷ್ಣ ಅವರು ನಿಜಾಮುದ್ದೀನರ ಆಪ್ತ ಗೆಳೆಯರಾಗಿದ್ದರು. ನಿಜಾಮುದ್ದೀನ್, ‘ಅಯ್ಯೋ ಈಗ

ಎಲ್ಲಾ ವಸ್ತುಗಳೂ ನಕಲಿಯಾಗುತ್ತಿವೆಯ……ಏನು ಮಾಡುವುದು? ಹಣವನ್ನೇ ಕಳ್ಳನೋಟುಗಳಾಗಿ ನಕಲು ಮಾಡುತ್ತಾ ರಲ್ಲ….ಇರಲಿ ಈಗ ಏನು ಮಾಡಬೇಕು ಹೇಳಿ’ ಎಂದರು. ಯಾರಿಗೂ ಮುನ್ಸೂಚನೆ ಕೊಡದೆ ಎಲ್ಲಾ ನಕಲಿ ವಿತರಕರ, ಮಾರಾಟ ಗಾರರ ದಾಸ್ತಾನುಗಳಿಗೆ, ಗೋದಾಮು, ಮತ್ತು ಅಂಗಡಿಗಳಿಗೆ, ಧಾಳಿನಡೆಸಿ ದಾಸ್ತಾನುಗಳನ್ನು ವಶಪಡಿಸಿಕೊಳ್ಳುವ ವ್ಯವಸ್ಥೆ  ಯಾಗಬೇಕೆಂದಾಗ, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆಮಾಡಿ ಕಾರ್ಯಾಚರಣೆ ಮಾಡಿಯೇ ಬಿಟ್ಟರು. ಕೂಡಲೇ ಇಪ್ಪತ್ತನಾಲ್ಕು ಗಂಟೆಯ ಒಳಗೆ ಕರ್ನಾಟಕದ ಎಲ್ಲಾ ನಕಲಿ ಕ್ಯಾಸೆಟ್ಟು ಅಂಗಡಿ ಮುಂಗಟ್ಟು, ದಾಸ್ತಾನುಗಾರರ ಮೇಲೆ
ದಾಳಿಯಾಗಿ, ಅವರೆ ಸಿಕ್ಕಿಬಿದ್ದರು.

ಸಾವಿರಾರು ನಕಲಿ ಕ್ಯಾಸೆಟ್‌ಗಳು ದೊರೆತವು. ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿನ ಎಲ್ಲಾ ನಕಲಿ ವಿತರಕರ ಅಂಗಡಿ ಗಳಲ್ಲಿಯೂ ದಾಳಿ ನಡೆದು ಅಲ್ಲಿಯೂ ನಕಲಿ ಕ್ಯಾಸೆಟ್‌ಗಳು ದೊರೆತವು. ಹಲವರ ಅರೆಸ್ಟ್ ಆಯಿತು. ಮದರಾಸಿನಲ್ಲಿ ಸಂಗೀತಾ ಸಂಸ್ಥೆಗೆ ಕ್ಯಾಸೆಟ್ ಪ್ರತಿಗಳನ್ನು ತಯಾರಿಸಲು ಖಾಲಿ ಕ್ಯಾಸೆಟ್ಟುಗಳನ್ನು ಒದಗಿಸಿಕೊಡುತ್ತಿದ್ದ ‘ಕೋನೀ’ ಸಂಸ್ಥೆಯವರು ಮಧ್ಯಸ್ಥಿಕೆ ವಹಿಸಿ, ’ಟ್‌ಗು ವಿತರಕರ ಬಳಿ ಈ ವಿಷಯದಲ್ಲಿ ಚರ್ಚಿಸಿ, ಇನ್ನು ಮುಂದೆ ಹೀಗಾಗುವುದನ್ನು ತಡೆಯುತ್ತೇವೆ’ ಎಂದರು. ವಿತರಕರ ಬಳಿ ಒಂದು ಸ್ನೇಹಕೂಟವನ್ನೂ ಏರ್ಪಡಿಸಿದರು.

ಆದರೆ, ನಕಲಿ ಮಾರಾಟಗಾರರು ತಮ್ಮ ತಪ್ಪನ್ನು ಒಪ್ಪಿಕೊಂಡು, ತಿದ್ದಿಕೊಳ್ಳುವುದರ ಬದಲಾಗಿ, ‘ಸಂಗೀತಾ ಸಂಸ್ಥೆಯ ಯಾವುದೇ ಕ್ಯಾಟ್ ಗಳನ್ನು ನಾವು ಮಾರಾಟ ಮಾಡುವುದಿಲ್ಲ’ ಎಂದು ಗುಂಪು ಕಟ್ಟಿಕೊಂಡರು. ಏಕಾಂಗಿವೀರನಾದ ಮಹೇಶ್ ಏನು ಮಾಡುವುದೆಂದು ಯೋಚಿಸುತ್ತಾ ಇದ್ದಾಗ, ಡಾ. ರಾಜ್‌ವರನ್ನು ಸಂಪರ್ಕಿಸಬೇಕೆಂಬ ಆಲೋಚನೆ ಹೊಳೆಯಿತು. ಕೂಡಲೆ ಡಾ. ರಾಜ್ ಅವರ ಬಳಿ ಸಾರಿ ಪ್ರಸ್ತುತ ಬಂದ ಸಂಕಟವನ್ನು ವಿವರಿಸಿದರು. ಪ್ರಾಮಾಣಿಕ ತತ್ವಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದ ಡಾ. ರಾಜ್, ಎದ್ದು ನಿಂತು ಉಟ್ಟಿದ್ದ ಪಂಚೆಯನ್ನು ಎತ್ತಿ ಕಟ್ಟಿ ‘ಏನು ನಮ್ಮ ಕ್ಯಾಸೆಟ್ಗಳನ್ನು ನಿಷೇಧಿಸುತ್ತಾರೆಯೇ….?! ಆಗಲಿ ಬಿಡಿ, ನೋಡೋಣ’ ಎಂದಾಗ ಅವರ ಮುಖ ಕೆಂಪು ಕೆಂಪಾಗಿತ್ತು.

‘ಸಂಗೀತಾ’ ಸಂಸ್ಥೆಯ ಕ್ಯಾಸೆಟ್ಗಳನ್ನು ಬ್ಯಾನ್ ಮಾಡುವಷ್ಟು ಎದೆಗಾರಿಕೆ ಇದೆಯೇ ಎಂದು ಗುಡುಗಿದರು. ಅನ್ಯಾಯದ ವ್ಯಾಪಾರಕ್ಕೆ ನಾವು ಉತ್ತೇಜನ ಕೊಡಬೇಕೇ? ಕಳ್ಳತನಕ್ಕೆ ನಾವು ದಾರಿ ಮಾಡಕೊಡಬೇಕೆ? ಎಂಬ ಯೋಚನೆಯಲ್ಲಿ ಮಹೇಶ್ ಇರುವಾಗಲೇ, ಡಾ|ರಾಜ್ ಅವರು ‘ಕವಿರತ್ನ ಕಾಳಿದಾಸ’ ಚಿತ್ರಗೀತೆಗಳ ಕ್ಯಾಸೆಟ್‌ಗಳನ್ನು ಬಿಡುಗಡೆ ಮಾಡಿ ಎಂದರು.

ಡಾ. ರಾಜ್ ಅವರು ಸಂಗೀತಾ ಸಂಸ್ಥೆಗೆ ಯಥಾಪ್ರಕಾರ ತಮ್ಮ ಈ ಚಿತ್ರದ ಚಿತ್ರಗೀತೆಗಳ ಹಕ್ಕನ್ನು ನೀಡಿದ್ದರು. ಅವರ ‘ಕವಿರತ್ನ ಕಾಳಿದಾಸ’ ಚಿತ್ರಗೀತೆಗಳ ಕ್ಯಾಸೆಟ್ಟು ಬಿಡುಗಡೆಯಾಗುತ್ತಲೇ ವಿತರಕರು, ಮಾರಾಟಗಾರರು ಮುಗಿಬಿದ್ದು ಸಾವಿರಾರು ಕ್ಯಾಸೆಟ್ಟು ಗಳನ್ನು ಖರೀದಿಸಿದರು. ಯಾವ ನಿಷೇಧವೂ ಅವರಿಗೆ ನೆನಪಾಗಲಿಲ್ಲ. ಡಾ| ರಾಜ್‌ಅವರ ಯಶಸ್ವಿ ಚಿತ್ರವಾದ ‘ಕವಿರತ್ನ
ಕಾಳಿದಾಸ’ ನಾಡಿನಾದ್ಯಂತ ಜಯಭೇರಿ ಹೊಡೆಯಿತು. ಗ ಪೆಟ್ಟಿಗೆ ತುಂಬಿ ತುಳುಕಿತು. ಎಂ. ರಂಗರಾವ್ ಸಂಗೀತ ನೀಡಿದ್ದ ಆ ಚಿತ್ರದ ಎಲ್ಲಾ ಹಾಡುಗಳೂ ತಮ್ಮ ಮಾಧುರ್ಯದಿಂದ ಕರ್ನಾಟಕದ ಜನರ ಮನವನ್ನು ಗೆದ್ದವು. ನಕಲಿ ಮಾಲನ್ನು ಮಾರಿ ತಪ್ಪು ಮಾಡಿದ ಮಾರಾಟಗಾರರು ಅವರ ತಲೆಯ ಮೇಲೆ ಅವರೇ ಮಣ್ಣು ಸುರಿದು ಕೊಳ್ಳುವ ನಿರ್ಧಾರ ಮಾಡಿದ್ದನ್ನು ಹಿಂತೆಗೆದುಕೊಂಡು ಸುಮ್ಮನಾದರು.

ಜೊತೆಗೆ ಬಿಸಿ ಬಿಸಿ ದೋಸೆಯಂತೆ ಖರ್ಚಾಗುತ್ತಿದ್ದ ಡಾ| ರಾಜ್ ರವರ ಈ ಚಿತ್ರಗೀತೆಗಳ ಕ್ಯಾಸೆಟ್ಟುಗಳನ್ನು ಖರೀದಿಸದೆ ವಿಧಿ ಇರಲಿಲ್ಲ. ತಾವೇ ಹೂಡಿದ ಬಲೆಯಲ್ಲಿ ತಾವೇ ಸಿಕ್ಕಿಕೊಂಡರು. ಅಂತೂ ಡಾ| ರಾಜ್ ಅವರ ‘ಕವಿರತ್ನ ಕಾಳಿದಾಸ’ ಚಿತ್ರದ ಧ್ವನಿಮುದ್ರಿಕೆಗಳು ನಕಲಿ ಮಾರಾಟಗಾರರ ಮುಷ್ಕರವನ್ನು ನಿಲ್ಲಿಸಿ ಕಣ್ಣು ತೆರೆಯುವಂತೆ ಮಾಡಿದುವು.

(ಎಚ್.ಎಂ.ಮಹೇಶ್ ಅವರ ಜೀವನಗಾಥೆ ‘ಸಂಗೀತ ಯಾನ’ ಪುಸ್ತಕದಿಂದ ಆಯ್ದ ಭಾಗ ಗಳು. ಡಾ. ಜಯಶ್ರೀ ಅರವಿಂದ್ ರಚಿಸಿದ ಈ ಪುಸ್ತಕವು ಅಂಕಿತಪುಸ್ತಕದಿಂದ ಹೊರಬಂದಿದೆ)

ಮೊತ್ತಮೊದಲ ಅಧಿಕೃತ ಧ್ವನಿಸುರುಳಿ ಕಂಪನಿ
ಮದರಾಸು ಸೇರಿದ ಮಹೇಶ್ ಹಲವಾರು ಕನ್ನಡ, ತುಳು ಚಿತ್ರಗಳಲ್ಲಿ ಹಾಡಿದರು. ಧ್ವನಿಮುದ್ರಿಕೆಗಳನ್ನು ವಿತರಿಸುವ ಹೊಣೆಗಾರಿಕೆಯನ್ನೂ ವಹಿಸಿಕೊಂಡರು. ಈ ಸಂದರ್ಭದಲ್ಲಿ ಅವರಿಂದ ವಿತರಣೆಗೊಂಡ ಹಲವಾರು ಧ್ವನಿಮುದ್ರಿಕೆ ಹಾಗೂ ಧ್ವನಿಸುರುಳಿಗಳನ್ನು ನಾನು ಉದಯವಾಣಿ ಯಲ್ಲಿ ವಿಮರ್ಶಿಸುತ್ತಿದ್ದೆ. ಧ್ವನಿಮುದ್ರಿಕೆಗಳ ನಿರ್ಮಾಣ ಮತ್ತು ವಿತರಣೆಗಳ ಒಳಹೊರಗು ಮನವರಿಕೆಯಾಗುತ್ತಿದ್ದಂತೆ ಅವರೊಳಗೆ ಸುಪ್ತವಾಗಿದ್ದ ಎಂಟರ್‌ಪ್ರೆನ್ಯೂರ್‌ಶಿಪ್ ಗರಿಗೆದರಿತು. ಮತ್ತೊಂದು
ಸಾಹಸಕ್ಕೆ ಮನ ಮಾಡಿದರು. ಹಾಗೆ ಹುಟ್ಟಿಕೊಂಡಿದ್ದು ‘ಸಂಗೀತಾ’ ವಾಣಿಜ್ಯನಾಮದ ಮಾಸ್ಟರ್ ರೆಕಾರ್ಡಿಂಗ್ ಕಂಪನಿ. ಮಹೇಶ್
‘ಸಂಗೀತಾ’ ಧ್ವನಿ ಸುರುಳಿಗಳ ಮೂಲಕ ಒಂದು ಕ್ರಾಂತಿಯನ್ನೇ ಉಂಟುಮಾಡಿದರೂ ಎಂದರೂ ಸರಿಯೆ.

ಅದು ಮೊತ್ತ ಮೊದಲಾಗಿ ಅಧಿಕೃತ ಪರವಾನಿಗೆಯೊಂದಿಗೆ ಹೊರಬಂದ ಧ್ವನಿಸುರುಳಿ. ಅದುವರೆಗೆ ತೀರ ಕೆಟ್ಟದಾಗಿ ಧ್ವನಿ ಮುದ್ರಣಗೊಂಡ ಕ್ಯಾಸೆಟ್‌ಗಳನ್ನು ಕೊಂಡುಕೊಂಡು ಕೈ ಸುಟ್ಟುಕೊಳ್ಳುತ್ತಿದ್ದ ಸಂಗೀತ ಪ್ರಿಯರಿಗೆ ಅತ್ಯುತ್ತಮ ತಂತ್ರಜ್ಞಾನದಿಂದ
ಹೊರಬರುತ್ತಿದ್ದ ‘ಸಂಗೀತಾ’ ಧ್ವನಿಸುರುಳಿಗಳೂ ಹೊಸ ಬಗೆಯ ನಾದಾನುಭವವನ್ನು ಒದಗಿಸುವಲ್ಲಿ ಯಶಸ್ವಿಯಾದವು.
– ಈಶ್ವರಯ್ಯ (ಸಂಗೀತಯಾನ ಎರಡನೆಯ ಮುದ್ರಣದಲ್ಲಿ)

***

ಎಲ್ಲ ಮಹಾನ್ ಸಂಗೀತಗಾರರ ದನಿಯೆಲ್ಲ ಮಹೇಶ್ ಅವರ ‘ಸಂಗೀತ’ದಲ್ಲಿ ಸುಪ್ತವಾಗಿ, ಬೆಚ್ಚಗೆ ಅವಿತುಕೊಂಡಿವೆ. ಅಕ್ಷರ ಗಳಂತೆ ದನಿಯೂ ಶಾಶ್ವತ, ಚಿರಂತನ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸಂಗೀತಗಾರರಂತೆ ಮಹೇಶ್ ಅವರದು ಸಹ ಅಗಾಧ ಸಾಧನೆಯೇ. ಸಂಗೀತ ಕ್ಷೇತ್ರಕ್ಕೆ ಅವರ ಯೋಗದಾನ ಅಪಾರ ಹಾಗೂ ಅಪೂರ್ವ. ಸಂಗೀತ ಲೋಕದ ದಿಗ್ಗಜರ ಕಂಠಸಿರಿಯನ್ನು ದೇಶದ ಉದ್ದಗಲಕ್ಕೆ ತಲುಪಿಸಿದ ಅಗ್ಗಳಿಕೆ ಅವರದು. ಹೊಸ ಹೊಸ ಗಾಯಕರನ್ನು ಪರಿಚಯಿಸಿ, ಅವರಿಂದ ಹಾಡಿಸಿ ಸಾಹಿತ್ಯ – ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದವರು. ನಾಲ್ಕೈದು ದಶಕಗಳ ಕಾಲ ಚೆನ್ನೈಯಲ್ಲಿ ನೆಲೆಸಿದ್ದರೂ ಕನ್ನಡದ ಸೇವೆ ಮಾಡಿದ ಅಪರೂಪದ ವ್ಯಕ್ತಿ. ಮೃದು ಸ್ವಭಾವ, ಆಪ್ತತೆ, ನಿಶ್ಕಲ್ಮಶ ನಗು, ಸರಳ ಸಜ್ಜನಿಕೆ ಮೂರ್ತಿವೆತ್ತ ವ್ಯಕ್ತಿತ್ವ.
– ವಿಶ್ವೇಶ್ವರ ಭಟ್