Sunday, 29th January 2023

‘ದೇಶಪಾಂಡೆ ಗೆ ಶುಭ ಪ್ರಸಾದ ! ಭವಿಷ್ಯ ನುಡಿದ ಕಲಗದ್ದೆಯ ನಾಟ್ಯ ವಿನಾಯಕ

ಸಿದ್ದಾಪುರ: ತನ್ನ ಪವಾಡಗಳಿಂದ ರಾಜ್ಯದ ಕೆಲವೇ ಕೆಲವು ಶಕ್ತಿಪೀಠಗಳಲ್ಲೊಂದಾಗಿ ಗುರುತಿಸಿಕೊಳ್ಳುತ್ತಿರುವ ಸಿದ್ದಾಪುರ ತಾಲೂಕಿನ ಕಲಗದ್ದೆಯ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿ ಮುನ್ಸೂಚನೆಯೊಂದು ದೊರೆತಂತೆ ಭಾಸವಾಯ್ತು.

ಭಾನುವಾರ ಶ್ರೀ ಕ್ಷೇತ್ರ ಕಲಗದ್ದೆಯಲ್ಲಿ ನಾಟ್ಯವಿನಾಯಕನ ಕಲ್ಯಾಣ ಲೀಲೋತ್ಸವ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ನಾಡಿನ ವಿವಿಧೆಡೆಯಿಂದ ಅನೇಕಾನೇಕ ಭಕ್ತರು ಆಗಮಿಸಿದ್ದು, ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ಸಹ ಈ ಕಲ್ಯಾಣ ಲೀಲೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಾಟ್ಯ ವಿನಾಯಕನಿಗೆ ಪೂಜೆ ಸಲ್ಲಿಸಿದ ದೇಶಪಾಂಡೆ ಮತ್ತು ಸಂಗಡಿಗರು ಪವಾಡವೊಂದಕ್ಕೆ ಸಾಕ್ಷಿಯಾದರು.

ದೇವಾಲಯದ ಪ್ರಧಾನ ವಿಶ್ವಸ್ಥರಾದ ವಿನಾಯಕ ಹೆಗಡೆ ಅವರು, ಶ್ರೀದೇವರ ಬಳಿಯಲ್ಲಿ ಪ್ರಾರ್ಥನೆ ಸಲ್ಲಿಸು ತ್ತಿರುವಾಗ ‘ನಿನ್ನ ಸನ್ನಿಧಾನಕ್ಕೆ ಬಂದಿರುವ ಭಕ್ತನಿಗೆ ಶುಭವನ್ನುಂಟುಮಾಡು. ರಾಜಕೀಯದಲ್ಲಿ ಸಾಕಷ್ಟು ಅನುಭವ ಪಡೆದಿರುವ ದೇಶಪಾಂಡೆಗೆ ಈ ರಾಜ್ಯವನ್ನಾಳುವ ಯೋಗ್ಯತೆಯಿದೆ. ಭಗವಂತನಾದ ನಿನ್ನ ಅನುಗ್ರಹ ವಿದ್ದರೆ ಖಂಡಿತ ಸಮಸ್ತ ರಾಜ್ಯಗಳಿಸಿ, ಆಳುವ ಅವಕಾಶವಾಗುತ್ತದೆ. ಆ ದಿಶೆಯಲ್ಲಿ ಆಶೀರ್ವದಿಸು’ ಎಂದು ಪ್ರಾರ್ಥನೆ ಸಲ್ಲಿಸುತ್ತಿರುವಾಗಲೇ ಶ್ರೀದೇವರ ಬಲಗಡೆಯಿಂದ ಹೂವಿನ ಪ್ರಸಾದವಾಗಿದೆ.

ಈ ವೇಳೆ ಶಾಸಕ ದೇಶಪಾಂಡೆಯ ಜೊತೆ ಅನೇಕ ರಾಜಕೀಯ ಮುಖಂಡರು, ನೂರಾರು ಭಕ್ತರು ಉಪಸ್ಥಿತರಿದ್ದು, ಅವರೆಲ್ಲರೂ ಸಹ ಈ ಒಂದು ಅನುಭಾವಕ್ಕೆ ಒಳಗಾದರು ಎಂಬ ಮಾಹಿತಿ ದೊರೆತಿದೆ. ರಾಜ್ಯದ ವಿವಿಧೆಡೆಯಿಂದ ಕಲಗದ್ದೆಯ ನಾಟ್ಯವಿನಾಯನಿಗೆ ಪೂಜೆ ಸಲ್ಲಿಸಿ, ಹರಕೆ ತೀರಿಸಲು ಸಾಕಷ್ಟು ಭಕ್ತರು ಬರುತ್ತಿದ್ದು, ಭಾನುವಾರ ನಡೆದ ಪ್ರಸಂಗವೊಂದು ರಾಜ್ಯ ರಾಜಕೀಯದ ಭವಿಷ್ಯದ ಮುನ್ಸೂಚನೆಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

error: Content is protected !!