Monday, 26th October 2020

ಮೌನವೆಂದರೆ ಖಾಲಿ ಅಲ್ಲ, ಅದರಲ್ಲಿ ಎಲ್ಲವೂ ಅಡಗಿದೆ !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್‌

ಕಳೆದ ನಾಲ್ಕು ತಿಂಗಳಿನಿಂದ, ಈ ಅಂಕಣದ ಓದುಗರೆಲ್ಲರಿಗೂ ಪರಿಚಿತರಾಗಿರುವ, ಯೋಗಿ ದುರ್ಲಭಜೀ ಮೌನವ್ರತದಲ್ಲಿದ್ದರು. ಒಂದು ಸೂಚನೆ ಸಹ ಕೊಡದೇ ಅವರು ಮೌನಕ್ಕೆ ಶರಣಾಗಿ ಬಿಡುತ್ತಾರೆ. ಒಮ್ಮೆ ಮೌನಕ್ಕೆ ಕುಳಿತರೆ, ಎಷ್ಟು ದಿನವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಒಂದು ದಿನವೂ ಆಗಬಹುದು, ಒಂದು ವರ್ಷವೂ ಆಗಬಹುದು. ಅವರು ಯಾವಾಗ ಮೌನ ಮುರಿ ಯುತ್ತಾರೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ.

ಎರಡು – ಮೂರು ದಿನಗಳಾದರೂ, ಕಳಿಸಿದ ಮೆಸೇಜಿಗೆ ಉತ್ತರ ಬಂದಿಲ್ಲ ಅಂದರೆ, ಯೋಗಿ ಸ್ವಿಚ್ ಆಫ್‌(ಮೌನ) ಆಗಿದ್ದಾರೆಂದೇ ಅರ್ಥ. ಮೊನ್ನೆ ಬೆಳಗಿನ ಜಾವ ನಾಲ್ಕೂವರೆಗೆ, ಯೋಗಿ ಅವರ ಫೋನ್ ಬಂದಿತು. ನನಗೆ ಆ ಹೊತ್ತಿನಲ್ಲಿ ಫೋನ್ ಬಂದರೆ, ಏನೋ ದುರ್ವಾರ್ತೆ, ಇಲ್ಲವೇ ಯಾವುದೋ ಊರಿಗೆ ಪೇಪರ್ ಬಂಡಲ್ ತಲುಪಿಲ್ಲ ಎಂದರ್ಥ. ಬೇರೆ ಯಾರೂ ಆ ಹೊತ್ತಿನಲ್ಲಿ ಫೋನ್ ಮಾಡುವುದಿಲ್ಲ. ನಿದ್ದೆಗಣ್ಣಿನ ಫೋನ್ ಎತ್ತಿದೆ. ಯೋಗಿಜೀ ದನಿ. ದಡಲ್ಲನೆ ಎದ್ದು ಕುಳಿತೆ. ‘ಏನು ಯೋಗಿಜೀ? ಎಷ್ಟು ಸಲ ನಿಮ್ಮನ್ನು ಸಂಪರ್ಕಿಸೋದು? ಹೀಗೆ ಏಕಾಏಕಿ ಮೌನಕ್ಕೆ ಕುಳಿತರೆ ಹೇಗೆ?’ ಎಂದು ಕೇಳಿದೆ.

‘ಕರೋನಾ ಕಾಲದಲ್ಲಿ ಮಾತಿನ ಅಗತ್ಯವಿದೆಯಾ? ಈಗಲೂ ಮೌನದ ಅಗತ್ಯ ಮನಗಾಣದಿದ್ದರೆ, ಅದು ಇನ್ನೆಂದೂ ಅರ್ಥ ವಾಗುವುದಿಲ್ಲ’ ಎಂದರು ಯೋಗಿಜೀ. ‘ನೋಡಿ, ಪ್ರತಿ ಸಲ ನಾನು ಮೌನ ಮುರಿದಾಗ, ನನಗೆ ಪಶ್ಚಾತ್ತಾಪವಾಗುತ್ತದೆ. ನಾನ್ಯಾಕೆ ಮೌನ ಮುರಿದೆ, ಮೌನವನ್ನು ಮುಂದುವರಿಸಬೇಕಿತ್ತು. ಮಾತು ಅಸಹನೀಯವೆನಿಸುತ್ತದೆ. ಮಾತು ಅಂದರೆ ಸುಳ್ಳು, ಮಾತು ಅಂದರೆ ಕೃತಕ, ಮಾತು ಅಂದರೆ ಅಸಹಜ ಮತ್ತು ನಾಟಕ. ಮೌನದಲ್ಲಿ ಮಾತ್ರ ನಾವು ನಮ್ಮನ್ನು ಕಾಣಲು, ಸಂಧಿಸಲು ಸಾಧ್ಯ.’ ಎಂದರು.

‘ಬಹುತೇಕರಿಗೆ ಮೌನದ ಮಹತ್ವವೇ ಗೊತ್ತಾಗಿಲ್ಲ. ಮಾತಿನಿಂದ ಕರೋನಾ ವೈರಸ್ ಹರಡುತ್ತದೆ ಎಂದು ಹೇಳಿದರೂ ಬಾಯಿ ಮುಚ್ಚಿಕೊಂಡಿರುವುದಿಲ್ಲ. ಮಾತಾಡದಿದ್ದರೆ ಅವರ ಉಸುರು ನಿಂತು ಹೋಗುತ್ತದೆ. ಅಷ್ಟರಮಟ್ಟಿಗೆ ಅವರು ಮಾತಿಗೆ ಅಡಿಕ್ಟ್ ಆಗಿದ್ದಾರೆ. ನನಗೆ ಮಾತು ಬಹಳ ಹಿಂಸೆ ಕೊಡುತ್ತದೆ. ಪ್ರಾಣಿಗಳು, ಪಕ್ಷಿಗಳು ಮಾತಾಡುವುದಿಲ್ಲ. ಆಫ್ರಿಕಾದ ಝೂಲು ಪ್ರಾಂತ ದಲ್ಲಿರುವ ಹಲವು ಕಾಡು ಜನರಿಗೆ ಮಾತು ಬರುವುದಿಲ್ಲ.

ಅವರಿಗೂ, ಪ್ರಾಣಿಗಳಿಗೂ ವ್ಯತ್ಯಾಸವಿಲ್ಲ. ಸೋಜಿಗವೆಂದರೆ, ಅವರಿಗೆ ಮಾತಿನ ಅಗತ್ಯವೇ ಕಂಡು ಬಂದಿಲ್ಲ. ಅವರೆಲ್ಲ ಖುಷಿ ಯಿಂದ ಇದ್ದಾರೆ. ಪ್ರಾಣಿಗಳಿಗೆ ಮಾತು ಬಂದಿದ್ದರೆ, ಮನುಷ್ಯನ ಬದುಕು ಅಸಹನೀಯವಾಗುತ್ತಿತ್ತು. ಮನುಷ್ಯನ ಮಾತುಗಳಿಂದ, ಈಗ ಇತರ ಜೀವಿಗಳ ಬದುಕು ಅಸಹನೀಯವಾಗಿದೆ’ ಎಂದು ಯೋಗಿಜೀ ಹೇಳುತ್ತಿದ್ದರೆ, ನಾನು ಮೌನಕ್ಕೆ ಶರಣಾಗಿದ್ದೆ.

ಐವತ್ತೈದು ವರ್ಷ ವಯಸ್ಸಿನ ಯೋಗಿಜೀ, ಸುಮಾರು ಇಪ್ಪತ್ತು ವರ್ಷಗಳನ್ನು ಮೌನದಲ್ಲಿಯೇ ಕಳೆದಿzರೆ. ವರ್ಷ ವರ್ಷ
ಮೌನದ ಅವಧಿಯನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. ಮೌನ ಮುರಿದರೂ, ಮಿತಭಾಷಿಯಾಗಿದ್ದಾರೆ. ಅನೇಕರಿಗೆ ವ್ರತ ಅಂದರೆ ಏನೂ ಮಾಡದೇ ಸುಮ್ಮನಿರುವುದು, ಧ್ಯಾನಾಸಕ್ತರಾಗಿರುವುದು ಎಂಬ ಅಭಿಪ್ರಾಯವಿದೆ. ಯೋಗಿಜೀ ಮಾತಾಡುವುದಿಲ್ಲ ಎನ್ನುವು ದನ್ನು ಬಿಟ್ಟರೆ, ಉಳಿದೆ ಕೆಲಸಗಳನ್ನು ತಾವೇ ಮಾಡುತ್ತಾರೆ. ದೈನಂದಿನ ಅವರ ಯಾವ ಕೆಲಸ – ಕಾರ್ಯಗಳೂ ಏರುಪೇರಾ ಗುವುದಿಲ್ಲ. ಎ ಸೂಚನೆ ಗಳನ್ನು ಬರೆದಿಡುತ್ತಾರೆ.

ಅವರೊಂದಿಗೆ ವ್ಯವಹರಿಸಲೇಬೇಕು ಎನ್ನುವವರು ಚೀಟಿ ಬರೆದುಕೊಡುತ್ತಾರೆ. ಮೌನವ್ರತದಲ್ಲಿದ್ದಾಗ, ಉದ್ದೇಶಪೂರ್ವಕವಾಗಿ ಜನರ ಭೇಟಿಯನ್ನು ಕಡಿಮೆ ಮಾಡುತ್ತಾರೆ. ಒಬ್ಬಂಟಿಯಾಗಿರುವುದನ್ನು ಹೆಚ್ಚು ಇಷ್ಟಪಡುತ್ತಾರೆ. ಕಳೆದ ಹತ್ತು ವರ್ಷಗಳಿಂದ ಯೋಗಿಜೀ ನನಗೂ ಮೌನವ್ರತ ಮಾಡುವಂತೆ ಹೇಳುತ್ತಿದ್ದಾರೆ. ಒಂದು ದಿನ ಸಹ ಮಾತಾಡದೇ ಇರುವುದಾದರೂ ಹೇಗೆ ? ಅದರಲ್ಲೂ ಸಂಪಾದಕನಾಗಿ ಮಾತಾಡದಿದ್ದರೆ ಕಷ್ಟ. ನಾನು ಈ ಬಗ್ಗೆ ಯೋಚಿಸಿದಾಗಲೆಲ್ಲ ಯೋಗಿಜೀ ಮಾತು ನೆನಪಾಗುತ್ತದೆ.

‘ನಿಮಗೆ ನಿಮ್ಮ ಮೌನದ ಮಹತ್ವ ಅರ್ಥವಾಗದಿದ್ದರೆ, ಮಾತಿನ ಮಹತ್ವವೂ ಗೊತ್ತಾಗುವುದಿಲ್ಲ. ನೀವು ರೂಮಿ ಹೇಳಿದ್ದನ್ನು ಕೇಳಿದ್ದೀರಾ? Listen to silence. It has so much to say ಎಂದು ಆತ ಹೇಳಿದ್ದಾನೆ. ಮಾತಿನಿಂದಲೇ ಎಲ್ಲವೂ ಆಗುತ್ತದೆಯೆಂದು ನೀವು ಭಾವಿಸಿದ್ದೀರಿ. “Silence is not empty. It has full of answers.’ ಎಂದು ಯೋಗಿಜೀ ಆಗಾಗ ಹೇಳುತ್ತಿರುತ್ತಾರೆ. ಹಾಗೆ ಹೇಳಿದಾಗಲೆ ಕನಿಷ್ಠ ಒಂದು ವಾರವಾದರೂ ಮೌನವ್ರತಕ್ಕೆ ಕುಳಿತುಕೊಳ್ಳಬೇಕು ಎನಿಸುತ್ತದೆ. ಬೆಳಗಾಗುತ್ತಲೇ ಮಾತಿನ ಪ್ರವಾಹ ದೊಳಗೆ ಸಿಕ್ಕು ಕಳೆದು ಹೋಗುತ್ತೇನೆ.

ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದಾಗ, ವಾರದಲ್ಲಿ ಒಂದು ದಿನ (ಭಾನುವಾರ) ಮೌನಕ್ಕೆ ಶರಣಾಗುತ್ತಿದ್ದರು. ಆ ದಿನ ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರಲಿಲ್ಲ. ಸಾರ್ವಜನಿಕರನ್ನು ಭೇಟಿ ಮಾಡುತ್ತಿರಲಿಲ್ಲ. ತೀರಾ ಅನಿವಾರ್ಯ ಪ್ರಸಂಗಗಳಲ್ಲಿ ಅವರೊಂದಿಗೆ ಬರೆದು ವ್ಯವಹರಿಸಬೇಕಿತ್ತು. ಅವರ ಈ ನಿರ್ಧಾರದಿಂದ ಭಾನುವಾರದ ಸಭೆ – ಸಮಾರಂಭಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ. ಕೊನೆಕೊನೆಗೆ ಜನ ‘ನೀವು ಮೌನವಾಗಿ ಕುಳಿತುಕೊಂಡಿದ್ದರೂ ಪರವಾಗಿಲ್ಲ, ಕಾರ್ಯಕ್ರಮಕ್ಕೆ ಬರಬೇಕು’ ಎಂದು ಒತ್ತಾಯ ಮಾಡುತ್ತಿದ್ದರು.

ಪ್ರತಿಯೊಬ್ಬರೂ ವಾರಕ್ಕೊಮ್ಮೆ ಇಲ್ಲವೇ ತಿಂಗಳಿಗೊಮ್ಮೆ ಯಾದರೂ ಮೌನವ್ರತ ಮಾಡಬೇಕೆಂದು ಹೆಗಡೆಯವರು ಹೇಳು ತ್ತಿದ್ದರು. ಅದರಲ್ಲೂ ಮುಖ್ಯಮಂತ್ರಿ ಅಥವಾ ಧಾನಿಯಾದವರಿಗೆ ಇದು ಅತ್ಯಗತ್ಯ ಎಂಬುದು ಅವರ ಅಭಿಮತವಾಗಿತ್ತು. ರಾಜ್ಯ ಮತ್ತು ದೇಶದ ಹಿತದೃಷ್ಟಿಯಿಂದ  ಮೌನವಾಗಿದ್ದರೆ, ಚಿಂತಿಸಲು, ಯೋಚಿಸಲು, ಧೇನಿಸಲು ಸಾಕಷ್ಟು ಸಮಯ ಸಿಗುತ್ತದೆ, ಮಾತು, ಗೌಜು- ಗದ್ದಲದಲ್ಲಿ ಕಳೆಯುವುದು ಒಳ್ಳೆಯದಲ್ಲ ಎಂದು ಹೆಗಡೆಯವರು ಹೇಳುತ್ತಿದ್ದರು. ಅವರಿಗೂ ಈ ವ್ರತವನ್ನು ಬಹಳ ಕಾಲ ಮುಂದುವರಿಸಲು ಆಗಲಿಲ್ಲ. ಈ ದಿನಗಳಲ್ಲಿ ಮುಖ್ಯಮಂತ್ರಿಯಾಗಲಿ, ಪ್ರಧಾನಿಯಾಗಲಿ ಮೌನವ್ರತ ಮಾಡಿದರೆ, ಸಾಮಾಜಿಕ ಜಾಲತಾಣಗಳಲ್ಲಿ ಜನ ಹುರಿದು ಮುಕ್ಕಿಬಿಡುತ್ತಾರೆ. ಅದರಲ್ಲೂ ಮೋದಿಯವರು ಏನೇ ಮಾಡಿದರೂ, ತಪ್ಪುಗಳನ್ನು ಕಂಡು ಹಿಡಿಯುವವರು ಮೌನವ್ರತ ಮಾಡಿದರೆ, ಕೇಳುವುದೇ ಬೇಡ. ಅತಿ ಮಾತಾಡುವವರು ಎಂಬ ಟೀಕೆಗೂ ಗುರಿಯಾಗಿರುವ ಮೋದಿಯವರು, ಒಂದು ವೇಳೆ ಮೌನವ್ರತ ಮಾಡಿದರೆ, ಯಾರಿಗೆ ಗೊತ್ತು, ಅವರ ವಿರೋಧಿಗಳು ಅದನ್ನು ಸ್ವಾಗತಿಸಲೂ ಬಹುದು.

ಆದರೆ ಅವರ ಪ್ರತಿ ನಡೆಯಲ್ಲೂ ಹುಳುಕು ಹುಡುಕುವವರು ಮಾತ್ರ ಅವರನ್ನು ಟ್ರೋಲ್ ಮಾಡದೇ ಬಿಡುವುದಿಲ್ಲ. Work hard in silence; Let success make the noise ಎಂದು ಅವರ ಬೆಂಬಲಿಗರು ಅವರ ಪರ ಮಾತಾಡಬಹುದು. ಒಂದು ವೇಳೆ ಮೋದಿಯವರು ಮೌನಕ್ಕೆ ಶರಣಾದರೂ ಆಗಬಹುದು, ಆದರೆ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿ ಮಾತ್ರ ಅಂಥ
ನಿರ್ಧಾರಕ್ಕೆ ಮುಂದಾಗಬಹುದಾ? ಉಹುಂ.. ಅದನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಅವರೂ ಮೌನ ಧರಿಸಿದರೆ, ಇಡೀ ದೇಶದಲ್ಲಿ ಶಾಂತ ವಾತಾವರಣ ಆವರಿಸಿದ ಹಿತಾನುಭವ !

ನೀವು ಮಾಡುವುದನ್ನು ಮೌನದಲ್ಲಿಯೇ ಮಾಡಿ, ಕೊನೆಯಲ್ಲಿ ಮಾತ್ರ ‘ಚೆಕ್ ಮೇಟ್’ ಎಂದು ಹೇಳಿ ಎಂಬುದು ವಕ್ರತುಂಡೋಕ್ತಿ ಯಲ್ಲ. ಅದು ಲೋಕಾನುಭವದ ನುಡಿ. ಮೌನವೆಂದರೆ ಮಾತಾಡದೇ ಇರುವುದಲ್ಲ, ಅದು ಮಾತಿಗೂ ಮೀರಿದ ಸಂವಹನ. ಹೀಗಾಗಿ ಕೆಲ ದಿನಗಳಾದರೂ ಮೌನವಾಗಿರಲು ಪ್ರಯತ್ನಿಸಬೇಕು. ಯೋಗಿಜೀ ಹೇಳಿದ ಮಾತುಗಳನ್ನು ಪರೀಕ್ಷಿಸಲಾದರೂ ಮೌನಕ್ಕೆ ಶರಣಾಗಬೇಕು.

ನಮ್ಮನ್ನು ಈ ಮೊಬೈಲ್ ನಿಯಂತ್ರಿಸುತ್ತಿರುವ ಈ ದಿನಗಳಲ್ಲಿ, ಮೌನದ ಮಹತ್ವವನ್ನು ಇನ್ನಾದರೂ ಅರಿತುಕೊಳ್ಳಬೇಕಿದೆ.
ತರೂರ್ ಹೊಸ ಪುಸ್ತಕ ನಿಜಕ್ಕೂ ಆಶ್ಚರ್ಯವಾಗುತ್ತದೆ, ಕಾಂಗ್ರೆಸ್ ಸಂಸದ ಶಶಿ ತರೂರ್ ಇಷ್ಟೆ ಹೇಗೆ ಬರೆಯುತ್ತಾರೆಂದು. ಅವರು
ಕ್ರಿಯಾಶೀಲ ಸಂಸದ. ಸಂಸತ್ತಿನಲ್ಲಿ ಚರ್ಚೆಯಲ್ಲಿ ಭಾಗವಹಿಸುತ್ತಾರೆ, ಕ್ಷೇತ್ರದ ಕೆಲಸ-ಕಾರ್ಯಗಳಲ್ಲಿ ಓಡಾಡುತ್ತಾರೆ. ಪ್ರತಿದಿನ ಕನಿಷ್ಠ ಏಳೆಂಟು ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಅವರ ಟ್ವೀಟ್‌ಗಳಿಂದ ಗೊತ್ತಾಗುತ್ತದೆ.

ಮೂರು ಪತ್ರಿಕೆ ಮತ್ತು ನಿಯತಕಾಲಿಕಗಳಿಗೆ ವಾರದ ಅಂಕಣ ಬರೆಯುತ್ತಾರೆ. ಯಾವುದಾದರೂ ಪತ್ರಿಕೆ ಅಥವಾ ಮ್ಯಾಗಜಿನ್,
ಸಾಂದರ್ಭಿಕ ಲೇಖನಗಳನ್ನು ಕೇಳಿದರೆ, ಇಲ್ಲವೆನ್ನುವುದಿಲ್ಲ. ದೇಶದಲ್ಲಿ ಎಲ್ಲಿಯೇ ಲಿಟ್ ಫಸ್ಟ್ (ಸಾಹಿತ್ಯ ಸಮ್ಮೇಳನಗಳು)
ಗಳಾಗಲಿ, ಅಲ್ಲಿ ತರೂರ್ ಇರುತ್ತಾರೆ. ವಿದೇಶಗಳಲ್ಲೂ ಇಂಥ ಕಾರ್ಯಕ್ರಮಗಳಾದರೆ, ಅವರಿಗೆ ಆಹ್ವಾನವಿರುತ್ತವೆ ಮತ್ತು
ಅವರು ಅವುಗಳಲ್ಲಿ ಪಾಲ್ಗೊಳ್ಳುತ್ತಾರೆ. ಇದರ ಜತೆ ಗಣ್ಯ ಲೇಖಕರ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳಲ್ಲಿ, ಸಂವಾದದಲ್ಲಿ
ಭಾಗವಹಿಸುತ್ತಾರೆ. ಪ್ರತಿದಿನ ಹತ್ತಾರು ಟ್ವೀಟ್ ಮಾಡುತ್ತಾರೆ.

ಅವರ ಟ್ವೀಟ್‌ಗಳನ್ನು ನೋಡಿದರೆ, ಅವರು ಎಷ್ಟು ಓದುತ್ತಾರೆ, ಎಷ್ಟು ಜನರನ್ನು ಭೇಟಿ ಮಾಡುತ್ತಾರೆ ಎಂಬುದು ಗೊತ್ತಾಗುತ್ತದೆ.
‘ನನಗೆ ಪ್ರತಿ ವಾರ ಬೇರೆ ಬೇರೆ ದೇಶಗಳಿಗೆ ಆಮಂತ್ರಣವಿರುತ್ತದೆ. ಆದರೆ ತಿಂಗಳಿಗೆ ಒಂದು ಅಥವಾ ಎರಡು ಅಂಥ ಆಮಂತ್ರಣ ವನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಅವರು ಕೋವಿಡ್ ಗಿಂತ ಮುನ್ನ ಬರೆದುಕೊಂಡಿದ್ದರು. ಇಷ್ಟೂ ಸಾಲದೆಂಬಂತೆ, ವರ್ಷದಲ್ಲಿ ಒಂದು ಅಥವಾ ಎರಡು ಪುಸ್ತಕಗಳನ್ನು ಬರೆಯುತ್ತಾರೆ. ಇಷ್ಟೆ ಒಬ್ಬ ವ್ಯಕ್ತಿಗೆ ಮಾಡಲು ಹೇಗೆ ಸಾಧ್ಯ ಎಂದು ಯಾರಿಗಾದರೂ ಅನಿಸದಿರದು. ತರೂರ್ ಇವೆಲ್ಲವನ್ನೂ ಅತ್ಯಂತ ಖುಷಿಯಿಂದ ಮಾಡುತ್ತಾರೆ.

ಸದಾ ಅವರು ನಗು, ಹುಮ್ಮಸ್ಸಿನಿಂದ ಬಿರಿಯುತ್ತಿರುವುದೇ ಇದಕ್ಕೆ ಸಾಕ್ಷಿ. ಇಷ್ಟೆ ಯಾಕೆ ಹೇಳಿದೆನೆಂದರೆ, ನವೆಂಬರ್ ಮೊದಲ
ವಾರದಲ್ಲಿ ತರೂರ್ ಅವರ ಹೊಸ ಪುಸ್ತಕ ಬಿಡುಗಡೆಯಾಗಲಿದೆ. ಇದು ತಮ್ಮ ಮಹತ್ವಾಕಾಂಕ್ಷೆಯ ಪುಸ್ತಕ ಅಥವಾ ಮೇರುಕೃತಿ
ಎಂದು ಅವರೇ ಕರೆದುಕೊಂಡಿzರೆ. ಅಂದ ಹಾಗೆ ಆ ಕೃತಿಯ ಹೆಸರು – The Battle Of Belonging : On Nationalism, Patriotism, And What It Means To Be Indian.

ಮೂಲತಃ ಇಂಗ್ಲಿಷ್ ಪದಪ್ರೇಮಿಯಾಗಿರುವ ತರೂರ್ ಒಂದೂವರೆ ತಿಂಗಳ ಹಿಂದಷ್ಟೇ Tharoorosaurus ಎಂಬ ಪುಸ್ತಕ ಬಿಡುಗಡೆ ಮಾಡಿದ್ದರು. ತಮ್ಮ ಈ ಹೊಸ ಪುಸ್ತಕದ ಆಗಮನದ ಬಗ್ಗೆ ತರೂರ್ ಟ್ವೀಟ್ ಮಾಡುವುದರ ಮೂಲಕ ಘೋಷಿಸಿದ್ದರು. ಅದಕ್ಕೆ ಕಾಂಗ್ರೆಸ್ ನಾಯಕ, ಬರಹಗಾರ, ಕನ್ನಡಿಗ ಮತ್ತು ಅವರ ಸ್ನೇಹಿತ ಜೈರಾಮ್ ರಮೇಶ “Congratulations. You are
superprolificexpialidocious!’ ಎಂದು ಟ್ವೀಟ್ ಮೂಲಕವೇ ಪ್ರತಿಕ್ರಿಯಿಸಿದ್ದರು.

ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಇಂಗ್ಲಿಷ್ ಬಹಳ ವಿಚಿತ್ರ ಭಾಷೆ, ಅದೊಂದು ಲಾಜಿಕ್ ಇಲ್ಲದ ಭಾಷೆ ಎಂದು ಹಿಂದಿನ ವಾರ ಬರೆದಿದ್ದೆ. ಅದಕ್ಕೆ ಉದಾಹರಣೆಯಾಗಿ, ಜೈಲ್ ಮತ್ತು ಪ್ರಿಸನ್ ಪದಗಳನ್ನು ಉಲ್ಲೇಖಿಸಿದ್ದೆ. ಜೈಲ್ ((Jail)) ಮತ್ತು ಪ್ರಿಸನ್ (Prison) ಸಮಾನಾರ್ಥಕ ಪದಗಳು, ಆದರೆ ಜೈಲರ್ (Jailer) ಮತ್ತು ಪ್ರಿಸನರ್ (Prisoner) ವಿರುದ್ಧಾರ್ಥಕ ಪದಗಳು ಎಂದು
ಕಿರಣ್ ಮಜುಂದಾರ್ ಶಾ ಅವರ ಟ್ವೀಟ್ ಉಖಿಸಿ ಬರೆದಿದ್ದೆ. ಇದಕ್ಕೆ ಮಿತ್ರರಾದ ನಾರಾಯಣ ರಾಯಚೂರ್ ಪ್ರತಿಕ್ರಿಯಿಸಿದ್ದಾರೆ.

ಸಾಮಾನ್ಯವಾಗಿ ನಾವು Completed ಮತ್ತು finished ಎಂಬ ಪದಗಳನ್ನು ಒಂದೇ ಅರ್ಥದಲ್ಲಿ ಬಳಸುತ್ತೇವೆ. I have completed this work ಎಂದು ಹೇಳುತ್ತೇವೆ, ಅದೇ ರೀತಿ I have finished this work ಎಂದು ಹೇಳುತ್ತೇವೆ. ಇಲ್ಲಿ Completed ಮತ್ತು
finished ಅರ್ಥ ಒಂದೇ. ಆದರೆ ಲಂಡನ್ನಿನಲ್ಲಿ ನಡೆದ ಭಾಷಾ ಸಮಾವೇಶದಲ್ಲಿ, ಭಾರತೀಯ ಮೂಲದ ಅಮೆರಿಕನ್ ಭಾಷಾ ತಜ್ಞ ಸನ್ ಶೆರ್ಮನ್ ಈ ಎರಡು ಪದಗಳನ್ನಿಟ್ಟುಕೊಂಡು ಸವಾಲು ಹಾಕಿ ಬಹುಮಾನ ಗಳಿಸಿದರು. ‘ಸರಿ, Completed ಮತ್ತು finished ಈ ಎರಡೂ ಪದಗಳ ಅರ್ಥ ಒಂದೇ ಎಂದು ವಾದಿಸುವವರು ಕೈ ಎತ್ತಿ’ ಎಂದು ಹೇಳಿದರು.

ಸಭೆಯಲ್ಲಿದ್ದ ಎಲ್ಲರೂ ಹೌದು ಎಂಬಂತೆ ಕೈಯೆತ್ತಿದರು. ಆಗ ಶೆರ್ಮನ್ ಹೇಳಿದರು – & “When you marry the right woman, you are ‘complete’. If you marry the wrong woman, you are ‘finished’. When the right woman catches you with the wrong woman, you are ‘completely finished.’

ಕ್ಷಣಾರ್ಧದಲ್ಲಿ ನೇರಪ್ರಸಾರ!
ಮೊನ್ನೆ ಅರ್ನಾಬ್ ಗೋಸ್ವಾಮಿ ಅವರ ‘ರಿಪಬ್ಲಿಕ್ ಟಿವಿ’ ಮುಂಬೈ ಕಚೇರಿಯಿಂದ ರಾತ್ರಿ ಫೋನ್ ಬಂತು. ‘ಅರ್ನಾಬ್ ಜತೆ ಪ್ಯಾನೆಲ್ ಡಿಸ್ಕಷನ್‌ನಲ್ಲಿ ಪಾಲ್ಗೊಳ್ಳಲು ಸಾಧ್ಯವಾ?’ ಎಂದು ಪರಿಚಯದ ಪ್ರೋಗ್ರಾಮ್ ಕೋರ್ಡಿನೇಟರ್ ಕೇಳಿದರು.
‘ಆಗಬಹುದು’ ಎಂದೆ. ‘ಹಾಗಾದರೆ ನಿಮ್ಮ ವಾಟ್ಸಾಪ್‌ಗೆ ಜೂಮ್ ಪಾಸ್ ವಾರ್ಡ್ ಕಳಿಸಿದ್ದೇನೆ, ನೋಡಿ ಬಂದಿರಬಹುದು, ತಕ್ಷಣ
ಜೂಮ್‌ಗೆ ಕನೆಕ್ಟ್ ಆಗಿ’ ಎಂದರು.

ಅದು ಬಂದಿತ್ತು. ನಾನು ‘ಜೂಮ’ ಗೆ ಕನೆಕ್ಟ್ ಆಗುತ್ತಿದ್ದಂತೆ, ರಿಪಬ್ಲಿಕ್ ಟಿವಿ ಪರದೆ ಮೇಲೆ ಕಾಣುತ್ತಿದ್ದೆ. ಅದಾಗಿ ಎರಡು
ನಿಮಿಷ ಆಗಿರಲಿಲ್ಲ, ನನಗೆ ಒಂದೇ ಸಮನೆ ಭಾರತದ ವಿವಿಧ ನಗರಗಳಲ್ಲಿರುವ ಸ್ನೇಹಿತರ ಜತೆಗೆ, ಲಂಡನ್, ದುಬೈ, ನೈರೋಬಿ,
ಕುವೇಟ್, ಖತಾರ್, ಫ್ರಾನ್ಸ್, ಜರ್ಮನಿಯಲ್ಲಿರುವ ಸ್ನೇಹಿತರ ವಾಟ್ಸಾಪ್ ಮೆಸೇಜುಗಳು ಬರಲಾರಂಭಿಸಿದವು. ಕಾರ್ಯಕ್ರಮ
ಮುಗಿಯುವುದರೊಳಗೆ, ಏನಿಲ್ಲವೆಂದರೂ ಸುಮಾರು ಇನ್ನೂರು ಮೆಸೇಜುಗಳು ಬಂದು ಕುಳಿತಿದ್ದವು. ಲೆಕ್ಕಾಚಾರ ಮಾಡಿ,
ಸರಿಯಾಗಿ, ಎರಡು ನಿಮಿಷಗಳೊಳಗೆ ನಾನು ಜಗತ್ತಿನೆದುರು ‘ಪ್ರತ್ಯಕ್ಷ’ನಾಗಿದ್ದೆ!

ಹತ್ತು ವರ್ಷಗಳ ಹಿಂದಿನವರೆಗೆ, ನ್ಯೂಸ್ ಚಾನೆಲ್ಲಿನಲ್ಲಿ ಮಾತಾಡಬೇಕೆಂದರೆ, ಸ್ಟುಡಿಯೋಕ್ಕೇ ಹೋಗಬೇಕಿತ್ತು. ನಂತರ ನಾ ವು ಇರುವಲ್ಲಿಂದ ಅಥವಾ ನಮ್ಮ ಮನೆಯಿಂದ ಮಾತಾಡ ಬಯಸಿದರೆ, ದೊಡ್ಡ ಚಿಪ್ಪು ಇರುವ DSNG (Digital Satellite News Gathering) ವಾಹನಗಳನ್ನು ಕಳಿಸಿಕೊಡುತ್ತಿದ್ದರು. ಆಗ ಮೂರ್ನಾಲ್ಕು ಸೆಕೆಂಡುಗಳ ದನಿ ಅಂತರ (voice lag) ಆಗುತ್ತಿತ್ತು. ಆಗ ಟಿವಿ ಕೆಮರಾಮನ್ ಮತ್ತು ವರದಿಗಾರ ಹೋಗಬೇಕಿತ್ತು. ನಂತರ ವರದಿಗಾರರು ಹೋಗುವುದನ್ನು ನಿಲ್ಲಿಸಿದರು. ಕೆಮರಾಮನ್‌ಗೆ
ಉಪಕರಣಗಳನ್ನು ಸೆಟ್ ಮಾಡಿಕೊಳ್ಳಲು ಹತ್ತು ನಿಮಿಷ ಬೇಕಾಗುತ್ತಿತ್ತು.

ಈಗ ಅದ್ಯಾವುದರ ತಲೆ ಬಿಸಿಯೇ ಇಲ್ಲ. ಮನೆಯಲ್ಲಿ ಕಂಪ್ಯೂಟರ್, ಲ್ಯಾಪ್ ಟಾಪ್ ಮುಂದೆ ಕುಳಿತರೆ ಸಾಕು, ಇಲ್ಲವೇ ಕೈಯಲ್ಲಿ ಮೊಬೈಲ್ ಫೋನಿದ್ದರೆ, ಎಲ್ಲಿ ಕುಳಿತು ಬೇಕಾದರೂ, ಟಿವಿ ಪರದೆ ಮೇಲೆ ಕ್ಷಣಾರ್ಧದಲ್ಲಿ ಕಾಣಿಸಿಕೊಳ್ಳಬಹುದು. ಮೈಕ್ ಕೂಡ ಬೇಕಿಲ್ಲ. ಇದರಿಂದ ಅತಿ ವೇಗದಲ್ಲಿ, ಖರ್ಚೂ ಇಲ್ಲದೇ ಕನೆಕ್ಟ್ ಆಗಬಹುದು.

ನಾವು ವ್ಯವಹರಿಸುವ ರೀತಿಯೇ ಬದಲಾಗಿದೆ. ಪ್ರತಿ ಸಲ ಹೊಸ ತಂತ್ರಜ್ಞಾನ ಬಂದಾಗ, ಇದಕ್ಕಿಂತ ಇನ್ನೇನು, ಬೇರೇನು ಬೇಕು ಎಂದು ಅನಿಸುತ್ತದೆ. ಆದರೆ ಇಂದಿನ ಹೊಸ ತಂತ್ರಜ್ಞಾನ ಕೆಲವೇ ದಿನಗಳಲ್ಲಿ ಹಳತಾಗುತ್ತದೆ. ಆ ಜಾಗದಲ್ಲಿ ಇನ್ನೇನೋ ಹೊಸತು ಬಂದಿರುತ್ತದೆ. ಇದಕ್ಕಿಂತ ವೇಗವಾಗಿ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಲು ಸಾಧ್ಯವಾಗಬಹುದಾ? ಗೊತ್ತಿಲ್ಲ.

ಇಷ್ಟು ವರ್ಷ ಕಾದಿದ್ದೇಕೆ?ಡಾ.ಪುರುಸೊತ್ತಿಗೆ ನರಸಿಂಹರಾಯರು ಆ ಊರಿನ ಖ್ಯಾತ ಮನಶಾಸಜ್ಞರು. ಯಾರಿಂದಲೂ ಬಿಡಿಸ ಲಾಗದ ಸಮಸ್ಯೆಯನ್ನು ಅವರು ಬಗೆಹರಿಸುತ್ತಿದ್ದರು. ಒಮ್ಮೆ ಮಹಿಳೆಯೊಬ್ಬಳು ಡಾ.ಪುರುಸೊತ್ತಿಗೆಯವರನ್ನು ಭೇಟಿಯಾಗಿ, ‘ನನ್ನ ಯಜಮಾನರು ತಾವು ಕೋಳಿ ಎಂದು ಭಾವಿಸಿದ್ದಾರೆ. ಪ್ರತಿ ದಿನ ಮುಂಜಾನೆ ಕೋಳಿಯಂತೆ ಕ್ಕೋ .. ಕ್ಕೋ..ಕ್ಕೋ.. ಎಂದು ಕೂಗುತ್ತಾರೆ. ನಂತರ ತಿಪ್ಪೆ ಕೆದರಲು ಆರಂಭಿಸುತ್ತಾರೆ. ಕುಳಿತಲ್ಲಿ ಕುಳಿತುಕೊಳ್ಳುವುದಿಲ್ಲ. ಇದರಿಂದ ನನಗಂತೂ ಬಹಳ ಚಿಂತೆಯಾಗಿದೆ. ಡಾಕ್ಟ್ರೇ ಸಹಾಯ ಮಾಡಿ, ನನ್ನ ಗಂಡನ ಕಾಯಿಲೆಯನ್ನು ವಾಸಿ ಮಾಡಿ’ ಎಂದು ಬೇಡಿಕೊಂಡಳು.

ಆಕೆ ಹೇಳುವುದೆಲ್ಲವನ್ನೂ ಪೂರ್ತಿ ಕೇಳಿದ ಡಾ.ಪುರುಸೊತ್ತಿಗೆಯವರು, ನಿಟ್ಟುಸಿರು ಬಿಡುತ್ತಾ. ‘ಐ ಸೀ… ಎಷ್ಟು ದಿನಗಳಿಂದ ನಿಮ್ಮ ಯಜಮಾನರು ತಾವು ಕೋಳಿ ಎಂದು ಭಾವಿಸಿದ್ದಾರಮ್ಮಾ?’ ಎಂದು ಕೇಳಿದರು. ‘ಡಾಕ್ಟ್ರೇ, ಕಳೆದ ಮೂರು ವರ್ಷಗಳಿಂದ’ ಎಂದಳು ಮಹಿಳೆ. ಆಗ ಡಾ.ಪುರುಸೊತ್ತಿಗೆಯವರು, ‘ಏನು ಮೂರು ವರ್ಷಗಳಿಂದಾನಾ? ಅಲ್ಲಿ ತನಕ ಏನು ಮಾಡುತ್ತಿದ್ದಿ? ತಕ್ಷಣ
ಕರೆದುಕೊಂಡು ಬರಬಾರದಿತ್ತಾ?’ ಎಂದು ಜೋರಾಗಿ ಕೇಳಿದರು. ಅದಕ್ಕೆ ಆ ಮಹಿಳೆ ಹೇಳಿದಳು – ‘ಕೋಳಿ ಮೊಟ್ಟೆ ಇಡಬಹುದು
ಎಂದು ಇಷ್ಟು ವರ್ಷ ಕಾದೆ.’

Leave a Reply

Your email address will not be published. Required fields are marked *