ಶಿರಸಿ: ಶಿರಸಿ ಪ್ರತ್ಯೇಕ ಜಿಲ್ಲೆಗಾಗಿ ಒತ್ತಾಯಿಸಿ ಫೆ ೨೪ ರಂದು ಬೆಳಿಗ್ಗೆ ೭ ರಿಂದ ಮಧ್ಯಾಹ್ನ ೨ ರವರೆಗೆ ಶಿರಸಿ ಬಂದ್ ಕರೆ ಕೊಡಲಾ ಗಿದ್ದು, ಸಾರ್ವಜನಿಕರು ಸಹಕಾರ ನೀಡಿ ಬಂದ್ ಯಶಸ್ವಿಗೊಳಿಸುವಂತೆ ಹೋರಾಟ ಸಮಿತಿ ಅಧ್ಯಕ್ಷ ಉಪೇಂದ್ರ ಪೈ ಕರೆ ನೀಡಿ ದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಘಟ್ಟದ ಮೇಲಿನ ಎಲ್ಲಾ ತಾಲೂಕಿನ ಬಂಧುಗಳು ಅಂದಿನ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು. ಅಭಿವೃದ್ಧಿ ಮತ್ತು ಅನುಕೂಲಕ್ಕಾಗಿ ಎಂಬ ಘೋಷವಾಖ್ಯದೊಂದಿಗೆ ಶಿರಸಿ ಜಿಲ್ಲೆ ಆಗಲೇಬೇಕು ಎಂದು ಒಕ್ಕೋರಲ ಧ್ವನಿಯೊಂದಿಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಈಗಾಗಲೇ ಹಿಂದೂ ಧಾರ್ಮಿಕ ಕೇಂದ್ರಗಳು, ಮಸೀದಿ, ಚರ್ಚ್ ಹಾಗೂ ಸಂಘ-ಸಂಸ್ಥೆಗಳ ಬೆಂಬಲ ಕೋರಲಾಗಿದ್ದು, ೨೫೦ ಗಣ್ಯರಿಗೆ ಪತ್ರ ಕಳಿಸಲಾಗಿದೆ. ಅದೇ ರೀತಿ ೬೦ ಕ್ಕೂ ಅಧಿಕ ಸಂಘಟನೆಗಳು ಬಂದ್ ಗೆ ಬೆಂಬಲ ಸೂಚಿಸಿದ್ದು, ಅವರ ಜೊತೆಗೆ ಈಗಾಗಲೇ ಚರ್ಚಿಸಲಾಗಿದೆ. ಆದ ಕಾರಣ ೨೪ ರ ಹೋರಾಟದ ಯಶಸ್ಸಿಗೆ ಎಲ್ಲರೂ ಬೆಂಬಲವಾಗಿ ನಿಲ್ಲಬೇಕು. ಶಿರಸಿಯ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಣೆಯಿಂದ ಮುಚ್ಚಿ ಸಹಕಾರ ನೀಡುವಂತೆ ಕೋರಿದರು.
ಗ್ರಾಮೀಣ ಭಾಗದ ಜನರ ಪಾಲ್ಗೊಳ್ಳುವಿಕೆಗೂ ಅತ್ಯಂತ ಮಹತ್ವದ್ದಾಗಿದ್ದು, ಬಂದ್ ಗ್ರಾಮೀಣ ಭಾಗಕ್ಕೂ ಅನ್ವಯ ಆಗಲಿದೆ. ಈಗಾಗಲೇ ಗ್ರಾಮೀಣ ಭಾಗಕ್ಕೆ ಬಂದ್ ಕುರಿತ ತಿಳುವಳಿಕೆ ಪತ್ರ ಕಳಿಸಲಾಗುತ್ತಿದ್ದು, ಎಲ್ಲರ ಸಹಕಾರದಲ್ಲಿ ಬಂದ್ ಯಶಸ್ವಿ ಮಾಡಲಾಗುವುದು ಎಂದರು.
ಈ ವೇಳೆ ಸಮಿತಿಯ ಎಂ.ಎಂ.ಭಟ್ಟ, ರಘು ಕಾನಡೆ, ಪರಮಾನಂದ ಹೆಗಡೆ, ವಿನಾಯಕ ಆಚಾರಿ, ಪ್ರಮುಖರಾದ ನಂದಕುಮಾರ ಜೋಗಳೇಕರ್, ಮಾದೇವ ಚಲವಾದಿ, ಅರ್ಚನಾ ಶಿರಾಲಿ, ಪ್ರದೀಪ ಅಳ್ಳೊಳ್ಳಿ ಉಪಸ್ಥಿತರಿದ್ದರು.