Thursday, 19th May 2022

ನಿಜಾರ್ಥದ ಮಣ್ಣಿನ ಮಗ

ಡಾ.ಭಾರತಿ ಮರವಂತೆ

ಗಣಪನನ್ನು ತಮ್ಮ ಮನೆಯ ಹುಡುಗನಾಗಿ ನೋಡಿದ ಜನಪದರು, ಅವನ ಲೀಲೆಗಳ ಕುರಿತಾಗಿ ಕಟ್ಟಿದ ಹಾಡುಗಳು ಆಕರ್ಷಕ, ಸ್ವಾರಸ್ಯಕರ.

ಎಲ್ಲರಿಗೂ ಅತೀ ಪ್ರಿಯ ದೇವತೆಯೇ ಗಣಪತಿ. ಪ್ರಥಮ ಪೂಜೆ ಸಲ್ಲಿಸುವ ಇಷ್ಟಾರ್ಥ ನೆರವೇರಿಸುವ, ವಿಘ್ನಗಳ ನಿವಾರಕನೇ ಈ ಬೆನಕ. ಗಣಪನಷ್ಟು ಜನಪ್ರಿಯ ದೇವರು ಬೇರೆಯಿಲ್ಲ, ಹಾಸ್ಯ ಘಟನೆಗಳಿಂದ ಮಕ್ಕಳಿಗೆ ಪ್ರಿಯನಾದ ವಿಚಿತ್ರ ರೂಪದ ದೇವರು ಹೌದು.

ಬಾಲಗಣಪತಿ, ದೋಣಿ ನಡೆಸುವ ಗಣಪತಿ, ನೃತ್ಯ ಗಣಪತಿ ಹೀಗೆ ವಿವಿಧ ರೂಪಗಳು ಚೌತಿಯಂದು ಊರು-ಕೇರಿ-ವಠಾರಗಳಲ್ಲಿ ಕಾಣುತ್ತೇವೆ. ಗಣಪತಿ ಕಲೆ ಮತ್ತು ವಿದ್ಯೆಯನ್ನು ಪ್ರೇರಿಸುವ ದೇವರಾಗಿ ಕಲಾವಿದರ ಬದುಕಿಗೆ ಆಧಾರವಾಗಿರುವುದನ್ನು ಕಾಣುತ್ತೇವೆ. ಮಣ್ಣಿನ ಮಗನಾಗಿ ಜನಿಸಿದ ಗಣಪನ ಕಥೆಯಲ್ಲಿ ಬದುಕಿನ ಸಂದೇಶವಿದೆ. ಚಮತ್ಕಾರದಿಂದ ಜನಿಸಿ ವಿಚಿತ್ರ ರೂಪ ಪಡೆದ ಈತನನ್ನು ನೋಡಿ ನಕ್ಕವರಿಗೆ ಕಲಿಸಿದ ಪಾಠದಲ್ಲಿ ಬದುಕಿನ ಸಿದ್ಧಾಂತವಿದೆ. ಯುಗ ಯುಗಕ್ಕೂ ಅನ್ವಯವಾಗುವ ಸಾರ್ವತ್ರಿಕ ಮೌಲ್ಯಗಳಿಗೆ ಗಣಪನೇ ರೂಪಕವಾಗುತ್ತಾನೆ. ಗಿರಿಜೆಯ ಪವಾಡದಿಂದ ಬಾಲ ಗಣಪ ಜನಿಸಿದ ಪರಿ ಜನಪದರಲ್ಲಿ ಈ ರೀತಿ ಇದೆ.

ಬೀದೀಗಿಳಿದಾಳೂ ಮ್ಯೆಯುಜ್ಜೀ ಕರೆದಾಳೂ
ಬೆವರೂ ತೆಗೆದಾಳೂ ಉಗುರಲ್ಲೀ ಗಿರಿಜೇಯು

ಪ್ರಕೃತಿಯ ಅಧಿದೇವನಾದ ಪರ್ವತರಾಜನ ಮಗಳು ಗಿರಿಜೆಗೆ ಮಣ್ಣಿನ ಮಗುವಿನ ಸೃಷ್ಟಿ ಆಟದಂತಿರುತ್ತದೆ. ಪರ್ವತಕ್ಕೆ ಅಂಟಿಕೊಂಡಿರುವುದೇ ಸಕಲ ಜೀವಸಂಕುಲಗಳಿಗೆ ಆಧಾರವಾದ ಭೂಮಿ. ಮಣ್ಣಿನಿಂದಲೇ ಹುಟ್ಟಿದ ಈ ಗಣಪನಿಗೆ ಪ್ರಥಮ ಪೂಜೆ ಸಲ್ಲುವುದರಲ್ಲಿ ಪ್ರಕೃತಿಯ ಮಹತ್ವವಿದೆ. ಗಣಪ ಬರುವ ಮೊದಲು ಗೌರಿ ಬರುತ್ತಾಳೆ.

ಬೆಡಗೀನಾ ಪಾದಾ ಎಡಕಿಟ್ಟೂ ಬಲಕಿಟ್ಟೂ
ತೊಡೆಯನೇರಯ್ಯಾ ಗಣಪಾತೀ

ಎಂಬಲ್ಲಿ ಬಾಲ ಗಣಪನ ಪಾಲನೆ ಪೋಷಣೆಯಲ್ಲಿ ತಾಯಿ ಮಕ್ಕಳ ಸಂಬಂಧ ಸೂಕ್ಷ್ಮತೆಗಳಿವೆ. ‘ಯಾರ‍್ಯಾರೊಳವೀಕೇ ಬಿಡಬೇಡಾ ಕಂದಾನೇ’ ಎಂದು ಮಗುವನ್ನು ಹೊರಬಿಟ್ಟು ಗೌರಿ ಒಳಹೋಗುತ್ತಾಳೆ. ಮನೆಗೆ ಬಂದ ಶಿವನು ಅಪರಿಚಿತ ಹುಡುಗನ ವರ್ತನೆ ಕೋಪಬರಿಸಿ ಕುತ್ತಿಗೆಯನ್ನೇ ಕತ್ತರಿಸುತ್ತಾನೆ. ಅತಿಯಾದ ಕೋಪ ದಿಂದ ಬುದ್ಧಿ ಸ್ಥಿಮಿತ ಕಳೆದುಕೊಳ್ಳುತ್ತದೆ ಎನ್ನುವ ಎಚ್ಚರಿಕೆಯನ್ನು ಗೌರಿ ಕೆಳಗಿನಂತೆ ಹೇಳುತ್ತಾಳೆ.

ಮಂದಾಮತಿಯಾಗಿ ಕೊಂದೀರಾ|ಪತೀಗಳೇ

ತಂದೂಕೊಡಿ ಗೋರಾ ವಿಷವನ್ನೂ

ಗೌರಿ ಗೋಳಿಡುವ ರೀತಿ ಕೌಟುಂಬಿಕ ಚಿತ್ರಣವೊಂದು ಅನಾವರಣಗೊಳ್ಳುತ್ತದೆ. ಶಿವನು ಉತ್ತರದಿಕ್ಕಿಗೆ ತಲೆ ಹಾಕಿ ಮಲಗಿದವರ ತಲೆಯನ್ನೇ ಕಡಿದು ತನ್ನಿ ಎಂದು ಸಹಚರರಿಗೆ ಹೇಳುತ್ತಾನೆ. ಆನೆಯ ತಲೆಯನ್ನು ತಂದು ಮುಂಡಕೆ ರುಂಡ ಜೋಡಿಸಿದಾಗ ಗೌರಿಯ ದುಃಖ ಹೆಚ್ಚಾಗುತ್ತದೆ. ಮಗನ ವಿಚಿತ್ರ ರೂಪವನ್ನು ವರ್ಣಿಸಿ ಗೋಳಿಡುತ್ತಾಳೆ.

ಜಡೆಯಾ ನಾನಂತೇ ಹೆಡೆಯುಳ್ಳಾ ಸೊಂಡೀಲೂ 
ದಾಡೇ ದಂತಗಳಾ ನೋಡ್ಯಾಳೂ| ಗಿರಿಜೇಯೂ
ಬೇಡಾ ಈ ಕಂದಾ ಪತಿಗಾಳೇ

ಎಂದು ವಿಚಿತ್ರ ಮಗುವಿನ ಭವಿಷ್ಯದ ಬಗ್ಗೆ ಗೌರಿ ಚಿಂತಿಸಿದಾಗ

ಸೂಕ್ಷ್ಮಾ ಬುದ್ಧೀಯಾ ಮದ್ದಾನೇ | ಕಂಠಾದಿ
ಮೊದ್ಲು ಪೂಜೆಯು ನಿನಗೇ ಗಣಪಾತಿ

ಎನ್ನುವ ಶಿವನ ಮಾತು ಕೇಳಿ ಸಂತಸಗೊಂಡ ಗಿರಿಜೆಗೆ ಬಾಲಕನ ಪೋಷಣೆ ಸವಾಲಾಗಿತ್ತು. ಬಾಳೆ ಹಣ್ಣು, ಹಾಲು, ತುಪ್ಪ, ಭಕ್ಷಗಳು, ಚಕ್ಕುಲಿಗಳನ್ನು ಗಣಪ ಕದ್ದು ಮುಕ್ಕುತ್ತಿದ್ದನಂತೆ. ಇಂದಿಗೂ ಗಣಪತಿ ಹಬ್ಬದಲ್ಲಿ ಭಕ್ಷ್ಯಗಳನ್ನು ತಯಾರಿಸಿ ಅರ್ಪಿಸುತ್ತಾರೆ. ಗಣಪತಿ ಚಕ್ಕುಲಿ ತಿನ್ನುವ ಶಬ್ದ ಗೌರಿಗೆ ಕೇಳಿಸುತ್ತದೆ.

ಚಕ್ಕುಲಿ ಸ್ವರಕೇಳಿ ಪಕ್ಕಾನೆ ಶ್ರೀಗೌರಿ
ವಕ್ಕೆಲಿ ಬಣ್ಣಕೋಲಾತೆಕ್ಕೊಂಡೂ| ಶ್ರೀಗೌರೀ

ಅಮ್ಮನ ಹೊಡೆತ ತಪ್ಪಿಸಿಕೊಳ್ಳಲು ಗಣಪ ಪಶ್ಷಿಮಕ್ಕೆ ಓಡುತ್ತಾನೆ. ‘ಬಿದ್ದೋಡಿದಾನೂ ಗಣಪಾತೀ’ ಇದು ಜನಪದರ ವರ್ಣನೆ. ಈತ ಹೊಂಡಕ್ಕೆ ಬೀಳಬೇಕೆಂದೇ ದಾರಿಯಲ್ಲಿ ಹುಡುಗರು ಗುಳಿ ತೋಡುತ್ತಾರೆ. ಗಣಪನ ಪಾದ ಗುಳಿಗೆ ಸಿಕ್ಕಿಕೊಳ್ಳುತ್ತದೆ.

ತೊಡ್ಕೀಗೇ ಪಾದಹಾಕಿ ಗಣಪಾತೀ
ಎಡವೀ ಭೂಮೀಗೇ ಬಿದ್ದಾನೋ

ಆಗ ಗಣಪತಿಯ ಉಡಿದಾರ ತುಂಡಾದ್ದನ್ನು ನೋಡಿದ ಶ್ರೀಗೌರಿ ನಾಗರ ಹಾವನ್ನು ಹಿಡಿದು ಮಗುವಿನ ಹೊಟ್ಟೆಗೆ ಸುತ್ತುತ್ತಾಳೆ.

ಹೆಡೆಯಾ ನಾಗಾನಾ ಹಿಡಿತಂದೂ ಶ್ರೀಗೌರಿ
ಹೊಟ್ಟೀಗೊಂದೂ ಕಟ್ಟಾ ಬಿಗಿದಾಳೂ

ಬಿದ್ದಾಗ ಯಾರಾದರೂ ತಮ್ಮನ್ನು ನೋಡುತ್ತಾರೆಯೇ ಎಂದು ಬಾಲಗಣಪ ನೋಡಿದಾಗ ಚಂದಿರನ ನಗು ಕಾಣುತ್ತದೆ. ಆತನ ನಗು ಗಣಪನಿಗೆ ಅವಮಾನವಾಗಿ ಸಿಟ್ಟು ಬರಿಸುತ್ತದೆ.

ಖಳಚಂದ್ರಾ ನೀ ಕೇಳು
ನಿನ್ನ ಚೆಂದದ ಮುಖವೇ ಕಂದಾಲೀ

ಎಂದು ಗಣಪನ ಶಪಿಸುವ ಮಾತುಗಳಲ್ಲಿ ಸಾರ್ವತ್ರಿಕ ಸಂದೇಶವಿದೆ. ಇತರರ ಕಷ್ಟ ನೋಡಿ ಹಾಸ್ಯ ಮಾಡಬಾರದು ಎನ್ನುವ ಎಚ್ಚರಿಕೆಯಿದೆ. ಈ ಮೌಲ್ಯವನ್ನು ಚೌತಿ ಹಬ್ಬದಲ್ಲಿಯೇ ಮತ್ತೆ ಮತ್ತೆ ಗಣಪ ನೆನಪಿಸುತ್ತಾನೆ.

ಕಾಲಕಾಲದಲ್ಲೂ ಈ ಚೌತೀ ದಿನದಲ್ಲೂ
ಬಾಡಿದಾ ಮುಖವಾ ನೋಡಾದೇ| ಈರಾಲಿ
ನೋಡಿದವರಿಗೇ ಪೀಡೇಯೂ

ಚೌತಿಯಂದು ಚಂದ್ರನ ಮುಖ ಕಳೆಗುಂದಿರಬೇಕು ಈ ಮುಖ ನೋಡಿದವರಿಗೂ ತೊಂದರೆಗಳು ಬರಬೇಕೆಂದು ಗಣಪ ಶಪಿಸುತ್ತಾನೆ. ಆನೆಯ ತಲೆ, ಮನುಷ್ಯ ದೇಹ, ನಾಗರ ಹಾವಿನ ಉಡಿದಾರ, ಇಲಿಯ ವಾಹನ ವಿಚಿತ್ರವಾಗಿ ಕಂಡರೂ ಸಕಲ ಜೀವಿಗಳು ಸಹಬಾಳ್ವೆಯಿಂದ ಬದುಕಬೇಕೆನ್ನುವ ತಿಳುವಳಿಕೆಯಿಲ್ಲಿದೆ. ಚೌತಿಹಬ್ಬದಂದು ಚಂದಿರನನ್ನು ನೋಡಿದರೆ ತೊಂದರೆಯಾಗುತ್ತದೆ ಎನ್ನುವ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ. ಕಷ್ಟದಲ್ಲಿದ್ದವರನ್ನು ನೋಡಿ ಹಾಸ್ಯ ಮಾಡಿದರೆ
ಆಗುವ ದುಷ್ಟರಿಣಾಮ – ಇರುವ ಸಂಪತ್ತೆಲ್ಲವೂ ಚಂದಿರನ ಕಳೆಯಂತೆ ಬಾಡಿ ಹೋಗುತ್ತದೆ.

ಗಣಪ ಪ್ರಥಮವಂದಿತ. ಯಾರು ಮೊದಲು ಭೂಮಂಡಲವನ್ನು ಸುತ್ತಿ ನನ್ನಲ್ಲಿ ಬರುತ್ತಾರೋ ಅವರಿಗೆ ಪ್ರಥಮ ಪೂಜೆ ನೀಡುತ್ತೇನೆ ಎಂಬ ಶಿವನ ಸವಾಲಿಗೆ,

ಪೃಥ್ವೀಪಾಲಾಕಾ ಈ ಜನಕಾ
ಮೂರು ಸುತ್ತು ಸುತ್ತೂವೇ ಶಿವನೀಗೆ

ಎಂದು ಗಣಪ ತನ್ನ ಬುದ್ಧಿಕೌಶಲವನ್ನು ತೋರಿಸುತ್ತಾನೆ. ತಂದೆಯನ್ನು ಗೌರವಿಸಿ ದೈವತ್ತ್ವವನ್ನು ಹುಡುಕುವ ಸಂದೇಶ ಇಲ್ಲಿದೆ. ಜನಪದರ ಹಾಡಿನಲ್ಲಿ ಮಣ್ಣಿನ ಮಗ ಗಣಪ ಬದುಕಿನ ಸಂದೇಶವನ್ನು ನಮಗೆ ಮತ್ತೆ ಮತ್ತೆ ನೆನಪಿಸುತ್ತಾನೆ. (ಹಾಡುಗಳ ಸಂಗ್ರಹ: ಹಬ್ಬದ ಹಾಡುಗಳು: ಸಂ.ಡಾ. ಡಿ. ಬಿ. ನಾಯಕ)