Tuesday, 31st January 2023

ಅವರ ಮಾತು, ಮೌನವನ್ನು ಅರಸುವ ಮಾರ್ಗವಾಗಿತ್ತು

ಇದೇ ಅಂತರಂಗ ಸುದ್ದಿ

vbhat@me.com

‘ನಾತೂ ಪುಸ್ತಕಗಳನ್ನು ಬರೆಯಲಾರೆ. ಯಾರಿಗಾಗಿ ಬರೆಯಲಿ? ಪುಸ್ತಕ ಬರೆಯುವುದೆಂದರೆ ವಿಳಾಸವಿಲ್ಲದವನಿಗೆ ಪತ್ರ ಬರೆದಂತೆ. ಮಾತಿಗಾದರೂ ತಾನು ಯಾರನ್ನು ತಲುಪುತ್ತೇನೆಂದು ಗೊತ್ತಿರುತ್ತದೆ. ಗುರುತು ಇಲ್ಲದವರೊಡನೆ ಸಂವಹನ ಮಾಡಲು ಬಯಸುವವರು ಬರೆಯಲು ಇಷ್ಟಪಡುತ್ತಾರೆ’.

ಹೀಗೆಂದು ಹೇಳಿದವರು ಓಶೋ. ಹೀಗಾಗಿ ಅವರು ಬರೆಯಲಿಲ್ಲ. ಮಾತಾ ಡಿದರು, ಉಪದೇಶ ಮಾಡಿದರು, ಕತೆ ಹೇಳಿದರು, ಪ್ರವಚನ ನೀಡಿದರು, ಶಿಷ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಸಮಸ್ಯೆಗಳನ್ನು ಹಂಚಿಕೊಂಡವರಿಗೆ ಸಾಂತ್ವನ ನುಡಿದರು. ಮೌನ ಹಾಗೂ ಮಾತು ಇವೆರಡನ್ನೂ ಅವರು ಸಮ-ಸಮವಾಗಿ ದುಡಿಸಿಕೊಂಡರು. ಅವರಿಗೆ ಮೌನ ಧ್ಯಾನಕ್ಕೆ ಸಮವಾಗಿತ್ತು. ಮಾತು ಮೌನವನ್ನು ಅರಸುವ ಮಾರ್ಗವಾಗಿತ್ತು. ಹೀಗಾಗಿ ಓಶೋ ಅವೆರಡರ ಸಾಮರ್ಥ್ಯದಿಂದ ಅಪ್ರತಿಮ ಧ್ಯಾನಿಯೂ ಆದರು, ಮಾತು ಗಾರರೂ ಆದರು.

ಇವೆರಡಕ್ಕೆ ಅಗತ್ಯವಾದ ಓದು, ಅಧ್ಯಯನ, ಸಂಶೋಧನೆಯಲ್ಲಿ ಅವರಿಗೆ ಅಪರಿಮಿತ ಆಸಕ್ತಿಯಿತ್ತು. ಆದರೆ ಅವರು ಬರೆಯಲು ಕುಳಿತುಕೊಳ್ಳಲೇ ಇಲ್ಲ. ವಿಪರ್ಯಾಸವೆಂದರೆ, ಓಶೋ ಮಾತಾಡಿದ್ದೆಲ್ಲ ಅಕ್ಷರ ರೂಪಕ್ಕೆ ಬಂದಿದೆ. ಅವರ ಮಾತುಗಳೆಲ್ಲ ಅಕ್ಷರವಾಗಿ ಪುಸ್ತಕದಲ್ಲಿ ಬೆಚ್ಚಗೆ ಕುಳಿತುಕೊಂಡಿವೆ. ಅವರ ಹೆಸರಿನಲ್ಲಿ 650ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿವೆ. ಒಬ್ಬ ವ್ಯಕ್ತಿ ತನ್ನ ಜೀವಿತ ಕಾಲದಲ್ಲಿ ಇಷ್ಟೊಂದು ಪುಸ್ತಕಗಳನ್ನು ಬರೆಯುವುದು ಸಾಧ್ಯವಾ ಎಂದು ಬೆರಗಾ ಗುವಷ್ಟು, ಸ್ವತಃ ಲೇಖಕರಿಗೇ ಶೀರ್ಷಿಕೆಗಳನ್ನು ನೆನಪಿಟ್ಟುಕೊಳ್ಳಲು ಸಾಧ್ಯವಾಗದಷ್ಟು ಪುಸ್ತಕಗಳು ಅವರ ಹೆಸರಿನಲ್ಲಿ ಬಂದಿವೆ.

ಒಂದು ವೇಳೆ ಅವರೇ ಬರೆದಿದ್ದರೆ, ಅಷ್ಟೆಲ್ಲ ಪುಸ್ತಕಗಳನ್ನು ಬರೆಯಲು ಸಾಧ್ಯವೇ ಇರಲಿಲ್ಲ. ಆದರೆ ಅನೇಕರಿಗೆ ಅವೆಲ್ಲ
ಓಶೋ ಅವರ ಭಾಷಣ, ಪ್ರವಚನಗಳೆಂಬುದು ಗೊತ್ತಿಲ್ಲ. ಓಶೋ ನಿಧನರಾಗಿ ಇಪ್ಪತ್ತೆಂಟು ವರ್ಷಗಳಾದವು. ಆದರೂ
ಅವರ ಹೆಸರಿನಲ್ಲಿ ಪ್ರತಿವರ್ಷ ಅರ್ಧಡಜನ್ ಪುಸ್ತಕಗಳಾದರೂ ಪ್ರಕಟವಾಗುತ್ತವೆ. ಅವರ ಹೆಸರಿನಲ್ಲಿ ಎರಡು ಡಜನ್‌ಗಳಿಗಿಂತ
ಹೆಚ್ಚು ನಿಯತಕಾಲಿಕಗಳಿವೆ. ಓಶೋ ಹೇಳಿದ್ದಾರೆನ್ನಲಾದ ಹೊಸ ಹೊಸ ವಿಚಾರಗಳು ಆಗಾಗ ಕಾಣುತ್ತಲೇ ಇರುತ್ತವೆ.

ಕನ್ನಡದಲ್ಲಂತೂ ಈಗ ಓಶೋ ಪುಸ್ತಕಗಳನ್ನು ಅನುವಾದಿಸಲು ಕಾಪಿರೈಟ್ ಅಗತ್ಯವಿಲ್ಲ. ಯಾರು ಬೇಕಾದರೂ ಅನುವಾದಿಸ ಬಹುದು. ಹೀಗಾಗಿ ಅವರ ಕೃತಿಗಳು ಕನ್ನಡದಲ್ಲಿ ದಂಡಿಯಾಗಿ ಬರುತ್ತಿವೆ. ಕೆಲವು ಪುಸ್ತಕಗಳ ಅನುವಾದ ಗಳಂತೂ ಓಶೋಗೆ ‘ಬಗೆದ’ ಗಾಯದಂತಿದೆ. ಅವನ್ನು ಅನುವಾದಿಸದಿದ್ದರೆ ಓಶೋಗೆ ಸಂತೋಷವಾಗುತ್ತಿತ್ತೇನೋ? ಓಶೋ ಕೃತಿ ಯಾರೇ ಅನುವಾದಿಸಿದರೂ ಓದುತ್ತಾರೆಂಬ ಭ್ರಮೆಯೇ ಇದಕ್ಕೆ ಕಾರಣ.

ಇತ್ತೀಚೆಗೆ ನಾಲ್ಕೈದು ಕೃತಿಗಳನ್ನು ತಂದು ಓದಲಾರಂಭಿಸಿದರೆ, ಮೂರು ಪುಟಗಳನ್ನು ಓದಲಾಗಲಿಲ್ಲ. ಇತ್ತೀಚಿನ ದಿನಗಳಲ್ಲಿ
ಕೆಲವು ಕಲಬೆರಕೆ ಅನುವಾದಕರು ಸೇರಿಕೊಂಡುಬಿಟ್ಟಿದ್ದಾರೆ. ಒಂದು ವಾರದ ಲಾಡ್ಜ್ ಬಾಡಿಗೆ, ಪ್ರತಿದಿನ ಎರಡು ಕ್ವಾರ್ಟರ್
ರಮ್ಮು ಕುಡಿಸಿದರೆ ಒಂದು ಸೆಕ್ಸ್ ಮ್ಯಾಗಜಿನ್‌ಗೆ ಹೊಂದಿಸುವಷ್ಟು ಬರೆದುಕೊಡುತ್ತಿದ್ದ ಬಾಡಿಗೆ ಲೇಖಕರಂತೆ, ಈ ಕಲಬೆರಕೆ ಅನುವಾದಕರೂ ಹೆಚ್ಚು ಕಮ್ಮಿ ಅದೇ ಷರತ್ತುಗಳಿಗೆ ಪುಸ್ತಕ ಅನುವಾದ ಮಾಡಿಕೊಡುತ್ತಿದ್ದಾರೆ.

ಪ್ರಕಾಶಕರಿಗೂ ಇವನ್ನೆಲ್ಲ ತಿದ್ದುವ, ಸರಿಪಡಿಸುವ ಕಾಳಜಿ ಇರಬೇಕಿತ್ತು. ಅವರು ಯಾರು ಏನೇ ಬರೆದುಕೊಟ್ಟರೂ ಕಣ್ಮುಚ್ಚಿ ಪ್ರಕಟಿಸುವುದರಿಂದ ಈ ಪಡಪೋಶಿ ಬರಹಗಳು ಹಾಗೇ ತಪ್ಪುತಪ್ಪಾಗಿ ಪ್ರಕಟವಾಗುತ್ತಿವೆ. ಕಾಪಿರೈಟ್ ಇಲ್ಲ ಎಂಬ ಕಾರಣಕ್ಕೆ ಅನುವಾದಿಸುವವರು ರೈಟ್ ಕಾಪಿ ಬರೆಯದಿದ್ದರೆ, ಅಂಥವರನ್ನು ತಿರಸ್ಕರಿಸುವ ಕಾಲ ದೂರವಿಲ್ಲ. ಆದರೆ ಓಶೋ ಪುಸ್ತಕಗಳು ಮಾತ್ರ ಅಚ್ಚರಿ ಹುಟ್ಟಿಸುತ್ತಲೇ ಇರುತ್ತವೆ, ಅವರ ಮಾತಿನಂತೆ.

ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ

ಇದು 2008ರಲ್ಲಿ ನಡೆದ ಘಟನೆ. ಅಮೆರಿಕದ ಅಂದಿನ ಅಧ್ಯಕ್ಷ ಜಾರ್ಜ್ ಬುಶ್ ತಮ್ಮ ಅಧಿಕಾರ ಅವಧಿಯ ಕೊನೆಯಲ್ಲಿ ಇರಾಕ್‌ಗೆ ಹೋಗಿದ್ದರು. ಅಲ್ಲಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತಾಡಲು ನಿರ್ಧರಿಸಿದರು. ಆ ಗೋಷ್ಠಿಗೆ ಕೆಲವು ಪತ್ರಕರ್ತರನ್ನು ಮಾತ್ರ ಅತೀವ ಕಾಳಜಿಯಿಂದ ಆಯ್ಕೆ ಮಾಡಲಾಗಿತ್ತು. ಇರಾನ್ ಹಾಗೂ ಇರಾಕ್‌ನ ಜನತೆ ಅಮೆರಿಕ ತೆಗೆದುಕೊಂಡಿರುವ ಕ್ರಮಗಳಿಂದ ಮುಂಬರುವ ದಿನಗಳಲ್ಲಿ ಪ್ರಯೋಜನ ಪಡೆಯಲಿದ್ದಾ ರೆಂದು ಬುಶ್ ಹೇಳಿದರು.

ಅವರ ಪಕ್ಕದಲ್ಲಿ ಇರಾಕಿನ ಪ್ರಧಾನಿ ನೌರಿ-ಅಲ್- ಮಾಲಿಕಿ ಇದ್ದರು. ಇರಾಕಿನಲ್ಲಿ ಬಹಳ ದಿನಗಳಿಂದ ಯುದ್ಧ ನಡೆಯುತ್ತಿದ್ದರೂ, ಸಣ್ಣಪುಟ್ಟ ಗಲಾಟೆಗಳು ಮಾತ್ರ ನಡೆಯುತ್ತಿವೆ ಎಂದು ಬುಶ್ ಹೇಳಿದರು. ಪತ್ರಿಕಾಗೋಷ್ಠಿಗೆ ಆಗಮಿಸಿದ ಪತ್ರಕರ್ತರಿಗೆ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಪ್ರತಿ ಪತ್ರಕರ್ತರನ್ನೂ ಶೋಧಿಸಿ ಒಳಬಿಡಲಾಗಿತ್ತು. ಅದು ವಿದೇಶಿ ನೆಲದಲ್ಲಿ ಬುಶ್ ಅವರ
ಕೊನೆಯ ಪತ್ರಿಕಾಗೋಷ್ಠಿಯಾಗಿತ್ತು. ಇರಾಕಿನಲ್ಲಿ ಕಾನೂನು ಹಾಗೂ ಸುವ್ಯವಸ್ಥೆ ಸಂಪೂರ್ಣ ಕುಸಿದು ಬಿದ್ದಿದ್ದರೂ, ಅದಕ್ಕೆ
ಅಮೆರಿಕ ಕಾರಣವಾಗಿದ್ದರೂ, ಬಾಹ್ಯ ಜಗತ್ತಿನ ಮುಂದೆ ಮರ್ಯಾದೆ ಮುಚ್ಚಿಕೊಳ್ಳುವ ಪ್ರಯತ್ನವಾಗಿ ಬುಶ್ ಈ ಕಸರತ್ತು ನಡೆಸಿದ್ದರು.

ಬುಶ್ ಅವರ ಪತ್ರಿಕಾಗೋಷ್ಠಿ ಶುರುವಾಗಿ ಅರ್ಧಗಂಟೆಯಾಗಿತ್ತು. ‘ಸ್ವಾತಂತ್ರ್ಯ’ ಹಾಗೂ ‘ಪ್ರಜಾಪ್ರಭುತ್ವ’ದ ಮೌಲ್ಯಗಳ ಬಗ್ಗೆ ಅವರು ಉಪದೇಶ ಕೊಡುತ್ತಿದ್ದರು. ಆಗ ಮೂರನೇ ಸಾಲಿನ ಮಧ್ಯದಲ್ಲಿರುವ ಪತ್ರಕರ್ತನೊಬ್ಬ ಏಕಾಏಕಿ ಎದ್ದು ನಿಂತು, ಬೂಟನ್ನು ತೆಗೆದು ಬುಶ್ ಅವರತ್ತ ಬೀಸಿ ಎಸೆಯುತ್ತಾ, ‘”That is a farewell kiss from the people of Iraq, you dog’’ ಎಂದು ಕೂಗಿದ.

ಬುಶ್ ತಟ್ಟನೆ ಬಗ್ಗಿದರು. ಬೂಟು ಅವರ ಭುಜ ಸವರಿಕೊಂಡು ಹೋಯಿತು. ಪತ್ರಕರ್ತ ತನ್ನ ಮತ್ತೊಂದು ಬೂಟನ್ನು ಕೈಗೆತ್ತಿ ಕೊಂಡು ಬೀಸಿ ಎಸೆದ. ಇರಾಕ್ ಪ್ರಧಾನಿಯವರು ಗೋಲ್ ಕೀಪರ್‌ನಂತೆ ಆ ಬೂಟನ್ನು ಹಿಡಿಯಲು ಪ್ರಯತ್ನಿಸಿದರು. ಎರಡನೆ ಬೂಟನ್ನು ಎಸೆಯುವಾಗ, ‘ಇದೋ, ಇರಾಕಿನಲ್ಲಿ ಯುದ್ಧದಲ್ಲಿ ಸತ್ತವರ ವಿಧವೆ ಪತ್ನಿಯರ ಹಾಗೂ ತಬ್ಬಲಿ ಗಳಾದ ಮಕ್ಕಳ ದ್ಯೋತಕವಾಗಿ’ ಎಂದು ಕೂಗಿದ.

ಎರಡನೆ ಬೂಟು ಸಹ ಬುಶ್‌ಗೆ ತಗುಲಲಿಲ್ಲ. ತಕ್ಷಣ ಭದ್ರತಾ ಸಿಬ್ಬಂದಿ ಆ ಪತ್ರಕರ್ತನ ಮೇಲೆ ಮುರುಕೊಂಡು ಬಿದ್ದರು.
ಆತನನ್ನು ಎಳೆದಾಡಿ, ಜಗ್ಗಾಡಿ, ಉರುಳಾಡಿಸಿಕೊಂಡು ಹೊಡೆದರು. ಪತ್ರಕರ್ತ ಜೋರಾಗಿ ಕೂಗುತ್ತಿದ್ದ. ಅರೆಕ್ಷಣದಲ್ಲಿ
ಈ ಅಹಿತಕರ ಘಟನೆ ನಡೆದು ಹೋಯಿತು. ಈ ಪ್ರಸಂಗದಿಂದ ತಟ್ಟನೆ ಸಾವರಿಸಿಕೊಂಡ ಬುಶ್, ‘ಪ್ರಜಾಪ್ರಭುತ್ವದ ಉದಾತ್ತ ಮೌಲ್ಯಗಳಿಗೆ ಈ ಘಟನೆ ಒಂದು ನಿದರ್ಶನ’ ಎಂದು ಹೇಳಿದರು. ‘ಪ್ರಜಾಪ್ರಭುತ್ವ’ ಹಾಗೂ ‘ಸ್ವಾತಂತ್ರ್ಯ’ದ ಹೆಸರಿನಲ್ಲಿ ಅಂದು ಬುಶ್ ಆರಂಭಿಸಿದ ಯುದ್ಧ ಇರಾಕಿನಲ್ಲಿ ಇಂದಿಗೂ ನಡೆಯುತ್ತಲೇ ಇದೆ ಎಂಬುದು ಬುಶ್‌ಗೆ ಗೊತ್ತಿಲ್ಲ.

ಇರಾಕಿನ ಬಹುತೇಕ ಮಂದಿ ಅಂದು ಆ ಪತ್ರಕರ್ತ ಮಾಡಿದ್ದು ಸರಿ ಎಂದು ಇಂದು ಹೇಳುತ್ತಿರುವುದೂ ಗೊತ್ತಿಲ್ಲ.
ಹಾಗಂತ ಸಿನಿಮಾ ನಿರ್ದೇಶಕ, ಸಾಹಿತಿ, ರಾಜಕೀಯ ಪ್ರವರ್ತಕ ಸಯೀದ್ ಅಖ್ತರ್ ಮಿರ್ಜಾ Memory in the
age of Amnesia ಎಂಬ ಕೃತಿಯಲ್ಲಿ ಬರೆದಿದ್ದಾರೆ. ‘ಪ್ರಜಾಪ್ರಭುತ್ವ’ದಲ್ಲಿ ‘ಸ್ವಾತಂತ್ರ್ಯ’ ಹೀಗೇ ಇರುತ್ತದಾ? ಗೊತ್ತಿಲ್ಲ.

ಹಿಂದಾಗಡೆಯಿಂದ ಬನ್ನಿ..!
‘ಹಿಂದಾಗಡೆಯಿಂದ ಬನ್ನಿ, ಹಿಂದಾಗಡೆಯಿಂದ ಬಂದು ಭೇಟಿ ಮಾಡಿ’ ಎಂಬ ಮಾತು ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿದೆ. ಇದನ್ನು ದೈನಂದಿನ ಬಳಕೆಯಲ್ಲಿ ವ್ಯಾಪಕವಾಗಿ ಹೇಳಲಾಗುತ್ತದೆ. ‘ಹಿಂದಾಗಡೆಯಿಂದ ಬನ್ನಿ ಅಂದರೆ ಹಿಂಬದಿಯಿಂದ ಬನ್ನಿ ಎಂದರ್ಥವಲ್ಲ. ನಂತರ ಬನ್ನಿ’ ಎಂದರ್ಥ. ಕೆಲವರು ಇದನ್ನು ಯಥಾರ್ಥ ಭಾವಿಸಿ, ಹಿಂದುಗಡೆಯಿಂದ ಬನ್ನಿ ಅಂತ ಏಕೆ ಹೇಳಿದರು, ಹಿಂದುಗಡೆಯಿಂದ ಹೇಗೆ ಹೋಗುವುದು ಎಂದು ಯೋಚಿಸುವುದುಂಟು.

ಇತ್ತೀಚೆಗೆ ನನ್ನ ಸ್ನೇಹಿತರ ಪರಿಚಿತರೊಬ್ಬರು ಬೆಂಗಳೂರಿನಿಂದ ಬಾಗಲಕೋಟೆಯ ಒಬ್ಬ ಪ್ರಮುಖರನ್ನು ಭೇಟಿ ಮಾಡಿದಾಗ, ‘ನಾನು ಈಗ ತುಸು ಅವಸರದಲ್ಲಿದ್ದೇನೆ, ಹಿಂದಾಗಡೆಯಿಂದ ಬನ್ನಿ’ ಎಂದು ಹೇಳಿದರಂತೆ. ಇವರು ‘ಆಯಿತು, ಆಯಿತು’ ಎಂದು ಹೇಳಿ ಹೊರ ಹೋಗಿ ಒಂದೆರಡು ಸಿಗರೇಟ್ ಸೇದಿ, ಅವರ ಮನೆಯ ಹಿಂಬದಿಗೆ ಹೋದರಂತೆ.

ಅಲ್ಲಿಂದ ಒಳ ಪ್ರವೇಶಿಸುವಾಗ, ಆ ಮನೆಯ ಯಜಮಾನರ ಪತ್ನಿ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಳಂತೆ. ಇದನ್ನು
ನೋಡಿದ ಯಾರೋ ಜೋರಾಗಿ, ‘ಕಳ್ಳ, ಕಳ್ಳ’ ಎಂದು ಕೂಗಿದರಂತೆ, ಇನ್ನು ಕೆಲವರು ಮನೆಯ ಹೆಂಗಸರು ಸ್ನಾನ ಮಾಡು ವಾಗ ಇಣುಕಿ ನೋಡಲು ಹೋಗಿದ್ದ ಎಂದು ಭಾವಿಸಿ ಇನ್ನೂ ಎರಡು ಬಾರಿಸಿದರಂತೆ. ಈ ಮಹಾಶಯ ಸ್ಪಷ್ಟನೆ ನೀಡಿ
ಮನವರಿಕೆ ಮಾಡಿಕೊಡುವ ಹೊತ್ತಿಗೆ ಅವರ ಮುಖಮೂತಿಯಿಂದ ರಕ್ತ ಸುರಿಯಲಾರಂಭಿಸಿತ್ತಂತೆ.

ಇವೆಲ್ಲ ಮುಗಿದು ಹತ್ತು ಜನರ ಮುಂದೆ ನ್ಯಾಯಪಂಚಾಯ್ತಿ ನಡೆದಾಗ, ‘ನೀವೇ ಹೇಳಿದರಲ್ಲ, ಹಿಂದಾಗಡೆಯಿಂದ ಬನ್ನಿ
ಅಂತ. ಅದಕ್ಕೆ ಮನೆ ಹಿಂಬದಿಯಿಂದ ಬರುತ್ತಿದ್ದಂತೆ ಎಲ್ಲ ಸೇರಿ ನನಗೆ ಹೊಡೆದರು. ನಾನೇನು ತಪ್ಪು ಮಾಡಿದೆ ಅಂತ
ಹೊಡೆದಿರಿ? ಏನಾಗುತ್ತಿದೆ ಎಂಬುದು ಗೊತ್ತಾಗಲಿಲ್ಲ. ತಕ್ಷಣ ಎಲ್ಲ ಸುತ್ತುವರಿದು ಹೊಡೆದರು. ನಾನು ಈ ಮನೆಯ
ಯಜಮಾನರಿಗೆ ಹಣ ತಲುಪಿಸಲು ಬಂದಿದ್ದೆ. ಎಲ್ಲರ ಮುಂದೆ ಹಣ ಕೊಡುವುದು ಬೇಡ, ಮನೆಯ ಹಿಂದುಗಡೆ ಹೋಗಿ
ಕೊಡಿ ಎಂದು ಸೂಚಿಸಲು ಅವರು ಹಾಗೆ ಹೇಳಿರಬಹುದೆಂದು ಭಾವಿಸಿ, ಹಿಂಬದಿಯಿಂದ ಮನೆಯೊಳಗೆ ಪ್ರವೇಶಿಸಲು ಅಲ್ಲಿಗೆ
ಹೋಗಿದ್ದೆ’ ಎಂದು ನಡೆದಿದ್ದನ್ನೆಲ್ಲ ವಿವರಿಸಿದರಂತೆ.

ಇಷ್ಟಾದ ನಂತರ ಹೊಡೆತ ತಿಂದ ಮಹಾಶಯನಿಗೆ ‘ಹಿಂದಾಗಡೆಯಿಂದ ಬನ್ನಿ ಅಂದ್ರೆ ನಂತರ ಬನ್ನಿ’ ಎಂದರ್ಥ ಎಂಬುದು ತಿಳಿಯಿತಂತೆ. ಕೊನೆಯಲ್ಲಿ ಹೊಡೆತ ತಿಂದವ ಮುಖ, ಬಾಯಿ ಒರೆಸಿಕೊಳ್ಳುತ್ತಿದ್ದರೆ, ಹೊಡೆತ ಕೊಟ್ಟವರು ಮೆಲ್ಲಗೆ ಜಾಗ ಖಾಲಿ ಮಾಡಿದ್ದರಂತೆ. ಈಗಲೂ ಆ ಮಹಾಶಯನಿಗೆ ಹಿಂದಾಗಡೆಯಿಂದ ಬನ್ನಿ ಅಂದರೆ ನಂತರ ಬರಬೇಕೋ, ಹಿಂಬದಿಯಿಂದ ಬರಬೇಕೋ ಎನ್ನುವ ದ್ವಂದ್ವ ಕಾಡುತ್ತದಂತೆ.

ಅಂತೂ ಅವರ ಪಾಲಿಗೆ ಆ ಪದದ ಅರ್ಥ ಅತಿ ದುಬಾರಿಯಾಗಿ ಪರಿಣಮಿಸಿದ್ದಂತೂ ನಿಜ. ಮೊನ್ನೆ ನಾನು ‘ಮೈ ಹೂಂ ನ’ ಎಂಬ ಹಿಂದಿ ಸಿನಿಮಾ ನೋಡುತ್ತಿದ್ದೆ. ಅದರಲ್ಲಿ ಹಿಂದಿ ಲೇಡಿ ಟೀಚರ್ ಹೀರೋಗೆ ಹೇಳ್ತಾಳೆ- ’’Come and meet me at the backside’  ಆಗ ನನಗೆ ಅನಿಸಿದ್ದೇನೆಂದರೆ, ‘ಹಿಂದಾಗಡೆಯಿಂದ ಬಂದು ಭೇಟಿ ಮಾಡಿ’ ಎಂಬ ಪದಪ್ರಯೋಗ ಕೇವಲ ಉತ್ತರ ಕರ್ನಾಟಕದಲ್ಲಿ ಮಾತ್ರ ಅಲ್ಲ, ಹಿಂದಿಯಲ್ಲೂ, ಹಿಂದಿ ಮಾತಾಡುವ ಪ್ರದೇಶಗಳಲ್ಲೂ ಬಳಕೆಯಲ್ಲಿದೆಯೆಂದು.

ಭಾಷಾತಜ್ಞ ಹಾಗೂ ಸಂಬಂಧ 
ಭಾಷಾತಜ್ಞ ರಿಚರ್ಡ್ ಲೆಡರರ್ ನನ್ನ ಪ್ರೀತಿಪಾತ್ರ ಲೇಖಕನಾನೂ ಹೌದು. ಆತನ The Miracle Of Language ಬರಹಗಾರರಿಗೆ, ಪತ್ರಕರ್ತರಿಗೆ, ಭಾಷಾ ಪ್ರೇಮಿಗಳಿಗೆ ಅತ್ಯುತ್ತಮ ಓದು. ಆತ ಬರೆದ Crazy English ಹಾಗೂ More Anguished English ಭಾಷಾ ಪ್ರಿಯರ ಅಚ್ಚುಮೆಚ್ಚಿನ ಕೃತಿಗಳು.

ಒಬ್ಬಾತ ಮೇಲಿಂದ ಮೇಲೆ ಹುಡುಗಿಯರನ್ನು ಪ್ರೀತಿಸಿದರೂ, ಹೆಚ್ಚು ಕಾಲ ಯಾರೊಂದಿಗೂ ಸಂಬಂಧ ಉಳಿಯುತ್ತಿರಲಿಲ್ಲ. ಎರಡು-ಮೂರು ತಿಂಗಳಾಗುತ್ತಿದ್ದಂತೆ ಬಿಟ್ಟು ಹೋಗುತ್ತಿದ್ದರು. ಅಂತೂ ಕೊನೆಗೊಬ್ಬಳು ಸಿಕ್ಕಳು. ‘ಇದನ್ನು ಭಾಷಾತಜ್ಞರಾದ ನೀವು ಹೇಗೆ ಹೇಳುತ್ತೀರಾ?’ಎಂದು ಲೆಡರರ್‌ನನ್ನು ಯಾರೋ ಕೇಳಿದರಂತೆ. ಅದಕ್ಕೆ ಆತ ಹೇಳಿದನಂತೆ- ‘”In the long list of commas, she became his fullstop.’

ಪೋಚೆಮುಚ್ಕಾ! 

ಪದಕೋಶ(ಡಿಕ್ಷನರಿ)ಗಳಲ್ಲಿ ಎಷ್ಟೊಂದು ಪದಗಳಿವೆಯೆಂದರೆ, ಅವುಗಳನ್ನು ಬಳಸುವ ಅವಕಾಶವೇ ಸಿಗುವುದಿಲ್ಲ. ಆಸೆಗೆ ಬಿದ್ದು ಬಳಸೋಣವೆಂದರೆ, ಅವು ಬೇರೆಯವರಿಗೆ ಅರ್ಥವಾಗುವುದೇ ಇಲ್ಲ. ಅರ್ಥವನ್ನು ಕಂಸ(ಬ್ರಾಕೆಟ್)ದಲ್ಲಿ ಕೊಟ್ಟರೂ ಹಾಳಾದ್ದು ನೆನಪಿನಲ್ಲಿ ಉಳಿಯುವುದಿಲ್ಲ. ಆದರೂ ಈ ಶಬ್ದಗಳು ತಮ್ಮ ಅಸ್ತಿತ್ವ ಕಾಪಾಡಿಕೊಂಡು ಬಂದಿವೆ.

ಪದಕೋಶವಿಲ್ಲದಿದ್ದರೆ ಅವು ಎಂದೋ ನಶಿಸಿ ಹೋಗುತ್ತಿದ್ದವು. ಸಂವಾದ, ಚರ್ಚೆ, ವಿಚಾರ ಸಂಕಿರಣದಂಥ ಕಾರ್ಯಕ್ರಮ ಗಳಲ್ಲಿ ಸಭಿಕರಿಗೆ ಪ್ರಶ್ನೆ ಕೇಳಲು ಅವಕಾಶ ನೀಡಿದರೆ, ಯಾರೋ ಒಬ್ಬಾತ ಒಂದಕ್ಕಿಂತ ಹೆಚ್ಚು ಪ್ರಶ್ನೆಗಳನ್ನು ಕೇಳುತ್ತಾನೆ. ಎದ್ದು ನಿಲ್ಲುವಾಗಲೇ ತಾನು ಮೂರು ಪ್ರಶ್ನೆಗಳನ್ನು ಕೇಳಬೇಕೆಂದಿರುವೆ ಎಂದೇ ಆರಂಭಿಸುತ್ತಾನೆ. ಅಷ್ಟಾದರೂ ಆತನ ಪ್ರಶ್ನೆ ಕೇಳುವ ವಾಂಛೆ ಮುಗಿಯುವುದಿಲ್ಲ. ಪದೇಪದೆ ಎದ್ದು ನಿಂತು ಬಾಯಿ ಹಾಕುತ್ತಾನೆ. ‘ಬೇರೆಯವರಿಗೆ ಅವಕಾಶ ಕೊಡಿ’ ಎಂದರೂ ಸುಮ್ಮನಾಗದೇ ಪ್ರಶ್ನೆ ಕೇಳಲು ಹಾತೊರೆಯುತ್ತಾನೆ.

ಈ ಸ್ವಭಾವದ ಮನುಷ್ಯರನ್ನು ಏನಂತ ಕರೆಯೋದು? ಕನ್ನಡದಲ್ಲಿ ಅಂಥವರನ್ನು ಏನೆನ್ನೋದು? ‘ಪ್ರಶ್ನೆ ಕೇಳೋದರಲ್ಲಿ
ಮುಂಗಾಲಪುಟಕಿ’ ಎನ್ನಬಹುದು. ಆದರೆ ಒಂದು ಪದದಲ್ಲಿ ಹೇಳಲು ಯಾವುದಾದರೂ ಪದವಿದೆಯಾ? ಗೊತ್ತಿಲ್ಲ. ಇಂಗ್ಲಿಷ್‌ನಲ್ಲಿ ಒಂದು ಪದವಿದೆ. ಆದರೆ ಅದರ ಮೂಲ ರಷಿಯನ್-Pochemuchka ಪೋಚೆಮುಚ್ಕಾ! ಡಿಕ್ಷನರಿಯಲ್ಲಿ ಈ ಪದದ ಅರ್ಥ ಅ A person who asks a lot of questions. ಕನ್ನಡದಲ್ಲಿ ಮುಚ್ಕಾ ಅಂದರೆ, ‘ಪ್ರಶ್ನೆ ಕೇಳಬೇಡ, ತೆಪ್ಪಗಿರು’ ಎಂದರ್ಥ. ಅಂದರೆ ಪ್ರಶ್ನೆ ಕೇಳುವವನಿಗೆ ಸುಮ್ಮನಿರು ಎಂದು ಹೇಳಿದಂತೆ.

ಇಷ್ಟೆಲ್ಲ ಪದಗಳಿದ್ದೂ ಪ್ರಯೋಜನವೇನು? Hope I am not Pochemuchka!

ಹೀಗೂ ಖುಷಿಗೆ ಕಾರಣರಾಗಬಹುದು!
ಇದು ಯೋಗಿ ದುರ್ಲಭಜೀ ಹೇಳಿದ ಸಣ್ಣ ಸಂಗತಿ. ಆದರೆ ಇದರಲ್ಲಿ ದೊಡ್ಡ ಅರ್ಥವಿದೆ. ಇತ್ತೀಚೆಗೆ ಯೋಗಿ ಅವರ ಜತೆ
ಮಾತಾಡುವಾಗ ಅವರು ಹೇಳಿದ್ದು – ನೀವು ದೊಡ್ಡ ಮಾಲ್ ಅಥವಾ ಬ್ರಾಂಡೆಡ್ ಶಾಪ್‌ನಲ್ಲಿ ಶಾಪಿಂಗ್ ಮಾಡಿದರೆ
ಯಾವುದೋ ಸಿಇಒಗೆ ತನ್ನ ಮೂರನೆಯದೋ, ನಾಲ್ಕನೆ ಯದೋ ಹಾಲಿಡೇ ಹೋಂ ಖರೀದಿ ಮಾಡಲು ಅನುವಾ ದಂತಾಗುತ್ತದೆ. ಆತ ಮತ್ತೊಬ್ಬಳು ಗರ್ಲ್ ಫ್ರೆಂಡ್ ಜತೆ ಇನ್ನೊಂದು ದೇಶಕ್ಕೆ ಟೂರ್ ಹೋಗುತ್ತಾನೆ. ಅದರ ಬದಲು ಸಣ್ಣ ಅಂಗಡಿಯಲ್ಲಿ ನಿಮಗೆ ಅಗತ್ಯವಿರುವ ಸಾಮಾನುಗಳನ್ನು ಖರೀದಿಸಿದರೆ, ಅಂಗಡಿ ಮಾಲೀಕನ ಮಗನಿಗೆ ಟ್ಯೂಷನ್ ಫೀ ಕಟ್ಟಲು ಸಹಾಯ ಮಾಡಿದಂತಾಗುತ್ತದೆ.

ಅವನ ಮಗಳಿಗೆ ಡಾ ಕ್ಲಾಸ್‌ಗೆ ಸೇರಲು ಹಣ ಹೊಂದಿಸಲು ನೆರವಾದಂತಾಗುತ್ತದೆ. ತನ್ನ ವೃದ್ಧ ತಂದೆ- ತಾಯಿ ಚಿಕಿತ್ಸೆಗೆ ಹಣ ನೀಡಿದಂತಾಗುತ್ತದೆ. ಮಕ್ಕಳನ್ನು ಸ್ಕೂಲ್ ಗೆ ಡ್ರಾಪ್ ಮಾಡಲು ಹೆಂಡತಿಗೆ ಒಂದು ಸ್ಕೂಟಿಗೆ ಹಣ ಹೊಂದಿ ಸಲು ಉಪಕಾರ ವಾಗಬಹುದು. ಅಂದು ಹೆಚ್ಚು ವ್ಯಾಪಾರವಾಗಿದೆಯೆಂದು ಎಲ್ಲರನ್ನೂ ಹೋಟೆಲ್‌ಗೆ ಊಟಕ್ಕೆ ಕರೆದುಕೊಂಡು
ಹೋಗಬ ಹುದು. ಆತನ ಸಂತಸ ಹೆಚ್ಚಲು ನೀವು ಕಾರಣರಾಗಬಹುದು. ಆದ್ದರಿಂದ ಸಾಧ್ಯವಾದಾಗಲೆಲ್ಲ, ದೊಡ್ಡ ಮಾಲ್‌ಗಳಲ್ಲಿ ಶಾಪಿಂಗ್ ಮಾಡಬೇಡಿ, ಸಣ್ಣ ಸಣ್ಣ ಅಂಗಡಿಗಳಲ್ಲಿ ಸಾಮಾನು ಖರೀದಿಸಿ ಬೇರೆಯವರ ಖುಷಿಗೂ ಕಾರಣರಾಗಿ.

error: Content is protected !!