Friday, 13th December 2024

Vinod Kambli ನನ್ನ ಮಗನಿದ್ದಂತೆ, ಅವರನ್ನು ನೋಡಿಕೊಳ್ಳುತ್ತೇವೆ: ಸುನೀಲ್‌ ಗವಾಸ್ಕರ್‌!

ʻVinod Kambli like my son, 1983 team will take care of himʼ Says Batting Legend Sunil Gavaskar

ನವದೆಹಲಿ: ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಕ್ರಿಕೆಟಿಗ ವಿನೋದ್‌ ಕಾಂಬ್ಳಿಗೆ(Vinod Kambli) ನೆರವು ನೀಡಲಾಗುವುದು ಎಂದು ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಹಾಗೂ ಬ್ಯಾಟಿಂಗ್‌ ದಗ್ಗಜ ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ. ತಮ್ಮ ಜೀವನದ ಕಠಿಣ ದಿನಗಳನ್ನು ಎದುರಿಸುತ್ತಿರುವ ವಿನೋದ್‌ ಕಾಂಬ್ಳಿಗೆ 1983ರ ಐಸಿಸಿ ಏಕದಿನ ವಿಶ್ವಕಪ್‌ ಭಾರತ ತಂಡದ ಸದಸ್ಯರು ಕೂಡ ನೆರವು ನೀಡಲಿದ್ದಾರೆ. ಈ ಬಗ್ಗೆ ಭಾರತಕ್ಕೆ ಮೊಟ್ಟ ಮೊದಲ ವಿಶ್ವಕಪ್‌ ಗೆದ್ದುಕೊಟ್ಟಿದ್ದ ಕಪಿಲ್‌ ದೇವ್‌ ಅವರು ಕೂಡ ಈ ಬೆಳವಣಿಗೆಗಳನ್ನು ಈ ಹಿಂದೆ ಖಚಿತಪಡಿಸಿದ್ದರು.

ತಮ್ಮ ಆಳವಾದ ಜವಾಬ್ದಾರಿಯನ್ನು ವ್ಯಕ್ತಪಡಿಸಿದ ಸುನೀಲ್‌ ಗವಾಸ್ಕರ್, ವಿನೋದ್ ಕಾಂಬ್ಳಿಯನ್ನು ‘ಮಗ’ ಎಂದು ಉಲ್ಲೇಖಿಸಿದರು ಮತ್ತು 1983 ತಂಡದ ಸದಸ್ಯರು ತಮ್ಮ ಸಹ ಕ್ರಿಕೆಟಿಗರಿಗೆ ಸಹಾಯ ಮಾಡಲು ಒಟ್ಟಾಗಿ ಸೇರುತ್ತಾರೆ ಎಂದು ಸನ್ನಿ ತನ್ನ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

“1983ರ ತಂಡ ಯುವ ಆಟಗಾರರ ಬಗ್ಗೆ ಸಾಕಷ್ಟು ಕಾಳಜಿಯನ್ನು ಹೊಂದಿದೆ. ನನಗೆ ಅವರೆಲ್ಲರೂ ಮೊಮ್ಮಕ್ಕಳ ರೀತಿ ಹಾಗೂ ವಯಸ್ಸಿನ ಆಧಾರದ ಮೇಲೆ ಅವರು ನನಗೆ ಮಗನಿದ್ದಂತೆ. ಆಟಗಾರರಿಗೆ ಅದೃಷ್ಟ ಕೈಕೊಟ್ಟಾಗ ನಾವು ಅವರ ಬಗ್ಗೆ ಸಾಕಷ್ಟು ಕಾಳಜಿಯನ್ನು ವಹಿಸುತ್ತೇವೆ. ಆದರೆ, ಸಹಾಯ ಎಂಬ ಪದವನ್ನು ನಾನು ಇಷ್ಟಪಡುವುದಿಲ್ಲ. 1983ರ ತಂಡ ಅವರನ್ನು (ವಿನೋದ್‌ ಕಾಂಬ್ಳಿ) ನೋಡಿಕೊಳ್ಳುತ್ತದೆ ಹಾಗೂ ಅವರು ತಮ್ಮ ಕಾಲಿನಲ್ಲಿ ನಿಂತುಕೊಳ್ಳುವ ಹಾಗೆ ಮಾಡಲಿದೆ. ಈ ರೀತಿಯ ಕಾರ್ಯಗಳನ್ನು ನಾವು ಮಾಡುತ್ತೇವೆ ಮತ್ತು ಈ ರೀತಿಯ ಭವಿಷ್ಯವನ್ನು ನಾವು ನೋಡುತ್ತೇವೆ. ಅದೃಷ್ಟ ಕಳೆದುಕೊಂಡ ಆಟಗಾರರನ್ನು ನಾವು ವಿಶೇಷವಾಗಿ ನೋಡಿಕೊಳ್ಳುತ್ತೇವೆ,” ಎಂದು ಸ್ಪೋರ್ಟ್ಸ್‌ ಟುಡೇಗೆ ಸುನೀಲ್‌ ಗವಾಸ್ಕರ್‌ ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ವಿನೋದ್‌ ಕಾಂಬ್ಳಿ ಅವರು ಕೌಂಟುಂಬಿಕವಾಗಿ ಹಾಗೂ ಆರೋಗ್ಯದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರು ಹಲವು ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ, ಅವರು ಕ್ರಿಕೆಟ್‌ಗೆ ನೀಡಿರುವ ಕೊಡುಗೆಯಿಂದಾಗಿ ಅವರಿಗೆ ಸಹಾಯ ಮಾಡಲು ಹಲವು ಮಾಜಿ ಕ್ರಿಕೆಟಿಗರು ಮುಂದಾಗುತ್ತಿದ್ದಾರೆ.

ಇತ್ತೀಚೆಗೆ ತಮ್ಮ ಕ್ರಿಕೆಟ್‌ ಗುರುಗಳಾದ ರಮಾಕಾಂತ್‌ ಆರ್ಚೇಕರ್‌ ಅವರ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ವಿನೋದ್‌ ಕಾಂಬ್ಳಿ ಅವರು ಕೂಡ ಭಾಗವಹಿಸಿದ್ದರು. ಈ ವೇಳೆ ತಮ್ಮ ಬಾಲ್ಯದ ಗೆಳೆಯ ಹಾಗೂ ಭಾರತ ತಂಡದ ಸಹ ಆಟಗಾರ ಸಚಿನ್‌ ತೆಂಡೂಲ್ಕರ್‌ ಅವರ ಕೈಯನ್ನು ವಿನೋದ್‌ ಕಾಂಬ್ಳಿ ಗಟ್ಟಿಯಾಗಿ ಹಿಡಿದುಕೊಂಡಿದ್ದರು ಹಾಗೂ ಅವರನ್ನು ಹೋಗಲು ಬಿಟ್ಟಿರಲಿಲ್ಲ. ಈ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಈ ವಿಡಿಯೊವನ್ನು ವೀಕ್ಷಿಸಿದ್ದ ಮಾಜಿ ಕ್ರಿಕೆಟಿಗರು ಕ್ರಿಕೆಟ್‌ ಅಭಿಮಾನಿಗಳು ವಿನೋದ್‌ ಕಾಂಬ್ಳಿ ಬಗ್ಗೆ ಮರುಕರಾಗಿದ್ದರು.

ಇದಕ್ಕೂ ಮುನ್ನ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದ ವಿಡಿಯೊವೊಂದರಲ್ಲಿ ವಿನೋದ್‌ ಕಾಂಬ್ಳಿ ಅವರು ನಡೆಯಲು ಸಾಧ್ಯವಾಗದೆ, ಬೇರೆಯವರ ಸಹಾಯವನ್ನು ಪಡೆಯುತ್ತಿದ್ದರು. ಈ ವಿಡಿಯೊವನ್ನು ವೀಕ್ಷಿಸಿದ್ದ ಅಭಿಮಾನಿಗಳು ಮಾಜಿ ಕ್ರಿಕೆಟಿಗನ ಬಗ್ಗೆ ಅನುಕಂಪ ತೋರಿದ್ದರು. ಇದೀಗ 1983ರ ಭಾರತ ತಂಡದ ಸದಸ್ಯರು ವಿನೋದ್‌ ಕಾಂಬ್ಳಿಗೆ ನೆರವು ನೀಡಲು ಬಯಸಿದ್ದಾರೆ.

ಈ ಸುದ್ದಿಯನ್ನು ಓದಿ: Ramakant Achrekar’s memorial ceremony: ಸಚಿನ್‌ ತೆಂಡೂಲ್ಕರ್‌ -ವಿನೋದ್‌ ಕಾಂಬ್ಳಿ ಸಮಾಗಮ!